ಇಂದು ನಾಡಿನ ಉದ್ದಗಲಕ್ಕೆ ಹರಡಿರುವ ಹಲವು ಬಗೆಯ ರಸ್ತೆಗಳ ಅಗಲೀಕರಣ ಅದಕ್ಕೆ ಸಂಬಂಧಿಸಿದಂತೆ ಜಾಗೆಯನ್ನು ಪಡೆಯುವ ಪ್ರಯತ್ನ ಮತ್ತು ಅವುಗಳ ಆಚೀಚೆ ಇರುವ ಕಟ್ಟಡಗಳ ನೆಲಸಮ, ಇವು ದಿನನಿತ್ಯದ ಸುದ್ದಿಗಳಾಗಿವೆ. ಈ ರಸ್ತೆಯನ್ನು ಇಷ್ಟು ಅಡಿ ಅಗಲ ಮಾಡಬೇಕು. ಆ ರಸ್ತೆಯನ್ನು ಅಷ್ಟು ಅಡಿ ಅಗಲಮಾಡಬೇಕು. ಟಾರ್ ಇಲ್ಲದ ರಸ್ತೆಗಳಿಗೆ ಟಾರ್ ಒರೆಸಬೇಕು. ಇದ್ದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಆಯ್ದ ಅಗಲ ರಸ್ತೆಗಳಿಗೆ ಕಾಂಕ್ರೀಟು ಹಾಕಿ ಗಟ್ಟಿಗೂಳಿಸಬೇಕು. ಇವು ಸರ್ಕಾರದ ಲೋಕೋಪಯೋಗಿ ಇಲಾಖೆಯಡಿಯ ಕಾರ್ಯಕ್ರಮ. ಅವುಗಳಿಗೆ ಸಾರ್ವಜನಿಕರಿಂದ ಒತ್ತಡ, ಒತ್ತಾಯ, ಮತ್ತೆ ಕೆಲವರಿಂದ ವಿರೋಧ, ಪ್ರತಿಭಟನೆ, ಸರಕಾರ ಒಮ್ಮೆ ಮನಸ್ಸು ಮಾಡಿದರೆ ಅದು ಯಾವುದಕ್ಕೂ ಜಗ್ಗುವುದಿಲ್ಲ. ಹಿಡಿದ ಕೆಲಸವನ್ನು ಪೂರೈಸುತ್ತದೆ. ಗುಣಮಟ್ಟದ ಕುರಿತಾದ ಮಾತು ಅಪ್ರಸ್ತುತ. ಅಂತೂ ನಾಡಿನೆಲ್ಲಡೆ ಸಂಪರ್ಕಕ್ಕೆ ಅನುಕೂಲವಾಗುವಂತಹ ರಸ್ತೆ ಕಾಮಗಾರಿಗಳು ಕಾಲದ ಹಂಗಿಲ್ಲದೆ ಭರದಿಂದ ಜರುಗುತ್ತಿರುವುದು, ನಿತ್ಯ ದೃಶ್ಯ. ರಸ್ತೆಗಳು ಹದಗೆಟ್ಟಿವೆ. ಈ ರಸ್ತೆಯಲ್ಲಿ ಸಾಗಿದರೆ ಸೊಂಟ ಸರಿಯಿರುವುದು ಕಷ್ಟ. ಇದರಲ್ಲಿ ವಾಹನಗಳ ಪಾರ್ಕಿಂಗ್‍ಗೆ ಜಾಗವೇ ಇಲ್ಲ. ಜನಗಳು ಓಡಾಡಲೂ ಕಷ್ಟ. ಇವೆಲ್ಲ ಪ್ರಯಾಣಿಕರು ಸದಾ ಎದುರಿಸುತ್ತಿರುವ ಅಣಿಮುತ್ತುಗಳು.
ನಿಜ. ಜನಗಳಿಗೆ ಓಡಾಡಲು ಒಳ್ಳೆಯ ರಸ್ತೆ ಬೇಕು. ಅದು ಉತ್ತಮ ಗುಣಮಟ್ಟದ್ದಾಗಿರಬೇಕು. ಒಂದು ಊರಿನಿಂದ ಇನ್ನೊಂದು ಊರಿಗೆ ಶೀಘ್ರವಾಗಿ ತಲುಪಲು ಉತ್ತಮ ರಸ್ತೆಗಳು ಅವಶ್ಯಕ. ಹಾಗೇ ವಾಹನಗಳ ದಟ್ಟಣೆಯನ್ನು ಗಮನಿಸಿ ರಸ್ತೆ ವಿಶಾಲಗೊಳ್ಳಬೇಕೆಂಬ ವಾದದಲ್ಲೂ ಹುರುಳಿದೆ. ಆದರೆ ಇದರ ಇನ್ನೊಂದು ಮುಖವನ್ನು ಗಮನಿಸುವುದೂ ಕೂಡ ಭವಿಷ್ಯದ ದೃಷ್ಟಿಯಿಂದ ಸೂಕ್ತ.
ಈಗಾಗಲೇ ಸಾಕಷ್ಟು ಅನಾಹುತಗಳಾಗಿವೆ. ರಸ್ತೆ ಬದಿಯ ಸಾಲು ಮರಗಳು ಹೋಗಿವೆ. ರೈತರ ಕೃಷಿಯೋಗ್ಯ ಭೂಮಿ ಕೂಡ ರಸ್ತೆಗಳ ಪಾಲಾಗಿದೆ. ರಸ್ತೆಗಳನ್ನು ಹೀಗೆ ಅಗಲಗೊಳಿಸುತ್ತಾ ಹೋಗುವ ಬದಲು ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನೆ ಮಿತಿಗೊಳಿಸಿದರೆ ಹೇಗೆ? ಮನುಷ್ಯನ ಆರೋಗ್ಯಕ್ಕೆ ಮಾರಕವಾದ ಕಾರ್ಬನ್ ಮೊನೋಕ್ಸೆಡ್‍ನ ಪ್ರಮಾಣ ತಗ್ಗಿ ವಾಯುಮಾಲಿನ್ಯ ಇಳಿಮುಖವಾಗಲು ಸಾಧ್ಯ. ಜಾಗತಿಕ ತಾಪಮಾನ ತಗ್ಗಲು ಸಾಧ್ಯ. ಓಡಾಡುವವರು ಒಂದಿಷ್ಟು ನಿರಾಳವಾಗಿ ಓಡಾಡಬಹುದು. ಬಹು ಮುಖ್ಯವಾಗಿ ಈ ದೇಶದ ದೊಡ್ಡ ಮೊತ್ತದ ಸಂಪತ್ತು ವಾಹನಗಳಿಗೆ ಬಳಸುವ ಇಂಧನದ ಆಮದಿಗೆ ವೆಚ್ಚವಾಗುತ್ತಿದ್ದು ಅದು ಕಡಿಮೆಯಾದಷ್ಟು ದೇಶ ಶ್ರೀಮಂತವಾಗುವ ಸಾಧ್ಯತೆ ಇದೆ.
ದೇಶ ಮುಂದುವರಿಯುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆ ಕೂಡ ಅದಕ್ಕನುಪಾತದಲ್ಲಿ ಹೆಚ್ಚುವುದು ಅನಿವಾರ್ಯವೆಂದು ವಾದಿಸಲು ಸಾಧ್ಯ. ಆದರೆ ಹೀಗೂ ವಾದಿಸಬಹುದು. ವಿಪರೀತವಾದ ವಾಹನಗಳ ಸಂಖ್ಯೆ ತಗ್ಗಿಸವುದು, ಜನಸಂಖ್ಯೆಯನ್ನು ನಿಯಂತ್ರಿಸುವಷ್ಟೇ ಅಗತ್ಯ. ಅಂತಹಾ ಕಾರ್ಯಕ್ರಮಗಳನ್ನು ರೂಪಿಸಿದರೆ ನಷ್ಟವೇನಿಲ್ಲ. ಹಣವಿದೆ ಎಂಬುದಷ್ಟೇ ವಾಹನ ಖರೀದಿಗೆ ಅರ್ಹತೆಯಾಗ ಕೂಡದು. ಅದು ವ್ಯಕ್ತಿಗೆ ಅನಿವಾರ್ಯ ಅಗತ್ಯವೇ ಎಂದು ಗಮನಿಸಿ ಖರೀದಿಗೆ ಪರವಾನಗಿ ನೀಡುವುದು. ಅಗತ್ಯವಾದಂತೆ ವಾಹನ ಚಾಲನೆಗೆ ಆತ / ಆಕೆಗೆ ಪರವಾನÀಗಿ ನೀಡುವಾಗ ನಡೆಸುವ ಪರೀಕ್ಷೆ ಕೂಡ ಪಕ್ಕಾ ಆಗಿರುವಂತೆ ನೋಡಿಕೊಳ್ಳುವುದು, ಅನೇಕ ಅಪಾಯಗಳನ್ನು ತಪ್ಪಿಸುವ ಉಪಾಯವಾಗಬಲ್ಲದು. ಹಾಗೇ ಸರಕಾರ ಬಸ್ಸು ರೈಲುಗಳೆಲ್ಲ ಸರಿಯಾಗಿ ಸಕಾಲಕ್ಕೆ ಓಡಾಡುವಂತೆ ನೋಡಿಕೊಳ್ಳುವುದು ಮುಖ್ಯ. ನೌಕರರಿಗೆ ಸರಕಾರೀ ವಾಹನಗಳ ಸೌಲಭ್ಯ ಅನಿವಾರ್ಯವಾದಲ್ಲಿ ಮಾತ್ರ ನೀಡಬೇಕು. ಹಾಗೇ ಒಬ್ಬ ಅಧಿಕಾರಿಗೆ ನೀಡಿದ ವಾಹನದಲ್ಲಿ ಉಳಿದವರೂ ಪ್ರಯಾಣಿಸಲು ಸಾಧ್ಯವಾದ ಪಕ್ಷದಲ್ಲಿ ಅದನ್ನು ಕಡ್ಡಾಯಗೊಳಿಸಬೇಕು. ಒಬ್ಬೊಬ್ಬ ಅಧಿಕಾರಿ ಕೂಡ ಒಂದೊಂದು ವಾಹನ ಪಡೆದು, ಒಂದೆಡೆ ಹೋಗುವ ಬದಲು, ಎಲ್ಲರೂ ಒಂದೇ ವಾಹನದಲ್ಲಿ ಹೋಗಲು ಸಾಧ್ಯವಿದ್ದ ಕಡೆ ಆ ಏರ್ಪಾಡನ್ನು ಮಾಡಬೇಕು. ಒಬ್ಬೊಬ್ಬ ಮಂತ್ರಿ, ಶಾಸಕರು, ಅವರ ಅಧಿಕಾರಿಗಳು, ಹಿಂಬಾಲಕರು, ಎಲ್ಲ ತಲಾ ಒಂದೊಂದು ವಾಹನದಲ್ಲಿ ಒಂದೇ ಕಾರ್ಯಕ್ರಮಕ್ಕೆ ತೆರಳುವ ಕ್ರಮ ತಪ್ಪಿಸುವುದು ಒಳ್ಳೆಯದು. ವಾಹನದಲ್ಲಿನ ಆಸನದ ಸಂಖ್ಯೆಗೆ ಅನುಗುಣವಾಗಿಯೇ ಜನರನ್ನು ತುಂಬಿಕೊಂಡರೂ, ಬಹಳಷ್ಟು ವಾಹನಗಳ ಬಳಕೆ ತಪ್ಪಿಸಲು ಸಾಧ್ಯ.
ವಾಹನಗಳ ಖರೀದಿಯ ಮೇಲೆ ನಿಯಂತ್ರಣ ಹೇರುವುದು ಮುಖ್ಯ. ಅದಕ್ಕೆ ಕನಿಷ್ಟ ಅರ್ಹತೆಯನ್ನು ನಿಗದಿಮಾಡುವುದು ಒಳ್ಳೆಯದು. ನನ್ನಲ್ಲಿ ಹಣವಿದೆ, ನನಗೆ ಬೇಕಾದಂತೆ ಖರ್ಚು ಮಾಡುತ್ತೇನೆ, ನನಗೆ ಬೇಕಾದಷ್ಟು ಖರೀದಿಸಿ ಓಡಾಡುತ್ತೇನೆ, ಎಂಬುದು ಕೂಡ ತಪ್ಪು ಎಂದು ಸಾರಬೇಕು. ಹಣ ಅವರಲ್ಲಿ ಇರಬಹುದಾದರೂ ಅದು ಒಟ್ಟಾರೆ ದೇಶದ್ದು. ದೇಶದ ಹೊರಗಡೆ ಅದನ್ನು ಕಳಿಸಲು (ತೈಲೋತ್ಪನ್ನಗಳಿಗಾಗಿ) ಅಸಾಧ್ಯವೆಂದು ಕಾನೂನು ಮಾಡಿದರೆ ಹೇಗೆ? ಕಾನೂನು ಮಾಡುವವರು ಕೂಡ ಒಮ್ಮೆ ತಮ್ಮ ದರ್ಬಾರನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ‘ನನ್ನ ಹಣ, ನನ್ನ ಮೋಜು, ನನ್ನ ಸ್ವಾತಂತ್ಯ’, ಎಂಬ ಪರಿಕಲ್ಪನೆ ದೂರವಾಗಬೇಕು, ಅಥವಾ ದೂರಮಾಡಬೇಕು. ಹಾಗಿಲ್ಲದಿದ್ದಲ್ಲಿ ‘ನನ್ನ ಹಣ, ನನ್ನ ಮೋಜು, ನನ್ನ ಜೂಜು, ನನ್ನ ಹೆಂಡ, ನನ್ನ ಹೊಗೆ’, ಎಂದು ಪಟ್ಟು ಹಿಡಿದರೆ ಹೇಗೆ? ಒಂದೊಂದಕ್ಕೂ ಒಂದೊಂದು ನ್ಯಾಯವೆನ್ನುವುದು ಎಷ್ಟರ ಮಟ್ಟಿಗೆ ಸರಿ?
ಮುಖ್ಯವಾಗಿ ಆಗಬೇಕಾಗಿದ್ದು, ನಮ್ಮ ದೃಷ್ಟಿಕೋನದಲ್ಲಿನ ಮಾರ್ಪಾಡು. ಅದು ವಿಶಾಲವಾಗಿ ಯೋಚಿಸುವಂತಾಗಬೇಕೇ ವಿನಃ ರಸ್ತೆಗಳು ವಿಶಾಲವಾಗುವತ್ತ ಸಾಗುತ್ತಲೇ ಹೋಗುವುದಲ್ಲ. ವಾಹನ ನಮ್ಮದಾಗಿರಬಹುದು ಹಣವೂ ನಮ್ಮಲ್ಲಿ ಇರಬಹುದು ಹಾಗಂತ ಅನಾವಶ್ಯಕವಾಗಿ ವಾಹನವನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿಕೊಳ್ಳಬೇಕು. ಒಬ್ಬನೇ ಅಥವಾ ಇಬ್ಬರು ಹೋಗುವುದಿದ್ದರೆ ಬೈಕು ಸಾಕು. ಕಾರು-ಜೀಪು ಯಾಕೆ ಬೇಕು?. ನಡೆದು ಹೋಗುವ ದೂರಕ್ಕೆ ವಾಹನದ ಅಗತ್ಯವಿದೆಯೇ? ಎರಡು ಮೂರು ಫರ್ಲಾಂಗ್ ನಡೆಯಲಾಗದೆ ವಾಹನಕ್ಕೆ ಮೊರೆಹೋಗುವ ಅದೆಷ್ಟೋ ಮಂದಿ ಬೆಳಗಿನ ಜಾವ, ಸಂಜೆ, ವ್ಯಾಯಾಮದ ಹೆಸರಿಲ್ಲಿ ಕಿಲೋಮೀಟರ್‍ಗಟ್ಟಲೆ ವಾಕಿಂಗ್ ಮಾಡುವುದಿಲ್ಲವೇ? ವಾಕಿಂಗ್‍ಗೆ ಆಗದ ದೂರ ಆಫೀಸಿಗೆ ಆಗುವುದು ಎಂದರೆ ಹೇಗೆ?
ನಮ್ಮ ನೈಸರ್ಗಿಕ ಸಂಪತ್ತಿಗೂ ಒಂದು ಮಿತಿಯಿದೆ. ನಮ್ಮ ಬಕಾಸುರ ನೀತಿಗೆ ಇಂದಲ್ಲ ನಾಳೆ ಅದು ಬರಿದಾದರೆ, ನಾಡಿದ್ದು ಏನು ಗತಿ? ಇಂದೇ ಯೋಚಿಸಬೇಕು. ಈ ದೇಶದ ಸಂಪತ್ತಿನ ಉಳಿವಿಗೆ ಮತ್ತು ಈ ಪ್ರಪಂಚದ ಸಂಪತ್ತಿನ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಪಡುವುದೇ ಹೌದಾದಲ್ಲಿ ಅದರ ಮೊದಲ ಮೆಟ್ಟಿಲಾಗಿ ವಾಹನಗಳ ಬಳಕೆಯ ಮೇಲೆ ನಿಯಂತ್ರಣ ಸಾಧ್ಯವಾಗಬೇಕು. ನಮ್ಮ ಇಂದಿನ ಮೋಜು, ಸ್ವಚ್ಛಂದ ಪ್ರವೃತ್ತಿ, ಭವಿಷ್ಯದ ಜನರ ಕನಿಷ್ಟ ಬದುಕಿನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬಾರದೆಂಬ ಕಟ್ಟೆಚ್ಚರ ಅಗತ್ಯ.
ರವೀಂದ್ರ ಭಟ್ ಕುಳಿಬೀಡು