Home Blogroll ನೀವೆಷ್ಟು ಒಳ್ಳೆಯ ಸಂವಹನಕಾರರು?

ನೀವೆಷ್ಟು ಒಳ್ಳೆಯ ಸಂವಹನಕಾರರು?

0

ಶಂಕರ್‍ನಾಗ್‍ರ “ನೋಡಿ ಸ್ವಾಮಿ ನಾವಿರೋದೇ ಹೀಗೆ” ಸಿನಿಮಾದಲ್ಲಿ ಒಂದು ಸಂದರ್ಭ ಹೀಗಿದೆ. ಪ್ರೇಮಿಗಳಾದ ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಮರುದಿನ ಕಾಮತ್ ಹೋಟೆಲಿನ ಹತ್ತಿರ ಭೇಟಿಯಾಗಬೇಕೆಂದು ನಿರ್ಧರಿಸುತ್ತಾರೆ. ಮರುದಿನ ಇಬ್ಬರೂ ಕಾಮತ್ ಹೋಟೆಲಿನ ಹತ್ತಿರ ಕಾಯುತ್ತಿದ್ದರೂ ಒಬ್ಬರಿಗೊಬ್ಬರು ಭೆಟ್ಟಿಯಾಗುವುದೇ ಇಲ್ಲ. ಆ ಮರುದಿನ ಶಂಕರ್‍ನಾಗ್ ಪ್ರೇಮಿಗಳನ್ನು ಮತ್ತೆ ಒಂದುಗೂಡಿಸುವ ಪ್ರಯತ್ನದಲ್ಲಿರುವಾಗ ಇಬ್ಬರೂ ಯಾವ ಸ್ಥಳದಲ್ಲಿ ಕಾಯುತ್ತಿದ್ದಿರಿ, ಎಂದು ಕೇಳುತ್ತಾರೆ ಒಬ್ಬರು, “ಲಾಲ್‍ಬಾಗ್ ಕಾಮತ್ ಹೋಟೆಲಿನ ಹತ್ತಿರ” ಎಂದು ಹೇಳಿದರೆ ಇನ್ನೊಬ್ಬರು, “ನಾನು ಮಿನರ್ವ ಕಾಮತ್ ಹೋಟೆಲಿನ ಹತ್ತಿರ ಕಾಯುತ್ತಿದ್ದೆ” ಎಂದು ಹೇಳುತ್ತಾರೆ! ಕಮ್ಯುನಿಕೇಷನ್ ಗ್ಯಾಪ್ ಅಂದರೆ ಸಂವಹನದಲ್ಲಿನ ಅಂತರಕ್ಕೆ ಇದೊಂದು ತಮಾಶೆಯ ಉದಾಹರಣೆ ಅಷ್ಟೆ.
ನಮ್ಮ ನಿತ್ಯ ಜೀವನದಲ್ಲಿ ಇಂತಹ ಘಟನೆಗಳು ಮತ್ತೆಮತ್ತೆ ನಡೆಯುತ್ತಿದ್ದರೂ ನಾವು ಮಾತ್ರ ನಮ್ಮ ರೀತಿನೀತಿಗಳನ್ನು ಸ್ವಲ್ಪವೂ ಬದಲಾಯಿಸಿಕೊಂಡಿರುವುದಿಲ್ಲ. ಮನೆಯಲ್ಲಿ ಗಂಡ ಆಫೀಸಿನ ಕೀಬಂಚ್ ಹುಡುಕುತ್ತಿದ್ದಾನೆ ಎಂದುಕೊಳ್ಳಿ. ಅದು ಸಿಗದಿದ್ದಾಗ ಹೆಂಡತಿಯನ್ನು ಕೇಳುತ್ತಾನೆ. ಅಡಿಗೆ ಮನೆಯಲ್ಲಿ ಊಟದ ಡಬ್ಬಿಯ ತಯಾರಿಯಲ್ಲಿರುವ ಅವಳು, ಅಸಹನೆಯಿಂದ “ಅಲ್ಲೇ ಇದೆ ನೋಡ್ರಿ” ಎನ್ನುತ್ತಾಳೆ. ಮತ್ತೊಮ್ಮೆ ಹುಡುಕಿದ ಗಂಡ, “ಸಿಕ್ತಾ ಇಲ್ಲ ಕಣೆ” ಎಂದು ಗೊಣಗುತ್ತಾನೆ. ತಕ್ಷಣ ಬರುವ ಅವಳು ಮಲಗುವ ಕೋಣೆಯ ವಾರ್ಡ್‍ರೋಬ್‍ನಿಂದ ತೆಗೆದುಕೊಡುತ್ತಾಳೆ. “ಅಯ್ಯೋ ನಾನು ಹಜಾರದಲ್ಲಿ ಹುಡುಕುತ್ತಾ ಇದ್ದೆ. ನೀನು ಅಲ್ಲೇ ಅಂತ ಹೇಳುವ ಬದಲು ಸರಿಯಾಗಿ ಮಲಗುವ ಕೋಣೆ ಎಂದು ಹೇಳಬೇಕಲ್ವಾ?” ಎಂದು ದಬಾಯಿಸಿದರೆ, ಹೆಂಡತಿ, “ನನಗೇನು ಗೊತ್ತು ನೀವು ಹಜಾರದಲ್ಲಿ ಹುಡುಕುತ್ತಾ ಇದ್ದಿರಾ ಎಂದು ನೀವಾದರೂ ಸರಿಯಾಗಿ ಹೇಳಬೇಕಿತ್ತು” ಎಂದು ತಿರುಗೇಟು ನೀಡುತ್ತಾಳೆ.
ಹೆಂಡತಿಯ ತಲೆಯಲ್ಲಿ ಆ ಕ್ಷಣದಲ್ಲಿ ಇರುವ ನಕಾಶೆಯ ಪ್ರಕಾರ “ಅಲ್ಲಿ” ಎಂದರೆ ಮಲಗುವ ಕೋಣೆಯಲ್ಲಿ ಎಂದಿರುತ್ತದೆ. ಅದು ಗಂಡನಿಗೆ ತಿಳಿಯುವುದು ಹೇಗೆ? ಗಂಡನಾದರೂ ಸ್ಪಷ್ಟವಾಗಿ “ಹಜಾರದಲ್ಲಿ ಎಲ್ಲೂ ಕಾಣ್ತಾ ಇಲ್ಲ ಕಣೆ” ಎಂದು ಹೇಳುವುದಿಲ್ಲ. ಅವನ ಪ್ರಕಾರ ಕೀಬಂಚ್ ಇರಬೇಕಾದ ಜಾಗ “ಅಲ್ಲಿ” ಅಲ್ಲ, ಆದರೆ “ಇಲಿ”್ಲ! ಹೊರಗಿನಿಂದ ನೋಡುವವರಿಗೆ ಈ ಅಲ್ಲಿ ಇಲ್ಲಿಗಳೆಲ್ಲಾ ಎಲ್ಲಾದರೂ ಆಗಬಹುದು!
ಊಟಕ್ಕೆ ಕುಳಿತಾಗ ಗಂಡ, “ಎಲ್ಲಿ ಸ್ವಲ್ಪ ಅದು ಬಡಿಸು” ಎನ್ನಬಹುದು. “ಆಫೀಸಿನಿಂದ ಬರುವಾಗ ಸ್ವಲ್ಪ ಇದು ತನ್ನಿ. ಮಕ್ಕಳಿಗೆ ಇವತ್ತು ಸಂಜೆ ಅದು ಮಾಡ್ತೀನೀಂತ ಹೇಳಿದೀನಿ” ಎಂದು ಹೆಂಡತಿ ಹೇಳಬಹುದು. ನಮ್ಮ ಎಷ್ಟೋ ಭಾಷಣಕಾರರ ಮಾತುಗಳಲ್ಲಿ ಕೇವಲ “ಅದು, ಇದು” ಗಳೇ ತುಂಬಿರುತ್ತವೆ. ಮಾಜಿ ಕ್ರಿಕೆಟಿಗ ಶ್ರೀಕಾಂತ್ ಮಾತಿನ ಮಧ್ಯೆ ಶಬ್ದಕ್ಕೆ ತಿಣುಕಾಡುವಾಗ “ವ್ಹಾಟ್ ಯು ಕಾಲ್” ಎನ್ನುತ್ತಿರುತ್ತಾರೆ! ಕೊನೆಗೊಂದು ದಿನ ಅವರು ತಮ್ಮ ಹೆಸರನ್ನೇ ಮರೆತು, “ನಾನು ವ್ಹಾಟ್ ಯು ಕಾಲ್ ಬಿಸಿಸಿಐನ ವ್ಹಾಟ್ ಯು ಕಾಲ್ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷನಾದ ವ್ಹಾಟ್ ಯು ಕಾಲ್ ಶ್ರೀಕಾಂತ್” ಎನ್ನಬಹುದುದು ಎಂದು ನನ್ನ ಸ್ನೇಹಿತನೊಬ್ಬನ ಊಹೆ! ನಮ್ಮೆಲ್ಲರ ತಲೆಯ ಕಂಪ್ಯೂಟರ್‍ನಲ್ಲಿ ಈ ಎಲ್ಲಾ ಶಬ್ದಗಳಿಗೆ ವಿಶೇಷ ಅರ್ಥವಿರುತ್ತದೆ. ಆದರೆ ಅದು ಕೇಳುಗರಿಗೆ ಹೇಗೆ ತಿಳಿಯಬೇಕು?
ಹಾಗಿದ್ದರೆ ನಾವೆಲ್ಲಾ ಏಕೆ ಪದೇಪದೇ ನಮ್ಮ ಮನಸ್ಸಿನಲ್ಲಿರುವುದನ್ನು ಇತರರಿಗೆ ಸರಿಯಾಗಿ ತಲುಪಿಸುವುದರಲ್ಲಿ ವಿಫಲರಾಗುತ್ತೇವೆ? ಇದನ್ನು ಬದಲಾಯಿಸಿಕೊಳ್ಳುವುದು ಹೇಗೆ? ಸ್ಪಷ್ಟವಾಗಿ ಸಂವಹನ ಮಾಡುವುದರಿಂದ ಆಗುವ ಅನುಕೂಲಗಳೇನು?
ಸಂವಹನವೆಂದರೇನು?
ಇದು ಬಹಳ ಸರಳವಾದದ್ದು ಅನ್ನಿಸುತ್ತದೆ ಅಲ್ವಾ? ನಮ್ಮ ಮನಸ್ಸಿನಲ್ಲಿರುವುದನ್ನು ಇನ್ನೊಬ್ಬರಿಗೆ ಹೇಳುವುದೇ ಸಂಹವನ. ಇಬ್ಬರು ವ್ಯಕ್ತಿಗಳ ನಡುವೆ ಸಂಪರ್ಕವನ್ನೇರ್ಪಡಿಸುವುದೇ ಸಂವಹನ. ಕಮ್ಯುನಿಕೇಷನ್‍ಗೆ ಸಂಬಂಧಿಸಿದ ವಿಷಯದಲ್ಲಿ ಪುಸ್ತಕಗಳನ್ನು ಬರೆದಿರುವ ಹೆಚ್ಚಿನ ತಜ್ಞರು ಹೇಳಿರುವುದು ಇಂತಹುದೇ ಅರ್ಥ ಬರುವ ಮಾತುಗಳನ್ನು. ಆದರೆ ವಾಸ್ತವದಲ್ಲಿ ಇದಿಷ್ಟೇ ಸಂವಹನವಾಗುತ್ತದೆಯೇ?
ನಾವು ಹೇಳಿದ ಮಾತನ್ನು ನಾವು ಹೇಳಬೇಕೆಂದಿರುವ ಅರ್ಥದಲ್ಲಿಯೇ ಇನ್ನೊಬ್ಬ ವ್ಯಕ್ತಿ ಸ್ವೀಕರಿಸಿದಾಗ ಮಾತ್ರ ಸಂಹವನ ಪೂರ್ಣವಾಗುತ್ತದೆ. ಹೆಂಡತಿಯ “ಅಲ್ಲಿ” ಗಂಡನಿಗೆ ಬೆಡ್‍ರೂಮಿನಲ್ಲಿ ಎಂದು ತಿಳಿದರೆ ಮಾತ್ರ ಅವಳ ಮಾತಿಗೆ ಅರ್ಥವಿದೆ. ಇಲ್ಲದಿದ್ದರೆ ಹಳೆಯ ಗಾದೆ ಇದೆಯಲ್ವಾ, “ಕೋಣನ ಮುಂದೆ ಕಿನ್ನರಿ ಬಾರಿಸುವುದು”, ಹಾಗಾಗುತ್ತದೆ!
ಈ ದೃಷ್ಟಿಯಿಂದ ಸಂವಹನದ ಅತ್ಯುತ್ತಮ ವ್ಯಾಖ್ಯೆ ಕೊಟ್ಟಿರುವುದು ಎನ್ ಎಲ್ ಪಿ (ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್) ಎನ್ನುವ ಮನೋವಿಜ್ಞಾನದ ಇತ್ತೀಚಿನ ಒಂದು ಶಾಖೆಯಲ್ಲಿ. ಇದರ ಪ್ರಕಾರ “ನಿಮ್ಮ ಮಾತಿಗೆ ಸಿಗುವ ಪ್ರತಿಕ್ರಿಯೆಯೇ ನಿಮ್ಮ ಸಂವಹನದ ಅರ್ಥ”. ಅಂರರೆ ಎದುರಿಗಿನ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನವುದು ಅವನು ನಿಮ್ಮ ಮಾತನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾನೆ ಎನ್ನುವುದಕ್ಕೆ ಸೂಚನೆ. ನೀವು ನಿರೀಕ್ಷಿಸುವ ಪ್ರತಿಕ್ರಿಯೆ ಬಂದಾಗ ಮಾತ್ರ ನಿಮ್ಮ ಭಾವನೆಗಳು ನಿಮಗೆ ಬೇಕಾದ ರೀತಿಯಲ್ಲಿ ಅವನಿಗೆ ತಲುಪಿರುತ್ತವೆ.
ರಸ್ತೆಯಲ್ಲಿನ ಸಣ್ಣ ಅಪಘಾತದಲ್ಲಿ ಗಾಯಗೊಂಡ ಲಲನೆಯೊಬ್ಬಳು ತಪ್ಪು ಮಾಡಿದವನನ್ನು ಹಿಗ್ಗಾಮುಗ್ಗಾ ಬೈಯುತ್ತಾಳೆ. ಅದನ್ನೆಲ್ಲಾ ಕೇಳಿದ ಅವನು “ಅಯ್ಯೋ ಬಿಡಿ ಮೇಡಮ್ ಏನೋ ಸಣ್ಣ ತಪ್ಪಾಗಿದೆ ಅದಕ್ಯಾಕೆ ಇಷ್ಟೆಲ್ಲಾ ಕೂಗಾಡ್ತೀರಾ. ಈಗೇನು ಜೀವ ಹೋಗಿಲ್ವಲ್ಲಾ” ಎನ್ನುತ್ತಾ ಬುರ್ರೆಂದು ಹೋಗಿಬಿಟ್ಟರೆ ಹುಡುಗಿ ಪೆಚ್ಚಾಗುತ್ತಾಳೆ. ತಪ್ಪೊಪ್ಪಿಗೆ, ಕ್ಷಮೆ ಅಥವಾ ಕೊನೆಯ ಪಕ್ಷ ಪಶ್ಚಾತ್ತಾಪದ ನಿರೀಕ್ಷೆಯಲ್ಲಿದ್ದ ಅವಳ ಕೋಪ ಅವನಿಗೆ ತಲುಪಿರುವುದೇ ಇಲ್ಲ.
ಕಛೇರಿಯಿಂದ ತಡವಾಗಿ ಮನೆಗೆ ಬಂದ ಅಪ್ಪನಿಗೆ ಮಗ ಓಡಿಬಂದು ಅಂಕಪಟ್ಟಿಯನ್ನು ತೋರಿಸಿ “ನಾನೇ ಕ್ಲಾಸಿಗೆ ಫಸ್ಟ್” ಎಂದು ಹೇಳಿದಾಗ, “ಏ ಹೋಗೋ ಸುಸ್ತಾಗಿದೆ, ತೊಂದರೆ ಕೊಡಬೇಡ” ಎಂದು ಅಪ್ಪ ಅವನನ್ನು ದೂರ ತಳ್ಳಬಹುದು. ಮುದ್ದಾಟ, ಹೊಗಳಿಕೆಯ ನಿರೀಕ್ಷೆಯಲ್ಲಿರುವ ಮಗುವಿನ ಖಿಷಿ ಅಪ್ಪನಿಗೆ ತಲುಪದಿದ್ದಾಗ ಅದು ಸಂವಹನ ಹೇಗಾಗುತ್ತದೆ?
ನಿಜವಾದ ಸಮಸ್ಯೆ ಇರುವುದು ಇಲ್ಲಿಯೇ. ಬರಿಯ ಶಬ್ದ, ಭಾವನೆ ಅಥವಾ ಘಟನೆಗಳಿಗೆ ಅವುಗಳದ್ದೇ ಆದ ಅರ್ಥವೇ ಇರುವುದಿಲ್ಲ. ನಾವೆಲ್ಲಾ ನಮ್ಮ ಮಿದುಳಿನಲ್ಲಿ ಹುದುಗಿಸಿಕೊಂಡಿರುವ ನಮಗೆ ಮಾತ್ರ ವಿಶಿಷ್ಟವಾದ ಒಂದು ಪರಿಧಿಯಲ್ಲಿ ಎಲ್ಲವನ್ನೂ ಅರ್ಥೈಸುತ್ತೇವೆ. ಅಂದರೆ ನಮ್ಮ ಬಾಲ್ಯದ ಅನುಭವಗಳ ಆಧಾರದ ಮೇಲೆ ನಮ್ಮ ತಲೆಯಲ್ಲಿ ನಮಗೆ ಮಾತ್ರ ಗೊತ್ತಿರುವ (ಕೆಲವೊಮ್ಮೆ ನಮಗೂ ತಿಳಿಯದ!) ಸಾಫ್ಟ್‍ವೇರ್ ಒಂದನ್ನು ಬರೆದುಕೊಂಡಿರುತ್ತೇವೆ. ಇದನ್ನೇ ಎನ್ ಎಲ್ ಪಿ ಯಲ್ಲಿ “ನಕಾಶೆ ವಾಸ್ತವವಲ್ಲ” (ಮ್ಯಾಪ್ ಈಸ್ ನಾಟ್ ರಿಯಾಲಿಟಿ) ಎನ್ನುವ ಹೇಳಿಕೆಯಲ್ಲಿ ವಿವರಿಸುತ್ತಾರೆ. ಎಲ್ಲರ ತಲೆಯಲ್ಲಿ ಅವರವರದೇ ನಕಾಶೆ ಇರುತ್ತದೆ ಮತ್ತು ಇವು ಯಾವುವೂ ವಾಸ್ತವವಾಗಬೇಕಿಲ್ಲ. ಎಲ್ಲರಿಗೂ ಅವರದ್ದು ಮಾತ್ರ ಅಂತಿಮ ಸತ್ಯ.
ಎದುರಿಗಿರುವವನ ತಲೆಯಲ್ಲಿರುವ ಸಾಫ್ಟ್‍ವೇರ್‍ನ ಅಥವಾ ನಕಾಶೆಯ ಪರಿಚಯವಿಲ್ಲದಿದ್ದಾಗ ನಮ್ಮ ಭಾವನೆಗಳನ್ನು ಮಾತಿನ ಮೂಲಕ ಅವನಿಗೆ ತಲುಪಿಸುವುದು ಹೇಗೆ?
ಸಂವಹನದ ಘಟಕಗಳು
ಸಂವಹನ ಎಂದರೆ ಮಾತನಾಡುವುದು ಅಂದರೆ ಶಬ್ದಗಳ ಮೂಲಕ ಹೇಳುವುದು ಎಂದುಕೊಂಡಿರುವ ನಮಗೆ ಸಂವಹನ ಬೇರೆ ಬೇರೆ ಘಟಕಗಳನ್ನೊಳಗೊಂಡಿರುತ್ತದೆ ಎಂದರೆ ಆಶ್ಚರ್ಯವಾಗಬಹುದಲ್ಲವೇ? ಸಂವಹನದಲ್ಲಿ ಮೂರು ಅಂಗಗಳಿವೆ.
1 ಶಬ್ದಗಳ ಮೂಲಕ ಹೇಳುವುದು ಅಂದರೆ ವರ್ಬಲ್ ಕಮ್ಯುನಿಕೇಷನ್. ಇಲ್ಲಿ ಆಡುವ ಶಬ್ದಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
2 ಧ್ವನಿಯ ಏರಿಳಿತದ ಮೂಲಕ ಹೇಳುವುದು ಅಂದರೆ ಇಂಟ್ರಾವರ್ಬಲ್ ಕಮ್ಯುನಿಕೇಷನ್. ಉದಾಹರಣೆಗೆ ಮಗುವಿಗೆ ಕತ್ತೆ ಎಂದು ಹೇಳುವಾಗ ನಮ್ಮ ಧ್ವನಿಯ ಬದಲಾವಣೆಯ ಮೂಲಕ ಪ್ರೀತಿಯ ಅಥವಾ ಕೋಪದ ಭಾವನೆ ಪ್ರಕಟಿಸಬಹುದು ನೀನು ದಡ್ಡ ಎಂದೂ ಕೂಡ ಇದೇ ಶಬ್ದದ ಮೂಲಕ ಸೂಚಿಸಬಹುದು. ಸಾರ್ವಜನಿಕ ಭಾಷಣಕಾರರೆಲ್ಲಾ ಧ್ವನಿಯನ್ನು ಪರಿಣಾಮಾಕಾರಿಯಾಗಿ ಬಳಸುವುದನ್ನು ಕಲಿತಾಗ ಮಾತ್ರ ಸಭಿಕರನ್ನು ಹಿಡಿದಿಡಲು ಸಾಧ್ಯ. ಕೆಲವರಿಗೆ ಈ ಕಲೆ ಸಹಜವಾಗಿ ಸಿದ್ಧಿಸಿದ್ದರೆ, ಇನ್ನೂ ಕೆಲವರು ಇದನ್ನು ಕಷ್ಟಪಟ್ಟು ರೂಡಿಸಿಕೊಂಡಿರುತ್ತಾರೆ.
3 ದೇಹಭಾಷೆಯ ಮೂಲಕ ಹೇಳುವುದು ಅಂದರೆ ನಾನ್‍ವರ್ಬಲ್ ಕಮ್ಯುನಿಕೇಷನ್. ಇದನ್ನು ಬಾಡಿ ಲಾಂಗ್ವೇಜ್ ಎಂತಲೂ ಹೇಳುತ್ತಾರೆ. ಮುಖಭಾವ ಮತ್ತು ಅಂಗಾಂಗಗಳ ಚಲನೆ ಇವುಗಳಲ್ಲಿ ಸೇರುತ್ತದೆ.
ನಾನ್ ವರ್ಬ್‍ಲ್ ಕಮ್ಯುನಿಕೇಷನ್ ಸಾರ್ವಜನಿಕ ವೇದಿಕೆಗಳಿಂದ ಮಾತನಾಡುವವರಿಗೆ ಮಾತ್ರ ಪ್ರಮುಖವಾಗುತ್ತದೆ ಎಂದು ತಪ್ಪು ತಿಳಿಯುವಂತಿಲ್ಲ. ಸಾರ್ವಜನಿಕ ಸಂದರ್ಭಗಳಲ್ಲಿ ಇದರ ಅರ್ಥ ದೇಹಭಾಷೆಗೆ ಸೀಮಿತಗೊಂಡಿರಬಹುದು. ಆದರೆ ಕೌಟುಂಬಿಕ, ಸ್ನೇಹ ಮತ್ತು ವ್ಯಾವಹಾರಿಕ ಸಂಬಂಧಗಳಲ್ಲಿ ನಾವು ರೂಪಿಸಿಕೊಂಡಿರುವ ನಮ್ಮ ಸಂಪೂರ್ಣ ವ್ಯಕ್ತಿತ್ವದ ಮೂಲಕ ನಾವು ಸಂವಹನ ಮಾಡುತ್ತೇವೆ. ಹಾಗಾಗಿ ನಾನ್ ವರ್ಬಲ್ ಕಮ್ಯುನಿಕೇಷನ್‍ನಲ್ಲಿ ನಮ್ಮ ದೇಹವಷ್ಟೇ ಅಲ್ಲ ಇಡೀ ವ್ಯಕ್ತಿತ್ವ ಮಾತನಾಡುತ್ತದೆ.
ಯಾವುದರ ಪಾಲೆಷ್ಟು?
ನಮ್ಮ ಒಟ್ಟಾರೆ ಸಂವಹನದಲ್ಲಿ ಮೇಲಿನ ಮೂರು ಘಟಕಗಳಲ್ಲಿ ಯಾವುದರ ಪಾಲು ಹೆಚ್ಚು ಎಂದು ಯಾರಾದರೂ ಕೇಳಿದರೆ ಉತ್ತರ ಸುಲುಭ. ಮೊದಲ ಎರಡು ಅಂಶಗಳು, ಅಂದರೆ ಶಬ್ದಗಳು ಮತ್ತು ಧ್ವನಿಯ ಏರಿಳಿತಗಳ ಮೂಲಕ ನಮ್ಮ ಹೆಚ್ಚಿನ ಸಂವಹನ ನಡೆಯುತ್ತದೆ ಎಂದು ಎಲ್ಲರೂ ಒಪ್ಪುತ್ತಾರೆ. ಹಾಗಾಗಿಯೇ ನಾವೆಲ್ಲಾ ಆಕರ್ಷಕವಾದ ಶಬ್ದಗಳನ್ನು ಉಪಯೋಗಿಸಿ ಧ್ವನಿಯ ಏರಿಳಿತಗಳೊಂದಿಗೆ ಮಾತನಾಡುವವರು ಉತ್ತಮ ಸಂವಹನಕಾರರು ಎಂದು ತಿಳಿದುಕೊಂಡಿದ್ದೇವೆ. ಇದು ಅರ್ಧ ಸತ್ಯ ಮಾತ್ರ.
ಆಲ್ಬರ್ಟ್ ಮೆಹರ್ಬಾನ್ ಎನ್ನುವ ಮನಶ್ಯಾಸ್ತ್ರಜ್ಞನ ಸಂಶೋಧನೆಗಳ ಪ್ರಕಾರ ನಾವೆಲ್ಲಾ ಶೇ 7ರಷ್ಟು ಶಬ್ದಗಳ ಮೂಲಕ, ಶೇ 38ರಷ್ಟು ಧ್ವನಿಯ ಏರಿಳಿತದ ಮೂಲಕ ಮತ್ತು ಶೇ55ರಷ್ಟು ದೇಹಭಾಷೆ ಮತ್ತು ವ್ಯಕ್ತಿತ್ವದ ಮೂಲಕ ಸಂವಹನ ಮಾಡುತ್ತೇವೆ. ಬೇರೆಬೇರೆ ಸಂಶೋಧನಗಳಲ್ಲಿ ಈ ಶೇಕಡವಾರು ಅಂಕಿಗಳು ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಎಲ್ಲ ತಜ್ಞರೂ ಒಪ್ಪಿಕೊಳ್ಳುವುದು ಮಾನÀವನ ಸಂವಹನ ಕ್ರಿಯೆಯಲ್ಲಿ ಶಬ್ದಗಳು ಅತಿ ಕಡಿಮೆ ಪ್ರಭಾವ ಬೀರುತ್ತವೆ ಮತ್ತು ನಮ್ಮ ಒಟ್ಟಾರೆ ವ್ಯಕ್ತಿತ್ವ/ದೇಹಭಾಷೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ ಎನ್ನುವುದು.
ಸಂವಹನ ಸೋಲಿನ ಗುಟ್ಟು!
ನಮಗೆಲ್ಲಾ ದೊಡ್ಡ ತೊಂದರೆ ಇರುವುದು ಇಲ್ಲಿಯೇ! ಸಂವಹನ ಸೋಲುವುದಕ್ಕೆ ಪ್ರಮುಖ ಕಾರಣಗಳನ್ನು ನಾವು ಇಲ್ಲಿ ಹುಡುಕಬೇಕು. ಕೆಲವು ಸಂದರ್ಭಗಳನ್ನು ನೋಡಿ;
* ನಾವು ಯಾರಿಗೂ ಗೊತ್ತಾಗದಂತೆ ನಯವಾಗಿ ಸುಳ್ಳುಹೇಳಿ ಬಚಾವಾಗಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ನಮ್ಮ ಧ್ವನಿಯ ಹಿಂಜರಿಕೆ ಮತ್ತು ದೇಹದ ಇತರ ಚಲನೆಗಳು ನಿಜವನ್ನು ಸಾರಿರುತ್ತವೆ. ಎದುರಿಗಿರುವವರು ತಿರುಗಿಸಿ ಹೇಳಿಲ್ಲ ಎಂದರೆ ಅವರು ನಮ್ಮ ಮಾತನ್ನು ನಂಬಿದ್ದಾರೆ ಎಂದುಕೊಂಡರೆ ನಾವು ಮೂರ್ಖರಾಗುತ್ತೇವೆ.
* ನಮ್ಮ ಹೆಚ್ಚಿನ ರಾಜಕಾರಣಿಗಳು ಮತ್ತು ಹಲವಾರು ಡೋಂಗೀ ಧಾರ್ಮಿಕರ ಆಕರ್ಷಕ ಮಾತುಗಳು ನಮ್ಮ ಮೇಲೆ ಪ್ರಭಾವ ಬೀರದಿರುವುದಕ್ಕೆ ಪ್ರಮುಖ ಕಾರಣ ಅವರ ಒಟ್ಟಾರೆ ವ್ಯಕ್ತಿತ್ವದ ಇತರ ಅಂಶಗಳು.
* ದುಖವಾಗದಿದ್ದರೂ ಅಳುವ ನಾಟಕ ಮಾಡಲು ಯತ್ನಿಸಿದಾಗ ಧ್ವನಿ ಒರಟಾಗಿರುತ್ತದೆ ಮತ್ತು ಕಣ್ಣೀರು ಬರುವುದೇ ಇಲ್ಲ! ಮಕ್ಕಳು ಬರಿಯ ಹಟಕ್ಕಾಗಿ ಅಳುವಾಗ ನೀವು ಇದನ್ನು ಗಮನಿಸಿರಬಹುದು. ಎದುರಿಗೆ ಯಾರೂ ಇಲ್ಲದಿದ್ದಾಗ ತನ್ನಿಂದ ತಾನೆ ನಿಲ್ಲುವ ಅಳು ಯಾರನ್ನಾದರೂ ಕಂಡೊಡನೆ ಏರಿದ ಧ್ವನಿಯಲ್ಲಿ ಕಣ್ಣಿರೇ ಇಲ್ಲದೆ ಶುರುವಾಗುತ್ತದೆ! ಇದು ನೈಜ ದುಖವಲ್ಲ ಎಂದು ಇನ್ನೊಂದು ಮಗುವಿಗೂ ತಿಳಿಯುತ್ತದೆ.
* ಕೆಲಸವನ್ನು ಬಾಸ್ ಹೇಳಿದ ಸಮಯದಲ್ಲಿ ಮುಗಿಸಲು ಆಗುವುದಿಲ್ಲ ಎಂದು ಗೊತ್ತಿದ್ದರೂ “ಖಂಡಿತಾ ಮಾಡಿಕೊಡುತ್ತೇನೆ” ಎಂದು ಬೊಗಳೆ ಬಿಟ್ಟಿರುತ್ತೇವೆ. ಕೆಲಸ ಗಡುವಿನ ಒಳಗೆ ಮುಗಿಯದಿದ್ದಾಗ “ಅವತ್ತಿನ ನಿಮ್ಮ ಮುಖ ನೋಡಿದರೆ ನಿಮಗೆ ಮಾಡಕ್ಕೆ ಆಗಲ್ಲ ಎಂದು ನನಗೆ ಗೊತ್ತಿತ್ತು” ಎಂದು ಬಾಸ್ ಉಗಿದಾಗ ನಮ್ಮ ದೇಹದ ಚಲನೆಗಳು ಸತ್ಯವನ್ನು ಬಿಟ್ಟುಕೊಟ್ಟಿರುತ್ತವೆ ಎನ್ನುವುದನ್ನು ನಾವು ಗಮನಿಸುವುದಿಲ್ಲ.
ಮನಶ್ಯಾಸ್ತ್ರದ ಪಿತಾಮಹ ಸಿಗ್ಮಂಡ್ ಪ್ರಾಯ್ಡ್ ಹೇಳುತ್ತಾನೆ, “ಯಾವ ಮನುಶ್ಯನೂ ಗುಟ್ಟುನ್ನು ಇಟ್ಟುಕೊಳ್ಳಲಾಗುವುದಿಲ್ಲ. ಅವನ ತುಟಿಗಳು ಮೌನವಾಗಿದ್ದರು ಬೆರಳುಗಳು ವಟಗುಟ್ಟಿರುತ್ತವೆ. ಸುಳ್ಳು ನವರಂದ್ರಗಳಿಂದಲೂ ಜಿನುಗುತ್ತಿರುತ್ತದೆ”
ಇದನ್ನು ಕಲಿಯಬೇಕೇ?
ಇವತ್ತು ವ್ಯಕ್ತಿತ್ವ ವಿಕಸನ ಶಿಬಿರ, ಕಮ್ಯುನಿಕೇಷನ್ ವರ್ಕ್‍ಶಾಪ್‍ಗಳಲ್ಲಿ ದೇಹಭಾಷೆಯನ್ನು ಉಪಯೋಗಿಸಲು ಕಲಿಸಲಾಗುತ್ತದೆ. ಹೀಗೆ ಕಲಿತವರು ಮಾತ್ರ ಅದನ್ನು ಅರ್ಥಮಾಡಿಕೊಳ್ಳಬಲ್ಲರು ಮತ್ತು ವ್ಯಕ್ತಪಡಿಸಲಬಲ್ಲರು ಎಂದು ಯಾರೂ ತಿಳಿದುಕೊಳ್ಳಬೇಕಿಲ್ಲ. ನಮ್ಮ ದೇಹದ ಚಲನೆಗಳನ್ನು ನಾವು ಸಹಜವಾಗಿ ಕಲಿತಿರುತ್ತೇವೆ, ಉಪಯೋಗಿಸಿತ್ತಿರುತ್ತೇವೆ ಮತ್ತು ಅರ್ಥಮಾಡಿಕೊಳ್ಳಬಲ್ಲೆವು ಕೂಡ. ಇವುಗಳಲ್ಲಿ ಕೆಲವು ನಮ್ಮ ವಂಶವಾಹಿಲ್ಲಿ ಬಂದಿರುವ ಸಾಧ್ಯತೆಗಳಿದ್ದರೂ ಹೆಚ್ಚಿನವುಗಳನ್ನು ನಾವು ಬಾಲ್ಯದಿಂದಲೇ ನೋಡಿ, ಅನುಭವಿಸಿ, ಪ್ರಯೋಗಿಸಿ ಕಲಿತಿರುತ್ತೇವೆ. ಇವುಗಳನ್ನು ಭಾಷೆಯಲ್ಲಿ ಹೇಳದಿದ್ದರೂ ನಮ್ಮ ಮಿದುಳು ಮಾತ್ರ ಗ್ರಹಿಸಿರುತ್ತದೆ. ಅಡಿಗರು ಹೇಳುವಂತೆ “ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ”.
ಇಲ್ಲಿ ಎಂತಹ ವಿಪರ್ಯಾಸವಿದೆ ನೋಡಿ. ಪ್ರಾಣಿ ಪ್ರಪಂಚದಲ್ಲಿ ಭಾಷೆ ಅಥವಾ ಶಬ್ದಗಳೇ ಇಲ್ಲ. ಹಾಗಾಗಿ ಎಲ್ಲಾ ರೀತಿಯ ಸಂವಹನ ದೇಹದ ಚಲನೆಯ ಮೂಲಕವೇ ನಡೆಯಬೇಕು. ಇದರಿಂದಾಗಿಯೇ ಮನುಶ್ಯ ಪ್ರಪಂಚದಲ್ಲಿರುವ ನಯವಂಚಕತನ, ಸೋಗಲಾಡಿದತನ, ವಂಚನೆ, ಸುಳ್ಳುಗಳು ಅಲ್ಲಿರಲು ಸಾಧ್ಯವೇ ಇಲ್ಲ. ಭಾಷೆಯ ಉಗಮವಾದಾಗಿನಿಂದ ನಾವು ಬಹಳ ಸುಸಂಸ್ಕøತರಾಗಿದ್ದೇವೆ ಎಂದು ಅಂದುಕೊಡಿದ್ದರೆ ಅದೆಲ್ಲಾ ಸುಳ್ಳು. ಮಾತು ಮತ್ತು ಭಾಷೆ ಮನುಕುಲವನ್ನು ನೈತಿಕವಾಗಿ ಕೆಳಗೆ ಕೊಂಡೊಯ್ದಿದೆ. ಇಷ್ಟಾದ ಮೇಲೆ ಕೂಡ ನಾವು ಮಾತುಗಳಿಂದ ನಮ್ಮ ವ್ಯಕ್ತಿತ್ವವನ್ನು ಕಟ್ಟುವ ವ್ಯರ್ಥಪ್ರಯತ್ನವನ್ನು ಮುಂದುವರೆಸಿಯೇ ಇದ್ದೇವೆ!
ಅದ್ಭುತ ಮಾದರಿ
ಗೌತಮ ಬುದ್ಧ, ಏಸುಕ್ರಿಸ್ತ, ಭಾರತದ ಎಲ್ಲಾ ಭಾಗಗಳಲ್ಲಿ ವಿವಿದ ಕಾಲಘಟ್ಟಗಳಲ್ಲಿ ಬದುಕಿದ್ದ ಭಕ್ತಿಪಂತ, ದಾಸಪಂತದವರು, ಕನ್ನಡದ ವಚನಕಾರರು-ಹೀಗೆ ಮನುಕುಲ ಇಲ್ಲಿಯವರೆಗೆ ಸಾಕಷ್ಟು ಜನ ಉತ್ತಮ ಸಂವಹನಕಾರರನ್ನು ಕಂಡಿದೆ. ಇವರೆಲ್ಲಾ ತಮ್ಮ ಕೆಲಸಗಳು ಮತ್ತು ಜೀವನಶೈಲಿಯ ಮೂಲಕ ತಮ್ಮ ಸಂದೇಶವನ್ನು ಸಾರಿದ್ದರು. ಮಾತುಗಳು ಒಟ್ಟಾರೆ ವ್ಯಕ್ತಿತ್ವಕ್ಕೆ ಪೂರಕವಾಗಿ ಮಾತ್ರ ಕೆಲಸಮಾಡಿದ್ದವು. ಹಾಗಾಗಿ ಅವರ ಮಾತುಗಳು ಇಂದಿಗೂ ಪ್ರಸ್ತುತ ಮತ್ತು ಪರಿಣಾಮಕಾರಿ. ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಮಾತು ಮತ್ತು ಕೃತಿಗಳಿಗೆ ಅಂತರವೇ ಇಲ್ಲದಂತೆ ಬದುಕಿದ ಏಕೈಕ ವ್ಯಕ್ತಿ ಗಾಂಧೀಜಿ. ಸರಳ ಶಬ್ದಗಳಿಂದ ನೀರಸ ಧ್ವನಿಯಲ್ಲಿ ಮಾತನಾಡುತ್ತಿದ್ದ ಗಾಂಧೀಜಿ ಯಾವುದೇ ಮಾನದಂಡಗಳಲ್ಲಿ ಅಳೆದರೂ ಆಕರ್ಷಕ ಮಾತುಗಾರರಲ್ಲ. ಆದರೆ ಇವರು ಅದ್ಭುತ ಸಂವಹನಕಾರರು. ಗಾಂಧೀಜಿಯವರ ಸಂದೇಶಗಳಿಗೆ ಮಾತುಗಳೇ ಬೇಕಿರಲಿಲ್ಲ. ಅವರ ಒಟ್ಟಾರೆ ಜೀವನವೇ ಅವರ ಉಪದೇಶವಾಗಿತ್ತು. ಸಂವಹನದ ಬಗೆಗೆ ಸಂಶೋಧನೆ ಮಾಡುವವರಿಗೆಲ್ಲಾ ಗಾಂಧೀಜಿಗಿಂತ ಉತ್ತಮ ಮಾದರಿ ಸಿಗಲು ಸಾಧ್ಯವೇ ಇಲ್ಲ.
ಉತ್ತಮ ಸಂವಹನ ಹೇಗೆ?
ಇವೆಲ್ಲಾ ಮಹಾಪುರುಶರ ಮಾತಾಯಿತು. ಜನಸಾಮಾನ್ಯರಾದ ನಾವೆಲ್ಲಾ ನಮ್ಮ ಸಂವಹನವನ್ನು ಉತ್ತಮಪಡಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.
“ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ,” ಎನ್ನುವುದು ಹಳೆಯ ಗಾದೆ ಮಾತು. ಇಲ್ಲಿ ಊಟ ಅಂದರೆ ಬರಿಯ ತಿನ್ನುವುದಷ್ಟೇ ಅಲ್ಲ, ಉಪವಾಸ ಮಾಡುವುದೂ ಕೂಡ ಸೇರುತ್ತದೆ. ಹಾಗೆಯೇ ಮಾತು ಅಂದರೆ ಮೇಲೆ ಹೇಳಿದ ಸಂವಹನದ ಮೂರು ಘಟಕಗಳ ಜೊತೆ ಮೌನವನ್ನೂ ಒಳಗೊಂಡಿರುತ್ತದೆ.
ಉತ್ತಮ ಸಂವಹನದಿಂದ ನಮ್ಮ ಸಂಬಂಧಗಳು ಸುಧಾರಿಸುತ್ತವೆ. ನಮ್ಮ ಯೋಚನೆ, ಉದ್ದೇಶಗಳನ್ನು ಇತರರಿಗೆ ಸರಿಯಾಗಿ ತಲುಪಿಸಲು ಸಾಧ್ಯವಾದಾಗ ನಮ್ಮ ಕೆಲಸ ಹಗುರವಾಗುತ್ತದೆ. ನಮ್ಮ ಆತ್ಮವಿಶ್ವಾಸ ಹೆಚ್ಚಿ ನಮ್ಮ ಗುರಿಯನ್ನು ತಲುಪುವುದು ಸುಲುಭವಾಗುತ್ತದೆ. ಹಾಗಿದ್ದರೆ ಇದನ್ನು ಸಾಧಿಸುವುದು ಹೇಗೆ ಎಂದು ಸ್ವಲ್ಪ ತಿಳಿಯೋಣ.
1 ಕೇಳುವುದು; ಯಶಸ್ವೀ ಸಂವಹನದ ಮೊದಲ ಹಂತದಲ್ಲಿ ನಾವು ಕೇಳುವ ಕಲೆಯನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕೇಳುವಿಕೆ ಒಟ್ಟಾರೆ ಸಂವಹನ ಒಂದು ಪ್ರಮುಖ ಭಾಗ ಎಂದು ಇವತ್ತು ತಜ್ಞರೆಲ್ಲರೂ ಒಪ್ಪುತ್ತಾರೆ.
ಅಮೇರಿಕಾದ ಸುಪ್ರಸಿದ್ಧ ಮ್ಯಾನೇಜ್‍ಮೆಂಟ್ ಗುರು ಸ್ಟೀಫನ್ ಕೋವೆ ತನ್ನ ಜನಪ್ರಿಯ ಪುಸ್ತಕ “ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್” ನಲ್ಲಿ ಹೇಳುವ ಒಂದು ಸೂತ್ರ ಹೀಗಿದೆ, “ನಿಮ್ಮನ್ನು ಇತರರಿಗೆ ಅರ್ಥಮಾಡಿಸುವ ಮೊದಲು ಅವರನ್ನು ಅರ್ಥ ಮಾಡಿಕೊಳ್ಳಿ”. ಯಾರನ್ನಾದರೂ ಅರ್ಥ ಮಾಡಿಕೊಳ್ಳಲು ಇರುವ ಸರಳ ಮಾರ್ಗ ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳುವುದು.
ನಾವೆಲ್ಲಾ ಮಾಡುವ ದೊಡ್ಡ ತಪ್ಪು ಎಂದರೆ ಇತರತ ಮಾತುಗಳನ್ನು “ಕೇಳ” (ಪಾಲಿಸ) ಬೇಕಾತ್ತದೆ ಎಂಬ ಭಯದಲ್ಲಿ ಅವರು ಹೇಳುವುದನ್ನು (ಕಿವಿಯಿಂದ) ಕೇಳುವುದೇ ಇಲ್ಲ! ಕೇಳುವುದರ ಬಗೆಗೆ ಕೆಲವು ಸರಳ ನಿಯಮಗಳನ್ನು ಪಾಲಿಸಬಹುದು
* ಎದುರಿಗಿರುವವರು ಹೇಳುತ್ತಿರುವ ಮಾತನ್ನು ಸಂಪೂರ್ಣವಾಗಿ ಕೇಳಬೇಕು. ನಮಗೆ ಬೇಕಾಗಿದ್ದನ್ನು ಮಾತ್ರ ಗ್ರಹಿಸಿ ಉಳಿದಿದ್ದನ್ನು ಕಡೆಗಣಿಸಿದರೆ ನಮಗೆ ಅವರ ಮಾತುಗಳಲ್ಲಿನ ಪೂರ್ಣ ಅರ್ಥ ಸಿಗುವುದಿಲ್ಲ.
* ಅವರು ಮಾತನಾಡುವಾಗಲೇ ನಮ್ಮ ಉತ್ತರವನ್ನು ಸಿದ್ಧ ಮಾಡಿಕೊಳ್ಳತೊಡಗಿದರೆ ಕೇಳುವುದರಲ್ಲಿ ಏಕಾಗ್ರತೆ ಉಳಿಯುವುದಿಲ್ಲ. ಹಾಗಾಗಿ ಎಲ್ಲಾ ಕೇಳಿದ ಮೇಲೆ ಮಾತ್ರ ನಮ್ಮ ಉತ್ತರದ ಬಗೆಗೆ ಯೋಚಿಸಬೇಕು.
* ಕೇಳುವಾಗ ಬೇರೆ ಕೆಲಸದಲ್ಲಿ ತೊಡಗಿರಬಾರದು. ಮಾತನಾಡುವವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ “ಹಾಂ, ಹೂಂ, ಹೌದಾ, ಆಮೇಲೆ,” ಮುಂತಾದ ಶಬ್ದಗಳ ಮೂಲಕ ಅವರಿಗೆ ನಮ್ಮ ನಿಜವಾದ ಕಾಳಜಿಯ ಬಗೆಗೆ ನಂಬಿಕೆ ಹುಟ್ಟಿಸಬೇಕು.
* ವಿಷಯಕ್ಕೆ ಸಂಬಂಧಿಸದ ಮಾತುಗಳು ಅಥವಾ ಹೇಳಿದ್ದನ್ನೇ ಹೇಳುತ್ತಿದ್ದಾಗ ಮಾತ್ರ ಅವರ ಮಾತನ್ನು ತಡೆಯಬಹುದು. ಇಲ್ಲದಿದ್ದರೆ ಅವರಿಗೆ ತಮ್ಮ ಅಭೀಪ್ರಾಯವನ್ನು ಹೇಳಲು ಪೂರ್ಣ ಅವಕಾಶ ಕೊಡಬೇಕು.
ಇದನ್ನೆಲ್ಲಾ ಮಾಡುವುದಕ್ಕೆ ಸಮಯವಿಲ್ಲ ಎಂದು ಯಾವಾಗಲೂ ತರಾತುರಿಯಲ್ಲಿರುವ ಜನಗಳು ಹೇಳಬಹುದು. ವಾಸ್ತವದಲ್ಲಿ ಮುಂದೆ ನಡೆಯಬಹುದಾದ ಬಹಳಷ್ಟು ಅಹಿತಕರ ಘಟನೆಗಳನ್ನು ತಪ್ಪಿಸುವುದರ ಮೂಲಕ ಇದರಿಂದ ಸಮಯ ಉಳಿತಾಯವಾಗುತ್ತದೆ.
2 ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವುದು. ಎಲ್ಲರೂ ಅವರವರ ಮಾನಸಿಕ ಹಿನ್ನೆಲೆಯಲ್ಲಿ ಮಾತು ಮತ್ತು ಘಟನೆಗಳಿಗೆ ಅರ್ಥ ಕೊಡುತ್ತಾರೆ ಎಂದು ಹಿಂದೆಯೇ ತಿಳಿದಿದ್ದೇವೆ. ಹಾಗಾದರೆ ಎದುರಿಗಿರುವವರು ಹೇಳಿದ ಮಾತುಗಳ ಹಿಂದಿನ ಅರ್ಥ ಏನಿದೆ ಎಂದು ಹೇಗೆ ತಿಳಿಯುವುದು?
ಮಾತುಗಳಿಗೆ ನಿಮ್ಮ ಅರ್ಥ ಹಚ್ಚದೆ ಹೇಳಿದವರ ಮಾನಸಿಕ ಹಿನ್ನೆಲೆಯಲ್ಲೇ ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಅವರ ಮಾತು ಮುಗಿದ ನಂತರ, ಅದರ ಸಾರಾಂಶವನ್ನು ನಾವು ಹೇಳಿ, “ನೀವು ಹೇಳಬೇಕೆಂದಿರುವುದು ಇದೇ ಅಲ್ಲವೇ?” ಎಂದು ಕೇಳಿದರಾಯಿತು. ಅವರು ಬೇರೆ ವಿವರಣೆಗಳನ್ನು ಕೊಟ್ಟರೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು. ಅವರು ನಿಮ್ಮ ಮಾತುಗಳನ್ನು ಒಪ್ಪಿದರೆ ನೀವಾಗಲೇ ಅವರಿಗೆ ಮಾನಸಿಕವಾಗಿ ಹತ್ತಿರವಾಗಿರುತ್ತೀರಿ. ಹಾಗಾಗಿ ಮುಂದಿನ ಸಂಭಾಷಣೆ ಸರಾಗವಾಗಿ ಮುಂದುವರೆಯುತ್ತದೆ.
3 ನಮ್ಮ ಅಭೀಪ್ರಾಯ ಹೇಳುವುದು. ಇನ್ನೊಬ್ಬರ ಮಾತನ್ನು ತಾಳ್ಮೆಯಿಂದ ಕೇಳುವುದು ಅಂದರೆ ಆ ಮಾತುಗಳಿಗೆ ನಮ್ಮ ಒಪ್ಪಿಗೆ ಸೂಚಿಸುವುದು ಅಂತೇನೂ ಅಲ್ಲ. ಒಮ್ಮೆ ಅವರನ್ನು ಅರ್ಥ ಮಾಡಿಕೊಂಡ ಮೇಲೆ ನಮ್ಮ ಅಭೀಪ್ರಾಯವನ್ನು ಖಚಿತ ಶಬ್ದಗಳಲ್ಲಿ ಮೃದು ಧ್ವನಿಯಲ್ಲಿ ಹೇಳಬಹುದು. ಇಲ್ಲಿ ಭಾಷೆ, ಧ್ವನಿಯ ಏರಿಳಿತ, ದೇಹಭಾಷೆ ಎಲ್ಲಾ ಉಪಯುಕ್ತವಾಗುತ್ತವೆ. ಅನಗತ್ಯವಾದ ಅಭೀಪ್ರಾಯ ವ್ಯಕ್ತಪಡಿಸುವುದು, ಟೀಕೆ, ವ್ಯಂಗ್ಯ ಇವೆಲ್ಲವುಗಳಿಂದ ದೂರವಿರಬೇಕು. ಹೇಳ ಬೇಕಾದ್ದನ್ನಷ್ಟೇ ನೇರವಾಗಿ ಸರಳವಾಗಿ ಹೇಳಿ ಸುಮ್ಮನಾಗಬೇಕು. ನೆನಪಿಡಿ ಅನಗತ್ಯ ಮಾತುಗಳಿಗಿಂತ ಮೌನ ಹೆಚ್ಚು ಉಪಯುಕ್ತವಾದದ್ದು. ಮೌನ ಇಬ್ಬರಿಗೂ ಯೋಚಿಸಲು ಮತ್ತು ಮುಂದಿನ ಸಂಭಾಷಣೆಯ ತಯಾರಿಗೆ ಅನುವು ಮಾಡಿಕೊಡುತ್ತದೆ.
ಇವೆಲ್ಲವುಗಳನ್ನು ಇತರರನ್ನು ನೋಡಿ ಮತ್ತು ನಮ್ಮ ಹಳೆಯ ಅನುಭವಗಳನ್ನು ವಿಶ್ಲೇಷಿಸಿ ನಾವೇ ಕಲಿಯುತ್ತಾ ಹೋಗಬಹುದು. ಹಿಂದೆ ಕೆಲವು ಸಂದರ್ಭಗಳಲ್ಲಿ ನಾವು ನಮ್ಮ ಅಭೀಪ್ರಾಯಗಳನ್ನು ಸರಿಯಾಗಿ ಹೇಳಿದ್ದರೆ, ಆಗ ನಾವು ಏನು ಮತ್ತು ಹೇಗೆ ಮಾತನಾಡಿದ್ದೆವು ಎಂದು ನೆನಪು ಮಾಡಿಕೊಂಡು ಅವುಗಳನ್ನು ಇತರ ಕಡೆಗಳಲ್ಲೂ ಬಳಸಬಹುದು. ಹೀಗೆ ಸಾಕಷ್ಟು ಸಾರಿ ಮಾಡಿದ ಮೇಲೆ ಯಾವ ಸಂದರ್ಭಗಳಲ್ಲಿ ಹೇಗೆ ನಮ್ಮನ್ನು ಪ್ರಸ್ತುತ ಪಡಿಸಿಕೊಳ್ಳಬೇಕು ಎನ್ನುವುದು ನಮಗೆ ಕರಗತವಾಗುತ್ತದೆ. ಇವೆಲ್ಲವನ್ನೂ ನಾವು ಮಾಡುತ್ತಾ ಬಂದಿರುತ್ತೇವೆ. ಸ್ವಲ್ಪ ವ್ಯವಸ್ಥಿತವಾಗಿ ಮಾಡಲು ಕಲಿತರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಸ್ನೇಹಿತರೊಡನೆ ಅಥವಾ ಕುಟುಂಬದವರೊಡನೆ ಸುಮ್ಮನೆ ಹರಟುವಾಗ ಈ ನಿಯಮಗಳ ಅಗತ್ಯವಿರುವುದಿಲ್ಲ. ಹಾಗಿದ್ದರೂ ಅಂತಹ ಸಂದರ್ಭಗಳಲ್ಲಿ ಕೂಡ ನಾವು ನಡೆದುಕೊಳ್ಳುವ ರೀತಿಯು ನಮ್ಮ ವ್ಯಕ್ತಿತ್ವದ ಮುಖಗಳನ್ನು ಇತರರಿಗೆ ಪರಿಚಯಿಸುತ್ತದೆ ಎನ್ನವುದನ್ನು ಮರೆಯಬಾರದು.
ಮೌನ ಸಂವಹನ!
“ಮೌನಂ ಸಮ್ಮತಿ ಲಕ್ಷಣಂ” ಎನ್ನುವುದು ಬಹಳ ಹಳಸಿದ ಮಾತಾಗಿದೆ. ಇದನ್ನು ಹೇಳಿದವನು ಅದು ಯಾವ ಮಾನದಂಡಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬಂದನೋ ಗೊತ್ತಿಲ್ಲ. ವಾಸ್ತವದಲ್ಲಿ ಹೆಚ್ಚಿನ ಸಾರಿ ಮೌನ ಅಸಮ್ಮತಿಯ ಸೂಚಕವಾಗಿರುತ್ತದೆ. ತೌರು ಮನೆಗೆ ಹೋಗ್ಬರ್ಲೇನ್ರೀ, ಎಂದು ಹೆಂಡತಿ ಕೇಳಿದಾಗ ಗಂಡ ಸುಮ್ಮನಿದ್ದರೆ ಬೇಡ ಎಂದು ಹೆಂಡತಿ ತಿಳಿದುಕೊಳ್ಳುತ್ತಾಳೆ. ರಜ ಕೇಳಿದಾಗ ಬಾಸ್ ಮಾತನಾಡದಿದ್ದರೆ ರಜಾ ಮಂಜೂರಾಗಿಲ್ಲ ಎಂದರ್ಥ.
ಇಷ್ಟೇ ಅಲ್ಲದೆ ಮೌನ ಆಯಾ ಸಂದರ್ಭಗಳ ಮತ್ತು ಸಂಭಾಷಿಸುತ್ತಿರುವ ವ್ಯಕ್ತಿಗಳ ಸಂಬಂಧದ ಆಧಾರದ ಮೇಲೆ ಬೇರೆ ಬೇರೆ ಸೂಚನೆಗಳನ್ನು ತಲುಪಿಸುತ್ತದೆ. ಇದು ಕೆಲವೊಮ್ಮೆ ಕೋಪ, ಅಸಹನೆಯಾದರೆ, ಮತ್ತೆ ಕೆಲವೊಮ್ಮೆ ಅಸಡ್ಡೆ ಅಥವಾ ನಿರಾಸಕ್ತಿಯನ್ನು ಹೇಳಬಹುದು. ಹಾಗೆಯೇ ಅಜ್ಞಾನ, ಅನಾದರ, ಅಥವಾ ದುಖ ಕೂಡ ಮೌನದಲ್ಲಿಡಗಿರಬಹುದು.
ಮೌನವಾಗಿದ್ದುಕೊಂಡು ಏನೂ ಹೇಳಲಾಗುವುದಿಲ್ಲ ಎಂದುಕೊಂಡವರಿಗೆ ಅದರ ಬೆಲೆಯೇ ಗೊತ್ತಿರುವುದಿಲ್ಲ. ಜಗಳವಾಡಿ ಠೂ ಬಿಟ್ಟಿರುವ ಪ್ರೇಮಿಗಳು ಅಥವಾ ಪತಿಪತ್ನಿಯರನ್ನು ಕೇಳಿ, ಮೌನದ ಆಳದಲ್ಲಿ ಎಂತಹ ನೋವು ತಳಮಳ ಹಿಂಸೆಗಳೆಲ್ಲಾ ಅಡಗಿರುತ್ತದೆ ಎಂದು ಹೇಳುತ್ತಾರೆ!
ಇವಾನ್ ಡಿ ಹಿಚ್ ಹೇಳುತ್ತಾನೆ, “ಮೌನದ ವ್ಯಾಕರಣವನ್ನು ಕಲಿಯುವುದು ಸದ್ದಿನ (ಭಾಷೆಯ) ವ್ಯಾಕರಣವನ್ನು ಕಲಿಯುವುದಕ್ಕಿಂತ ಹೆಚ್ಚು ಕಷ್ಟ” ಇವತ್ತಿನ ರಾಜಕಾರಣಿಗಳು, ಸಿನಿಮಾದವರು ಮತ್ತು ಸಾರ್ವಜನಿಕ ಜೀವನದಲ್ಲಿರುವವರೆಲ್ಲಾ ಶಬ್ದಬೇದಿಯಿಂದ (ವರ್ಬಲ್ ಡಯೇರಿಯಾ) ನರಳುತ್ತಾರೆ. ಪರಿಣಾಮಕಾರಿಯಾದ ಶಬ್ದಗಳ ಪ್ರಯೋಗದಿಂದ ತಮ್ಮ ವ್ಯಕ್ತಿತ್ವ ಕಟ್ಟಿಕೊಳ್ಳಬಹುದೆಂಬ ಭ್ರಮೆಯಲ್ಲಿರುವ ಇವರೆಲ್ಲಾ ಗಾಂಧಿಜಿಯಿಂದ ಮೌನದ ಮೌಲ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಹಾಗಾದಾಗ ನಮ್ಮ ಸಾರ್ವಜನಿಕ ಬದುಕು ಅಗತ್ಯವಿರುವಷ್ಟೇ ಮಾತು ಮತ್ತು ತನ್ಮಯತೆಯಿಂದ ಮಾಡುವ ಕೃತಿಯಿಂದ ಶ್ರೀಮಂತಗೊಳ್ಳಬಹುದೇನೋ!
ಸಂವಹದನ ಭಿನ್ನ ಮಾಧ್ಯಮಗಳು
ಮನೆಯಲ್ಲಿ, ಕಛೇರಿಯಲ್ಲಿ, ಸಾರ್ವಜನಿಕ ಸಂದರ್ಭಗಳಲ್ಲಿ ಅಥವಾ ವೇದಿಕೆಯಿಂದ ಮಾತನಾಡುವುದು ಮಾತ್ರ ಸಂವಹನ ಮಾಧ್ಯಮಗಳು ಎಂದುಕೊಳ್ಳಬೇಕಿಲ್ಲ. ಪತ್ರಗಳು, ಸಾಹಿತ್ಯ, ಲೇಖನಗಳು, ಕಲಾಪ್ರಕಾರಗಳಾದ ಸಂಗೀತ, ನೃತ್ಯ, ಶಿಲ್ಪ ಮತ್ತು ಚಿತ್ರಕಲೆ, ಇವೆಲ್ಲವೂ ಸಂವಹನದ ಭಿನ್ನ ಭಿನ್ನ ಮಾಧ್ಯಮಗಳು. ಸಾಹಿತ್ಯ ಮತ್ತು ಕಲಾಪ್ರಕಾರಗಳಿಗೆ ವಿಶೇಷ ಪ್ರತಿಭೆಯ ಅಗತ್ಯವಿದೆ. ಆದರೆ ಉಳಿದ ರೀತಿಯ ಸಂವಹನ ಮಾಧ್ಯಮಗಳನ್ನು ಎಲ್ಲರೂ ಕರಗತ ಮಾಡಿಕೊಳ್ಳಬಹುದು. ಮಾತನಾಡುವ ಮತ್ತು ಬರೆಯುವ ಮಾಧ್ಯಮಗಳು ಎನ್ನುವುದು ಎರಡು ಪ್ರಮುಖ ಸಂವಹನದ ಮಾಧ್ಯಮಗಳಾದರೂ ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಗಮನಸಲ್ಲಿರುಸಬೇಕಾದ ಅಂಶಗಳನ್ನು ಹೀಗೆ ಪಟ್ಟಿಮಾಡಬಹುದು;
* ಯಾವ ಓದುಗರನ್ನು/ಕೇಳುಗರನ್ನು ಗುರಿಯಾಗಿಟ್ಟುಕೊಂಡಿದ್ದೇವೆ ಮತ್ತು ಅವರ ವಿದ್ಯಾರ್ಹತೆ, ಅನುಭವ, ಸಾಂಸ್ಕøತಿಕ, ಧಾರ್ಮಿಕ ಮತ್ತಿತರ ಹಿನ್ನೆಲೆಗಳ ಸಾಮಾನ್ಯ ಅಂಶಗಳೇನು ಎನ್ನುವುದರ ಅರಿವಿರಬೇಕು.
* ಮೇಲಿನ ಅಂಶಗಳ ಆಧಾರದ ಮೇಲೆ ಹೇಳಬೇಕಾದ ವಿಷಯದ ಆಳ ಅಗಲಗಳನ್ನು ನಿರ್ಧರಿಸಬೇಕು.
* ಎಲ್ಲರೂ ಅವರದ್ದೇ ಆದ ವಿಶಿಷ್ಟವಾದ ಭಾಷೆ ಮತ್ತು ಶೈಲಿಯನ್ನು ಬೆಳೆಸಿಕೊಳ್ಳಬೇಕು ಇದು ಸಾಧ್ಯವಾಗುವುದು ಸಾಕಷ್ಟು ವರ್ಷಗಳ ಪರಿಶ್ರಮದ ನಂತರ. ಆರಂಭದಲ್ಲ ನಾವು ಗುರಿಯಾಗಿಟ್ಟುಕೊಂಡಿರುವ ಓದುಗರ/ಕೇಳುಗರ ಹಿನ್ನೆಲೆಯಲ್ಲಿ ಶೈಲಿ ಮತ್ತು ಭಾಷೆಯನ್ನು ಆರಿಸಿಕೊಳ್ಳಬಹುದು. ಉದಾಹರಣೆಗೆ ಜನಸಾಮಾನ್ಯರಿಗೆ ಬರೆಯುವಾಗ ಸರಳ ಭಾಷೆಯಲ್ಲಿ ಆರಾಮಾವಾಗಿ ಓದಿಸಿಕೊಂಡು ಹೋಗುವಂತೆ ಬರೆಯಬೇಕು. ವೃತ್ತಿಪರ ಪತ್ರಿಕೆಗಳಿಗೆ (ಪ್ರೊಫೆಷನಲ್ ಮ್ಯಾಗಜೀನ್) ಬರೆಯುವಾಗ ಗಹನವಾದ ವಿಚಾರಗಳನ್ನು ಕ್ಲಿಷ್ಟವಾದ ಭಾಷೆಯಲ್ಲಿ ಹೇಳಬಹುದು.
* ಅಂಕಿ ಅಂಶಗಳು, ಕಥೆ ಉಪಕಥೆಗಳು, ಉದಾಹರಣೆಗಳು ಮುಂತಾದವುಗಳನ್ನು ಯಾವಾಗ, ಎಷ್ಟು ಮತ್ತು ಹೇಗೆ ಹೇಳಬೇಕು ಎನ್ನುವುದರ ಬಗೆಗೆ ಸ್ಪಷ್ಟತೆ ಇಟ್ಟುಕೊಳ್ಳಬೇಕು.
* ಹೇಳುವ ವಿಷಯಗಳನ್ನು ಬಿಡಿಬಿಡಿಯಾಗಿ ಮಂಡಿಸದೆ ಒಂದಕ್ಕೊಂದು ಸಂಬಂಧವಿರುವಂತೆ ಹಂತಹಂತವಾಗಿ ಕೊಡಬೇಕು.
* ಆರಂಭ ಗಮನ ಸೆಳೆಯುವಂತಿರಬೇಕು. ಅಂತ್ಯ ಒಳ್ಳೆಯ ಅನುಭವನ್ನು ನೀಡಿದ ಸಂತೋಷವನ್ನು ಕೊಡಬೇಕು. ಹೇಳುವುದರಲ್ಲಿ ಸ್ಪಷ್ಟತೆ ಇರಬೇಕು ಮತ್ತು ಪುನರುಕ್ತಿಗಳಿರಬಾರದು.
* ತಿಳಿಹಾಸ್ಯದ ನಿರೂಪಣೆ ಎಲ್ಲರನ್ನೂ ಯಾವಾಗಲೂ ಆಕರ್ಷಿಸಬಲ್ಲದು. ಇದನ್ನು ರೂಡಿಸಿಕೊಳ್ಳವವರಿಗೆ ಓದುಗರ/ಕೇಳುಗರ ಕೊರತೆ ಉಂಟಾಗುವುದಿಲ್ಲ.
* ಬರೆದಿದ್ದನ್ನು ಅಥವಾ ಮಾತನಾಡಬೇಕಾದ್ದನ್ನು ಓಬ್ಬ ಓದುಗನ /ಕೇಳುಗನ ದೃಷ್ಟಿಯಿಂದ ಮತ್ತೆಮತ್ತೆ ಸೂಕ್ತ ಬದಲಾವಣೆ ಮಾಡಬೇಕು.
ಈ ಎಲ್ಲಾ ಅಂಶಗಳನ್ನು ಗಮನಿಸುತ್ತಾ ನಿರಂತರವಾಗಿ ಪ್ರಯತ್ನಿಸಿದಾಗ ಮಾತ್ರ ನಮಗಿಷ್ಟವಾದ ಸಂವಹನ ಮಾಧ್ಯಮದಲ್ಲಿ ಗುರುತಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಪಂಚೇಂದ್ರಿಯಗಳು ಮತ್ತು ಸಂವಹನ
ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಈ ಐದು ಅಂಗಗಳು ಹೊರಜಗತ್ತಿನೊಂದಿಗೆ ನಮ್ಮ ಮಿದುಳನ್ನು ಬೆಸೆಯುತ್ತವೆ. ಇವುಗಳಲ್ಲಿ ಮೂಗು ಮತ್ತು ನಾಲಿಗೆ(ಮಾತನಾಡುವ ದೃಷ್ಟಿಯಿಂದಲ್ಲ, ರುಚಿನೋಡುವ ದೃಷ್ಟಿಯಿಂದ)ಗಳನ್ನು ಪ್ರಾಣಿಗಳು ಹೆಚ್ಚಾಗಿ ಉಪಯೋಗಿಸಿದರೆ ಉಳಿದ ಮೂರನ್ನು ಮಾನವರು ಪ್ರಮುಖವಾಗಿ ಬಳಸುತ್ತಾರೆ.
ಎನ್ ಎಲ್ ಪಿಯ ಪ್ರಕಾರ ನಮ್ಮಲ್ಲಿ ಪ್ರತಿಯೊಬ್ಬರೂ ಕಣ್ಣು, ಕಿವಿ ಅಥವಾ ಚರ್ಮ ಈ ಮೂರರಲ್ಲಿ ಒಂದನ್ನು ಹೆಚ್ಚಾಗಿ ಇಷ್ಟಪಡುತ್ತೇವೆ ಮತ್ತು ಬಳಸುತ್ತೇವೆ. ಒಂದೇ ಅಭೀಪ್ರಾಯವನ್ನು ಬೇರೆಬೇರೆ ಸಂವೇದನಾಂಗಗಳಿಗೆ ಸಂಬಂಧಿಸಿದ ಪದಗಳನ್ನು ಉಪಯೋಗಿಸಿ ಹೇಳವ ಉದಾಹರಣೆಯೊಂದನ್ನು ನೋಡೋಣ.
* ನಿಮ್ಮ ಮಾತಿನಲ್ಲಿ ನನಗೆ ದ್ವೇಷವಿದ್ದಂತೆ ಅನ್ನಿಸುತ್ತದೆ. (“ಅನ್ನಿಸು” ಅಂದರೆ ಇಂಗ್ಲೀಷಿನ ಫೀಲ್ ಎನ್ನುವ ಶಬ್ದ, ಸ್ಪರ್ಷ ಅಂದರೆ ಚರ್ಮಕ್ಕೆ ಸಂಬಂಧಿಸಿದ್ದು.)
* ನಿಮ್ಮ ಮಾತಿನಲ್ಲಿ ನನಗೆ ದ್ವೇಶದ ಬೆಂಕಿ ಕಾಣಿಸುತ್ತದೆ. (“ಕಾಣಿಸು” ಎನ್ನುವುದು ನೋಟ ಅಂದರೆ ಕಣ್ಣಿಗೆ ಸಂಬಂಧಿಸಿದ್ದು.)
* ನಿಮ್ಮ ಮಾತಿನಲ್ಲಿ ನನಗೆ ದ್ವೇಶದ ಧ್ವನಿ ಕೇಳಿಸುತ್ತದೆ. (“ಕೇಳಿಸು” ಎನ್ನುವ ಪದ ಕಿವಿಗೆ ಸಂಬಂಧಿಸಿದ್ದು)
ನೀವು ಯಾವ ಸಂವೇದನಾಂಗವನ್ನು ಹೆಚ್ಚಾಗಿ ಬಳಸುತ್ತೀರಿ ಎನ್ನುವುದನ್ನು ತಿಳಿಯುವ ಕುತೂಹಲವಿದ್ದರೆ ಹೀಗೆ ಮಾಡಿ. ಸುಮ್ಮನೆ ಯಾವುದಾದರೂ ವಿಷಯದ ಬಗೆಗೆ ಏನೂ ಯೋಚಿಸಿದೆ ನಿಮಗೆ ಆ ಕ್ಷಣ ಹೊಳೆಯುವುದನ್ನು ಒಂದು ಪುಟದಷ್ಟು ಬರೆಯಿರಿ. ನಂತರ ಅದರಲ್ಲಿರುವ ಕ್ರಿಯಾಪದಗಳು ಯಾವ ಸಂವೇದನಾಂಗಕ್ಕೆ ಸಂಬಂಧಿಸಿದ್ದು ಎನ್ನವುದನ್ನು ಪಟ್ಟಿಮಾಡಿ. ನಿಮಗೆ ಪ್ರಿಯವಾದ ಅಂಗಕ್ಕೆ ಸಂಬಂಧಿಸಿದ ಪದಗಳನ್ನು ನೀವು ಹೆಚ್ಚಾಗಿ ಬಳಸಿರುತ್ತೀರಿ!
ಭಾಷಣ ಮತ್ತು ಲೇಖನ ಕಲೆಯನ್ನು ಕಲಿಯಬಯಸುವವರು ನೆನಪಿಡಬೇಕಾದ ಅಂಶವೊಂದಿದೆ. ಜನಸಾಮಾನ್ಯರಲ್ಲಿ ಎಲ್ಲಾ ಅಭಿರುಚಿಯವವರೂ ಇರುತ್ತಾರೆ. ಹಾಗಾಗಿ ಮೂರೂ ಸಂವೇದನಾಂಗಗಳಿಗೆ ಸಂಬಂಧಿಸಿದ ಶಬ್ದಗಳನ್ನು ಸಮಾನವಾಗಿ ಬಳಸಿದರೆ ಎಲ್ಲರಿಗೂ ಆಕರ್ಷಗವಾಗುವಂತೆ ಮಾಡಬಹುದು. ಇದಕ್ಕೆ ಸಾಕಷ್ಟು ಅನುಭವ ಮತ್ತು ಪರಿಶ್ರಮ ಅಗತ್ಯವಿರುತ್ತದೆ.
ವಸಂತ್ ನಡಹಳ್ಳಿ