23.1 C
Sidlaghatta
Monday, February 3, 2025

ದಾಂಪತ್ಯದಲ್ಲಿ ಪ್ರೇಮ ಮತ್ತು ಕಾಮ – ಭಾಗ 3

- Advertisement -
- Advertisement -

ಭಾವನಾತ್ಮಕ ಬಂಧ ಅಥವಾ ಬಂಧನ?
ನಾವೆಲ್ಲಾ ಪ್ರಬುದ್ಧ ವ್ಯಕ್ತಿತ್ವದವರೇನಲ್ಲ. * ಇದರಲ್ಲಿ ನಾಚಿಕೆ ಅಥವಾ ಬೇಸರಪಟ್ಟುಕೊಳ್ಳಬೇಕಾದುದು ಏನೂ ಇಲ್ಲ. ನಿಜವಾಗಿ ನಾಚಿಕೆಪಟ್ಟುಕೊಳ್ಳಬೇಕಾದುದು ನಾವು ಪ್ರಬುದ್ಧತೆಯೆಡೆಗೆ ಹೋಗಲು ಪ್ರಯತ್ನವನ್ನೇ ಮಾಡದಿರುವುದಕ್ಕಾಗಿ. ಇದರ ಪರಿಣಾಮ ದಾಂಪತ್ಯ ಮತ್ತು ಲೈಂಗಿಕ ಜೀವನದಲ್ಲಿ ಹೇಗಾಗಬಹುದು?
ಪತಿಪತ್ನಿಯರು ಎರಡು ದೇಹ ಒಂದು ಜೀವದಂತೆ ಬಾಳಬೇಕು ಎನ್ನುವ ಆದರ್ಶವನ್ನು ಧರ್ಮ, ಸಾಹಿತ್ಯಗಳೆಲ್ಲಾ ಹೇಳುತ್ತವೆ. ಆದರೆ ಇದು ಎಷ್ಟು ವಾಸ್ತವ?
ದಾಂಪತ್ಯ ಎಷ್ಟೇ ಆತ್ಮೀಯ ಸಂಬಂಧವಾದರೂ ಅದು ಇಬ್ಬರು ಬೇರೆಬೇರೆ ವ್ಯಕ್ತಿಗಳ ನಡುವೆ ಇರುವಂತಹದು. ಹಾಗಾಗಿ ಆತ್ಮೀಯತೆಯ ಮುಖವಾಡದ ಒಳಗೆ ಇಬ್ಬರ ಮನಸ್ಸುಗಳಲ್ಲಿಯೂ ತಾವು ಬಾಲ್ಯದಿಂದ ರೂಪಿಸಿಕೊಂಡ ವ್ಯಕ್ತಿತ್ವದ ಅಂಶಗಳ ಮೇಲಾಟ ನಡೆದಿರುತ್ತದೆ. ಆದರೆ ಅದನ್ನು ಸಹಜವಾಗಿ ಇನ್ನೊಬ್ಬರೆದುರು ಹೇಳಲು ಸಾಧ್ಯವಾಗುವಂತಹ ಮಾನಸಿಕ ಧೃಡತೆ ಇಬ್ಬರಲ್ಲಿಯೂ ಇರುವುದಿಲ್ಲ. ನನ್ನ ಹತ್ತಿರ ಆಪ್ತಲಹೆಗೆ ಬರುವ ಎಲ್ಲಾ ದಂಪತಿಗೂ ಗುಪ್ತವಾಗಿ ಒಪ್ಪಿಕೊಳ್ಳುವ ಸತ್ಯವಿದು. ಹೆಂಡತಿ ತೌರಿಗೆ ಹೋದಾಗ, “ನನಗೆ ನಿನ್ನ ಅಗತ್ಯವಿದೆ, ಆದ್ದರಿಂದ ಬೇಗ ಬಾ” ಎಂದು ನೇರವಾಗಿ ಸರಳವಾಗಿ ಪ್ರೀತಿಯಿಂದ ಹೇಳುವ ಅಭ್ಯಾಸವನ್ನೇ ಮಾಡಿಕೊಂಡಿರದ ಗಂಡ ಚುಚ್ಚು ಮಾತು, ಮಧ್ಯಪಾನದ ಬೆದರಿಕೆ, ಮೂರನೆಯವರ ಕರೆ ಮುಂತಾದ ಅಡ್ಡದಾರಿಗಳನ್ನು ಬಳಸುತ್ತಾನೆ. ತನಗೆ ಅಪ್ಪಅಮ್ಮಂದಿರ ಜೊತೆ ಸ್ವಲ್ಪದಿನ ಇರುವ ಮಾನಸಿಕ ಅಗತ್ಯವನ್ನು ನೇರವಾಗಿ ಹೇಳಲಾರದ ಹೆಂಡತಿ, ಬೇರೆ ರೀತಿ ಗಂಡನನ್ನು ಖುಷಿಪಡಿಸಿ ಒಪ್ಪಿಗೆ ಪಡೆಯಲು ನೋಡುತ್ತಾಳೆ.
ಗಂಡಹೆಂಡಿರಿಬ್ಬರೂ ಪರಸ್ಪರರ ಹೊಗಳಿಕೆ, ಮೆಚ್ಚುಗೆಯ ಮೇಲೆ ಮಾತ್ರ ತಮ್ಮ ಸಂತೋಷವನ್ನು ಕಂಡುಕೊಳ್ಳತೊಡಗಿದರೆ ಅದು ಭಾವನಾತ್ಮಕ ಬಂಧನವಾಗುತ್ತದೆ. (ಎಮೋಷನಲ್ ಫ್ಯೂಶನ್) ಒಬ್ಬರಿಗೆ ಇನ್ನೊಬ್ಬರ ಮೇಲೆ ಅಸಮಧಾನವಾದಾಗ ಅವರು ತಮ್ಮ ಮೆಚ್ಚುಗೆಯನ್ನು ತಡೆ ಹಿಡಿಯುತ್ತಾರೆ. ಆಗ ಮೆಚ್ಚುಗೆಯನ್ನು ನಿರೀಕ್ಷಿಸಿದವರಿಗೆ ತಮ್ಮನ್ನು ಸಂಗಾತಿ ಹಿಡಿತದಲ್ಲಿಡಲು ಯತ್ನಿಸುತ್ತಿದ್ದಾರೆ ಎನ್ನುವ ಮನೋಭಾವ ಬರುತ್ತದೆ. ಇಲ್ಲಿಂದ ಮೌನಯುದ್ಧದ ಸರಪಳಿ ಪ್ರಾರಂಭವಾಗುತ್ತದೆ.
ಉದಾಹರಣೆಗೆ ಹಿಂದಿನ ರಾತ್ರಿ ಹಾಸಿಗೆಯಲ್ಲಿ ಹೆಂಡತಿ ಸಹಕರಿಸಿರುವುದಿಲ್ಲ. ಗಂಡನಿಗೆ ಬೇಸರ ಮಾಡಿದ್ದರ ಅರಿವಿರುವ ಹೆಂಡತಿ ಅವನನ್ನು ಖುಷಿಪಡಿಸಲು ಮರುದಿನ ಬೆಳಿಗ್ಗೆ ತಿಂಡಿಗೆ ರುಚಿಯಾದ ಅವರೆಕಾಳು ಉಪ್ಪಿಟ್ಟು ಮಾಡುತ್ತಾಳೆ. ಸಾಮಾನ್ಯ ಸಮಯದಲ್ಲಿ ಇದನ್ನು ಬಾಯಿ ತುಂಬಾ ಹೊಗಳುತ್ತಿದ್ದ ಗಂಡ ಅವತ್ತು ಬೇಕಂತಲೇ ಮೌನವಾಗಿ ತಿಂದು ಎದ್ದು ಹೋಗುತ್ತಾನೆ. ಹೆಂಡತಿಗೆ, ತಾನು ಗಂಡನ ದೃಷ್ಟಿಯಲ್ಲಿ ಲೈಂಗಿಕ ಸುಖಕ್ಕಾಗಿ ಮಾತ್ರ ಬೇಕಾದ ವಸ್ತು ಎನ್ನಿಸುತ್ತದೆ. ಪತಿರಾಯನಿಗೆ ಇವಳು ಲೈಂಗಿಕ ಸುಖವನ್ನು ನೀಡದೆ ತನ್ನನ್ನು ಹಿಡಿತದಲ್ಲಿಡಲು ಯತ್ನಿಸುತ್ತಾಳೆ ಎನ್ನಿಸುತ್ತದೆ.
ಮೇಲಿನದು ಸರಳ ಉದಾಹರಣೆ. ಇಂತಹ ಬೇರೆಬೇರೆ ರೀತಿಯ ಘಟನೆಗಳು ವರ್ಷಾನುಗಟ್ಟಲೇ ನಡೆಯುತ್ತಾ ಬಂದು ಇಬ್ಬರೂ ತಂತ್ರ, ಪ್ರತಿತಂತ್ರ, ಕುತಂತ್ರಗಳ ಬಲೆಯೊಳಗೆ ತಮಗರಿವಿಲ್ಲದಂತೆ ತಮ್ಮನ್ನೇ ಸಿಲುಕಿಸಿಕೊಂಡಿರುತ್ತಾರೆ. ಆಗ ದಂಪತಿಗಳ ಸಂಬಂಧ ಭಾವನಾತ್ಮಕ ಗೋಜಲು ಆಗಿಬಿಡುತ್ತದೆ. ಡೇವಿಡ್ ಶ್ನಾರ್ಕ್ ಇದನ್ನು ಎಮೋಷನಲ್ ಗ್ರಿಡ್‍ಲಾಕ್ ಎಂದು ಕರೆದಿದ್ದಾನೆ. ಈ ಗೋಜಲಿನಲ್ಲಿ ಯಾವಕಡೆ ಮುಟ್ಟಿದರೆ ಇನ್ನಾವ ಕಡೆ ಶಾಕ್ ಹೊಡೆಯಬಹುದು ಎನ್ನುವುದು ದಂಪತಿಗಳಿಗೇ ತಿಳಿಯುವುದಿಲ್ಲ! ಹಾಗಾಗಿಯೇ ಎಷ್ಟೋ ಸಾರಿ ಗಂಡಹೆಂಡಿರು ಕ್ಷುಲ್ಲಕ ವಿಚಾರಕ್ಕೆ ಜಗಳವಾಡುತ್ತಿದ್ದಾರೆ ಎಂದು ಹೊರಗಿನವರಿಗೆ ಅನ್ನಿಸುತ್ತದೆ. ಕೆಲವೊಮ್ಮೆ ವರ್ಷಾನುಗಟ್ಟಲೆ ಹಿಂದಿನ ಯಾವುದೋ ಸಣ್ಣ ಘಟನೆಯನ್ನು ಇಟ್ಟುಕೊಂಡು ಮಹಾಯುದ್ಧವನ್ನೇ ಸಾರಿಬಿಡುತ್ತಾರೆ.
ಈ ಗೋಜಲಿಗೆ ಕಾರಣವಾಗಿರುವ ಒಂದೊಂದೇ ಸಮಸೈಗಳನ್ನು ಬಗೆಹರಿಸಿ ಸಂಬಂಧವನ್ನು ಸುಧಾರಿಸಲು ಸಾಧ್ಯವಿಲ್ಲ. ಏಕೆಂದರೆ ಇದೊಂದು ಸಮಸ್ಯೆಗಳ ಅಕ್ಷಯಪಾತ್ರೆ! ಜೊತೆಗೆ ಈ ಸರಪಳಿ ಹೇಗಿರುತ್ತದೆ ಎಂದರೆ “ನೀನು ಹೀಗೆ ಮಾಡಿದ್ದಕ್ಕೆ ನಾನು ಹಾಗೆ ಮಾಡಲೇ ಬೇಕಾಯಿತು” ಎನ್ನವು ಸಮಜಾಯಿಸಿಯನ್ನು ಇಬ್ಬರೂ ನೀಡುತ್ತಾರೆ. ಅಂದರೆ ಇಬ್ಬರೂ ತಮ್ಮ ನಡತೆಗೆ ಜವಾಬ್ದಾರಿಯನ್ನು ಹೊರಲು ಸಿದ್ಧರಿರುವುದಿಲ್ಲ.
ಹಾಗಾಗಿ ದಂಪತಿಗಳನ್ನು ಭಾವನಾತ್ಮವಾದ ಅವಲಂಬನೆಯಿಂದ ಬೇರೆಮಾಡಿ ಅವರ ವ್ಯಕ್ತಿತ್ವಕ್ಕೆ ಪ್ರಬುದ್ಧತೆಯನ್ನು ಪಡೆದುಕೊಳ್ಳುವ ತರಬೇತಿ ನೀಡಬೇಕಾಗುತ್ತದೆ. ಹೀಗೆ ಭಾವನಾತ್ಮಕವಾಗಿ ಬೇರೆಯಾಗುವುದು ಎಂದರೆ ಪ್ರೀತಿ ಆತ್ಮೀಯತೆಯನ್ನು ಬಿಟ್ಟುಕೊಡುವುದು ಎಂದೇನಲ್ಲ. ಎರಡು ಸ್ವಂತಂತ್ರ ವ್ಯಕ್ತಿತ್ವಗಳಾದ ಪತಿಪತ್ನಿಯರು ಪರಸ್ಪರ ಅವಲಂಬನೆಯ ಆಧಾರದ ಮೇಲೆ ಪ್ರೀತಿ, ಗೌರವಗಳನ್ನು ಉಳಿಸಿಕೊಂಡು ಬಹಳ ಕಾಲ ಬದುಕಬಹುದು.
ಪ್ರೀತಿಸುವುದಕ್ಕೆ ಬೇಕಾಗಿರುವುದು ಪರಸ್ಪರರ ಬಗೆಗಿನ ತಿಳುವಳಿಕೆ ಮತ್ತು ಗೌರವ ಮಾತ್ರ. ಎರಡು ಸಮಾನ ಮತ್ತು ಸ್ವತಂತ್ರ ವ್ಯಕ್ತಿಗಳ ಮಧ್ಯೆ ಇರುವ ಪ್ರೀತಿ ಮತ್ತು ಆತ್ಮೀಯತೆ ನೈಜವಾದದ್ದು, ಮುಖವಾಡಗಳಿಲ್ಲದೆ ಇರುವುದು ಮತ್ತು ಕಾಲದ ಪರೀಕ್ಷೆಯನ್ನು ಗೆಲ್ಲುವಂತಹದು. ಅವಲಂಬಿತ ವ್ಯಕ್ತಿಗಳ ನಡುವೆ ಇರುವುದು ಪ್ರೀತಿಯ ಭ್ರಮೆ ಹುಟ್ಟಿಸುವ ಭಾವನಾತ್ಮಕ ಗೋಜಲು ಅಥವಾ ಬಂಧನ. ವಿವಾಹ “ಬಂಧನ” ವಾಗಬಾರದು. ವಿವಾಹದೊಳಗಿನ ಬಂಧ ಬಿಡಿಸಿಕೊಳ್ಳಲು ಸಾಧ್ಯವಿರುವ, ಆದರೆ ಬಿಡಿಸಿಕೊಳ್ಳುವ ಅಗತ್ಯವೇ ಇರದ ಸಂಬಂಧವಾಗಬೇಕು.
* ಪ್ರಬುದ್ಧ ವ್ಯಕ್ತಿತ್ವವೆಂದರೇನು?
ನಮ್ಮೆಲ್ಲರ ಖುಷಿಗೆ ನಾವು ಇನ್ನೊಬ್ಬರ ಹೊಗಳಿಕೆ ಅಪೇಕ್ಷಿಸುವುದು ಸಹಜ. ಆದರೆ ನಮ್ಮ ಸಂತೋಷ ಅವರ ಹೊಗಳಿಕೆಯನ್ನು ಮಾತ್ರ ಆಧರಿಸಿದರೆ ನಮ್ಮ ಜುಟ್ಟನ್ನು ಅವರ ಕೈಗೆ ಕೊಟ್ಟಂತೆ. ಹಾಗಯೇ ನಮ್ಮ ದೌರ್ಬಲ್ಯ, ಆತಂಕಗಳಿಗೆ ಇನ್ನೊಬ್ಬರಿಂದ ಒಪ್ಪಿಗೆ, ಬೆಂಬಲ ನಿರೀಕ್ಷಿಸುತ್ತೇವೆ. ಅವರ ಬೆಂಬಲವಿಲ್ಲದೆ ನಮ್ಮ ಆತಂಕಗಳನ್ನು ನಾವು ಕಡಿಮೆ ಮಾಡಿಕೊಳ್ಳಲಾಗದ ಸ್ಥಿತಿ ತಲುಪಿದರೆ ಮತ್ತೆ ಜುಟ್ಟು ಅವರ ಕೈಯಲ್ಲಿ!
ಮಗುವಾಗಿದ್ದಾಗ ನಮ್ಮ ಮನಸ್ಸು ದೇಹಗಳು ದುರ್ಬಲವಾಗಿರುತ್ತವೆ, ಬುದ್ಧಿ ಬೆಳೆದಿರುವುದಿಲ್ಲ. ಹಾಗಾಗಿ ಹೊರಗಿನಿಂದ ಬೆಂಬಲವನ್ನು ನಿರೀಕ್ಷಿಸುವುದು ಸಹಜ. ಆದರೆ ವಯಸ್ಕರರಾದ ಮೇಲೆ ನಮ್ಮ ಒಳಗಡೆ ಎಲ್ಲವನ್ನೂ ನಿಭಾಯಿಸುವ ಅಂತ:ಶಕ್ತಿ ಇರುತ್ತದೆ. ಬಾಲ್ಯದಲ್ಲಿ ಅತ್ಯಂತ ಕಹಿ ಅನುಭವ ಪಡೆದವರಲ್ಲೂ ಈ ಶಕ್ತಿ ಇರುತ್ತದೆ. ಆದರೆ ಇದನ್ನು ಗುರುತಿಸಿ ಬಳಸಿಕೊಳ್ಳಲಾಗದ ನಾವು ಸುಮ್ಮನೆ ಕುರುಡರಂತೆ ಯಾರದೋ ಬೆಂಬಲ, ಮೆಚ್ಚುಗೆ, ಹೊಗಳಿಕೆಯ ನಿರೀಕ್ಷೆಯಲ್ಲಿರುತ್ತೇವೆ. ಅವು ಸಿಗದಿದ್ದಾಗ ಕೋಪಗೊಳ್ಳುತ್ತೇವೆ, ಬೇಸರಪಡುತ್ತೇವೆ ಅಥವಾ ಹತಾಶರಾಗುತ್ತವೆ. ನಮ್ಮ ಪರಿಸ್ಥಿತಿಗಳಿಗೆ ನಮ್ಮನ್ನೊಬ್ಬರನ್ನು ಹೊರತುಪಡಿಸಿ ಪ್ರಪಂಚದ ಎಲ್ಲರನ್ನೂ ದೂಷಿಸುತ್ತೇವೆ. ಅಂದರೆ ದೇಹ, ಮನಸ್ಸು ಬುದ್ಧಿಗಳೆಲ್ಲವೂ ಬೆಳೆದಿದ್ದರೂ ಅವುಗಳನ್ನು ಉಪಯೋಗಿಸದೆ ನಾವು ಮಕ್ಕಳಂತೆಯೇ ವರ್ತಿಸುತ್ತಿರುವುದಿಲ್ಲವೇ?
ತಮ್ಮ ಸಂತೋಷ, ಉತ್ಸಾಹ ಎಲ್ಲವನ್ನೂ ತನ್ನೊಳಗೆ ಕಂಡುಕೊಳ್ಳುವವರು ಪ್ರಬುದ್ಧ ವ್ಯಕ್ತಿತ್ವ (ಸಾಲಿಡ್ ಸೆನ್ಸ್ ಆಫ್ ಸೆಲ್ಫ್) ಹೊಂದಿರುತ್ತಾರೆ. ಇಂತವರು ತಮ್ಮನ್ನು ತಾವು ಪೂರ್ಣ ಅರಿತಿರುತ್ತಾರೆ. ಇತರರ ಟೀಕೆ ಚುಚ್ಚುಮಾತುಗಳಿಗೆ ಇವರು ಹೆಚ್ಚಿನ ಮಹತ್ವ ನೀಡುವುದಿಲ್ಲ. ಇದರಿಂದ ಮನಸ್ಸು ಅನಗತ್ಯ ಆತಂಕ, ಕಿರಿಕಿರಿಗಳಿಂದ ತುಂಬಿಕೊಂಡಿರುವುದಿಲ್ಲ.
ಆದರೆ ತಮ್ಮ ಸಂತೋಷ, ಸಮಾಧಾನಗಳನ್ನು ಕಂಡುಕೊಳ್ಳಲು ಇತರರ ಮೆಚ್ಚುಗೆ, ಹೊಗಳಿಕೆಗಳನ್ನೇ ಹುಡುಕುತ್ತಿರುವವರು ಪ್ರತಿಫಲಿತ ವ್ಯಕ್ತಿತ್ವ (ರಿಫ್ಲೆಕ್ಟೆಡ್ ಸೆನ್ಸ್ ಆಫ್ ಸೆಲ್ಪ್) ಹೊಂದಿರುತ್ತಾರೆ. ಬೇರೆಯವರ ಟೀಕೆ ಇವರನ್ನು ಘಾಸಿಗೊಳಿಸುತ್ತದೆ. ಅಂದರೆ ಇವರು ತಮ್ಮನ್ನು ಬೇರೆಯವರ ದೃಷ್ಟಿಕೋನದಲ್ಲಿ ಅಳೆದುಕೊಳ್ಳುತ್ತಾರೆ. ಹಾಗಾಗಿ ಯಾವಗಲೂ ಇತರರನ್ನು ಮೆಚ್ಚಿಸಲು ಮತ್ತು ಅವರಿಂದ ಟೀಕೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ತಮ್ಮೊಳಗೆ ಆತಂಕ ಮಾನಸಿಕ ಒತ್ತಡಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.
ಪ್ರಬುದ್ಧ ವ್ಯಕ್ತಿತ್ವವನ್ನು ಸಾಧಿಸುವುದು ಸುಲುಭವಲ್ಲ. ಮೊದಲು ನಮ್ಮ ಆಸಕ್ತಿ, ಆದ್ಯತೆ, ಶಕ್ತಿ, ದೌರ್ಬಲ್ಯಗಳನ್ನೆಲ್ಲಾ ಸರಿಯಾಗಿ ಗುರುತಿಸಿಕೊಳ್ಳಬೇಕು. ನಮ್ಮನ್ನು ನಾವು ಸಂಪೂರ್ಣ ಒಪ್ಪಿಕೊಳ್ಳಬೇಕು. ಆತ್ಮೀಯರೊಡನೆ ಅಗತ್ಯವಿದ್ದಾಗ ನಮ್ಮ ಆಸೆ, ಆದ್ಯತೆ, ಸಂತೋಷ, ಆತಂಕ ದೌರ್ಬಲ್ಯಗಳನ್ನು ಹೇಳಿಕೊಳ್ಳಲು ಸಿದ್ಧರಿರಬೇಕು. ನಮ್ಮಲ್ಲಿ ಬದಲಾವಣೆ ಬೇಕು ಅನ್ನಿಸಿದರೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಒಟ್ಟಾರೆ ನಮ್ಮ ವ್ಯಕ್ತಿತ್ವದ ಬಗೆಗೆ ನಮಗೇ ಖುಷಿಯಿರಬೇಕು. ನಮ್ಮ ಬಗೆಗೆ ನಮಗೇ ಗೌರವವಿಲ್ಲದಿದ್ದಾಗ ಬೇರೆಯರಿಂದ ಅದನ್ನು ಹೇಗೆ ನಿರೀಕ್ಷಿಸಬಹುದು?
ಆತ್ಮವಂಚನೆ ಮಾಡಿಕೊಳ್ಳುವವನು ಪ್ರಬುದ್ಧನಾಗಲಾರ. ಹಾಗೆಯೇ ಪ್ರಬುದ್ಧರಾಗುವುದು ಒಂದು ಸ್ಥಿತಿಯಲ್ಲ, ಅದು ಬೆಳವಣಿಗೆಯ ಹಂತ ಮಾತ್ರ. ಸಂಪೂರ್ಣ ಪ್ರಬುದ್ಧತೆ ಎನ್ನುವುದು ಒಂದು ಆದರ್ಶ ಸ್ಥಿತಿ. ಇದು ಎಲ್ಲಿದೆ ಎಂದು ಯಾರಿಗೂ ತಿಳಿಯದಿದ್ದರೂ, ನಾವು ಸಾಧ್ಯವಾದಷ್ಟು ಮೇಲ್ಮಟ್ಟಕ್ಕೆ ಹೋಗಲು ನಿರಂತರ ಪ್ರಯತ್ನ ನಡೆಸುತ್ತಿರಬೇಕು.
ಭಗವದ್ಗೀತೆಯ ಸ್ಥಿತಪ್ರಜ್ಞನ ವ್ಯಾಖ್ಯಾನ ನೆನಪಾಗುತ್ತಿದೆಯೇ? ಹೌದು ಇದು ಒಂದು ರೀತಿಯ ಸಂಸಾರದಲ್ಲಿನ ಸ್ಥಿತಪ್ರಜ್ಞತೆ ಅಂದುಕೊಳ್ಳಬಹುದು.
ಮುಂದುವರೆಯುವುದು..
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!