ಈ ಜಗತ್ತಿನ ಯಾರೂ ಪರಿಪೂರ್ಣರಲ್ಲ. ಆ ಪಂಕ್ತಿಯಲ್ಲಿ ರೈತರೂ ಇದ್ದಾರೆ. ಆ ಮಟ್ಟಿಗೆ ರೈತನ ಕೃಷಿ ಕಲಿಕೆಗೆ ಅಂತ್ಯ ಎಂಬುದೇ ಇಲ್ಲ. ಧಾರವಾಡದ ಹಳ್ಳಿಯಲ್ಲಿ ಸಮರ್ಪಕ ಎನ್ನಿಸಿದ ನೀರಾವರಿ ಯೋಜನೆ ಮಲೆನಾಡಿಗೆ ಅಕ್ಷಮ್ಯ ಅಪರಾಧ ಎನ್ನುವಂತಾಗಿಬಿಡಬಹುದು. ಕೆಲ ವರ್ಷಗಳ ಹಿಂದೆ ಸಾಗರದ ಹತ್ತಿರದ ಹಳ್ಳಿಯಲ್ಲಿ ನೀರಿಂಗಿಸುವ ಪದ್ಧತಿಯನ್ನು ಅಳವಡಿಸಿಕೊಂಡಾಗ ಭೂಮಿಯ ಜಲಮಟ್ಟ ಏರಿ ಅಡಿಕೆಗೆ ಬೇರು ಹುಳದ ಸಮಸ್ಯೆ ಕಾಣಿಸಿತ್ತು. ಏಕೆಂದರೆ ಅಲ್ಲಿಗೆ ಹೆಚ್ಚುವರಿ ನೀರು ಇಂಗುವ ಅಗತ್ಯವೇ ಇರಲಿಲ್ಲ! ಹಾಗೆಯೇ ಕೃಷಿಕ ಕೈಗೊಳ್ಳುವ ದೊಡ್ಡ ದೊಡ್ಡ ಯೋಜನೆಗಳ ಅತಿ ಚಿಕ್ಕ ತಪ್ಪು ಕೂಡ ಫಲಿತಾಂಶದಲ್ಲಿ ಏರಿಳಿತವನ್ನು ದಾಖಲಿಸಿಬಿಡಬಹುದು. ಸ್ವಾರಸ್ಯವೆಂದರೆ ನಮಗೆ ಕಾಣದ ನಮ್ಮ ದೋಷ ಇನ್ನೊಬ್ಬರಿಗೆ ಸರಳವಾಗಿ ಗೋಚರಿಸಿಬಿಡುತ್ತದೆ! ಈ ಹಂತದಲ್ಲಿ ತಿದ್ದಿಕೊಳ್ಳುವುದು ಜಾಣತನ. ಈ ಲೇಖನದಲ್ಲಿ ನಿಮ್ಮ ತೋಟ, ಕೃಷಿ ಭೂಮಿಯೊಳಗೆ ಇಳಿಯದೆ ಸಾಮಾನ್ಯವಾಗಿ ಜಾರಿಯಲ್ಲಿರುವ ತಪ್ಪುಗಳತ್ತ ನೋಟ ಹರಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತದೆಂದಾದರೂ ಸ್ವಾಗತ.
ತೆಂಗಿನ ಉಪಬೆಳೆ ಯಾವುದು?
ನೀರಿನ ಪೂರೈಕೆ ಯಾವಾಗ?
ಪ್ರತಿಯೊಂದು ಗಿಡಕ್ಕೆ ದಿನಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ಕೃಷಿ ತಜ್ಞರು ಕಂಡುಹಿಡಿದಿದ್ದಾರೆ. ಇದೇ ತೆಂಗಿನ ಗಿಡವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಅದಕ್ಕೆ ದಿನಕ್ಕೆ 120 ಲೀಟರ್ ನೀರಿನ ಅವಶ್ಯಕತೆ ಇದೆ ಎನ್ನುತ್ತಾರವರು. ನಾವು ಲೆಕ್ಕ ಮಾಡಿ 120 ಲೀ. ನೀರನ್ನು ತೆಂಗಿನ ಮರದ ಬುಡಕ್ಕೆ ಸುರುವುತ್ತೇವೆ. ಅಷ್ಟೂ ನೀರು ಆ ತೆಂಗಿಗೆ ಸಿಗುತ್ತದೆಯೇ? ಅನುಮಾನ. ಸದರಿ ಭೂಮಿಯ ಮಣ್ಣು ಎಷ್ಟು ಕಾಲ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು ಎಂಬುದು ಕೂಡ ಮುಖ್ಯ ಅಂಶ. ಹಾಗಾಗಿ ವಿಜ್ಞಾನಿಗಳು ಸೂಚಿಸಿದ ನೀರಿನ ಪ್ರಮಾಣವನ್ನು ನಮ್ಮ ಸಂದರ್ಭಕ್ಕೆ ಹೊಂದಿಸಿಕೊಳ್ಳಬೇಕು. ಮುಖ್ಯವಾಗಿ, ಯಾವುದೇ ಬೆಳೆಗೆ ಘೋರ ಬೇಸಿಗೆಗಿಂತ ಈಗಿನ ಚಳಿಗಾಲದಲ್ಲಿ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಚಳಿಗೆ ಮಣ್ಣು ಬಿರುಸಾಗಿ ಗಿಡಗಳ ಬೇರು ಘಾಸಿಗೊಳ್ಳುವುದನ್ನು ತಪ್ಪಿಸಲು ಅಕ್ಟೋಬರ್‍ನಿಂದ ಡಿಸೆಂಬರ್ ವೇಳೆ ನೀರು ಮುದ್ದಾಂ ಕೊಡಬೇಕು. ಬಹುಪಾಲು ರೈತರು ಇದನ್ನು ನಿರ್ಲಕ್ಷಿಸುತ್ತಾರೆ.
ಹುಟ್ಟಿದಾಕ್ಷಣ ಟಾನಿಕ್?
ಕಳೆನಾಶಕ ಬೇಡ
ಇಂದು ಕಳೆಯ ನಿರ್ಮೂಲನೆಗೆ ರಾಸಾಯನಿಕ ಕಳೆ ನಾಶಕಗಳು ಬಂದಿವೆ. ಕಳೆ ಕೀಳುವ, ಸವರುವ ಶ್ರಮಕ್ಕಿಂತ ಸಲೀಸು ಪದ್ಧತಿಯಾದುದರಿಂದ ರೈತರ ಗಮನ ಸೆಳೆದಿದೆ. ಇದರ ಪ್ರಯೋಗದಿಂದ ಹತ್ತಿರದಲ್ಲಿ ಯಾವ ಪ್ರತಿಕೂಲ ಪರಿಣಾಮಗಳು ಕಾಣಿಸಿಕೊಳ್ಳದಿದ್ದರೂ ದೀರ್ಘಕಾಲೀನ ಅನಾಹುತಗಳು ಅನೇಕ. ವಾಸ್ತವವಾಗಿ ಕಳೆನಾಶಕದಿಂದ ಕಳೆಯೇನು ಸಾಯುವುದಿಲ್ಲ. ಬೇರಿನಲ್ಲಿ ಜೀವವಿದ್ದು ತುಸು ಇಬ್ಬನಿ, ತುಂತುರು ಮಳೆ ಬಿದ್ದರೂ ಕಳೆ ಮತ್ತೆ ಪ್ರತ್ಯಕ್ಷವಾಗುತ್ತದೆ! ಇದೇ ವೇಳೆ ಕಳೆನಾಶಕದ ರಸಾಯನಿಕದ ತೀಕ್ಷ್ಣತೆಗೆ ಸೂಕ್ಷ್ಮ ಬ್ಯಾಕ್ಟೀರಿಯಾಗಳು, ಎರೆಹುಳುಗಳು ನಾಶವಾಗುತ್ತವೆ. ಭೂಮಿ ಬರಡು, ಇಳುವರಿ ಕಡಿಮೆ, ವಿಚಿತ್ರ ರೋಗಗಳು ಮುಂದಿನ ಹತ್ತಾರು ವರ್ಷಗಳ ನಂತರವಷ್ಟೇ ಕಾಣಿಸಿಕೊಳ್ಳುವುದು ಖಚಿತ. ನಾವೇ ನಮ್ಮ ಬೆಳೆಗೆ ವಿಷವಿಕ್ಕುವುದೇ…. ಯೋಚಿಸಿ.
ಸಗಣಿಯೆಲ್ಲ ಸ್ಲರಿ, ಸರಿಯೇ?
ಸುಣ್ಣ – ಸುಬ್ಬಣ್ಣ!
ಇದು ತೋಟಗಳಿಗೆ ಸುಣ್ಣ ಹಾಕುವ ಕಾಲ. ಇವತ್ತಿಗೂ ಹಲವು ರೈತರು ಗೊಬ್ಬರ ಹಾಕಲು ಬುಡ ಬಿಡಿಸಿ ಸುಣ್ಣ ಹಾಕಿ ಅದರ ಮೇಲೆ ಗೊಬ್ಬರ ಹಾಕುತ್ತಾರೆ. ಇದಂತೂ ತಪ್ಪು ತಪ್ಪು. ಯಾವುದೇ ಬೆಳೆಯ ಬುಡದ ಸಮೀಪ ಸುಣ್ಣ ಹಾಕದೆ ಉಳಿದ ಕೃಷಿ ಪ್ರದೇಶದಲ್ಲಿ ಸುಣ್ಣ ಬೀರಬೇಕು. ಮಣ್ಣಿನಲ್ಲಿರುವ ಕ್ಷಾರೀಯ ಅಂಶವನ್ನು ತೆಗೆದುಹಾಕಿ ಭೂಮಿಯ ಪಿಚ್‍ನ್ನು ತಟಸ್ಥ ಏಳಕ್ಕೆ ತರಲು ಪ್ರಯತ್ನಿಸುವುದು ಸುಣ್ಣದ ಮುಖ್ಯ ಕೆಲಸ. ಅದು ಗೊಬ್ಬರವಲ್ಲ. ಒಂದೊಮ್ಮೆ ಗೊಬ್ಬರದೊಂದಿಗೆ ಬೆರೆತರೆ ಗೊಬ್ಬರದ ಸಾರ ನಷ್ಟಗೊಳ್ಳುವ ರಾಸಾಯನಿಕ ಕ್ರಿಯೆ ನಡೆದುಬಿಡುತ್ತದೆ. ಅದೇ ತೋಟದ ಮಣ್ಣು ಸಮಸ್ಥಿತಿಗೆ ಬಂದರೆ ನಾವು ಉಣಿಸುವ ಗೊಬ್ಬರದ ಅಷ್ಟೂ ಭಾಗವನ್ನು ಹೀರಿಕೊಳ್ಳಲು ಬೇರಿಗೆ ಸಾಧ್ಯವಾಗುತ್ತದೆ.
ಇವು ಕೆಲವು ಪ್ರಾತಿನಿಧಿಕ ಮಾಹಿತಿಗಳು. ಇಂತಹ ಸತ್ಯಗಳು ಇತರರಲ್ಲಿಯೂ ಬಹಳಷ್ಟಿರಬಹುದು. ಅಂತಹ ಸಂವಾದ ನಡೆಯುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಬಹುದು. ಅಂತಹ ಸರಣಿಗೆ ಈ ಲೇಖನ ನಾಂದಿ ಹಾಡಿದೆ ಎಂದುಕೊಳ್ಳೋಣವೇ?
-ಮಾ.ವೆಂ.ಸ.ಪ್ರಸಾದ್