23.1 C
Sidlaghatta
Sunday, December 22, 2024

ನಮ್ಮ ಮಿದುಳಿಗೆ ನಮ್ಮದೇ ಸಾಫ್ಟ್ ವೇರ್!!!

- Advertisement -
- Advertisement -

ನನ್ನ ಹತ್ತಿರದ ಸಂಬಂಧಿಯೊಬ್ಬನಿಗೆ ಮೊದಲನೆ ಮದುವೆಯಲ್ಲಿ ಹೊಂದಾಣಿಕೆಯಾಗದೆ ಅನಿವಾರ್ಯವಾಗಿ ವಿಚ್ಛೇದನ ಪಡೆದುಕೊಳ್ಳಬೇಕಾಯಿತು. ಸ್ವಲ್ಪ ಕಾಲದ ನಂತರ ಮತ್ತೊಬ್ಬ ಅನುರೂಪಳಾದ ಹುಡುಗಿಯೊಡನೆ ಮದುವೆ ನಿಶ್ಚಯವಾಯಿತು.
ಮದುವೆಗೆ ಎರಡು ದಿನಗಳ ಮೊದಲು ಅವರ ಮನೆಗೆ ಹೋದೆ. ಮನೆಯಲ್ಲಿ ಮದುವೆಯ ಸಂಭ್ರಮವೇನೂ ಕಾಣದೆ ಬಿಕೋ ಎನ್ನುತ್ತಿತ್ತು. “ಏನಯ್ಯಾ, ನಾಡಿದ್ದು ಮದುವೆ ಅಂತೀರಿ. ಇನ್ನೂ ಏನೂ ತಯಾರಿ ನಡೆದ ಹಾಗೆ ಕಾಣುವುದಿಲ್ವಲ್ಲಯ್ಯಾ” ಎಂದು ವಿಚಾರಿಸಿದೆ.
“ಸರಳವಾಗಿ ದೇವಸ್ಥಾನದಲ್ಲಿ ತಾಳಿಕಟ್ಟೋದಕ್ಕೆ ಏನಪ್ಪಾ ತಯಾರಿ, ಸಂಭ್ರಮ ಬೇಕು. ಹೇಳಿ ಕೇಳಿ ಎರಡನೇ ಮದುವೆ. ಅದ್ದೂರಿಯಾಗಿ ಮಾಡಿದ್ರೆ ಜನ ಆಡ್ಕೊಂಡು ನಗಲ್ವಾ?”
ಈ ರೀತಿಯ ಮಾತುಗಳನ್ನು ಕೇಳಿದರೆ ನನಗೆ ಸ್ವಲ್ಪ ರೇಗುತ್ತದೆ. ಹಾಗಾಗಿ ಕಡಕ್ ಧ್ವನಿಯಲ್ಲಿ ಉತ್ತರಿಸಿದೆ, “ನೋಡಯ್ಯಾ ಸರಳವಾಗಿ ಮದುವೆ ಆಗೋ ನಿನ್ನ ಕ್ರಮದ ಬಗ್ಗೆ ನನಗೆ ಗೌರವ ಇದೆ. ಮೊದಲಯನೆಯ ಮದುವೆಯನ್ನೂ ಹಾಗೇ ಆಗಿದ್ದರೆ ಅದು ನಿನ್ನ ಆದರ್ಶ ಎಂದು ನಾನು ಇನ್ನೂ ಸಂತೋಷಪಡುತ್ತಿದ್ದೆ. ಆದರೆ ಆಗ ನೀನು ಅದ್ದೂರಿಯಾಗಿ ಆಗಿದ್ದೀಯಾ. ಈಗಲೂ ಹಾಗೇ ಮಾಡಿದರೆ ಸಮಾಜದ ಗೇಲಿಗೊಳಗಾಗಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಮಾತ್ರ ನೀನು ಸರಳವಾಗಿ ಮದುವೆ ಆಗುತ್ತಿದ್ದರೆ ನಿನಗೆ ನೀನೇ ಮೋಸ ಮಾಡಿಕೊಳ್ತಾ ಇದೀಯಾ”
“ಅದು ಹಾಗಲ್ಲ….” ಎಂದೇನೋ ರಾಗ ತೆಗೆದವನನ್ನು ಬಾಯ್ಮಿಚ್ಚಿಸಿ ನಾನು ಮುಂದುವರೆಸಿದೆ. “ನೋಡಪ್ಪಾ ನೀನು ಮದುವೆಯಾಗುವುದು ನಿನ್ನ ಖುಷಿಗಾಗಿ, ಅದನ್ನು ನಿನಗೆ ಬೇಕಾದ ರೀತಿಯಲ್ಲಿ ಯಾಕಾಗಬಾರದು? ಎರಡನೆ ಮದುವೆ ಅಂತ ನೀನೇ ನಿನ್ನ ಖುಷಿಯನ್ನು ಕೀಳುಗೈದುಕೊಂಡರೆ ಸುತ್ತಲಿನ ಜನರ ಪ್ರತಿಕ್ರಿಯೆ ಇನ್ಹೇಗೆ ಇರಲು ಸಾಧ್ಯ? ಜನ ಏನೆಂದರೆ ಏನಂತೆ, ನಿನ್ನ ಸಂತೋಷವನ್ನು ಅನುಭವಿಸಲು ನೀನೇಕೆ ಹಿಂಜರಿಯಬೇಕು?” ಇನ್ನು ಹೆಚ್ಚು ಮಾತನಾಡಿದರೆ ತೀರಾ ಕಟುವಾಗಬಹುದು ಎಂದು ಸುಮ್ಮನಾದೆ.
ಇದಕ್ಕೆಲ್ಲ ಕಾರಣ ಸಮಾಜ ಅನ್ನಿ, ಸಂಪ್ರದಾಯ ಅನ್ನಿ ಅಥವಾ ಇನ್ನಾವುದೋ ಹೆಸರಿನಿಂದ ಕರೆಯಿರಿ. ನಮ್ಮಲ್ಲೆರ ಕ್ರಿಯೆ, ಪ್ರತಿಕ್ರಿಯೆ, ಮಾತು ಮತ್ತು ಸ್ವಭಾವಗಳನ್ನೆಲ್ಲಾ ಇಂತಿಂತಹ ಸಂದರ್ಭಗಳಲ್ಲಿ ಹೀಗೇ ಇರಬೇಕೆಂದು ಮಾನಕೀಕರಣ [ಸ್ಟಾಂಡರ್ಡೈಸ್] ಗೊಳಿಸಿಬಿಟ್ಟುಕೊಂಡಿರುತ್ತೇವೆ. ಮೊದಲನೆ ಮದುವೆ ಅಲ್ಲದಿದ್ದರೆ ಅದನ್ನು ಹೆಚ್ಚಿನ ಜನರಿಗೆ ಆಹ್ವಾನ ನೀಡದೆ ಯಾವುದೋ ಮೂಲೆಯಲ್ಲಿ ಒಂದು ತಾಳಿಕಟ್ಟಿ ಮುಗಿಸಿದರಾಯಿತು. ಹಾಗೊಮ್ಮೆ ಹುಡುಗಿಗೆ ಅದು ಪ್ರಥಮ ವಿವಾಹವೇ ಆಗಿದ್ದರೂ ಅವಳು ಬಲವಂತವಾಗಿ ತನ್ನ ಖುಷಿಯನ್ನು ಹತ್ತಿಕ್ಕಿಕೊಂಡು ಜೋಲು ಮೋರೆಯನ್ನು ಹಾಕಿಕೊಂಡಿರಬೇಕಾಗುತ್ತದೆ.
ಯಾರಾದರು ಮರಣಹೊಂದಿದಾಗ, ಅದೂ ನಮ್ಮ ಒಡಹುಟ್ಟಿದವರು ಅಥವಾ ಆಪ್ತರಾದರಂತೂ ಬಿಡಿ, ಕಡ್ಡಾಯವಾಗಿ ಅಳಲೇಬೇಕು. ಅಕಾಲ ಮರಣವಾದಾಗ ಅಥವಾ ಭಾವನಾತ್ಮಕವಾಗಿ ಹತ್ತಿರವಾದವರು ಸತ್ತಾಗ ದುಃಖವಾಗುವುದು ಸಹಜ. ಆದರೆ ಸಾರ್ಥಕವಾದ ತುಂಬು ಜೀವನ ನಡೆಸಿದವರು ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ವೇದನೆ ಅನುಭವಿಸುತ್ತಿರುವವರು ಮರಣ ಹೊಂದಿದಾಗ, ಅವರು ನಮ್ಮ ಹೆತ್ತವರೇ ಆಗಿದ್ದಾಗಲೂ, ಅತ್ತು ಕೂಗಾಡಿ ದುಃಖ ವ್ಯಕ್ತಪಡಿಸಬೇಕೇಕೆ? ಬದುಕಿದ್ದಾಗ ತಂದೆತಾಯಂದಿರನ್ನು ಪ್ರೀತಿಯಿಂದ ನೋಡದ ಮಕ್ಕಳು ಅವರು ಸತ್ತಾಗ ಗೋಳಾಡುವುದನ್ನು ನೋಡಿದರೆ ಹಾಸ್ಯಾಸ್ಪದವೆನ್ನಿಸುವುದಿಲ್ಲವೇ? ಇವರೇಕೆ ಸಾಯಲು ಇಷ್ಟು ತಡಮಾಡಿದರು ಅಂತ ಅಳುತ್ತಿರಬೇಕು ಅನ್ನಿಸುತ್ತದೆ! ಪ್ರಾಮಾಣಿಕ ಶ್ರದ್ಧಾಂಜಲಿಯನ್ನು ಮೌನದಲ್ಲಿ ಅಥವಾ ಇನ್ನಾವುದೋ ಕ್ರಿಯೆಯ ಮೂಲಕ ವ್ಯಕ್ತಪಡಿಸಬಹುದು ಅಂತ ನಮಗನ್ನಿಸುವುದೇ ಇಲ್ಲ.
ಜನ ಆಡ್ಕೋತಾರೆ ಅಂತ ಆಡಂಬರದ ಮದುವೆ ಮಾಡಿ ಸಾಲಗಾರರಾಗುವುದು, ನಮಗೆ ನಂಬಿಕೆ ಇಲ್ಲದಿದ್ದರೂ ಯಾರ್ಯಾರನ್ನೋ ಮೆಚ್ಚಿಸಲು ಪೂಜೆ ಪುನಸ್ಕಾರಗಳ ಡಂಬಾಚಾರ ಮಾಡುವುದು, “ಯಾರಾದರೂ ಏನಂದ್ಕೋತಾರೆ” ಅಂತ ನಮ್ಮ ಸಹಜ ಸ್ವಭಾವಕ್ಕೆ ಹೊರತಾದ ಒಣ ಗಾಂಭೀರ್ಯ ಪ್ರದರ್ಶಿಸುವುದು – ಈ ರೀತಿಯ ನೂರಾರು ಉದಾಹರಣೆಗಳನ್ನು ಕೊಡಬಹುದು. ಇಲ್ಲೆಲ್ಲಾ ಸಹಜವಾಗಿ ಕಾಣುವುದು ನಮ್ಮ ತಲೆಗೆ ನಾವು ಯಾವುದೋ ಸಿದ್ಧ ಸಾಫ್ಟ್ ವೇರ್ ಅಳವಡಿಸಿಕೊಂಡಿರುವುದು. ಇದನ್ನು ಜನ ಅಥವಾ ಸಮಾಜ ತಯಾರಿಸಿಟ್ಟಿದ್ದು ಅಂತ ಹೇಳಿ ನಮ್ಮನ್ನು ನಾವೇ ಸಮಾಧಾನಪಡಿಸಿಕೊಂಡು ಒಂದು ರೀತಿಯಲ್ಲಿ ನಮ್ಮನ್ನೇ ಮೋಸಗೊಳಿಸಿಕೊಳ್ಳುತ್ತೇವೆ. ಈ ಜನಗಳು ಯಾರು ಅಥವಾ ಸಮಾಜ ಯಾವುದು ಅಂತ ಸ್ಪಷ್ಟತೆಯೇನೂ ಇರುವುದಿಲ್ಲ. ಎಲ್ಲರಿಗೂ ಅವರವರದ್ದೇ ಆದ ಬೇಕು ಬೇಡಗಳಿರುವಾಗ ಎಷ್ಟು ಜನರನ್ನು ನಾವು ಮೆಚ್ಚಿಸಲು ಸಾಧ್ಯ? ಅವರು ಹೊರಗಡೆ ಮೆಚ್ಚುಗೆ ವ್ಯಕ್ತಪಡಿಸಿದರೂ ಅದೂ ಬರೀ ತೋರಿಕೆಯಾಗಿರುವ ಸಾಧ್ಯತೆಯಿಲ್ಲವೇ? ಈ ಎಲ್ಲಾ ಗೊಂದಲದಲ್ಲಿ ಕೊನೆಗೆ ನಮ್ಮಿಚ್ಛೆಯಂತೆಯೂ ಬದುಕದೇ, ಇತರರನ್ನೂ ಖುಷಿಪಡಿಸಲಾರದ ಇಬ್ಬಂದಿತನದಲ್ಲಿ ಜೀವನವನ್ನು ಕಳೆದುಬಿಡುತ್ತೇವೆ.
ನಿಮಗೊಂದು ಕಟು ವಾಸ್ತವವನ್ನು ಹೇಳಿದರೆ ನೀವು ಒಪ್ಪಲಾರಿರಿ. ಈ ರೀತಿ ನಮ್ಮ ನಡೆ ನುಡಿಗಳ ಜವಾಬ್ದಾರಿಯನ್ನು ಸುತ್ತಲಿನವರ ಅಥವಾ ಸಮಾಜದ ಮೇಲೆ ಹೊರಿಸುವುದರ ಅರ್ಥ ನಮಗೆ ಏನು ಬೇಕು ಎನ್ನುವುದರ ಸ್ಪಷ್ಟತೆ ನಮಗೇ ಇಲ್ಲದಿರುವುದು ಅಥವಾ ಬೇಕಾಗಿದ್ದನ್ನು ಮಾಡಲು ಹಿಂಜರಿಯುವುದು – ಎನ್ನುವುದಷ್ಟೇ. ಕಾರಣಗಳೇನೇ ಇದ್ದರೂ ಇಂತಹ ಕಾಲ್ಪನಿಕ ನಿರ್ಬಂಧಗಳನ್ನು ನಮ್ಮ ಮೇಲೆ ಹೇರಿಕೊಳ್ಳುವುದರಿಂದ ನಾವು ಬದುಕಿನ ಹೊಸ ಸಾಧ್ಯತೆಗಳಿಗೆ ವಿಮುಖರಾಗುತ್ತೇವೆ. ನಮ್ಮನ್ನು ಜೀವನದ ಖುಷಿಗಳಿಂದ ನಾವೇ ವಂಚಿಸಿಕೊಳ್ಳುತ್ತೇವೆ. ಎಷ್ಟೋ ಸಾರಿ ನಮ್ಮಲ್ಲಿರಬಹುದಾದ ಪ್ರತಿಭೆಗಳು ಹೊರಬರದೆ ಮುಕ್ಕಾಗುತ್ತವೆ.
ಈ ರೀತಿಯ ನಿರ್ಬಂಧಗಳನ್ನು ಪೋಷಕರು ಚಿಕ್ಕಂದಿನಿಂದಲೇ ಮಕ್ಕಳ ಮೇಲೆ ಹೇರಿಬಿಟ್ಟಿರುತ್ತಾರೆ. ಅದೇ ಮಿತಿಯಲ್ಲಿ ಬೆಳೆದ ಮಕ್ಕಳು ಅದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಾರೆ. ಯಾವುದಾದರೂ ಮಗು “ಈ ಜನ, ಸಮಾಜ ಅಂದ್ರೆ ಯಾವುದು, ನಾವೇಕೆ ಅವರಿಚ್ಛೆಯಂತೆ ನಡೆಯಬೇಕು?” ಅಂತ ಪ್ರಶ್ನಿಸಿದರೆ, ನಮ್ಮ ಸಿದ್ಧ ಉತ್ತರ ಹೀಗಿರುತ್ತದೆ, “ಪ್ರಪಂಚ ನಡೆದುಕೊಂಡು ಬಂದಿರೋದೇ ಹೀಗೆ”, ಅಥವಾ “ದೊಡ್ಡವನಾದ ಮೇಲೆ ನಿನಗೇ ಗೊತ್ತಾಗುತ್ತೆ”. ಮಗು ದೊಡ್ಡವನಾದ ಮೇಲೆ ಗೊತ್ತಾಗುವುದು ತನ್ನ ಮಕ್ಕಳನ್ನೂ ಇದೇ ಉತ್ತರಗಳಿಂದ ಬಾಯ್ಮುಚ್ಚಿಸಬೇಕು ಎನ್ನುವುದು ಮಾತ್ರ!
ನಾನು ಹೇಳುವುದು ಮನೆಯವರು, ಬಂಧುಗಳು, ಸಮಾಜ ಇವನ್ನೆಲ್ಲಾ ಧಿಕ್ಕರಿಸಿ ನಮ್ಮದೇ ಹಾದಿಯಲ್ಲಿ ನಡೆಯಬೇಕು ಅಂತಲ್ಲ. ಮಹಾಪುರುಷರುಗಳೆಲ್ಲಾ ಯಶಸ್ವಿಯಾಗಿ ಅಳವಡಿಸಿಕೊಂಡ ಕೆಲವು ನಿಯಮಗಳನ್ನು ಸರಳೀಕರಿಸಿದರೆ ಹೀಗಿರಬಹುದು ನೋಡಿ;
1. ಅನವಶ್ಯಕವಾಗಿ ಯಾರನ್ನು ನಮ್ಮ ಮಾತು ಅಥವಾ ಕೃತಿಯಿಂದ ನೋಯಿಸಬಾರದು.
2. ನಾವು ಮಾಡುವ ಕೆಲಸಗಳು ಆಥವಾ ಆಡುವ ಮಾತುಗಳು ಕಾನೂನು ಬಾಹಿರ ಅಥವಾ ಅನೈತಿಕವಾಗಿರಬಾರದು ಅಥವಾ ಸಾಮಾಜಿಕವಾಗಿ ಕೆಟ್ಟ ಮೇಲ್ಪಂಕ್ತಿ ಹಾಕುವಂತದ್ದಾಗಿರಬಾರದು.
3. ಸಾಧ್ಯವಾಗುವುದಾದರೆ ಇತರರಿಗೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಬೇಕು ಅಥವಾ ಕಡಿಮೆಮಾಡಬೇಕು.
ಈ ಮಿತಿಯೊಳಗೆ ನಮ್ಮ ತಲೆಗೆ ನಾವೇ ತಯಾರಿಸಿದ ಒಂದು ಹೊಸ ಸಾಫ್ಟವೇರ್ ಅಳವಡಿಸಿಕೊಳ್ಳೋಣ. ಈ ಸಾಫ್ಟವೇರ್‍ನಲ್ಲಿ ನಮ್ಮ ಬೇಕು ಬೇಡಗಳಿಗೆ ಪ್ರಮುಖ ಆದ್ಯತೆ ನೀಡಿ, ನಮ್ಮ ಬದುಕನ್ನು, ಪ್ರತಿಭೆಯನ್ನು ಚುರುಕುಗೊಳಿಸಬಲ್ಲ ಕಮ್ಯಾಂಡ್‍ಗಳನ್ನು ಬಳಸಿಕೊಳ್ಳಬೇಕು. ಆಗ ನಾವೂ ಖುಷಿಯಾಗಿದ್ದು ಸುತ್ತಲಿನವರಿಗೂ ಅದನ್ನು ಹಂಚಲು ಸಾಧ್ಯವಾಗುತ್ತದೆ.
ಇದರ ಬಗೆಗೆ ಯಾರಾದರೂ ಪ್ರಶ್ನಿಸಿದರೆ, ಅವರ ಅಭಿಪ್ರಾಯವನ್ನು ಕೇಳಿ, ಸರಿಯೆನ್ನಿಸಿದರೆ ಅಳವಡಿಸಿಕೊಳ್ಳೋಣ. ಇಲ್ಲದಿದ್ದರೆ ತಣ್ಣನೆಯ ಧ್ವನಿಯಲ್ಲಿ ನಮ್ಮ ನಿಲುವನ್ನು ಹೇಳಿ, “ಇದರ ಬಗೆಗೆ ಚರ್ಚೆ ಮಾಡಲು ನನಗಿಷ್ಟವಿಲ್ಲ” ಎಂದು ಮಾತು ಮುಗಿಸಿದರೆ ಸಂದೇಶ ಪರಿಣಾಮಕಾರಿಯಾಗಿ ತಲುಪಿರುತ್ತದೆ; ಸಂಬಂಧಗಳೂ ಸೌಹಾರ್ಧಯುತವಾಗಿ ಉಳಿಯುತ್ತದೆ.
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!