ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಹೋದರೆ, ಚಿಕ್ಕ ವಯಸ್ಸಿನಲ್ಲಿ ಅಂಗಡಿಗಳೆದುರು ನಿಂತು ಅದು ಬೇಕು, ಇದು ಬೇಕು ಎಂದು ಧರಣಿ ಮಾಡಿ ಬೇಕಾಗಿದ್ದುದನ್ನು ಪಡೆದುಕೊಳ್ಳುತ್ತಿದ್ದುದು ಈಗ ನೆನಪಾಗುತ್ತದೆ. ಆಗ ಅಪ್ಪ ಅಮ್ಮನ ಕೈಗಳಿಗೆ ಜೋತು ನಡೆದು ಹೋಗಿದ್ದು ಇನ್ನೂ ಮನಸ್ಸಿನ ಚಿತ್ರ ಪುಟದಲ್ಲಿ ಹಾಗೇ ಇದೆ. ಇದರ ಜೊತೆಗೆ ಇನ್ನೊಂದು ನೆನಪಾಗುವುದೆಂದರೆ, ಹೀಗೆ ಜನಜಂಗುಳಿಯ ಮಧ್ಯೆ ನಡೆದು ಹೋಗಬೇಕಾದರೆ, ಬೇಡ ಎಂದರೂ ಕಿವಿಗಳಿಗೆ ಬಂದು ಅಪ್ಪಳಿಸುತ್ತಿದ್ದುದು ನಮ್ಮವರ ಮಧ್ಯೆಯೇ “ಕಳೆದು ಹೋದವರ ಸುದ್ದಿ”. ವಸ್ತುಪ್ರದರ್ಶನದ ಹೊರಾಂಗಣದಲ್ಲಿ ಪೊಲೀಸರು ಕೆಲವು ಮಕ್ಕಳನ್ನು, ನಿಲ್ಲಿಸಿಕೊಂಡು,” ಈ ಹೆಸರಿನ ಮಗು ತಪ್ಪಿಸಿಕೊಂಡಿದೆ, ಪೋಷಕರು ತಕ್ಷಣ ಈ ಜಾಗಕ್ಕೆ ಬಂದು ನಿಮ್ಮ ಮಗುವನ್ನು ಕರೆದುಕೊಂಡು ಹೋಗಿ” ಎಂದು ಪ್ರತಿ ಬಾರಿಯೂ ಹೇಳುತ್ತಿದ್ದರು. ಇದನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಆ ಮಕ್ಕಳನ್ನು ಊಹಿಸಿಕೊಳ್ಳುವುದೇ ಕೆಲಸವಾಗಿರುತಿತ್ತು. ಆ ಮಕ್ಕಳ ಮುಖ, ಅವರ ಅಳು, ಮನಸ್ಸಿನಲ್ಲಿ ಅನುಭವಿಸುತ್ತಿರಬಹುದಾದ ದುಗುಡ, ಎಲ್ಲವು ಒಮ್ಮೆ ನನ್ನಲ್ಲೂ ಮೂಡಿರುತ್ತಿತ್ತು. ಅವರು ತಮ್ಮ ಪಾಲಕರ ಕೈಗೆ ತಲುಪಿದರೋ ಇಲ್ಲವೋ ಎಂಬ ಕುತೂಹಲ ಕೊನೆಯವರೆಗೂ ಇದ್ದೇ ಇರುತಿತ್ತು. ಹಾಗಾಗಿ ಹೊರ ಹೋಗುವಾಗ ಒಮ್ಮೆಯಾದರೂ ಪೊಲೀಸರು ಕೂಗಿಕೊಳ್ಳುತ್ತಿದ್ದ ಜಾಗದತ್ತ ನೋಡಿ ಬರುತ್ತಿದ್ದೆ. “ನಾನು ಚಿಕ್ಕ ಮಗುವಾಗಿದ್ದಾಗ ಅವರಿವರ ಕೈಯಿಂದ ಕೈಗೆ ಹೋಗಿ ಗೋಕರ್ಣ ಜಾತ್ರೆಯಲ್ಲಿ ಕಳೆದು ಹೋಗಿದ್ದೆ” ಎಂದು ಅಪ್ಪ ತಾನು ಕಳೆದು ಹೋಗಿದ್ದ ಕಥೆಯನ್ನು ನೆನಪಿಸಿಕೊಳ್ಳುತ್ತಾನೆ. ಬಹುಶಃ ಕಳೆದು ಹೋದ ಸಮಯದಲ್ಲಿ ತಾನು ಕಳೆದು ಹೋಗಿದ್ದೇನೆ ಎಂದು ತಿಳಿದರೆ ಆಗ ನಮಗಾಗುವ ಭಯವನ್ನು ಅನುಭವಿಸಿಯೇ ತಿಳಿಯಬೇಕು. ಇದೆಲ್ಲ ಯಾಕೆ ನೆನಪಾಯಿತೆಂದರೆ, ಮೊನ್ನೆ ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ನಾಟಕೋತ್ಸವ ನಡೆಯುವಾಗ ಜಾತ್ರೆಯಂತಿದ್ದ ಅಲ್ಲಿಯ ಅಂಗಡಿಗಳಲ್ಲಿ ಸುತ್ತಾಡುತ್ತಿದ್ದೆ. ಒಂದು ಪುಸ್ತಕದ ಅಂಗಡಿಯಲ್ಲಿ ನಾವು ಮನೆಯವರೆಲ್ಲ ನಮ್ಮದೇ ಲೋಕದಲ್ಲಿ ಮುಳುಗಿರುವಾಗ ಅಮ್ಮನನ್ನು ಒಬ್ಬಳು ಪುಟ್ಟ ಹುಡುಗಿ ಹಿಂದಿನಿಂದ ಬಂದು ಅಮ್ಮಾ ಎನ್ನುತ್ತಾ ಗಟ್ಟಿಯಾಗಿ ಕೈಗಳನ್ನು ಹಿಡಿದುಕೊಂಡಳು. ನಾನು ಹಾಗು ತಂಗಿ ಇಬ್ಬರೂ ಒಮ್ಮೆಲೆ ಹಿಂತಿರುಗಿ ನೋಡಿದೆವು. ನಮ್ಮ ಅಮ್ಮನನ್ನು ಬಂದು ತಬ್ಬಿಕೊಳ್ಳುತ್ತಿರುವ ಮಗು ಯಾವುದೆಂದು ನಮಗೆ ಆಶ್ಚರ್ಯವಾಯ್ತು. ತನ್ನಮ್ಮನಲ್ಲ ಎಂದು ಗೊತ್ತಾದಾಗ ಆ ಪುಟ್ಟ ಕಂದಮ್ಮ ನಿರಾಶೆ, ಗಾಬರಿ, ಹೆದರಿಕೆ ಎಲ್ಲವನ್ನೂ ಒಟ್ಟಿಗೇ ಅನುಭವಿಸುತ್ತ ನಮ್ಮತ್ತ ನೋಡಿದಳು. ಅಮ್ಮ ಅಮ್ಮ ಎಂದು ಕರೆಯುತ್ತಾ ತಿರುಗಾಡಿದಳು. ಆಕೆಗೆ ಅಮ್ಮ ಸಿಗಲಿಲ್ಲ. ಇನ್ನೊಂದು ಬಾರಿ ಅಮ್ಮ ಎನ್ನುವಾಗ ಆಕೆ ಸಿಗದಿದ್ದರೆ ಜೋರಾಗಿ ಅಳುವುದು ಖಂಡಿತವಾಗಿತ್ತು. ಹೆದರ ಬೇಡ ಪುಟ್ಟ ಅಮ್ಮ ಬರ್ತಾರೆ ಎನ್ನುತ್ತಾ ನಾವು ಮೂವರೂ ಗೊತ್ತಿಲ್ಲದೇ ಸಂತೈಸುವ ಧ್ವನಿಯಲ್ಲಿ ಹೇಳಿದೆವು. ಇನ್ನೇನು ಅವಳ ದುಃಖದ ಕಟ್ಟೆಯೊಡೆಯಬೇಕು, ಆ ಹೊತ್ತಿಗೆ ಅವಳ ಅಮ್ಮ ಓಡಿ ಬರುವುದು ಕಾಣಿಸಿತು. ಮಗು ಓಡಿಹೋಗಿ ಅಮ್ಮನ ಕುತ್ತಿಗೆಗೆ ಜೋತುಬಿದ್ದು, ತನ್ನ ಪ್ರೀತಿ ಹಾಗೂ ಸಿಟ್ಟಿನ ಮೊತ್ತವೆಂಬಂತೆ ಅಮ್ಮನ ಹೊಟ್ಟೆಯ ಮೇಲೆ ಗುದ್ದಲು ತೊಡಗಿದಳು. ಅಮ್ಮ ಅಪ್ಪಿಕೊಂಡು ಮುತ್ತು ಕೊಟ್ಟು ಮುಂದೆ ಕರೆದೊಯ್ದಳು. ಆಕೆ ವಸ್ತುಪ್ರದರ್ಶನದಲ್ಲಿ ಒಮ್ಮೆ ಕಳೆದು ಹೋಗಿದ್ದ ಶ್ಯಾಮಲ, ನಯನ, ಕಿರಣ್, ಎಲ್ಲರನ್ನೂ ನೆನಪಿಸಿದಳು. ಚಿಕ್ಕವರಿರಲಿ, ದೊಡ್ಡವರಿರಲಿ ಜನಜಾತ್ರೆಯಲ್ಲಿ ಕಳೆದು ಹೋಗುವುದೆಂದರೆ – ಬಲ್ಲವರೇ ಬಲ್ಲರು ಅದರ ಭಯವಾ!
ಸ್ಫೂರ್ತಿ ವಾನಳ್ಳಿ