28 C
Sidlaghatta
Sunday, December 22, 2024

ಡಿಕ್ಷನರಿ ಓದಿರಿ!

- Advertisement -
- Advertisement -

ತಲೆಬರಹ ಓದಿ ಒಮ್ಮೆಗೇ ನಕ್ಕವರಲ್ಲಿ ನೀವೂ ಒಬ್ಬರಾಗದಿದ್ದರೆ ಸಾಕು! ಬಹುಷಃ ಬಹುಮಂದಿ ನಗದೇ ಇರರು. ಅಲ್ಲವೇ ಮತ್ತೇ? ಡಿಕ್ಷನರಿಗಳು ಇರುವುದು ಶಬ್ಧಾರ್ಥ ಹುಡುಕಾಟಕ್ಕೆ. ಒಂಥರ ಕತ್ತಲೆಯಲ್ಲಿ ಪದಾರ್ಥ ಹುಡುಕಲು ಬ್ಯಾಟರಿ ಬಳಸಿದಂತೆ. ಹಾಗೆಂದುಕೊಂಡರೆ ಅದು ತಪ್ಪು ಹೆಜ್ಜೆ. ಪದ ಎನ್ನುವುದು ಜೀವನದ ಸಲೀಸು ಜಾರಿಗೆ ಸಲಕರಣೆ. ಡಿಕ್ಷನರಿ ಅಂತಹ ಪದಗಳ ದೊಡ್ಡ ಗುಚ್ಛ. ಅದರಲ್ಲಿ ಬರೀ ಶಬ್ಧದ ಅರ್ಥ ಇರುವುದಿಲ್ಲ. ಒಂದು ಶಬ್ಧದ ಪೂರ್ವಾಪರ, ಬಳಕೆ ವಿಧಾನ, ವಾಕ್ಯದಲ್ಲಿ ಉಪಯೋಗಿಸಿದ ಉದಾಹರಣೆ, ಅಷ್ಟೇಕೆ, ಹೇಗೇಗೆಲ್ಲ ಪದದ ಪ್ರಯೋಜನವನ್ನು ಪಡೆಯಬಹುದು ಎಂಬುದೂ ಇರುತ್ತದೆ. ನಿಜಕ್ಕೂ ಮಕ್ಕಳು ಡಿಕ್ಷನರಿಯನ್ನು `ಓದಲು ಆರಂಭಿಸಿಬಿಟ್ಟರೆ’ ಭಾಷೆಯ ಮೇಲಿನ ಅವರ ಹಿಡಿತ ಸಾವಿರ ಪಟ್ಟು ಉತ್ತಮಗೊಂಡೀತು. ಡಿಕ್ಷನರಿ ಸ್ವಯಂ ಪಾಠ ಮಾಡುವ ಮನೆಶಿಕ್ಷಕ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಭಾಷಾ ಪಾಂಡಿತ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ `ಡಿಕ್ಷನರಿ ಓದಿರಿ’ ಒಂದು ಆಂದೋಲನವಾಗುವ ಅಗತ್ಯವಿದೆ.
ನಿಜ, ಡಿಕ್ಷನರಿಗಳದು ಬಹುರೂಪಿ ನಿಲುವು. ಒಂದು ಭಾಷೆಯ ಪದಕ್ಕೆ ಅದೇ ಭಾಷೆಯಲ್ಲಿ ಅಥವಾ ಹೊರತಾದ ಬೇರೆ ಭಾಷೆಯಲ್ಲಿ ಅರ್ಥ, ಇತಿಹಾಸ ವಿವರಿಸುವ ಮಾದರಿ ಒಂದೇ ಅಲ್ಲ. ತ್ರಿ ಭಾಷಾ ಡಿಕ್ಷನರಿಗಳು ಕೂಡ ಇವೆ. ಪ್ರತಿ ವಿಷಯಕ್ಕೂ ಪ್ರತ್ಯೇಕವಾದ ಡಿಕ್ಷನರಿಗಳಿವೆ. ಇವತ್ತಿಗೂ ಡಿಕ್ಷನರಿ ನೋಡುವುದೆಂದರೆ ಪದದ ಅರ್ಥ ಗೊತ್ತಾಗದ ಕಷ್ಟ ಕಾಲದಲ್ಲಿ ಮಾತ್ರ ಎಂಬ ಅಭಿಪ್ರಾಯ ಖುದ್ದು ಶಿಕ್ಷಕರಿಗಿದೆ. ಅದಲ್ಲ, ಡಿಕ್ಷನರಿಯಲ್ಲಿ ಒಮ್ಮೆ ಕಣ್ಣಾಡಿಸುವ ಹವ್ಯಾಸ ಬೆಳೆದರೆ ನೀಡುವ ಖುಷಿ ವರ್ಣಿಸಲಾಗದ್ದು. ಮುಖ್ಯವಾಗಿ, ಪದಸಂಪತ್ತು ಬೆಳೆದು ಓದುವವರ ವ್ಯಕ್ತಿತ್ವವೇ ಬದಲಾಗುವ ಪರಿಯಲ್ಲಿ ಉತ್ಪ್ರೇಕ್ಷೆಯೇನಿಲ್ಲ.
ಡಿಕ್ಷನರಿ ಎಂದ ತಕ್ಷಣ ನೆನಪಾಗುವುದು ಆಕ್ಸ್‍ಫರ್ಡ್. ಇಪ್ಪತ್ತು ಸಂಪುಟಗಳ ಆಕ್ಸ್‍ಫರ್ಡ್ ಇಂಗ್ಲೀಷ್ ಡಿಕ್ಷನರಿಯಲ್ಲಿ 21,730 ಪುಟಗಳಿವೆ. ಇದನ್ನು ಇಂಗ್ಲೀಷ್‍ನ ಸಂಪೂರ್ಣ ಡಿಕ್ಷನರಿ ಎಂದೂ ಕರೆಯಲಾಗುತ್ತದೆ. ಓಇಡಿ 615,100 ಪದಗಳನ್ನು 2,436,600 ವ್ಯಾಖ್ಯಾನಗಳ ಮೂಲಕ ವರ್ಣಿಸುತ್ತದೆ. ಶೇಕ್ಸ್‍ಸ್ಪಿಯರ್‍ನನ್ನು 33,300 ಬಾರಿ ಉಲ್ಲೇಖಿಸಲಾಗಿದ್ದರೆ, ಅವನ ನಾಟಕ ಹ್ಯಾಮ್ಲೆಟ್‍ನ್ನೇ 1,600 ಕಡೆ ದಾಖಲಿಸಲಾಗಿದೆ!
ದುಬಾರಿ ಬೆಲೆಯ ಈ ಮಾದರಿಯ ಓಇಡಿ, ವೆಬ್‍ಸ್ಟರ್ ಅಮೆರಿಕನ್ ಡಿಕ್ಷನರಿ, ಕ್ಯಾಂಡಮ್ ಹೌಸ್ ಡಿಕ್ಷನರಿಗಳನ್ನು ಸಾಮಾನ್ಯರು ಖರೀದಿಸುವುದು ಸುಲಭದ ಮಾತಲ್ಲ. ಹಾಗಾಗಿಯೇ ಇತ್ತೀಚಿನ ದಶಕದಲ್ಲಿ ಕಲಿಯುವ ಹಂತದಲ್ಲಿರುವವರಿಗಾಗಿ ಲರ್ನರ್ಸ್ ಡಿಕ್ಷನರಿಗಳನ್ನು ಹೊರತರಲಾಗಿದೆ. ತುಂಬಾ ಸರಳವಾಗಿ ಮತ್ತು ಹೆಚ್ಚು ಪ್ರಚಲಿತ ಶಬ್ಧಗಳನ್ನು ಮಾತ್ರ ಆಯ್ದು ವಿವರಿಸಲಾಗಿರುತ್ತದೆ. ಉದಾಹರಣೆಗೆ, `ಲಾಂಗ್‍ಮನ್ ಡಿಕ್ಷನರಿ ಆಫ್ ಕಂಟೆಂಪರ್ವರಿ ಇಂಗ್ಲೀಷ್’ನಲ್ಲಿ 2,07,000 ಪದ-ವಿಶೇಷಣಗಳನ್ನು ವಿವರಿಸಲು ಕೇವಲ ಎರಡು ಸಾವಿರ ಸಾಮಾನ್ಯ ಪದ ಬಳಸಲಾಗಿದೆ. ಡಿಕ್ಷನರಿಯ ಗಾತ್ರವೂ ಚಿಕ್ಕದು. ಬೆಲೆಯೂ ಕೈಗೆಟುಕುವಂತದು. ಇಂತಹುದೇ ಡಿಕ್ಷನರಿಯನ್ನು ಮ್ಯಾಕ್‍ಮಿಲಾನ್, ಆಕ್ಸ್‍ಫರ್ಡ್ ಸಂಸ್ಥೆಗಳೂ ಪ್ರಕಾಶಿಸಿವೆ.
ಡಿಕ್ಷನರಿ ಎಂದಾಕ್ಷಣ ಗಂಭೀರವಾಗಿಯೇ ಪದಗಳನ್ನು ವಿವರಿಸಬೇಕು ಎಂಬುದೂ ತಪ್ಪು ಕಲ್ಪನೆ. ಶಬ್ಧಾರ್ಥ ಚಿಂತನೆಗೆ ಹಾಸ್ಯ ಸ್ವರೂಪ, ಆಟದ ಮೆರುಗು ಸಹ ನೀಡಬಹುದು ಎನ್ನುವುದನ್ನು ಚಾಂಬರ್ಸ್ ಇಂಗ್ಲೀಷ್ ಡಿಕ್ಷನರಿ ಶ್ರುತಪಡಿಸಿದೆ. ಡಿಕ್ಷನರಿಯಲ್ಲಿ ಪದ ಸರ್ಕಸ್, ಪದಬಂಧಗಳನ್ನು ಅಳವಡಿಸಿರುವುದು ಸ್ವಾಗತಾರ್ಹ. ಅಷ್ಟೇಕೆ, ರಸವತ್ತಾದ ಪದ ವಿವರಣೆಗಳಿವೆ. ಐಡಿಯಲ್ ವುಮನ್ ಎಂಬ ವಿಶೇಷಣವನ್ನು ಅದು ವಿವರಿಸುವುದು ಹೀಗೆ, `ಯಾರು ಮದುವೆಯಾದ ಪುರುಷರ ಪತ್ನಿಯರ ಲೋಪ ದೋಷಗಳನ್ನು ಹೊಂದಿರುವುದಿಲ್ಲವೋ ಅವರು!’ ದ್ವಿಚಕ್ರವಾಹನದ `ಪಿಲಿಯನ್ ರೈಡರ್’ಗೆ ಪದಕೋಶ ಹೇಳುತ್ತದೆ, someone free of responsibility but full of advice!
ಮುಖ್ಯವಾಗಿ, ಇಂಗ್ಲೀಷ್ ಡಿಕ್ಷನರಿಗಳು ಪ್ರತಿ ವರ್ಷ ಪರಿಷ್ಕಾರಕ್ಕೊಳಗಾಗುತ್ತವೆ. ಜೊತೆಗೆ ಇಂಗ್ಲೀಷ್ ಭಾಷೆ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವುದರಲ್ಲಿ ಸಂಕೋಚಪಟ್ಟುಕೊಳ್ಳುವುದಿಲ್ಲ. ಇದೇ ಕಾರಣದಿಂದ ಆ ಭಾಷೆ, ಪದಕೋಶ ಬೆಳೆಯುತ್ತಲೇ ಇದೆ. ಬಹುಷಃ ಈ ಸಮಯದಲ್ಲಿ ಕನ್ನಡ ಪದಕೋಶಗಳ ಬಗ್ಗೆ ಪ್ರಸ್ತಾಪಿಸುವುದೂ ಬೇಸರದ ಸಂಗತಿ. ಇಲ್ಲಿ ಪರಿಷ್ಕರಣೆ ಕಾಲಕಾಲಕ್ಕೆ ನಡೆದಿದ್ದಿಲ್ಲ. `ಇಗೋ ಕನ್ನಡ’ದಂತ ಕೆಲವೇ ಕೆಲವು ಪ್ರಯತ್ನಗಳು ಡಿಕ್ಷನರಿ ಸಂಸ್ಕøತಿಯನ್ನು ಜೀವಂತವಾಗಿಟ್ಟಿವೆ. ವಾಸ್ತವವಾಗಿ, ಇಗೋ ಕನ್ನಡದ ಯಶಸ್ಸು ಕನ್ನಡದಲ್ಲೂ `ಡಿಕ್ಷನರಿ ಓದಿರಿ’ ಆಂದೋಲನಕ್ಕೆ ಭವಿಷ್ಯವಿದೆ ಎನ್ನುವುದನ್ನು ತೋರಿಸಿದೆ.
ಕನ್ನಡದ ಮಡಿವಂತಿಕೆ ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಪ್ರಶ್ನಾರ್ಹ. ಪೋಲೀಸರನ್ನು ಬಲವಂತವಾಗಿ ಆರಕ್ಷಕರು ಎಂದು ಅನುವಾದಿಸುವುದು, ಇಂಜಿನೀಯರರನ್ನು ಅಭಿಯಂತರರು ಎಂದು ಕರ್ಣ, ಜಿಹ್ವೆಗಳಿಗೆ ಕಷ್ಟ ಕೊಡುವುದು ನಡೆದಿರುವುದರಿಂದಲೇ ಭಾಷೆ ಸೊರಗಿದೆ. ಹೋಗಲಿ, ಈ ತರ್ಜುಮೆಗಳಾದರೂ ಎಷ್ಟರಮಟ್ಟಿಗೆ ಜಾರಿಯಲ್ಲಿದೆ?
ಪದಕೋಶಕ್ಕೆ ಈಗ ಸೀಮಿತ ಅರ್ಥವಿಲ್ಲ. ಇಷ್ಟೇ ಎಂಬ ಚೌಕಟ್ಟು ಇಲ್ಲ. ಇಂಗ್ಲೀಷ್‍ನ ಕೋಲಿನ್ಸ್ ಕೋನ್ಸಿಸ್ ಡಿಕ್ಷನರಿಯ ಇತ್ತೀಚಿನ ಆವೃತ್ತಿಯಲ್ಲಿ ಪದಗಳ ಜೊತೆಗೆ ಸಂಬಂಧಿಸಿದ ವೆಬ್‍ಸೈಟ್ ಲಿಂಕ್‍ಗಳನ್ನು ನೀಡಲಾಗಿದೆ. ಎನ್‍ಸೈಕ್ಲೋಪೀಡಿಯಾಗಳ ಸಂಕ್ಷಿಪ್ತ ಮಾಹಿತಿಯೂ ಅವೇ ಪುಟಗಳಲ್ಲಿ ಲಭ್ಯ. ಈ ಮಾದರಿ ಪ್ರಸ್ತುತ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಇಂಗ್ಲೀಷ್‍ನಲ್ಲಿ ಸಾಕಷ್ಟು ಖಾಸಗಿ ಡಿಕ್ಷನರಿ ಪ್ರಕಾಶನಗಳಿವೆ. ಪೆಂಗ್ವಿನ್, ಅಮೆರಿಕನ್ ಹೆರಿಟೇಜ್, ದಿ ವರ್ಡ್ ಬುಕ್‍ಗಳು, ಮೇಲೆ ಹೇಳಿದ ಆಕ್ಸ್‍ಫರ್ಡ್, ವೆಬ್‍ಸ್ಟರ್, ಕೋಲಿನ್ಸ್‍ನಂತ ಸಂಸ್ಥೆಗಳ ಜೊತೆ ಚಾಲ್ತಿಯಲ್ಲಿವೆ. ಮತ್ತೆ ಕನ್ನಡದ ವಿಚಾರಕ್ಕೆ ಬಂದಲ್ಲಿ, ಮಾರುಕಟ್ಟೆಯ ಕಾರಣದಿಂದಲೇ ಇರಬೇಕು, ಇಲ್ಲಿ ಖಾಸಗಿ ಪ್ರಯತ್ನಗಳಿಗೆ ಉತ್ತೇಜನ ಸಿಕ್ಕಿಲ್ಲ. ಸಾಕಷ್ಟು ಹಣ, ವಿಪರೀತ ಶ್ರಮ, ಸಂಶೋಧನೆಗಳನ್ನು ಬಯಸುವ ಡಿಕ್ಷನರಿ ಪರಿಷ್ಕಾರ ಕನ್ನಡಕ್ಕಂತೂ ಸದ್ಯಕ್ಕೆ ಗಗನ ಕುಸುಮ. ಡಿಕ್ಷನರಿ ಓದುವ ಆಂದೋಲನ ಇದನ್ನು ಬದಲಿಸೀತು.
ಈ ದಿನಗಳಲ್ಲಿ ಡಿಕ್ಷನರಿಯ ಸ್ವರೂಪ ಕಂಪ್ಯೂಟರ್ ತಾಂತ್ರಿಕತೆಯಲ್ಲಿ ಕ್ರಾಂತಿಕಾರಕ ವೇಗದಲ್ಲಿ ಬದಲಾಗಿದೆ. ಮುದ್ರಿತ ಡಿಕ್ಷನರಿಗಳ ಮೇಲೆ ಒಂದು ನಿಜವಾದ ಆರೋಪ ಇತ್ತು. ನಾವು ಹುಡುಕುವ ಪದದ ವಿವರ ಎಲ್ಲಿದೆ ಎಂಬ ಮಾಹಿತಿ, ಶಬ್ಧದ ಅಸಲಿ ಅಕ್ಷರಗಳ ಅರಿವು ಇಲ್ಲದ ಪಕ್ಷದಲ್ಲಿ ನಮ್ಮ ಹುಡುಕಾಟ ಹುಲ್ಲಿನ ಗೊಣಬೆಯಲ್ಲಿ ಸೂಜಿ ಹುಡುಕಿದಂತಾಗುತ್ತಿತ್ತು. ಇನ್ನಿಲ್ಲ ಆ ಕಷ್ಟ. ಡಿಕ್ಷನರಿಗಳು ಈಗ ಒಂದು `ಕ್ಲಿಕ್’ಗೆ ಎದುರಲ್ಲಿ! ಎಲ್ಲ ಪ್ರಸಿದ್ಧ ಡಿಕ್ಷನರಿಗಳು ಅಂತರ್ಜಾಲ ಆವೃತ್ತಿಗಳನ್ನು ಹೊಂದಿದ್ದು ಹೆಚ್ಚು ಸೌಲಭ್ಯವನ್ನು ಹೊಂದಿವೆ. ಪದ ಅರ್ಥದಂತ ಸಾಮಾನ್ಯ ಡಿಕ್ಷನರಿ ಅಂಶಗಳನ್ನು ಬಿಡಿ, ಉಚ್ಛಾರಣೆಯ ಆಡಿಯೋ ರೂಪವೂ ಇರುತ್ತಿದೆ. ಇವುಗಳ ಪ್ರಧಾನ ಆವೃತ್ತಿಗೆ ವಾರ್ಷಿಕ ಸದಸ್ಯತ್ವವಿದೆ. ವೆಬ್‍ಸ್ಟರ್‍ನ ಎರಡು ವಿಭಿನ್ನ ಮಾದರಿಗೆ ವಾರ್ಷಿಕ 14.95 ಡಾಲರ್ ಹಾಗೂ 29.95 ಡಾಲರ್ ನೀಡಿ ಚಂದಾದಾರರಾಗಬೇಕು. ಕೆಲವು ಉಚಿತ ಮಾದರಿಗಳೂ ಇವೆ. ಉದಾಹರಣೆಗೆ, ಆಕ್ಸ್‍ಫರ್ಡ್ ಲರ್ನರ್ಸ್ ಡಿಕ್ಷನರಿ ಮತ್ತು ಕಾಪ್ಯಾಕ್ಟ್ ಡಿಕ್ಷನರಿಗಳನ್ನು ಉಚಿತವಾಗಿ ಒದಗಿಸುತ್ತದೆ. ಅಂತರ್ಜಾಲದಲ್ಲಿ ಪದೇಪದೆ ವೀಕ್ಷಿಸಿದ ಪದಪಟ್ಟಿ, ಇಗೋ ಕನ್ನಡದ ವೆಂಕಟಸುಬ್ಬಯ್ಯ ವಿವರಿಸಿದಂತ ಪದ ಟಿಪ್ಪಣಿ ಮುಂತಾದ ಸೌಲಭ್ಯವೂ ಲಭ್ಯ. ಅಂತರ್ಜಾಲ ಡಿಕ್ಷನರಿಗಳ ಬಗ್ಗೆ ಕುತೂಹಲವಿರುವವರು ಸುಮ್ಮನೆ ಒಮ್ಮೆ www.onelook.com ನಂತ ವೆಬ್‍ಸೈಟ್‍ನಲ್ಲಿ ಇಣುಕಬಹುದು.
ಕಂಪ್ಯೂಟರ್ ಮೌಸ್‍ನ ಕ್ಲಿಕ್ ಇರಲಿ, ಕಪ್ಪು ಶಾಹಿಯ ಡಿಕ್ಷನರಿ ಕಾಗದದ ಪುಟಗಳಿರಲಿ ನಾವು ಅದನ್ನು ಓದುವುದನ್ನು ಚಟವಾಗಿಸಿಕೊಳ್ಳಬೇಕು. ಸಮಯವಿದ್ದಾಗಲೆಲ್ಲ ಅತ್ತ ಕಣ್ಣಾಡಿಸಬೇಕು. ಆಸಕ್ತರ ಮಧ್ಯೆ ಈ ಕುರಿತು ಚರ್ಚೆಯಾಗಬೇಕು. ದುರಂತವೆಂದರೆ, ಇತ್ತೀಚೆಗೆ ಓದುವುದೇ ಮರೆತ ಮಾತಾಗುತ್ತಿದೆ, ನಾವೆಲ್ಲ ಬರೀ ನೋಡುಗರಾಗುತ್ತಿದ್ದೇವೆ. ಅಕ್ಷರಶಃ ಮೂರ್ಖರ ಪೆಟ್ಟಿಗೆಯ ದಾಸರಾಗುತ್ತಿದ್ದೇವೆ. ಹೀಗಾಗಿ ಇತರ ಪುಸ್ತಕಗಳನ್ನೇ ತಿರಸ್ಕರಿಸುವ ನಾವು ಡಿಕ್ಷನರಿ ಓದಿರಿ ಎಂದರೆ ಕೇಳಿಸಿಕೊಳ್ಳುತ್ತೇವೆ. ಸದ್ಯ, ಬ್ರಿಟನ್‍ನಲ್ಲಿ ಈಗ ಡಿಕ್ಷನರಿ ಓದುವಿಕೆ ಪಠ್ಯಕ್ರಮದ ಒಂದು ಭಾಗ. ಅದನ್ನು ಜಾರಿಗೆ ತರಲು ಕನ್ನಡದಂತ ಸೀಮಿತ ವ್ಯಾಪ್ತಿಯ ಪ್ರಾದೇಶಿಕ ಭಾಷೆಗೂ ತ್ರಾಸಿಲ್ಲ. ಆಂದೋಲನ ಹುಟ್ಟಲೂ ಇಷ್ಟು ಸಾಕು. ಅಲ್ಲವೇ?
– ಮಾ.ವೆಂ.ಸ.ಪ್ರಸಾದ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!