19.1 C
Sidlaghatta
Sunday, December 22, 2024

ವಧು ಸಮಸ್ಯೆಯತ್ತ

- Advertisement -
- Advertisement -

ಮಲೆನಾಡಿನಲ್ಲಿ ಅದೂ ವಿಶೇಷವಾಗಿ ಕೃಷಿ ಕುಟುಂಬಗಳಿಗೆ, ವಧುಗಳ ಕೊರತೆ. ಹಳ್ಳಿಯಲ್ಲಿ ಕೃಷಿ ಅಥವಾ ಇನ್ನಿತರ ಚಿಕ್ಕ ಪುಟ್ಟ ವೃತ್ತಿಗಳಲ್ಲಿ ತೊಡಗಿದವರಿಗೆ ಹೆಣ್ಣುಗಳು ಸಿಕ್ಕುತ್ತಿಲ್ಲ, ಒಪ್ಪುತ್ತಿಲ್ಲ. ಕಾಶ್ಮೀರದಿಂದಲಾದರೂ ಸರಿ ವಧುಗಳನ್ನು ಆಮದುಮಾಡಿಕೊಳ್ಳಬೇಕಾದ ಅನಿವಾರ್ಯತೆ ಅಥವಾ ಅಗತ್ಯ, ಅದಕ್ಕಾಗಿ ಸಂಘಟನೆಗಳ ಮೂಲಕ ಪ್ರಯತ್ನ, ಯಶಸ್ಸು ಸಿಕ್ಕೀತೆ? ಕಾದುನೋಡಬೇಕು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು, ಹಳ್ಳಿಗಳಲ್ಲಿನ ಮತ್ತು ಚಿಕ್ಕಪುಟ್ಟ ಪಟ್ಟಣಗಳಲ್ಲಿನ ಗಂಡುಗಳಿಗೂ ವಧುಗಳ ಬರ. ಪರಿಹಾರ ಕಾಣದೆ ಕಂಗೆಟ್ಟು ಅಶ್ವತ್ಥವೃಕ್ಷ ಸುತ್ತುವುದು ಒಂದು ಕಡೆ ಸಾಗುತ್ತಿದ್ದರೆ, ಇನ್ನೊಂದು ಕಡೆಯಿಂದ ಕಳೆದ ವರ್ಷ ಮದುವೆಯಾದ, ಕಳೆದು ತಿಂಗಳು ಮದುವೆಯಾಗಿ ಹೋದವರು, ಈಗ ಬೇರೆ ಬೇರೆಯಾಗಿದ್ದಾರಂತೆ, ವಿಚ್ಚೇದನವಾಯಿತಂತೆ, ಅರ್ಜಿ ಹಾಕಿದ್ದಾರಂತೆ ಎಂಬಿತ್ಯಾದಿ ಮಾತುಗಳು ಬೆಂಗಳೂರು ಮತ್ತು ದೂರದ ಶಹರಗಳಿಂದ ಕೇಳಿಬರುತ್ತಿದ್ದು, ಅಲ್ಲಿಗೆ ಆಸೆಪಟ್ಟು ಹೆಣ್ಣು ಕಳಿಸಿದ ಹೆಣ್ಣು ಹೆತ್ತವರು ಇಲ್ಲಿ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಇದ್ದರೆ, ಅಲ್ಲಿ ದುಡಿಮೆಯಲ್ಲಿರುವವರು ಇದೆಲ್ಲಾ ಮಾಮುಲಿ ಎಂಬಂತೆ ಜಾಲಿಯಾಗಿದ್ದಾರೆಂಬುದು ಸತ್ಯವೋ, ಸುಳ್ಳೋ ಮಾತುಗಳಂತೂ ದಿನನಿತ್ಯ ಕೇಳಿಬರುತ್ತಿರುವುದು ಸತ್ಯ.
ವಧುವಿನ ಕೊರತೆಯ ಸಮಸ್ಯೆಯೋ, ವಧುವಿನದ್ದೆ ಸಮಸ್ಯೆಯೋ ಅರ್ಥವಾಗದ ಸಂಗತಿಯಾದಂತಿದೆ, ಗಂಡು ಹೆಣ್ಣಿನ ಅನುಪಾತದಲ್ಲಾದ ವ್ಯತ್ಯಾಸ, ಹಳ್ಳಿಗಳಲ್ಲಿರುವ ಗಂಡುಗಳಿಗೆ ಹೆಣ್ಣುಗಳೆ ಸಿಗದಂತೆ ಆಗಿರುವುದಕ್ಕೆ ಕಾರಣವೇ? ನಿಜವಾಗಿ ಯೋಚಿಸಿದರೆ ವ್ಯತ್ಯಾಸ ಚಿಕ್ಕದು, ಆದರೆ ಸಮಸ್ಯೆ ದೊಡ್ಡದಾಗಿದೆ. ಹಾಗಂತ ಸಮಸ್ಯೆಯ ವೈಭವೀಕರಣ ಮಾಡಲಾಗುತ್ತದೆ ಎಂದು ಕೂಡ ಹೇಳುವಂತಿಲ್ಲವಾಗಿದೆ. ಇಂಥ ಸಮಸ್ಯೆಯ ಹಿಂದೆ, ಆಧುನಿಕ ವಧುಗಳ ಆಧುನಿಕ ದೃಷ್ಟಿಕೋನ ಕೂಡ ಕೆಲಸಮಾಡುತ್ತಿದೆ. ಹಳ್ಳಿ ಮತ್ತು ಚಿಕ್ಕ, ಪುಟ್ಟ ಪಟ್ಟಣಗಳ ಹೆಣ್ಣುಮಕ್ಕಳಿಗೆ, ನೌಕರಿ ಮತ್ತು ನಗರದ ಪ್ರಬಲ ಆಕರ್ಷಣೆ, ಅದೂ ಸಾಪ್ಟವೇರ್, ಮಲ್ಟಿನ್ಯಾಶನಲ್ ಬೆಂಗಳೂರು ಅಥವಾ ಅಂಥ ಲಗ್ನವಾಗುವವರು ಉದ್ಯೋಗದಲ್ಲಿರಬೇಕು, ಬೆಂಗಳೂರು ಅಥವಾ ಅಂಥ ಪಟ್ಟಣಗಳಲ್ಲೆ ಇರಬೇಕು. ಧಾರವಾಡ, ಬೆಳಗಾವಿಗಳು ಯೋಗ್ಯವಲ್ಲ!.
ಕೈತುಂಬ ಸಂಬಳ ತರಬೇಕು. ತಾನು ಮತ್ತು ತನ್ನ ಗಂಡ ಮಾತ್ರ ಖುಷಿಯಾಗಿ ಪಟ್ಟಣಿಗರಾಗಿರಬೇಕು. ಹೀಗೆ ಯೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಹಳ್ಳಿಗಳತ್ತ ದೃಷ್ಟಿ ಹರಿಸುವವರ ಸಂಖ್ಯೆ ಸಹಜವಾಗಿ ಇಳಿಮುಖವಾಗುತ್ತಿದೆ. ಅಲ್ಲಿ ಅವರೆಷ್ಟು ಹೊತ್ತು ಹೊರಗಡೆ ದುಡಿಯುತ್ತಿರುತ್ತಾರೆ? ಎಷ್ಟು ಹೊತ್ತು ಮನೆಯಲ್ಲಿರುತ್ತಾರೆ? ಎಷ್ಟು ಬಾರಿ ಮನೆಯಲ್ಲೇ ಊಟ-ತಿಂಡಿ ಮಾಡುತ್ತಾರೆ? ದಿನೇ ದಿನೇ ಅವರ ಆರೋಗ್ಯವೇನಾಗುತ್ತಿದೆ ಎಂದು ಯಾರು ಯೋಚಿಸುವುದೇ ಇಲ್ಲ. ಹಣದ ಎದುರು ಎಲ್ಲವೂ ಗೌಣವಾಗುತ್ತದೆ.
ಇಲ್ಲಿನ ಗ್ರಾಮೀಣ ಪ್ರದೇಶದ ಮತ್ತು ಚಿಕ್ಕ, ಪುಟ್ಟ ಪಟ್ಟಣಗಳ ಹುಡುಗಿಯರೆಲ್ಲ, ಕಾಲೇಜು ಶಿಕ್ಷಣದ ಲಭ್ಯತೆ ಹತ್ತಿರದಲ್ಲೆ ಇರುವ ಕಾರಣದಿಂದ ಮತ್ತು ಕೆಲವೂಮ್ಮೆ ಮನೆಯಲ್ಲಿ ಹೊತ್ತು ಹೋಗದ ಕಾರಣದಿಂದ ಹಾಗೂ ಮದುವೆ ಮಾಡಲು ಇನ್ನು ಕೆಲ ವರ್ಷಗಳು ಕಳೆಯಬೇಕೆಂಬ ಕಾರಣದಿಂದ ಯಾವುದಾದರು ಒಂದು ಡಿಗ್ರಿಯನ್ನು ಪೂರೈಸುತ್ತಾರೆ. ಹಾಗೇ ಸ್ಥಳೀಯವಾಗಿ ಸಾಧ್ಯವಾದರೆ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ದೂರಶಿಕ್ಷಣದ ಉಪಯೋಗವನ್ನು ಪಡೆಯುತ್ತಾರೆ. ಹೊರ ಪ್ರಪಂಚದ ಆಕರ್ಷಣೆ ಅಧಿಕವಾಗುತ್ತದೆ. ತಮ್ಮೊಂದಿಗಿದ್ದವರು ಬೆಂಗಳೂರಿಗೆ ಮದುವೆಯಾಗಿ ಅಥವಾ ಕೆಲಸಕ್ಕಾಗಿ ತೆರಳಿದರೆ, ತಾವೂ ಹಾಗೇ ತೆರಳಬೇಕೆಂಬ ಸಾಂಕ್ರಾಮಿಕ ರೋಗಕ್ಕೆ ತುತ್ತಾದದ್ದರಿಂದ ಇಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಬಹತೇಕ ಹುಡುಗರಿಗೆ ಹೆಣ್ಣುಗಳು ಲಭ್ಯವಾಗುವುದಿಲ್ಲ. ಹುಡುಗರು ಕೂಡ ಡಿಗ್ರಿ ಪಡೆದೂ ಊರಿನಲ್ಲೇ ಇರಲು ದೊಡ್ಡ ಮನಸ್ಸು ಮಾಡಿ ಇದ್ದರೆ, ಅವರಿಗೆ ‘ಮದುವೆ’ ಕನಸಿನ ಮಾತಾಗುತ್ತಿರುವುದರಿಂದ, ಅವರೆಲ್ಲರೂ ಬೆಂಗಳೂರಿನತ್ತ ಗುಳೆ ಹೋಗುತ್ತ, ಪ್ರತಿ ಹಳ್ಳಿಗಳು ವೃದ್ಧರಿಗಷ್ಟೆ ಸೀಮಿತವಾಗಿ, ಒಟ್ಟಾರೆ ಪಾಳು ಬೀಳುತ್ತದೆ. ಕೆಲಸ ಮಾಡುವ ಚೈತನ್ಯವಿರುವವರು ಪಟ್ಟಣಕ್ಕೆ ಕೈಲಾಗದವರು, ಕೈ ಸಾಗದವರು ಹಳ್ಳಿಗಳಲ್ಲಿ, ಮತ್ತೆ ಈ ದೇಶ ಹಳ್ಳಿಗಳ ದೇಶ!
ಹಿಂದೆ ಬಯಲು ಸೀಮೆಯ ಕಡೆ ಹುಡುಗಿಯೊಬ್ಬಳು ಹುಡುಗನನ್ನು ಆಯ್ಕೆಮಾಡಿಕೊಳ್ಳುವಾಗ ಒಂದು ಪದ್ಧತಿಯಿದ್ದಿತ್ತಂತೆ. ಅದು ಆ ಹುಡುಗನಿಗೆ ಹಸ್ತಲಾಘವ ಮಾಡುವ ಮುಖಾಂತರ, ಅದು ಗಟ್ಟಿಯಾಗಿ, ಬಿರುಸಾಗಿದ್ದರೆ, ಹುಡುಗ ಯೋಗ್ಯ ‘ಅವನು ಕಾಯಕದಲ್ಲಿ ತೊಡಗಿದವನು. ಅದೇ ಹಸ್ತ ಮೃದುವಾಗಿದ್ದ ಪಕ್ಷದಲ್ಲಿ ಆತ ಮೈಗಳ್ಳ, ಸೋಮಾರಿ ಅಂಥವನನ್ನವರು ತಿರಸ್ಕರಿಸುತ್ತಿದ್ದರಂತೆ. ಆದರೆ ಇಂದಿನ ಸಂದರ್ಭದಲ್ಲಿ ಮೃದು ಹಸ್ತವೇ ಎಲ್ಲರ ಬಯಕೆ ಯಾವುದೇ ಹುಡುಗಿಯಾಗಲಿ, ಅವಳನ್ನು ಹೆತ್ತವರಾಗಲಿ ಹುಡುಕುವುದು ಸಾಫ್ಟ್‍ವೇರ್‍ಗಳನ್ನು, ಪಟ್ಟಣವಾಸಿಗಳನ್ನು, ಡಾಲರ್ ತರುವವರನ್ನು, ಇದರೊಟ್ಟಿಗೆ ಹುಡುಗನಿಗೆ ಅವನ ತಾಯಿ, ತಂದೆಯರ ಜವಬ್ದಾರಿ ಇರಬಾರದು. ಊರಲ್ಲಿ ಸಾಕಷ್ಟು ಆಸ್ತಿ ಇದ್ದರೆ ಒಳ್ಳೆಯದು. (ಅನಿವಾರ್ಯವಾದಾಗ ಬಳಸಿಕೊಳ್ಳಲು, ಪಿಕ್‍ನಿಕ್‍ಗೆ ಬಂದು ಹೋದ ಹಾಗೆ ಒಂದು ಹೋಗಲು) ಹಾಗೇ ಪೇಟೆಯಲ್ಲಿನ ಹುಡುಗಿಯರು, ಹುಡುಗರು ತಮಗಿಷ್ಟ ಬಂದವರನ್ನು ಪ್ರೀತಿಸಿ ಮದುವೆಯಾಗುತ್ತಾರೆಂದಾಗಲು ಜಾತಿ, ಪಂಗಡ ಇತ್ಯಾದಿಗಳ ಪ್ರಶ್ನೆ ಅಪ್ರಸ್ತುತವೇ, ಅದೇನಿದ್ದರೂ ಹಳ್ಳಿಗಳ ಸೊತ್ತು. ಇಲ್ಲೂ ಸಡಿಲಿಕೆ ಪ್ರಾರಂಭವಾಗಿದ್ದರು ಆ ಪ್ರಮಾಣದಲ್ಲಿ ಬಂದಿಲ್ಲ.
ಆಶ್ಚರ್ಯದ ಸಂಗತಿಯೆಂದರೆ ಯಾವುದೇ ಹುಡುಗಿ ಅಥವಾ ಹೆತ್ತವರು, ಹುಡುಗನೊಬ್ಬನನ್ನು ಹುಡುಕುವ ಸಂದರ್ಭದಲ್ಲಿ ಆ ಹುಡುಗ ಯೋಗ್ಯನೇ? ಪ್ರಾಮಾಣಿಕನೇ? ಹೃದಯವಂತಿಕೆ ಉಳ್ಳವನೇ? ಕೌಟುಂಬಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲವನೇ? ಮಡದಿಯಾದವಳಿಗೂ ಅಗತ್ಯವಾದ (ಅಡಂಬರವಿಲ್ಲ) ಅನುಕೊಲತೆಗಳನ್ನು ಒದಗಿಸಿಕೊಡಬಲ್ಲವನೇ? ಎಂದು ವಿಚಾರಿಸುವುದಿಲ್ಲ. ಮೂಲಭೂತವಾಗಿ ಬೇಕಾದ ಗುಣಗಳನ್ನು ಗ್ರಹಿಸುವುದನ್ನು ಬಿಟ್ಟು ಹೀಗಾದಾಗ ಸಹಜವಾಗಿಯೇ, ಗ್ರಾಮೀಣ ಪ್ರದೇಶದ ಕೃಷಿ, ಇನ್ನಿತರ ವೃತ್ತಿಗಳಲ್ಲಿರುವ ಯೋಗ್ಯ, ಸಂಭಾವಿತ, ಸಶಕ್ತ ಗಂಡುಗಳಿಗೆ ಹೆಣ್ಣುಗಳು ದೊರಕುವುದಿಲ್ಲ, ವಿಪರ್ಯಾಸದ ಇನ್ನೊಂದು ಸಂಗತಿ ಎಂದರೆ, ಮನೆಯಲ್ಲಿರುವ ಮಗಳಿಗೆ ಬೆಂಗಳೂರಿನ ಸಾಫ್ಟ್‍ವೇರ್ ಹುಡುಗನೇ ಬೇಕು. ಮನೆಯಲ್ಲಿರುವ ಮಗನಿಗೆ ಯಾರಾದರೂ ಒಳ್ಳೆಯ ಹುಡುಗಿಯನ್ನು ಕೊಡಬೇಕು! ತಮಗಾದರೆ ಒಂದು ಮಾನದಂಡ, ಬೇರೆಯವರಿಗಾದರೆ ಇನ್ನೊಂದು ಮಾನದಂಡ. ಹೀಗಾಗಿ ಇವರಿಚ್ಚೆಯಂತೆ ಹೆಣ್ಣುಮಕ್ಕಳು ಬೆಂಗಳೂರು (ಉದಾಹರಣೆಗೆ ಹೇಳಿದ ನಗರ) ಕಡೆ ನಡೆದರು. ಗಂಡು ಮಕ್ಕಳಿಗೆ ಇಲ್ಲಿನವರು ಸಿಗುತ್ತಿಲ್ಲ, ಬೆಂಗಳೂರಿನ ಕಡೆಯಿಂದತೂ ಖಂಡಿತ ಬರುವುದಿಲ್ಲ. ಇಲ್ಲಿನ ನೆಲ, ಜಲ, ಕೃಷಿಯ ಸಂಪೂರ್ಣ ಪರಿಚಯವಿರುವ ಹೆಣ್ಣುಮಕ್ಕಳಿಗೇ ಇದು ಬೇಡವಾದರೆ, ಬೇರೆಯವರಿಗೆ ಬೇಕಾಗಲಿ ಎಂದು ಹೇಗೆ ತಾನೇ ಹಾರೈಸಲು ಸಾಧ್ಯ.
ಆಕರ್ಷಣೆಯ ಕೇಂದ್ರವಾದ ನಗರ ಮತ್ತು ನೌಕರಿಗೆ ಮರುಳಾಗಿ ತೆರಳುವುದೇನೋ ಸರಿ. ಆದರೆ ಅಲ್ಲಿನ ಬದುಕಿಗೆ ಅಷ್ಟು ಸಹಜವಾಗಿ ಹೊಂದಿಕೊಳ್ಳಲಾಗುತ್ತದೆಯೇ ಎಂದು ಕೂಡ ಯಾರೂ ವಿಚಾರ ಮಾಡುತ್ತಿಲ್ಲ. ಅಲ್ಲಿನ ಜಗತ್ತು ಮತ್ತು ಅಲ್ಲಿನ ರೀತಿ ರಿವಾಜುಗಳಿಗೆ ಹೊಂದಿಕೊಳ್ಳಲಾಗದೆ ಅನಂತರ ಚಡಪಡಿಸುತ್ತ ಸಿಡಿಮಿಡಿಗೊಳ್ಳುತ್ತಿದ್ದರೆ, ಮತ್ತೆಲ್ಲಿ ತನ್ನಿಂದ ತಾನೇ ‘ವಿಚ್ಛೇದನ’ ಹುಟ್ಟಿಕೊಳ್ಳುತ್ತದೆ. ಅಲ್ಲಿನ ಹುಡುಗರು ನಡಾವಳಿಕೆಗೆ ಹೊಂದಿಕೊಂಡು ತಾವೂ ಹಾಗೇ ಒಂದಿಷ್ಟು ದುಡಿಯುತ್ತ ನಡಾವಳಿಕೆಗೆ ಹೊಂದಿಕೊಂಡು ಸತತ ಕಸರತ್ತುಗಳಿಗೆ ಸಿದ್ದರಾದರೆ ಹೇಗೋ ಸಾಗಿತು ಬದುಕು. ಹೇಗೆ ಹೇಗೋ ಗೋಚರಿಸುವ ಭ್ರಮಾಲೋಕ.
ಹೀಗಾಗಿ ‘ವಧು ಸಮಸ್ಯೆ’ ಎನ್ನುವುದು ಕೇವಲ ಗಂಡು, ಹೆಣ್ಣಿನ ಸಂಖ್ಯಾನುಪಾತದಿಂದಷ್ಟೇ ಸೃಷ್ಠಿಯಾದದ್ದಲ್ಲ, ಆಧುನಿಕ ಬದುಕಿನ ಬಗೆ ಬಗೆಯಾದ ಆಕರ್ಷಣೆಗಳಿಂದ ಸೃಷ್ಟಿಯಾದದ್ದು ಎಂಬುದನ್ನು ಅಲಕ್ಷಿಸುವಂತಿಲ್ಲ. ಪ್ರತಿಯೊಂದು ಹಳ್ಳಿಯೂ ಇಂದು ಹೆಚ್ಚು ಕಡಿಮೆ ಸುಧಾರಣೆಯಾಗುತ್ತಿದ್ದು ಸಾಧ್ಯವಾದಷ್ಟು ಮೂಲಭೂತ ಸೌಕರ್ಯಗಳ ಲಭ್ಯತೆ ಕೂಡ ಒದಗಿಸುತ್ತಿದೆ. ಎಲ್ಲ ಹಳ್ಳಿಗಳಿಗೂ ಒಂದು ರೀತಿಯಲ್ಲಿ ನಗರವಾಗಲು ಹವಣಿಸುತ್ತಿವೆ. ವಧುಗಳಿಗೆ ಗೋಚರಿಸುತ್ತಿದೆಯಾ? ಅಥವಾ ಗಾಂಧಾರಿಯಂತೆ ಕೃತಕ ಕುರುಡತನಕ್ಕೆ ತುತ್ತಾಗಿದ್ದಾರಾ ಬಹುಶಃ ಸತ್ಯದರ್ಶನವಾಗುವುದರೊಳಗಾಗಿ, ಮದುವೆಯನ್ನು ಕಾಣದ ಅನೇಕ ಗ್ರಾಮೀಣ ಪ್ರದೇಶ ಹುಡುಗರು ಹಾಗೇ ಹಳಹಳಿಕೆಯಲ್ಲೆ ಮುಪ್ಪಿಗೆ ಸಾಗುತ್ತಿರುವುದಂತೂ ಸದ್ಯದ ವಾಸ್ತವ ಸಂಗತಿ.
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!