19.1 C
Sidlaghatta
Sunday, December 22, 2024

ಆರಂಭದಲ್ಲೇ ಮುರಿದುಬೀಳುವ ಮದುವೆಗಳು – ಭಾಗ 1

- Advertisement -
- Advertisement -

ಏಕಿಷ್ಟು ಕೋಲಾಹಲ?
ನಮ್ಮ ಸುತ್ತಲೇ ಇಂತಹ ಘಟನೆಗಳು ಹೆಚ್ಚುಹೆಚ್ಚಾಗಿ ಕಂಡುಬರುತ್ತಿದೆ.
1. ನನ್ನ ಸಂಬಂಧಿಯೊಬ್ಬರು ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ನಂತರ ಒಂದೇ ತಿಂಗಳಿನಲ್ಲಿ ಮದುವೆ ಮುರಿದು ಬಿತ್ತು. ಕಾರಣ ಹುಡುಗನಲ್ಲಿ ಕೌಟುಂಬಿಕ ಜೀವನಕ್ಕೆ ತೊಂದರೆಯಾಗುವ ಲೈಂಗಿಕ ಸಮಸ್ಯೆಗಳಿದ್ದವು. ಆಮೇಲೆ ನನಗೆ ತಿಳಿದು ಬಂದ ವಿಷಯವೆಂದರೆ, ಅದು ಪೋಷಕರಿಗೆ ಮೊದಲೇ ತಿಳಿದಿತ್ತು. ಆದರೂ ಅವರು ಯಾವುದೇ ತಜ್ಞರ ಸಲಹೆ ಪಡೆಯುವುದು ಸಾಮಾಜಿಕ ಕಳಂಕವೆಂದು ತಿಳಿದು ಮದುವೆ ಮಾಡಿದ್ದರು.
2. ಮತ್ತೊಬ್ಬ ಸ್ನೇಹಿತನ ಮಗಳ ಮದುವೆಯಾಯಿತು. ಒಂದೇ ತಿಂಗಳಿನಲ್ಲಿ ಕಣ್ಣೀರನ್ನು ಸುರಿಸುತ್ತಾ ಮಗಳು ಮನೆಗೆ ಬಂದಳು. ಅವಳಿಂದ ತಿಳಿದ ವಿಚಾರ ಕಂಗೆಡಿಸುವಂತಿತ್ತು. ನವದಂಪತಿಗಳ ಜೊತೆ ಮನೆಯಲ್ಲಿರುತ್ತಿದ್ದ ವಿದುರನಾದ ಮಾವ ಸೊಸೆಯ ಮೇಲೆ ಲೈಂಗಿಕ ಆಸೆ ವ್ಯಕ್ತಪಡಿಸುತ್ತಿದ್ದ. ಇದನ್ನು ಪತಿಗೆ ಹೇಳಿದಾಗ ಅವನಿಂದ “ನೀನು ಹೊಂದಿಕೊಂಡು ಹೋಗಬೇಕು” ಎಂಬ ಸಲಹೆ ಬಂದಿತು. ಈ “ಹೊಂದಿಕೊಳ್ಳುವುದು” ಎಂದರೆ ಏನೆಂದು ಕೇಳುವ ಮುಜುಗರ ತಪ್ಪಿಸಿಕೊಂಡು ತೌರುಮನೆಗೆ ಹಿಂತಿರುಗಿದ್ದಳು ಆ ನವವಧು.
3. ಮೇಲೆ ಹೇಳಿರುವುದು ಸಾಂಪ್ರದಾಯಿಕ ಮದುವೆಗಳಿಂದ ಆಗುವ ತೊಂದರೆಗಳು ಎಂದು ಯುವಜನಾಂಗ ಮೂಗುಮುರಿಯಬಹುದು. ಆದರೆ ಪ್ರೇಮವಿವಾಹಗಳಲ್ಲಿಯೂ ಇಂತಹ ಸಂದರ್ಭಗಳಿವೆ. ಐದಾರು ವರ್ಷಗಳಿಂದ ಪ್ರೇಮಿಸುತ್ತಿದ್ದ ಜೋಡಿಗಳು ಮದುವೆಯಾಗಿ ಮೂರು ತಿಂಗಳಲ್ಲೇ ಹೊಂದಾಣಿಕೆಯಾಗದಿರುವುದು, ದೈಹಿಕ ನ್ಯೂನತೆ, ಲೈಂಗಿಕ ಅಸಾಮಥ್ರ್ಯ ಮುಂತಾದ ಕಾರಣಗಳಿಗಾಗಿ ವಿಚ್ಛೇದನಕ್ಕೆ ಮೊರೆಹೋಗಿದ್ದನ್ನು ನಾನು ನೋಡಿದ್ದೇನೆ.
4. ನನ್ನ ಸ್ನೇಹಿತರೊಬ್ಬರು ಹೇಳಿದ ಪ್ರಕಾರ ಇತ್ತೀಚೆಗೆ ಬೆಂಗಳೂರಿನಲ್ಲಿ ಮದುವೆಗಳು ತಾಳಿಕಟ್ಟುವ ಹಂತದಲ್ಲೇ ಮುರಿದುಬೀಳುತ್ತಿರುವ ಘಟನೆಗಳು ಸಾಕಷ್ಟು ವರದಿಯಾಗಿವೆ. ಹುಡುಗ ಅಥವಾ ಹುಡುಗಿಗೆ ಮೊದಲೇ ಇರಬಹುದಾದ ಪ್ರೇಮಿಗಳು ಅಥವಾ ಅಲ್ಲಿಯವರೆಗೆ ಮುಚ್ಚಿಡಲಾಗಿದ್ದ ಇತರ ವಿಚಾರಗಳು ಹೊರಬರುವುದು, ಮುಂತಾದವು ಇದಕ್ಕೆ ಕಾರಣಗಳು.
5. ಇದೆಲ್ಲದರ ಅತಿರೇಕವೆಂದರೆ ಕಳೆದ ವರ್ಷ ಬೆಂಗಳೂರಿನಿಂದ ವರದಿಯಾದ ಘಟನೆ. ಯಾರನ್ನೋ ಪ್ರೇಮಿಸುತ್ತಿದ್ದರೂ ಪೋಷಕರ ಒತ್ತಾಯಕ್ಕೆ ಮತ್ತೊಬ್ಬನ ಜೊತೆ ನಿಶ್ಚಿತಾರ್ಥ ನಡೆದಿತ್ತು. ಒಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಆ ಹುಡುಗಿ, ತನ್ನ ಪ್ರೇಮಿ ಮತ್ತು ಬಾಡಿಗೆ ಬಂಟರಿಂದ ಭಾವೀ ಪತಿಯನ್ನೇ ಕೊಲ್ಲಿಸಿದ್ದಳು.
ಇವೆಲ್ಲಾ ನಗರ ಕೇಂದ್ರಿತವಾದ್ದು, ಹಳ್ಳಿಗಳಲ್ಲಿ ಎಲ್ಲಾ ಸರಳಿತವಾಗಿ ನಡೆಯುತ್ತಿದೆ ಎನ್ನುವಂತಿಲ್ಲ. ಇಂತಹ ಘಟನೆಗಳು ಹಳ್ಳಿಗಳಲ್ಲೂ ನಡೆಯುತ್ತಿವೆ ಮಾತ್ರವಲ್ಲ, ದಿನೇದಿನೇ ಹೆಚ್ಚಾಗುತ್ತಿವೆ ಕೂಡ. ಭಾರತೀಯ ವೈವಾಹಿಕ ವ್ಯವಸ್ಥೆಯಲ್ಲಿ ಏಕಿಷ್ಟು ಅಲ್ಲೋಲ ಕಲ್ಲೋಲವಾಗುತ್ತಿದೆ? ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆ, ಬದಲಾಗುತ್ತಿರುವ ಸಮಾಜ, ಮಾಧ್ಯಮಗಳ ಪ್ರಭಾವ, ಸ್ತ್ರೀಯರ ಆರ್ಥಿಕ ಸ್ವಾವಲಂಬನೆ, ಪೋಷಕರ ತಪ್ಪುಗಳು-ಹೀಗೆ ಎಲ್ಲರೂ ಅವರವರ ನಂಬಿಕೆಗಳಿಗೆ ಅನುಸಾರವಾಗಿ ಕಾರಣಗಳನ್ನು ಕೊಡಬಹುದು. ಇದಾವುದೂ ಸುಳ್ಳಾಗಿರಲಾರದು, ಆದರೆ ಇದಿಷ್ಟೇ ಸಂಪೂರ್ಣ ಸತ್ಯವೂ ಅಲ್ಲ! ಕಾರಣಗಳನ್ನು ಹುಡುಕಿಕೊಂಡ ಮೇಲೂ ಪರಿಹಾರ ತನ್ನಿಂದ ತಾನೇ ಸಿಗುವುದಿಲ್ಲವಲ್ಲ. ಹಾಗಾಗಿ ಅದಕ್ಕಾಗಿ ನಾವೇನು ಮಾಡಬಹುದು?
ವಿಚ್ಛೇದನಗಳು ಇವತ್ತಿನ ಅನಿವಾರ್ಯತೆ!
“ಅಯ್ಯೋ ಕಾಲ ಕೆಟ್ಟುಹೋಗಿದೆ” ಎಂದು ಎಲ್ಲ ಕಾಲದಲ್ಲೂ ವೃದ್ಧರು ಹೇಳುತ್ತಲೇ ಬರುತ್ತಾರೆ. ಹೀಗೆ ಹೇಳಿದ ತಕ್ಷಣ ಇವತ್ತಿನದು ಎಲ್ಲವೂ ಕೆಟ್ಟದ್ದು ಎಂದು ಅರ್ಥ ಬರುತ್ತದೆ. ಹಾಗಾಗಿ ನಾವು ಕಾಲ ಬದಲಾಗುತ್ತಿದೆ ಅಂದುಕೊಳ್ಳೋಣ! ನೂರಾರು ವರ್ಷಗಳ ಹಿಂದೆ ವಿಚ್ಛೇದನ ಸಾಮಾಜಿಕ ಕಳಂಕವಾಗಿತ್ತು, ಅದಕ್ಕಿಂತ ಹೆಚ್ಚಾಗಿ ಕಾನೂನುಬಾಹಿರವಾಗಿತ್ತು. ಇವತ್ತು ಸಮಾಜ ಮತ್ತು ಕಾನೂನು ಎರಡೂ ಇದಕ್ಕೆ ಅವಕಾಶ ಮಾಡಿಕೊಟ್ಟಿವೆ. ಹಾಗಾಗಿ ಇವತ್ತು ಮದುವೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ಒತ್ತಾಸೆಗಳೇನಿಲ್ಲ. ಆದ್ದರಿಂದ ವಿಚ್ಛೇದನ ಇವತ್ತಿನ ಅನಿವಾರ್ಯತೆ! ಹಾಗಿದ್ದರೆ ಎಷ್ಟರ ಮಟ್ಟಿನ ಅನಿವಾರ್ಯತೆ ಎಂದು ಯೋಚಿಸಬೇಕಲ್ಲವೇ?
ಮದುವೆಗಳು ಸಾಂಪ್ರದಾಯಿಕವಾಗಿ ವ್ಯವಸ್ಥೆ ಮಾಡಿದ್ದಿರಲಿ, ಪ್ರೇಮಿಸಿ ಆದದ್ದಿರಲಿ, ತನ್ನ ಸಂಗಾತಿಯೊಡನೆ ಸೌಹಾರ್ದಯುತವಾಗಿ ಬಾಳಲು ಸಾಧ್ಯವೇ ಇಲ್ಲವೇ ಎಂದು ನಿರ್ಧರಿಸಲು ಸಮಯ ಬೇಕಾಗುತ್ತದೆ. ಇಂತಹ ಸಮಯ ಒಂದೆರೆಡು ವರ್ಷಗಳಿಂದ ಹಲವಾರು ವರ್ಷಗಳಾಗಬಹುದು. (ಮರಣಶಯ್ಯೆಯಲ್ಲಿರುವವರೂ ವಿಚ್ಛೇದನ ಕೇಳಿದ ಪ್ರಕರಣಗಳಿವೆ, ಬಿಡಿ! ಅದಕ್ಕೆ ಆಸ್ತಿ, ಹಣ ಮುಂತಾದ ಕಾರಣಗಳಿರಬಹುದು.) ಹಾಗಾಗಿ ಅದಕ್ಕಿಂತ ಮೊದಲೇ ವಿಚ್ಛೇದನದ ಪರಿಸ್ಥಿತಿಗಳು ಉದ್ಭವಿಸುತ್ತಿವೆ ಎಂದರೆ ನಾವೆಲ್ಲಾ ಯೋಚಿಸಬೇಕಾಗುತ್ತದೆ. ಇದರ ಕಾರಣಗಳಾದ ನಮ್ಮ ವೈವಾಹಿಕ ವ್ಯವಸ್ಥೆ, ಮಕ್ಕಳಿಗೆ ನಾವು ನೀಡುತ್ತಿರುವ (ಅದಕ್ಕಿಂತ ಹೆಚ್ಚಾಗಿ ನೀಡದೇ ಇರುವ!) ಶಿಕ್ಷಣ, ನಮ್ಮ ಸಾಮಾಜಿಕ ಸ್ಥಿತಿಗತಿಗಳು, ಇವೆಲ್ಲವುದರ ಬಗೆಗೆ ಪುನರಾವಲೋಕಿಸಬೇಕಾಗುತ್ತದೆ.
ಸ್ಫೋಟಗೊಂಡ ಬದಲಾವಣೆಗಳು
ಸ್ವಾತಂತ್ರಾನಂತರದ ಮೊದಲ ಮೂರು ದಶಕಗಳಲ್ಲಿ ಭಾರತ ಹೊರ ಜಗತ್ತಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ಆಗ ಕೂಡ ಎಲ್ಲ ರಂಗಗಳಲ್ಲಿಯೂ ಬದಲಾವಣೆಗಳಾಗುತ್ತಿದ್ದವು. ಆದರೆ ಈ ಬದಲಾವಣೆ ಮಾಮೂಲಿನ ವೇಗದಲ್ಲಿತ್ತು. ಹಾಗಾಗಿ ಜನರಿಗೆ ಅದನ್ನು ತಡೆದುಕೊಳ್ಳುವ ಮತ್ತು ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಕಾಲಾವಕಾಶವಿರುತ್ತಿತ್ತು. ಎಪ್ಪತ್ತರ ದಶಕದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಶುರುವಾದ ಸಂಪರ್ಕ ಕ್ರಾಂತಿ ಎಂಬತ್ತರ ದಶಕದಲ್ಲಿ ಭಾರತಕ್ಕೂ ಕಾಲಿಟ್ಟಿತು. ತೊಂಭತ್ತರ ದಶಕದಲ್ಲಿ ಮುಕ್ತ ಆರ್ಥಿಕ ನೀತಿ ಮತ್ತು ಜಾಗತೀಕರಣವನ್ನು ಅಪ್ಪಿಕೊಂಡ ಭಾರತ ಒಮ್ಮೆಲೆ ಇಡೀ ಪ್ರಪಂಚಕ್ಕೆ ತೆರೆದುಕೊಂಡಿತು. ಅಲ್ಲಿಯವರೆಗೆ ಪತ್ರಿಕೆಗಳಲ್ಲಿ ಓದುತ್ತಿದ್ದ ಮತ್ತು ಅವರಿವರಿಂದ ಕೇಳುತ್ತಿದ್ದ ಪಾಶ್ಚಿಮಾತ್ಯ ಜೀವನ ಶೈಲಿ ಈಗ ಕಣ್ಣೆದುರೇ ಕಾಣತೊಡಗಿತ್ತು. ಕಂಪ್ಯೂಟರ್‍ಗಳು, ಅಂತರ್ಜಾಲ, ಮೊಬೈಲ್, ಟೀವಿ, ಸಿನಿಮಾಗಳು ಮುಂತಾದವು ಭಾರತೀಯ ಯುವಕರನ್ನು ಮಂತ್ರಮುಗ್ಧರನ್ನಾಗಿಸಿ, ಪಾಶ್ಚಿಮಾತ್ಯ ಜೀವನ ಶೈಲಿಯತ್ತ ಎಳೆಯಿತು. ತೊಂಭತ್ತರ ನಂತರ ಜನಿಸಿದ ಮಕ್ಕಳು ಇವೆಲ್ಲವನ್ನೂ ಹುಟ್ಟುತ್ತಲೇ ನೋಡುತ್ತಿದ್ದುದರಿಂದ ಇವೆಲ್ಲಾ ಸಹಜವೆಂಬಂತಹ ವಾತಾವರಣದಲ್ಲಿ ಬೆಳೆದರು. ಆದರೆ ಅವರ ಅಪ್ಪಅಮ್ಮಂದಿರು ಮಾತ್ರ ತಮ್ಮ ಬಾಲ್ಯದಿಂದ ಬೆಳೆಸಿಕೊಂಡ ನಂಬಿಕೆಗಳ ಉರುಳಿನಲ್ಲೇ ಸಿಕ್ಕಿಕೊಂಡು ತ್ರಿಶಂಕುಗಳಾಗಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಇರುವ ತಲೆಮಾರುಗಳ ಅಂತರ ಒಮ್ಮೆಲೆ ಭಾರೀ ದೊಡ್ಡದಾದಂತೆ ಕಂಡುಬರತೊಡಗಿತು.
ಏನಿದರ ಪರಿಣಾಮಗಳು?
ನಮ್ಮ ಮಾರುಕಟ್ಟೆಗಳು ಪಾಶ್ಚಿಮಾತ್ಯ ದೇಶಗಳಿಗೆ ತೆರೆದುಕೊಂಡಷ್ಟು ವೇಗದಲ್ಲಿ, ನಮ್ಮ ಮನಸ್ಸುಗಳು, ಚಿಂತನೆಗಳು, ಜೀವನಶೈಲಿ ಮುಂತಾದವು ಬದಲಾಗಲಿಲ್ಲ. ಹಾಗಾಗಿ ಅವರದನ್ನೂ ಬಯಸುವ, ನಮ್ಮದನ್ನು ಬಿಡಲಾಗದ ಎಡಬಿಂಡಂಗಿತನದಲ್ಲಿ ಇವತ್ತಿನ ಪೋಷಕರು ಇದ್ದಾರೆ. ಇವತ್ತಿನ ಮಕ್ಕಳ ಪರಿಸ್ಥಿತಿ ಕೂಡ ಬಹಳ ಭಿನ್ನವಾಗೇನೂ ಇಲ್ಲ. ಇದರ ಕೆಲವು ಪರಿಣಾಮಗಳು ಹೀಗಿವೆ;
1. ವಿವಾಹ ಪೂರ್ವದಲ್ಲಿ ಪ್ರೇಮಿಸುವ ಅಥವಾ ಲೈಂಗಿಕ ಸಂಬಂಧಗಳನ್ನು ಹೊಂದುವ ಅಥವಾ ಹೊಂದಲು ಬಯಸುವ ಯುವಜನತೆ ಅದನ್ನು ಸಮಾಜದೆದುರು, ಅದರಲ್ಲೂ ಹೆಚ್ಚಾಗಿ ಪೋಷಕರೆದುರು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಂಡಿಲ್ಲ. ಹೆಚ್ಚಿನವರು ಇದೋ ಅದೋ ಅನ್ನುವ ಗೊಂದಲದಲ್ಲಿ ಪಾಪಪ್ರಜ್ಞೆಯಲ್ಲಿ ನರಳುತ್ತಿದ್ದಾರೆ.
2. ಪಾಶ್ಚಿಮಾತ್ಯರ ಲಿಂಗಸಮಾನತೆಯ ಚಿಂತನೆಗಳು ನಮಗೆ ಒಪ್ಪಿಗೆಯಾಗುವುದಿಲ್ಲ. ಹೆಚ್ಚಿನ ಯುವಕರು ತಮಗೆ ವಿವಾಹಪೂರ್ವ ಲೈಂಗಿಕ ಅನುಭವವಿದ್ದರೂ ತಮ್ಮ ಸಂಗಾತಿಯಾಗುವವಳು, “ಪವಿತ್ರ”ವಾಗಿಯೇ ಇರಬೇಕೆಂದು ಬಯಸುತ್ತಾರೆ. ಪೋಷಕರೂ ಕೂಡ ನಮ್ಮ ಯುವಕರಂತೆಯೂ ಯೋಚಿಸುತ್ತಾರೆ. ಆದರೆ ವಿದ್ಯೆ ಮತ್ತು ಆರ್ಥಿಕ ಸ್ವಾತಂತ್ರ ಹೊಂದಿರುವ ಯುವತಿಯರಿಗೆ ಈ ತರ್ಕವನ್ನು ಒಪ್ಪಲಾಗುತ್ತಿಲ್ಲ.
3. ಹೆಚ್ಚಿನ ಪೋಷಕರು ಬದಲಾಗುತ್ತಿರುವ ಪರಿಸ್ಥಿತಿಗಳನ್ನು ನೋಡುತ್ತಿದ್ದರೂ ‘ನಮ್ಮ ಮಕ್ಕಳು ಮಾತ್ರ ಹಾಗಲ್ಲ’ ಎಂಬ ಭ್ರಮೆಯಲ್ಲಿದ್ದಾರೆ. ಇಂತವರು, ಮುಕ್ತ ಮಾರುಕಟ್ಟೆಯಿಂದ ಸಿಗುವ ಆರ್ಥಿಕ ಲಾಭಗಳು ಬೇಕು, ಪಾಶ್ಚಿಮಾತ್ಯರು ಉಪಯೋಗಿಸುವ ಗ್ಯಾಡ್ಜೆಟ್‍ಗಳೆಲ್ಲಾ ಬೇಕು, ಆದರೆ ಅವರ ಜೀವನ ಶೈಲಿ ಮಾತ್ರ ಬೇಡ ಎನ್ನುವ ಅವಾಸ್ತವಿಕ ಚಿಂತನೆಯಲ್ಲಿದ್ದಾರೆ. ಉದಾಹರಣೆಗೆ ತೀರಾ ಸಂಪ್ರದಾಯಿಕ ಮನೋಭಾವದ ಪೋಷಕರೂ ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ ವಿದೇಶಗಳಿಗೆ ಕಳಿಸಲು ಸಿದ್ಧರಿದ್ದಾರೆ. ಆದರೆ ಆ ಮಕ್ಕಳು ಅಲ್ಲಿನ ಯಾವ ಆಕರ್ಷಣೆಗೂ ಒಳಗಾಗದೇ ತಮ್ಮದೇ ಜಾತಿಯ ವರ/ವಧುವನ್ನು ವರಿಸಿ ಸಾಂಪ್ರದಾಯಿಕವಾಗಿಯೇ ಬದುಕಬೇಕೆಂದು ಬಯಸುತ್ತಾರೆ. ಇದು ಸರಿ ತಪ್ಪುಗಳ ಪ್ರಶ್ನೆಯಲ್ಲ, ಎಲ್ಲಾ ಜೀವನ ಶೈಲಿಯಲ್ಲಿಯೂ ಸಾಧಕ ಬಾಧಕಗಳಿರುತ್ತವೆ. ಆದರೆ ನಮಗೇನು ಬೇಕು ಎಂದು ಖಚಿತತೆ ಇಲ್ಲದೆ ಎರಡೂ ದೋಣಿಗಳ ಮೇಲೆ ಕಾಲಿಟ್ಟು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಲಾಗದ ಗೊಂದಲದ ಪ್ರಶ್ನೆ.
4. ಒತ್ತಾಯದ ಮದುವೆಗಳನ್ನು ಹೇರುವ ಪೋಷಕರು ಮತ್ತು ಅದನ್ನು ವಿರೋಧಿಸಿ ತಮ್ಮ ಆಯ್ಕೆಗಳನ್ನು ಉಳಿಸಿಕೊಳ್ಳ ಬಯಸುವ ಯುವಕರು, ಇವರ ನಡುವೆ ಮಹಾಯುದ್ಧಗಳು ನಡೆಯುತ್ತಲೇ ಇರುತ್ತವೆ. ಇವು ಸಾವಿರಾರು ಭಾರತೀಯ ಸಿನಿಮಾಗಳಿಗೆ, ಧಾರವಾಹಿಗಳಿಗೆ ವಸ್ತುಗಳನ್ನು ಒದಗಿಸುತ್ತಲೇ ಇದೆ! ಕೆಲವು ಮನೆಗಳಲ್ಲಿ ಪೋಷಕರು ಮತ್ತೆ ಕೆಲವೆಡೆ ಮಕ್ಕಳು ಇದರಲ್ಲಿ ಜಯಗಳಿಸುತ್ತಾರೆ. ಆದರೆ ಒಮ್ಮತದ ತೀರ್ಮಾನವಾಗದಿರುವುದರಿಂದ ಮದುವೆಗಳು ಮುರಿದುಬೀಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಅಥವಾ ಮಕ್ಕಳ ವೈವಾಹಿಕ ಜೀವನ ಸುಖಕರವಾಗಿರುವುದಿಲ್ಲ.
5. ಎಲ್ಲಾ ಸಾಂಪ್ರದಾಯಿಕ ವಿಧಿಗಳೊಂದಿಗೆ ಮದುವೆಯಾದ ಮೇಲೂ ಇವತ್ತಿನ ಯವಕರು ಇದೊಂದು ಜನ್ಮಜನ್ಮಾಂತರದ ಸಂಬಂಧ ಎಂದುಕೊಳ್ಳಲು ಸಿದ್ಧರಿಲ್ಲ. ಅವರಿಗೆ ಇದು ಇವತ್ತಿನ ಅಗತ್ಯ ಮಾತ್ರ. ಅಗತ್ಯಗಳು, ಆದ್ಯತೆಗಳು ಬದಲಾದಾಗ ಎಲ್ಲಾ ವ್ಯಾವಹಾರಿಕ ಒಪ್ಪಂದದಂತೆ ಮದುವೆಯನ್ನೂ ಮುಗಿಸಬಹುದಾದ ಸಾಧ್ಯತೆಗಳು ಅವರ ಮನಸಿನಾಳದಲ್ಲಿ ಇರುತ್ತದೆ.
6. ಬದಲಾದ ಅಗತ್ಯಗಳನ್ನು ನಿಭಾಯಿಸಲು ಮಕ್ಕಳಿಗೆ ಯಾರೂ ಶಿಕ್ಷಣ ನೀಡುತ್ತಿಲ್ಲ. ಪೋಷಕರಿಗೆ ಈ ನಿಟ್ಟಿನ ಚಿಂತನೆಗಳೇ ಬರುತ್ತಿಲ್ಲ ಏಕೆಂದರೆ ಅವರಿನ್ನೂ ಬದಲಾವಣೆಯನ್ನೇ ಒಪ್ಪಿಕೊಂಡಿಲ್ಲ ಮತ್ತು ಅವರಿಗೆ ಅಂತಹ ಶಿಕ್ಷಣವನ್ನು ಯಾರೂ ನೀಡಿರಲಿಲ್ಲ! ಹಾಗಾಗಿ ವೈವಾಹಿಕ ಶಿಕ್ಷಣ ಅಥವಾ ಲೈಂಗಿಕ ಶಿಕ್ಷಣ ಎಂದ ಕೂಡಲೇ ಎಗರಾಡುವ ಹೆಚ್ಚಿನ ಪೋಷಕರು, ಮಕ್ಕಳು ತಮ್ಮ ಕಣ್ಣೆದುರೇ ಅಸುಖಿಗಳಾಗುತ್ತಿದ್ದರೂ, ಸರ್ಕಾರ, ಸಮಾಜ, ಹೀಗೆ ತಮ್ಮನ್ನು ಬಿಟ್ಟು ಎಲ್ಲರನ್ನೂ ಹಳಿಯುತ್ತಾ ಮನೆಯನ್ನು, ಮನಸ್ಸುಗಳನ್ನೂ ರಣರಂಗವನ್ನಾಗಿಸಿಕೊಳ್ಳುತ್ತಿದ್ದಾರೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!