22.1 C
Sidlaghatta
Tuesday, January 7, 2025

ನಾವೆಷ್ಟು ಕೊಳ್ಳುಬಾಕರು? – ಭಾಗ 3

- Advertisement -
- Advertisement -

ಸದಾ ಎಚ್ಚರದಲ್ಲಿರಬೇಕಾದ ಗ್ರಾಹಕ
ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಗಾರ ತನ್ನ ವಸ್ತುಗಳನ್ನು ಮಾರಾಟಮಾಡಲು ಏನೆಲ್ಲಾ ತಂತ್ರಗಳನ್ನು ಬಳಸುವುದು ಸಹಜವೂ ಕಾನೂನುಬದ್ಧವೂ ಆಗಿದೆ. ಆದರೆ ಗ್ರಾಹಕ ಮಾತ್ರ ಸದಾ ಎಚ್ಚರದಲ್ಲಿರಬೇಕಾಗುತ್ತದೆ. ಸೂಕ್ತವಾದ ಕಾನೂನುಗಳಿಲ್ಲದ ಮತ್ತು ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿರುವ ಭಾರತದಂತಹ ದೇಶದಲ್ಲಿ ಗ್ರಾಹಕ ಸ್ವಲ್ಪವೇ ಎಚ್ಚರ ತಪ್ಪಿದರೂ ಮೋಸಹೋಗುವ ಸಾಧ್ಯತೆ ಇರುತ್ತದೆ.
ನಾವೆಲ್ಲಾ ಏನನ್ನಾದರೂ ಕೊಳ್ಳುವ ಮೊದಲು ನಮ್ಮ ಅಗತ್ಯಗಳು, ಆದ್ಯತೆಗಳು ಮತ್ತು ಆರ್ಥಿಕ ಪರಿಸ್ಥಿತಿಯ ಬಗೆಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರಬೇಕು, ಕೊಳ್ಳುವ ಉದ್ದೇಶವಿಲ್ಲದೆ ಅಥವಾ ಸ್ನೇಹಿತರೊಡನೆ ಮಾರುಕಟ್ಟೆಗೆ ಹೋದಾಗ ಸುಮ್ಮನೆ ಕಣ್ಣಾಡಿಸಿ ಎಲ್ಲಾ ವಸ್ತುಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಆದರೆ ಯಾವುದೋ ಮಾರಾಟದ ತಂತ್ರದ ಬಲೆಗೆ ಬಿದ್ದು ಏನನ್ನೂ ಕೊಳ್ಳಬಾರದು. ನಿಜವಾದ ಅಗತ್ಯವಿದ್ದಾಗ ಮಾರುಕಟ್ಟೆಯಲ್ಲು ಹುಡುಕಿದರೆ ಅದೇ ವಸ್ತು ಅಥವಾ ಅದಕ್ಕಿಂತ ಉತ್ತಮ ವಸ್ತು ಇನ್ನೂ ಕಡಿಮೆ ಬೆಲೆಗೆ ಸಿಗುವ ಸಂಭವವೇ ಹೆಚ್ಚಾಗಿರುತ್ತದೆ!
ಅನಗತ್ಯವಾದದ್ದನ್ನು ಕೊಳ್ಳುತ್ತಾ ಹೋಗುವುದು ಎಂದರೆ ನಮ್ಮ ಜೇಬುಗಳಿಗಷ್ಟೇ ಅಲ್ಲ ಪರಿಸರಕ್ಕೂ ಭಾರೀ ಹಾನಿಕರ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು.
ಸ್ಟಾಂಡರ್ಡೈಸೇಷನ್
ಕೊಳ್ಳುಬಾಕತನವನ್ನು ನಿರಂತರವಾಗಿ ಗ್ರಾಹಕರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಲು ಉಪಯೋಗಿಸುವ ಇನ್ನೊಂದು ತಂತ್ರವೆಂದರೆ ಎಲ್ಲವನ್ನೂ ಸ್ಟಾಂಡರ್ಡೈಸ್ ಮಾಡುವುದು. ವಸ್ತುಗಳನ್ನು ದೊಡ್ಡಮಟ್ಟದಲ್ಲಿ ತಯಾರಿಸುವ ಮತ್ತು ಮಾರಾಟಮಾಡುವ ಅನುಕೂಲಕ್ಕಾಗಿ ಬಿಡಿಭಾಗಗಳನ್ನು ಸ್ಟಾಂಡರ್ಡೈಸ್ ಮಾಡಲಾಗುತ್ತದೆ. ಇವತ್ತು ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳು, ವಾಹನ ಬಿಡಿಭಾಗಗಳು ಹೀಗೆ ಬಹುರಾಷ್ಟ್ರೀಯ ಕಂಪನಿಗಳು ಮಾರಾಟಮಾಡುವ ಎಲ್ಲಾ ವಸ್ತುಗಳನ್ನು ಸ್ಟಾಂಡರ್ಡೈಸ್ ಮಾಡಲಾಗಿದೆ. ಅಂದರೆ ಇವುಗಳ ಬಿಡಿಭಾಗಗಳ ಅಳತೆಗಳು, ತಂತ್ರಜ್ಞಾನಗಳೆಲ್ಲಾ ಇಡೀ ಪ್ರಪಂಚದಲ್ಲೆಡೆ ಒಂದೇ ಆಗಿರುತ್ತದೆ. ಇದರಿಂದ ಸಾಕಷ್ಟು ಅನುಕೂಲಗಳಿವೆ ಎನ್ನುವುದು ನಿಜ.
ದುರಂತವೆಂದರೆ ಹೀಗೆ ಸ್ಟಾಂಡರ್ಡೈಸ್ ಮಾಡುವ ಪ್ರಕ್ರಿಯೆ ಬರಿಯ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮೆಲ್ಲರ ಡಿಎನ್‍ಎಗಳಲ್ಲಿ ಸೇರಿಕೊಂಡು ನಮ್ಮ ಜೀವನ ಶೈಲಿಯೇ ಆಗಿಬಿಟ್ಟಿದೆ. ಒಂದು ತಮಾಷೆಯ ಉದಾಹರಣೆ ನೋಡಿ. ಹಿಂದೆಲ್ಲಾ ಹೆಣ್ಣುಮಕ್ಕಳು ಹುಬ್ಬುಗಳನ್ನು ಕತ್ತರಿಸುತ್ತಿರಲಿಲ್ಲ. ಆಗ ಎಂತಹ ವೈವಿಧ್ಯಮಯವಾದ ಹುಬ್ಬುಗಳನ್ನು ನೋಡುವುದು ಸಾಧ್ಯವಿತ್ತು. ಪ್ರತಿಯೊಬ್ಬ ಮಹಿಳೆಯ ಹುಬ್ಬು ಅವಳದೇ ಮುಖದ ವೈಶಿಷ್ಟ್ಯವಾಗಿತ್ತು. ಈಗ ಎಲ್ಲರದ್ದೂ ಸ್ಟಾಂಡರ್ಡೈಸ್ ಆದ ಕಮಾನಿನಂತಹ ಹುಬ್ಬು! ಸ್ತ್ರೀಪುರುಷರ ಇತರ ಅಂಗದ ಸೌಂದರ್ಯದ ಕಲ್ಪನೆಯನ್ನೂ ಹೀಗೇ ಸ್ಟಾಂಡರ್ಡೈಸ್ ಮಾಡಲಾಗಿದೆ. ಇದಿಷ್ಟೇ ಅಲ್ಲ ನಮ್ಮ ಜೀವನ ಮಟ್ಟದ ಮಾನದಂಡಗಳು, ವಿದ್ಯಾಭ್ಯಾಸದ ರೀತಿ, ಮನೆಕಟ್ಟುವ ಮಾದರಿಗಳು, ಸುಖ ದುಃಖದ ಕಲ್ಪನೆ, ಹೀಗೆ ಎಲ್ಲವನ್ನೂ ಸ್ಟಾಂಡರ್ಡೈಸ್ ಮಾಡಲಾಗಿದೆ. ಈ ರೀತಿ ಒಂದು ಆದರ್ಶ ಸುಸಜ್ಜಿತ ಬದುಕಿನ ಕಲ್ಪನೆಯನ್ನು ಜನರ ತಲೆಯಲ್ಲಿ ತುಂಬಿದರೆ ಈ ಕಾರ್ಪೋರೇಟ್‍ಗಳಿಗೆ ವಿಶ್ವಮಟ್ಟದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಸಾಧ್ಯವಾಗುತ್ತದೆ. ಪ್ರಾದೇಶಿಕ ವೈಶಿಷ್ಟ್ಯಗಳನ್ನು ಮತ್ತು ಸಣ್ಣ ಉದ್ಯಮಿಗಳನ್ನು ನಾಶಮಾಡಲು ಸಾಧ್ಯವಾದಾಗ ಮಾತ್ರ ಜಾಗತೀಕರಣ ಯಶಸ್ವಿಯಾಗುತ್ತದೆ ಎಂದು ಇವರಿಗೆಲ್ಲಾ ಬಹಳ ಹಿಂದಯೇ ಗೊತ್ತಿತ್ತು. ಹಾಗಾಗಿ ಈ ನಿಟ್ಟಿನಲ್ಲಿ ಕಳೆದೆರೆಡು ಶತಮಾನಗಳಿಂದ ಅವರೆಲ್ಲಾ ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ.
ಸಾಲವೆಂಬ ಶೂಲ
ಕೊಳ್ಳುಬಾಕತನಕ್ಕೆ ಇಂಬುಕೊಡಲು ಸೃಷ್ಟಿಸಿರುವ ಇನ್ನೊಂದು ವ್ಯವಸ್ಥಿತ ಜಾಲವೆಂದರೆ ಸುಲುಭ ಸಾಲವನ್ನು ನೀಡುವುದು. ಇತ್ತೀಚೆಗೆ ವಾಹನಗಳು, ಟೀವಿ ಮುಂತಾದವುಗಳನ್ನು ನೀವು ಖರೀದಿಸಲು ಹೋದರೆ ಮಾರಾಟಗಾರನ ಸ್ಥಳದಲ್ಲಿಯೇ ಸಾಲ ಪಡೆಯಲು ಸಾಧ್ಯವಾಗುತ್ತದೆ. ಹಳೆಯ ತಲೆಮಾರಿನವರಲ್ಲಿ ಹೆಚ್ಚಿನವರು ಉಳಿತಾಯದಿಂದ ಮಾತ್ರ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಇವತ್ತಿನ ಯವಕರು ಕೆಲಸ ಸಿಕ್ಕೊಡನೆ ಮೊಬೈಲು, ಟೀವಿ, ಬೈಕ್ ಕೊಳ್ಳಲು ಸಾಲದ ಮೊರೆ ಹೊಗುತ್ತಾರೆ. ಈ ರೀತಿಯ ಸಾಲದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎನ್ನುವುದು ಪಾಶ್ಚಿಮಾತ್ಯ ಆರ್ಥಶಾಸ್ತ್ರಜ್ಞರ ತಿಳಿವಳಿಕೆ. ಹೀಗೆ ಸಾಲ ಕೊಡುವುದರಿಂದ ದೇಶ ಉದ್ಧಾರವಾಗುತ್ತದೆಯೋ ಇಲ್ಲವೋ ಅನ್ನುವುದು ಚರ್ಚಾಸ್ಪದ. ಆದರೆ ಸಾಲ ತೆಗೆದುಕೊಳ್ಳುವವರು ಮಾತ್ರ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ತಿಂಗಳು ತಿಂಗಳು ಸಾಲದ ಕಂತುಗಳಿಗಾಗಿ ಮೀಸಲಿಡಬೇಕಾಗುತ್ತದೆ ಎನ್ನುವುದಂತೂ ಖಾತ್ರಿ. ಹೀಗಿದ್ದರೂ ಒಂದು ಸಾಲ ತೀರಿದ ನಂತರ ಮತ್ತೊಂದು, ನಂತರ ಇನ್ನೊಂದು… ಹೀಗೆ ಮುಂದುವರೆಸುತ್ತಲೇ ಇರುತ್ತಾರೆ. ಇವರೆಲ್ಲಾ ಬಿಳಿ ಕಾಲರಿನ ಜೀತದಾಳುಗಳಲ್ಲದೇ ಮತ್ತೇನು?
ಸಾಲ ಕೊಳ್ಳುವುದು ಅವಮಾನಕರ ಎಂದುಕೊಳ್ಳುವ ಕಾಲವೊಂದಿತ್ತು. ಇವತ್ತಿನ ಯುವಕರನ್ನು ಕೇಳಿದರೆ, “ಟಾಟಾ, ಬಿರ್ಲಾ, ಅಂಬಾನಿಗಳೆ ಸಾಲ ತೊಗೊಳ್ತಾರೆ. ಅಷ್ಟೇ ಏನು ಭಾರತ ಸರ್ಕಾರವೇ ಸಾಲದಲ್ಲಿ ನಡೆಯುತ್ತಾ ಇದೆ. ಇನ್ನು ನಮ್ಮದೆಲ್ಲಾ ಯಾವ ಲೆಕ್ಕ” ಎನ್ನುವ ಉಡಾಫೆಯ ಮಾತು ಕೇಳಿಬರುತ್ತದೆ. ಉದ್ಯಮಿಗಳು ಅಥವಾ ಸರ್ಕಾರ ತೆಗೆದುಕೊಳ್ಳುವ ಸಾಲ ಬಂಡವಾಳ ಹೂಡಿಕೆಯ ರೂಪದಲ್ಲಿರುತ್ತದೆ. ಆದರೆ ವ್ಯಕ್ತಿಯೊಬ್ಬ ವ್ಯಾಪಾರ ವ್ಯವಹಾರಗಳ ಉದ್ದೇಶದ ಹೊರತಾಗಿ ಸಾಲ ಕೊಳ್ಳುವುದು ಅಂದರೆ ನಾವು ನಮ್ಮ ನಾಳೆಯ ಆದಾಯವನ್ನು ಇವತ್ತೇ ಖರ್ಚು ಮಾಡುತ್ತಿದ್ದೇವೆ ಎಂದರ್ಥ. ಇದು ಸಾಲಪಡೆದವನನ್ನು ಹೊರತಾಗಿಸಿ ಇನ್ನೆಲ್ಲರನ್ನೂ, ಕೊನೆಗೆ ದೇಶವನ್ನೂ ಉದ್ಧಾರ ಮಾಡುತ್ತದೆ! ಇದರಿಂದಾಗಿ ನಾವು ನಮ್ಮ ಮುಂದಿನ ತಲೆಮಾರಿಗೆ ಆಸ್ತಿಯನ್ನು ಬಿಟ್ಟುಹೋಗುವ ಬದಲು ಸಾಲದ ಹೊರೆಹೊರಿಸಿ ಹೋಗುವ ಅಪಾಯವೇ ಹೆಚ್ಚಿರುತ್ತದೆ. ಅಪ್ಪ ಅಮ್ಮ ಮಾಡಿದ ಸಾಲ ತೀರಿಸಲು ಮಕ್ಕಳನ್ನು ಜೀತದಾಳುಗಳನ್ನಾಗಿಸುವ ಪದ್ದತಿ ಈಗ ಬೇರೆ ರೂಪದಲ್ಲಿ ಮುಂದುವರೆಯುತ್ತಿದೆ ಅಷ್ಟೆ!
ಬಗೆಬಗೆಯ ತಂತ್ರಗಳು
ಗ್ರಾಹಕನಿಗೆ ಅನಗತ್ಯವಾದದ್ದನ್ನು ಕೊಳ್ಳಲು ಪ್ರೇರಿಪಿಸಲು ಇವತ್ತು ಹಲವಾರು ಆಮಿಷಗಳನ್ನು ಒಡ್ಡಲಾಗುತ್ತದೆ. ಒಂದಕ್ಕೆ ಒಂದು ಉಚಿತ, ಭಾರೀ ರಿಯಾಯಿತಿ, ತೀರುವಳಿ ಮಾರಾಟ, ವಷರ್Àದ ಕೊನೆಯ ಮಾರಾಟ, ಹಬ್ಬದ ಮಾರಾಟ, ಎಕ್ಸ್‍ಪೋರ್ಟ್ ಸಪ್ರ್ಲ್‍ಸ್, ಕಾಂಬೋ ಆಫರ್- ಹೀಗೆ ನಿಘಂಟಿನಿಂದ ಹೊಸಹೊಸ ಶಬ್ದಗಳನ್ನು ಹೆಕ್ಕಲಾಗುತ್ತದೆ. ಕೊನೆಗೆ ಗ್ರಾಹಕನಿಗೆ ತಾನು ಕೊಳ್ಳುತ್ತಿರುವುದು ನಿಜವಾದ ತನ್ನ ಅಗತ್ಯವೇ, ಅದಕ್ಕೆ ಕೊಡುವ ಬೆಲೆ ಸೂಕ್ತವಾದದ್ದೇ ಎನ್ನವುದನ್ನೂ ತಿಳಿಯಲಾಗದ ಗೊಂದಲದಿಂದ ಅತೃಪ್ತನಾಗಿಯೇ ಉಳಿಯುತ್ತಾನೆ.
ಮುಗಿಯಿತು.
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!