ಪ್ರೀತಿಯನ್ನು ನವೀಕರಿಸುತ್ತಾ ಇರಬೇಕು ಎಂದರೆ ಹೊಸ ಹೊಸ ಪ್ರೀತಿಗಳನ್ನು, ಪ್ರೀತಿಸುವವರನ್ನು ಹುಡುಕಿಕೊಂಡು ಹೋಗಬೇಕು ಅಂತ ಅಲ್ಲ! ಹಾಗೆ ಮಾಡುವುದು ಕುಟುಂಬ ಜೀವನವನ್ನು ಮೂರಾಬಟ್ಟೆಯನ್ನಾಗಿ ಮಾಡಿಕೊಳ್ಳುವುದಕ್ಕೆ ಖಾತ್ರಿಯಾದ ಮಾರ್ಗ.
“ಇತ್ತೀಚೆಗೆ ನಾನು ಅಂದ್ರೆ ನಿನಗೆ ಸ್ವಲ್ಪ ಅಸಡ್ಡೆ ಕಣೆ, ನಾನು ಕರೆದಾಗ ನೀನು ಬರೋದಿಲ್ಲ, ನನ್ನ ಕೆಲಸ ಮಾಡೋದಿಲ್ಲ”.
“ನೀವೂ ಅಷ್ಟೇ ಅಲ್ವೇನ್ರಿ, ಬರೀ ನಿಮ್ಮ ಕೆಲಸ ಇದ್ದಾಗ ಕರೀತೀರಾ. ಬೇರೆ ಸಮಯದಲ್ಲಿ ನಾನು ಇದ್ದೀನೋ ಸತ್ತಿದೀನೋ ಅಂತ ವಿಚಾರಿಸುವುದೂ ಇಲ್ಲ”.
ಮಧ್ಯವಯಸ್ಕ ದಂಪತಿಗಳ ಮಧ್ಯೆ ಸಾಮಾನ್ಯವಾಗಿ ನಡೆಯಬಹುದಾದ ಸಂಭಾಷಣೆ ಇದು. ದಾಂಪತ್ಯ ಸಲಹೆಗೆ ಬಂದವರ ಮಧ್ಯೆ ಇಂತಹ ತಕರಾರುಗಳು ಕೇಳಿ ಬರುತ್ತದೆ. ಹಾಗಿದ್ದರೆ ಅಂತಹ ದಂಪತಿಗಳ ಮಧ್ಯೆ ಪ್ರೀತಿ ನಿಧಾನವಾಗಿ ಕಡಿಮೆಯಾಗುತ್ತಾ ಬಂದಿದೆಯೇ? ಅಷ್ಟೆಲ್ಲಾ ವರ್ಷ ಒಟ್ಟಾಗಿ ಬದುಕಿದ ಮೇಲೆಯೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿರುವುದಿಲ್ಲವೇ? ಅಥವಾ ಇದಕ್ಕೆ ಬೇರೆ ಕಾರಣಗಳಿರಬಹುದೇ? ಪತಿ ದೈಹಿಕ ಅಗತ್ಯಗಳಿಗೆ ಮಾತ್ರ ತನ್ನ ಹತ್ತಿರ ಬರುತ್ತಾರೆ, ಉಳಿದಂತೆ ತನ್ನನ್ನು ಕಡೆಗಣಿಸುತ್ತಾರೆ, ಅಂತ ಸಾಕಷ್ಟು ಪತ್ನಿಯರಿಗೆ ಏಕೆ ಅನ್ನಿಸುತ್ತದೆ?
ಒಮ್ಮೆ ಸರಾಗವಾಗಿ ಮಾತುಕತೆಗಳು ನಡೆಯದಿರುವಾಗ ಯಾವಾಗಲೋ ಮೂಡಿರುವ ಅನುಮಾನಗಳು ಪರಿಹಾರವಾಗದೆ ಬೆಳೆಯುತ್ತಾ ಹೋಗಿ ದಂಪತಿಗಳ ಮಧ್ಯೆ ದೊಡ್ಡ ಕಂದಕವುಂಟಾಗಬಹುದು. ಪತಿಪತ್ನಿಯರು ಜಗಳವಾದಾಗಲೆಲ್ಲಾ ಠೂ ಬಿಡುವುದು ಸಹಜವಲ್ಲವೇ? ನಾವೆಲ್ಲಾ ನೆನಪಿಡಬೇಕಾಗಿರುವುದು ಇಂತಹ ಮೌನದಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಪರಿಹಾರವಾಗುವುದಿಲ್ಲ. ಹಾಗಾಗಿ ಇಬ್ಬರೂ ಒಣ ಬಿಗುಮಾನ ಬಿಟ್ಟು ಮಾತನಾಡಲು ಶುರು ಮಾಡಿದರೆ ತಾವು ಎಂತಹ ಸಾಮಾನ್ಯ ವಿಷಯಕ್ಕೆ ದೂರವಾಗಿದ್ದೆವು ಎನ್ನುವುದು ತಿಳಿಯುತ್ತದೆ.
ಅಂದರೆ ದಾಂಪತ್ಯದಲ್ಲಿ ಪ್ರೀತಿಯನ್ನು ಸದಾ ಉಳಿಸಿಕೊಳ್ಳಲು ಒಟ್ಟಾಗಿ ಸಮಯ ಕಳೆಯುವುದು ಅಗತ್ಯ ಎಂದಾಯಿತು. ದೈಹಿಕ ಸಂಪರ್ಕಕ್ಕೆ ಹೊರತಾಗಿಯೂ ಪತಿಪತ್ನಿಯರು ವಾರಕ್ಕೆ ಒಂದೆರೆಡುಗಂಟೆಯಾದರೂ ಇಬ್ಬರೇ ಕಳೆಯಬೇಕು. ಮಾತನಾಡಲು ಏನು ವಿಷಯವಿಲ್ಲದಿದ್ದರೂ ಪ್ರೇಮಿಗಳಂತೆ ಕಣ್ಣಲ್ಲಿ ಕಣ್ಣಿಟ್ಟು, ಸುಮ್ಮನೆ ಕೈಹಿಡಿದು ಕುಳಿತುಕೊಂಡರೂ ಸಾಕು! ಮೌನ ಒಡೆದು ಮಾತಿನ ಮುತ್ತುಗಳು ಮೂಡಿ ಆತ್ಮೀಯತೆ ಹಿಂದಿನಂತೆಯೇ ಮುಂದುವರೆಯುತ್ತದೆ.
“ಸಾರ್ ನಾನು ಆಫೀಸಿನಿಂದ ನೇರವಾಗಿ ಮನೆಗೆ ಬರ್ತೀನಿ, ಆಮೇಲೆ ಹೊರಗೆಲ್ಲೂ ಹೋಗದೆ ಹೆಂಡತಿ ಮಕ್ಕಳ ಜೊತೆಗೇ ಇರ್ತೀನಿ. ಆದರೂ ನನ್ನ ಹೆಂಡತಿದು ಕಿರಿಕಿರಿ ಇರುತ್ತೆ ಏನ್ಮಾಡೋದು?” ಅಂತ ಆಪ್ತಸಲಹೆಗೆ ಬಂದಿದ್ದ ಮದುವೆಯಾಗಿ ಹದಿನೈದು ವರ್ಷವಾಗಿದ್ದ ಪತಿ ಕೇಳಿದರು.
“ಮನೆಗೆ ಬಂದ ಮೇಲೆ ಏನ್ಮಾಡ್ತೀರಿ?” ನಾನು ಕೇಳಿದೆ.
“ಹೆಂಡತಿ ಟೀವಿ ಧಾರಾವಾಹಿಗಳಲ್ಲಿ ಮುಳುಗಿರುತ್ತಾಳೆ, ನಾನು ಕಂಪ್ಯೂಟರ್‍ನಲ್ಲಿ ಏನಾದರೂ ಮಾಡ್ತಾ ಇರ್ತೀನಿ”.
ಈ ರೀತಿ ಜೊತೆಗೇ ಇದ್ದರೂ ಅಪರಿಚಿತರಂತೆ ಬದುಕುತ್ತಿರುವಾಗ ಆತ್ಮೀಯತೆ ಮೂಡುವುದು ಹೇಗೆ ಸಾಧ್ಯ? ಅಂದರೆ ದಂಪತಿಗಳು ತಾವಿಬ್ಬರೂ ಒಟ್ಟಾಗಿ ಕಳೆಯುವ ಸಮಯ ಇಬ್ಬರಿಗೂ “ಕ್ವಾಲಿಟಿಟೈಮ್” ಎನ್ನಿಸುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇದಕ್ಕಾಗಿ ಕುಟುಂಬದ, ಮಕ್ಕಳ ಭವಿಷ್ಯದಂತಹ ವಿಷಯಗಳ ಜೊತೆಗೆ ಇಬ್ಬರಿಗೂ ಖುಷಿಯಾಗುವಂತಹ ಇತರ ಆಸಕ್ತಿಗಳನ್ನು ಗುರುತಿಸಿಕೊಳ್ಳಬೇಕು. ಆಗ ಒಟ್ಟಾಗಿ ಬದುಕುವುದಕ್ಕೆ ಒಂದು ಉದ್ದೇಶ, ಗುರಿ, ಅರ್ಥ ಎಲ್ಲವೂ ಮೂಡುತ್ತದೆ. ಇದರಿಂದ ಪರಸ್ಪರ ಆಕರ್ಷಣೆ, ಪ್ರೀತಿಗಳೆಲ್ಲವೂ ಜೀವನ ಪರ್ಯಂತ ಉಳಿಯುವುದು ಸಾಧ್ಯವಾಗುತ್ತದೆ.
ಪ್ರೀತಿಯ ಇನ್ನೊಂದು ಪ್ರಮುಖ ಅಭಿವ್ಯಕ್ತಿ ಸ್ಪರ್ಷ. ಭಾರತೀಯ ಕುಟುಂಬಗಳಲ್ಲಿ ಪತಿಪತ್ನಿಯರು ಸಾರ್ವಜನಿಕವಾಗಿ ಸ್ಪರ್ಷಿಸುವುದನ್ನು ಕೀಳಾಗಿ ನೋಡಲಾಗುತ್ತದೆ. ಇದಕ್ಕೆ ಕಾರಣಗಳೇನೇ ಇದ್ದರೂ ದಂಪತಿಗಳು ಎಲ್ಲರೆದುರು ದೂರ ದೂರ ಇರುವುದು ಸೌಜನ್ಯ ಅಥವಾ ಸಂಸ್ಕøತಿ ಎಂದುಕೊಳ್ಳಬೇಕಿಲ್ಲ. ಪಾಶ್ಚಿಮಾತ್ಯರಂತೆ ಸಾರ್ವಜನಿಕವಾಗಿ ಚುಂಬಿಸುವುದು ಮುಜುಗರದ ವಿಚಾರವಾದರೆ ಹಾಗೆ ಮಾಡಬೇಕೆಂದಿಲ್ಲ. ಆದರೆ ಪರಸ್ಪರ ಹಸ್ತಲಾಘವ, ಹೆಗಲ ಮೇಲೆ ಕೈಹಾಕುವುದು, ತಲೆ ನೇವರಿಸುವುದು, ಮುಂತಾದ ಪ್ರೀತಿಯ ಅಭಿವ್ಯಕ್ತಿಗಳನ್ನು ತೋರಿಸಲು ಹಿಂಜರಿಯಬೇಕಿಲ್ಲ. ಎಲ್ಲರೆದುರು ಹೀಗೆ ಮಾಡುವವರು ಹೆಚ್ಚು ಪ್ರೀತಿಸುತ್ತಾರೆ ಅಂತೇನೂ ಅಲ್ಲ. ಕೆಲವರಿಗೆ ಇದು ಬೂಟಾಟಿಕೆಯಾಗಿರಬಹುದು. ಆದರೆ ಇದನ್ನು ನೈಜವಾಗಿ ಖುಷಿಯನ್ನು ಹಂಚಿಕೊಳ್ಳುವ ಅಭಿವ್ಯಕ್ತಿಯನ್ನಾಗಿಯೂ ಉಪಯೋಗಿಸಬಹುದು. ಇಂತಹ ಸ್ಪರ್ಷಕ್ರಿಯೆಯಲ್ಲಿ ಮಕ್ಕಳನ್ನೂ ಸೇರಿಸಿಕೊಂಡರೆ ಇಡೀ ಕುಟುಂಬ ಒಂದೇ ಘಟಕವಾಗಿ ಬದುಕಲು ಸಹಾಯವಾಗುತ್ತದೆ.
ನೀವು ಅಪ್ಪ ಅಮ್ಮಂದಿರಿಗೆ ಹೆದರದೆ ಈಗ ಯಾರನ್ನಾದರೂ ಪ್ರೀತಿಸುತ್ತಾ ಇದ್ದು, ಮುಂದೆ ಮದುವೆಯಾಗಬೇಕೆಂದಿದ್ದರೆ ಒಂದು ಉಪಾಯವನ್ನು ಹೇಳುತ್ತೇನೆ. ಮೆಲು, ಮೆಸೇಜುಗಳ ಈ ಯುಗದಲ್ಲೂ ಓಬೀರಾಯನ ಕಾಲದವರಂತೆ ಕೈಬರಹದ ಪ್ರೇಮ ಪತ್ರಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ತುಸು ಶ್ರಮದಾಯಕ ನಿಜ, ಆದರೂ ಇಂತಹ ಪತ್ರಗಳು ಕೊಡುವ ಆತ್ಮೀಯತೆಯ ಆನಂದ ಬೇರಾವ ಮಾಧ್ಯಮದಲ್ಲೂ ಸಿಗುವುದಿಲ್ಲ. ತಾತ್ಕಾಲಿಕವಾಗಿ ದೂರವಿರುವ ಪತಿಪತ್ನಿಯರೂ ಪ್ರೇಮಪತ್ರಗಳ ಮೂಲಕ ನಿರಂತರ ಪ್ರೀತಿ ಹಂಚಿಕೊಳ್ಳಬಹುದು. ಮುಂದೆ ಜಗಳವಾದಾಗಲೆಲ್ಲಾ ಮತ್ತೆ ಮತ್ತೆ ಇದರ ಮೇಲೆ ಕಣ್ಣೋಡಿಸಿದರೆ ಪ್ರೇಮ ಹಿಂದಿನಂತೆಯೇ ಉಕ್ಕಿ ಹರಿಯುತ್ತದೆ! ವೃದ್ಧಾಪ್ಯದ ನೀರಸ ದಿನಗಳನ್ನೂ ರಸಭರಿತಗೊಳಿಸಬಲ್ಲದು ಈ ಪ್ರೇಮ ಪತ್ರಗಳು! ಡಿಲೀಟ್ ಮಾಡಿಬಿಡುವ ಮೈಲ್, ಮೆಸೇಜುಗಳಿಗೆ ಕೈಬರಹದ ಪ್ರೇಮ ಪತ್ರಗಳ ನವಿರು, ಸೊಬಗು ಇರುವುದು ಸಾಧ್ಯವೇ ಇಲ್ಲ. ನಿಮ್ಮ ಉದ್ದೇಶವೇ ‘ಕ್ಯಾಶುಯಲ್ ಅಫೈರ್’ ಆಗಿದ್ದರೆ ಅದಕ್ಕೆ ಮೈಲು, ಮೆಸೇಜುಗಳೇ ಸರಿ ಬಿಡಿ; ಆದರೆ ನನ್ನ ಬರಹ ಅಂತವರಿಗಾಗಿ ಅಲ್ಲ!
ವಸಂತ್ ನಡಹಳ್ಳಿ