18.1 C
Sidlaghatta
Wednesday, January 15, 2025

ತಿಳಿಯದೇ ಮಾಡುವ ಘೋರ ತಪ್ಪು!

- Advertisement -
- Advertisement -

ಈ ಜಗತ್ತಿನ ಯಾರೂ ಪರಿಪೂರ್ಣರಲ್ಲ. ಆ ಪಂಕ್ತಿಯಲ್ಲಿ ರೈತರೂ ಇದ್ದಾರೆ. ಆ ಮಟ್ಟಿಗೆ ರೈತನ ಕೃಷಿ ಕಲಿಕೆಗೆ ಅಂತ್ಯ ಎಂಬುದೇ ಇಲ್ಲ. ಧಾರವಾಡದ ಹಳ್ಳಿಯಲ್ಲಿ ಸಮರ್ಪಕ ಎನ್ನಿಸಿದ ನೀರಾವರಿ ಯೋಜನೆ ಮಲೆನಾಡಿಗೆ ಅಕ್ಷಮ್ಯ ಅಪರಾಧ ಎನ್ನುವಂತಾಗಿಬಿಡಬಹುದು. ಕೆಲ ವರ್ಷಗಳ ಹಿಂದೆ ಸಾಗರದ ಹತ್ತಿರದ ಹಳ್ಳಿಯಲ್ಲಿ ನೀರಿಂಗಿಸುವ ಪದ್ಧತಿಯನ್ನು ಅಳವಡಿಸಿಕೊಂಡಾಗ ಭೂಮಿಯ ಜಲಮಟ್ಟ ಏರಿ ಅಡಿಕೆಗೆ ಬೇರು ಹುಳದ ಸಮಸ್ಯೆ ಕಾಣಿಸಿತ್ತು. ಏಕೆಂದರೆ ಅಲ್ಲಿಗೆ ಹೆಚ್ಚುವರಿ ನೀರು ಇಂಗುವ ಅಗತ್ಯವೇ ಇರಲಿಲ್ಲ! ಹಾಗೆಯೇ ಕೃಷಿಕ ಕೈಗೊಳ್ಳುವ ದೊಡ್ಡ ದೊಡ್ಡ ಯೋಜನೆಗಳ ಅತಿ ಚಿಕ್ಕ ತಪ್ಪು ಕೂಡ ಫಲಿತಾಂಶದಲ್ಲಿ ಏರಿಳಿತವನ್ನು ದಾಖಲಿಸಿಬಿಡಬಹುದು. ಸ್ವಾರಸ್ಯವೆಂದರೆ ನಮಗೆ ಕಾಣದ ನಮ್ಮ ದೋಷ ಇನ್ನೊಬ್ಬರಿಗೆ ಸರಳವಾಗಿ ಗೋಚರಿಸಿಬಿಡುತ್ತದೆ! ಈ ಹಂತದಲ್ಲಿ ತಿದ್ದಿಕೊಳ್ಳುವುದು ಜಾಣತನ. ಈ ಲೇಖನದಲ್ಲಿ ನಿಮ್ಮ ತೋಟ, ಕೃಷಿ ಭೂಮಿಯೊಳಗೆ ಇಳಿಯದೆ ಸಾಮಾನ್ಯವಾಗಿ ಜಾರಿಯಲ್ಲಿರುವ ತಪ್ಪುಗಳತ್ತ ನೋಟ ಹರಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತದೆಂದಾದರೂ ಸ್ವಾಗತ.
ತೆಂಗಿನ ಉಪಬೆಳೆ ಯಾವುದು?
ತೆಂಗಿನಿಂದ ತೆಂಗಿಗೆ 20 ರಿಂದ 25 ಅಡಿಗಳವರೆಗೆ ಅಂತರ ಬಿಡಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಇದು ವೈಜ್ಞಾನಿಕವಲ್ಲವಾದರೂ ಮಣ್ಣು ಲಕ್ಷಣ ಹಾಗೂ ಸಾಂದ್ರ ಬೇಸಾಯದಿಂದಾಗಿ ಇದು ಸಮ್ಮತವೆನಿಸಿದೆ. ಜೊತೆಗೆ ಇಂದಿನ ಆಧುನಿಕ ಕೃಷಿ ಚಿಂತಕರು ತೆಂಗಿನ ಎಡೆಯಲ್ಲಿ ಉಪಬೆಳೆ ಬೆಳೆಯಲು ಯೋಚಿಸುತ್ತಾರೆ. ಅಂತವರು ಲಾಭದಾಯಕ ಅಡಿಕೆ ಬೆಳೆ ಹಾಕಲು ಹೆಚ್ಚು ಆಸಕ್ತರಾಗಿರುತ್ತಾರೆ. ಆ ನಿಲುವಿಗೆ ಅವರು ಕಾರಣವನ್ನೂ ನೀಡುತ್ತಾರೆ. ತೆಂಗುಗಳೆರಡರ ನಡುವಣ ಅಂತರ 20 ಅಡಿ. ಹತ್ತಡಿಗೊಂದು ಅಡಿಕೆಮರ ನೆಡುವುದು ಸಂಪ್ರದಾಯ. ನಾವು ಅಡಿಕೆಗೆ ಪ್ರತ್ಯೇಕ ಗೊಬ್ಬರ ನೀರು ಕೊಡುವುದರಿಂದ ಮುಖ್ಯ ಬೆಳೆಗೆ ತೊಂದರೆಯಾಗದು ಎನ್ನುತ್ತಾರೆ ಆ ಸಿನಿಕರು. ಗಮನಿಸಿ, ತೆಂಗುಗಳೆರಡರ ಅಂತರ ಇಪ್ಪತ್ತಡಿಯಿರುವಾಗ 2 ತೆಂಗಿನ ಗಿಡಗಳಿಗೆ ನಡುವಣ ಜಾಗದಲ್ಲಿನ ಭೂಸಾರದ ಪೂರ್ಣ ಅಗತ್ಯವಿರುತ್ತದೆ. ಯಾವುದೇ ದೀರ್ಘಾವಧಿಯ ಉಪಬೆಳೆಯನ್ನು ಹಾಕುವುದರಿಂದ ಮುಖ್ಯಬೆಳೆಯ (ತೆಂಗಿನ) ಫಸಲಿನಲ್ಲಿ ಕಡಿಮೆಯಾಗುತ್ತದೆ. ಸಾರಾಂಶ ಇಷ್ಟೇ, ಮುಖ್ಯ ಬೆಳೆಯ ಎಡೆಯಲ್ಲಿ ಉಪಬೆಳೆಯಾಗಿ ಇನ್ನೊಂದು ಬಹುವಾರ್ಷಿಕ ಬೆಳೆಗೆ ಪ್ರಯತ್ನಿಸುವುದು ತಪ್ಪು.
ನೀರಿನ ಪೂರೈಕೆ ಯಾವಾಗ?
ಪ್ರತಿಯೊಂದು ಗಿಡಕ್ಕೆ ದಿನಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ಕೃಷಿ ತಜ್ಞರು ಕಂಡುಹಿಡಿದಿದ್ದಾರೆ. ಇದೇ ತೆಂಗಿನ ಗಿಡವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಅದಕ್ಕೆ ದಿನಕ್ಕೆ 120 ಲೀಟರ್ ನೀರಿನ ಅವಶ್ಯಕತೆ ಇದೆ ಎನ್ನುತ್ತಾರವರು. ನಾವು ಲೆಕ್ಕ ಮಾಡಿ 120 ಲೀ. ನೀರನ್ನು ತೆಂಗಿನ ಮರದ ಬುಡಕ್ಕೆ ಸುರುವುತ್ತೇವೆ. ಅಷ್ಟೂ ನೀರು ಆ ತೆಂಗಿಗೆ ಸಿಗುತ್ತದೆಯೇ? ಅನುಮಾನ. ಸದರಿ ಭೂಮಿಯ ಮಣ್ಣು ಎಷ್ಟು ಕಾಲ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು ಎಂಬುದು ಕೂಡ ಮುಖ್ಯ ಅಂಶ. ಹಾಗಾಗಿ ವಿಜ್ಞಾನಿಗಳು ಸೂಚಿಸಿದ ನೀರಿನ ಪ್ರಮಾಣವನ್ನು ನಮ್ಮ ಸಂದರ್ಭಕ್ಕೆ ಹೊಂದಿಸಿಕೊಳ್ಳಬೇಕು. ಮುಖ್ಯವಾಗಿ, ಯಾವುದೇ ಬೆಳೆಗೆ ಘೋರ ಬೇಸಿಗೆಗಿಂತ ಈಗಿನ ಚಳಿಗಾಲದಲ್ಲಿ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಚಳಿಗೆ ಮಣ್ಣು ಬಿರುಸಾಗಿ ಗಿಡಗಳ ಬೇರು ಘಾಸಿಗೊಳ್ಳುವುದನ್ನು ತಪ್ಪಿಸಲು ಅಕ್ಟೋಬರ್‍ನಿಂದ ಡಿಸೆಂಬರ್ ವೇಳೆ ನೀರು ಮುದ್ದಾಂ ಕೊಡಬೇಕು. ಬಹುಪಾಲು ರೈತರು ಇದನ್ನು ನಿರ್ಲಕ್ಷಿಸುತ್ತಾರೆ.
ಹುಟ್ಟಿದಾಕ್ಷಣ ಟಾನಿಕ್?
ಮಗು ಹುಟ್ಟಿದ ನಿಮಿಷಗಳಲ್ಲಿಯೇ ಅದಕ್ಕೆ ಟಾನಿಕ್ ನೀಡುವುದು ಸೂಕ್ತವಾಗದು ಎಂಬುದು ನಿಮಗೂ ಗೊತ್ತು. ಮತ್ತೆ ನಾವು ಗುಂಡಿ ತೋಡಿ ಗೊಬ್ಬರ ಹಾಕಿ ಗಿಡ ನೆಡುವುದು ಸರಿಯೇ? ಆ ಸಮಯದಲ್ಲಿ ಗಿಡಕ್ಕೆ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂಲಭೂತವಾಗಿ ಮಣ್ಣು, ನೀರಿನ ಅಗತ್ಯತೆ ಇರುತ್ತದೆಯೇ ವಿನಃ ಕಾಂಪೋಸ್ಟ್‍ನದಲ್ಲ. ಬೇರುಗಳು ಭೂಮಿಯಲ್ಲಿ ಹೊಂದಿಕೊಂಡ ನಂತರವೇ ಕಾಂಪೋಸ್ಟ್ ಗೊಬ್ಬರವನ್ನು ನೀಡಿದರೆ ಸಾಕು. ಮೊದಮೊದಲು ದ್ರವರೂಪದಲ್ಲಿ ಗೊಬ್ಬರ ನೀಡುವಿಕೆ ಸುರಕ್ಷಿತ. ಗೊಬ್ಬರ ಹಾಕಿ ಗಿಡ ನೆಡುವುದರಿಂದ ಗಿಡಕ್ಕೆ ಯಾವುದೇ ಪ್ರಯೋಜನವಿಲ್ಲ. ನಿಜಕ್ಕಾದರೆ ಬೇರುಗಳು ಹಾನಿಗೊಳಗಾಗುವ ಅಪಾಯವೇ ಹೆಚ್ಚು.
ಕಳೆನಾಶಕ ಬೇಡ
ಇಂದು ಕಳೆಯ ನಿರ್ಮೂಲನೆಗೆ ರಾಸಾಯನಿಕ ಕಳೆ ನಾಶಕಗಳು ಬಂದಿವೆ. ಕಳೆ ಕೀಳುವ, ಸವರುವ ಶ್ರಮಕ್ಕಿಂತ ಸಲೀಸು ಪದ್ಧತಿಯಾದುದರಿಂದ ರೈತರ ಗಮನ ಸೆಳೆದಿದೆ. ಇದರ ಪ್ರಯೋಗದಿಂದ ಹತ್ತಿರದಲ್ಲಿ ಯಾವ ಪ್ರತಿಕೂಲ ಪರಿಣಾಮಗಳು ಕಾಣಿಸಿಕೊಳ್ಳದಿದ್ದರೂ ದೀರ್ಘಕಾಲೀನ ಅನಾಹುತಗಳು ಅನೇಕ. ವಾಸ್ತವವಾಗಿ ಕಳೆನಾಶಕದಿಂದ ಕಳೆಯೇನು ಸಾಯುವುದಿಲ್ಲ. ಬೇರಿನಲ್ಲಿ ಜೀವವಿದ್ದು ತುಸು ಇಬ್ಬನಿ, ತುಂತುರು ಮಳೆ ಬಿದ್ದರೂ ಕಳೆ ಮತ್ತೆ ಪ್ರತ್ಯಕ್ಷವಾಗುತ್ತದೆ! ಇದೇ ವೇಳೆ ಕಳೆನಾಶಕದ ರಸಾಯನಿಕದ ತೀಕ್ಷ್ಣತೆಗೆ ಸೂಕ್ಷ್ಮ ಬ್ಯಾಕ್ಟೀರಿಯಾಗಳು, ಎರೆಹುಳುಗಳು ನಾಶವಾಗುತ್ತವೆ. ಭೂಮಿ ಬರಡು, ಇಳುವರಿ ಕಡಿಮೆ, ವಿಚಿತ್ರ ರೋಗಗಳು ಮುಂದಿನ ಹತ್ತಾರು ವರ್ಷಗಳ ನಂತರವಷ್ಟೇ ಕಾಣಿಸಿಕೊಳ್ಳುವುದು ಖಚಿತ. ನಾವೇ ನಮ್ಮ ಬೆಳೆಗೆ ವಿಷವಿಕ್ಕುವುದೇ…. ಯೋಚಿಸಿ.
ಸಗಣಿಯೆಲ್ಲ ಸ್ಲರಿ, ಸರಿಯೇ?
ಈಗ ಬಹುಪಾಲು ಕೃಷಿಕರ ಮನೆಯಲ್ಲಿ ಗೋಬರ್ ಅನಿಲ ಸ್ಥಾವರ ನಿರ್ಮಾಣವಾಗಿದೆ. ಆದರೆ ಹೆಚ್ಚಿನ ಗೋಪಾಲಕರು ಆಯಾದಿನದ ಎಲ್ಲಾ ಸಗಣಿಯನ್ನು ಸ್ಲರಿ ಮಾಡಿ ಸ್ಥಾವರಕ್ಕೆ ಉಣಿಸುತ್ತಿದ್ದಾರೆ. ಒಂದು ಬುಟ್ಟಿ ಅರ್ಥಾತ್ 15 ಕೆ.ಜಿ. ಸಗಣಿಯಿಂದ 4-5 ಜನರ ಕುಟುಂಬಕ್ಕೆ ಸಾಕೆನಿಸುವಷ್ಟು ಅನಿಲ ಉತ್ಪತ್ತಿಯಾಗುತ್ತದೆ. ಇದಕ್ಕಿಂತ ಜಾಸ್ತಿ ಸಗಣಿಯನ್ನು ಹಾಕುವುದು ವ್ಯರ್ಥ, ನಷ್ಟದ ಬಾಬತ್ತು. ಹೆಚ್ಚು ಸಗಣಿಯನ್ನು ಬಳಸುವುದರಿಂದ ಹೆಚ್ಚಿನ ಅನಿಲ ಬಿಡುಗಡೆಯಾಗುತ್ತದೆನ್ನುವುದು ಭ್ರಮೆ. ಊಡಿಸಿದ ಸಗಣಿ ತನ್ನಲ್ಲಿರುವ ಪೂರ್ಣ ಅನಿಲವನ್ನು ಹೊರಹಾಕಲು 54 ದಿನ ತೆಗೆದುಕೊಳ್ಳುತ್ತದಂತೆ. ಅಂದರೆ ವಿಪರೀತ ಸಗಣಿ ಕದಡುವುದರಿಂದ ಸ್ಥಾವರದೊಳಗಿನ ಸ್ಲರಿ ತನ್ನಲ್ಲಿರುವ ಅನಿಲವಷ್ಟನ್ನು ಬಿಡದೆಯೇ ಹೊರದಬ್ಬಲ್ಪಡುತ್ತದೆ. ಹೀಗಾಗುವುದು ಬೇಕಿತ್ತೇ?
ಸುಣ್ಣ – ಸುಬ್ಬಣ್ಣ!
ಇದು ತೋಟಗಳಿಗೆ ಸುಣ್ಣ ಹಾಕುವ ಕಾಲ. ಇವತ್ತಿಗೂ ಹಲವು ರೈತರು ಗೊಬ್ಬರ ಹಾಕಲು ಬುಡ ಬಿಡಿಸಿ ಸುಣ್ಣ ಹಾಕಿ ಅದರ ಮೇಲೆ ಗೊಬ್ಬರ ಹಾಕುತ್ತಾರೆ. ಇದಂತೂ ತಪ್ಪು ತಪ್ಪು. ಯಾವುದೇ ಬೆಳೆಯ ಬುಡದ ಸಮೀಪ ಸುಣ್ಣ ಹಾಕದೆ ಉಳಿದ ಕೃಷಿ ಪ್ರದೇಶದಲ್ಲಿ ಸುಣ್ಣ ಬೀರಬೇಕು. ಮಣ್ಣಿನಲ್ಲಿರುವ ಕ್ಷಾರೀಯ ಅಂಶವನ್ನು ತೆಗೆದುಹಾಕಿ ಭೂಮಿಯ ಪಿಚ್‍ನ್ನು ತಟಸ್ಥ ಏಳಕ್ಕೆ ತರಲು ಪ್ರಯತ್ನಿಸುವುದು ಸುಣ್ಣದ ಮುಖ್ಯ ಕೆಲಸ. ಅದು ಗೊಬ್ಬರವಲ್ಲ. ಒಂದೊಮ್ಮೆ ಗೊಬ್ಬರದೊಂದಿಗೆ ಬೆರೆತರೆ ಗೊಬ್ಬರದ ಸಾರ ನಷ್ಟಗೊಳ್ಳುವ ರಾಸಾಯನಿಕ ಕ್ರಿಯೆ ನಡೆದುಬಿಡುತ್ತದೆ. ಅದೇ ತೋಟದ ಮಣ್ಣು ಸಮಸ್ಥಿತಿಗೆ ಬಂದರೆ ನಾವು ಉಣಿಸುವ ಗೊಬ್ಬರದ ಅಷ್ಟೂ ಭಾಗವನ್ನು ಹೀರಿಕೊಳ್ಳಲು ಬೇರಿಗೆ ಸಾಧ್ಯವಾಗುತ್ತದೆ.
ಇವು ಕೆಲವು ಪ್ರಾತಿನಿಧಿಕ ಮಾಹಿತಿಗಳು. ಇಂತಹ ಸತ್ಯಗಳು ಇತರರಲ್ಲಿಯೂ ಬಹಳಷ್ಟಿರಬಹುದು. ಅಂತಹ ಸಂವಾದ ನಡೆಯುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಬಹುದು. ಅಂತಹ ಸರಣಿಗೆ ಈ ಲೇಖನ ನಾಂದಿ ಹಾಡಿದೆ ಎಂದುಕೊಳ್ಳೋಣವೇ?
-ಮಾ.ವೆಂ.ಸ.ಪ್ರಸಾದ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!