ನಿಮಗೆ ಮದುವೆಯಾಗಿ ಕೆಲವು ವರ್ಷಗಳಾಗಿದ್ದರೆ,
1. ವೈವಾಹಿಕ ಜೀವನದಲ್ಲಿ ಏಕಾತಾನತೆಯಿಂದಾಗಿ ಬೇಸರವುಂಟಾಗಿದೆಯೇ?
2. ಪತಿಪತ್ನಿಯರ ಮಧ್ಯೆ ಆಗಾಗ ಬಿಸಿಬಿಸಿ ಮಾತುಕತೆಗಳಾಗತ್ತಿದೆಯೇ ಅಥವಾ ಹಾಗಾಗದಿದ್ದರೂ ಒಟ್ಟಾರೆ ಮೊದಲಿನ ಆತ್ಮೀಯತೆ ಉಳಿದಿಲ್ಲ ಅನ್ನಿಸುತ್ತಿದೆಯೇ?
3. ಗಂಡ ಹೆಂಡತಿಯರಲ್ಲಿ ಒಬ್ಬರಿಗೆ ಆಸಕ್ತಿ ಕಡಿಮೆಯಾದ ಕಾರಣಕ್ಕಾಗಿ ಲೈಂಗಿಕ ಜೀವನ ನೀರಸ ಅನ್ನಿಸಿ ನೀವು ಪಬ್ಬು, ಕ್ಲಬ್ಬುಗಳನ್ನು ಹುಡುಕಿಕೊಂಡು ಹೋಗುತ್ತಿದ್ದೀರಾ?
4. ನಮ್ಮ ಜೀವನದಲ್ಲಿ ಇನ್ನೇನು ಉಳಿದಿಲ್ಲ, ಮಕ್ಕಳಿಗೆ ಒಂದು ದಾರಿ ತೋರಿಸಿದರೆ ಎಲ್ಲಾ ಮುಗಿದಂತೆ ಅನ್ನಿಸುತ್ತಿದೆಯೇ?
ಹಾಗಿದ್ದರೆ ನೀವು ದಾಂಪತ್ಯ ಜೀವನದ ಸರಿಯಾದ ಬೆಳವಣಿಗೆಯ ಹಂತದಲ್ಲಿದ್ದೀರಾ, ಬೇಸರ ಮಾಡಿಕೊಳ್ಳುವ ಅಗತ್ಯವೇನಿಲ್ಲ!!
ಇದು ವ್ಯಂಗ್ಯವಲ್ಲ
ಮೇಲಿನ ಮಾತುಗಳಲ್ಲಿ ವ್ಯಂಗ್ಯದ ಧ್ವನಿ ನಿಮಗೆ ಕಂಡಿದ್ದರೆ ಕ್ಷಮಿಸಿ, ನನಗೆ ನಿಮ್ಮನ್ನು ಹಂಗಿಸುವ ಉದ್ದೇಶವಿಲ್ಲ. ಇಂತಹ ಹೊಸತನವಿಲ್ಲದ, ಬೇಸರದ, ಭಿನ್ನಾಭಿಪ್ರಾಯಗಳ ಹಂತ ಸಾಮಾನ್ಯವಾಗಿ ಹೆಚ್ಚಿನವರ ವೈವಾಹಿಕ ಜೀವನದಲ್ಲಿ ಬಂದೇ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪತಿಪತ್ನಿಯರು ತಮ್ಮ ಮಾನಸಿಕ ಆತಂಕ, ಕಿರಿಕಿರಿಗಳನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ತಮ್ಮ ಭಾವೀ ಜೀವನದ ಬಗೆಗೆ ಎಂತಹ ಧೋರಣೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನವುದು ಅತಿ ಮುಖ್ಯ. ಇದರ ಆಧಾರದ ಮೇಲೆ ನಿಮ್ಮ ದಾಂಪತ್ಯದಲ್ಲಿ ಶಾಶ್ವತವಾದ ಸಂತೋಷ, ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆಯೇ ಇಲ್ಲವೇ ಎನ್ನುವುದು ನಿರ್ಧರಿತವಾಗುತ್ತದೆ.
ದಾಂಪತ್ಯದ ಬೆಳವಣಿಗೆಯ ಹಂತಗಳು
ಮದುವೆಯಾದ ಆರಂಭದ ಹಂತದಲ್ಲಿ ಪತಿಪತಿಯರಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮತ್ತು ಮೆಚ್ಚಿಸುವ ತವಕದಲ್ಲಿರುತ್ತಾರೆ. ಹಲವಾರು ವರ್ಷ ಪ್ರೇಮಿಸಿ ಮದುವೆಯಾದವರೂ ಕೂಡ ಇದನ್ನೇ ಮಾಡುತ್ತಾರೆ, ಏಕೆಂದರೆ ಗಂಡಹೆಂಡತಿಯರಾಗಿ ನಿಭಾಯಿಸಬೇಕಾದ ಜವಾಬ್ದಾರಿಗಳು ಅಥವಾ ಸಾಮಾಜಿಕ ಚೌಕಟ್ಟುಗಳು ಪ್ರೇಮಿಗಳಿಗೆ ಇರುವುದಿಲ್ಲ. ದಾಂಪತ್ಯದ ಅಗತ್ಯಗಳು ಬರಿಯ ಪ್ರೇಮ ಸಂಬಂಧದ ಅಗತ್ಯಗಳಿಗಿಂತ ಭಿನ್ನವಾಗಿರುತ್ತದೆ.
ಹೀಗೆ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮತ್ತು ಸಾಧ್ಯವಾದಷ್ಟು ಇನ್ನೊಬ್ಬರನ್ನು ಖುಷಿಯಾಗಿಡುವ ಪ್ರಯತ್ನದಲ್ಲಿ ಹೆಚ್ಚಿನ ನವದಂಪತಿಗಳು ವರ್ತಿಸುವ ರೀತಿ ಒಂದೇ ರೀತಿಯಾಗಿರುತ್ತದೆ. ಇಬ್ಬರೂ ತಮ್ಮ ಇಷ್ಟ ಕಷ್ಟಗಳನ್ನು ಸಾಕಷ್ಟು ಹೇಳಿಕೊಳ್ಳದೆ ಪ್ರೀತಿಯ ಮುಖವಾಡದಲ್ಲಿ ಇನ್ನೊಬ್ಬರ ಅಗತ್ಯಗಳನ್ನು ಪೂರೈಸುವ ತವಕದಲ್ಲಿರುತ್ತಾರೆ. ಹಾಗಾಗಿ ಆರಂಭದ ಹಂತದಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯಗಳು ಬರುವುದಿಲ್ಲ ಅಥವಾ ಬಂದರೂ ಬಹಳ ಬೇಗ ಮುಚ್ಚಿಹೋಗುತ್ತವೆ. ಆದರೆ ನೆನಪಿಡಿ, ಈ ಭಿನ್ನಾಭಿಪ್ರಾಯಗಳು ಪರಿಹಾರವಾಗಿರುವುದಿಲ್ಲ. ಹಾಗಾಗಿಯೇ “ಗಂಡ ಹೆಂಡಿರ ಜಗಳ ಉಂಡು ಮಲಗುವವವರೆಗೆ” ಎನ್ನವು ಗಾದೆ ಹುಟ್ಟಿಕೊಂಡಿದೆ. ಇದು ಎಂತಹ ಪೊಳ್ಳು ಗಾದೆ ಎಂದು ಸಾಕಷ್ಟು ಮಧ್ಯ ವಯಸ್ಸಿನ ದಂಪತಿಗಳಿಗೆ ತಿಳಿದಿದೆ! ನನ್ನ ಹತ್ತಿರ ಆಪ್ತಸಲಹೆಗೆ ಬರುವ ಎಷ್ಟೋ ದಂಪತಿಗಳ ಅನುಭವದಲ್ಲಿ ಗಂಡಹೆಂಡಿರ ಜಗಳ ಶುರುವಾಗುವುದೇ ಉಂಡು ಮಲಗಿದ ಮೇಲೆ!!
ಹೀಗೆ ಒಬ್ಬರು ಇನ್ನೊಬ್ಬರನ್ನು ಖುಷಿಪಡಿಸುವ ಕೆಲಸ ಪ್ರೀತಿ, ತ್ಯಾಗ, ಹೊಂದಾಣಿಕೆಯ ಹೆಸರಿನಲ್ಲಿ ನಡೆಯುತ್ತಿರುತ್ತದೆ. ವಾಸ್ತವದಲ್ಲಿ ಇದು ನಿಜವಾದ ಪ್ರೇಮವೇ? ಮುಂದೆ ನೋಡೋಣ.
ಎಲ್ಲಿಯವರೆಗೆ ಸಹಿಸಿಕೊಳ್ಳಲಿ?
ನಿಧಾನವಾಗಿ ದಾಂಪತ್ಯದಲ್ಲಿ ಸಲಿಗೆ ಮತ್ತು ಜವಾಬ್ದಾರಿಗಳು ಹೆಚ್ಚಿದಂತೆ ಒಬ್ಬರು ಇನ್ನೊಬ್ಬರನ್ನು ಯಾವಾಗಲೂ ಖುಷಿಯಾಗಿಡುವ ಅಗತ್ಯ ಹೆಚ್ಚಾಗಿ ಕಾಣುವುದಿಲ್ಲ. ಜೊತೆಗೆ ಅದಕ್ಕಾಗಿ ಸಾಕಷ್ಟು ಸಮಯ, ತಾಳ್ಮೆ ಯಾವುದೂ ಉಳಿದಿರುವುದಿಲ್ಲ. ಇಲ್ಲಿಂದ ಸಣ್ಣಪುಟ್ಟ ಬಿರುಕುಗಳು ಕಾಣಿಸಿಕೊಂಡು ಇಬ್ಬರೂ ಪರಸ್ಪರ ಆರೋಪಗಳನ್ನು ಹೊರಿಸಲು ಶುರುಮಾಡಬಹುದು. ನೀನು ನನ್ನನ್ನು ಕಡೆಗಣಿಸುತ್ತಿದ್ದೀಯಾ; ನೀವು ಮೊದಲು ಇದ್ದಂತೆ ಇಲ್ಲ; ನಿನಗೆ ಸಲಿಗೆ ಕೊಟ್ಟಿದ್ದು ಜಾಸ್ತಿಯಾಯಿತು; ನಿಮಗಾಗಿ ನಾನು ಏನೆಲ್ಲಾ ತ್ಯಾಗ ಮಾಡಿದೆ, ಆದರೆ ನೀವು ಮಾತ್ರ ನನ್ನನ್ನು ಕಾಲಕಸ ಮಾಡಿದ್ದೀರಾ – ಮುಂತಾದವು. ಹೀಗೆ ನೇರವಾಗಿ ಮಾತಿಗಿಳಿಯದ ದಂಪತಿಗಳಲ್ಲೂ ನಾನು ಸಂಗಾತಿಯ ಆಯ್ಕೆಯಲ್ಲಿ ತಪ್ಪಿದೆನೇ, ಎನ್ನವು ಅತೃಪ್ತಿಯು ಹೊಗೆಯಾಡುತ್ತಿರಬಹುದು. ಅಪರೂಪದ ಕೆಲವರಲ್ಲಿ ಭಿನ್ನಾಭಿಪ್ರಾಯಗಳು ಬರದಿದ್ದರೂ ದಾಂಪತ್ಯದ ಹೊಸತನ ಹೊರಟು ಹೋಗಿದೆ ಎಂದು ಅನ್ನಿಸುತ್ತಿರುವ ಸಾಧ್ಯತೆಗಳಿರುತ್ತದೆ. ಇದೆಲ್ಲದರ ನೇರ ಅಡ್ಡ ಪರಿಣಾಮವಾಗುವುದು ಉಂಡು ಮಲಗಿದೆ ಮೇಲೆ!
ಬಹುಷಃ ಇದು ಮದುವೆ ಎನ್ನವು ಸಾಮಾಜಿಕ ಸಂಸ್ಥೆ ಹುಟ್ಟಿದಂದಿನಿಂದಲೇ ನಡೆದು ಬಂದ ರೀತಿ. ಹಾಗಾಗಿಯೇ ವಿಚ್ಛೇದನಗಳು ಮದುವೆಯ ಜೊತೆಗೇ ಹುಟ್ಟಿದವು, ಹೆಚ್ಚೆಂದರೆ ಇಪ್ಪತ್ತು ನಿಮಿಷಗಳ ನಂತರ!-ಎನ್ನುವ ಮಾತಿದೆ.
ಇದಕ್ಕಾಗಿ ಯಾವ ದಂಪತಿಗಳೂ ನಿರಾಸೆಗೊಳ್ಳುವ ಕಾರಣಗಳೇನಿಲ್ಲ. ವಾಸ್ತವದಲ್ಲಿ ಇವೆಲ್ಲಾ ವೈವಾಹಿಕ ಸಂಬಂಧ ರೂಪಗೊಳ್ಳುವ ಬೆಳವಣಿಗೆಯ ಸಹಜ ಹಂತಗಳು. ವಿಪರ್ಯಾಸವೆಂದರೆ ಇವೆಲ್ಲಾ ನಡೆಯುವುದು ಪ್ರೇಮ, ಪ್ರೀತಿ, ತ್ಯಾಗ, ಹೊಂದಾಣಿಕೆ ಎನ್ನವು ಹೆಸರಿನಲ್ಲಿ! ನಮ್ಮಲ್ಲಿ ಹೆಚ್ಚಿನವರು ಇದೇ ಹಂತದಲ್ಲೇ ಕೊನೆಯವರೆಗೂ ಕಳೆದುಬಿಟ್ಟರೆ, ಕೆಲವರು ಸಂಬಂಧವನ್ನೂ ಇನ್ನೂ ಹಾಳುಮಾಡಿಕೊಂಡು ವಿಚ್ಛೇದನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಹೊಸ ಸಂಗಾತಿಯನ್ನು ಹುಡುಕಿಕೊಂಡು ಹೋಗುವವರು ಹೊಸ ಸಂಬಂಧದಲ್ಲೂ ಕೂಡ ಮತ್ತೇ ಇದೇ ದಾರಿಯಲ್ಲಿ ನಡೆಯಬೇಕಾಗುತ್ತದೆ. ಬೆರಳೆಣಿಕೆಯಷ್ಟು ಜನ ಮಾತ್ರ ತಾತ್ಕಲಿಕ ಮಾನಸಿಕ ಆತಂಕ, ಕಿರಿಕಿರಿಗಳನ್ನು ಮೆಟ್ಟಿನಿಂತು ಮುಂದುವರೆದು ಶಾಶ್ವತ ಸಮಾಧಾನದತ್ತ ನಡೆಯುತ್ತಾರೆ.
ಎಲ್ಲಿದೆ ಇದರ ಮೂಲ?
ತಮ್ಮತನವನ್ನು ಬಿಟ್ಟು ಸಂಗಾತಿಯನ್ನು ಖುಷಿಪಡಿಸುವ ಹಪಾಹಪಿಯೇ ಇದೆಲ್ಲದರ ಮೂಲ ಎಂದರೆ ಯಾವ ದಂಪತಿಗಳೂ ಇದನ್ನು ಒಪ್ಪುವುದಿಲ್ಲ. ಮದುವೆಯ ಹೊಸದರಲ್ಲಿ ನಮ್ಮತನವನ್ನು ಬಿಡುವುದರಲ್ಲಿ ಒಂದು ರೀತಿಯ ಪ್ರೇಮದ ನಶೆ ಇರುತ್ತದೆ. ಒಮ್ಮೆ ಆ ನಶೆ ಇಳಿಯುತ್ತಾ ಬಂದಂತೆ ನಮ್ಮ ಸ್ವಂತಿಕೆಯನ್ನು ಬಿಟ್ಟು ಬದುಕುವ ಕಿರಿಕಿರಿ ಸುಡತೊಡಗುತ್ತದೆ. ಎಲ್ಲಾ ಸಂದರ್ಭದಲ್ಲಿಯೂ ನಾನೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಇಬ್ಬರಿಗೂ ಅನ್ನಿಸತೊಡಗುತ್ತದೆ. ಜೊತೆಗೆ ಯಾವಾಗಲೂ ಸಂಗಾತಿಯನ್ನು ಸಂತೋಷದಲ್ಲಿಡಲು ಅಥವಾ ಅವರಿಗೆ ಬೇಸರವಾಗದಂತೆ ವರ್ತಿಸಲು ಬೇಕಾಗುವ ಮಾನಸಿಕ ಎಚ್ಚರ ನಮ್ಮೊಳಗೆ ಅಗಾಧವಾದ ಆತಂಕ ಒತ್ತಡಗಳನ್ನು ಹುಟ್ಟುಹಾಕುತ್ತದೆ. ಮದುವೆಗೆ ಮುಂಚೆ ಸ್ವಚ್ಛಂದವಾಗಿ ಬದುಕುತ್ತಿದ್ದು ಈಗ ಅದನ್ನೆಲ್ಲಾ ಕಳೆದುಕೊಂಡೆನೇ, ಅನ್ನಿಸತೊಡಗುತ್ತದೆ. ಇದೆಲ್ಲದರಿಂದಾಗಿ ಇಬ್ಬರೂ ತಮ್ಮ ಮೂಲ ವ್ಯಕ್ತಿತ್ವಕ್ಕೆ ಅನುಗುಣವಾಗಿ ಬದುಕುವ ಸಣ್ಣಪುಟ್ಟ ಪ್ರಯತ್ನಗಳನ್ನು ಆಗಾಗ ಮಾಡತೊಡಗುತ್ತಾರೆ. ಆಗಲೇ ಪರಸ್ಪರರಿಗೆ ಮತ್ತೊಬ್ಬರು ಬದಲಾಗುತ್ತಿದ್ದಾರೆ ಅನ್ನಿಸುವುದು. ಇಲ್ಲಿಂದ ದಾಂಪತ್ಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮ ಸಹಜವಾಗಿ ಲೈಂಗಿಕ ಸಂಬಂಧದಲ್ಲಿ ಆಗುತ್ತದೆ.
ಮುಂದುವರೆಯುವುದು..
ವಸಂತ್ ನಡಹಳ್ಳಿ
- Advertisement -
- Advertisement -
- Advertisement -
- Advertisement -