ಭಾರತ ದೀರ್ಘಕಾಲದ ಸ್ವಾತಂತ್ರ್ಯ ಹೋರಾಟ ನಡೆಸಿದ ದೇಶ. ಬ್ರಿಟಿಷರ ವಿರುದ್ಧ ಅವರ ಕಾನೂನು ಮುರಿಯುವ ಆತ್ಮವಿಶ್ವಾಸದ ಚಳುವಳಿಗಳು ಹಲವು. ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹಗಳನ್ನು ಇಲ್ಲಿ ನೆನಪಿಸಬಹುದು. ಅದಕ್ಕೇ ಇರಬೇಕು, ಸ್ವತಂತ್ರ ಭಾರತದಲ್ಲೂ ಭಾರತೀಯರು ಕಾನೂನುಗಳನ್ನು ಮುರಿಯುವುದರಲ್ಲೇ ಹೆಚ್ಚು ಆಸಕ್ತರು!
ಇದಕ್ಕೆ ಸ್ವಚ್ಛ ಉದಾಹರಣೆ ಪ್ಲಾಸ್ಟಿಕ್ ಬಳಕೆ. ಸರ್ಕಾರ 40 ಮೈಕ್ರಾನ್‍ನಷ್ಟು ತೆಳುವಾದ ಪ್ಲಾಸ್ಟಿಕ್ ಚೀಲಗಳ ತಯಾರಿಕೆ, ಬಳಕೆಯನ್ನು ನಿಷೇಧಿಸಿದೆ. ಹಲವು ರಾಜ್ಯಗಳಲ್ಲಿ ಒಟ್ಟಾರೆ ಪ್ಲಾಸ್ಟಿಕ್ ಕವರ್‍ಗಳಿಗೇ ಬಹಿಷ್ಕಾರವಿದೆ. Who cares? ಕ್ಯೂ ಮುರಿದು ಟಿಕೆಟ್ ಪಡೆಯುವುದರಲ್ಲಿಯೇ ಗೆಲುವಿನ ನಗೆ ಬೀರುವ, ಏಕಮುಖ ಸಂಚಾರ ರಸ್ತೆಯಲ್ಲಿ ರಸ್ತೆ ನಿಯಮ ಮುರಿದು ನುಗ್ಗುವ ಕೆಚ್ಚಿನ ನಮಗೆ ಪ್ಲಾಸ್ಟಿಕ್ ನಿಷೇಧ ಅನ್ವಯವಾಗುವುದು ಇತರರಿಗೆ ಮಾತ್ರ ಎನ್ನಿಸಿಬಿಟ್ಟಿದೆ!
ಬ್ರಿಟಿಷರ ಆಳ್ವಿಕೆಯಿಂದಾಗಿ ಅವರ ಹತ್ತು ಹಲವು ಸಂಪ್ರದಾಯಗಳನ್ನು ಅಳವಡಿಸಿಕೊಂಡವರು ನಾವು. ಅವರ ಸಂವಿಧಾನವನ್ನು ಅನುಕರಿಸಿದ್ದೂ ನಿಜ. ಪ್ಲಾಸ್ಟಿಕ್ ಕುರಿತ ಅವರ ಕ್ರಮಗಳನ್ನು ನಾವು ಪಾಲಿಸಿದ್ದರೆ ಕ್ರಾಂತಿಕಾರಕ ಬದಲಾವಣೆ ಸಾಧ್ಯವಿತ್ತು. ಇಂದು ಪ್ಲಾಸ್ಟಿಕ್ ನಿಷೇಧ ಕುರಿತಂತೆ ಇಂಗ್ಲೆಂಡ್‍ನಿಂದ ಹರಿದು ಬರುತ್ತಿರುವ ಅಂಕಿಅಂಶಗಳು ನಮಗೂ ಆ ದಿಕ್ಕಲ್ಲಿ ಉತ್ತೇಜಿಸುವಂತವು.
ಇಂದು ಅಲ್ಲಿನ ಅಂಗಡಿಯವರು ಶೇ.85ರಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸಿದ್ದಾರೆ. ಅಲ್ಲಿನ ಮಾಕ್ರ್ಸ್ ಸ್ಪೆನ್ಸರ್ ಮಾರಾಟ ಮಳಿಗೆ ಕಂಪನಿ ಹೇಳುವ ಪ್ರಕಾರ, ಮನೆಗೆ ಪ್ಲಾಸ್ಟಿಕ್ ಬ್ಯಾಗ್ ಪಡೆದು ಪದಾರ್ಥ ಒಯ್ಯುವವರ ಸಂಖ್ಯೆ ಶೇ.80ರಷ್ಟು ಕುಸಿದಿದೆ. ಸಂಖ್ಯೆಯಲ್ಲಿ ಹೇಳುವುದಾದರೆ, ವಾರ್ಷಿಕ 460 ಮಿಲಿಯನ್ ಬ್ಯಾಗ್ ಬಳಕೆಯಿಂದ 80 ಮಿಲಿಯನ್‍ಗೆ ಕುಸಿದಿದೆ.
ಅಲ್ಲಿನ ಟೆಸ್ಕೋ ವ್ಯಾಪಾರಿ ಮಳಿಗೆ ಗ್ರಾಹಕರಿಗೆ `ಗ್ರೀನ್ ಪಾಯಿಂಟ್’ ಆಮಿಷ ಒಡ್ಡಿದೆ. ಪ್ರತಿಬಾರಿ ಹಳೆಯ ಪ್ಲಾಸ್ಟಿಕ್ ಬ್ಯಾಗ್‍ನ್ನೇ ತಂದು ವ್ಯಾಪಾರ ಮಾಡುವವರಿಗೆ ಹಸಿರು ಅಂಕಗಳು ಸಿಗುತ್ತವೆ. ನಿರ್ದಿಷ್ಟ ಅಂಕಗಳು ಒಟ್ಟಾದಾಗ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳು ಲಭ್ಯ. ಈ ವಿಧಾನದಿಂದ ಟೆಸ್ಕೋ ಒಂದು ಸಂಸ್ಥೆಯೇ ಮೂರು ಬಿಲಿಯನ್ ಬ್ಯಾಗ್‍ನ್ನು ಉಳಿಸಿದೆಯಂತೆ.
ಈ ನಡುವೆ ವಿಪರೀತ ಪ್ಲಾಸ್ಟಿಕ್‍ನಿಂದಾಗಿ ಬ್ರಿಟನ್‍ನ ಪ್ಲಾಸ್ಟಿಕ್ ಸಂಸ್ಕರಣ ಘಟಕಗಳ ಮೇಲೆ ಆಗಾಗ ಒತ್ತಡ ಬೀಳುತ್ತಿತ್ತು. ಅಲ್ಲಿನ ವೇಸ್ಟ್ ರಿಸೋರ್ಸ್ ಆ್ಯಕ್ಷನ್ ಪ್ರೋಗ್ರಾಂನ ಮಾಹಿತಿಯ ಅನ್ವಯ 2006ರ 13.4 ಬಿಲಿಯನ್‍ನಿಂದ ಎರಡೇ ವರ್ಷಗಳಲ್ಲಿ 9.9 ಬಿಲಿಯನ್‍ಗೆ ಪ್ಲಾಸ್ಟಿಕ್‍ನ ಬಳಕೆ ಪಟ್ಟಿ ಕುಸಿದಿತ್ತು. ಸರ್ಕಾರ `ನಿಮ್ಮೊಂದಿಗೆ ಸದಾ ಒಂದು ಬ್ಯಾಗ್’ ಆಂದೋಲನ ಹಮ್ಮಿಕೊಂಡಾಗಲಂತೂ ಭಾರೀ ಉತ್ತೇಜಕ ಪ್ರತಿಕ್ರಿಯೆ ಸಿಕ್ಕಿತ್ತು. ಸರಾಸರಿ ವಾರ್ಷಿಕ ಐದು ಬಿಲಿಯನ್ ಬ್ಯಾಗ್ ಬಳಕೆ ತಗ್ಗಲಾರಂಭಿಸಿದೆ. ಒಂದು ಅಂದಾಜಿನ ಪ್ರಕಾರ, ಈವರೆಗೆ 130,000 ಟನ್‍ಗಳ ಕಾರ್ಬನ್ ಡೈ ಆಕ್ಸೈಡ್‍ನ್ನು ಉಳಿಸಲಾಗಿದೆ. ಇದು ವಾರ್ಷಿಕ 41 ಸಾವಿರ ಕಾರುಗಳನ್ನು ರಸ್ತೆಯಿಂದ ಹೊರಗಿಟ್ಟಷ್ಟು ಸ್ವಚ್ಛ ಪರಿಸರವನ್ನು ಕೊಡುವುದು ಎನ್ನಬಹುದು.
ಭಾರತದಲ್ಲೂ ಬಿಗ್‍ಬಜಾರ್‍ಗಳಂತ ಮಾಲ್ ವ್ಯವಸ್ಥೆಯಿದೆ. ಹೇಳಿ ಕೇಳಿ ನಾವು ಆಮಿಷಗಳಲ್ಲಿ ಆಸಕ್ತರು. ಭಾರತದಲ್ಲೂ `ಹಸಿರು ಅಂಕ’ ಕೊಡುವ ತಂತ್ರ ರೂಪಿಸಬಹುದು. ನಿರ್ದಿಷ್ಟ ಅಂಕ ಗಳಿಸಿದಾಗ ಗಿಫ್ಟ್ ತಗೊಳ್ಳಿ ಎನ್ನಬಹುದು. ಬರೀ ಮಾಲ್‍ಗೆ ಅಂತಲ್ಲ, ಎಲ್ಲೆಡೆ ಹೊಗುವಾಗಲೂ ನಮ್ಮ ಜೊತೆಗೆ ಕನಿಷ್ಟ ಮೂರು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಒಯ್ದಿರಬೇಕು. ಇದು ಬೇರೆಯವರಿಗೆ ಹೇಳಬೇಕಾದ ಮಾತಲ್ಲ. ನಾವೇ ಇವತ್ತಿನಿಂದಲೇ ಜಾರಿ ಮಾಡಬೇಕು. ನೆನಪಿರಲಿ, ನಾವೇ! ಆಗ ಇಂಗ್ಲೆಂಡಿಗರಿಂದಾದ ಅಂಕಿಅಂಶಗಳು ನಮ್ಮಲ್ಲೂ ಸೃಷ್ಟಿಯಾಗುತ್ತವೆ.
ಪ್ಲಾಸ್ಟಿಕ್ ಬಳಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿರುವುದು ಪ್ಲಾಸ್ಟಿಕ್ ಬಾಟಲಿಯ ಕುಡಿಯುವ ನೀರು. ಇಂದು ವಾರ್ಷಿಕ 2.7 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ರಾಜ್ಯ ಇದರಿಂದ ಸೃಷ್ಟಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಪುನರ್ಬಳಕೆ ಅಪರೂಪವಾಗಿರುವ ಹಾಗೂ ಈ ಲೆಕ್ಕದಲ್ಲಿ ತಂಪು ಸಾಫ್ಟ್ ಪಾನೀಯಗಳ ಬಾಟಲಿ ಲೆಕ್ಕ ಸೇರದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಗಂಭೀರತೆ ನಿಮಗೂ ಅರ್ಥವಾದೀತು.
ಬಾಟಲಿ ತ್ಯಾಜ್ಯ ಬಚಾಯಿಸಲು ಹಲವು ಸಾಧ್ಯತೆಗಳಿವೆ. ಸರ್ಕಾರಗಳು ದೊಡ್ಡ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರಿನನಲ್ಲಿ ವ್ಯವಸ್ಥೆ ಮಾಡಿದರೆ ಸಾಕು. ಇಂತಹ ಕ್ರಮದಿಂದ 2008ರಿಂದ ಶೇ.ಒಂಬತ್ತರ ಪ್ಲಾಸ್ಟಿಕ್ ಬಾಟಲಿ ಬಳಕೆ ಕಡಿಮೆಯಾಗಿದೆ. ಸಾರ್ವತ್ರಿಕವಾಗಿ ಇದು ಎಲ್ಲ ದೇಶಗಳ ಆಡಳಿತ ಜಾರಿಗೆ ತಂದರೆ ಕ್ರಾಂತಿಯೇ ಆದೀತು.
2009ರ ಜುಲೈನಲ್ಲಿ ಆಸ್ಟ್ರೇಲಿಯಾದ ಬಂಡನೋನ್ ನಗರ ಬಾಟಲಿ ಕುಡಿಯುವ ನೀರನ್ನು ನಿಷೇಧಿಸಿದೆ. ಪರ್ಯಾಯವಾಗಿ ಪುನರ್ಬಳಕೆ ಬಾಟಲಿ ಬಳಕೆಯನ್ನು ಪ್ರೋತ್ಸಾಹಿಸಲಾಗಿದೆ. ಇ ಸೈಕಲ್ ಎಂಬ ಅಂತರ್ರಾಷ್ಟ್ರೀಯ ಪ್ರಶಸ್ತಿ ಗಳಿಸಿರುವ ಈ ಧಾತುವಿನ ಕಾರಣ ಬಾಟಲಿಯನ್ನು ಪದೇ ಪದೇ ಬಳಸಬಹುದು. ಮಾತ್ರವಲ್ಲ, ಹಾಳಾದ ಬಾಟಲಿಗಳನ್ನು ರೀ-ಸೈಕಲ್ ಮಾಡಬಹುದು. ಅಲಾದಿನ್ ಕಂಪನಿಯ ಈ ತಂತ್ರ ಪೇಟೆಂಟ್ ವ್ಯಾಪ್ತಿಯ ಹೊರಗಿಡುವ ಕೆಲಸವಾಗಬೇಕು.
ಕೊನೆಪಕ್ಷ, ಪುನರ್ಬಳಕೆ ಬಾಟಲಿಗಳು ಬಂದರೂ ಸಾಕು. ಈಗ ಪರಿಸರ ಬಚಾವ್ ಒಂದು ಫ್ಯಾಷನ್ ಕೂಡ ಆಗಿರುವುದರಿಂದ ಅಪಾಯವಿಲ್ಲ ಎಂಬ ಸೂಚನೆ ಸಿಕ್ಕರೆ ಪುನರ್ಬಳಕೆ ಸಲೀಸು. 2009ರ ಸುಂಡೇನ್ ಉತ್ಸವದಲ್ಲಿ `ನಲ್ಗೀನ್’ ಕಂಪನಿ ರೀ ಯೂಸ್ ಬಾಟಲಿಯನ್ನು ಪೂರ್ಣ ಫೆಸ್ಟಿವಲ್‍ನಲ್ಲಿ ಒದಗಿಸುವಲ್ಲಿ ಯಶಸ್ವಿಯಾಗಿತ್ತು.
ಭಾರತದ ಮಟ್ಟಿಗೆ ಹೇಳುವುದಾದರೆ, ಮತ್ತೆ ಹಳೇ ಜಮಾನಾದಲ್ಲಿದ್ದಂತೆ ಕಾಗದದ ಪ್ಯಾಕಿಂಗ್‍ನ ಬಿಸ್ಕೇಟ್, ಅಡಿಕೆ ಪುಡಿ, ಟೂತ್‍ಪೇಸ್ಟ್ ಮೊದಲಾದವುಗಳ ತಯಾರಿಕೆಯನ್ನು ಪುನರಾರಂಭಿಸಬೇಕೆ ವಿನಃ ಜನರಿಗೆ ಬುದ್ಧಿ ಹೇಳುವುದು ಕಷ್ಟ ಕಷ್ಟ!
– ಮಾ.ವೆಂ.ಸ.ಪ್ರಸಾದ್
- Advertisement -
- Advertisement -
- Advertisement -
- Advertisement -