23.1 C
Sidlaghatta
Sunday, December 22, 2024

ದಾಂಪತ್ಯದಲ್ಲಿ ಪ್ರೇಮ ಮತ್ತು ಕಾಮ – ಭಾಗ 2

- Advertisement -
- Advertisement -

ಲೈಂಗಿಕತೆ-ದಿಕ್ಕು ತಪ್ಪಿಸುವ ವಿವರಣೆಗಳು
ಮಾನವನ ಲೈಂಗಿಕತೆಯಲ್ಲಿ ದೇಹದ ಪಾಲೆಷ್ಟು ಮತ್ತು ಮೆದುಳಿನ (ಬುದ್ಧಿ ಹಾಗೂ ಭಾವನೆಗಳ) ಪಾಲೆಷ್ಟು ಎನ್ನುವ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಒಂದಂತೂ ಸತ್ಯ. ಸರೀಸೃಪಗಳ ಮಿದುಳಿನಿಂದ ಸಸ್ತನಿಗಳ ಮಿದುಳನ್ನು ಹಾದು ಜೀವ ವಿಕಾಸದ ಹಾದಿಯಲ್ಲಿ ಮಾನವನ ಮೆದುಳು ಬಹಳವಾಗಿ ಬೆಳೆದಿದೆ. ಸಸ್ತನಿಗಳಿಗಿಂತ ದೊಡ್ಡದಾಗಿ ಬೆಳೆದಿರುವ ನಿಯೋಕಾರ್ಟೆಕ್ಸ್ ಹೊಂದಿರುವ ನಾವು ಲೈಂಗಿಕತೆಯನ್ನು ಬರಿಯ ದೈಹಿಕ ಅಗತ್ಯ ಎಂದು ಕಡೆಗಣಿಸುವಂತಿಲ್ಲ. ಮಾನವನ ಲೈಂಗಿಕತೆಗೆ ದೇಹ ಒಂದು ವಾಹನ ಮಾತ್ರ. ಈ ವಾಹನದ ಮೂಲಕ ವ್ಯಕ್ತವಾಗುವ ಮನಸ್ಸು ಮತ್ತು ಬುದ್ಧಿಗಳ ಸಂಯುಕ್ತ ಕ್ರಿಯೆ ಇದು. ಬುದ್ಧಿ ಮನಸ್ಸುಗಳೆರೆಡೂ ಒಳಗೊಳ್ಳದಿದ್ದರೆ ಪುರುಷರಿಗೆ ಲೈಂಗಿಕ ಸಂಪರ್ಕ ಸಾಧ್ಯವಾಗುವುದೇ ಇಲ್ಲ, ಮಹಿಳೆಯರಿಗೆ ಸಾಧ್ಯವಾದರೂ ತೃಪ್ತಿದಾಯಕವಾಗಿರುವುದಿಲ್ಲ.
ಹಾಗಾಗಿ ಮಾನವನ ಮೆದುಳು ಲೈಂಗಿಕ ಸುಖವನ್ನು ಪ್ರಾಣಿಗಳಂತೆ ಅನುಭವಿಸುವ ವ್ಯವಸ್ಥೆಯನ್ನು ಹೊಂದಿಲ್ಲ. ಒಂದೇ ಸಂಗಾತಿಯೊಡನೆ ದೀರ್ಘಕಾಲ, ಸಂತಾನ ಕ್ರಿಯೆಯನ್ನು ಹೊರತುಪಡಿಸಿಯೂ ಲೈಂಗಿಕ ಸುಖವನ್ನು ಹೊಂದುವ ಶಕ್ತಿ ನಮ್ಮ ಮೆದುಳಿಗೆ ಇದೆ. ಅಂದರೆ ಮಾನವ ಒಂದೇ ಸಂಗಾತಿಯೊಡನೆ ಬಹಳ ಕಾಲ ಬದುಕು ನಡೆಸುವುದು ಸಾಮಾಜಿಕ ಅಗತ್ಯವಷ್ಟೇ ಅಲ್ಲ, ಜೀವವಿಕಾಸದ ಹಾದಿಯಲ್ಲಿನ ಅನಿವಾರ್ಯತೆ ಕೂಡ. ಹಾಗೆ ದೀರ್ಘಕಾಲ ಒಂದೇ ಸಂಗಾತಿಯೊಡನೆ ಬದುಕು ಸಾಧ್ಯವಾಗುವುದು ಆ ಪುರುಷ ಮತ್ತು ಸ್ತ್ರೀಯ ನಡುವೆ ಒಂದು ಭಾವನಾತ್ಮಕ ಬಂಧವಿದ್ದಾಗ ಮಾತ್ರ. ಆದರೆ ನಾವು ಸೃಷ್ಟಿಸಿಕೊಂಡಿರುವ ವೈವಾಹಿಕ ವ್ಯವಸ್ಥೆಯೊಳಗೆ ಈ ಭಾವನಾತ್ಮಕ ಬಂಧ (ಅಟ್ಯಾಚ್‍ಮೆಂಟ್) ಬೆಳೆಯುತ್ತಿದೆಯೇ ಅಥವಾ ಇದು ವಿವಾಹ “ಬಂಧನ” ವಾಗಿದೆಯೋ ಮುಂದೆ ನೋಡೋಣ.
ಮದುವೆಯ ಆರಂಭದಲ್ಲಿ ಇಬ್ಬರಿಗೂ ಲೈಂಗಿತೆಯ ಬಗೆಗೆ ಕುತೂಹಲ ಮತ್ತು ಹೊಸತನದ ಆಸಕ್ತಿ ಇರುತ್ತದೆ. ಜೊತೆಗೆ ಯೌವ್ವನದ ದೇಹದಲ್ಲಿ ಲೈಂಗಿಕತೆಯನ್ನು ಪ್ರಚೋದಿಸುವ ಹಾರ್ಮೋನ್‍ಗಳ ಸೃಜನೆಯೂ ಚನ್ನಾಗಿರುತ್ತದೆ. ಹಾಗಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಮಾನಸಿಕ ಒತ್ತಡಗಳನ್ನು ಮೀರಿ ಲೈಂಗಿಕ ಉದ್ರೇಕ ಮತ್ತು ಆಸಕ್ತಿ ಕೆಲಸ ಮಾಡುತ್ತದೆ.
ಮದುವೆ ಹಳತಾಗಿ ದೇಹ ಮಧ್ಯ ವಯಸ್ಸಿನೆಡೆಗೆ ಸರಿದಂತೆ ಆರಂಭದ ದೈಹಿಕ ಮತ್ತು ಮಾನಸಿಕ ಪ್ರಚೋದನೆಗಳು ಸ್ವಲ್ಪ ನಿಧಾನವಾಗುತ್ತವೆ. ಆಗ ಸಂಗಾತಿಯೊಡನೆ ಸ್ವಲ್ಪ ಸಮಯ ಸಮಾಧಾನ ಮತ್ತು ಆತ್ಮೀಯತೆಯಿಂದ ಬೆರೆತಾಗ ಲೈಂಗಿಕ ಆಸಕ್ತಿ ಸಹಜವಾಗಿ ಮೂಡುತ್ತದೆ. ಆದರೆ ಹಾಗೆ ಬೆರೆಯಲು ಪತಿಪತ್ನಿಯರು ತಮ್ಮ ಮಧ್ಯೆ ಸೃಷ್ಟಿಸಿಕೊಳ್ಳುತ್ತಿರುವ ಮೇಲೆ ಹೇಳಿದ ಅಗೋಚರ ಮಾನಸಿಕ ಆತಂಕ, ಒತ್ತಡ, ಕಿರಿಕಿರಿಗಳ ಗೋಡೆ ಅಡ್ಡ ಬರುತ್ತದೆ. ಮಲಗುವ ಕೋಣೆಗೆ ಹೋಗುವಾಗಲೇ ಸಾಕಷ್ಟು ಕಿರಿಕಿರಿ ಆತಂಕಗಳನ್ನು ಜೊತೆಗೆ ಕರೆದುಕೊಂಡು ಹೋಗುವ ಅವರಿಗೆ ಅಲ್ಲಿ ನಿರಾಸೆಯಲ್ಲದೆ ಮತ್ತೇನು ಸಿಗಲು ಸಾಧ್ಯ? ಮದುವೆಯ ಆರಂಭದಲ್ಲಿ ಆಗುತ್ತಿದ್ದ ದಿಡೀರ್ ಉದ್ರೇಕವನ್ನು ನಿರೀಕ್ಷಿಸುವ ದಂಪತಿಗಳು ಸಹಜವಾಗಿ ನಿರಾಸೆಗೊಳ್ಳುತ್ತಾರೆ. ಹಾಗಾಗಿ ಲೈಂಗಿಕ ಸಂಪರ್ಕ ವಿರಳವಾಗುತ್ತಾ ಹೋಗುತ್ತದೆ. ಇದೆಲ್ಲದರ ಜೊತೆಗೆ ಮಕ್ಕಳ ಮತ್ತು ಸಂಸಾರದ ಜವಾಬ್ದಾರಿಗಳು ಇತರ ಆದ್ಯತೆಗಳನ್ನು ಒತ್ತಡಗಳನ್ನು ಸೃಷ್ಟಿಸಿ, ಲೈಂಗಿಕ ಆಸಕ್ತಿ ಮತ್ತು ಬಯಕೆಗಳನ್ನು ಸಹಜವಾಗಿ ಹಿಂದೆ ತಳ್ಳುತ್ತದೆ.
ಜೊತೆಗೆ ಇಬ್ಬರಿಗೂ ಲೈಂಗಿಕತೆಯಲ್ಲಿ ಸ್ವಲ್ಪ ಹೊಸತನ ಬೇಕು ಎನ್ನಿಸುತ್ತದೆ. ಆದರೆ ಇಬ್ಬರೂ ತಮ್ಮ ಮನಸ್ಸಿನ ಭಾವನೆಗಳನ್ನು ಮತ್ತು ತಮ್ಮ ಲೈಂಗಿಕತೆಯ ಕಲ್ಪನೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ಆಸೆ, ಆದ್ಯತೆಗಳ ಬಗೆಗೆ ಮಾತನಾಡಿದರೆ ಇನ್ನೊಬ್ಬರ ದೃಷ್ಟಿಯಲ್ಲಿ ಕೀಳಾಗಬಹುದೇ, ನನ್ನ ಬಗೆಗೆ ಅವರ ಅಭಿಪ್ರಾಯ ಬದಲಾಗಬಹುದೇ, ಎನ್ನವು ಆತಂಕದಲ್ಲಿ ಪತಿಪತ್ನಿಯರಿಬ್ಬರೂ ಎಲ್ಲವನ್ನೂ ತಮ್ಮಲ್ಲೇ ನುಂಗಿಕೊಳ್ಳುತ್ತಾರೆ. ಹಾಗಾಗಿ ಕಾಮ ಏಕತಾನತೆಯಿಂದ ನರಳುತ್ತದೆ.
ಇದೆಲ್ಲದರ ಪರಿಣಾಮವೆಂದರೆ ದಂಪತಿಗಳು ತಮ್ಮ ಲೈಂಗಿಕ ಆಸಕ್ತಿ ಸಹಜವಾಗಿ ಕುಗ್ಗಿದೆ ಎಂದುಕೊಳ್ಳುತ್ತಾರೆ. ವಾಸ್ತವದಲ್ಲಿ ಮಾನವನ ದೇಹ ಮತ್ತು ಮೆದುಳುಗಳೆರೆಡೂ ದೀರ್ಘಕಾಲ ಲೈಂಗಿಕತೆಯನ್ನು ಅನುಭವಿಸುವ ಶಕ್ತಿ ಹೊಂದಿವೆ. ದೇಹ ಮನಸ್ಸುಗಳು ಮಾಗಿದಂತೆ ಲೈಂಗಿಕ ಆನಂದವನ್ನು ಪಡೆಯುವ ರೀತಿ ಮತ್ತು ಸುಖದ ಸ್ವರೂಪಗಳು ಬದಲಾಗಬಹುದು ಅಷ್ಟೇ, ಆದರೆ ಲೈಂಗಿಕ ಅನುಭವದ ಗುಣಮಟ್ಟ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ. ಇದನ್ನು ತಿಳಿಯಲಾರದೆ ತಮ್ಮ ಅಗತ್ಯ ಮತ್ತು ಸತ್ವವನ್ನು ಗುರತಿಸಿಕೊಳ್ಳಲಾಗದ ದಂಪತಿಗಳು ಅತೃಪ್ತರಾಗಿ ಉಳಿಯುತ್ತಾರೆ. ಹೆಚ್ಚಿನವರು ಇದರ ನೈಜ ಕಾರಣಗಳನ್ನು ಗುರುತಿಸಿಕೊಳ್ಳುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ವಯಸ್ಸಾಗುತ್ತಾ ಬಂದಂತೆ ಸಂಸಾರಗಳು ನಡೆಯುವುದೇ ಹೀಗೆ ಎಂದುಕೊಳ್ಳುತ್ತಾರೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!