ಪ್ರತಿಯೊಬ್ಬರೂ ಅವಕಾಶ ಸಿಕ್ಕಾಗಲೆಲ್ಲಾ ತತ್ವ-ಸಿದ್ಧಾಂತಗಳನ್ನು ಉದುರಿಸುತ್ತಾರೆ. “A Devil can cite Bible for its sake” ಎಂಬ ಮಾತು ಪ್ರಸಿಧ್ಧ. ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕುಬೇಕಾದಂತೆ ತತ್ವ ಸಿದ್ಧಾಂತಗಳನ್ನು ತಿರುಚುತ್ತಿರುತ್ತಾರೆ. ಅದರಲ್ಲೂ ನಮ್ಮ ರಾಜಕಾರಣಿಗಳಾದವರು ತಮ್ಮ ಬೇಳೆಕಾಳನ್ನು ಬೇಯಿಸಿಕೊಳ್ಳಲು ತತ್ವದ ಸಮಿಧೆಯನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿರುವುದನ್ನು ನಾವು ಕಾಣಬಹುದು.
ಯಾವುದೇ ರಾಜಕಾರಣಿ ತನ್ನ ಪಕ್ಷ ಬದಲಿಸುವ ಸಂದರ್ಭದಲ್ಲಿ ಸಿದ್ಧಾಂತವನ್ನು ಮುಂದಿಡುತ್ತಾನೆ. ತಾನು ಹೋಗುತ್ತಿರುವ ಪಕ್ಷದ ಸಿದ್ಧಾಂತಗಳು ಸೂಕ್ತವಾಗಿದ್ದು, ಅದನ್ನು ಮನಸಾರೆ ಒಪ್ಪಿ ಆ ಪಕ್ಷಕ್ಕೆ ಸೇರುತ್ತಿದ್ದೇನೆ, ಎಂದು ಹೇಳುತ್ತಾನೆ. ಮತ್ತೆ ಅದರಿಂದ ಬೇರೊಂದಕ್ಕೆ ಹಾರುವಾಗಲೂ ಅದನ್ನೇ ಹೇಳುತ್ತಾನೆ. ಮೊದಲಿದ್ದ ಪಕ್ಷದ ಸಿದ್ಧಾಂತ ಯಾಕೆ ತನಗೇ ಸರಿ ಬರಲಿಲ್ಲ? ಸೇರುವ ಪಕ್ಷದ ಯಾವ ಸಿದ್ಧಾಂತ ತನಗೆ ಸರಿ ಬಂತು? ಎಂಬುದಕ್ಕೆ ಆತ ಉತ್ತರವನ್ನು ಕೊಡುವ ಮೂರ್ಖತನಕ್ಕೆ ಕೈ ಹಾಕುವುದಿಲ್ಲ. ಕಾರಣವಿಷ್ಟೇ, ಅವನಿಗೆ ಯಾವುದೇ ಪಕ್ಷದ ತತ್ವ-ಸಿದ್ಧಾಂತಗಳೇ ತಿಳಿದಿರುವುದಿಲ್ಲ. ಪ್ರತಿಯೊಂದು ಪಕ್ಷಕ್ಕೂ ಅದರದ್ದೇ ಆದ ತತ್ವ-ಸಿದ್ಧಾಂತಗಳು ಇದ್ದೇ ಇರುತ್ತದೆ. ಆದರೆ ಅದನ್ನು ಓದಿ-ತಿಳಿದ ಮಂದಿ ಎಷ್ಟಿರುತ್ತಾರೆ? ಪಕ್ಷದ ಸಿದ್ಧಾಂತವನ್ನು ಬರೆದ ಯಾ ರೂಪಿಸಿದವನಿಗೂ ಅದರ ಸಂಪೂರ್ಣ ಅರಿವು ಕೊನೆಯವರೆಗೂ ಇದ್ದಿರುತ್ತದೆಂದು ನಂಬುವುದು ಕಷ್ಟ.
ನೀವು ಯಾವುದೇ ಪಕ್ಷವನ್ನು ತೆಗೆದುಕೊಂಡರೂ ಸರಿ, ಅದರೊಂದಿಗೆ ಗುರುತಿಸಿಕೊಂಡ ಯಾವುದೇ ರಾಜಕಾರಣಿ ಆ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿರುವುದಕ್ಕೆ ಬದಲಾಗಿ ತನಗೆ ಖುದ್ಧಾಗಿ ನೆರವಾಗಬಲ್ಲ ನಾಯಕರ ಭಟ್ಟಂಗಿಗಳಾಗಿ ಮಾರ್ಪಟ್ಟಿರುತ್ತಾರೆ. ಹಾಗಲ್ಲದಿದ್ದಲ್ಲಿ ಪಕ್ಷಗಳಲ್ಲಿ ಬೇರೆ ಬೇರೆ ಗುಂಪುಗಳು ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಅದರ ನಾಯಕರಲ್ಲಿ ವಿಶ್ವಾಸವಿಟ್ಟು ತಮ್ಮ ಅಸಮಾಧಾನಗಳನ್ನಾಗಲೀ ಅಥವಾ ಬೇರೆಯವರ ತಪ್ಪನ್ನಾಗಲೀ ಅದರ ಅಂತರಿಕ ಚೌಕಟ್ಟಿನಲ್ಲಿಯೇ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಬೀದಿಯ ವಿಚಾರವನ್ನಾಗಿಸುದಲ್ಲ. ತಮಗೆ ಅಧಿಕಾರವಿದ್ದಾಗ ಪಕ್ಷದ ಸಿದ್ಧಾಂತ ತತ್ವಗಳು, ಸರಿಯಿಲ್ಲದಿದ್ದಾಗ ಅದೇ ಪಕ್ಷದ ಸಿದ್ಧಾಂತ ತತ್ವಗಳು ತಪ್ಪು ಎಂದು ವಾದಿಸುವ ಮಂದಿಗೆ ಪ್ರಾಥಮಿಕ ಹಂತದಲ್ಲಿಯೇ ಪಕ್ಷದ ತತ್ವ ಸಿದ್ಧಾಂತಗಳು ತಿಳಿದಿರಲೇ ಇಲ್ಲ ಎಂದರೆ ನಂಬಲು ಸಾಧ್ಯವೇ? ಅಥವಾ ಅವರಿಗೆ ಯಾವ ಪಕ್ಷದ ತತ್ವ ಸಿದ್ಧಾಂತಗಳು ಏನೇ ಇರಲಿ ಅದು ಪುಸ್ತಕದಲ್ಲಿ ಮಾತ್ರ ಇರಲಿ. ತಮ್ಮ ಅನುಕೂಲತೆಗೆ ಅಧಿಕಾರಕ್ಕಾಗಿ ಮಾತ್ರ ಚಲಾವಣೆಗೆ ಬರಲಿ ಎಂಬ ಹುಂಬತನಕ್ಕೆ ಬಂಡವಾಳವನ್ನಾಗಿಸಿದ್ದಾರೋ? ಅರ್ಥವಾಗುವುದು ಕಷ್ಟ. ಯಾಕೆಂದರೆ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದರೆ, ವ್ಯಕ್ತಿ ನಿಷ್ಠೆ, ಪ್ರತಿಷ್ಠೆಗಳೇ ಪ್ರಾಮುಖ್ಯತೆ ಪಡೆಯುತ್ತಿರುವುದನ್ನು ನಾವು ಕಾಣಬಹುದು. ಅದರೊಟ್ಟಿಗೆ ಜಾತಿ ರಾಜಕಾರಣವೂ ಸೇರಿಕೊಂಡು ಒಟ್ಟಾರೆ ಸ್ಥಿತಿ ಗೊಂದಲದ ಗೂಡಾಗಿ ಮಾರ್ಪಟ್ಟಿರುವುದನ್ನು ನಾವು ಕಾಣಬಹುದಾಗಿದೆ.
ಗೆಲ್ಲಲೀ ಸೋಲಲೀ ಒಂದೇ ಪಕ್ಷ, ಒಂದೇ ಪಕ್ಷದ ತತ್ವ-ಸಿದ್ಧಾಂತಗಳಿಗೆ ತಾನು ಬದ್ಧ ಎಂಬ ರಾಜಕಾರಣಿಗಳ ಸಂಖ್ಯೆ ಕ್ರಮೇಣ ಕುಗ್ಗುತ್ತಿದೆ. ಯಾವ ಪಕ್ಷವಾದರೇನು? ಅದರ ತತ್ವ-ಸಿದ್ಧಾಂತಗಳು ಏನಾಗಿದ್ದರೆ ತನಗೇನು? ಅಷ್ಟಕ್ಕೂ ಅವನ್ನೆಲ್ಲಾ ತಿಳಿದುಕೊಂಡು ಮಾಡಬೇಕಾದದ್ದಾದರೂ ಏನು? ತನಗೆ ಬೇಕಾದದ್ದು ತನ್ನ ಗೆಲುವು. ಅನಂತರ ಅಧಿಕಾರ, ಆಸ್ತಿ ಗಳಿಕೆ, ಮುಂದಿನ ಚುನಾವಣೆಗೆ ಸಾಕಾಗುವಷ್ಟು ಮತ್ತು ಸೋತರೂ ಅರ್ಥಿಕವಾಗಿ ಸೋಲದಂತೆ ನೋಡಿಕೊಳ್ಳುವುದು. ಇದರೊಟ್ಟಿಗೆ ತನ್ನ ಬೆಂಬಲಿಗರ, ತನ್ನವರ, ತನ್ನ ಗುಂಪಿನವರ ಚಿಕ್ಕಪುಟ್ಟ ಬೇಡಿಕೆಗಳ ಪಟ್ಟಿಯನ್ನು ಪೂರೈಸುವುದು. ಅದನ್ನು ಪೋಷಿಸುವುದನ್ನು ಮಾಡುತ್ತಲೇ ಅವರ್ಯಾರೂ ತನಗಿಂತ ಎತ್ತರಕ್ಕೆ ಬೆಳೆಯದಂತೆ ನೋಡಿಕೊಳ್ಳುವ ಎಚ್ಚರವನ್ನು ಹೊಂದಿರುತ್ತಾರೆ. ಒಮ್ಮೆ ಈಜಲು ಕಲಿತವರು ಮತ್ತೆ ನೀರಿಗೆ ಹೆದರುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಬಹಳಷ್ಟು ಮಂದಿಗೆ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಬದುಕುತ್ತಿರುವವರನ್ನು ಕಂಡರೆ ಬಹುಷ: ಆದಿ ಮಾನವರನ್ನು ಕಂಡಂತಾಗಬಹುದು ಅಷ್ಟೇ!!!. ವರ್ತಮಾನದ ನಾಜೂಕಯ್ಯನಾಗದವನು ಬಹುಷ: ಗೊಡ್ಡು ವೇದಾಂತಿಯಂತೆ ಕಂಡರೆ ಆಶ್ಚರ್ಯವೇನಿಲ್ಲ. ಅದಕ್ಕಿಂತ ಹೆಚ್ಚಾಗಿ ಅರಿವು ಮತ್ತು ಆಚರಣೆಯ ಮಧ್ಯೆ ಅಂತರವೇ ಹೆಚ್ಚು.
ರವೀಂದ್ರ ಭಟ್ ಕುಳಿಬೀಡು.