Home Blogroll ಹೊಸ್ತಿಲಲ್ಲಿ ಕಾದಿದೆ ವೀ – ಅಪಾಯ!

ಹೊಸ್ತಿಲಲ್ಲಿ ಕಾದಿದೆ ವೀ – ಅಪಾಯ!

0

ಇತ್ತೀಚೆಗೆ ಪರಿಚಿತ ಬಿಎಸ್‍ಎನ್‍ಎಲ್ ಅಧಿಕಾರಿಯೊಬ್ಬರು ಹೇಳುತ್ತಿದ್ದರು, “ನಮ್ಮ ಗ್ರಾಮೀಣ ಬ್ರಾಡ್‍ಬ್ಯಾಂಡ್ ಯೋಜನೆ ಜಾರಿಗೊಳ್ಳುವವರೆಗೆ ಈ ಪರಿ ಹಳ್ಳಿ ಮನೆಗಳಲ್ಲಿ ಕಂಪ್ಯೂಟರ್‍ಗಳಿವೆ ಎಂಬುದೇ ಗೊತ್ತಿರಲಿಲ್ಲ” ಅವರದ್ದು ಹರ್ಷದ ಉದ್ಘಾರ. ಇನ್ನೊಂದು ರೀತಿಯಲ್ಲಿ ಯೋಚಿಸಿದರೆ ವೀ… ಅಪಾಯ ನಮ್ಮ ಬೆನ್ನ ಹಿಂದೆಯೇ ಇದೆ!
ಏನಿದು ವೀ?
ವಿದ್ಯುತ್ ಉಪಕರಣಗಳು ಹಾಗೂ ಎಲೆಕ್ಟ್ರ್ರಾನಿಕ್ ಸಾಧನಗಳ ತ್ಯಾಜ್ಯವನ್ನು ಇ – ವೇಸ್ಟ್ ಎನ್ನುತ್ತೇವೆ. ಇದನ್ನೇ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ವೀ(ಡಬ್ಲ್ಯುಇಇಇ)! ಕಂಪ್ಯೂಟರ್, ಲ್ಯಾಪ್‍ಟಾಪ್, ಟಿವಿ, ರೇಡಿಯೋ, ಫ್ರಿಜ್, ಮೊಬೈಲ್, ಡಿವಿಡಿಗಳೇ ಈ ವೀಗಳಾಗಿ ಪರಿವರ್ತಿತವಾಗುತ್ತವೆ. ಜನ ಬಳಸುವ ಎಲೆಕ್ಟ್ರಾನಿಕ್ ಸಲಕರಣೆಗಳು ಹಾಗೂ ಐಟಿ ಉಪಕರಣಗಳನ್ನು ಇ ವೇಸ್ಟ್ ಎನ್ನುವ ನಾವು ಎಲ್ಲ ಮಾದರಿಯ ಉದ್ಯಮಗಳು ಬಳಸಿ ಬಿಸಾಡಿದ ಎಲೆ-ಕ್ಟ್ರಾನಿಕ್, ಕ್ಟ್ರಿಕ್ ಯಂತ್ರೋಪಕರಣಗಳನ್ನು ವೀ ಎನ್ನಬೇಕಾಗುತ್ತದೆ.
ಈಗಾಗಲೆ ಯುರೋಪಿಯನ್ ಯೂನಿಯನ್ (ಇಯು) ವೀ ವ್ಯಾಪ್ತಿಗೆ ಹತ್ತು ವರ್ಗಗಳನ್ನು ಸೇರಿಸಿದೆ. ಫ್ರಿಜ್, ವಾಶಿಂಗ್ ಮೆಶಿನ್, ಎಸಿ, ಐರನ್ ಬಾಕ್ಸ್, ಟೋಸ್ಟರ್, ಕಾಫಿ ಮೆಶಿನ್, ವ್ಯಾಕ್ಯುಮ್ ಕ್ಲೀನರ್, ಕಂಪ್ಯೂಟರ್ ಸಲಕರಣೆಗಳು, ಫೋನ್, ಮೊಬೈಲ್, ಫ್ಯಾಕ್ಸ್, ಝೆರಾಕ್ಸ್, ಪ್ರಿಂಟರ್, ವಿಸಿಡಿ, ಡಿವಿಡಿ, ಹ್ಯಾಲೋಜನ್ ಬಲ್ಬ್, ವೈದ್ಯಕೀಯ ಉಪಕರಣಗಳು….. ಹೀಗೆ ಪಟ್ಟಿ ಮಾರುದ್ದವಿದೆ. ಅಲ್ಲಿ ಇ ವೇಸ್ಟ್ ನಿರ್ವಹಣೆಗೆ ಸ್ಪಷ್ಟ ಮಾನದಂಡವಿದೆ. ಸದ್ಯ ಭಾರತದಲ್ಲಿ ಆ ವಿಚಾರದಲ್ಲಿ ಕಾನೂನು ಕಣ್ಣು ಮುಚ್ಚಿಕೊಂಡು ಕೂತಿದೆ!
ಸಮಸ್ಯೆ ದೊಡ್ಡದಾಗಿಲ್ಲ ಎನ್ನುವಂತಿಲ್ಲ. ನಮ್ಮ ಸಂವಹನ ಮಾಧ್ಯಮಗಳನ್ನು ನಿದ್ರಿಸಲು ಬಿಟ್ಟು ಕೂತಿದ್ದೇವೆ ಎಂಬುದೇ ಸರಿ. ಭಾರತದ ಮೆಟ್ರೋಗಳಲ್ಲಿ ಇ ವೇಸ್ಟ್ ಸ್ಲಂಗಳಂತೆಯೇ ಬೆಳೆಯುತ್ತಿದೆ. ಒಂದು ಅಧ್ಯಯನದ ಪ್ರಕಾರ, ಶೇ.90ರಷ್ಟು ತ್ಯಾಜ್ಯ `ವೀ’ಯಿಂದ ಎಂಬುದು ಸ್ಪಷ್ಟ. 42.1 ಶೇ. ಪ್ರಮಾಣದ ಇ ವೇಸ್ಟ್ ಮನೆಯ ಉಪಕರಣಗಳಿಂದ, ಐಟಿಯಿಂದ ಶೇ.33.9 ಹಾಗೂ ಎಲೆಕ್ಟ್ರಾನಿಕ್ ಕ್ಷೇತ್ರದಿಂದ 13.7ಶೇ.ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.
ಎಂಎಐಟಿ ಎಂಬ ಸಂಸ್ಥೆಯೊಂದಿದೆ. ಐಟಿ ಕ್ಷೇತ್ರದ ತಯಾರಕರ ಸಂಘಟನೆಯಿದು. ಇದು 2007ರಲ್ಲಿ ಭಾರತದಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಟಗೊಂಡಿದೆ. ಇ ವೇಸ್ಟ್ ಒಟ್ಟು 65 ನಗರಗಳಲ್ಲಿ ಹೊರಬೀಳುತ್ತಿದೆ. ಅದರಲ್ಲಿ ಮುಂಬೈಗೆ ಅಗ್ರ ಪಟ್ಟ. 07ರಲ್ಲಿ ದೇಶದಲ್ಲಿ ಒಟ್ಟು 3.80 ಲಕ್ಷ ಟನ್ ಕಂಪ್ಯೂಟರ್, ಮೊಬೈಲ್, ಟಿವಿಗಳ ಕಸ ಸೃಷ್ಟಿಯಾಗಿತ್ತು. ಅದರದೇ ಅಂದಾಜಿನ ಪ್ರಕಾರ 2012ರಲ್ಲಿ ಇದು 8 ಲಕ್ಷ ಟನ್ ದಾಟಿದರೆ ಅಚ್ಚರಿಯಿಲ್ಲ!
ವೀ ಅಪಾಯ ನಮಗಿನ್ನೂ ಅರ್ಥವೇ ಆಗಿಲ್ಲ. ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ, ಪಾದರಸದಂತ ಅಪಾಯಕಾರಿ ಭಾರ ಲೋಹಗಳ ಶಿಲ್ಕು ಮತ್ತು ಪೀಲಿಕ್ಲೋರಿನೇಟೆಡ್ ಟಿಪೆನೆಲ್ಸ್ (ಪಿಸಿಬಿ), ಪ್ರಲೇಟ್ಸ್‍ನಂತ ವಿಷಕಾರಿ ಧಾತುಗಳು ಇ ವೇಸ್ಟ್ ಆಸ್ತಿ! ನೀರು ಹಾಗೂ ಭೂಮಿಯನ್ನು ಸೇರುತ್ತಿರುವ ಇವು ಭವಿಷ್ಯದ ಭಯೋತ್ಪಾದಕರು. ಹೋಗಲಿ, ಇವುಗಳ ಸುರಕ್ಷಿತ ಪುನರ್ಬಳಕೆಯ ವ್ಯವಸ್ಥೆಯೂ ನಮ್ಮಲ್ಲಿಲ್ಲ. ಭಾರತದಲ್ಲಿ ಕೇವಲ ಎರಡು ಸಣ್ಣ ಪ್ರಮಾಣದ `ಅಧಿಕೃತ’ ಪುನರ್ಬಳಕೆ ಯೂನಿಟ್‍ಗಳೂ ಪ್ರಸ್ತುತ ಕಾರ್ಯಪ್ರವೃತ್ತವಾಗಿವೆ. ಬೆಂಗಳೂರಿನಲ್ಲಿರುವ `ಇ-ಪರಿಸರ’ ಅಂತದಲ್ಲೊಂದಾದರೆ ಇನ್ನೊಂದು ಯೂನಿಟ್ ಚೆನ್ನೈನಲ್ಲಿದೆ. 3.80 ಲಕ್ಷ ಟನ್‍ಗೆ ಅದು ಸಾಕೆ ಎಂಬ ಪ್ರಶ್ನೆಯೇ ಹಾಸ್ಯಾಸ್ಪದವಾದೀತು.
2003ರಲ್ಲಿ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ನಿಯಮಗಳು ಜಾರಿಗೊಂಡಿದ್ದು ನಿಜ. ಇದರಲ್ಲಿ ಕೂಡ ವೀ ಪುನರ್ಬಳಕೆಗೆ ಸ್ಪಷ್ಟ ಕಾನೂನು ಅಥವಾ ಮಾನದಂಡ, ತಂತ್ರಜ್ಞಾನವನ್ನು ಹೆಸರಿಸಿಲ್ಲ. ಇದು ಅನಧಿಕೃತ – ಅಪಾಯಕಾರಿ ಪುನರ್ಬಳಕೆ ಕಾನೂನುಗಳ ಹುಟ್ಟಿಗೆ ಕಾರಣವಾಗಿದೆ. ಬಹುಷಃ ಹಳ್ಳಿಗಳಲ್ಲೂ ಈ ಪರಿ ಕಂಪ್ಯೂಟರ್, ಎಲೆಕ್ಟ್ರಿಕ್-ಕ್ಟ್ರಾನಿಕ್ ಸಲಕರಣೆಗಳು ಇರುವುದು ಅಪಾಯದ ಗಾಢತೆಯನ್ನಷ್ಟೇ ಹೇಳುತ್ತದೆ.
ಸರ್ಕಾರದ್ದು ನಿಧಾನಗತಿ. 2004ರ ಜುಲೈನಲ್ಲಿ ಒಂದು ಸ್ಪಷ್ಟ ಕಾರ್ಯಯೋಜನೆ ರೂಪಿಸಲು ರಾಷ್ಟ್ರೀಯ ವೀ ಟಾಸ್ಕ್‍ಫೋರ್ಸ್ ಸ್ಥಾಪನೆಯಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ನಿಗಮ (ಸಿಪಿಸಿಬಿ)ಯ ಅಧ್ಯಕ್ಷರದ್ದೇ ಮುಂದಾಳತ್ವ. ಅಂತೂ 05ರ ಮಾರ್ಚ್ ವೇಳೆಗೆ ಪರಿಸರ ಹಾಗೂ ಅರಣ್ಯ ಸಚಿವಾಲಯ ಇ ವೇಸ್ಟ್‍ಗಳ ದಕ್ಷ ನಿರ್ವಹಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು. ತಾಂತ್ರಿಕ ಅಂಶಗಳಿಗೆ ಪ್ರಾಮುಖ್ಯ ಕೊಟ್ಟುದಲ್ಲದೆ, ತಯಾರಕರೇ ತಮ್ಮ ವಸ್ತುವನ್ನು ಹಿಂಪಡೆಯುವ ಸೂತ್ರವನ್ನು ಅದು ಒತ್ತಿ ಹೇಳಿದೆ. ಇದರಿಂದ ಮಾತ್ರ ಪುನರ್ಬಳಕೆ ನಿರಪಾಯಕಾರಿಯಾಗಿ ಯಶಸ್ವಿಯಾದೀತು ಎಂಬುದು ಹಿನ್ನೆಲೆಯಲ್ಲಿದ್ದ ಅಂಶ. ಕಾನೂನನ್ನೇ ಪಾಲಿಸದಿರುವ ದೇಶದಲ್ಲಿ ಮಾರ್ಗದರ್ಶಿ ಸೂತ್ರಗಳಿಗೆ ಎಲ್ಲಿದೆ ಕಿಮ್ಮತ್ತು?
`ಮುಂದುವರೆದ ತಯಾರಕರ ಜವಾಬ್ದಾರಿ’ಯನ್ನು ತೋರಿದ್ದು ಕೆಲವೇ ಕಂಪನಿ. ವಿಪ್ರೋ, ಹೆಚ್‍ಸಿಎಲ್‍ನಂತವು ಇಂತಹ ಟೇಕ್‍ಬ್ಯಾಕ್ ಕಾರ್ಯಕ್ರಮವನ್ನು ಆರಂಭಿಸಿದ್ದೇನೋ ನಿಜ, ಜನರ ಪ್ರತಿಕ್ರಿಯೆ ನೀರಸವಾಗಿದ್ದುದು ಹೀನಾಯ. ಸೀಸ ಆಧಾರಿತ ಡಿಸಿ ಬ್ಯಾಟರಿಗಳ ವಿಚಾರದಲ್ಲಂತೂ ನಮ್ಮ ನಿರ್ಲಕ್ಷ್ಯ ಅಪಾಯಕಾರಿ. ಟೇಕ್ ಬ್ಯಾಕ್ ವ್ಯವಹಾರ ಅಲ್ಲೂ ಕಟ್ಟುನಿಟ್ಟಾಗಿ ನಡೆಯಬೇಕಿತ್ತು. ಆದರೆ….?
2006ರ ಅಕ್ಟೋಬರ್‍ನಿಂದ ಡಿಸೆಂಬರ್ ಅವಧಿಯಲ್ಲಿ ವಿಶ್ವದ ಒಟ್ಟಾರೆ ಕಂಪ್ಯೂಟರ್ ಮಾರಾಟ 1.39 ಮಿಲಿಯನ್ ದಾಟಿತ್ತು. ಈ ಸಂಖ್ಯೆ ಈಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ದಾಖಲಾಗುತ್ತಿದೆ. ಇತ್ತ ಪ್ರಗತಿ ಆಗುವುದೆಂದರೆ ಇ ವೇಸ್ಟ್ ಪ್ರಮಾಣ ಬೃಹದಾಕಾರವಾಗುತ್ತಿದೆ ಎಂತಲೇ ಅರ್ಥ. ಟಾಕ್ಸಿಕ್ ಲಿಂಕ್ ಎಂಬ ಸರ್ಕಾರೇತರ ಸಂಸ್ಥೆಯ ಸಂಶೋಧನೆಯ ಅನ್ವಯ ಭಾರತದಲ್ಲಿ ಎಲೆಕ್ಟ್ರಾನಿಕ್ ತಯಾರಕರು ಮತ್ತು ಜೋಡಿಸುವವರು ಸೃಷ್ಟಿಸುವ ಇ ವೇಸ್ಟ್ ವಾರ್ಷಿಕ 1,050 ಟನ್!
ವೀ ಅಪಾಯ ಭಾರತದಂತ ದೇಶಗಳಲ್ಲಿ ಇನ್ನಷ್ಟು ಹೆಚ್ಚು. ಇಲ್ಲಿನ ಬಡತನ ಇ ವೇಸ್ಟ್‍ನ್ನು ಕಚ್ಚಾ ವಿಧಾನದಲ್ಲಿ ಪುನರ್ಬಳಕೆ ಮಾಡುವುದನ್ನು ಪ್ರೋತ್ಸಾಹಿಸುತ್ತದೆ. ಇಂದು ದೆಹಲಿಯಲ್ಲಿ ತಾಮ್ರದ ತಂತಿಯನ್ನು ಪಡೆಯಲು ವೈರ್‍ಗಳನ್ನು ಸುಡುವ ತಂತ್ರವನ್ನು ಬಳಸಲಾಗುತ್ತಿದೆ. ಸಕ್ರ್ಯೂಟ್ ಬೋರ್ಡ್‍ಗಳನ್ನು ಆ್ಯಸಿಡ್‍ನಲ್ಲಿ ಮುಕ್ತವಾಗಿ ಮಾನವ ಕೂಲಿಗಳೇ ಮುಳುಗಿಸುತ್ತಿದ್ದಾರೆ. ಈ ಆ್ಯಸಿಡ್‍ನ್ನು ನಂತರ ಭೂಮಿಗೆ ಸುರುವಲಾಗುತ್ತದೆ. ಬಂಗಾರ ಹುಡುಕಲು ಪಾದರಸ ಹಾಗೂ ಸೈನೈಡ್ ಅಮಾಲ್ಗಮ್ ಬಳಕೆಯಾಗಿ ಕೊನೆಗೆ ಅಲ್ಲಿನ ಡ್ರೈನೇಜ್‍ಗೆ ಸೇರ್ಪಡೆಯಾಗುತ್ತಿದೆ. ಈ ದೃಶ್ಯ ನಿಮಗೆ ಮುಂಬೈ, ಬೆಂಗಳೂರು, ಹೈದರಾಬಾದ್‍ಗಳಲ್ಲಿ ಕಾಣುತ್ತದೆ. ಎಚ್ಚರಗೊಳ್ಳಬೇಕಾದವರು ಯಾರು?
ಐಟಿ ಉದ್ಯಮದ ಚಮಕ್ ಚಮಕ್, ಎಲೆಕ್ಟ್ರಾನಿಕ್-ಕ್ಟ್ರಿಕ್ ಸಾಧನಗಳ ಮಾರಾಟ ಹೆಚ್ಚಳದಿಂದ ಆರ್ಥಿಕ ಅಭಿವೃದ್ಧಿಯ ಮಂತ್ರ ಹೇಳುವ ಅರ್ಥ ತಜ್ಞರು ವೀ ಅಪಾಯವನ್ನು ಸಮರ್ಥವಾಗಿ ನಿರ್ವಹಿಸುವ ಸೂತ್ರವನ್ನು ಉತ್ತೇಜಿಸದಿದ್ದರೆ ಕೈಗೆ ಬಂದ ನಾಲ್ಕು ಕಾಸು ದೇಶದ ಆರೋಗ್ಯ ಕಾಪಾಡಲು ಸಾಕಾಗದು ಎಂಬುದಂತೂ ಸತ್ಯ.
ಮಾ.ವೆಂ.ಸ. ಪ್ರಸಾದ.