Home Blogroll ಭವಿಷ್ಯವನ್ನು ಇಂದೇ ಕಬಳಿಸುವುದೇ ಅಭಿವೃದ್ಧಿಯೇ?

ಭವಿಷ್ಯವನ್ನು ಇಂದೇ ಕಬಳಿಸುವುದೇ ಅಭಿವೃದ್ಧಿಯೇ?

0

ಎಂಬತ್ತರ ದಶಕದ ಪ್ರಾರಂಭದಲ್ಲಿ ನಾನು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾದೆ. ಬರುವ ನಾನೂರು ರೂಪಾಯಿ ಸಂಬಳ ಸಂಪೂರ್ಣ ಖರ್ಚಾಗುತ್ತಿರಲಿಲ್ಲ. ನನ್ನ ಐದಾರು ತಿಂಗಳ ಉಳಿತಾಯದಲ್ಲಿ ಬಹುದಿನಗಳ ಬಯಕೆಯಾಗಿದ್ದ ಪ್ಯಾನಾಸೋನಿಕ್ ಟೂ ಇನ್ ಒನ್ ಖರೀದಿಸಿದೆ. ನಂತರ ನಾನು ಟೀವಿ, ಫ್ರಿಜ್, ವಾಷಿಂಗ್ ಮಷೀನ್-ಏನೆಲ್ಲಾ ಖರೀದಿಸಿದರೂ ಅದು ಉಳಿತಾಯದ ಹಣದಿಂದ ಮಾತ್ರ. ಸಾಲವನ್ನೇ ತೆಗೆಯದ ನಾನು ಸಹೋದ್ಯೋಗಿಗಳಿಗೆ ಒಂತರಾ ಅಚ್ಚರಿಯಾಗಿದ್ದೆ. ಎಷ್ಟೋ ಸಹೋದ್ಯೋಗಿಗಳು ನನ್ನ ಹೆಸರಿನಲ್ಲಿ ತಮಗೆ ಸಾಲ ಕೊಡಿಸಬೇಕೆಂದು, ಅದಕ್ಕೆ ಹೆಚ್ಚಿನ ಬಡ್ಡಿ ಕೊಡುತ್ತೇವೆಂದು ಪುಸಲಾಯಿಸಿ ವಿಫಲರಾಗಿದ್ದರು! ಕೊನೆಗೆ ನಾನು ಸಾಲದ ಬೋಣಿ ಮಾಡಿದ್ದು ಮನೆಕಟ್ಟುವಾಗ!
ಹಾಗೆ ನೋಡಿದರೆ ಮೇಲಿನದು ನನ್ನ ಕಥೆ ಮಾತ್ರವಲ್ಲ, ನನ್ನ ತಲೆಮಾರಿನವರೆಗಿನವರಲ್ಲಿ ಹೆಚ್ಚಿನವರು ಉಳಿತಾಯದಿಂದ ಮಾತ್ರ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಇವತ್ತಿನ ಯುವಕರು ಕೆಲಸ ಸಿಕ್ಕೊಡನೆ ಮೊಬೈಲು, ಟೀವಿ, ಬೈಕ್ ಕೊಳ್ಳಲು ಸಾಲದ ಮೊರೆ ಹೊಗುತ್ತಾರೆ. ಸಾಲ ಕೊಡುವವರಿದ್ದಾಗ ತೆಗೆದುಕೊಳ್ಳುವುದೇನು ತಪ್ಪಲ್ಲ ಬಿಡಿ, ಅಂತ ನೀವು ಅಂದುಕೊಳ್ಳಬಹುದು. ಈ ರೀತಿಯ ಸಾಲದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎನ್ನುವುದು ಪಾಶ್ಚಿಮಾತ್ಯ ಆರ್ಥಶಾಸ್ತ್ರಜ್ಞರ ತಿಳಿವಳಿಕೆ. ಹೀಗೆ ಸಾಲ ಕೊಡುವವರು ದೇಶವನ್ನು ಉದ್ಧಾರ ಮಾಡುತ್ತಾರೋ ಇಲ್ಲವೋ ಅನ್ನುವುದು ಚರ್ಚಾಸ್ಪದ. ಆದರೆ ಸಾಲ ತೆಗೆದುಕೊಳ್ಳುವವರು ಮಾತ್ರ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ತಿಂಗಳು ತಿಂಗಳು ಸಾಲದ ಕಂತುಗಳಿಗಾಗಿ ಮೀಸಲಿಡಬೇಕಾಗುತ್ತದೆ ಎನ್ನುವುದಂತೂ ಖಾತ್ರಿ. ಹೀಗಿದ್ದರೂ ಒಂದು ಸಾಲ ತೀರಿದ ನಂತರ ಮತ್ತೊಂದು, ನಂತರ ಇನ್ನೊಂದು… ಹೀಗೆ ಮುಂದುವರೆಸುತ್ತಲೇ ಇರುತ್ತಾರೆ. ಇವರೆಲ್ಲಾ ಬಿಳಿ ಕಾಲರಿನ ಜೀತದಾಳುಗಳಲ್ಲದೇ ಮತ್ತೇನು?
ಸಾಲ ಕೊಳ್ಳುವುದು ಅವಮಾನಕರ ಎಂದುಕೊಳ್ಳುವ ಕಾಲವೊಂದಿತ್ತು. ಇವತ್ತಿನ ಯುವಕರನ್ನು ಕೇಳಿದರೆ, “ಟಾಟಾ, ಬಿರ್ಲಾ, ಅಂಬಾನಿಗಳೆ ಸಾಲ ತೊಗೊಳ್ತಾರೆ. ಅಷ್ಟೇ ಏನು ಭಾರತ ಸರ್ಕಾರವೇ ಸಾಲದಲ್ಲಿ ನಡೆಯುತ್ತಾ ಇದೆ. ಇನ್ನು ನಮ್ಮದೆಲ್ಲಾ ಯಾವ ಲೆಕ್ಕ” ಎನ್ನುವ ಉಡಾಫೆಯ ಮಾತು ಕೇಳಿಬರುತ್ತದೆ. ಉದ್ಯಮಿಗಳು ಅಥವಾ ಸರ್ಕಾರ ತೆಗೆದುಕೊಳ್ಳುವ ಸಾಲ ಬಂಡವಾಳ ಹೂಡಿಕೆಯ ರೂಪದಲ್ಲಿರುತ್ತದೆ. ಆದರೆ ವ್ಯಕ್ತಿಯೊರ್ವ ವ್ಯಾಪಾರ ವ್ಯವಹಾರಗಳ ಉದ್ದೇಶದ ಹೊರತಾಗಿ ಸಾಲ ಕೊಳ್ಳುವುದು ಅಂದರೆ ನಾವು ನಮ್ಮ ನಾಳೆಯ ಆದಾಯವನ್ನು ಇವತ್ತೇ ಖರ್ಚು ಮಾಡುತ್ತಿದ್ದೇವೆ ಎಂದರ್ಥ. ಇದು ಸಾಲ ಪಡೆದವನನ್ನು ಹೊರತಾಗಿಸಿ ಇನ್ನೆಲ್ಲರನ್ನೂ, ಕೊನೆಗೆ ದೇಶವನ್ನೂ ಉದ್ಧಾರ ಮಾಡುತ್ತದೆ! ಇದರಿಂದಾಗಿ ನಾವು ನಮ್ಮ ಮುಂದಿನ ತಲೆಮಾರಿಗೆ ಆಸ್ತಿಯನ್ನು ಬಿಟ್ಟು ಹೋಗುವ ಬದಲು ಸಾಲದ ಹೊರೆಹೊರಿಸಿ ಹೋಗುವ ಅಪಾಯವೇ ಹೆಚ್ಚಿರುತ್ತದೆ. ಅಪ್ಪ ಅಮ್ಮ ಮಾಡಿದ ಸಾಲ ತೀರಿಸಲು ಮಕ್ಕಳನ್ನು ಜೀತದಾಳುಗಳನ್ನಾಗಿಸುವ ಪದ್ದತಿ ಈಗ ಬೇರೆ ರೂಪದಲ್ಲಿ ಮುಂದುವರೆಯುತ್ತಿದೆ ಅಷ್ಟೆ!
ಹಾಗೆ ನೋಡಿದರೆ ನಾಳೆಗಳನ್ನು ಇಂದೇ ತಿನ್ನುವ ಆಧುನಿಕ ಮಾನವನ ಈ ವಿಕೃತಿ ಬರಿಯ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ನಾಗರಿಕ ಜಗತ್ತು ಎಂದು ಕರೆಸಿಕೊಳ್ಳುವ ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೇರಿಕಾದ ದೇಶಗಳ ಕೈಗಾರಿಕಾ ಕ್ರಾಂತಿಯ ನಂತರದ ಟಿಪಿಕಲ್ ಮನೋಭಾವ ಇದಾಗಿದ್ದು, ಜೀವನದ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ಮುಂಬರುವ ನೂರಾರು ತಲೆಮಾರುಗಳಿಗಾಗಿ ಉಳಿಸಿ ಹೋಗಬೇಕಾಗಿರುವ ಭೂಮಿಯ ಆಳದಲ್ಲಿ ಸಿಗುವ ನೀರು, ಅದಿರುಗಳು, ತೈಲ ಮುಂತಾದವುಗಳನ್ನೆಲ್ಲಾ ನಾವು ಇಂದೇ ತಿಂಗು ತೇಗುತ್ತಿದ್ದೇವೆ. ಮಿತವಾಗಿ ಬಳಸಿ, ಆದರಲ್ಲಿ ಹೆಚ್ಚಿನದನ್ನು ರೂಪಾಂತರ ಮಾಡದೆ, ಪ್ರಕೃತಿ ಸಹಜವಾಗಿ ಒಪ್ಪಿಕೊಳ್ಳುವಂತ ಸ್ಥಿತಿಯಲ್ಲಿ ಅದಕ್ಕೇ ಹಿಂತಿರುಗಿಸಬೇಕಾದ ನಾವು ಯಕಶ್ಚಿತ್ ಸಾಲಗಾರರಂತೆ ಇಂದೇ ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದೇವೆ. ಜೊತೆಗೆ ಪ್ರಕೃತಿ ಸಹಜವಾಗಿ ಒಪ್ಪಿಕೊಳ್ಳದಂತಹ ತ್ಯಾಜ್ಯಗಳನ್ನು ನೀಡುತ್ತಿದ್ದೇವೆ. ಲಕ್ಷಾಂತರ ವರ್ಷಗಳ ನಂತರ ಇರಬೇಕಾದ ವಾಯುಮಾಲಿನ್ಯದ ಮಟ್ಟವನ್ನು ಇಂದೇ ತಲುಪಿದ್ದೇವೆ.
ಇಷ್ಟೇ ಅಲ್ಲ, ಭವಿಷ್ಯವನ್ನು ಇಂದೇ ಅನುಭವಿಸುವುದು ನಮ್ಮ ಜೀವನ ಶೈಲಿಯೇ ಆಗಿಬಿಟ್ಟಿದೆ. ಮಕ್ಕಳು ತಮ್ಮ ವಯಸ್ಸಿಗೆ ಮೀರಿದ್ದನ್ನು ಕಲಿತು ಇಂದೇ ವಿದ್ವಾಂಸರಾಗಬೇಕೆಂದು ಅವರ ಮೇಲೆ ಏನೆಲ್ಲ ಒತ್ತಡ ಹೇರುತ್ತೇವೆ. ಚೈಲ್ಡ್ ಪ್ರಾಡಿಜಿ – ಬಾಲ ಪ್ರತಿಭೆಗಳ ಹಣೆಪಟ್ಟಿ ಹಚ್ಚಿ ಟೀವಿ ರಿಯಾಲಿಟಿ ಷೋಗಳು ಮುಗ್ಧ ಮಕ್ಕಳನ್ನು ಏನೆಲ್ಲಾ ಹಿಂಸೆಗೆ ಒಳಪಡಿಸುತ್ತಿವೆ. ಮಕ್ಕಳು ಬಾಲ್ಯವನ್ನೇ ಅನುಭವಿಸದೆ ದೊಡ್ಡವರಂತೆ ವರ್ತಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ. ದೇಹ, ಮನಸ್ಸುಗಳೆರೆಡೂ ಪ್ರೌಢವಾದ ನಂತರ ಅನುಭವಿಸಬೇಕಾದ ಲೈಂಗಿಕತೆಯನ್ನು ಹದಿನೈದು ವರ್ಷಕ್ಕೆ ಮೊದಲಿನಿಂದಲೇ ಅನುಭವಿಸುವ ಮಕ್ಕಳು ಮುಂದೆ ಅದರ ಆಕರ್ಷಣೆಯನ್ನೇ ಕಳೆದುಕೊಂಡು ಹೊಸ ಹೊಸ ಥ್ರಿಲ್-ರೋಮಾಂಚನಗಳನ್ನು ಹುಡುಕ ಹೊರಡುವುದನ್ನು ಪಾಶ್ಚಿಮಾತ್ಯರು ಸಹಜವಾಗಿ ಒಪ್ಪಿಕೊಂಡಿದ್ದಾರೆ. ಒಲಂಪಿಕ್ ಮೆಡಲ್‍ಗಳ ಮೇಲಾಟಕ್ಕಾಗಿ ಮಕ್ಕಳನ್ನು ಕೃತಕವಾಗಿ ದೊಡ್ಡವರನ್ನಾಗಿಸಲು ಏನೆಲ್ಲಾ ಹಿಂಸೆ, ವಿಕೃತಿಗಳ ಮೊರೆ ಹೋಗುತ್ತಿದ್ದೇವೆ.
ಹೀಗೆ ಈ ಪ್ರವೃತ್ತಿಗೆ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ನಾಳೆಗಳನ್ನು ಇಂದೇ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಅನುಭವಿಸುವವರು ಹೆಚ್ಚು ಆಧುನಿಕರು, ಮುಂದುವರೆದವರು, ಅಭಿವೃದ್ಧಿ ಹೊಂದಿದವರು ಮತ್ತು ನಾಗರಿಕರು! ಇದು ಪಾಶ್ಚಿಮಾತ್ಯ ದೇಶಗಳು ನಮ್ಮ ಜನಗಳಲ್ಲಿ, ಜನ ನಾಯಕರುಗಳಲ್ಲಿ ಹುಟ್ಟು ಹಾಕಿರುವ ಮನೋವೈಕಲ್ಯ. ಈ ಅಪಾಯಕಾರೀ ಪ್ರವೃತ್ತಿಯಿಂದ ವೈಯುಕ್ತಿಕ ಮಟ್ಟದಲ್ಲಿ ನಾವು ಅಜೀವ ಜೀತದಾಳುಗಳಾದರೆ, ಮನುಕುಲದ ಮಟ್ಟದಲ್ಲಿ, ಲಕ್ಷಾಂತರ ವಷರ್Àಗಳು ಉಪಯೋಗಿಸಬಹುದಾದ ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನೆಲ್ಲಾ ಇಂದೇ ಬರಿದಾಗಿಸುತ್ತಿದ್ದೇವೆ.
ಪ್ರಕೃತಿಯ ಎಲ್ಲಾ ಚಲನೆಗೂ ಅದರದ್ದೇ ಆದ ವೇಗವಿರುತ್ತದೆ. ಅದನ್ನು ಕೃತಕವಾಗಿ ಹೆಚ್ಚಿಸುವ ಪ್ರಯತ್ನ ಮಾಡಿದಷ್ಟೂ ಮಾನವ ತಾನು ಬಲಶಾಲಿಯಾಗುತ್ತಿದ್ದೇನೆಂಬ ಭ್ರಮೆಯಲ್ಲಿ ನಿಃಶಕ್ತನಾಗುತ್ತಾ ಹೋಗುತ್ತಾನೆ. ಇದೆಲ್ಲದರ ತಾರ್ಕಿಕ ಕೊನೆ ಸರ್ವನಾಶವೆಂದು ಹೇಳಿದವರನ್ನು ಅಭಿವೃದ್ಧಿಯ ವಿರೋಧಿ, ಸಿನಿಕ, ನಿರಾಶವಾದಿಯೆಂದು ಹೀಗಳೆಯಲಾಗುತ್ತಿದೆ.
ನಡಹಳ್ಳಿ ವಸಂತ್