ಆಗಷ್ಟೇ ವೆನಿಲ್ಲಾ ರೈತರನ್ನು ನಿರಾಶೆಗೊಳಿಸಿತ್ತು. ಒಂದೆಡೆ ಅದರ ಬೆಲೆ ಮೂರೂವರೆ ಸಾವಿರದಿಂದ ನೂರಾ ಹತ್ತು-ಇಪ್ಪತ್ತಕ್ಕೆ ಇಳಿದಿತ್ತು. ಜೊತೆಗೆ ಗುಣಪಡಿಸಲಾಗದ ವಿಲ್ಟ್ ಯಾ ಕೊಳೆ ರೋಗವೊಂದು ವೆನಿಲ್ಲಾ ಬಳ್ಳಿಗಳನ್ನು ನಾಶಪಡಿಸತೊಡಗಿತ್ತು. ಆಗ ಅಬ್ಬರದೊಂದಿಗೆ ಆಗಮಿಸಿದ ಜತ್ರೋಫಾ ರೈತರಲ್ಲಿ ಮತ್ತೆ ಹೊಸ ಆಸೆ ಹುಟ್ಟಿಸಿತ್ತು. ಆ ಮಟ್ಟಿಗಾದರೂ ಜತ್ರೋಫಾಗೆ ಥ್ಯಾಂಕ್ಸ್ ಹೇಳಬೇಕು. ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ಅದು ಕಡಿಮೆಗೊಳಿಸಿರಲೇಬೇಕು!
ಬಹುಸಂಖ್ಯಾತ ರೈತರಿಗೆ ಜತ್ರೋಫಾ ಹೆಸರು ಹೊಸದಾದರೂ ಗಿಡ ಚಿರಪರಿಚಿತವಾಗಿತ್ತು. ಮಲೆನಾಡು ಭಾಗದಲ್ಲಿ ಕಳ್ಳಿ ಎಂಬ ಬೇಲಿಸಾಲಿನ ಈ ಗಿಡ ಬೆಳೆಸುವುದು ಸುಲಭ ಎನ್ನಿಸಿತ್ತು. ಪೂರಕವಾಗಿ ಜತ್ರೋಫಾಗೆ ಸಿಕ್ಕ ಪ್ರಚಾರವೂ ಅದೇ ನಿಟ್ಟಿನಲ್ಲಿತ್ತು. ಎಲ್ಲ ಮಾದರಿಯ ಭೂಮಿಯಲ್ಲಿ ಬೆಳೆಯಲು ಯೋಗ್ಯ, ಬದುಕಲು ಬೆಳೆಯಲು ಬಾಹ್ಯ ನೀರೇ ಬೇಡ. ನೆಟ್ಟರೆ ಸಾಕು, ಆರೈಕೆ ಬೇಡ ಎಂದೇ ವ್ಯಾಖ್ಯಾನಿಸಲಾಗಿತ್ತು. ನಿಜಕ್ಕಾದರೆ, ಈ ಮಾತು ಬೀಜಕ್ಕೆ ಮಾತ್ರ ಅನ್ವಯವಾಗುತ್ತಿತ್ತು!
ಸುಮ್ಮನೆ ಇನ್ನೊಂದು ಅಂಕಿಅಂಶವನ್ನು ಪರಿಶೀಲಿಸಿ. 2006-07ರ ಸಾಲಿನಲ್ಲಿ ಸರಿಸುಮಾರು 52.33 ಮಿಲಿಯನ್ ಮೆಟ್ರಿಕ್ ಟನ್ ಪೆಟ್ರೋ-ಡೀಸೆಲ್ ದೇಶದಲ್ಲಿ ಬಳಕೆಯಾಗಿದೆ. ಇದರೊಂದಿಗೆ ಶೇಕಡಾ ಒಂದರಷ್ಟು ಜತ್ರೋಫಾ ತೈಲವನ್ನು ಬೆರೆಸಬೇಕೆಂದರೂ 6,27,960 ಎಕರೆ ಭೂಪ್ರದೇಶದ ಜತ್ರೋಫಾ ಇಳುವರಿಯ ಅಗತ್ಯವಿದೆ!
ಜತ್ರೋಫಾ ತನ್ನ ಮೂರನೇ ವರ್ಷದಿಂದ ಪರಮಾವಧಿ ಬೆಳೆ ಅರ್ಥಾತ್ ಎಕರೆಗೆ 2,500 ಕೆ.ಜಿ. ದೊರಕಿಸಿಕೊಡುತ್ತದೆ ಎಂಬುದು ಒಂದು ಅಂದಾಜು. ಆದರೆ ಈ ಮೂರು ವರ್ಷಕ್ಕೆ ಶೇ. ಒಂದರ ಪ್ರಮಾಣದ ತೈಲಕ್ಕಾಗಿ ಜತ್ರೋಫಾ ಕೃಷಿಗೆ ತೊಡಗಿಸಬೇಕಾದ ಬಂಡವಾಳ ರೂ.628 ಕೋಟಿ! ಮುಖ್ಯವಾಗಿ ಗಮನಿಸಬೇಕಾದುದೆಂದರೆ, ಇದು ತೈಲ ಬೀಜ ತೆಗೆಯಲು ಮಾಡುವ ಖರ್ಚು. ಸಂಸ್ಕರಣೆಯ ಬಾಬತ್ತಿನದೇ ಬೇರೆಯ ಲೆಕ್ಕ.
ಆಗಿದ್ದೇನು? ಇದ್ದಕ್ಕಿದ್ದಂತೆ ಸರ್ಕಾರಕ್ಕೆ ಪರ್ಯಾಯ ಪೆಟ್ರೋಲ್‍ನ ಚಿಂತನೆ ಮೂಡಿತು. ಬಯೋ ಇಂಧನದ ಕೃಷಿಯನ್ನು ಉತ್ತೇಜಿಸಲು ಕೋಟಿಗಳ ಲೆಕ್ಕದಲ್ಲಿ ಹಣ ತೆಗೆದಿಟ್ಟಿತು. ವಿದೇಶಿ ಸಹಾಯಧನ ಹಾಗೂ ಸರ್ಕಾರದ ಬಜೆಟ್‍ನ್ನು ನುಂಗಿ ಹಾಕುವ ಏಕೈಕ ಉದ್ದೇಶದಿಂದ ಕೆಲವು ಸರ್ಕಾರೇತರ ಸಂಘಟನೆಗಳು ಜತ್ರೋಫಾ ಕೃಷಿಯ ಮುಂಚೂಣಿಯಲ್ಲಿ ನಿಂತವು. ಉಚಿತ ಬೀಜ ಹಂಚಿದವು. ದುಡ್ಡು ತಾವೆಣಿಸಿದವು. ಅವುಗಳ ಪ್ರಚಾರದಿಂದ ರೈತರು ಮತ್ತೆ ದಿಕ್ಕು ತಪ್ಪಿದರು. ಇತ್ತ ಮೀಸಲಿಟ್ಟ ಹಣ ಖರ್ಚಾಗುತ್ತಿದ್ದಂತೆ ಎನ್‍ಜಿಓಗಳು ಮಾಯವಾಗಿಬಿಟ್ಟಿವೆ!
ಸಸ್ಯಜನ್ಯ ಇಂಧನ ಪಡೆಯುವುದು ಸುಲಭದ ಮಾತಲ್ಲ. ಜತ್ರೋಫಾದಂತೆಯೇ ಪ್ರಚಾರದಲ್ಲಿರುವ ಹೊಂಗೆ ತಟಕ್ಕನೆ ತೈಲವಿರುವ ಬೀಜ ಕೊಡುವುದಿಲ್ಲ. ಇದು ಬಹು ವಾರ್ಷಿಕ ಬೆಳೆ. ಬೆಳವಣಿಗೆ ನಿಧಾನ. ಈ ಮಧ್ಯೆ ಜನ, ಸರ್ಕಾರ ಸೇರಿ ಯಾವ ಪರಿ ಅರಣ್ಯನಾಶ ಮಾಡಿದ್ದೇವೆಂದರೆ ಕಾಡುಪ್ರಾಣಿಗಳು ಊರಲ್ಲಿಯೇ ವಾಸಿಸುವ ಅನಿವಾರ್ಯತೆ. ಇಂತಹ ವೇಳೆ ಪ್ರಾಣಿಗಳ ಕಾಟ ತಪ್ಪಿಸಿ ಎಕರೆಗಟ್ಟಲೆ ಜತ್ರೋಫಾ, ಹೊಂಗೆ ಕೃಷಿ ದಕ್ಕೀತೆ? ಸಾಗರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಹೊಂಗೆ ಬೆಳೆಯಲು ಮಾಡಿದ ಪ್ರಯತ್ನ ಕಾಡೆಮ್ಮೆ, ಕೋಣಗಳ ಲೂಟಿಗೆ ತುತ್ತಾಗಿರುವುದು ನೆನಪಾಗುತ್ತದೆ.
ನಾಲ್ಕು ವರ್ಷಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಇನ್ನು 20 ವರ್ಷ ಹೋದರೂ ಇದೇ ಪರಿಸ್ಥಿತಿಯೇ. ಜತ್ರೋಫಾ ಕೆ.ಜಿ. ಬೀಜಕ್ಕೆಷ್ಟು ದರ ಎಂಬುದು ನಿಗದಿಯಾಗಿಲ್ಲ. ಖರೀದಿಸುವ ಕಂಪನಿಗಳು ಹುಟ್ಟಿದಂತಿಲ್ಲ. ತೈಲ ತೆಗೆಯುವ ತಂತ್ರಜ್ಞಾನ, ಯಾಂತ್ರಿಕತೆ, ಪೆಟ್ರೋಲ್ ಜೊತೆ ಬೆರೆಸುವ ವ್ಯವಸ್ಥೆಗಳು ಸಿದ್ಧಗೊಂಡಿರುವುದು ಅನುಮಾನ. ಹಿಂದೊಮ್ಮೆ ಕೋಕೋ ಬೆಳೆಯ ವಿಚಾರದಲ್ಲೂ ಇಂತದ್ದೇ ಘಟಿಸಿತ್ತು. ಸರ್ಕಾರೀ ವ್ಯವಸ್ಥೆಯ ಪ್ರಚಾರಕ್ಕೆ ಮರುಳಾದ ರೈತರು ಕೃಷಿ ಇಲಾಖೆ ಒದಗಿಸಿದ ಕೋಕೋ ಗಿಡ ನೆಟ್ಟರು. ಬೀಜ ಕೊಳ್ಳುವವರಾರು? ನಿಕ್ಕಿಯಾಗಲೇ ಇಲ್ಲ. ಅದೃಷ್ಟಕ್ಕೆ ಕ್ಯಾಂಪ್ಕೋ ಖರೀದಿಸುತ್ತಿರುವುದರಿಂದ ಕೋಕೋ ಉಳಿದಿದೆ. ಆದರೆ ಕ್ಯಾಂಪ್ಕೋ ಒಂದೇ ಖರೀದಿದಾರ ಎಂಬುದು ಯಾವತ್ತೂ ರೈತನ ತಲೆ ಮೇಲೆ ತೂಗುತ್ತಿರುವ ಕತ್ತಿ ಎಂಬುದೂ ನಿಜ. ಹಾಗೆ ನೋಡಿದರೆ ತಾಳೆ ಕೃಷಿಯದ್ದೂ ಯಥಾವತ್ ಇದೇ ಕತೆ. ಸರ್ಕಾರವೂ ಬದಲಿಸಿಲ್ಲ, ರೈತರೂ!
ನಿಜಕ್ಕೂ ಆ ಕಳ್ಳೀ ಗಿಡ ಜೀವಂತ ಬೇಲಿಯ ವಿಧಾನವಾಗಿ ನಿರುಮ್ಮಳವಾಗಿತ್ತು. ಒಮ್ಮೆ ಬದುಕಿಸಿ, ಬೆಳೆಸಿ ಬಿಟ್ಟರೆ ವರ್ಷಕ್ಕೊಮ್ಮೆ ಟ್ರಿಮ್ ಮಾಡಿದರೆ ಸಾಕು. ಅಂತಹ ಕಳ್ಳಿಯನ್ನು ಜತ್ರೋಫಾವಾಗಿ ಪುನರ್ನಾಮಕರಣ ಮಾಡಿ ಬೇಲಿಯ ಒಳಗೆ ಕರೆಸಿದ್ದು ವ್ಯರ್ಥ. ಮತ್ತೆ ಕಳ್ಳಿ ಬೇಲಿಯ ಸದಸ್ಯನಾಗಿ ತನ್ನ ಗಾರ್ಡ್ ಕೆಲಸ ಮುಂದುವರೆಸಿದೆ. ಇನ್ನೇನು ಆದೀತು?
– ಮಾ.ವೆಂ.ಸ.ಪ್ರಸಾದ್