ದೇವಭೂಮಿಯ ಜಾಡಿನಲ್ಲಿ……
ಚಾರ್‍ಧಾಮ್ ಯಾತ್ರಾ ಕಥನ.
ಲೇ: ಎಂ. ಶ್ರೀನಿವಾಸನ್.
ಪ್ರವಾಸ ಕಥನಗಳು ಕನ್ನಡ ಸಾಹಿತ್ಯ ಪರಂಪರೆಗೆ ಹೊಸದೆನಲ್ಲ, ಹೆಚ್ಚು ಪ್ರಸಿದ್ಧವಾದದ್ದು. ‘ಅಮೇರಿಕೆಯಲ್ಲಿ ಗೂರುರರು’ ಹಾಗೇ ಅನೇಕರು ತಾವು ಮಾಡಿದ ಪ್ರವಾಸದ ಕುರಿತಾಗಿ ಅಲ್ಲಿ ಪಡೆದ ಅಥವಾ ಅಲ್ಲಿ ಅವರಿಗೆ ದಕ್ಕಿದ ಅನುಭವಗಳನ್ನು ಅಣಿಬದ್ದಗೊಳಿಸಿದ್ದಾರೆ. ಕೆಲವು ಪುಸ್ತಕ ರೂಪದಲ್ಲಿ – ಇನ್ನು ಕೆಲವು ಪತ್ರಿಕೆಗಳಲ್ಲಿ ಲೇಖನಗಳಾಗಿ ಪ್ರಕಟವಾಗಿದೆ.
ಪ್ರಸ್ತುತ ದೇವಭೂಮಿಯ ಜಾಡಿನಲ್ಲಿ – ಎಂಬ ಪ್ರವಾಸ ಕಥನ ಲೇಖಕರ ಮೂರನೆಯ ಪ್ರವಾಸ ಕಥನ. ಮೊದಲೆರಡು ಪ್ರವಾಸ ಕಥನಗಳು ಬರೆದ ಅನುಭವದ ಆಧಾರದಲ್ಲಿ ಇದರ ಬರವಣಿಗೆಗೆ ಲೇಖಕರಿಗೆ ಹೆಚ್ಚು ಕಷ್ಟವಾಗಿರಲಿಕ್ಕಿಲ್ಲ. ಎಂಬುದು ಇದರ ಈಟದಿಂದಲೇ ಅರ್ಥವಾಗುತ್ತದೆ. ಈ ಪ್ರವಾಸ ಕಥನವನ್ನು ಅವರು ‘ಚಾರ್ ಧಾಮ್ ಯಾತ್ರಾ ಕಥನ’ ವೆಂದೆ ಕರೆದಿದ್ದಾರೆ. ಚಾರ್ ಧಾಮ್ ಯಾತ್ರೆಯೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ ಕ್ಷೇತ್ರದರ್ಶನ.
ಯಾತ್ರೆ ಎಂದರೆ ಪ್ರವಾಸವೇ ಹೌದಾದರೂ ಅದರ ಉದ್ದೇಶ ಧಾರ್ಮಿಕವಾದದ್ದು. ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಇವು ರೂಪುಗೊಳ್ಳುತ್ತವೆ. ಈ ದೃಷ್ಟಿಯಿಂದ ಶ್ರೀ ಶ್ರೀನಿವಾಸನ್‍ನವರು ಅಪ್ಪಟ ಧಾರ್ಮಿಕ ಶ್ರದ್ಧೆಯನ್ನು ಹೊತ್ತೇ ಯಾತ್ರೆಗೆ ತೆರಳಿದ್ದ ಇಲ್ಲಿನ ಪ್ರತಿಯೊಂದು ಪುಟದಲ್ಲೂ ಸ್ಪಷ್ಟವಾಗುತ್ತದೆ. ವಿಶೇಷವೆಂದರೆ ಇವರ ಧಾರ್ಮಿಕ ಶ್ರದ್ಧೆಯೊಂದಿಗೆ – ಪ್ರತಿಯೊಂದನ್ನು ಚಿಕಿತ್ಸಕ ದೃಷ್ಟಿಯಿಂದ ಪರಿಶೀಲಿಸುವ ಇವರ ಸ್ವಭಾವ ಇಡೀ ಪುಸ್ತಕವನ್ನು ಒಂದು ಸಂಗ್ರಹ ಯೋಗ್ಯ ಕೃತಿಯನ್ನಾಗಿಸಿದೆ.
ತಮ್ಮಂತೆ ಯಾತ್ರೆಯನ್ನು ಕೈಗೊಳ್ಳಬಹುದಾದವರಿಗೆ ಅನುಕೂಲವಾಗಲು ನೀಡಿದ ಕೆಲವೊಂದು ಮಾಹಿತಿಗಳು ನಿಜಕ್ಕೂ ಉಪಯುಕ್ತವಾದವುಗಳು. ಅವರು ತಮ್ಮ ಯಾತ್ರೆಯುದ್ದಕ್ಕೂ ಪಡೆದ ಅನುಭವಗಳು ಬೆರಗು ಹುಟ್ಟಿಸುವಂತಿದೆ. ಇದು ಮೋಜಿನ ಪ್ರವಾಸವಲ್ಲ. ಪ್ರಯಾಸದ ಯಾತ್ರೆ ಪುಣ್ಯ ಸಂಗ್ರಹವೂ ಉದ್ದೇಶಗಳಲ್ಲಿ ಒಂದಾಗಿದ್ದೀತು ಇವರು ಕೇವಲ ಸ್ಥಳಗಳನ್ನು ನೋಡಿ ಅದನ್ನು ಓದುಗರ ಕಣ್ಣಿಗೆ ಕಟ್ಟುವಂತೆ ವರ್ಣಿಸುವುದಕ್ಕೆ ಸೀಮಿತವಾಗದೆ ಪ್ರತಿಯೊಂದು ಸ್ಥಳದ ಪುರಾಣ ಇತಿಹಾಸಗಳನ್ನು ಸಮಗ್ರವಾಗಿ ಸಂಗ್ರಹಿಸಿ ನೀಡಿದ್ದಾರೆ.
ಪ್ರತಿಯೊಂದು ಕ್ಷೇತ್ರದ ವಿಶಿಷ್ಟತೆಯನ್ನು ಅಧ್ಯಾಯವಾರು ತಿಳಿಸಿಕೊಟ್ಟಿದ್ದಾರೆ. ಅದರ ಜೊತೆ ಜೊತೆಗೆ ತಮ್ಮ ಆಳವಾದ ಅಧ್ಯಯನದ ಮೂಲಕ ಪ್ರತಿಯೊಂದರ ಕುರಿತು ವಿವರಣೆ ನೀಡಿದ್ದಾರೆ. ಹಾಗಾಗಿ ಕೆಲವೊಮ್ಮೆ ಪುರಾಣಗಳನ್ನು ಅಧ್ಯಾಯನ ಮಾಡುತ್ತಿರುವಂತೆ ನಮಗನ್ನಿಸಿದರೆ – ತಕ್ಷಣ ಯಾರು ಯಾವಾಗ-ಎಲ್ಲಿ-ಏತಕ್ಕಾಗಿ ಇದನ್ನು ನಿರ್ಮಿಸಿದರು ಎಂದು ಸ್ಥಳದ ಇತಿಹಾಸವನ್ನು ಅವರು ನೀಡುತ್ತಾರೆ. ಚಾರ್ ಧಾಮ ಯಾತ್ರೆಗೆ ಯಾರಾದರೂ ಹೋಗುವುದಿದ್ದರೆ – ಇದನ್ನು ಓದಿಕೊಂಡು ಹೋದಲ್ಲಿ ಅಲ್ಲಿನ ವಿಷಯಗಳು ಅವರಿಗೆ ಸರಳವಾಗಿ ಅರ್ಥವಾಗಲು ಸಾಧ್ಯ . ಇದು ಆ ಕುರಿತು ಸಂಪೂರ್ಣವಾಗಿ ಮಾಹಿತಿ ನೀಡಬಲ್ಲದು. ಆ ದೃಷ್ಟಿಯಿಂದ ಇದು ಓದು ಆಕರ ಗ್ರಂಥವೂ ಆಗಬಲ್ಲದು.
ಯಮುನಾ ನದಿ, ಗಂಗಾನದಿಯ ಕುರಿತು ಲೇಖಕರಿಗೆ ವಿಶೆಷವಾದ ಆಕರ್ಷಣೆ ಇದ್ದಿರುವುದು ನಿಜ. ಹಾಗಾಗಿ ಅವುಗಳ ವರ್ಣನೆಯಲ್ಲಿ ಲೇಖಕರ ತಾದಾತ್ಮ್ಯತೆಯನ್ನು ನಾವು ಗಮನಿಸಬಹುದು. ದೇವಾನುದೇವತೆಗಳ ವರ್ಣನೆಗಿಂತ-ನದಿ-ಪರ್ವತ – ಒಟ್ಟಾರೆ ನಿಸರ್ಗದ ಕುರಿತಾದ ಮೋಹ ಇವರ ಗದ್ಯಕ್ಕೂ ಒಂದು ಪದ್ಯದ ಶಕ್ತಿಯನ್ನು ನೀಡಿದೆ ಎಂದರೆ ಅದು ಖಂಡಿತ ಉತ್ಪ್ರೇಕ್ಷೆಯಾಗಲಾರದು. ಹೀಗಿದ್ದೂ ಲೇಖಕರು ಕೇವಲ ಆಧ್ಯಾತ್ಮ ಚಿಂತನೆಯಲ್ಲಿ ನಿಸರ್ಗದ ಸೌಂದರ್ಯ ಸ್ವಾದನೆಯಲ್ಲಿ ಸಂಪೂರ್ಣವಾಗಿ ಕಳೆದುಕೊಳ್ಳುವುದಿಲ್ಲ. ವರ್ತಮಾನದ ವಿವರಗಳನ್ನು ಮರೆಯದೆ ಪ್ರಸ್ತಾಪಿಸುತ್ತಾ ಸಾಗುತ್ತಾರೆ. ಯಾತ್ರೆಯೆನ್ನುವುದು ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತವಾಗಬೇಕಿಲ್ಲ ಎಂಬ ಹಿತವಚನವನ್ನು ಹೇಳಿದ ಅವರ ಬಸ್ ಡ್ರೈವರ್ ರಮೋಲಾನ ಮಾತನ್ನು ಮರೆಯದೇ ಉದ್ಗರಿಸುತ್ತಾರೆ. ಇಂಥ ಇಳಿಯವಸ್ಸಿನಲ್ಲಿ ಇಷ್ಟು ಕಷ್ಟದ ಯಾತ್ರೆ ಬರುತ್ತೀರಿ. ಒಳ್ಳೆ ವಯಸ್ಸಿನಲ್ಲಿ ಎಲ್ಲಾ ಸೌಲಭ್ಯಗಳೂ ಸಿಗುವುದಿಲ್ಲ. ಬಾಂಬೆ ತಿರುಗುತ್ತೀರಿ ಅದರ ಬದಲಿಗೆ ಯೌವನ ಇರುವಾಗಲೇ ನೀವುಗಳು ಈ ರೀತಿಯ ಮಾತ್ರೆಗಳನ್ನು ಮುಗಿಸಿಬಿಟ್ಟರೆ ಇಳಿವಯಸ್ಸಿನಲ್ಲಿ ಬೇಕಿದ್ದರೆ ಸುಖವಾಗಿ ದಿಲ್ಲಿ, ಬಾಂಬೆ ತಿರುಗಬಹುದು. ಆದರೆ ಯಾರು ಹಾಗೆ ಮಾಡುವುದಿಲ್ಲ. ಎಲ್ಲ ಉಲ್ಟಾ ಮಾಡುತ್ತಾರೆ. ಅರ್ಥ ಪೂರ್ಣವಾದದ್ದು ಯಾರಿಂದ ಲಭ್ಯವಾದರೂ ಅದನ್ನು ಸ್ವೀಕರಿಸಿ ತಿಳಿಸುವ ದೊಡ್ಡತನ ಲೇಖಕರಿಗಿದೆ. ಅದೂ ಅಲ್ಲದೇ ಎಲ್ಲೂ ಕೂಡ ಸಹ ಪ್ರಯಾಣಿಕರ ಕುರಿತಾದ ಅಸಮಾಧಾನವನ್ನಾಗಲೀ, ಅಸಹನೆಯನ್ನಾಗಲೀ ಲೇಖಕರು ವ್ಯಕಪಡಿಸುವುದಿಲ್ಲ. ಯಾತ್ರೆಯನ್ನು ಏರ್ಪಡಿಸಿದವರ ಅಸಹಾಯಕ ಸ್ಥಿತಿಯನ್ನು (ಕೆಲವೊಮ್ಮೆ ಅನಿವಾರ್ಯ) ಸ್ಥಿತಪ್ರಜ್ಞನಂತೆ ಸ್ವೀಕರಿಸಿ ಸಾಗುತ್ತಾರೆ. ಯಾತ್ರೆಯ ಉದ್ದೇಶ ಕೇವಲ ನೋಡುವುದಲ್ಲ – ಕೈಮುಗಿದು – ತೀರ್ಥ ಪ್ರಸಾದವನ್ನು ಪಡೆಯುವುದಷ್ಟೆ ಅಲ್ಲ – ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥೈಸಿಕೊಳ್ಳುವುದು ಎಂಬ ಸಂಕಲ್ಪ ಹೊತ್ತ ಯಾತ್ರಿಯಂತೆ ಇದರ ನಡೆ.
ಪುಸ್ತಕದ ಹೂರಣಕ್ಕೆ ಹೆಚ್ಚಿನ ಮಹತ್ವವನ್ನು – ಅವರು ಅಲ್ಲಲ್ಲಿ ನೀಡಿದ ಫೋಟೋಗಳು ಕಪ್ಪು – ಬಿಳಿಯಲ್ಲಿ ಮಾತ್ರ ಇದ್ದರೂ ಇವು ಅವುಗಳ ಹೌದೆಂಬುದನ್ನು ಇವು ಸಾಬೀತುಪಡಿಸುತ್ತವೆ. ಹಾಗೇ ಯಾತ್ರೆಯ ಕುರಿತಾದ ಮಾರ್ಗದ ನಕ್ಷೆಗಳು ಕೂಡ ಓದುಗರಿಗಿಂತಲೂ ಹೆಚ್ಚಾಗಿ – ಇಂಥ ಯಾತ್ರೆಗಳಲ್ಲಿ ಆಸಕ್ತಿಯುಳ್ಳವರಿಗೆ ಸಹಾಯ ನೀಡಬಲ್ಲದು. ಜೊತೆಗೆ ಭಾರತದ ಭೌಗೋಳಿಕ ಚಿತ್ರ – ಸಚಿತ್ರವಾಗಿ ನಮ್ಮೆದುರಿಗೆ ಗೋಚರಿಸುತ್ತದೆ. “ದೂರವನ್ನು ಕಿ.ಮೀ. ಗಳಲ್ಲಿ ಹೇಳುವುದಕ್ಕೆ ಬದಲಾಗಿ ಗಂಟೆಗಳಲ್ಲಿ ಹೇಳುವುದೇ ಸೂಕ್ತ” ಎಂಬುದು ಲೇಖಕರ ವೈಯುಕ್ತಿಕ ಅಭಿಪ್ರಾಯ. ಹೀಗೆ ಅಲ್ಲಲ್ಲಿ ಲೇಖಕರು ತಮ್ಮ ವೈಯುಕ್ತಿಕ ಅಭಿಪ್ರಾಯಗಳನ್ನು ಮಂಡಿಸಿದ್ದಿದೆ. ಉದಾಹರಣೆಗೆ ಹೇಳುವುದಾದರೆ ಉತ್ತರ ಕಾಶಿಯನ್ನು ಈ ಚಾರ್‍ಧಾಮ್ ಯಾತ್ರೆಯ ಕೇಂದ್ರ ಸ್ಥಾನವನ್ನಾಗಿ ರೂಪಿಸಿದರೆ ಹೇಗೆಂಬ ಚರ್ಚೆ (ಪು.99).
ಯಾತ್ರೆಯ ಪ್ರಾರಂಭದಲ್ಲೆ ಲೇಖಕರು ತಾವು ಅಪ್ಪಟ ಕನ್ನಡಿಗರು – ಕನ್ನಡಾಭಿಮಾನಿ ಎಂಬುದನ್ನು ಅವರಿಗರಿವಿಲ್ಲದೇ ಪ್ರಕಟಿಸಿಬಿಡುತ್ತಾರೆ. ಹಾಗಾಗಿಯೇ ದೇವನಹಳ್ಳಿ ವಿಮಾನ ನಿಲ್ದಾಣದ ಆಂಗ್ಲಮಯ ವಾತಾವರಣ ಇವರಿಗೆ ಅಭಾಸವಾಗಿ ಕಾಣುತ್ತದೆ. ಆದರೆ ಇಲ್ಲಿ ಈ ಸಹಜತೆಯ ಜೊತೆಗೆ ಕನ್ನಡವನ್ನು ಧಿಕ್ಕರಿಸುವ, ತುಚ್ಛಿಕರಿಸುವ ಅಸಹಜತೆಯೂ ಭಾಸವಾಗುತ್ತದೆ (ಪು08). ಇಷ್ಟಾಗಿ ಕೂಡ ವೃತ್ತಿಯಲ್ಲಿ ಪತ್ರಕರ್ತರಾದ ಇವರಿಗೆ ಇಂಗ್ಲೀಷ್ ನುಸುಳುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಉದಾಹರಣೆಗೆ ಒಟ್ಟಾರೆಯಾಗಿ ತಾವು ಮಾಡಿರುವ ವ್ಯವಸ್ಥೆಯ ಬಗೆಗೆ ಒಂದು ಪುಟ್ಟ ಲೆಕ್ಚರ್ ಹೊಡೆದರು (ಪು10) ಇಲ್ಲಿ ಲೆಕ್ಚರ್ ಹೊಡೆದು ಬದಲಿಗೆ ಭಾಷಣ ಬಿಗಿದರು ಎಂದು ಬರೆಯಬಹುದಿತ್ತು! ಹಾಗೇ ಆದರೆ “ನಾನಂತು ದಿಲ್ಲಿಯಲ್ಲಿ ಒಂದು ಐಸ್‍ಕಡ್ಡಿ ಶಾಪಿಂಗ್‍ನ್ನು ಮಾಡದೇ” ಎಂಬ ವಾಕ್ಯವನ್ನು ಗಮನಿಸಿ ಹಾಗೇ ಕೆಲವೊಂದು ವಾಕ್ಯಗಳಲ್ಲಿ ಅನವಶ್ಯಕ ಶಬ್ದಾಡಂಬರಗಳೂ ಕಾಣಸಿಗುತ್ತವೆ. ‘ವೀರಭದ್ರ ತನ್ನ ವೀರವನ್ನು ಮೆರೆದುದು (ಪುಟ41) ಇಲ್ಲಿ ವೀರವನ್ನು ಪದದ ಬದಲಿಗೆ ವೀರತನವನ್ನು ಎಂದಾಗಬೇಕಿತ್ತೇನೋ?
ಅದೇನೇ ಇದ್ದರೂ ಇಡಿಯ ಯಾತ್ರಾಕಥನ ಯಾವುದೇ ತೊಂದರೆಯಿಲ್ಲದೇ ಓದಬಹುದಾದ ಕೃತಿ ಪ್ರವಾಸ ಸಾಧ್ಯವಾಗದಿದ್ದರೂ ಸರಿ ಪ್ರವಾಸದ ಅನುಭವವನ್ನು ಪಡೆಯಬಹುದು. ವಿಶೇಷವಾಗಿ ನಮ್ಮ ಪೌರಾಣಿಕ ಮತ್ತು ಐತಿಹಾಸಿಕ ಜ್ಞಾನವೃದ್ಧಿಗೊಳ್ಳಲಂತೂ ಇದು ಸಾಕಷ್ಟು ಅನುವು ಮಾಡಿಕೊಡುತ್ತದೆ.
ಪುಸ್ತಕದ ಕುರಿತು ಇರುವ ಅಸಮಧಾನವೆಂದರೆ ಇದರ ಮುಖಪುಟ ಗಟ್ಟಿರಟ್ಟಿನಿಂದ ರಚಿತವಾಗಿದ್ದರೆ, ಎಂಬುದು 2011 ರ ಸೆಪ್ಟೆಂಬರ್ 15 ರಿಂದ 3 ರವರೆಗೆ ಕೈಗೊಂಡ ಯಾತ್ರೆಯೊಂದರ ಕಥನ ಇಷ್ಟು ಶ್ರೇಷ್ಠವಾಗಿ ನಮಗೆ ಓದಲು ದಕ್ಕಿದ್ದು, ಸಂತಸದ ಸಂಗತಿ. ಹಾಗೇ ಇದನ್ನು ಧಾರವಾಹಿಯಾಗಿ ಮೊದಲು ಪ್ರಕಟಿಸಿದ ಶಿವಮೊಗ್ಗದ ನಾವಿಕ ಪತ್ರಿಕೆ ಕೂಡ ಸ್ತುತ್ಯಾರ್ಹóವಾದ ಕೆಲಸವನ್ನೇ ಮಾಡಿದ್ದು, ಅದಕ್ಕೂ ಅಭಿನಂದನೆಗಳು ಸಲ್ಲಬೇಕು.
ರವೀಂದ್ರ ಭಟ್ ಕುಳಿಬೀಡು.
- Advertisement -
- Advertisement -
- Advertisement -
- Advertisement -