ಮನುಷ್ಯ ಬುದ್ಧಿಜೀವಿ ದಿನ ದಿನ ಹೊಸ ಹೊಸದನ್ನು ಕಲಿಯುತ್ತಾ ನೋಡುತ್ತಾ ಬದುಕುತ್ತಾನೆ. ಕಲಿಕೆ ಇಲ್ಲದಿದ್ದರೆ ಜೀವನ ನಿಂತನೀರಿನಂತೆ ಕೊಳೆಯುತ್ತದೆ. ಕೆಲವೊಮ್ಮೆ ನಮಗೆ ತೀರಾ ಸಣ್ಣ ಸಣ್ಣ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ಕೂಡ ಇರುವುದಿಲ್ಲ. ಮನೆಯಲ್ಲಿ ಇರುವ ಗೃಹಿಣಿಯಿಂದ ಹಿಡಿದು ಹೊರಗೆ ಹೋಗಿ ದುಡಿಯುವ ಗಂಡಸಿನವರೆಗೆ ಯಾರೂ ಹೊರತಲ್ಲ.
ನಾನು ನಮ್ಮದೇ ಆದ ಗ್ಯಾಸ್ ಏಜನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾಲವದು. ಹೊಸದಾಗಿ ಪ್ರಾರಂಭವಾಗಿದ್ದ ಕಾರಣ ಯಾವುದೇ ಗ್ರಾಹಕರಿರಲಿಲ್ಲ. ಬೇರೆ ಊರಿನಲ್ಲಿ ಕನೆಕ್ಷನ್ ಹೊಂದಿದ ಗ್ರಾಹಕರನ್ನು ಅವರದೇ ಊರಿನಲ್ಲಿ ಪ್ರಾರಂಭವಾಗಿದ್ದ ನಮ್ಮ ಏಜನ್ಸಿಗೆ ವರ್ಗಾವಣೆ ಮಾಡಿಕೊಳ್ಳಬೇಕಾಗಿತ್ತು. ಹೀಗೆ ವರ್ಗಾವಣೆ ಮಾಡಿದಾಗ ಆ ಏಜನ್ಸಿಯವರು ಠೇವಣಿ ಹಣವನ್ನು ಚೆಕ್ ಮೂಲಕ ಅಥವಾ ಹಣದ ಮುಖಾಂತರ ವಾಪಾಸು ಕೊಡುತ್ತಾರೆ, ಆ ಹಣವನ್ನು ನಮ್ಮ ಏಜನ್ಸಿಗೆ ಕೊಟ್ಟು ಸಿಲಿಂಡರ್ ಪಡೆದು ಗ್ರಾಹಕರಾಗಬೇಕು.
ಇಂಥ ಒಂದು ಪ್ರಸಂಗದಲ್ಲಿ ಒಬ್ಬ ವ್ಯಕ್ತಿ ಆತ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದವರು, ಬಂದು ಒಂದು ಚೆಕ್ ಅನ್ನು ತೋರಿಸಿ “ಇದು ಚೆಕ್ ಇದನ್ನು ಏನು ಮಾಡಬೇಕು” ಎಂದು ಕೇಳಿದರು. ನಾನು ನನ್ನ ತಮ್ಮ ಇಬ್ಬರೂ ಮುಖ ಮುಖ ನೋಡಿಕೊಳ್ಳುವಂತಾಯಿತು. ಅಂದರೆ ಆ ಚೆಕ್ ಅನ್ನು ಬ್ಯಾಂಕ್‍ಗೆ ಕೊಟ್ಟು ದುಡ್ಡು ತಂದು ನಮಗೆ ಕೊಡಬೇಕು ಎನ್ನುವುದು ತಿಳಿಯದೇ ಹಾಗೆ ಕೇಳಿದರೋ ಅಥವಾ ಒಮ್ಮೆ ಕೇಳಿ ಮುಂದುವರೆಯೋಣ ಎಂದು ಭಾವಿಸಿದರೋ ನಮಗೆ ತಿಳಿಯದು. ಇದರಲ್ಲಿ ಇನ್ನೊಂದು ವಿಪರ್ಯಾಸದ ಸಂಗತಿಯೆಂದರೆ ಯಾವುದೇ ರಾಜಕೀಯ ವ್ಯಕ್ತಿಗೆ ಯಾವುದೇ ಪದವಿಯ ಅವಶ್ಯಕತೆ ಇಲ್ಲದೆ ಅಧಿಕಾರಕ್ಕೆ ಬರುವುದು ನಮ್ಮ ದೇಶದ ದುರಂತ.
ಅದೇ ರೀತಿಯಲ್ಲಿ ತೀರ ಹತ್ತಿರದ ನನ್ನ ಸಂಬಂಧಿಯೊಬ್ಬರು ದೂರವಾಣಿ (ಲ್ಯಾಂಡ್ ಲೈನ್) ಕರೆಯ ಬಗ್ಗೆಯೂ ಇದೇ ರೀತಿಯ ಅಜ್ಞಾನವನ್ನು ತೋರ್ಪಡಿಸಿದರು. ನಮಗೆ ಯಾರದ್ದಾದರೂ ದೂರವಾಣಿ ಕರೆ ಬಂದಾಗ (ಇನ್ ಕಮಿಂಗ್ ಕಾಲ್) ಆ ಕರೆ ಕಡಿದು ಹೋದರೆ, ಪುನ: ಕರೆ (ರೀ ಡಯಲ್) ಮಾಡಿದರೆ ಯಾರಿಂದ ಕರೆ ಬಂದಿತ್ತೋ ಅವರಿಗೆ ವಾಪಾಸು ಹೋಗುತ್ತದೆ ಎನ್ನುವುದು. ಆದರೆ ಆದು ಹಾಗೆ ಅಲ್ಲ, ಒಳಕರೆ (ಇನ್ ಕಮಿಂಗ್ ಕಾಲ್) ಬಂದಾಗ ನಾವು ಪುನ: ಕರೆ ಮಾಡಿದರೆ ಅದು ಒಳಕರೆ ಮಾಡಿದವರಿಗೆ ಹೋಗುವುದಿಲ್ಲ, ಬದಲಾಗಿ ನಾವು ಮೊದಲೆ ಯಾರಿಗೆ ಫೋನ್ ಮಾಡಿ ಮಾತನಾಡಿ ಇಟ್ಟಿರುತ್ತೆವೆಯೋ ಅವರಿಗೆ ಹೋಗುತ್ತದೆ.
ಹೀಗೆ ಇಂಥ ಸಣ್ಣ ಪುಟ್ಟ ವಿಷಯಗಳ ಬಗ್ಗೆ, ತೀರಾ ದಿನಚರಿಗೆ ಬೇಕಾದ್ದನ್ನು ನಾವು ಕೇಳಿಯಾದರೂ ತಿಳಿದುಕೊಳ್ಳಬೇಕಾದ್ದು ಅತೀ ಅವಶ್ಯ. ಇಲ್ಲದಿದ್ದರೆ ಕೆಲವೊಮ್ಮೆ ಹಾಸ್ಯಕ್ಕೆ ಈಡಾಗುವ ಪರಿಸ್ಥಿತಿ ಒದಗಿಬರುತ್ತದೆ.
– ರಚನ
- Advertisement -
- Advertisement -
- Advertisement -
- Advertisement -