ನನಗಿನ್ನೂ ಚೆನ್ನಾಗಿ ನೆನಪಿದೆ, ನಾವು 7ನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ಚಿಪ್ಪಳಿ ಲಿಂಗದಹಳ್ಳಿಯ ಶಾಲೆಯಲ್ಲಿ ಆ ವರ್ಷ ವಿಜೃಂಭಣೆಯ ವಾರ್ಷಿಕೋತ್ಸವ ಆಚರಿಸುವ ನಿರ್ಧಾರ ಮಾಡಲಾಗಿತ್ತು. ನಮ್ಮ ನೃತ್ಯಗಳು, ನಾಟಕಗಳು, ಹಿರಿಯ ವಿದ್ಯಾರ್ಥಿಗಳ ನಾಟಕ, ಅದರ ಜೊತೆಗೆ ಮಧ್ಯದ ಅವಧಿಯಲ್ಲಿ ಪಕ್ಕದಲ್ಲಿಯೇ ಹಾಕಲಾಗಿದ್ದ ಬಿಳಿಯ ಪರದೆಯ ಮೇಲೆ ಮಿಕ್ಕಿಮೌಸ್ ವಿಡಿಯೋ ಪ್ರದರ್ಶನ. ಶಾಲಾ ಆವರಣ ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಚಿಪ್ಪಳಿ ಕೆರೆ ಪಕ್ಕದ ಗೋಪಾಲಕೃಷ್ಣ ದೇವಸ್ಥಾನದ ವಿಶಾಲ ಬಯಲಿನಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮುನ್ನ ಸಭಾ ಕಾರ್ಯಕ್ರಮ, ಪಾಲ್ಗೊಂಡ ಗಣ್ಯರ ಬಗ್ಗೆ ನನಗೆ ನೆನಪಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳಂತೂ ಬಂದಿದ್ದರು ಎಂದುಕೊಂಡಿದ್ದೇನೆ. ಅದರಲ್ಲಿ ವಿದ್ಯಾರ್ಥಿಗಳ ಅನಿಸಿಕೆ ಎಂಬ ಶೀರ್ಷಿಕೆಯಡಿ ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದರು. ಭಾಷಣದಲ್ಲಿ ಅಳವಡಿಸಿಕೊಂಡ ಹಲವು ಅಂಶಗಳನ್ನು ಬರೆದುಕೊಟ್ಟಿದ್ದು ನಮ್ಮ ಶಾಲೆಯ ಓರ್ವ ಗೌರವ ಶಿಕ್ಷಕರು! ಅದರಲ್ಲಿ ಹಳ್ಳಿ ವಿದ್ಯಾರ್ಥಿಗಳಿಗೆ ಶಾಲಾ ವಾತಾವರಣದಲ್ಲಿರುವ ಕೊರತೆಗಳ ಬಗ್ಗೆ ಸಾದ್ಯಂತ ವಿವರಿಸಲಾಗಿತ್ತು. ನನ್ನ ಮಾತುಗಳ ನಂತರ ಮಾತನಾಡಿದ ಪ್ರತಿಯೊಬ್ಬ ಭಾಷಣಕಾರರು ನನ್ನ ಅನಿಸಿಕೆಯ ಮಾತುಗಳನ್ನು ಆಧರಿಸಿಯೇ ಮಾತನಾಡಿದರು ಎಂಬುದು ಗ್ರೀನ್ ರೋಮ್‍ನಲ್ಲಿದ್ದ ನನಗೆ ಗೊತ್ತಾಗದಿದ್ದರೂ ನಂತರ ಉಳಿದವರು ಹೇಳಿದ್ದರಿಂದ ಅರಿವಿಗೆ ಬಂತು.
ಆ ವಯಸ್ಸಿನಲ್ಲಿ ಅದರ ಬಗ್ಗೆ ನಾನಂತೂ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ ಈಗ ಹಳ್ಳಿ ಶಾಲೆಗಳನ್ನು ನಕಾರಾತ್ಮಕವಾಗಿ ನೋಡುವ ಸ್ವಭಾವದಲ್ಲಿಯೇ ಐಬಿದೆ ಎಂದು ಕಾಣುತ್ತದೆ. ಅಂದಿನ ನನ್ನ ಅನಿಸಿಕೆ ಆ ಕ್ಷಣದ ಸತ್ಯ ಮಾತ್ರ. ಅಂದಿನ ಕೊರತೆಗಳ ಹೊರತಾಗಿಯೂ ಹಳ್ಳಿ ಶಾಲೆಯ ಪಾಸಿಟಿವ್ ನೋಡಬೇಕಾಗಿತ್ತು. ನಿಜ, ನಾನೂ ಪೇಟೆ ಶಾಲೆಯಲ್ಲಿ ಓದಿ ಠಸ್‍ಪುಸ್ ಇಂಗ್ಲೀಷ್ ಮಾತನಾಡುವುದನ್ನು ಕಲಿತು ಆರಂಕಿಯ ವೇತನದ ಕೆಲಸಕ್ಕೆ ಹೋಗಿಬಿಡಬಹುದಿತ್ತೇನೋ. ಆದರೆ ಸಂಬಳ, ಕೆಲಸದ ನಡುವೆ ಕಳೆದುಹೋಗುತ್ತಿದ್ದೆ ಎಂಬ ಆತಂಕದ ಅನುಮಾನವೂ ನನ್ನದಿದೆ. ಹಳ್ಳಿಯ ಶಾಲೆ ನನಗೆ ಸೃಜನಶೀಲ ವ್ಯಕ್ತಿತ್ವವನ್ನು ಕೊಟ್ಟಿದೆ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದು. ನನ್ನ ಸಾಧನೆಯ ಹಾದಿಯನ್ನು ವಿಸ್ತರಿಸಲು ಅಡ್ಡಿಯಾದ ನನ್ನ ಸೋಮಾರಿತನವನ್ನು ದೂರಬೇಕೇ ವಿನಃ ಶಾಲೆಯನ್ನಲ್ಲ.
ಒಂದು ಶಾಲೆ ರೂಪಗೊಳ್ಳುವುದು ಅದರ ಮೂಲಭೂತ ಸೌಕರ್ಯಗಳಿಂದಲ್ಲ ಎಂದು ನಂಬಿದವನು ನಾನು. ಶಿಕ್ಷಕ ವರ್ಗ ವಿದ್ಯಾರ್ಥಿಗಳಲ್ಲಿ ಜೀವ ಚೈತನ್ಯವನ್ನು ತುಂಬುವ ತಾಕತ್ತಿರುವವರು. ಮತ್ತೆ ಹಳೆಯ ನೆನಪು ಕಾಡುತ್ತದೆ, ಕರ್ಕಿಕೊಪ್ಪದ ಶಾಲೆಯಲ್ಲಿ ಓದುವಾಗ ನಮಗೆ ಎಂಆರ್‍ಕೆ ಎಂಬ ಮುಖ್ಯ ಶಿಕ್ಷಕರಿದ್ದರು. ಅವರ ಹೆಸರು ರಾಮಕೃಷ್ಣ ಎಂದಿರಬೇಕು. ಅವರ ಮುಖ ಈಗ ಕಣ್ಣು ಮುಚ್ಚಿದರೆ ಕೂಡ ಎದುರಾಗುತ್ತಿಲ್ಲ. ಅವರು ಪಾಠ ಮಾಡುತ್ತಿದ್ದುದು 6-7ಕ್ಕೆ ಮಾತ್ರವಿತ್ತು. 3-4ನೇ ತರಗತಿಯ ಶಿಕ್ಷಕರು ಬಾರದಿದ್ದರೆ ಅವರು ನಮ್ಮನ್ನು ತಮ್ಮ ತರಗತಿಗೆ ಕರೆಸಿಕೊಳ್ಳುತ್ತಿದ್ದರು. ಹಿರಿಯ ತರಗತಿಯವರಿಗೆ ಪಾಠ ಮಾಡುತ್ತಲೇ ನಮಗೆ ಲವಲವಿಕೆಯಿಂದ ಉಕ್ತಲೇಖನ ಪರೀಕ್ಷೆ ಮಾಡಿಸುತ್ತಿದ್ದರು. ಅದರಿಂದ ಇವತ್ತೂ ನಮ್ಮ ಕನ್ನಡ ಜ್ಞಾನ ಅತ್ಯುತ್ತಮವಾಗಿದೆ. ಆಟವಾಡುತ್ತಲೇ ನಾವು ಅಂತಹ ಸಂದರ್ಭದಲ್ಲಿ ಅವರಿಂದ ಮುಂದಿನ ತರಗತಿಗಳಲ್ಲಷ್ಟೇ ಬರುವ ರೋಮನ್ ಅಂಕಿಗಳನ್ನು ಕಲಿತೆವು. ಒಬ್ಬ ಪಕ್ವ ಶಿಕ್ಷಕ ಮಕ್ಕಳ ಜ್ಞಾನದ ಹಸಿವನ್ನು ತುಂಬುವ ಪರಿ ಅದು. ಅಂದು ನಾವು ನಮ್ಮ ನಿಯಮಿತ ಶಿಕ್ಷಕರು ಬರದೇ ಎಂಆರ್‍ಕೆ ಸಾರ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ಬಯಸುತ್ತಿದ್ದೆವು! ಅಂದರೆ ಶಿಕ್ಷಕರ ಕೊರತೆಯೊಂದೆಡೆಯಾದರೆ, ಅದರ ಕೇಂದ್ರ ಬಿಂದುವಿನಲ್ಲಿಯೇ ಇನ್ನೊಂದು ಕಲಿಕೆಯ ಸೂತ್ರವೂ ಇದೆ ಎಂಬುದು ಪರಮಸತ್ಯ.
ಪಠ್ಯದ ಓದು, ಪರೀಕ್ಷೆಯ ಅಂಕ, ಫಲಿತಾಂಶ, ರ್ಯಾಂಕ್‍ಗಳಿಗೆ ನಾವು ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಯಿಂದ ಓದಿಗೆ ಧಕ್ಕೆ ಎಂಬುದನ್ನಂತೂ ಮನಸ್ಸಿನಿಂದ ನಿವಾಳಿಸಬೇಕು. ಅರೆರೆ, ಮತ್ತದೇ ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಭಾಷಣದಂತೆ ಕಂಡಿದ್ದರೆ ಕ್ಷಮಿಸಿ. ಇನ್ನು ಮುಂದಿನ ಮಾತುಗಳು ನನ್ನ ಅನುಭವಜನ್ಯವಾದುದು. ಪ್ರೌಢಶಾಲೆಯಲ್ಲಿದ್ದೆ, ಎಂಟನೇ ತರಗತಿಯಲ್ಲಿ. ಅರಣ್ಯ ಇಲಾಖೆಯಲ್ಲಿ ಒಂದು ಪ್ರಬಂಧ ಸ್ಪರ್ಧೆ ಏರ್ಪಾಡಾಗಿತ್ತು. ಪರಿಸರ ಕುರಿತ ವಿಷಯ. ನಗರದ ಬಹುಸಂಖ್ಯಾತ ವಿದ್ಯಾರ್ಥಿಗಳು ಮತ್ತು ಗ್ರಾಮಾಂತರ ಭಾಗದ ಬೆರಳೆಣಿಕೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆಗೆ ಸಿದ್ಧವಾಗುತ್ತಿದ್ದ ಪೇಟೆಯ ಮಕ್ಕಳು ಬರವಣಿಗೆಯ ಸಮಯ ಬರುವ ಮುನ್ನಿನವರೆಗೂ ಅದೇನನ್ನೋ ಓದುತ್ತಿದ್ದರು. ಅಲ್ಲಿನ ಸಾಲುಗಳನ್ನು ಮನೋಗತ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ನಾನು ಗಮನಿಸಿದಂತೆ ಓರ್ವ ವಿದ್ಯಾರ್ಥಿ ಒಂದೆಡೆ ಪುಸ್ತಕದ ಮಾಹಿತಿ ಓದುತ್ತಿದ್ದ, ಇನ್ನೊಂದೆಡೆ ಕೈಯಲ್ಲಿ ಅವ ಕುಳಿತ ಜಾಗದ ಪಕ್ಕದಲ್ಲಿದ್ದ ಗಿಡದ ಎಲೆ, ರೆಂಬೆಗಳನ್ನು ಅವನಿಗರಿವಿಲ್ಲದಂತೆ ಕೀಳುತ್ತಿದ್ದ. ನನ್ನ ಪ್ರಬಂಧದ ಆರಂಭದಲ್ಲಿ ಪ್ರಸ್ತಾಪವಾದ ಘಟನೆ – ಪೀಠಿಕೆ ಇದೇ ಆಗಿತ್ತು! ಪರಿಸರ ಪ್ರೇಮ ಎಂಬುದು ನಮ್ಮೊಳಗಿನಿಂದ ಹುಟ್ಟಬೇಕು ಎಂಬ ನಿಲುವನ್ನು ಪ್ರಸ್ತಾಪಿಸಿದ್ದೆ. ಅವತ್ತು ಮೊದಲಿನೆರಡೂ ಬಹುಮಾನಗಳನ್ನು ಗಿಟ್ಟಿಸಿದ್ದು ಗ್ರಾಮೀಣ ಪ್ರೌಢಶಾಲೆಗಳ ಮಕ್ಕಳು. ನನ್ನ ವಾದ ಇಷ್ಟೇ, ಸಹಜತೆಯ ಜೊತೆಗೆ ಅಧ್ಯಯನ ಬೆರೆಯುವಂತಾದರೆ ಮಾತ್ರ ಫಲಿತಾಂಶ ಪ್ರಭಾವಯುತದ್ದಾಗಿರುತ್ತದೆ.
ಹಲವು ಬಾರಿ ಗ್ರಾಮೀಣ ಶಾಲಾ ಶಿಕ್ಷಕರಲ್ಲಿ ಮಕ್ಕಳನ್ನು ಸಾಧನೆ ಮಾಡಲು ಉತ್ತೇಜಿಸುವ ಸಾಮಥ್ರ್ಯವೇ ಕಂಡುಬರುವುದಿಲ್ಲ. ಅವರೇ ಎಲ್ಲೂ ಸಲ್ಲದೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡ ಸಂದರ್ಭದಲ್ಲಿ ಆಗುವ ಅಪಾಯವಿದು. ಮಕ್ಕಳಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಪಾಠ ಮಾಡುವ ಶಿಕ್ಷಕರು ತಮ್ಮ ತಮ್ಮಲ್ಲೇ ಹೊಡೆದಾಟ ಮಾಡುತ್ತಿದ್ದುದನ್ನು ನೋಡುವ ವಿದ್ಯಾರ್ಥಿ ಆ ನೀತಿ ಪಾಠವನ್ನು ಸುತರಾಂ ಕಲಿಯುವುದಿಲ್ಲ. ಮನೆಯಲ್ಲಿ ಅಪ್ಪ, ಮಗನಿಗೆ ಸತ್ಯವನ್ನೇ ಹೇಳಬೇಕು ಎಂದು ತಾಕೀತು ಮಾಡಿ ಮೊಬೈಲ್ ಕರೆ ಬಂದಾಗ, ಅಪ್ಪ ಮನೇಲಿ ಇಲ್ಲ ಎಂದು ಮಗನ ಮೂಲಕ ಹೇಳಿಸಿದಂತೆಯೇ ಇದೂ ಕೂಡ. ಆದರೆ ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರ ಪಾಠದ ಜೊತೆಗೆ ಅವರ ನಡೆನುಡಿಗಳಿಂದ ಪ್ರಭಾವಿತರಾಗುವ ಶಿಷ್ಯವರ್ಗ ದೊಡ್ಡದು. ಅದೊಂದನ್ನು ಬಳಸಿಕೊಂಡು ಮಕ್ಕಳನ್ನು ವಿದ್ಯಾಭ್ಯಾಸ ಮತ್ತು ನೈತಿಕ ನಡವಳಿಕೆಯಲ್ಲಿ ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡುಹೋಗುವ ತಾಕತ್ತು ಇಲ್ಲಿನ ಶಿಕ್ಷಕ ವರ್ಗಕ್ಕಿರುತ್ತದೆ. ಅದನ್ನವರು ಬಳಸಿಕೊಳ್ಳದಿದ್ದರೆ ಯಾರೇನು ಮಾಡಲು ಸಾಧ್ಯ?
ಈಗಲೂ ಇನ್ನೊಂದು ಕೆಲಸವನ್ನು ಗ್ರಾಮೀಣ ಶಾಲೆಗಳು ಸಮರ್ಥವಾಗಿ ಮಾಡಬೇಕಾಗಿದೆ, ಅದು ಶಾಲಾ ಗ್ರಂಥಾಲಯದ ಪರಿಪೂರ್ಣ ಬಳಕೆ. ನಾವು ಓದುತ್ತಿದ್ದ ಕಾಲದಿಂದ ಶಾಲಾ ಲೈಬ್ರರಿಯಲ್ಲಿನ ಪುಸ್ತಕಗಳನ್ನು ಮಕ್ಕಳಿಗೆ ನಿರಂತರವಾಗಿ ಕೊಡುವ ಪ್ರವೃತ್ತಿಯನ್ನು ಕಂಡಿದ್ದೇ ಕಡಿಮೆ. ಈ ವಿಷಯದಲ್ಲಿ ಶಿಕ್ಷಕರು ಉದಾರವಾಗಿರುವ ಸಂದರ್ಭಗಳೇ ಕಡಿಮೆ. ಸಾರ್ವಜನಿಕರು, ಪುಸ್ತಕ ಪ್ರೇಮಿಗಳ ಸಹಾಯ ಪಡೆದು ಅಂತಹ ಒಂದು `ಅಪ್‍ಡೇಟ್’ ಇರುವ ಗ್ರಂಥಾಲಯವನ್ನು ಪ್ರತಿ ಶಾಲೆಯಲ್ಲಿ ಸಿದ್ಧಪಡಿಸಬಹುದು. ಸರ್ಕಾರದ ಅನುದಾನದ ಉಸಾಬರಿಯನ್ನು ಇದರಲ್ಲಿ ಅಡಕ ಮಾಡುವುದು ಬೇಡ. ಆ ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಿ, ಕಡ್ಡಾಯವಾಗಿ ಬೆಳೆಸಿ. ಒಮ್ಮೆ ಮಕ್ಕಳಲ್ಲಿ ಅಕ್ಷರ ಪ್ರೀತಿ ಮೂಡಿದರೆ ಅದು ಅದ್ಭುತಗಳಿಗೆ ಕಾರಣವಾಗುತ್ತದೆ. ದುರಂತ ಎಂದರೆ, ದಿನದಿಂದ ದಿನಕ್ಕೆ ಶಿಕ್ಷಕರು, ಮಕ್ಕಳು, ಪೋಷಕರಿಗೆ ಪಠ್ಯ, ಪರೀಕ್ಷೆ, ಅಂಕಗಳೇ ವಿದ್ಯಾರ್ಥಿ ಜೀವನದ ಪರಮ ಉದ್ದೇಶವಾಗಿಬಿಡುತ್ತದೆ. ಮಕ್ಕಳ ಹಂತದಿಂದಲೇ ವಿವಿಧ ಅನುಭವಗಳನ್ನು ಪಡೆಯುವುದರಿಂದ ಅವರಲ್ಲಿ ಕಾಣಿಸಬಹುದಾಗಿದ್ದ ಬದಲಾವಣೆಗೆ ತಂದೆ ತಾಯಿ ಶಿಕ್ಷಕರೇ ಕಡಿವಾಣ ಹಾಕಿಬಿಡುತ್ತಿದ್ದಾರೆ. ಹಾಗಾಗಿ ಇಂದಿನ ಮಕ್ಕಳು ಪ್ರತಿಯೊಂದನ್ನೂ ಕಷ್ಟಪಟ್ಟು ಕಲಿಯುತ್ತಿದೆ.
ಹಳ್ಳಿ ಶಾಲೆಯಲ್ಲಿ ಶಿಕ್ಷಕರಿಲ್ಲ, ನಾವೂ ಪೇಟೆಗೆ ಸೇರಬಹುದಿತ್ತು ಎಂಬ ಭಾವ ಮಕ್ಕಳಿಗಿಂತ ಹೆಚ್ಚಾಗಿ ಇಂದಿನ ಪೋಷಕರಲ್ಲಿದೆ. ಈ ಕಲಿಕೆಯ ಕೇಂದ್ರೀಕರಣದಿಂದ ನಗರಗಳಲ್ಲಿ ಸಮಸ್ಯೆಯೇ ಆಗುತ್ತಿದೆ. ಆವಿನಹಳ್ಳಿ, ಸಿರಿವಂತೆ ಮೊದಲಾದೆಡೆಯೂ ಸರ್ಕಾರಿ ಪಿಯು ಕಾಲೇಜಿದ್ದರೂ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಕ್ಷರಶಃ ನೂಕುನುಗ್ಗಲು ನಿರ್ಮಾಣವಾಗುತ್ತದೆ. ಸರ್ಕಾರಿ ಶಾಲೆಗೂ ಕಾರ್ಪೊರೇಟ್ ಸ್ಪರ್ಶದ ಅಗತ್ಯವಿದೆ. ಸರ್ಕಾರದ ಯೋಜನೆಗಳ ಬಲವಂತದಿಂದ ನಲಿಕಲಿ, ಪ್ರತಿಭಾ ಕಾರಂಜಿ…. ಮತ್ತೊಂದು ಯೋಜನೆಗಿಂತ ಸರ್ಕಾರಿ ಶಿಕ್ಷಕ ವರ್ಗ ಮಕ್ಕಳನ್ನು ಸೇರಿಸಿಕೊಳ್ಳುವ ಮತ್ತು ಬೋಧಿಸುವ ಆಸಕ್ತಿಯನ್ನು ತೋರಲೇಬೇಕು. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲೂ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವುದರಿಂದ ಡ್ರೈವರ್ ಕಂಡಕ್ಟರ್‍ಗೆ ಪುರಸ್ಕಾರ ಸಿಗಲಾರಂಭಿಸಿದ ಮೇಲೆ ಪವಾಡ ಸದೃಶ ಬದಲಾವಣೆಗಳಾದವಲ್ಲ, ಅಂತಹದ್ದು ಸರ್ಕಾರಿ ಶಾಲೆಗಳ ವಿಚಾರದಲ್ಲಿಯೂ ನಡೆಯಬೇಕಿದೆಯೇ, ಚರ್ಚೆ ನಡೆಯಬೇಕಿದೆ.
ಕೊನೆಯದಾಗಿ, ಇಂದಿನ ಪ್ರಖ್ಯಾತ ಪ್ರತಿಭೆಗಳ ಕೊಡುಗೆಗಳನ್ನು ಈ ಸರ್ಕಾರಿ ಶಾಲೆಯೇ ಕೊಡುತ್ತದೆಂದಾದರೆ ನಮ್ಮ ಉನ್ನತಿಯ ಹಾದಿಯಲ್ಲಿ ದೋಷವಿರುವುದು ಶಾಲೆಯಲ್ಲಲ್ಲ, ನಮ್ಮ ಕಲಿಕೆಯಲ್ಲಿ, ಏನಂತೀರಾ?
– ಮಾ.ವೆಂ.ಸ.ಪ್ರಸಾದ್