19.1 C
Sidlaghatta
Sunday, December 22, 2024

ಸ್ವಚ್ಛ ಭಾರತವೆಂಬ ಸರ್ಕಾರೀ ಪ್ರಹಸನ

- Advertisement -
- Advertisement -

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 2ರಂದು ಸ್ವಚ್ಛ ಭಾರತವೆಂಬ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ನಮ್ಮ ಪರಿಸರವನ್ನು ತುರ್ತಾಗಿ ಸ್ವಚ್ಛಗೊಳಿಸುವ ಅಗತ್ಯವಿರುವುದೇನೋ ನಿಜ. ಜೊತೆಗೆ ಈ ಅಭಿಯಾನಕ್ಕೆ ಸಾರ್ವಜನಕರಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಯನ್ನು ನೋಡಿದರೆ ನಮ್ಮ ಜನರಲ್ಲಿ ಸ್ವಚ್ಛತೆಯ ಬಗೆಗೆ ಸಾಕಷ್ಟು ಪ್ರಜ್ಞೆಯೂ ಮೂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂತಹ ಸಂದರ್ಭದಲ್ಲಿ ಈ ಅಭಿಯಾನದ ಬಗೆಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ಸಿನಿಕತನವಾದೀತು. ಹಾಗಿದ್ದರೂ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಎಲ್ಲರೂ ಇದರ ಬಗೆಗೆ ಮಾತನಾಡುವ ರೀತಿಯನ್ನು ನೋಡಿದರೆ ಇದೂ ಒಂದು ತಾತ್ಕಾಲಿಕ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಇರಬಹುದೇ ಎನ್ನುವು ಅನುಮಾನಗಳು ಮೂಡುತ್ತದೆ.
ಮೊದಲನೆಯದಾಗಿ ಸ್ವಚ್ಛತೆ ಎಂದರೆ ಏನು ಎನ್ನುವುದರ ಬಗೆಗೆ ಸರ್ಕಾರಕ್ಕಾಗಲೀ ಮತ್ತು ಸಾರ್ವಜನಿಕರಿಗಾಗಲೀ ಸ್ಪಷ್ಟತೆ ಇದೆಯೇ ಎನ್ನುವ ಅಂಶದಿಂದಲೇ ನನ್ನ ಅನುಮಾನಗಳು ಶುರುವಾಗುತ್ತವೆ. ನಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಕಸಮುಕ್ತವನ್ನಾಗಿ ಮಾಡುವುದಷ್ಟೇ ಸ್ವಚ್ಛತೆ ಎಂದು ನಾವೆಲ್ಲಾ ಅಂದುಕೊಂಡಂತೆ ಕಾಣುತ್ತದೆ. ಹಾಗಿದ್ದರೆ ಹೀಗೆ ಒಟ್ಟುಮಾಡಿದ ಕಸವನ್ನು ಎಲ್ಲಿ ವಿಲೇವಾರಿ ಮಾಡುವುದು? ಕಳೆದ ಹಲವಾರು ವರ್ಷಗಳಿಂದ ಎಲ್ಲಾ ಮಹಾನಗರಗಳಲ್ಲಷ್ಟೇ ಅಲ್ಲ, ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಕಸ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿದೆ. ನಗರಗಳ ತುಂಬೆಲ್ಲಾ ಇನ್ನೂ ಕಸ ತುಂಬಿರುವಾಗಲೇ ಸಂಗ್ರಹಿಸಿರುವುದರ ವಿಲೇವಾರಿ ಇಷ್ಟು ದೊಡ್ಡ ಸಮಸ್ಯೆಯಾಗಿರುವಾಗ ಇನ್ನು ಇಲ್ಲಿನ ಪೂರ್ಣ ಕಸವನ್ನು ಒಟ್ಟು ಮಾಡಿದರೆ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ನೆನಪಿಸಿಕೊಂಡರೇ ಭಯವಾಗುತ್ತದೆ. ನಗರವಾಸಿಗಳೆಲ್ಲಾ ತಮ್ಮ ಉಚ್ಚಿಷ್ಟವನ್ನು ಸುತ್ತಮುತ್ತಲಿನ ಹಳ್ಳಿಯ ಜನರ ಜಮೀನಿನಲ್ಲಿ ಸುರಿಯುತ್ತಾ ಹೋದರೆ ಅವರೇನು ಹಂದಿಗಳಂತೆ ಬದುಕುವುದು ಸಾಧ್ಯವೇ? ಹೀಗೆ ಹಳ್ಳಿಗಳ ಪರಿಸರವನ್ನು ಕಲುಷಿತಗೊಳಿಸುವುದನ್ನಾದರೂ ಎಲ್ಲಿಯವರೆಗೆ ಮಾಡಲು ಸಾಧ್ಯ? ಈಗಾಗಲೇ ಈ ವಿಷಯದಲ್ಲಿ ಎಲ್ಲಾ ಕಡೆ ಹಳ್ಳಿಗರಿಂದ ತೀವ್ರ ಪ್ರತಿರೋಧಗಳು ಬರುತ್ತಿರುವುದನ್ನು ನೋಡಿದ ಮೇಲೆ ನಾವು ಕಲಿತಿರುವುದಾದರೂ ಏನು? ದಬ್ಬಾಳಿಕೆ, ಆಮಿಷಗಳ ಮೂಲಕ ಹಳ್ಳಿಗರ ಮನವೊಲಿಸಿ, ಆಗಾಗ ಜಾಗಗಳನ್ನು ಬದಲಾಯಿಸುತ್ತಾ ನಗರಗಳ ಕಸವನ್ನು ಅಲ್ಲಿ ಗುಡ್ಡೆಹಾಕುವುದನ್ನು ಬಿಟ್ಟರೆ ಇನ್ನೇನು ಮಾಡಲಾಗಿದೆ?
ನಮ್ಮ ಮೂಲಭೂತ ತೊಂದರೆ ಇರುವುದು ಸ್ವಾತಂತ್ರಾ ನಂತರ ನಾವು ಪಾಶ್ಚಿಮಾತ್ಯ ದೇಶಗಳ ಮಾದರಿಯನ್ನು ಕಣ್ಣುಮುಚ್ಚಿ ಅನುಸರಿಸುತ್ತಿರುವುದರಲ್ಲಿ. ಆ ದೇಶಗಳ ಬಳಿ ಇರುವ ಸ್ಥಳಾವಕಾಶ, ಸಂಪನ್ಮೂಲಗÀಳು, ಅವರ ಜೀವನ ಶೈಲಿ ಮತ್ತು ಜನಸಂಖ್ಯೆಗೆ ಅವರ ಮಾದರಿ ಸೂಕ್ತವಿರಬಹುದು. ನಮ್ಮ ಪರಿಸ್ಥಿತಿಗೆ ಹೊಂದಿಕೆಯಾಗಬಹುದಾದ್ದನ್ನು ನಾವೇಕೆ ಹುಡುಕಿಕೊಂಡಿಲ್ಲ? ಅಂತಹ ದೇಶಗಳೂ ಕೂಡ ವಿಷಯುಕ್ತ ಕಸವನ್ನು ಸಮುದ್ರಗಳಲ್ಲಿ ಸುರಿದು ವಿಶ್ವಪರಿಸರಕ್ಕೆ ಭಾರೀ ಅಪಾಯವನ್ನೊಡ್ಡುವುದಕ್ಕೆ ಮುನ್ನುಡಿ ಹಾಡುತ್ತಿವೆ. ಅಮೇರಿಕಾ ಮತ್ತು ಜಪಾನ್‍ಗಳ ಪ್ಲಾಸ್ಟಿಕ್ ಕಸದಿಂದ ಶಾಂತಸಾಗರದಲ್ಲಿ “ಗ್ರೇಟ್ ಪ್ಯಾಸಿಪಿಕ್ ಗಾರ್ಬೇಜ್ ಪ್ಯಾಚ್” ಎಂದು ಕುಪ್ರಸಿದ್ಧವಾಗಿರುವ ಸ್ಥಳವೊಂದು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದಿದ್ದರೆ ಎಲ್ಲಾ ದೇಶಗಳಿಗೂ ಈಗ ಉಳಿದಿರುವುದು ಎರಡೇ ಮಾರ್ಗಗಳು. ಒಂದು, ಪ್ರಕೃತಿಯಲ್ಲಿ ಸಹಜವಾಗಿ ಹಾಗೂ ತ್ವರಿತವಾಗಿ ಲೀನವಾಗದಂತಹ (ಪ್ರಮುಖವಾಗಿ ಪ್ಲಾಸ್ಟಿಕ್) ಮತ್ತು ಪ್ರಕೃತಿಗೆ ಅಪಾಯವನ್ನೊಡ್ಡುವ (ಪ್ರಮುಖವಾಗಿ ರಾಸಯನಿಕ) ಕಸದ ಉತ್ಪಾದನೆಯನ್ನು ತಕ್ಷಣದಿಂದ ಗಣನೀಯವಾಗಿ ಕಡಿಮೆ ಮಾಡುವುದು. ಎರಡು, ಪ್ರಕೃತಿಯಲ್ಲಿ ಲೀನವಾಗುವ ಕಸ ವಿಲೇವಾರಿಗೆ ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡದೆ ಅದನ್ನು ಪ್ರಾದೇಶಿಕ ಮಟ್ಟದಲ್ಲಿ ಮರುಬಳಕೆ ಮಾಡುವುದು. ನಮ್ಮ ಸರ್ಕಾರೀ ಕಾರ್ಯಕ್ರಮದಲ್ಲಿ ಇಂತಹ ದೂರಗಾಮೀ ಚಿಂತನೆಗಳು ಎಲ್ಲಿದೆ?
ಎರಡನೆಯದಾಗಿ, ಸರ್ಕಾರೀ ಕಾರ್ಯಕ್ರಮ ಅಂದರೆ ನಮ್ಮ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಲೂಟಿಹೊಡೆಯುವ ಯೋಜನೆ ಎನ್ನುವುದು ಭಾರತದಲ್ಲಿ ಒಪ್ಪಿಕೊಂಡ ಮಾದರಿ. ಎಲ್ಲಿಯವರೆಗೆ ಸ್ವಚ್ಛತೆ ಆಯಾಯ ಪ್ರದೇಶದ ಜನರ ಜವಾಬ್ದಾರಿಯಾಗಿರುವುದಿಲ್ಲವೋ ಅಲ್ಲಿಯವರೆಗೆ “ಸ್ವಚ್ಛ ಭಾರತ” ಎನ್ನುವುದೂ ಕೂಡ “ಗರೀಬೀ ಹಟಾವೋ”ನಂತೆ ಮತ್ತೊಂದು ಗಿಮಿಕ್ ಆಗಿ ಉಳಿಯುವುದರಲ್ಲಿ ಸಂದೇಹವೇ ಇಲ್ಲ. ಸರ್ಕಾರ ಶೌಚಾಲಯಗಳಿಗಾಗಿ ಮೀಸಲಿಟ್ಟರುವ ಎರಡು ಲಕ್ಷ ಕೋಟಿಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ನಮ್ಮ ಅಸ್ವಚ್ಛ ಕೈಗಳ ಸರ್ಕಾರೀ ವ್ಯವಸ್ಥೆ, ತನ್ನದೇ ಆದ ರೀತಿಯಲ್ಲಿ ಸ್ವಚ್ಛ ಮಾಡಿರುತ್ತದೆ! ನಮ್ಮ ಜನರೂ ಕೂಡ ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳದೆ ಹೀಗೆ ಸರ್ಕಾರದಿಂದ ಬರುವ ಹಣದಲ್ಲಿ ತಮ್ಮ ಪಾಲನ್ನು ಗಿಟ್ಟಿಸುವುದರಲ್ಲಿ ನಿರತರಾಗಿರುತ್ತಾರೆ.
ಮೂರನೆಯದು, ಶೌಚಾಲಯ ನಿರ್ಮಾಣವನ್ನು ಸರ್ಕಾರೀ ಕಾರ್ಯಕ್ರಮವನ್ನಾಗಿಸುವುದು ಅಪ್ರಬುದ್ಧವಾಗಿ ಯೋಚಿಸುವ ಭಾರತದ ರಾಜಕಾರಣಿಗಳಿಗೆ ಮಾತ್ರ ಸಾಧ್ಯ. ಶೌಚಾಲಯಗಳಿಲ್ಲದಿದ್ದಾಗ ಸ್ತ್ರೀಯರಿಗೆ ಬಹಳ ಅನಾನುಕೂಲವಾಗುವುದು ನಿಜ. ಹಾಗಂತ ಸರ್ಕಾರ ಏಕೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು? ನಮ್ಮ ಜನತೆಗೆ ಇದರ ಜವಾಬ್ದಾರಿ ಇರಬೇಕಲ್ಲವೇ? ಶೌಚಾಲಯ ಇಲ್ಲದ ಮನೆಗಳನ್ನು ಒಂದು ವರ್ಷದ ನಂತರ ಕೆಡವಲಾಗುತ್ತದೆ ಮತ್ತು ಇನ್ನು ಮುಂದೆ ಅಂತಹ ಮನೆಗಳನ್ನು ಕಟ್ಟುವಂತಿಲ್ಲ ಎಂದು ಕಾನೂನನ್ನು ಏಕೆ ರೂಪಿಸಬಾರದು? ಇದರಿಂದ ಆಗಬಹುದಾದ ಒಂದೇ ತೊಂದರೆ ಎಂದರೆ ನಮ್ಮ ರಾಜಕೀಯ ಪಕ್ಷಗಳ ಓಟ್‍ಬ್ಯಾಂಕ್‍ಗೆ ಭಾರೀ ಕನ್ನ ಬೀಳುವುದು ಮಾತ್ರ.
ಇಷ್ಟೇ ಅಲ್ಲ, ಇರುವ ಶೌಚಾಲಯಗಳನ್ನು ಶುದ್ಧೀಕರಿಸಲು ನಾವು ಅನುಸರಿಸುತ್ತಿರುವ ಮಾರ್ಗವಾದರೂ ಎಂತಹದು? ದಲಿತರ ತಲೆಗಳ ಮೇಲೆ ಮಲವನ್ನು ಹೊರಿಸಿ ಊರ ಹೊರಗೆ ಸಾಗಿಸುವುದು, ಒಳಚರಂಡಿಗಳ ಮೂಲಕ ಊರಿನ ಪಕ್ಕದಲ್ಲಿ ಹರಿಯುತ್ತಿರುವ ನದಿಗಳಿಗೆ ಅದನ್ನು ಸೇರಿಸುವುದು ಮುಂತಾದವು ಅಲ್ಲವೇ? ಇದು ಯಾವ ನಾಗರಿಕ ಮಾದರಿ ಅಂದ ಸರ್ಕಾರಿ ಯೋಚಿಸಿದಂತಿಲ್ಲ.
ನಮ್ಮ ದೇಶದ ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುವುದೇ ದುರ್ಭರವಾಗಿದೆ. ಇನ್ನು ಶೌಚಾಲಯಗಳ ಉಪಯೋಗಕ್ಕೆ ಸರ್ಕಾರ ನೀರನ್ನು ಎಲ್ಲಿಂದ ಸರಬರಾಜು ಮಾಡುತ್ತದೆ? ಬಯಲು ಪ್ರದೇಶಗಳಲ್ಲಿ ಮಲ ವಿಸರ್ಜಿಸುವ ಹಳ್ಳಿಗರು ಅಲ್ಲೇ ಇರುವ ಎಲೆಗಳಿಂದ ಒರೆಸಿಕೊಂಡು ಬರುವುದು 21 ಶತಮಾನದ ಭಾರತದಲ್ಲಿ ಅಪರೂಪವಲ್ಲ. ಇದು ಟಿಶ್ಯೂ ಪೇಪರ್‍ನ ಪ್ರಾದೇಶಿಕ ಮಾದರಿ ಅಂದುಕೊಳ್ಳಬಹುದು ಬಿಡಿ! ಇಂತಹ ಪರಿಸ್ಥಿತಿಯಲ್ಲಿ ನನ್ನ ಕುತೂಹಲವೆಂದರೆ ಕಟ್ಟಿಸಿರುವ ಶೌಚಾಲಯಗಳ ಸ್ವಚ್ಛತೆಯ ಜವಾಬ್ದಾರಿಯನ್ನೂ ಸರ್ಕಾರವೇ ಹೊತ್ತುಕೊಳ್ಳುವುದೋ ಹೇಗೆ ಎನ್ನುವುದು. ಶೌಚಾಲಯಗಳು ಗಬ್ಬೆದ್ದು ಹೋದಾಗ ನಿಧಾನವಾಗಿ ಜನ ಮತ್ತೆ “ಬಯಲು ಕಡೆಗೆ” ಅಥವಾ “ಬೆಟ್ಟದ ಕಡೆಗೆ” ಹೋಗುವ ತಮ್ಮ ಅಭ್ಯಾಸವನ್ನು ಮುಂದುವರೆಸುತ್ತಾರೆ. ಸ್ವಚ್ಛವಿರದ ಶೌಚಾಲಯಗಳಿಗಿಂತ ಬಯಲು ಪ್ರದೇಶ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸುರಕ್ಷಿತ ಎಂದು ನಮ್ಮ ಜನ ಶತಶತಮಾನಗಳ ಅನುಭವದಿಂದ ಕಂಡುಕೊಂಡಿದ್ದಾರೆ.
ಕಸವಿಲೇವಾರಿಗಿಂತ ನಮಗೆ ಕೂಡಲೇ ಬೇಕಾಗಿರುವುದು ನಮ್ಮ ನೀರು ಗಾಳಿಗಳ ಶುದ್ಧತೆ. ಯಾರ ಕಣ್ಣಿಗೂ ಬೀಳದಂತೆ ಇವುಗಳಿಗೆ ಅಪಾಯಕಾರೀ ರೀತಿಯಲ್ಲಿ ನಾವು ವಿಷ ತುಂಬುತ್ತಿದ್ದೇವೆ. ಕಸದಂತೆ ಇದು ನಮ್ಮ ಕಣ್ಣೆದುರಿಗೆ ರಾಚುವುದಿಲ್ಲ. ಹಾಗಾಗಿ ಜನಸಾಮಾನ್ಯರಿಗೆ ಇದರ ಅಪಾಯಗಳ ಅರಿವೂ ಕೂಡ ಇಲ್ಲ. ದುರಂತವೆಂದರೆ ಜನರ ಓಟುಗಳು ನೀರು ಗಾಳಿಯ ಸ್ವಚ್ಛತೆಯ ಮೇಲೆ ಆಧಾರಿತವಾಗಿಲ್ಲ ಎಂದ ಮೇಲೆ ರಾಜಕಾರಿಣಿಗಳೇಕೆ ಅದರ ಬಗೆಗೆ ಏಕೆ ಯೋಚಿಸುತ್ತಾರೆ?
ಎಲ್ಲಾ ರೀತಿಯ ಸ್ವಚ್ಛತೆಗಿಂತ ನಮಗೆ ಬಹಳ ತುರ್ತಾಗಿ ಅಗತ್ಯವಿರುವುದು ಬಸವಣ್ಣ ಹೇಳುವ ಅಂತರಂಗ ಶುದ್ಧಿ ಅಥವಾ ಗಾಂಧೀಜಿ ಹೇಳುವ ಆತ್ಮಶುದ್ಧಿ. ಕಾಂಗ್ರೆಸ್ ಅಧಿವೇಶನದಲ್ಲಿ ಕಕ್ಕಸ್ಸುಗಳನ್ನು ಶುಚಿಯಾಗಿಡುವ ಕಾಯಕದ ಮೂಲಕ ತಮ್ಮ ಆತ್ಮಶುದ್ಧಿಯ ಪ್ರಕ್ರಿಯೆಯನ್ನು ಗಾಂಧೀಜಿ ಸಾಂಕೇತಿಕವಾಗಿ ಆರಂಭಿಸಿದ್ದರು. ನಮ್ಮ ರಾಜಕಾರಣಿಗಳಿಂದ ಇಂತಹ ಆತ್ಮಶುದ್ಧಿಯನ್ನು ನಿರೀಕ್ಷಿಸುವ ಮೊದಲು ನಮ್ಮಲ್ಲಿ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಸ್ವಚ್ಛ ಭಾರತದ ಅಭಿಯಾನವನ್ನು ನಮ್ಮ ಅಂತರಂಗಳಿಂದ ಪ್ರಾರಂಭಿಸದಿದ್ದರೆ ಉಳಿಯುವುದೆಲ್ಲವೂ ಸರ್ಕಾರೀ ಪ್ರಹಸನ ಮಾತ್ರ.
ನಡಹಳ್ಳಿ ವಸಂತ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!