ಪ್ರತಿಯೊಬ್ಬರ ಜೀವನ ಕ್ರಮವು ಬೇರೆ ಬೇರೆಯಾಗಿರುತ್ತದೆ. ಬೆಳಿಗ್ಗೆ ಏಳುವುದರಿಂದ ರಾತ್ರಿಯವರೆಗೂ ಉನ್ನತ ಸ್ತರದವರು ಕೆಳವರ್ಗದವರೂ ಎಲ್ಲರೂ ಅವರವರದೇ ಆದ ರೀತಿಯನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಜೀವನದಲ್ಲಿ ಸ್ವಚ್ಛತೆಯ ಪ್ರಾಧಾನ್ಯತೆ ಏನು? ಹೇಗಿರಬೇಕು? ಮಕ್ಕಳ ವಿಷಯದಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಏನು?
ನನಗೆ ತಿಳಿದ ಮಟ್ಟಿಗೆ ಕೆಳವರ್ಗದ ಮಕ್ಕಳು ಅದ್ಭುತವಾದ ಪ್ರತಿರೋಧ ಶಕ್ತಿಯನ್ನು ಹೊಂದಿರುತ್ತವೆ. ಕೊಳಚೆ ಪ್ರದೇಶದ ಮಕ್ಕಳು, ರಸ್ತೆ ಮಾಡುವವರ ಮಕ್ಕಳು, ಕಲ್ಲು ಕೊರೆಯುವವರ ಮಕ್ಕಳು ದಷ್ಟಪುಷ್ಠವಾಗಿ ಆರೋಗ್ಯವಾಗಿರುವಂತೆ ಕಂಡುಬರುತ್ತದೆ. ಎಣ್ಣೆಯೇ ಕಾಣದ ತಲೆಕೂದಲು, ಸ್ನಾನವನ್ನು ಕಾಣದೇ ಎಷ್ಟು ದಿನಗಳೇ ಕಳೆದು ಹೋದವೆನೋ ಎನ್ನುವಂತೆ ಕಾಣುವ ಮೈ, ಬಟ್ಟೆಯ ಪರಿವೆಯೇ ಇಲ್ಲದೆ ಮಣ್ಣುರಾಶಿಯ ಮೇಲೋ, ಕಲ್ಲುರಾಶಿಯ ಮೇಲೋ ಆಡುತ್ತಿರುತ್ತವೆ. ಹಾಗಿದ್ದರೆ ಆ ಮಕ್ಕಳು ಅದೆಷ್ಟರ ಮಟ್ಟಿಗೆ ಸ್ವಚ್ಛತೆಯಲ್ಲಿ ಬೆಳೆಯಲು ಸಾಧ್ಯವಾಗಬಹುದು. ದೇವರು ಆ ಮಕ್ಕಳಿಗೆ ವಿಶೇಷವಾದ ಪ್ರತಿರೋಧ ಶಕ್ತಿಯನ್ನು ಕೊಟ್ಟಿರಬಹುದೇ?
ನನ್ನ ಅಜ್ಜಿ ಹೇಳುತ್ತಿದ್ದಳು “ಕೋಣೆ ಮಕ್ಕಳು ಕೊಳೆಯುತ್ತವೆ, ಬೀದಿ ಮಕ್ಕಳು ಬೆಳೆಯುತ್ತವೆ” ಎಂದು, ಅಂದರೆ ಅದರರ್ಥ ನಾವು ಸ್ವಚ್ಛತೆಯಲ್ಲಿ ಬೆಳೆಸುವುದರಿಂದ ಮಕ್ಕಳು ಆರೋಗ್ಯವಾಗಿ ಬೆಳೆಯಲಾರರು ಎಂದರ್ಥವಲ್ಲ. ಕೋಣೆಯ ಮಕ್ಕಳು ಅಂದರೆ ಅತಿ ಕಾಳಜಿಯಿಂದ ಬೆಳೆಸಿದ ಮಕ್ಕಳು, ಅಂದರೆ ಮಣ್ಣಿನಲ್ಲಿ ಹೋಗಬೇಡ, ಸೋಂಕು ತಗುಲುತ್ತದೆ, ಮಳೆಯಲ್ಲಿ ನೆನೆಯಬೇಡ ಶೀತ ಆಗುತ್ತದೆ ಎಂದು ಹೇಳುತ್ತಾ ಮನೆಯಲ್ಲಿಯೇ ಬಂಧಿಯಾಗಿರುವ ಮಕ್ಕಳು. ಬೀದಿಯ ಮಕ್ಕಳು ಎಂದರೆ ಸ್ವತಂತ್ರವಾಗಿ ತಮಗೆ ಬೇಕೆಂದಲ್ಲಿ ಹೋಗಿ ಆಡಿಕೊಂದು ಇರುವ ಮಕ್ಕಳು.
ಈಗಿನ ಮಕ್ಕಳು ಎಂದಿಗೂ ಮಣ್ಣಿನಲ್ಲಿ ಆಟವಾಡಲಾರರು, ಮಳೆಯಲ್ಲಿ ನೆನೆಯಲಾರರು, ಬಿಸಿಲಲ್ಲಿ ಬೇಯಲಾರರು ಅಥವಾ ನಾವು ಬಿಡಲಾರೆವು ಮಕ್ಕಳನ್ನು ಪ್ರಕೃತಿಯ ಸನಿಹಕ್ಕೆ. ಇಲ್ಲಿ ಯಾಕೆ ಬಿಡಲಾರೆವು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲೇ ಉತ್ತರವೂ ಇದೆ, ನಾವೇ ಕಲುಷಿತಗೊಳಿಸಿರುವ ಪ್ರದೇಶಕ್ಕೆ ಗೊತ್ತಿದ್ದು ಗೊತ್ತಿದ್ದು ಯಾವ ತಂದೆ ತಾಯಿ ತಾನೆ ಮಕ್ಕಳನ್ನು ಕಳಿಸಲು ಇಚ್ಛಿಸುತ್ತಾರೆ. ಎಲ್ಲಿ ನೋಡಿದರೂ ಉಗುಳುತ್ತಾ ಓಡಾಡುವ ಜನ, ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ, ಕಡ್ಡಿ, ಕೊಳಚೆ ನೀರು ಇರುವಂತಹುದು, ಹೀಗೇ ಉದ್ದವಾಗುತ್ತಾ ಹೋಗುತ್ತದೆ ನಮ್ಮ ಘನಂದಾರಿ ಕೆಲಸಗಳು. ಇಂಥ ಪರಿಸ್ಥಿಯನ್ನು ತಂದೊಡ್ಡಿ ಈಗಿನ ಮಕ್ಕಳು ನಮ್ಮಂತೆ ಪ್ರಕೃತಿಯಲ್ಲಿ ಬೆರೆಯಲಾರವು ಎಂದು ಅವಲತ್ತುಕೊಂಡರೆ ಪ್ರಯೋಜನವೇನು? ನಾವು ಚಿಕ್ಕವರಾಗಿದ್ದಾಗ ಇದ್ದ ನೆಲ ಜಲ ಯಾವುದೂ ಈಗ ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಈಗ ನಾವೆಷ್ಟು ನಮ್ಮನ್ನು ನಾವು ಪ್ರಕೃತಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆಯಲ್ಲವೆ? ಪ್ರಕೃತಿಯ ಯಾವುದೇ ಸೃಷ್ಠಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದ ಕಾರಣ ಪ್ರತಿರೋಧ ಶಕ್ತಿ ಕುಂಠಿತವಾಗಬಹುದೇನೋ ಎನ್ನುವುದು ಇದರ ಅರ್ಥ ಇರಬಹುದೆಂದು ನನ್ನ ಅನಿಸಿಕೆ.
ಸ್ವಚ್ಛತೆಯ ಬಗ್ಗೆ ಮಾತನಾಡಲು ಹೋದರೆ ಎಲ್ಲರೂ ಅವರವರದೇ ಅದ ಕ್ರಮವನ್ನು ಹೇಳುತ್ತಾರೆ ಕೆಲವರು ಮಕ್ಕಳು ಮಣ್ಣಿನಲ್ಲಿ ಆಡಬೇಕು, ಮಳೆಯಲ್ಲಿ ನೆನೆಯಬೇಕು ಆಗ ಮಕ್ಕಳಿಗೆ ಎಲ್ಲವನ್ನೂ ಸಹಿಸುವ ಶಕ್ತಿ ಬರುತ್ತದೆ ಎಂದರೆ ಕೆಲವರು ಇದಕ್ಕೆ ವಿರುದ್ದವಾಗಿ ಹಾಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ ಎನ್ನುತ್ತಾರೆ. ಯಾವುದು ಸರಿ ಯಾವುದು ತಪ್ಪು ಎಂದು ವಿಮರ್ಶೆ ಮಾಡಲು ಬರುವುದಿಲ್ಲವೆನೊ, “ಲೋಕೋ ಭಿನ್ನ ರುಚಿ:”
ಇದೆಲ್ಲವನ್ನೂ ಮೀರಿ ಪ್ರತಿಯೊಬ್ಬರೂ ಅವರದೇ ಆದ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡು ಜೀವಿಸುವುದೂ ಅಷ್ಟೇ ಸತ್ಯ ಅಲ್ಲವೇ….?
- Advertisement -
- Advertisement -
- Advertisement -
- Advertisement -