23.1 C
Sidlaghatta
Monday, February 3, 2025

ಗೊಬ್ಬರದ `ಗುಂಡಿ'-ಹೇಗಿರಬೇಕು ಗೊತ್ತೇ?

- Advertisement -
- Advertisement -

ಕೃಷಿ ಪದ್ಧತಿಗಳಲ್ಲಿ ಇದಮಿತ್ಥಂ ಹೇಳುವುದು ಕಷ್ಟ ಎನ್ನುತ್ತಾರೆ. ಬಹುಪಾಲು ನಿಜವೂ ಅಹುದಾದ ಮಾತದು. ಉದಾಹರಣೆಗೆ, ಸಾಗರ ತಾಲ್ಲೂಕಿನ ಅಡಿಕೆ ತೋಟದ ಕೃಷಿ ಕ್ರಮಕ್ಕೂ, ಸಿರ್ಸಿ ಪ್ರದೇಶದ ರೀತಿಗೂ ಹಲವು ವ್ಯತ್ಯಾಸ ಇರುವುದು ಕಂಡುಬರುತ್ತದೆ. ಆದರೆ ಎಲ್ಲ ಕೃಷಿಯೂ ಕೆಲವು ಸಾಮಾನ್ಯ ನಿಯಮಗಳನ್ನು ಅವಲಂಬಿಸಿರುತ್ತದೆ. ಗೋಬರ್ ಗ್ಯಾಸ್ ವ್ಯವಸ್ಥೆ, ಕೊಳೆ ಔಷಧಿ ತಯಾರಿ, ಬೆಳೆ ಸಂಸ್ಕರಣೆ ಮುಂತಾದ ದೃಷ್ಟಾಂತಗಳನ್ನು ಕೊಡಬಹುದು. ಈ ಸಾಲಿನಲ್ಲಿ ಅತ್ಯಗತ್ಯವಾಗಿ ಬೇಕಾದ ಕಾಂಪೋಸ್ಟ್ ಗೊಬ್ಬರದ ಗುಂಡಿಗಳನ್ನೂ ಸೇರಿಸಬಹುದು.
ಗೊಂದಲಗಳು ಬೇಡ. ಮುಂದಿನ ಸಾಲುಗಳನ್ನು ಓದುವುದರಿಂದ ಮೂಡುವ ಆ ಭಾವನೆ ನಂತರದಲ್ಲಿ ಮಾಯವಾಗುತ್ತದೆ. ಮೊತ್ತಮೊದಲಾಗಿ, ಒಂದು ಆದರ್ಶಯುತ ಗೊಬ್ಬರದ ಗುಂಡಿಯ ಮೂಲಭೂತ ಅಂಶವೇ ಅದು `ಗುಂಡಿ’ಯಾಗಿರಬಾರದು ಎನ್ನುವುದು! ಹಿಂದಿನ ಜಮಾನದವರೆಲ್ಲ ನೆಲದಲ್ಲಿ ಮಣ್ಣು ತೆಗೆದು ಗುಂಡಿ ತೋಡಿ ಗೊಬ್ಬರ ಸಂಗ್ರಹಿಸುವ, ಕೊಳೆಯಿಸುವ ತೊಟ್ಟಿಯನ್ನಾಗಿ ಅದನ್ನು ಬಳಸುತ್ತಿದ್ದವರೇ. ಅವರವರ ತಾಕತ್ತು, ಅಗತ್ಯದ ಆಧಾರದಲ್ಲಿ ಗುಂಡಿಯ ವಿಸ್ತಾರ, ಆಳ ನಿರ್ಧಾರವಾಗುತ್ತಿತ್ತು. ವಿಜ್ಞಾನದ ಪ್ರಕಾರ ನೆಲದೊಳಗಿನ ಗೊಬ್ಬರದ ಗುಂಡಿ ತಪ್ಪು ತಪ್ಪು!
ನಿಜಕ್ಕೂ ನೆಲದೊಳಗಿನ ಗೊಬ್ಬರದ ಗುಂಡಿಯಿಂದ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚು. ಇಂದು ಪ್ರಾಯೋಗಿಕವಾಗಿಯೇ ರುಜುವಾತಾಗಿರುವಂತೆ ನೆಲದ ತಗ್ಗಿನಲ್ಲಿರುವ ಗುಂಡಿಗಿಂತ ನೆಲದ ಮೇಲಿನ ತೊಟ್ಟಿ ಸಮರ್ಪಕ. ಇದರಲ್ಲಿ ಗೊಬ್ಬರ, ಕಚ್ಚಾಪದಾರ್ಥಗಳು ಕಲೆತು, ಕೊಳೆತು, ಕಡೆದು ಕಾಂಪೋಸ್ಟ್ ಆಗುವ ವೇಗ ಹೆಚ್ಚು. ತೊಟ್ಟಿಗೆ ತುಂಬಿದ ಗೊಬ್ಬರದಲ್ಲಿ ಸಲೀಸಾಗಿ ಗಾಳಿ ಪ್ರವೇಶಿಸುವ ಗುಣವೇ ಭೂಮಿ ಮೇಲಿನ ತೊಟ್ಟಿಗಳಲ್ಲಿ ಗೊಬ್ಬರವು ಶೀಘ್ರ ಜೀರ್ಣವಾಗಲು ಕಾರಣ.
ನೆಲದಾಳದ ಗುಂಡಿಯಲ್ಲಿ ಹಲವು ತೊಡಕುಗಳಿವೆ. ಕಾಂಪೋಸ್ಟ್‍ನೊಂದಿಗೆ ಗುಂಡಿಯ ದಡದ ಮಣ್ಣು ಬೆರೆತು ಬಿಡುವುದು ಸಾಮಾನ್ಯ. ವರ್ಷದಿಂದ ವರ್ಷಕ್ಕೆ ಗೊಬ್ಬರದ ಗುಂಡಿಯ ಗಾತ್ರ ಹೆಚ್ಚುತ್ತದೆ ಎಂಬುದನ್ನು ಬಿಟ್ಟರೆ ಕಾಂಪೋಸ್ಟ್‍ನ ಗುಣಮಟ್ಟ ಕುಸಿಯುತ್ತದೆ. ಇನ್ನು ಎರೆಗೊಬ್ಬರ ತಯಾರಿಸಲಂತೂ ಈ ಗುಂಡಿಯ ಗೊಬ್ಬರ ಬಳಸುವುದು ಯುಕ್ತವಲ್ಲ. ಎರೆಹುಳು ಮಣ್ಣು ಮಿಶ್ರಿತ ಕಾಂಪೋಸ್ಟ್‍ನ್ನು ಸಮರ್ಪಕವಾಗಿ ತಿನ್ನುವುದಿಲ್ಲ. ಇದರಿಂದಾಗಿ ಅವುಗಳ ಗಾತ್ರ, ಬೆಳವಣಿಗೆ ಮತ್ತು ವಂಶಾಭಿವೃದ್ಧಿ ಕುಸಿಯುವುದನ್ನು ಕಾಣುತ್ತೇವೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಎರೆ ಗೊಬ್ಬರ ತಯಾರಿಕೆಯ ವೇಗ ಕುಸಿಯುತ್ತದೆ.
ಹೆಚ್ಚು ಮಳೆ ಸುರಿಯುವ ಮಲೆನಾಡು ಪ್ರದೇಶಗಳಲ್ಲ್ಲಿ ಮಳೆಗಾಲದಲ್ಲಿ ಗುಂಡಿಯೊಳಗೆ ನೀರು ತುಂಬುತ್ತದೆ. ಎಷ್ಟೋ ಗುಂಡಿಗಳ ತಳಭಾಗದಿಂದ ನೀರು ಚಿಮ್ಮುವುದೂ ಉಂಟು. ಕಚ್ಚಾ ಗೊಬ್ಬರದಲ್ಲಿ ನೀರು ನಿಂತರೆ ಆ ಗೊಬ್ಬರ ಕೊಳೆಯುವ ಪ್ರಕ್ರಿಯೆಯನ್ನು ನಿಲ್ಲಿಸಿದೆ ಅಂತಲೇ ಅರ್ಥ. ನೀರಿಗೆ ಹೊರಹರಿಯಲು ದಾರಿ ಮಾಡಿಕೊಟ್ಟರೆ ಗೊಬ್ಬರದ ರಸಸಾರವನ್ನು ಹೊರಹಾಕಿದಂತೆ!
ಬಹುಪಾಲು ಕೃಷಿಕರ ಕಾಂಪೋಸ್ಟ್ ತಯಾರಿಕಾ ಘಟಕಗಳು ಬಟ್ಟಬಯಲಿನಲ್ಲಿರುತ್ತವೆ. ವಾಸ್ತವವಾಗಿ ಗೊಬ್ಬರಕ್ಕಿರಲಿ, ಕಾಂಪೋಸ್ಟ್‍ಗಿರಲಿ ನೇರವಾಗಿ ಬಿಸಿಲಿಗೆ ಮೈಯೊಡ್ಡಿ ನಿಂತಿರುವ ಪರಿಸ್ಥಿತಿ ಏನೇನೂ ಒಳ್ಳೆಯದಲ್ಲ. ಗೊಬ್ಬರ ಒಣಗುತ್ತದೆ. ಹಾಗಾಗಿ ಕೊಳೆಯಿಸುವ ಪ್ರಕ್ರಿಯೆಯಲ್ಲಿ ತೊಡಗಬೇಕಾದ ಸೂಕ್ಷ್ಮಾಣುಗಳ ಚಟುವಟಿಕೆ ಮಂದವಾಗುತ್ತದೆ. ಕಚ್ಚಾ ಗೊಬ್ಬರ ಯಾವತ್ತೂ ಆದ್ರ್ರ(ಒದ್ದೆ)ವಾಗಿರಬೇಕು. ಬಿಸಿಲಿನ ನೇರ ಹೊಡೆತ ಬಿದ್ದರೆ ಗೊಬ್ಬರದ ಪೋಷಕಾಂಶಗಳು ಸುಟ್ಟುಹೋಗುತ್ತವೆ.
ಈ ವಿಚಾರದಲ್ಲಿ ಸ್ಪಷ್ಟ ಸಲಹೆಯೆಂದರೆ, ಗುಂಡಿ-ತೊಟ್ಟಿಗಳಲ್ಲಿ ಬಿಸಿಲು ತಾಕದಂತಿರಲು ಮತ್ತು ಮಳೆ ನೀರು ಬೀಳದಿರಲು ಅದಕ್ಕೂ ತಲೆ ಮೇಲೊಂದು ಸೂರು ಅತ್ಯವಶ್ಯಕ. ತುಂಬ ಶಿಸ್ತು ಬದ್ಧ ವ್ಯವಸ್ಥೆಯೇ ಬೇಕೆಂದೇನಿಲ್ಲ. ಸೋಗೆಯ ಮಾಡು, ಪ್ಲಾಸ್ಟಿಕ್‍ನ ಮೇಲ್ಛಾವಣಿ…. ಯಾವುದಾದರೂ ಆದೀತು.
ಇನ್ನಾದರೂ ನಾವು ನೆಲದೊಳಗಿನ ಗುಂಡಿಗಳ ಜಮಾನದಿಂದ ತೊಟ್ಟಿಗಳ ಯುಗಕ್ಕೆ ಮುನ್ನಡೆಯುವುದು ಸಮರ್ಥನೀಯ. ಆರು ಅಡಿ ಉದ್ದ ಹಾಗೂ ಒಂದಡಿ ಅಗಲದ ಕಲ್ಲು ಚಪ್ಪಡಿಗಳನ್ನು ಆಯತಾಕಾರದಲ್ಲಿ ನೆಟ್ಟು ಸರಳ ತೊಟ್ಟಿಯನ್ನು ತಯಾರಿಸಿಕೊಳ್ಳಬಹುದು. ನೆಲದೊಳಗೆ ಒಂದಡಿ ಹುಗಿದಿರಬೇಕು ಮತ್ತು ಚಪ್ಪಡಿಗಳನ್ನು ತಂತಿ ಅಥವಾ ದಬ್ಬೆ ಬಳಸಿ ಕಟ್ಟಿರಬೇಕು. ತೆಳ್ಳನೆಯ ಬೇಲಿ ಕಲ್ಲು ಕಂಬಗಳನ್ನು ಹತ್ತಿರ ಹತ್ತಿರ ನೆಡುವುದರಿಂದಲೂ ಮಾದರಿಯೆನಿಸುವಂತ ತೊಟ್ಟಿಯನ್ನು ರಚಿಸಬಹುದು.
ಯಾವುದೇ ಕಾಂಪೋಸ್ಟ್ ತಯಾರಿಕಾ ಘಟಕಕ್ಕೆ ಅಗತ್ಯ ಬಿದ್ದಾಗಲೆಲ್ಲ ಮೇಲಿನಿಂದ ನೀರು ಸಿಂಪಡಿಸುವಂತಿರಬೇಕು. ಒಟ್ಟಾರೆ ಗೊಬ್ಬರದ ಹಸಿ ಅಂಶವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ತೆಳು ಪ್ರಮಾಣದಲ್ಲಿ ಸುಣ್ಣವನ್ನು ಬಳಸುವುದರಿಂದ ಕಾಂಪೋಸ್ಟ್ ಆಗುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಬಹುದು. ಪ್ರಾಯೋಗಿಕವಾಗಿ ಈ ಕ್ರಮ ಯಶಸ್ವಿಯೆಂಬುದು ಹಲವರ ಸ್ವಾನುಭವ. ಆದರೆ ಹೆಚ್ಚು ಪ್ರಮಾಣದಲ್ಲಿ ಸುಣ್ಣವನ್ನು ಬಳಸುವುದರಿಂದ ಗೊಬ್ಬರದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬ ಮಾತೂ ಇದೆ. ಬಹುಷಃ ಹಸಿ ಸೊಪ್ಪು ಕೊಚ್ಚಿ ಕಾಂಪೋಸ್ಟ್ ತಯಾರಿಸುವಾಗ ಮಾತ್ರ ಸೊಪ್ಪಿನ ಪ್ರತಿ ಪದರದ ಮೇಲೆ ತೆಳುವಾಗಿ ಸುಣ್ಣ ಬಳಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.
ಗೊಬ್ಬರದ ಗುಂಡಿ ಎಂಬ ಒಂದೇ ಕಾರಣಕ್ಕೆ ನಾವು ಅದಕ್ಕೆ ನಮಗೆ ಬೇಡದ ಎಲ್ಲ ಪದಾರ್ಥಗಳನ್ನು ಅದರಲ್ಲಿ ತುಂಬುತ್ತೇವೆ. ಪ್ಲಾಸ್ಟಿಕ್ ತ್ಯಾಜ್ಯಗಳು, ಕೊಳೆಯದ ವಸ್ತುಗಳನ್ನು ಬೇರೆಯಾಗಿಯೇ ಸಂಗ್ರಹಿಸಬೇಕು. ಇಲ್ಲದಿದ್ದರೆ ನಿಮ್ಮದೇ ತೋಟಕ್ಕೆ ಇವುಗಳಿಂದ ಹಾನಿಯಾದೀತು. ಗಾಜು, ಪಿಂಗಾಣಿಯ ಚೂರುಗಳು ನಿಮ್ಮ ಕೈಕಾಲು ಗಾಯಕ್ಕೆ ಮೂಲವಾದೀತು.
ಖಂಡಿತವಾಗಿಯೂ ಗೊಬ್ಬರದ ಸಂಗ್ರಹಕ್ಕೆ ಬಚ್ಚಲಿನ ಬೂದಿಯನ್ನು ಹಾಕಬಹುದು. ಬೂದಿ ಕೊಳೆಯುವ ಪದಾರ್ಥ ಅಲ್ಲವಾದರೂ ಕಾಂಪೋಸ್ಟ್‍ನೊಂದಿಗೆ ಬೆರೆತರೆ ಒಳ್ಳೆಯದೆ. ಮುಖ್ಯವಾಗಿ, ಅತಿ ಹೆಚ್ಚಿನ ಪೊಟ್ಯಾಷ್ ಇರುವ ಬೂದಿ ಒಟ್ಟಾರೆ ಕಾಂಪೋಸ್ಟ್‍ನ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂಬುದು ಸತ್ಯ. ಒಂದೇ ಮಾತೆಂದರೆ, ತೊಟ್ಟಿಯ ಒಂದೇ ಕಡೆಯಲ್ಲಿ ಬೂದಿ ಹಾಕದೆ ಎಲ್ಲ ಭಾಗದಲ್ಲೂ ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುವುದು ಕ್ಷೇಮ.
ದುರಂತವೆಂದರೆ, ಇವತ್ತಿಗೂ ರೈತರು ಗೊಬ್ಬರದ ತಯಾರಿಕ ಘಟಕ ಅರ್ಥಾತ್ `ಗೊಬ್ಬರ ಗುಂಡಿ’ಗೆ ಅತ್ಯಂತ ಕಡಿಮೆ ಪ್ರಾಧಾನ್ಯತೆಯನ್ನು ಕೊಡುತ್ತಾರೆ. ಫಲಿತಾಂಶ ಕಣ್ಣ ಮುಂದೆ…… ಇಳುವರಿಯು ಬೆಳೆಗೆ ಹೆಡಿಗೆ ಹೆಡಿಗೆ ಗೊಬ್ಬರ ಕೊಟ್ಟೂ ಕಡಿಮೆ!!
-ಮಾ.ವೆಂ.ಸ.ಪ್ರಸಾದ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!