Home Blogroll ವಸ್ತ್ರ ಸಂಹಿತೆ ಮೊದಲು ಗಂಡಸರಿಗೆ!

ವಸ್ತ್ರ ಸಂಹಿತೆ ಮೊದಲು ಗಂಡಸರಿಗೆ!

0

ನಾನಾಗ ಪ್ರೌಢಶಾಲೆಯಲ್ಲಿದ್ದೆ. ನಾವಿದ್ದ ಹಳ್ಳಿಯಂತಹ ಊರಿನಲ್ಲಿ ಚಡ್ಡಿ ಹಾಕಿಕೊಂಡು ಶಾಲೆಗೆ ಬರುವುದೇ, ಗಂಗಾವತಿ ಪ್ರಾಣೇಶ್ ಹೇಳುವಂತೆ ಒಂದು ವೈಭವವಾಗಿತ್ತು. ಹೆಚ್ಚಿನವರ ಚಡ್ಡಿ ಕೂಡ ಕಡಲೆ ಹಿಟ್ಟು ಖಾಲಿಯಾದ ಮೇಲೆ ಉಳಿಯುವ ಚೀಲದಿಂದ ಹೊಲೆಸಿದ್ದು. ಆಗೊಂದು ದಿನ ನಾವು ನಾಲ್ಕೈದು ಸ್ನೇಹಿತರು ಶಾಲೆಗೆ ಪಂಚೆ ಉಟ್ಟುಕೊಂಡು ಬರಬೇಕೆಂದು ನಿರ್ಧರಿಸಿದೆವು. ಆದರೆ ನಾವು ಎಂತಹ ಪಂಚೆ ಎಂದು ಮಾತನಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದೆವು. ಮೂವರು ಬಿಳಿಯ ಮುಂಡು ಪಂಚೆಯಲ್ಲಿ ಬಂದರೆ ಉಳಿದಿಬ್ಬರು ಪಟ್ಟಿಪಟ್ಟಿ ಇರುವ ಲುಂಗಿ ಕಟ್ಟಿಕೊಂಡು ಬಂದುಬಿಟ್ಟರು. ಪ್ರಾರ್ಥನೆಯ ಸಮಯದಲ್ಲೇ ಇದನ್ನು ಗುರುತಿಸಿದ ಮುಖ್ಯೋಪಾಧ್ಯಯರು ಅವರಿಬ್ಬರನ್ನೂ ಮನೆಗೆ ಕಳುಹಿಸಿದರು. ಉಳಿದ ಮೂವರೂ ಸಂಜೆಯವರೆಗೆ ಕಷ್ಟದಿಂದ ಪಂಚೆಯನ್ನು ಜಾರಿಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡೇ ಕುಳಿತದ್ದೆವು. ಮರುದಿನದಿಂದ ಇಂತಹ ಪ್ರಯೋಗಗಳನ್ನು ಮಾಡುವ ಧೈರ್ಯವಾಗಲೇ ಇಲ್ಲ!
ಈ ವಸ್ತ್ರ ಸಂಹಿತೆ ಎನ್ನುವುದು ಎಲ್ಲ ಕಾಲ ದೇಶಗಳಲ್ಲೂ ಇರುವುದೇ ಎನ್ನುವುದಕ್ಕಾಗಿ ಮೇಲಿನ ಘಟನೆಯನ್ನು ಹೇಳಬೇಕಾಯಿತು. ಹೆಚ್ಚಿನ ಕಡೆ ಇದನ್ನು ಇದೇ ಹೆಸರಿನಲ್ಲಿ ವ್ಯವಸ್ಥಿತವಾಗಿ, ಕಡ್ಡಾಯವಾಗಿ ಜಾರಿಗೊಳಿಸಿರುವುದಿಲ್ಲ. ಆದರೆ ಅಲಿಖಿತ ರೂಪದಲ್ಲಿರುತ್ತದೆ, ಅಷ್ಟೇ. ಹೆಣ್ಣು ಮಕ್ಕಳು ಸಮಾರಂಭಗಳೆಂದರೆ ರೇಶ್ಮೆ ಸೀರೆ, ಆಭರಣಗಳಿಂದ ಅಲಂಕೃತರಾಗುವುದು, ಮೀಟಿಂಗ್‍ಗಳಿಗೆ ಸೂಟಿನಲ್ಲೇ ಬರುವ ಕಂಪನಿ ಅಧಿಕಾರಿಗಳು, ರಜಾದಿನಗಳಗಳಲ್ಲಿ ಟೀಷರ್ಟ್ ಜೀನ್ಸ್ ನಲ್ಲಿ ಮಿಂಚುವ ಪಟ್ಟಣದ ಮಧ್ಯವಯಸಿಗರು-ಹೀಗೆ. ಎಷ್ಟೋ ಮಠ, ದೇವಸ್ಥಾನಗಳಲ್ಲಿ ಪ್ರಾಂಗಣವನ್ನು ದಾಟಬೇಕಾದರೆ ಗಂಡಸರು ಪಂಚೆಯಲ್ಲಿ ಟಾಪ್‍ಲೆಸ್ ಅಗಿಯೇ ಬರಬೇಕು!
ಹಾಗೆ ನೋಡಿದರೆ ವ್ಯಕ್ತಿ ಸ್ವಾತಂತ್ರದ ಹರಿಕಾರರೆಂದು ಕರೆಸಿಕೊಳ್ಳುವ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿಯೂ ಕೂಡ ಅಲಿಖಿತ ವಸ್ತ್ರಸಂಹಿತೆ ಜಾರಿಯಲ್ಲಿದ್ದೇ ಇರುತ್ತದೆ. ನಮಗೆ ಸಂವಿಧಾನದ ಮೂಲಧಾತುವನ್ನು ಒದಗಿಸಿದ ಬ್ರಿಟಿಷರು ಕೂಡ ಉಡುಪಿನ ವಿಚಾರದಲ್ಲಿ ಆಷಾಡಭೂತಿಗಳೆನ್ನಿಸುವ ಮಟ್ಟದ ಸಂಪ್ರದಾಯವಾದಿಗಳು. ಎಲ್ಲ ಕಡೆಯ ಚರ್ಚ್‍ಗಳಲ್ಲಿ ವಸ್ತ್ರಸಂಹಿತೆ ಇದೆ. ಸ್ಕರ್ಟ್ ಧರಿಸಿದರೂ ಅದರ ಉದ್ದ ಮೊಳಕಾಲಿಗಿಂತ ಕೆಳಗಿರಲೇಬೇಕು. ಮಸೀದಿಗಳು, ಗುರುದ್ವಾರಗಳಲ್ಲೂ ಅಲಿಖಿತವಾದ ನಿಯಮಗಳಿರುತ್ತವೆ.
ಹಾಗಂತ ಎಲ್ಲ ಕಡೆಯೂ ಇರುವ ನಿಯಮಗಳನ್ನು ನಾವು ಪಾಲಿಸಬೇಕೆಂದೇನೂ ಇಲ್ಲ. ಪ್ರಶ್ನೆ ಇರುವುದು ಇದರ ಔಚಿತ್ಯದ್ದು ಮಾತ್ರ. ಬರೀ ಧಾರ್ಮಿಕ ಸ್ಥಳಗಳು, ವಿದ್ಯಾಸಂಸ್ಥೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೂ ವಸ್ತ್ರಸಂಹಿತೆಯ ಅಗತ್ಯವಿದೆ. ನಾಗರಿಕ ಸಮಾಜವೊಂದರಲ್ಲಿ ಇದು ಚರ್ಚೆಯ ವಿಚಾರವಾಗಬಾರದು. ಹಾಗೆ ಆಗುವ ಪರಿಸ್ಥಿತಿ ಬಂದಿದೆ ಎಂದರೆ ಅಲ್ಲಿ ವ್ಯಕ್ತಿ ಸ್ವಾತಂತ್ರವನ್ನು ಅತಿರೇಕಕ್ಕೊಯ್ಯಲಾಗುತ್ತದೆ ಅಥವಾ ಸಂಪ್ರದಾಯವಾದಿಗಳ ದರ್ಬಾರು ನಡೆಯುತ್ತಿದೆ ಎನ್ನಿಸುತ್ತದೆ.
ಶ್ಲೀಲ ಅಶ್ಲೀಲಗಳೆಲ್ಲಾ ವ್ಯಕ್ತಿನಿಷ್ಟವಾದದ್ದು. ಇದನ್ನೆಲ್ಲಾ ಚರ್ಚಿಸುತ್ತಾ ಕೂತರೆ ಯಾವ ತೀರ್ಮಾನಗಳಿಗೂ ಬರುವುದು ಅಸಾಧ್ಯ. ಬಹುಷಃ ಬಟ್ಟೆ ಮೈಮುಚ್ಚುವಂತಿರಬೇಕು ಎನ್ನುವದಷ್ಟೇ ವಿಷಯವಾಗಿದ್ದರೆ ಯಾರದ್ದೂ ತಕರಾರುಗಳಿರುವುದಿಲ್ಲ. ಈ ಮೈಮುಚ್ಚುವ ಬಟ್ಟೆಯಲ್ಲಿಯೂ ಇಂತಾದ್ದನ್ನೇ ಧರಿಸಬೇಕೆಂದು ಕಡ್ಡಾಯವಾಗಿಸಿದಾಗ ಪ್ರತಿಭಟನೆಗಳು ಶುರುವಾಗುತ್ತವೆ. ಉದಾಹರಣೆಗೆ ಸ್ತ್ರೀಯರ ಪೂರ್ಣ ಮೈಮುಚ್ಚುವ ಜೀನ್ಸ್, ಟೀಷರ್ಟ್‍ಗಳನ್ನೇಕೆ ಧರಿಸಬಾರದು? ಇದು ಮೈಗೆ ಅಂಟಿಕೊಂಡು ಅವರ ಮೈ ಮಾಟವನ್ನು ಎತ್ತಿ ತೋರಿಸುವುದರಿಂದ ಪ್ರಚೋದನಕಾರಿಯಗುತ್ತದೆ ಎನ್ನುವುದು ಸಂಪ್ರದಾಯವಾದಿಗಳ ಅಂಬೋಣ. ಪ್ರಚೋದನೆಗಳ ಹುಡುಕಾಟದಲ್ಲಿರುವವರು ಸೀರೆ, ಸೆಲ್ವಾರ್‍ಗಳಲ್ಲಿಯೂ ಅದನ್ನು ಕಂಡುಕೊಳ್ಳುತ್ತಾರೆ! ಹಾಗೊಮ್ಮೆ ಹೆಣ್ಣುಮಕ್ಕಳ ಬಿಗಿ ಉಡುಪು ಪ್ರಚೋದನಕಾರಿಯಾದರೆ, ಗಂಡಸರ ಬಿಗಿ ಉಡುಪು ಯಾಕೆ ಸಹನೀಯವಾಗಬೇಕು? ಅವರಿಗೆಲ್ಲಾ ತಮ್ಮ ಮೀನಖಂಡಗಳನ್ನು ತೋರಿಸುವ ಬರ್ಮುಡಾ ಚಡ್ಡಿಗಳನ್ನು ಧರಿಸಲು ಅವಕಾಶ ಕೊಡುವುದು ಏಕೆ?!!
ಹಾಗಾಗಿ ವಸ್ತ್ರಸಂಹಿತೆಯನ್ನು ಜಾರಿ ಮಾಡುವುದೇ ಆದರೆ ಅದು ಸ್ತ್ರೀ ಪುರುಷರಿಬ್ಬರಿಗೂ ಸಮಾನವಾಗಿರಬೇಕು ಮತ್ತು ಔಚಿತ್ಯಾಧಾರಿತವಾಗಿರಬೇಕು. ಈ ದೃಷ್ಟಿಯಿಂದ ನೋಡಿದರೆ ಪುರುಷರಿಗೆ ಸಂಹಿತೆಯ ಅಗತ್ಯ ಹೆಚ್ಚೇ ಇದೆ! ದಕ್ಷಿಣದ ಹೆಚ್ಚಿನ ದೇವಸ್ಥಾನಗಳಲ್ಲಿ ಜಾರಿಯಲ್ಲಿರುವ ಗಂಡಸರ ಟಾಪ್‍ಲೆಸ್ ಪ್ರದರ್ಶನ ರದ್ದಾಗಬೇಕು! ನಮ್ಮ ವೈದಿಕರುಗಳು, ಮಠಾಧೀಶರುಗಳು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಗುಡಾಣ ಹೊಟ್ಟೆಗಳನ್ನು ಪ್ರದರ್ಶನ ಮಾಡದೆ ಮೈಮುಚ್ಚಿಕೊಳ್ಳಬೇಕು. ಜೈನ ಮುನಿಗಳೂ ಕೂಡ ಇದಕ್ಕೆ ಹೊರತಾಗಬಾರದು.
ಸ್ತ್ರೀಯರ ವಸ್ತ್ರಸಂಹಿತೆಯ ವಿಚಾರದಲ್ಲಿ ಮುಸ್ಲಿಂರದ್ದು ಒಂದು ಅತಿರೇಕವಾದರೆ, ವ್ಯಕ್ತಿಸ್ವಾತಂತ್ರದ ಪ್ರತಿಪಾದಕರದ್ದು ಇನ್ನೊಂದು. ಇವರಿಬ್ಬರೂ ತಮ್ಮ ತಮ್ಮ ಪ್ರತಿಷ್ಠೆಯ ಪ್ರಶ್ನೆಗಾಗಿ ಹಿಂಸೆಗೂ ಇಳಿಯುವುದನ್ನು ಸಹಿಸುವ ನಮ್ಮ ಸರ್ಕಾರಗಳು ಮತ್ತು ಜನತೆ, ನಮ್ಮ ಚಿಂತನೆ ಮತ್ತು ಕ್ರಿಯೆಗಳಲ್ಲಿನ ಅಸ್ಪಷ್ಟತೆಯ ದ್ಯೋತಕ.
ವಸಂತ್ ನಡಹಳ್ಳಿ