ಮಾರಾಟದ ಬೆಲೆ ನೂರಾರು ಪಟ್ಟು
ಇಡೀ ದೇಶದ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ಪಾದನೆಯಾಗುವ ಹೆಚ್ಚಿನ ವಸ್ತುಗಳ ಬೆಲೆ ಉತ್ಪಾದನ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಾಗಿರುತ್ತದೆ. ಉತ್ಪಾದನೆಯ ವೆಚ್ಚ ಮತ್ತು ಮಾರಾಟದ ಬೆಲೆಯ ಅಂತರದ ಹಣ ಮಾರಾಟ ಜಾಲ, ಸಾಗಾಣಿಕೆ, ಪ್ರಚಾರ ಮತ್ತು ಕಂಪನಿಗಳ ದೊಡ್ಡ ಮೊತ್ತದ ಲಾಭಾಂಶಕ್ಕೆ ಹೋಗುತ್ತದೆ.
ಆಧುನಿಕ ಅರ್ಥಶಾಸ್ತ್ರಜ್ಞರ ಪ್ರಕಾರ ವಸ್ತುಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸುವುದರಿಂದ ಅವುಗಳ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ. ಇದು ಸತ್ಯವೇ ಇದ್ದರೂ ಇಂತಹ ದೊಡ್ಡ ಮಟ್ಟದ ಉತ್ಪಾದನೆಯನ್ನು ಪ್ರಪಂಚಾದಾದ್ಯಂತ ಗ್ರಾಹಕರಿಗೆ ತಲುಪಿಸಲು ಪ್ರಚಾರ, ಮಾರಾಟ ಜಾಲ, ಸಾಗಾಣಿಕೆ-ಮುಂತಾದ ವೆಚ್ಚಗಳಿರುತ್ತವೆ. ಹಾಗಾಗಿ ವಸ್ತುಗಳು ಗ್ರಾಹಕರಿಗೆ ತಲುಪುವಷ್ಟರಲ್ಲಿ ಅವುಗಳ ಬೆಲೆ ನೂರಾರು ಪಟ್ಟು ಹೆಚ್ಚಾಗಿರುತ್ತದೆ ಎನ್ನುವ ಸತ್ಯವನ್ನು ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ಮರೆಮಾಚಲಾಗತ್ತದೆ.
ಸಂಶೋಧನೆಗಳ ವಿಶ್ವಸಾರ್ಹತೆ
ಪ್ರಪಂಚದ ಎಲ್ಲಾ ಕ್ಷೇತ್ರಗಳಲ್ಲಿನ ಹೆಚ್ಚಿನ ಸಂಶೋಧನೆಗೆ ಹಣ ಕಾರ್ಪೋರೇಟ್ಗಳಿಂದಲೇ ಬರುತ್ತದೆ. ಹಾಗಾಗಿ ಸಂಶೋಧನೆಗಳ ವಿಷಯವನ್ನು, ದಿಕ್ಕನ್ನು ಮತ್ತು ಅದರ ಫಲಿತಾಂಶಗಳನ್ನೂ ಕೂಡ ಇವರು ತಮಗೆ ಬೇಕಾದಂತೆ ತಿರುಚಿರುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಮನುಷ್ಯನ ರಕ್ತದೊತ್ತಡ 120/80 ಇರಬೇಕು ಎಂದು ಶತಮಾನಗಳ ಹಿಂದಿನಿಂದಲೇ ವೈದ್ಯಕೀಯ ಸಂಶೋಧನೆಗಳು ಹೇಳಿವೆ. ಇದನ್ನು 110/70ಕ್ಕೆ ಇಳಿಸುವ ಹುನ್ನಾರಗಳು ನಡೆಯುತ್ತಿವೆ. ಇದಕ್ಕಾಗಿ ಹಲವು ಸಂಶೋಧನೆಗಳ ಪ್ರಹಸನ ನಡೆಸುವುದು ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಕಷ್ಟವೇನಲ್ಲ. ಹೀಗೆ ಇವರ ಸಂಶೋಧನೆಗೆ ಮಾನ್ಯತೆ ಸಿಕ್ಕ ತಕ್ಷಣ ಇವರ ಉತ್ಪನ್ನಗಳಿಗೆ ಕಡಿಮೆ ಎಂದರೆ 50 ಕೋಟಿ ಜನ ಹೊಸ ಗ್ರಾಹಕರು ಸಿಗಬಹುದು ಎಂಬುದು ಒಂದು ಆಂದಾಜು. ನಮ್ಮ ತಾತ ಮುತ್ತಾತಂದಿರು 120/80 ಕ್ಕಿಂತ ಹೆಚ್ಚಿನ ರಕ್ತದೊತ್ತಡ ಇದ್ದಾಗ್ಯೂ ವೈದ್ಯರ ಹತ್ತಿರ ಹೋಗದೇ ಆರೋಗ್ಯವಾಗಿ ತುಂಬು ಜೀವನವನ್ನು ಕಳೆದಿರುವ ಸಾಧ್ಯತೆಗಳನ್ನು ಇಂತಹ ಸಂಶೋಧನೆಗಳ ಪರಿಧಿಯಿಂದ ಹೊರಗಿಟ್ಟಿರುತ್ತಾರೆ.
ಜೀವನ ಮಟ್ಟದ ಭ್ರಮಾಲೋಕ
ಬಳಸಿ ಮತು ಬಿಸಾಕಿ
“ಯೂಸ್ ಅಂಡ್ ಥ್ರೋ” ಸಂಸ್ಕøತಿಯನ್ನು ಹುಟ್ಟುಹಾಕಿರುವ ಅಮೇರಿಕಾದಲ್ಲಿ ಪ್ರತಿವರ್ಷ ಸುಮಾರು 4000 ಕೋಟಿ ತಂಪುಪಾನೀಯಗಳ ಬಾಟಲಿ ಮತ್ತು ಕ್ಯಾನ್ಗಳನ್ನು ಉಪಯೋಗಿಸಿ ಎಸೆಯುತ್ತಾರೆ. ಇವುಗಳನ್ನು ಸಾಲಾಗಿ ಜೋಡಿಸಿದರೆ 20ಸಾರಿ ಚಂದ್ರನವರೆಗೆ ಹೋಗಿ ಹಿಂತಿರುಗಬಹುದು!! ಪ್ಲಾಸ್ಟಿಕ್ ಮತ್ತು ಇಂತಹ ಇತರ ಅಪಾಯಕಾರೀ ತ್ಯಾಜ್ಯವನ್ನೆಲ್ಲಾ ಅವರು ಉತ್ತರ ಶಾಂತಸಾಗರದ ಮಧ್ಯೆ ಸುರಿದು ಅಲ್ಲಿ ಟೆಕ್ಸಾಸ್ ರಾಜ್ಯದ ಅಳತೆಯ “ಗ್ರೇಟ್ ಪ್ಯಾಸಿಫಿಕ್ ಗಾರ್ಬೇಜ್ ಪ್ಯಾಚ್”ನ್ನು ಸೃಷ್ಟಿಸಿದ್ದಾರೆ. ನಮ್ಮ ಮನೆಯ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಕುವುದಕ್ಕೂ ಇದಕ್ಕೂ ವ್ಯತ್ಯಾಸವೇನಿದೆ ಹೇಳಿ? ಆದರೆ ದೊಡ್ಡಣ್ಣನನ್ನು ಪ್ರಶ್ನಿಸುವ ಎದೆಗಾರಿಕೆ ಯಾರಿಗೂ ಇಲ್ಲ.
ಇದು ಒಂದು ಉದಾಹರಣೆ ಮಾತ್ರ. ಇಂತಹ “ಬಳಸಿ ಮತ್ತು ಬಿಸಾಕಿ” ಸಂಸ್ಕøತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಬಹಳ ವ್ಯವಸ್ಥಿತವಾಗಿಯೇ ರೂಪಿಸಿದ್ದಾರೆ. ಇದರಿಂದ ಅವರ ಉತ್ಪನ್ನಗಳಿಗೆ ನಿರಂತರವಾಗಿ ಬೇಡಿಕೆ ಇರುತ್ತದೆ. ನಮ್ಮ ಅಪ್ಪ ಮೂವತ್ತು ವರ್ಷ ಉಪಯೋಗಿಸಿದ್ದ ಗಟ್ಟಿಮುಟ್ಟಾದ ಸ್ಟೀಲ್ ರೇಜರ್ ಒಂದನ್ನು ನಾನು ಮೂವತ್ತು ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಆದರೆ ನನ್ನ ಮಗನಿಗೆ ಬಳಸಿ ಬಿಸಾಕುವ ರೇಜರ್ಗಳು ಬೇಕು. ಜಾಹಿರಾತುಗಳಿಂದ ನಮ್ಮನ್ನು ನಿರಂತರ ಗ್ರಾಹಕರನ್ನಾಗಿಸುವ ಪರಿ ಇದು. ಇದರಲ್ಲಿ ಏನೂ ವಿಶೇಷವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಇದನ್ನು ಒಪ್ಪಿಕೊಂಡಿದ್ದೇವೆ.
ಕಡಿಮೆ ಗುಣ ಮಟ್ಟದ ವಸ್ತುಗಳನ್ನು ಉಪಯೋಗಿಸಿದರೂ ವಸ್ತುಗಳನ್ನು ಅತಿ ಆಕರ್ಷಕವಾಗಿ ಮಾಡುವುದು ಮತ್ತು ನಿರಂತರ ಬದಲಾಗುತ್ತಿರುವ ತಾಂತ್ರಿಕತೆಯ ಭ್ರಮೆ ಹುಟ್ಟಿಸುವುದು- ಇವುಗಳಿಂದಾಗಿ ಈ ಸಂಸ್ಕøತಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಜೊತೆಗೆ ಪ್ಲಾಸ್ಟಿಕ್ನ ಅವಿಷ್ಕಾರ ವಸ್ತುಗಳ ಬೆಲೆಯನ್ನು ಗಮನಾರ್ಹವಾಗಿ ಇಳಿಸಲು ಸಹಾಯಮಾಡಿದೆ. ಈ ಪ್ಲಾಸ್ಟಿಕ್ ಎಂಬ ರಕ್ತಬೀಜಾಸುರನ ದೂರಗಾಮೀ ಪರಿಣಾಮಗಳೇನು ಎನ್ನುವ ಬಗೆಗೆ ಜನತೆ ಮತ್ತು ಸರ್ಕಾರಗಳೇ ತಲೆಕೆಡಿಸಿಕೊಳ್ಳದಿರುವಾಗ, ಹಣದ ಥೈಲಿಗಳಿಗಾಗಿ ಮಾತ್ರ ಬದುಕುತ್ತಿರುವ ಉದ್ಯಮಿಗಳು ಇದರ ಲಾಭ ಪಡೆಯದೆ ಹೇಗಿದ್ದಾರು?
ಈ ‘ಬಳಸಿ ಮತ್ತು ಬಿಸಾಕಿ’ ಸಂಸ್ಕøತಿಗೆ ಇನ್ನೂ ಆಳವಾದ ಮುಖಗಳಿವೆ. ಇದರ ಮೂಲ ಉದ್ದೇಶ ಯಾವುದನ್ನೂ ಮರುಬಳಕೆ ಮಾಡಲು ಆಗದಂತೆ ಮಾಡುವುದು. ಈಗ ಕೃಷಿಕ ಕೂಡ ಇದರ ಸುಳಿಗೆ ಸಿಕ್ಕಿದ್ದಾನೆ. ಸುಧಾರಿತ ತಳಿಗಳ ಧವಸಧಾನ್ಯಗಳನ್ನು ಬೆಳೆಯಲು ಆರಂಭಿಸಿದ ಮೇಲೆ ಅವನಿಗೆ ಬಿತ್ತನೆ ಬೀಜಗಳನ್ನು ತನ್ನದೇ ಫಸಲಿನಿಂದ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಪ್ರತಿಬಾರಿಯೂ ಕಂಪನಿಗಳ ಕೊಡುವ ಬಿತ್ತನೆ ಬೀಜವನ್ನೇ ಕೊಳ್ಳಬೇಕಾಗುತ್ತದೆ. ಇಷ್ಟಾದ ಮೇಲೂ ಕಂಪನಿಗಳು ಸುಧಾರಿತ ತಳಿಯ ಸುಳಿಯಲ್ಲಿ ರೈತನನ್ನು ಸಿಕ್ಕಿಸಿದ್ದು ಜನಸಾಗರದ ಹಸಿವನ್ನು ಹಿಂಗಿಸಲು ಎಂದು ಸರ್ಕಾರಗಳು ಹೇಳುವುದನ್ನು ನಾವು ನಂಬಬೇಕಿದೆ. ಸುಧಾರಿತ ತಳಿ, ರಸಗೊಬ್ಬರ, ಕ್ರಿಮಿನಾಶಕಗಳ ವಿಷವರ್ತುಲ ಇವತ್ತು ರೈತನನ್ನು ಮತ್ತು ನಮ್ಮ ಭೂಮಿ, ಪರಿಸರಗಳನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಈಗ ನೋಡುತ್ತಿದ್ದೇವೆ. ಹಾಗಿದ್ದರೂ ಈಗಲೂ ಸುಧಾರಿತ ತಳಿಗಳಷ್ಟೇ ಅಲ್ಲ, ಕುಲಾಂತರೀ ತಳಿಗಳ ಪ್ರಚಾರದ ಭರಾಟೆಯೇನೂ ಕಡಿಮೆಯಾಗಿಲ್ಲ.
ಮುಂದುವರೆಯುವುದು…
ವಸಂತ್ ನಡಹಳ್ಳಿ.