ಗಾಸಿಪಿಂಗ್ ಅಂದರೆ ಬರೀ ಹೆಣ್ಣು ಮಕ್ಕಳು ಮಾಡುವಂತಾದ್ದು ಅನ್ನುವ ರೀತಿಯಲ್ಲಿ ಇದರ ಬಗೆಗೆ ಸ್ತ್ರೀ ಸಂಗಾತಿಯಾದ “ಭೂಮಿಕಾ” ದಲ್ಲೇ ಏಕೆ ಬರೆಯಬೇಕು ಎಂದು ಯಾರಾದರೂ ತರಲೆ ತೆಗೆದರೆ ನನ್ನ ಬಳಿ ಸ್ಪಷ್ಟ ಉತ್ತರವಿಲ್ಲ ಎಂದು ಮೊದಲೇ ಒಪ್ಪಿಕೊಂಡುಬಿಡುತ್ತೇನೆ! ತಮಾಷೆ ಅಂದ್ರೆ ಹೆಚ್ಚಿನ ಗಂಡಸರು ಇದನ್ನು ಮಾಡುತ್ತಾರಾದರೂ ಅದು ಗಾಸಿಪಿಂಗ್ ಎಂದು ಕರೆಸಿಕೊಳ್ಳುವುದೇ ಇಲ್ಲ. ಅದೂ ಅಲ್ಲದೆ ಹೆಂಗಸರೇ ಹೆಚ್ಚು ಗಾಸಿಪಿಂಗ್ ಮಾಡುತ್ತಾರೆಂದು ಅವರಲ್ಲೇ ಹೆಚ್ಚಿನವರು ಒಪ್ಪಿಕೊಂಡುಬಿಡುತ್ತಾರೆ! ಅದೇನೆ ಇರಲಿ ಸಧ್ಯಕ್ಕೆ ನಾನು ಹೇಳುವುದಂತೂ ಸ್ತ್ರೀ ಪುರುಷರಿಗೆ ಸಮಾನವಾಗಿ ಅನ್ವಯಿಸುವಾಂತಾದ್ದು.
ನಾನು ಹೇಳಬೇಕೆಂದಿರುವುದು ಸಿನಿಮಾ ಪತ್ರಿಕೆಗಳು, ಟೀವಿಗಳಲ್ಲಿ ಬರುವ ನಟ/ಟಿಯರ ಬಗೆಗಿನ ಗಾಸಿಪಿಂಗ್ ಬಗೆಗಲ್ಲ, ನಾವು ದಿನನಿತ್ಯ ಬೆರೆಯುವ ಜನಗಳ ಬಗೆಗೆ ನಮ್ಮನಮ್ಮಲ್ಲೇ ನಡೆಸುವ ಗಾಸಿಪಿಂಗ್ ವಿಚಾರ. ಮನಃಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಎಲ್ಲಾ ತರಹದ ಗಾಸಿಪಿಂಗ್‍ಗಳೂ ಒಂದೇ ರೀತಿಯ ಮನೋಭಾವದ ದ್ಯೋತಕ. ಒಂದೇ ವ್ಯತ್ಯಾಸವೆಂದರೆ ದೊಡ್ಡವರ ಗಾಸಿಪ್‍ಗಳನ್ನು ಚಪ್ಪರಿಸುವುದರಿಂದ ನಮ್ಮ ವೈಯುಕ್ತಿಕ ಸಂಬಂಧಗಳೇನೂ ಹಾಳಾಗಲಾರದು!
ಗಾಸಿಪಿಂಗ್ ಅಂದ್ರೆ ಏನು?
ನಾಲ್ಕು ಜನ ಸೇರಿದೊಡನೆ ಅಲ್ಲಿ ಹಾಜರಿಲ್ಲದವರ ಬಗೆಗೆ ಮಾತನಾಡೋದನ್ನು ನಾವೆಲ್ಲಾ ದಿನನಿತ್ಯ ನೋಡುತ್ತೇವೆ ಮತ್ತು ಮಾಡುತ್ತೇವೆ ಕೂಡ. ಇದೆಲ್ಲಾ ಗಾಸಿಪಿಂಗ್ ಯಾಕಾಗಲ್ಲ ಯೋಚಿಸಿದ್ದೀರಾ? ಎದುರಿಗೆ ಇಲ್ಲದವರ ಬಗೆಗೆ ಮಾತನ್ನಾಡಿದ್ದು ಅವರು ಉಪಸ್ಥಿತರಿದ್ದಾಗಲೂ ಮಾತನಾಡುವುದು ಸಾಧ್ಯವಾದರೆ ಅದು ಗಾಸಿಪಿಂಗ್ ಯಾಕಾಗುತ್ತೆ? ಅಂದರೆ ಸ್ಥಳದಲ್ಲಿ ಹಾಜರಿಲ್ಲದವರ ಬಗೆಗೆ ಅವರೆದುರು ಹೇಳಲಾರದ್ದನ್ನು ಮಾತನಾಡುವುದು ಗಾಸಿಪಿಂಗ್ ಎಂದಾಯಿತಲ್ವಾ? ಹಾಗಾಗಿ ಗಾಸಿಪಿಂಗ್ ವಿಚಾರಗಳು ಆ ವ್ಯಕ್ತಿಯ ಋಣಾತ್ಮಕ ಗುಣ ನಡತೆಗಳ ಬಗ್ಗೆ ಮಾತ್ರ ಇರುತ್ತದೆ.
ಇದರ ಪರಿಣಾಮಗಳೇನು?
ಹೀಗೊಂದು ಘಟನೆಯನ್ನು ಊಹಿಸಿಕೊಳ್ಳಿ. ನಿಮ್ಮ ಹತ್ತಿರ ನಿಮ್ಮೊಬ್ಬ ಸ್ನೆಹಿತರು ಬಂದು ಯಾರ ಬಗ್ಗೆನೋ ಗಾಸಿಪ್ ಮಾಡಿದ್ದಾರೆ. ತಕ್ಷಣಕ್ಕೆ ನಿಮಗೆ ಬಹಳ ಖುಷಿಯಾಗುತ್ತದೆ, ಗಾಸಿಪ್ ನಿಮ್ಮ ಶತ್ರುಗಳ ಬಗೆಗಿದ್ದರಂತೂ ಹಾಲಿಗೆ ಜೇನು ಸೇರಿಸಿದಷ್ಟು ಸವಿಯಾಗಿರುತ್ತದೆ! ಆದರೆ ಸ್ವಲ್ಪ ಯೋಚನೆ ಮಾಡಿ-ನಿಮ್ಮ ಹತ್ತಿರ ಬೇರೊಬ್ಬರ ಬಗೆಗೆ ಮಾತನಾಡಿದ ವ್ಯಕ್ತಿ ನಿಮ್ಮ ಬಗ್ಗೆಯೂ ಇದೇ ರೀತಿ ಮೂರನೆಯವರೆದುರು ಮಾತನಾಡಿರಬಹುದಲ್ವಾ? ಅಂತವನು ನಿಮ್ಮ ನಂಬಿಕೆಗೆ ಹೇಗೆ ಅರ್ಹನಾಗುತ್ತಾನೆ?
ನಾವು ಗಾಸಿಪ್ ಮಾಡಿದಾಗಲೂ ಇದೇ ರೀತಿಯ ಪರಿಣಾಮಗಳಾಗುವ ಸಾಧ್ಯತೆಗಳಿವೆ. ಹಾಗಾಗಿ ನಮ್ಮ ಗಾಸಿಪ್‍ನ ವಸ್ತುವಾದವನು ನಮ್ಮೊಡನೆ ಆತ್ಮೀಯವಾಗಿರಬೇಕೆಂದು ಆಶಿಸುವುದು ಹೇಗೆ? ನಮ್ಮ ಗಾಸಿಪಿಂಗ್ ಯಾರಿಗೇನೂ ತಿಳಿಯುವುದಿಲ್ಲ ಎಂದು ನಿಮ್ಮ ವಾದವಾದರೆ ನಾನು ಮತ್ತೆ ಹಳೆಯ ಕಥೆಯನ್ನೇ ಹೇಳುತ್ತೇನೆ. ನಮ್ಮೊಡನೆ ಗಾಸಿಪ್‍ನಲ್ಲಿ ಪಾಲುದಾರಿಕೆ ಮಾಡುತ್ತಿರುವ ವ್ಯಕ್ತಿ ನಮ್ಮ ಸ್ನೇಹಿತನ ಗಾಸಿಪಿಂಗ್ ಪಾಲುದಾರ ಆಗಿರುವ ಸಾಧ್ಯತೆಗಳು ಹೆಚ್ಚು!
ಈ ಗಾಸಿಪಿಂಗ್ ಉದ್ದೇಶ ಸಾಮಾನ್ಯವಾಗಿ ಇತರರನ್ನು ನಮಗಿಂತ ಕೀಳು ಎಂದು ಬಿಂಬಿಸುವ ಪ್ರಯತ್ನವಾಗಿರುತ್ತದೆ. ಹಾಗಾಗಿ ಪತಿ ಪತ್ನಿ ಮಕ್ಕಳ ಮಧ್ಯೆ ಇದರ ಹಾವಳಿ ಇರುವ ಸಂಭವ ಕಡಿಮೆ. ಆದರೆ ಇತರ ಸಂಬಂಧಿಗಳು ಮತ್ತು ಸ್ನೇಹಿತರ ವಿಷಯಗಳಲ್ಲಿ ಗಾಸಿಪಿಂಗ್ ತೀರಾ ಸಾಮಾನ್ಯ. ಆತ್ಮೀಯ ಸ್ನೇಹಿತರನ್ನು ನಮ್ಮಿಂದ ದೂರಮಾಡುವುದರಲ್ಲಿ ಮತ್ತು ಪರಿಚಯ ಉತ್ತಮ ಸ್ನೇಹವಾಗುವುದನ್ನು ತಪ್ಪಿಸುವುದರಲ್ಲಿ ಗಾಸಿಪಿಂಗ್ ಉತ್ತಮ ಸಹಕಾರ ನೀಡುತ್ತದೆ. ನಮ್ಮ ಸುತ್ತಮುತ್ತಲೂ ಇವುಗಳ ಉದಾಹರಣೆಗಳನ್ನು ನಾವು ಸಾಕಷ್ಟು ನೋಡುತ್ತೇವೆ; ಕಥೆ ಕಾದಂಬರಿ ಸಿನಿಮಾಗಳಲ್ಲಿ ಗಾಸಿಂಪಿಗ್‍ನ ದುಷ್ಪರಿಣಾಮಗಳು ಹೇರಳವಾಗಿ ಬಿಂಬಿತವಾಗಿವೆ. ಆದರೂ ನಾವು ಪಾಠವನ್ನು ಮಾತ್ರ ಕಲಿಯುವುದಿಲ್ಲ. ಯಾಕೇಂದ್ರೆ ಈ ಗಾಸಿಪಿಂಗ್‍ನ ನಷೆಯೇ ಅಂತಾದ್ದು! ಇದು ಕುರುಕಲು ತಿಂಡಿಯಂತೆ ಸ್ವಾದಿಷ್ಟ; ಜೀವಹಾನಿಯನ್ನು ಮಾಡದಿದ್ದರೂ ಆಗಾಗ ಗ್ಯಾಸ್ ಟ್ರಬಲ್, ಹುಳಿತೇಗಿನಂತಹ ಕಿರಿಕಿರಿ ಮಾಡುತ್ತಲೇ ಇರುತ್ತದೆ! ಗಾಸಿಪಿಂಗ್ ಒಂತರಾ ತುರಿಕೆಯಂತೆ; ತುರಿಸಿದಷ್ಟು ಮಜ ನೀಡುತ್ತಾ, ಹೆಚ್ಚು ಹೆಚ್ಚು ತುರಿಕೆಯನ್ನು ಬೇಡುತ್ತಾ, ಕೊನೆಗೆ ದೊಡ್ಡ ಗಾಯವನ್ನು ಉಳಿಸುತ್ತದೆ. ಇದರಿಂದ ಹೊರಬರುವುದೂ ಸುಲುಭವೇನೂ ಅಲ್ಲ. ಕೆಲವಾರು ತಿಂಗಳು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದರೆ ಮನಸ್ಸನ್ನು ಗಾಸಿಪಿಂಗ್‍ನ ನಷೆಗೆ ಡೀಅಡೀಕ್ಟ ಮಾಡಬಹುದು.
ತಪ್ಪಿಸುವುದು ಹೇಗೆ?
ತಕ್ಷಣ ಹೀಗೊಂದು ನಿರ್ಧಾರ ಮಾಡೋಣ. ಸುತ್ತಲಿನ ಜನರ ನಡವಳಿಕೆಗೆ ನಾನೇನೂ ಕೊನೆಯ ತೀರ್ಮಾನ ನೀಡುವ ಸರ್ವೋಚ್ಛ ನ್ಯಾಯಲಯ ಆಗಬೇಕಿಲ್ಲ. ನನ್ನ ಪರಿಚಿತರು ಮತ್ತು ಆತ್ಮೀಯರ ನಡೆನುಡಿ ನನಗೆ ಸರಿ ಅನ್ನಿಸದಿದ್ದರೆ ಅದನ್ನು ಅವರಲ್ಲಿ ವೈಯುಕ್ತಿಕವಾಗಿ, ಮನಸ್ಸಿಗೆ ನೋವಾಗದಂತೆ ಹೇಳುತ್ತೇನೆ; ಯಾವುದೇ ರೀತಿಯಿಂದ ಹಾನಿಕಾರವಲ್ಲದ ಅಂಶಗಳನ್ನು ವ್ಯಕ್ತಿತ್ವದ ವೈವಿಧ್ಯತೆ ಎಂದುಕೊಂಡು ಸುಮ್ಮನಾಗಿಬಿಡುತ್ತೇನೆ. ಯಾರ ಬಗೆಗೂ ಅವರೆದುರು ಹೇಳಲಾರದ್ದನ್ನು ಅವನ ಗೈರುಹಾಜರಿಯಲ್ಲಿ ಹೇಳುವುದಿಲ್ಲ.
ನಿರ್ಧಾರದ ಕಾರ್ಯಚರಣೆಯಲ್ಲಿ ಪದೇಪದೇ ಎಡುವುವುದು ಸಹಜ. ಆದರೆ ಸ್ವಲ್ಪ ದಿನಗಳಲ್ಲಿ ಈ ನಡವಳಿಕೆ ನಮ್ಮ ಸಹಜ ಸ್ವಭಾವದ ಒಂದು ಭಾಗವಾಗಿಬಿಡುತ್ತದೆ. ಆರಂಭದಲ್ಲಿ ನಮ್ಮ ನೇರ ಮಾತುಗಳಿಂದ ಸಾಕಷ್ಟು ಸಂಬಂಧಗಳು ಬಿರುಕು ಬಿಡಬಹುದು. ಒಮ್ಮೆ ನಾವು ನಂಬಲರ್ಹ ವ್ಯಕ್ತಿ ಎಂದು ಸಾಬೀತಾದೊಡನೆ ಸುತ್ತಲಿನವರೆಲ್ಲಾ ಅವರಾಗಿಯೇ ನಮ್ಮ ಸ್ನೇಹಕ್ಕೆ ಹಾತೊರೆಯುತ್ತಾರೆ. ಆದರೆ ಕೆಲವರಾದರೂ ನಮ್ಮಿಂದ ದೂರಹೋಗುವ ಸಾಧ್ಯತೆ ಇದೆ. ಅದನ್ನು ಒಪ್ಪಿಕೊಂಡುಬಿಟ್ಟರಾಯಿತು, ಯಾಕೇಂದ್ರೆ ಎಲ್ಲರನ್ನೂ ಖುಷಿಯಲ್ಲಿಡುವ ಭರದಲ್ಲಿ ನಮ್ಮ ಸ್ವಂತಿಕೆ, ಸಮಾಧಾನಗಳನ್ನು ನಾವು ಕಳೆದುಕೊಳ್ಳಲಾಗುವುದಿಲ್ಲ. ಎಲ್ಲರನ್ನೂ ಒಪ್ಪಿಸುವ ಉದ್ದೇಶದಿಂದ ಹೊರಟವರೆಲ್ಲಾ ತಮ್ಮತನವನ್ನೂ ಕಳೆದುಕೊಂಡು ಇತರರನ್ನೂ ಮೆಚ್ಚಿಸಲಾರದ ಎಡಬಿಡಂಗಿತನದಲ್ಲಿ ಜೀವನ ಕಳೆಯುವ ಸಾಧ್ಯತೆಯೇ ಹೆಚ್ಚು.
ವಸಂತ್ ನಡಹಳ್ಳಿ
- Advertisement -
- Advertisement -
- Advertisement -
- Advertisement -