ಬ್ರಿಟಿಷರ ಆಡಳಿತದಿಂದ ನಾವು ಸ್ವಾತಂತ್ರ್ಯ ಪಡೆದಿದ್ದೇವೆಂಬುದು ನಾಣ್ಯದ ಒಂದು ಮುಖದ ಸತ್ಯ ಮಾತ್ರ. ಅಧಿಕಾರಿಶಾಹಿಯ ವರ್ತನೆ ಟಿಪಿಕಲ್ ಇಂಗ್ಲೀಷರ ಮಾದರಿಯಲ್ಲಿಯೇ ಇದ್ದಿರುವುದು ಅಕ್ಷರಶಃ ಸತ್ಯ. ಕಾನೂನು ಮಾಡುವ, ಕಾನೂನು ಹೇರುವ ಅಧಿಕಾರವನ್ನು ಅನುಭವಿಸುತ್ತಿರುವ ಅಧಿಕಾರಿ ವರ್ಗದ ಎದುರು ಜನಸಾಮಾನ್ಯರು ಕೈಕಟ್ಟಿ ನಿಲ್ಲಲೇಬೇಕಾದ ಪರಿಸ್ಥಿತಿ. ಅಂದಮೇಲೆ ಬದಲಾದದ್ದು ಏನು?
ಬಹುಷಃ ಇನ್ನು ಐವತ್ತು ವರ್ಷ ಕಳೆದರೂ ವಾತಾವರಣ ಹಾಗೇ ಇರುತ್ತಿತ್ತು. ಆಡಳಿತಶಾಹಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕವಾಡುತ್ತಲೇ ಇರುತ್ತಿತ್ತು. ಇಂತಹ ವೇಳೆ ಮುಚ್ಚಿದ ಬಾಗಿಲ ಸಂದಿನಿಂದ ತೂರಿದ ಬೆಳಕಿನ ಕಿರಣದಂತೆ ಮಾಹಿತಿ ಹಕ್ಕು ಕಾಯ್ದೆ ಚಾಲ್ತಿಗೆ ಬಂದಿದೆ. ಶ್ರೀ ಸಾಮಾನ್ಯ ಅಧಿಕಾರಿಗಳ ವಿರುದ್ಧ ಝಳಪಿಸಲು ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಜಾರಿಗೆ ಬಂದು ಈಗಾಗಲೇ ಎರಡು ವರ್ಷ ಕಳೆದೇಹೋಗಿದೆ ಎಂಬುದು ಒಂದೆಡೆಯಾದರೆ, ಅದರ ಬಳಕೆಯ ಕುರಿತು ಈಗಷ್ಟೇ ಅರಿವು ಮೂಡುತ್ತಿದೆ ಎಂಬುದು ಅನಿವಾರ್ಯ ಸತ್ಯ.
ಪ್ರಶ್ನೆಯೊಂದು ಮೂಡದಿರದು. ಕಾನೂನುಗಳನ್ನು ರೂಪಿಸುವವರೇ ಅಧಿಕಾರಿಗಳು. ಅಂತಹುದರಲ್ಲಿ ತಮ್ಮ ಕೈಯನ್ನು ತಾವೇ ಬಂಧಿಸಿಕೊಳ್ಳಲು ಅವರೇಕೆ ಮಾಹಿತಿ ಕಾಯ್ದೆಗೆ ಅವಕಾಶ ಮಾಡಿಕೊಟ್ಟರು? ಮಾಹಿತಿ ಕಾರ್ಯಕರ್ತರೊಬ್ಬರ ವಿವರಣೆ ಸ್ವಾರಸ್ಯಕರವಾದದ್ದು, ಕೌರವರ ಮಧ್ಯೆಯೂ ಪಾಂಡವರಿರುತ್ತಾರೆ! ಬಹುಷಃ ಐಎಎಸ್ ಅಧಿಕಾರಿ ವಿಜಯ್‍ಕುಮಾರ್ ಅಂತವರು ಈ ವರ್ಗದವರಿರಬೇಕು. ನಾಗರಿಕರಿಗೆಂದು ಕಛೇರಿಯಲ್ಲಿ ವಾರದ ನಿರ್ದಿಷ್ಟ ದಿನ ಫೈಲ್‍ಗಳನ್ನು ನೋಡುವ ಮುಕ್ತ ಅವಕಾಶ ಒದಗಿಸುವ ನಿಯಮ ರೂಪಿಸಿದ ಜನಪರ ಅಧಿಕಾರಿ ಈತ. ಒಂದೇ ಒಂದು ದುರಂತವೆಂದರೆ, ಹಿಂದೆ ನೂರು ಕೌರವರಿದ್ದರೆ ಇಂದು ಆ ಸಂಖ್ಯೆ ಕೋಟಿ ದಾಟಿದೆ. ಪಾಂಡವರ ಸಂಖ್ಯೆ ಅವತ್ತಿನ ಐದಕ್ಕಿಂತ ಹೆಚ್ಚಿರುವುದು ಅನುಮಾನ! ಅಷ್ಟರಮಟ್ಟಿಗೆ ಪ್ರಾಮಾಣಿಕತೆಯ ಹೋರಾಟಕ್ಕೆ ಅಡೆತಡೆ ಜಾಸ್ತಿ.
ವಾಸ್ತವವಾಗಿ ಈ ಕಾಯ್ದೆ ಸಂಕೀರ್ಣ ರೂಪದ್ದಲ್ಲ, ಸುಲಭ ಗ್ರಾಹ್ಯವಾಗುವಂತದು. ಆಸಕ್ತರಿಗೆ ಇದರ ಹೂರಣವನ್ನು ಅರ್ಥೈಸಿಕೊಳ್ಳಲು ಎರಡು ದಿನ ಸಾಕಾದೀತು. ಮಾಹಿತಿ ಕಾಯ್ದೆ ಕುರಿತು ನೂರಾರು ಪುಸ್ತಕಗಳು, ಸಾವಿರಾರು ಲೇಖನಗಳು ಪ್ರಕಟಗೊಂಡಿದ್ದು ಅವು ನೀಡುವ ಮಾಹಿತಿಯೇ ಧಾರಾಳವಾಗಿ ಸಾಕು. ಬೆಂಗಳೂರಿನ ಕ್ರಿಯೇಟ್ ಎಂಬ ಸಂಸ್ಥೆ ಮಾಹಿತಿ ಆಂದೋಲನದ ಮುಂಚೂಣಿಯಲ್ಲಿದೆ. ಇದು ಇಲಾಖೆಗಳ ಮಾಹಿತಿ ಅಧಿಕಾರಿಗಳಿಗೆ ಒಂದೆರಡು ದಿನಗಳ ಮಿತಿಯಲ್ಲೂ ಮಾಹಿತಿ ತರಬೇತಿ ನೀಡುತ್ತಿದೆ. ಅಷ್ಟಕ್ಕೂ ಸರ್ಕಾರಿ ಅಧಿಕಾರಿಗಳು ಬುಡಕ್ಕೆ ಬೆಂಕಿ ಬಿದ್ದರೆ ಮಾತ್ರ ನೀರು ಹುಡುಕುವವರು. ಇಂತವರಿಗೆ ಕಾಯ್ದೆ ಜಾರಿಗೆ ಐದು ವರ್ಷದ ಕಾಲಾವಕಾಶ ನೀಡಬೇಕಿತ್ತು ಎಂದರೆ ಇನ್ನೂ 60 ತಿಂಗಳು ನಿದ್ರಿಸಲು ಅನುವು ಮಾಡಿಕೊಟ್ಟಂತಾದೀತು ಅಷ್ಟೇ!
ಇತ್ತೀಚಿಗೆ ದಾವಣಗೆರೆಯ ನ್ಯಾಯಾಲಯದ ಅಧಿಕಾರಿಯೊಬ್ಬರು ಹೇಳುತ್ತಿದ್ದರು, `ತಮ್ಮ ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಮಾಹಿತಿ ಕೋರಿ ಅರ್ಜಿ ತಮ್ಮ ಕಛೇರಿಗೇ ಬಂದಿತು. ಏನೇನೂ ಗೊತ್ತಿಲ್ಲದ ವೇಳೆ ತಮಗೇ ಅರ್ಜಿಗೆ ಮಾಹಿತಿ ಒದಗಿಸಲು ಉಳಿದವರು ಜವಾಬ್ದಾರಿ ದಾಟಿಸಿಬಿಟ್ಟರು. ಹಾಗಾಗಿ ಈ ಬಗ್ಗೆ ನಾನು ಪೂರ್ತಿ ಜ್ಞಾನ ಪಡೆಯಲೇಬೇಕಾಯಿತು.’ ಇದು ಸರ್ಕಾರಿ ವ್ಯವಸ್ಥೆಯ ಭಾಗವಾದವರ ನಡವಳಿಕೆ. ಅವರಿಗೆ ಕಾಲಾವಕಾಶ ನೀಡುವ ಮಾತು ಅರ್ಥವಿಲ್ಲದ್ದು. ಅಂದಮೇಲೆ ಮಾಹಿತಿ ಅರ್ಜಿಗಳು ಧಾಳಿ ಇಡಬೇಕು! ಆಗಲೇ ಅಧಿಕಾರಿಗಳು ಚುರುಕಾಗುತ್ತಾರೆ.
ಸದ್ಯ ಅಧಿಕಾರಿಗಳಷ್ಟೇ ಜನರೂ ತಟಸ್ಥರಾಗಿದ್ದಾರೆ. ಖಂಡಿತವಾಗಿಯೂ ಜನ ಮಾಹಿತಿ ಕೇಳಲಾರಂಭಿಸಿದಾಗ ಯೋಜನೆಗಳ ಅನುಷ್ಠಾನ ಹೆಚ್ಚು ಪಾರದರ್ಶಕವಾಗಿರಬೇಕಾಗುತ್ತದೆ, ಪ್ರಾಮಾಣಿಕತೆ ಇಣುಕಲೇಬೇಕಾಗುತ್ತದೆ. ಪ್ರಸ್ತುತ ಖೂಳರಿಗೇ ಈ ಕಾಯ್ದೆ ಹೆಚ್ಚಿನ ಲಾಭ ಒದಗಿಸಿದೆ. ಅಧಿಕಾರಿಗಳನ್ನೇ ಬ್ಲಾಕ್‍ಮೇಲ್ ಮಾಡಲು ಬಳಕೆಯಾಗುತ್ತಿದೆ. ಅಲ್ಲೂ ಒಂದು ಧನಾಂಶವಿದೆ. ಭ್ರಷ್ಟತೆ ಇದ್ದಲ್ಲಿ ಮಾತ್ರ ಬ್ಲಾಕ್‍ಮೇಲ್ ನಡೆದೀತು. ಪ್ರಾಮಾಣಿಕರಾಗಿದ್ದಲ್ಲಿ ಈ ಲಾಭ ಸಿಕ್ಕದು. ಸ್ವಚ್ಛ ಆಡಳಿತಕ್ಕೆ ಇದೇ ನಾಂದಿ ಹಾಡಿದರೆ ಚೆನ್ನ.
ಸಿನಿಕರಂತೆ ನಕಾರಾತ್ಮಕವಾಗಿ ಯೋಚಿಸಬೇಕಾದ ಅಗತ್ಯವಿಲ್ಲ. ಕಾಯ್ದೆಗೆ ಹಲ್ಲಿದೆ. ಬಳಸಲು ಅನುವು ಮಾಡಿಕೊಡುವ ಗ್ರಾಹಕ ಸಂಘಟನೆಗಳಿವೆ. ತುಸು ಕಾಲ ಬೇಕಾದೀತು. ಆದರೆ ಫಲಿತಾಂಶ ನಿಶ್ಚಿತ.
ಇನ್ನಷ್ಟು ಪರಿಣಾಮಕಾರಿಯಾಗಿ ಕಾಯ್ದೆ ಮೂಡಲು ಕೆಲ ತಿದ್ದುಪಡಿ ಅನಿವಾರ್ಯ. ಈಗ ಹಿಂದುಳಿದ ಜಾತಿ ವರ್ಗದವರು ಅರ್ಜಿ ಸಲ್ಲಿಸಿದರೆ ಅವರಿಗೆ ಮೊದಲ ನೂರು ಪುಟಗಳ ಮಾಹಿತಿಯನ್ನು ಉಚಿತವಾಗಿ ಒದಗಿಸುವ ಸೌಲಭ್ಯವಿದೆ. ಇದನ್ನು ಎಲ್ಲ ವರ್ಗಕ್ಕೂ ಅನ್ವಯಿಸಬೇಕು. ಈಗಾಗಲೆ ಅಧಿಕಾರಿಗಳು ಕಾಯ್ದೆಯ ಕಲಂ 8(1)(ಜೆ)ಯನ್ನು ಉಲ್ಲೇಖಿಸಿ ಕೇಳಿದ ಮಾಹಿತಿಯನ್ನು ವೈಯುಕ್ತಿಕ ವಿವರ ಎಂಬ ನೆಪದಲ್ಲಿ ನಿರಾಕರಿಸುತ್ತಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಪುಟಗಳ ಮಾಹಿತಿಯಿದೆ ಎಂದು ಹೇಳಿ ದೊಡ್ಡ ಮೊತ್ತ ಕಟ್ಟಿ ಬೇಕಿದ್ದರೆ ಮಾಹಿತಿ ಪಡೆಯಿರಿ ಎಂದು ಹೆದರಿಸಲಾಗುತ್ತಿದೆ. ಹಿನ್ನೆಲೆಯಲ್ಲಿರುವುದು ಮಾಹಿತಿ ಕೊಡದಿರುವ ಷಡ್ಯಂತ್ರ. ಕಲಂ 8(1)(ಜೆ)ಯನ್ನು ಇನ್ನಷ್ಟು ಸ್ಪಷ್ಟೀಕರಿಸಬೇಕು. ಮಾಹಿತಿ ಅರ್ಜಿಯಲ್ಲಿಯೇ ಲೋಪ ಹುಡುಕಿ ಕೋರಿಕೆಯನ್ನು ನಿರಾಕರಿಸುವ ಪ್ರವೃತ್ತಿಗೆ ತಡೆ ಹಾಕಲೇಬೇಕಿದೆ.
ಸದ್ಯ ಸಂಘಟನೆಗಳಿಗೆ ಮಾಹಿತಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಇದು ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ. ಇದನ್ನು ಹಿಂಪಡೆಯಲೇಬೇಕು. ಶಾಸಕಾಂಗ ಈ ವ್ಯವಸ್ಥೆಗಳನ್ನು ಪುನರಾವಲೋಕಿಸಬೇಕಾದ ಕಾಲವಿದು. ಅಷ್ಟಕ್ಕೂ ತಿದ್ದುಪಡಿಗಳು ಅದರ ಕೈಯಲ್ಲಿದೆ ತಾನೇ?
ನಿಜಕ್ಕೂ ಗ್ರಾಮಾಭಿವೃದ್ಧಿಗೆ, ನಗರಾಭಿವೃದ್ಧಿಗೆ ನಾಗರಿಕರು ತಮ್ಮ ಹಣ, ಶ್ರಮ ಹಾಕಬೇಕಾದುದಿಲ್ಲ. ತಮ್ಮೂರಿನ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಮಾಹಿತಿ ಹಕ್ಕನ್ನು ಬಳಸಿದರೆ ಬೇಷಾದೀತು. ಮಾಹಿತಿ ಅರ್ಜಿಗಳು ಭರಪೂರವಾಗಿ ದಾಖಲಾಗತೊಡಗಿದರೆ ಕಛೇರಿಗಳು ಇವುಗಳ ವಿಲೇವಾರಿಗೇ ತಮ್ಮೆಲ್ಲ ಸಮಯ ವ್ಯಯಿಸುವ ಆತಂಕ ಇಲ್ಲದಿಲ್ಲ. ವಾಸ್ತವವಾಗಿ ಇದನ್ನು ಸುಲಭದಲ್ಲಿ ಪರಿಹರಿಸಿಕೊಳ್ಳಬಹುದು. ಈ ಕಛೇರಿಗಳು ಯೋಜನೆಗಳ ವಿವರ, ಗುತ್ತಿಗೆ ದಾಖಲೆಗಳು, ಅಧಿಕಾರಿಗಳ ಸಂಬಳ- ಸಾರಿಗೆ ಮುಂತಾದ ಹತ್ತು ಹಲವು ನೇರ ವಿವರಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಬಹುದು, ವೆಬ್‍ಸೈಟ್‍ಗಳಲ್ಲಿ ಅಳವಡಿಸಬಹುದು. ಆಗ ಸಂಕೀರ್ಣ ವಿಚಾರಗಳ ಕುರಿತಾಗಿ ಮಾತ್ರ ಮಾಹಿತಿ ಅರ್ಜಿ ಬಂದೀತು. ಇಂತಹ ವಾತಾವರಣ ಸೃಷ್ಟಿಯಾಗಬೇಕೆನ್ನುವುದೇ ಮಾಹಿತಿ ಆಂದೋಲನದ ಹರಿಕಾರರ ಆಶಯ.
ಕಾಯ್ದೆಯ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟ ಭಯ ಮೂಡಬೇಕು. ಹಾಗಾಗಬೇಕಾದರೆ ರಾಜ್ಯ ಮಾಹಿತಿ ಆಯೋಗಗಳನ್ನು ಲೋಕಾಯುಕ್ತದ ಮಾದರಿಯಲ್ಲಿ ರೂಪಿಸಬೇಕು. ಸದ್ಯ ಈ ರಾಜ್ಯ ಆಯೋಗಗಳಲ್ಲಿ ಕಾರ್ಯ ನಿರ್ವಹಿಸುವವರು ರಾಜ್ಯ ಸರ್ಕಾರದ ಅಧಿಕಾರಿಗಳೇ. ಎಷ್ಟೇ ನಿಷ್ಪಕ್ಷಪಾತವಾಗಿ ಕಾಯ್ದೆಯನ್ವಯ ಕೆಲಸ ಮಾಡುತ್ತೇನೆಂದರೂ, ತಮ್ಮದೇ ಅಧಿಕಾರಿ ವರ್ಗದ ಮೇಲೆ ಇವರ ಕರುಣಾದೃಷ್ಟಿ ಇದ್ದೇ ಇರುತ್ತದೆ. ಇದು ಹತ್ತು ಹಲವು ಬಾರಿ ಶ್ರುತಪಟ್ಟಿದೆ. ಬಹುಷಃ ಲೋಕಾಯುಕ್ತದಂತೆ ಸ್ವಾಯತ್ತ – ನಿವೃತ್ತ ನ್ಯಾಯಾಧೀಶರ ನೇತ್ರತ್ವ ದಕ್ಕಿದರೆ, ಅವರು ಕಾನೂನಿನಂತೆ ನಿರ್ವಹಿಸಿದರೆ ಭ್ರಷ್ಟಾಚಾರದ ಪ್ರಮಾಣದಲ್ಲಿ ಇಳಿಕೆಯಾಗಲೇಬೇಕು.
ಸ್ವಾತಂತ್ರ್ಯ ಬಂದು ಬರೋಬ್ಬರಿ 67 ವರ್ಷ. ಹೆಚ್ಚು ಕಡಿಮೆ ಸಂವತ್ಸರದ ಅಂತರದಲ್ಲಿ ನಾಗರಿಕರಿಗೆ ಒಂದು ಉಸಿರಾಟದ ಅವಕಾಶ ಸಿಕ್ಕಿದೆ. ಇದು ಪೂರ್ಣ ಜನಪರ ಗಾಳಿ. ನಾಗರಿಕರ ಜವಾಬ್ದಾರಿ ದೊಡ್ಡದು. ರಾಮರಾಜ್ಯ ಸೃಷ್ಟಿಸುವುದು ಕಷ್ಟವಿದ್ದೀತು. ಕೊನೆಪಕ್ಷ ಅದರ ನೆರಳನ್ನಾದರೂ ಮೂಡಿಸಲು ಈ ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡರೆ ಚೆನ್ನ.
– ಮಾ.ವೆಂ.ಸ.ಪ್ರಸಾದ್
- Advertisement -
- Advertisement -
- Advertisement -
- Advertisement -