ಕೆಲವು ವರ್ಷಗಳ ಹಿಂದೆ ಸಾವಯವ ಗೊಬ್ಬರ ತಯಾರಿಸುವ ಮಿತ್ರರೊಬ್ಬರು ಹೇಳಿದ್ದು ನೆನಪಾಗುತ್ತದೆ. ಅವರೊಮ್ಮೆ ಬಿಹಾರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಹಳ್ಳಿಗಳಲ್ಲಿ ಸಣ್ಣ ಪುಟ್ಟ ನೀರಿನ ಹೊಂಡಗಳಲ್ಲಿ ವಿಶಿಷ್ಟ ಬೀಜವೊಂದನ್ನು ಬೆಳೆದು ಮಾರುವುದನ್ನು ತಿಳಿಸಿದ್ದರು. ಅಂತರ್ಜಾಲದಲ್ಲಿ, ಇಂಗ್ಲೀಷ್ ಪತ್ರಿಕೆಗಳಲ್ಲಿ ಜಾಲಾಡಿದಾಗ ಆ ಬೆಳೆಯ ಪರಿಚಯವಾಗಿತ್ತು. ಅದು ಮಖಾನಾ!
ಬಿಹಾರದ ಉತ್ತರ ಪೂರ್ವ ಪ್ರದೇಶದಲ್ಲಿ ವಿಶ್ವದ ಶೇ. 90ರಷ್ಟು ಮಖಾನಾ ಬೆಳೆಯನ್ನು ಬೆಳೆಯಲಾಗುತ್ತದೆ. ಕಳೆದ 90ರ ದಶಕದಲ್ಲಿಯೇ ಈ ಬೆಳೆಯನ್ನು ಇಲ್ಲಿನ ಕೃಷಿಕರು ವ್ಯವಸ್ಥಿತವಾಗಿ ಬೆಳೆದುದಕ್ಕೆ ದಾಖಲೆಗಳಿವೆ. ಅಲ್ಲಿನ ಮಧುಬನಿ ಜಿಲ್ಲೆಯ ಉಜ್ಜಾನ್‍ನ ರೈತ ಕೇದಾರ್‍ನಾಥ್ ಜಾ ತಮ್ಮದಲ್ಲದೆ ಗುತ್ತಿಗೆ ಮೂಲಕ ಒಟ್ಟು 70 ಹೊಂಡಗಳಲ್ಲಿ ಮಖಾನಾ ಬೆಳೆದು ವಾರ್ಷಿಕ ಸಂಪಾದಿಸುವ ಆದಾಯ 17 ಲಕ್ಷ ರೂ.!
ಬಿತ್ತನೆಗೆ ಮುನ್ನ ಬೀಜೋಪಚಾರ ನಡೆಸುವುದು ಕ್ಷೇಮ. ಇದರಿಂದ ಮೊಳಕೆಯ ಶೇಕಡಾವಾರು ಪ್ರಮಾಣ ಹೆಚ್ಚುವುದು ಖಚಿತ. ಜಾ ಹೇಳುತ್ತಾರೆ, ಬಿತ್ತನೆಗೆ ಮುನ್ನ ಒಂದು ವಾರ ಕಾಲ ಒದ್ದೆ ಮಾಡಿದ ಸೆಣಬಿನ ದಾರದ ಚೀಲದಲ್ಲಿ ಬೀಜವನ್ನು ಇರಿಸಿರುತ್ತೇನೆ. ಇದರಿಂದ ಫಲವತ್ತತೆ ಹೆಚ್ಚುತ್ತದೆ.
ಮಖಾನಾ ನೀರಿನೊಳಗೇ ಗಿಡವಾಗಿ ಬೆಳೆಯುತ್ತದೆ. ಏಪ್ರಿಲ್ ವೇಳೆಗೆ ಮಖಾನಾ ಹೂವು ಹೊರಗೆ ಬಂದು ನೀರಿನ ಮೇಲೆ ಹರಡಿಕೊಳ್ಳುತ್ತದೆ. ಪರಾಗ ಸ್ಪರ್ಶವನ್ನು ಪ್ರಕೃತಿ ನಡೆಸುವ ಕಾರಣದಿಂದಾಗಿ ವಾತಾವರಣಕ್ಕೆ ತೆರೆದುಕೊಳ್ಳುತ್ತದಿರಬೇಕು. ನಂತರದ 3-4 ದಿನಗಳಲ್ಲಿ ಮತ್ತೆ ನೀರಿನೊಳಗೆ ಮಖಾನಾ ಮಾಯ!
ಬೀಜಗಳ ಸಂಗ್ರಹದ ನಂತರ ಸಂಸ್ಕರಣೆ ನಡೆಸಬೇಕು. ಬೀಜಗಳನ್ನು ಸೂರ್ಯನ ಶಾಖಕ್ಕೆ ಒಡ್ಡಿ ಒಣಗಿಸಿದ ನಂತರ ಗಾತ್ರದ ಆಧಾರದಲ್ಲಿ ವರ್ಗೀಕರಣ ನಡೆಸಬೇಕಾಗುತ್ತದೆ. ಒಣಗಿಸುವ ಪ್ರಕ್ರಿಯೆಗೆ ನಾನಾ ವಿಧದ ಆಧುನಿಕ ತಂತ್ರಜ್ಞಾನಗಳನ್ನು ಬಳಸಬಹುದು.
ಕರ್ನಾಟಕದಲ್ಲಿ ಈ ಬೆಳೆ ಹೊಂದಿಕೊಂಡೀತೆ? ಮಿಲಿಯನ್ ಡಾಲರ್ ಪ್ರಶ್ನೆ. ಹವಾಮಾನಗಳನ್ನು ಅಧ್ಯಯನ ನಡೆಸಿರುವವರು ಹೇಳುವ ಪ್ರಕಾರ ಸಮಸ್ಯೆ ಇಲ್ಲ. ಚುರುಮುರಿಯಾಗಿ, ಕಾರ್ನ್ ಆಗಿ ಮೌಲ್ಯವರ್ಧನೆ ನಡೆಸಬಹುದಾದ ಮಖಾನಾಕ್ಕೆ ಒಳ್ಳೆಯ ದರವೂ ಸಿಕ್ಕೀತು. ನೀರಿನಡಿಯೇ ಬೆಳೆಯುವುದರಿಂದ ದೊಡ್ಡ ಪ್ರಮಾಣದ ಶತ್ರುಗಳು, ರೋಗಗಳು ಎದುರಾಗಲಿಕ್ಕಿಲ್ಲ. ಮುಖ್ಯವಾದುದೆಂದರೆ, ನೀರು ಸಮೃದ್ಧ ಇರಬೇಕು. ನೀರಿನಲ್ಲಿ ಪರ್ಯಾಯ ಬೆಳೆ ಅರ್ಥಾತ್ ಮೀನು ಸಾಕಾಣಿಕೆಯಂತದು ಸಾಧ್ಯವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಹೊಂಡಗಳಿಂದ ಬಿಳಿಯದಾದ ಚಿಕ್ಕದಾದ ಮಖಾನಾ ಬೀಜಗಳನ್ನು ಆಯುವುದು ತ್ರಾಸವಾದೀತು. ಬೆಳಗಿನ ಜಾವ ಕೃಷಿಕರು ಕೃತಕ ಪರಾಗಸ್ಪರ್ಶ ನಡೆಸಿ ವೆನಿಲ್ಲಾ ಕೋಡುಗಳನ್ನು ಬೆಳೆದಿದ್ದಾರೆಂದ ಮೇಲೆ ಇದು ಯಾವ ಲೆಕ್ಕ?
ನಮ್ಮ ರೈತರಿಗೆ ಅವಕಾಶವಂತೂ ಇದೆ. ಇನ್ನಷ್ಟು ಅಧ್ಯಯನದ ಅಗತ್ಯವೂ ಕಾಣುತ್ತದೆ. 2002ರಲ್ಲಿಯೇ ಭಾರತ ಸರ್ಕಾರದ ಕೃಷಿ ಸಂಶೋಧನಾಲಯ ಮಖಾನಾದ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ದರ್ಬಾಂಗ್‍ನಲ್ಲಿ ತೆರೆದಿದೆ.
ಮಾ.ವೆಂ.ಸ. ಪ್ರಸಾದ.