28 C
Sidlaghatta
Sunday, December 22, 2024

ಎರೆಗೊಬ್ಬರ ಖರೀದಿಸುವ ರೈತರಿಗಾಗಿ…..

- Advertisement -
- Advertisement -

ಸಾಮಾನ್ಯವಾಗಿ ಇದು ತೋಟದ ಬೆಳೆ ಬೆಳೆಯುವವರು ಗೊಬ್ಬರ ಉಣಿಸುವ ಕಾಲ. ರೈತರಲ್ಲಿ ಪ್ರಸ್ತುತ ರಾಸಾಯನಿಕ ಗೊಬ್ಬರದ ಹುಚ್ಚು ಕಡಿಮೆಯಾಗಿದೆ. ಅದರ ಅಪಾಯಗಳ ವಾಸ್ತವ ಅರ್ಥವಾಗಿದೆ. ಇದೇ ಕಾಲದಲ್ಲಿ ಸಾವಯವ ಗೊಬ್ಬರ ಬಳಸುವ ಒಲವು ಕಾಣಿಸುತ್ತದೆ. ಅಪಾಯ ಅಲ್ಲೂ ಇದೆ! ಸಾವಯವದತ್ತ ಕೃಷಿಕರ ಆಸಕ್ತಿಯನ್ನು ನಗದೀಕರಿಸಲು ಹೊರಟಿರುವ ಹಲವು ಗೊಬ್ಬರ ತಯಾರಿಕಾ ಕಂಪನಿಗಳು ಈಗ ಸಾವಯವದ ಹೆಸರಿನಲ್ಲಿ ಮತ್ತದೇ ರಾಸಾಯನಿಕ ಮಿಶ್ರಿತ ಅಥವಾ ಕಳಪೆ ಗುಣಮಟ್ಟದ ಗೊಬ್ಬರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಕೃಷಿಕ ಜಾಗೃತನಾಗಲೇಬೇಕಾದ ದಿನಗಳಿವು.
ಸಾವಯವ ಗೊಬ್ಬರಗಳಲ್ಲಿ ಅತಿ ಮುಖ್ಯವಾದುದು ಎರೆಗೊಬ್ಬರ (ವರ್ಮಿ ಕಾಂಪೋಸ್ಟ್). ಎರೆಹುಳುಗಳು ಕಾಂಪೋಸ್ಟ್‍ನ್ನು ತಿಂದು ಇನ್ನೊಂದು ಹಂತದಲ್ಲಿ ಗೊಬ್ಬರದ ಫಲವತ್ತತೆಯನ್ನು ಹೆಚ್ಚಿಸಿರುತ್ತವೆ ಎಂಬುದು ಎರೆಗೊಬ್ಬರದ ಹೆಗ್ಗಳಿಕೆ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಯವ ಗೊಬ್ಬರದಲ್ಲಿ ಎರೆಗೊಬ್ಬರದ ಪ್ರಮಾಣವೇ ದೊಡ್ಡದು. ಹಾಗಾಗಿ ಈ ಕ್ಷೇತ್ರದಲ್ಲಿ ನಕಲಿಗಳೂ ಒಂದು ತೂಕ ಹೆಚ್ಚು! ಈ ಕೆಳಗೆ ಸಾಧ್ಯವಾದಷ್ಟು ಯುಕ್ತ ಎರೆಗೊಬ್ಬರದ ಖರೀದಿಗೆ ಬೇಕಾದ ಸಲಹೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಸ್ವತಃ ಈ ಲೇಖಕ ಎರೆಗೊಬ್ಬರ ತಯಾರಕನಾಗಿರುವುದರಿಂದ ಇಲ್ಲಿನ ಮಾತು ಅನುಭವದ ಹಿನ್ನೆಲೆಯಲ್ಲಿ ಬಂದಿರುವುದು ಎಂಬುದು ನಿಮ್ಮ ಗಮನದಲ್ಲಿರಲಿ.
* ಎರೆಗೊಬ್ಬರಕ್ಕೆ ನಿಶ್ಚಿತವಾದ ಬಣ್ಣ ಕಪ್ಪು. ಆದರೆ ಕಪ್ಪಿನ ಗಾಢತೆಯಲ್ಲಿ ವ್ಯತ್ಯಾಸ ಕಾಣಿಸಬಹುದು. ಸಾಮಾನ್ಯವಾಗಿ ಗೊಬ್ಬರ ತಯಾರಿಕೆಗೆ ಬಳಸಿದ ಕಚ್ಚಾಪದಾರ್ಥದ ಆಧಾರದಲ್ಲಿ ಇದು ನಿಗದಿಯಾಗುತ್ತದೆ. ದರಕು, ಅಡಿಕೆ ಸಿಪ್ಪೆ, ರದ್ದಿಪೇಪರ್‍ಗಳನ್ನು ಬಳಸಿದಲ್ಲಿ ಸ್ವಲ್ಪ ಬಿಳಿ ಮಿಶ್ರಿತ ಕಪ್ಪು ಗೊಬ್ಬರ ಸೃಷ್ಟಿಯಾಗುತ್ತದೆ. ಬಹುಪಾಲು ಸಗಣಿ, ಕಳಿತ ಕಾಂಪೋಸ್ಟ್ ಬಳಸಿದಲ್ಲಿ ಕಡು ಕಪ್ಪನೆಯ ಎರೆಗೊಬ್ಬರ ಉತ್ಪತ್ತಿಯಾಗುತ್ತದೆ.
* ಗೊಬ್ಬರ ಟೀ ಪುಡಿಯಂತೆ ಹಿಕ್ಕೆ ಹಿಕ್ಕೆಯ ರೂಪದಲ್ಲಿರುತ್ತದೆ. ಖರೀದಿಸುವ ಎರೆಗೊಬ್ಬರ ಚೀಲದಲ್ಲಿ ಪ್ಯಾಕಿಂಗ್ ಆಗಿರುತ್ತದಾದ್ದರಿಂದ ಮುದ್ದೆ ಮುದ್ದೆಯಾಗಿರುವಂತೆ ಕಾಣಿಸುತ್ತದಾದರೂ ಮುಷ್ಟಿಯಲ್ಲಿ ಹಿಡಿದು ಗೊಬ್ಬರದ ಉಂಡೆಯನ್ನು ಒತ್ತಿದರೆ ಅದು ಸುಲಭವಾಗಿ ಮತ್ತೆ ಪುಡಿಪುಡಿಯಾಗುತ್ತದೆ. ಹಾಗಾಗಿಲ್ಲವೆಂದರೆ ಮಣ್ಣು ಬೆರೆತಿರುವ ಸಂಭಾವ್ಯತೆ ಜಾಸ್ತಿ.
* ಹಳ್ಳಿಗಳಲ್ಲಿ ಎರೆಗೊಬ್ಬರ ಮಾರಾಟ ಮಾಡುವ ತಯಾರಕರು ಅದಕ್ಕೆ ಕಾಡಿನ ಕಪ್ಪು ಮಣ್ಣನ್ನು ಬೆರೆಸಿರುವ ಸಾಧ್ಯತೆ ಇದ್ದೀತು. ಕಾಡಿನ ಮೇಲು ಮಣ್ಣು ಕಪ್ಪು ಬಣ್ಣದಲ್ಲಿಯೇ ಇರುತ್ತದೆ. ಇದು ನೋಡಲು ಎರೆಗೊಒಬ್ಬರದಂತೆಯೂ ಇರುತ್ತದೆ. ಆದರೆ ಇದರ ಗುಣಮಟ್ಟದ ಪತ್ತೆಗೆ ಒಂದು ಸರಳ ಉಪಾಯವಿದೆ. ಅಂಗೈಯಲ್ಲಿ ಇಟ್ಟು ತಿಕ್ಕಿದಾಗ ಅರಿಸಿನ ಬಣ್ಣದ ಅಂಶ ಕಾಣಿಸಿದರೆ ಅದು ಕಾಡಿನ ಕಾನುಗೋಡು. ಅಸಲಿ ಎರೆಗೊಬ್ಬರವಾಗಿದ್ದಲ್ಲಿ ಅದು ಕಪ್ಪಾಗಿ ಕೈಯಲ್ಲಿಯೇ ಅಂಟಿಕೊಂಡಿರುತ್ತದೆ.
* ಕಾಡು ಮಣ್ಣಿನ ತೂಕ ಎರೆಗೊಬ್ಬರದಕ್ಕಿಂತ ಸಾಕಷ್ಟು ಹೆಚ್ಚು. ಇದು ಅರ್ಥವಾಗಲು ಒಂದು ಚಾಲಾಕಿ ಕ್ರಮವಿದೆ. 50 ಕೆಜಿಯ ಒಂದು ಸಿಮೆಂಟ್ ಚೀಲದಲ್ಲಿ ಎರೆಗೊಬ್ಬರ ಸರಾಸರಿ 20ರಿಂದ 22 ಕೆಜಿಯಷ್ಟು ಮಾತ್ರ ಹಿಡಿಸುತ್ತದೆ. ಅದೇ ಕಾಡುಮಣ್ಣಾಗಿದ್ದರೆ 25 ಕೆಜಿಗಿಂತ ಹೆಚ್ಚಿನ ಪ್ರಮಾಣವನ್ನು ಸುಲಭವಾಗಿಯೇ ತುಂಬಿಸಬಹುದು. ತೂಕದ ಈ ವ್ಯತ್ಯಾಸ ಅಸಲಿ-ನಕಲಿಗಳ ಪರೀಕ್ಷೆಯ ಮಾನದಂಡ.
* ಎರೆಗೊಬ್ಬರದ ಬಳಕೆಯ ಫಲಿತಾಂಶ ಒಮ್ಮೆಗೇ ಗೊತ್ತಾಗುವುದಿಲ್ಲ. ಉದಾ. ಪುಟ್ಟ ಸಸಿ ತುಸು ಹಸಿರಾಗಿ ಕಾಣಬಹುದು. ಅದೇ ಇಳುವರಿ ದಿಡೀರ್ ಏರುವುದು ಅಸಂಭವ. ಹಾಗಾಗುತ್ತಿದ್ದರೆ ನೀವು ಖರೀದಿಸಿದ ಗೊಬ್ಬರದಲ್ಲಿ ರಾಸಾಯನಿಕ ಗೊಬ್ಬರದ ಬೆರೆಕೆ ಆಗಿರಲೇಬೇಕು. ಕೆಲವು ತಯಾರಕರು ಯೂರಿಯಾ ಅಥವಾ ಪೊಟ್ಯಾಷ್‍ನ ಅಂಶ ಬೆರೆಸಿ ಮಾರುತ್ತಾರೆ ಎಂಬ ಅನುಮಾನಗಳಿವೆ. ಒಳ್ಳೆಯ ಫಲಿತಾಂಶ ಪಡೆಯಲು ಮೂರು ನಾಲ್ಕು ವರ್ಷ ಎರೆಗೊಬ್ಬರವನ್ನು ಸತತವಾಗಿ ಹಾಕಿದ ನಂತರವಷ್ಟೇ ಸಾಧ್ಯ.
* ಇತ್ತೀಚೆಗೆ ಕೃಷಿಕರೇ ಎರೆಗೊಬ್ಬರ ತಯಾರಿಸಿ ಮಾರುವ ಉದ್ಯಮವನ್ನೂ ನಡೆಸುತ್ತಿದ್ದಾರೆ. ಅವರಿಂದ ಖರೀದಿಸುವಿರಾದರೆ ಅದಕ್ಕೂ ಮುನ್ನ ಅವರ ಎರೆ ಪ್ಲಾಂಟ್‍ಗಳಿರುವ ಕಾರ್ಯಕ್ಷೇತ್ರಕ್ಕೆ ಭೇಟಿ ಕೊಡಿ. ಅವರ ಪ್ಲಾಂಟ್‍ಗಳ ಸಂಖ್ಯೆ, ವಾರ್ಷಿಕವಾಗಿ ಆತ ನಡೆಸುವ ವ್ಯಾಪಾರ ಅಂಕಿಅಂಶ, ಕಚ್ಚಾಗೊಬ್ಬರ ಸಿದ್ಧಗೊಳಿಸಲು ಅವ ಮಾಡಿಕೊಂಡಿರುವ ವ್ಯವಸ್ಥೆ ವಿವರ…. ಇವನ್ನೆಲ್ಲ ಪರಿಶೀಲಿಸಿ. ತುಂಬ ಕಡಿಮೆ ಸಂಖ್ಯೆಯ ಪ್ಲಾಂಟ್ ಸಂಖ್ಯೆ, ಹೆಚ್ಚಿನ ಗೊಬ್ಬರ ಮಾರಾಟ… ಹೀಗೆ ಅನುಮಾನಾಸ್ಪದ ಹಿನ್ನೆಲೆ ಕಂಡರೆ ಗೊಬ್ಬರ ಖರೀದಿಗೆ ಮುನ್ನ ಸಾವಿರ ಪಾಲು ಯೋಚಿಸಿ!
* ಇನ್ನೊಂದು ಅಂಶಕ್ಕೆ ವಿಪರೀತ ಮಹತ್ವವಿದೆ. ತಯಾರಕ ಉಪಯೋಗಿಸುವ ಕಚ್ಚಾ ಗೊಬ್ಬರದ ಗುಣಮಟ್ಟವೇ ಲಭ್ಯವಾಗುವ ಎರೆಗೊಬ್ಬರದ ದರ್ಜೆಯನ್ನು ರೂಪಿಸುತ್ತದೆ. ಅಂದರೆ ರದ್ದಿ ಪೇಪರ್, ತೆಂಗು-ಅಡಿಕೆಯ ನಾರು ಸಿಪ್ಪೆಗಳ ಕಾಂಪೋಸ್ಟ್, ಬರೀ ಒಣ ಎಲೆಯ ಕಾಂಪೋಸ್ಟ್ ಬಳಸಿ ಎರೆಗೊಬ್ಬರ ತಯಾರಿಸಿದಲ್ಲಿ ಅದರ ಗುಣಮಟ್ಟ ಸ್ವಲ್ಪ ಕಡಿಮೆ. ಗೊಬ್ಬರದ ಉಳ್ಳೆ, ಸೆಣಬಿನ ಚೀಲ, ಹಸಿ ಸೊಪ್ಪು ಹಾಗೂ ಸ್ಲರಿ ಬಳಸಿ ತಯಾರಿಸಿದ ಎರೆಗೊಬ್ಬರದ ಸಾರ ಅತ್ಯುತ್ತಮ. ರೈತರ ಪ್ಲಾಂಟ್‍ನಿಂದಲೇ ಖರೀದಿಸುವವರು ಈ ಅಂಶವನ್ನು ಗಮನಿಸಿಕೊಳ್ಳಲು ನಿರ್ಧರಿಸಬಹುದು. ಕಂಪನಿ ತಯಾರಿಕೆಗಳಲ್ಲಿ ಈ ಅವಕಾಶವಿಲ್ಲ.
* ಇಂದಿನ ಮಾರುಕಟ್ಟೆಯ ಸನ್ನಿವೇಶದಲ್ಲಿ ಕೆಜಿಗೆ ನಾಲ್ಕರಿಂದ ನಾಲ್ಕೂವರೆ ರೂಪಾಯಿ ಬೆಲೆಗೆ ಎರೆಗೊಬ್ಬರ ಖರೀದಿಸುವುದು ಸರಿಯಾದ ಕ್ರಮ. ಇದಕ್ಕಿಂತ ಕಡಿಮೆ ಬೆಲೆಗೆ ವಿಕ್ರಯಿಸುವ ಗೊಬ್ಬರದ ಬಗ್ಗೆಯೂ ಅನುಮಾನ ಪಡಬೇಕು. ಹಾಗೆಯೇ ಹೆಚ್ಚು ಬೆಲೆ ನೀಡುವುದು ವ್ಯಾವಹಾರಿಕವಾಗಿ ಬುದ್ಧಿವಂತಿಕೆಯಲ್ಲ.
* ಸಾಮಾನ್ಯವಾಗಿ ಎರೆಗೊಬ್ಬರದಲ್ಲಿ ಕಲಬೆರೆಕೆಯಾಗುವ ಇನ್ನೊಂದು ಪದಾರ್ಥ ಫ್ಯಾಕ್ಟರಿಗಳ ಕಪ್ಪು ಬೂದಿ. ಪತ್ತೆ ಮಾಡಬೇಕೆಂದರೆ, ಅಂತಹ ಗೊಬ್ಬರವನ್ನು ಕೈಯಲ್ಲಿ ಹಿಡಿದು ತೊಳೆದರೆ ಅಂತಿಮವಾಗಿ ಕೆಲವು ಹೊಟ್ಟಿನ ಅಂಶಗಳು ಕೈಯಲ್ಲಿ ಉಳಿಯುತ್ತದೆ. ಮಣ್ಣು ಮಿಶ್ರಣ ಪತ್ತೆಗೂ ಈ ವಿಧಾನ ಬಳಸಬಹುದು. ಮಣ್ಣಿನಲ್ಲಿ ಪುಟ್ಟ ಪುಟ್ಟ ಕಲ್ಲು ಇದ್ದಲ್ಲಿ ಈ ವೇಳೆ ಸಿಕ್ಕಿಬೀಳುತ್ತದೆ.
* ನೀವು ಖರೀದಿಸುವ ಎರೆಗೊಬ್ಬರದ ಚೀಲದ ಮಾದರಿಗೂ ಆದ್ಯತೆ ನೀಡಬೇಕು. ಜಾಳು ಪ್ಲಾಸ್ಟಿಕ್ ಚೀಲದೊಳಗಿನ ಗೊಬ್ಬರದ ಖರೀದಿ ಬೇಡ. ಪ್ಲಾಸ್ಟಿಕ್‍ನ ಪದರಗಳಿರುವ (plastic coated) ಚೀಲದಲ್ಲಿ ಹಾಕಿರುವ ಗೊಬ್ಬರವನ್ನು ವಿಕ್ರಯಿಸುವುದೇ ಲಾಭಕರ. ಇಂತಹ ಚೀಲದಲ್ಲಿ ಹಾಕಿರುವ ಗೊಬ್ಬರ ತಿಂಗಳುಗಳು ಕಳೆದರೂ ತೂಕದಲ್ಲಿ ನಷ್ಟವಾಗುವುದಿಲ್ಲ. ನಮ್ಮಲ್ಲಿನ ದೃಷ್ಟಾಂತದ ಪ್ರಕಾರ ಆರು ತಿಂಗಳ ದಾಸ್ತಾನಿನ ನಂತರ ಒಂದು – ಎರಡು ಕೆಜಿ ಕಡಿಮೆಯಾಗುತ್ತದಷ್ಟೇ. ಆದರೆ ಸಂಗ್ರಹಿಸಿಡುವವರು ಯಾವುದೇ ಕಾರಣಕ್ಕೆ ಗೊಬ್ಬರದ ಮೇಲೆ ಸೂರ್ಯರಶ್ಮಿ ಬೀಳದಂತೆ ಎಚ್ಚರಿಕೆ ವಹಿಸಲೇಬೇಕು.
ಎರೆಗೊಬ್ಬರ ಉತ್ತಮವಾದ ಸಾವಯವ ಗೊಬ್ಬರ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆದರೆ ಒಂದು ಗಮನೀಯ ಸಲಹೆಯೆಂದರೆ, ನೀವೇ ಸ್ವಯಂ ಎರೆಗೊಬ್ಬರ ತಯಾರಿಸಿಕೊಳ್ಳಿ. ಖರ್ಚಿನ ಮಾತಿಗಿಂತ ಗುಣಮಟ್ಟದಲ್ಲಿ ರಾಜಿಯಾಗದ ಆಯ್ಕೆಯಿದು. ಆಗ ಬೇಸ್ತು ಬೀಳುತ್ತಿರುವ ರೈತರ ಮೊತ್ತದಲ್ಲಿ ಒಬ್ಬ ಕಡಿಮೆಯಾದಂತೆ!
-ಮಾ.ವೆಂ.ಸ.ಪ್ರಸಾದ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!