28 C
Sidlaghatta
Sunday, December 22, 2024

ಮಾರುಕಟ್ಟೆ ಆರ್ಥಿಕತೆಯಲ್ಲಿ ಧರ್ಮವೆಂಬ ಉದ್ಯಮ

- Advertisement -
- Advertisement -

ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಧರ್ಮವೊಂದೇ ದಾರಿ; ಧರ್ಮ ಸಂಸ್ಕೃತಿಗಳು ನಮ್ಮನ್ನು ರಕ್ಷಿಸುತ್ತವೆ, ಇವಿಲ್ಲದೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ – ಎಂದು ಪೇಜಾವರ ಮಠಾಧೀಶರು ಇತ್ತೀಚೆಗೆ ಹೇಳಿದ್ದಾರೆಂದು ಪತ್ರಿಕೆಗಳಲ್ಲಿ ಓದಿದೆ. ಮಠಾಧೀಶರ ಹೇಳಿಕೆ ಸಾರ್ವಕಾಲಿಕ ಸತ್ಯ, ಆದರೆ ಇಂದಿನ ಸಮಾಜದಲ್ಲಿ ಅವಾಸ್ತವಿಕ. ವಿಪರ್ಯಾಸವೆಂದರೆ ಇದು ಹೇಳುವವರಿಗೆ ಕೇಳುವವರಿಗೆಲ್ಲಾ ಗೊತ್ತು, ಆದರೂ ನಾವೆಲ್ಲಾ ಈ “ಹೇಳುವ-ಕೇಳುವ”ದನ್ನು ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ ಎನ್ನುವುದು ಇಂದಿನ ಇಡೀ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿ.
ಧರ್ಮ ಹೇಗಿರಬೇಕೆಂಬುದಕ್ಕೆ ಧರ್ಮಗ್ರಂಥಗಳಲ್ಲಿ ಹೇಳಿರುವುದೇನು ಎನ್ನುವುದಕ್ಕಿಂತ ಅದು ವಾಸ್ತವದಲ್ಲಿ ಹೇಗಿದೆ ಎಂಬುದು ಜನಸಾಮಾನ್ಯರಿಗೆ ಹೆಚ್ಚು ಪ್ರಸ್ತುತ. ಧರ್ಮ ರಾಜಕೀಯಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೇ ಮಾರ್ಗದರ್ಶನ ಮಾಡಬೇಕೆಂಬುದು ನಮ್ಮೆಲ್ಲರ ತಿಳುವಳಿಕೆ. ಧರ್ಮ ಎನ್ನುವುದಕ್ಕೆ ತಾತ್ವಿಕ ವಿವರಣೆಗಳೇನೇ ಇದ್ದರೂ, ಇಂದಿನ ಮಠ ದೇವಸ್ಥಾಗಳೇ ಧಾರ್ಮಿಕ ಸ್ಥಳಗಳು ಮತ್ತು ಅರ್ಚಕರು, ವೈದಿಕರು, ಜಂಗಮರು, ಮಾಠಾಧೀಶರುಗಳಂತವರೆಲ್ಲಾ ಧರ್ಮದ ಪ್ರತಿನಿಧಿಗಳು ಎಂದು ಜನಸಾಮಾನ್ಯರ ತಿಳುವಳಿಕೆಯಾದರೆ ಅದನ್ನು ಅಲ್ಲಗಳೆಯಲಾಗುವುದಿಲ್ಲ. ಒಂದಾನೊಂದು ಕಾಲದಲ್ಲಿ ಇವೆಲ್ಲಾ ಹಾಗಿದ್ದವು, ಹೀಗಿದ್ದವು ಎಂದು ಯಾರು ಏನೇ ಕಥೆಗಳನ್ನು ಹೇಳಿದರೂ ಇವೆಲ್ಲವುಗಳ ಇಂದಿನ ಸ್ಥಿತಿ ಎಂತಹುದು?
ಇವತ್ತಿನ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲಾ ರಂಗಗಳೂ ಉದ್ಯಮಗಳಂತೆ ಕಾರ್ಯ ನಿರ್ವಹಿಸಬೇಕಿದೆ. ಅಂದರೆ ಒಂದು ನಿಖರ ಯೋಜನೆಯಂತೆ ಹಣ ಹೂಡಬೇಕು; ಏನೆಲ್ಲಾ ತಂತ್ರಗಳ ಮೂಲಕ ಗ್ರಾಹಕರನ್ನು ಮರುಳುಗೊಳಿಸಿ, ತಯಾರಿಸಿದ ವಸ್ತು ಅಥವಾ ಸೇವೆಯನ್ನು ಲಾಭದಾಯಕ ಬೆಲೆಗೆ ಮಾರಬೇಕು; ಯಾವುದೇ ಸರ್ಕಾರೀ ಅಥವಾ ಇನ್ನಿತರ ಸಹಾಯವಿಲ್ಲದೆ ತನ್ನನ್ನು ತಾನು ನಿರ್ವಹಿಸಿಕೊಳ್ಳಬೇಕು – ಇದು ಮಾರುಕಟ್ಟೆ ಆರ್ಥಿಕತೆಯ ಮೂಲಮಂತ್ರ. ಈ ಮಂತ್ರವನ್ನು ವ್ಯಾಪಾರ ವ್ಯವಹಾರಕ್ಕಷ್ಟೇ ಅನ್ವಯಿಸುದ ಕಾಲ ಎಂದೋ ಮುಗಿದಿದೆ. ಇವತ್ತು ಕೃಷಿ, ಲಲಿತ ಕಲೆಗಳೂ ಕೂಡ ಇದೇ ತತ್ವವನ್ನನುಸರಿಸಿದರೆ ಮಾತ್ರ ಜೀವಂತವಾಗಿರಬಲ್ಲದು. ಕುಚೋದ್ಯವೆಂದರೆ ಧರ್ಮವೂ ಕೂಡ ಈ ಮಂತ್ರವನ್ನು ಪಠಿಸಿದರೆ ಮಾತ್ರ ಅಸ್ತಿತ್ವವನ್ನುಳಿಸಿಕೊಳ್ಳಬಹುದಾದ ಸ್ಥಿತಿಯನ್ನು ನಾವು ತಲುಪಿದ್ದೇವೆ!
ರಾಜಮಹಾರಾಜರುಗಳ ಕಾಲದಲ್ಲಿ ಮಠಮಾನ್ಯಗಳು ರಾಜಾಶ್ರಯದಲ್ಲಿದ್ದವು ಎಂದು ಹೇಳಲಾಗುತ್ತದೆ. ಆದರೆ ಇಂದಿನ ಪ್ರಜಾಪ್ರಭುತ್ವದಲ್ಲಿ ಪ್ರಾಧಾನ್ಯತೆಗಳು ಬದಲಾಗಿವೆ. ಸರ್ಕಾರಗಳು ಮುಜರಾಯಿ ದೇವಸ್ಥಾನಗಳಿಗೆ ನೆಪಮಾತ್ರದ ಸಹಾಯ ನೀಡಬಲ್ಲುದಾಗಿದೆ. ಉಳಿದ ಧಾರ್ಮಿಕ ಕೇಂದ್ರಗಳೆಲ್ಲಾ ಹಣಕಾಸಿನ ವಿಚಾರದಲ್ಲಿ ಸ್ವಾವಲಂಬಿಗಳಾಗಬೇಕಾಗಿದೆ. ಇದರ ನೇರ ಪರಿಣಾಮವೆಂದರೆ ಧಾರ್ಮಿಕ ಕ್ಷೇತ್ರಗಳ ನಡುವೆ ಭಕ್ತರನ್ನು ಸೆಳೆಯಲು ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಅವೂ ಕೂಡ ಮಾರುಕಟ್ಟೆ ವ್ಯವಸ್ಥೆಯ ತಂತ್ರಗಳನ್ನೆಲ್ಲಾ ಮೈಗೂಡಿಸಿಕೊಂಡಿವೆ. ಬರೀ “ಸ್ಥಾವರಗಳು” ನಿರ್ಮಾಣವಾದರೆ ಸಾಲದು, ಅವು ಭವ್ಯವಾಗಿರಬೇಕು, ಆಕರ್ಷಕವಾಗಿರಬೇಕು; ಅದನ್ನು ನಿಭಾಯಿಸುವವರು ಜನರನ್ನು ಸೆಳೆಯಬಲ್ಲವರಾಗಿರಬೇಕು; ಮಾಟ ಮಂತ್ರ, ಪವಾಡಗಳನ್ನು ಮಾಡುವವರಿಗೆ ಇನ್ನೂ ಹೆಚ್ಚಿನ ಬೇಡಿಕೆ; ಇಲ್ಲಿನ ಪೂಜೆ ಉತ್ಸವಗಳು ಅದ್ದೂರಿಯಾಗಿರಬೇಕು ಮತ್ತು ಅವುಗಳಿಗೆ ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಬೇಕು [ಟೀವಿಯಲ್ಲಿ ಪ್ರಸಾರವಾಗುವಾಗ ಮಧ್ಯೆ ಮಧ್ಯೆ ಮದ್ಯ, ಕಾಂಡೋಮ್, ಗರ್ಭನಿರೋದಕಗಳ ಜಾಹಿರಾತಿದ್ದರೆ ಇನ್ನೂ ಜನಾಕರ್ಷಕ!] ಇಂದಿನ ಧರ್ಮಕ್ಕೂ ಗ್ರಾಹಕ ವಸ್ತುಗಳಿಗೆ ವ್ಯತ್ಯಾಸ ಎಲ್ಲಿದೆ ಹೇಳಿ? “ಸ್ಥಾವರಕ್ಕಳಿವುಂಟು ಜಂಗಮಕ್ಕಿಲ್ಲ” ಎಂದು ಬಸವಣ್ಣ ಸಾರಿದ್ದು ಕಲಿಯುಗದಲ್ಲಿರಲಿಕ್ಕಿಲ್ಲ ಬಿಡಿ, ಈಗೆಲ್ಲಿ ಉಳಿದಿದೆ ಜಂಗಮ; ಉಳಿದಿರುವುದು ಸ್ಥಾವರಗಳು ಮಾತ್ರ.
ಇನ್ನು ಇವತ್ತಿನ ಭಕ್ತರ ಪುರಾಣವನ್ನು ಸ್ವಲ್ಪ ನೋಡೋಣ. ಹಣದ ಮೂಲ ಏನೇ ಇರಲಿ, ಹೆಚ್ಚು ದಾನ ಮಾಡುವವ ಮಹಾಭಕ್ತ. ನಮ್ಮ ಭಕ್ತಿ ನಾವು ದೇವರಿಗಾಗಿ ವ್ಯಯಿಸುವ ಹಣದ ನೇರ ಅನುಪಾತದಲ್ಲಿರುತ್ತದೆ ಎನ್ನುವುದು ಎಲ್ಲ ದೇವರುಗಳ ಅಲಿಖಿತ ಆದೇಶ ಎನ್ನುವಂತೆ ಧರ್ಮಾಧಿಕಾರಿಗಳೆಲ್ಲಾ ನಡೆದುಕೊಳ್ಳುತ್ತಾರೆ. ಹಾಗಾಗಿ ಕಪ್ಪುಹಣಾಧಿಪತಿಗಳು ಇಂದಿನ ಮಹಾಭಕ್ತರು. ಅವರನ್ನು ರಕ್ಷಿಸುವುದು ದೇವರ, ಮಾಠಾಧಿಪತಿಗಳ ಹೊಣೆ. ಅಂದಮೇಲೆ ಯಡಿಯೂರಪ್ಪನವರಿಗಾಗಿ ಲಿಂಗಾಯಿತ ಮಾಠಾಧಿಪತಿಗಳು, ಅಥವಾ ಇನ್ನಾರೋ ವಿಪ್ರೋತ್ತಮನಿಗಾಗಿ ಉಡುಪಿಯ ಅಷ್ಟಮಠಗಳೂ – ಹೀಗೆ ಎಲ್ಲರೂ ಅವರವರ ಜಾತಿಯವರನ್ನು ಅಥವಾ ಅವರವರ “ಭಕ್ತ” ಮಹಾಶಯರನ್ನು ರಕ್ಷಿಸಲು ಕಂಕಣ ಬದ್ಧರಾದರೆ, ಅದು ಇವತ್ತಿನ ಮಾರುಕಟ್ಟೆ ಆರ್ಥಿಕತೆಯ ಸೂತ್ರಗಳಿಗನುವಾಗಿಯೇ ಇರುತ್ತದೆಯಲ್ಲವೇ? ಇವರೆಲ್ಲರ ನಡುವೆ “ತನುಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು, ಮನಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯ ನೀನು” ಎಂದು ಹಾಡಿದ ಅಕ್ಕಮಾಹಾದೇವಿಯಾಗಲಿ, ಇಂತಹದೇ ತತ್ವವನ್ನು ಬೋೀಧಿಸಿದ ಮತ್ತು ಅದರಂತೆ ಬಾಳಿದ ದಾಸಶ್ರೇಷ್ಠರಾಗಲಿ ಯಾರಿಗೆ ನೆನಪಾಗಬೇಕು?
ಇವತ್ತಿನ ಧರ್ಮಾಧಿಕಾರಿಗಳು ಅಂದರೆ ಮಠಾಧೀಶ್ವರರು ಮತ್ತಿತರ ಧರ್ಮದ ಪ್ರತಿನಿಧಿಗಳು ನಡೆಸುತ್ತಿರುವ ಜೀವನ ಶೈಲಿಯಾದರೂ ಎಂತಹುದು? ಇವರಲ್ಲಿ ಹೆಚ್ಚಿನವರು ಧರಿಸುವ ಬಟ್ಟೆಯಲ್ಲಿ ಮಾತ್ರ ನಮ್ಮಂತ ಹುಲುಮಾನವರಿಗಿಂತ ಭಿನ್ನ. ಇವರ ನಡೆ ನುಡಿ, ಜೀವನ ಶೈಲಿಯಿಂದ ಇವರಾರು ಸಮಾಜಕ್ಕೆ ಮಾರ್ಗದರ್ಶಕರಾಗಬಲ್ಲವರು ಎಂಬ ವಿಶ್ವಾಸವನ್ನು ನಮ್ಮಲ್ಲಿ ಹುಟ್ಟಿಸುವುದು ಅಸಾಧ್ಯ. ಮಾರ್ಗದರ್ಶನ ಮಾಡುವುದಿರಲಿ ಸಮಾಜ ಕಂಟಕರಾಗದಿದ್ದರೇ ಅದೇ ಮಹದೋಪಕಾರ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇವರ ಧನದಾಹ, ವೃತ್ತಿ ವೈಷಮ್ಯ, ರಾಜಕೀಯ ಇವುಗಳೆಲ್ಲಾ – ವ್ಯಾಪಾರಿ ಜಗತ್ತಿನಲ್ಲಿ ನಡೆಯುವ ಭೂಗತ ವ್ಯವಹಾರಗಳಿಗಿಂತ ಕಡಿಮೆಯೇನೂ ಇಲ್ಲ. ಸಾಕಷ್ಟು ಹೆಸರಾಂತ ಮಠಗಳಲ್ಲಿ ಅವರವರ ಜಾತಿಯ ರಾಜಕಾರಣಿಗಳು ಕಪ್ಪುಹಣವನ್ನು ಸುರಕ್ಷಿತವಾಗಿಟ್ಟಿದ್ದಾರೆಂಬ ಮಾತುಗಳು ಕರ್ನಾಟಕದಲ್ಲಿ ಜನಜನಿತವಾಗಿದೆ. ಇವರು ನಡೆಸುತ್ತಿರುವ ವಿದ್ಯಾಸಂಸ್ಥೆಗಳು ಶುದ್ಧ ವ್ಯಾಪಾರವಲ್ಲದೇ ಮತ್ತೇನು?
ನಾನು ಪೇಜಾವರ ಮಾಠಾಧೀಷರನ್ನು ಪ್ರಾರಂಭದಲ್ಲಿ ಉಲ್ಲೇಖಿಸಿದ್ದು ಸಾಂದರ್ಭಿಕ ಮಾತ್ರ; ಹಾಗೇ ಹಿಂದೂ ಧರ್ಮವನ್ನು ಉದಾಹರಿಸಿರುವುದೂ ಕೂಡ. ವಾಸ್ತವದಲ್ಲಿ ಕ್ರಿಶ್ಚಿಯನ್, ಇಸ್ಲಾಂ ಮತ್ತು ಜಗತ್ತಿನ ಎಲ್ಲಾ ಧರ್ಮಗಳೂ ಮತ್ತು ಆಯಾ ಧರ್ಮದ ಪ್ರತಿನಿಧಿಗಳೆನ್ನಿಸಿಕೊಂಡವರೂ ಗುಣಾತ್ಮಕವಾಗಿ ಭಿನ್ನವಾಗೇನಿಲ್ಲ. ಧರ್ಮ ದೇವರುಗಳೆಲ್ಲಾ ಮನುಷ್ಯನ ವೈಯುಕ್ತಿಕ ಆಂತರಿಕ ಅವಶ್ಯಕತೆಗಳು. ಅದು ಮನಸ್ಸು ಮತ್ತು ಮನೆಗಳಿಂದ ಹೊರ ಬಂದು ಬೀದಿಗಿಳಿದರೆ ಉಳಿಯುವುದು ವ್ಯಾಪಾರ ಮತ್ತು ರಾಜಕೀಯ ಮಾತ್ರ. ಎಲ್ಲೋ ಸಾವಿರಕ್ಕೊಬ್ಬರು ಧರ್ಮವನ್ನು ಅದರ ಮೂಲ ಅರ್ಥದಲ್ಲಿ ಪಾಲಿಸುವವರಿದ್ದರೂ, ಬಹುಸಂಖ್ಯಾತರು ರೂಪಿಸಿರುವ ಧರ್ಮದ ಚಿತ್ರವನ್ನು ಬದಲಾಯಿಸಲಾರದಷ್ಟು ನಗಣ್ಯರಾಗಿದ್ದಾರೆ.
ಧರ್ಮದ ಇವತ್ತಿನ ಸ್ಥಿತಿಯ ಬಗೆಗೆ ತಪ್ಪು ಸರಿಗಳ ನ್ಯಾಯ ನಿರ್ಣಯ ಮಾಡುವುದು ನನ್ನ ಉದ್ದೇಶವಲ್ಲ, ಇವತ್ತಿನ ಧರ್ಮದ ನಿಜ ರೂಪವನ್ನು ತಿಳಿಯುವುದು ಮಾತ್ರ! ರಾಜಕಾರಣದಲ್ಲಿ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ “ಸ್ವಲ್ಪ ಮಟ್ಟಿನ” ವಂಚನೆ/ಭ್ರಷ್ಟಾಚಾರ ಉಚಿತ ಮತ್ತು ಸಹ್ಯ [ಮತ್ತು ಅಗತ್ಯ ಕೂಡ!] ಎನ್ನುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಧರ್ಮವೂ ಒಂದು ವ್ಯಾಪಾರ/ವೃತ್ತಿಯಾಗಿರುವುದರಿಂದ ಅದೇ ಮಾನದಂಡಗಳು ಅನ್ವಯಿಸುತ್ತವೆ ಎನ್ನುವುದಾದರೆ ನನ್ನದೇನು ತಕರಾರಿಲ್ಲ. ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡುಬಿಟ್ಟರಾಯಿತು.
ನಾವು ನೆನಪುಟ್ಟುಕೊಳ್ಳಲೇ ಬೇಕಾದದ್ದು “ಸ್ವಲ್ಪ ಮಟ್ಟಿನ” ಅಂದರೆ ಎಷ್ಟು ಎನ್ನುವುದು ಮಾತ್ರ ಅವರವರ ನಿರ್ಣಯಕ್ಕೆ ಬಿಟ್ಟಿದ್ದು!
ನಡಹಳ್ಳಿ ವಸಂತ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!