ದೇಶದ ಬಡತನವನ್ನು ತೊಡೆಯುವ ಮಹತ್ವಾಕಾಂಕ್ಷೆಯ ಯೋಜನೆಯೇ ಕೇಂದ್ರಸರ್ಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಉತ್ತರ ಕರ್ನಾಟಕದಂತಹ ತೀರಾ ಹಿಂದುಳಿದ ಪ್ರದೇಶದ ಜನತೆ ಉದ್ಯೋಗಕ್ಕಾಗಿ ವಲಸೆ ಹೋಗಿ ಸಂಕಷ್ಟಕ್ಕೊಳಗಾಗುವುದನ್ನು ತಡೆಯುವುದು ಕೇಂದ್ರಸರ್ಕಾರದ ಅಭಿಲಾಷೆಯಾಗಿತ್ತು. ಕೊನೆಪಕ್ಷ ಅದು ಹಾಗೆಂದುಕೊಂಡಿತ್ತು. ಇವತ್ತು, ಉದ್ಯೋಗ ಖಾತ್ರಿ ಯೋಜನೆಯಿಂದ ಇನ್ನಷ್ಟು ರೈತರು ಆತ್ಮಹತ್ಯೆಯ ಕಡೆಗೆ ನಡೆಯುವಂತಾದರೆ ಅಚ್ಚರಿಯಿಲ್ಲ.
ಖಾತ್ರಿ ಯೋಜನೆ ಕೃಷಿ ಕಾರ್ಮಿಕರ ಸಮಸ್ಯೆಯಲ್ಲಿರುವ ರೈತ ಹಿಡುವಳಿದಾರರನ್ನು ಬಾಣಲೆಯಿಂದ ಬೆಂಕಿಗೆ ದಬ್ಬಿದೆ. ಗ್ರಾಮ ಪಂಚಾಯತ್‍ಗಳ ಕಪಿಮುಷ್ಟಿಯಲ್ಲಿರುವ ಈ ಯೋಜನೆಯ ನಿರ್ಧಾರಕ ಶಕ್ತಿ ಅಪಾಯದ ಕಂದಕವನ್ನೇ ತೆರೆದಿದೆ. ಮೊದಲ ವರ್ಷ ಯೋಜನೆಯ ನಿಯಮಗಳು ಕಠಿಣವಾಗಿದ್ದುದರಿಂದ ಯಾವುದೇ ಅವ್ಯವಹಾರ ನಡೆಯಲಿಲ್ಲ. ಹಾಗೆಂದುಕೊಂಡೆವು ನಾವು. ಕಳೆದ ವರ್ಷದಿಂದ ಅದೂ ಸುಳ್ಳಾಗಿದೆ. ಅಧಿಕಾರಿ ವರ್ಗಕ್ಕೆ ಈ ಯೋಜನೆಯಲ್ಲಿ ಹಣ ಕೊಳ್ಳೆಹೊಡೆಯುವ ನೂರು ದಾರಿಗಳು ಪತ್ತೆಯಾದವು. ಕೃಷಿ ಕಾರ್ಮಿಕರಿಗೆ ವಂಚಿಸುತ್ತಿರುವ ಪ್ರಕರಣಗಳ ಜೊತೆಜೊತೆಗೆ ಕೃಷಿ ಚಟುವಟಿಕೆಗಳನ್ನಷ್ಟೂ ನಮ್ಮ ದೇಶದ ರೈತ ನಿಲ್ಲಿಸುವ ಪರಿಸ್ಥಿತಿ ಬಂದರೆ ಅದು ಅತಿಶಯೋಕ್ತಿಯ ಸಂಗತಿಯಲ್ಲ.
ಬದುಕು ಸಾಗಲೇಬೇಕು. ಇದ್ದಕ್ಕಿದ್ದಂತೆ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನೇ ನಿಲ್ಲಿಸಿಬಿಡುತ್ತದೆ ಎಂದುಕೊಳ್ಳುವಂತಿಲ್ಲ. ಇಲ್ಲಿ ರೈತರು ಸವಾಲನ್ನು ಸ್ವೀಕರಿಸಲೇಬೇಕು. ಬಿಡಿ, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲವುದು ನಮಗೆ ಹೊಸ ವಿಷಯವೇನಲ್ಲ. ಮೊತ್ತಮೊದಲಾಗಿ, ಖಾತ್ರಿ ಯೋಜನೆಯಡಿ ನಡೆಯುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವುದರಿಂದ ನೇರ ಲಾಭ ಹಳ್ಳಿಗರಿಗೇ ಗಿಟ್ಟುತ್ತದೆ. ಉದಾ.ಗೆ ಹಸುರೀಕರಣ ಯೋಜನೆ ಅಥವಾ ಕೆರೆ ಹೂಳು ತೆಗೆಯುವ ಕಾಮಗಾರಿ ಸಮರ್ಪಕವಾದರೆ ಕೃಷಿ ಬದುಕಿಗೆ ಪೂರಕ ಅನುಕೂಲ ಸಿಗುತ್ತದಲ್ಲವೇ?
ಖಾತ್ರಿ ಭ್ರಷ್ಟಾಚಾರ ತಡೆಗೆ ಇರುವ ಪರಿಣಾಮಕಾರಿ ಮಾರ್ಗವೆಂದರೆ ಅಂತರ್ಜಾಲದಲ್ಲಿ ನೇರವಾಗಿ ಉದ್ಯೋಗ ಖಾತ್ರಿ ವೆಬ್‍ಸೈಟ್‍ನ ಮೂಲಕ ದೂರು ದಾಖಲಿಸುವುದು. ಗ್ರಾಮ ಪಂಚಾಯ್ತಿ ಅಥವಾ ತಾಲ್ಲೂಕು ಪಂಚಾಯ್ತಿ ಹಂತದಲ್ಲಿ ದೂರು ದಾಖಲಿಸಲು ಹೊರಟಾಗ ವೈಯುಕ್ತಿಕ ಮುಜುಗರಗಳು ಬೇರೆ. ಜೊತೆಗೆ ದೂರು ಅರ್ಜಿ ಯಾರಿಗೆ ಕೊಡಬೇಕು ಎಂದು ಎಡತಾಕುವುದರಲ್ಲೇ ಸುಸ್ತಾಗುವ ನಾವು ಕೊನೆಗೆ ನಮ್ಮ ದೂರಿನ ಗತಿಯೂ ತಿಳಿಯದೆ ಸುಮ್ಮನಾಗಬೇಕಾಗುತ್ತದೆ. ಆದರೆ ಆನ್‍ಲೈನ್‍ನಲ್ಲಿ ದೂರಿನ ಪ್ರಗತಿಯನ್ನು ಕೂಡ ಇಂಟರ್‍ನೆಟ್‍ನಲ್ಲಿ ಪರಿಶೀಲಿಸುತ್ತಿರಬಹುದು.
http://nrega.nic.in ಎಂಬ ಅಂಕಿತವಿರುವ ವೆಬ್‍ಸೈಟ್‍ನೊಳಗೆ ಪ್ರವೇಶಿಸಬೇಕು. ಅಲ್ಲಿ http://164.100.12.7/statepage.asp?check=pgr&lvl=citizen ಎಂಬ ಶೀರ್ಷಿಕೆಗೆ ಕ್ಲಿಕ್ ಮಾಡಿದರೆ ದೇಶದ ಎಲ್ಲ ರಾಜ್ಯಗಳ ಪಟ್ಟಿ ಪ್ರಕಟಗೊಳ್ಳುತ್ತದೆ. ಇಲ್ಲಿ ಕರ್ನಾಟಕ ಎಂಬಲ್ಲಿಗೆ ಪ್ರವೇಶಿಸಿದರೆ ದೂರು ದಾಖಲೆಗೆ ನಿಗದಿತ ಅರ್ಜಿ ನಮೂನೆ ಕಂಡುಬರುತ್ತದೆ. ತುಂಬಾ ಸರಳವಾಗಿರುವ ದೂರು ಪತ್ರವನ್ನು ಪರಿಪೂರ್ಣವಾಗಿ ತುಂಬಬೇಕು. ನಕ್ಷತ್ರದ ಗುರುತಿರುವ ಕಾಲಂಗೆ ಉತ್ತರಿಸುವುದು ಕಡ್ಡಾಯ. ದೂರುದಾರರ ವಿವರ, ದೂರಿನ ಮಾದರಿ, ದೂರುವ ಗ್ರಾಮ ಪಂಚಾಯ್ತಿ, ಅವ್ಯವಹಾರದ ವಿವರ ಮೊದಲಾದ ವಿವರಗಳನ್ನು ಕೊಟ್ಟು save compaint ಕೊಟ್ಟರೆ ದೂರು ದಾಖಲಾಗಿ ನಮಗೊಂದು ದೂರು ದಾಖಲಾತಿ ಸಂಖ್ಯೆ ಲಭ್ಯವಾಗುತ್ತದೆ. ದೂರು ದಾಖಲಿಸಿದ ಒಂದು ವಾರದ ಬಳಿಕ ಇದೇ ವೆಬ್‍ಸೈಟ್‍ನ http://164.100.12.7/netnrega/citizen_html/compdetail.aspx?state_code=15 ಗುರುತಿನ ಮೇಲೆ ಕ್ಲಿಕ್ ಮಾಡಿ ದೂರು ಸಂಖ್ಯೆಯನ್ನು ಹಾಕಿ ಮುಂದುವರೆದರೆ ಅಹವಾಲಿನ ಸ್ಥಿತಿಗತಿಯ ಇತ್ತೀಚಿನ ಮಾಹಿತಿ ಸಿಗುತ್ತದೆ. ದೂರು ನೇರವಾಗಿ ಯೋಜನೆಯ ಪ್ರಮುಖರನ್ನೇ ತಲುಪುವುದರಿಂದ ಪರಿಣಾಮಕಾರಿ ತನಿಖೆಯನ್ನು ನಿರೀಕ್ಷಿಸಲು ಸಾಧ್ಯ. ಇ-ದೂರಿನ ಕಾರಣವೇ ಅವ್ಯವಹಾರ ನಡೆಸಿದ ಅಧಿಕಾರಿಗಳು ಕರ್ನಾಟಕದಲ್ಲೂ ಅಮಾನತ್ತುಗೊಂಡ ವಿವರಗಳನ್ನು ನಾವಿಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಗ್ರಾಮ ಪಂಚಾಯ್ತಿಗೆ ಹೋಗಿ ಕಷ್ಟಪಟ್ಟು ತಿಳಿಯಬಹುದಾದ ಮಾಹಿತಿಗಳೆಲ್ಲ ಇಲ್ಲಿ ಸುಲಭ ಲಭ್ಯ. ನಮ್ಮ ಜಾಬ್ ಕಾರ್ಡ್ ನೊಂದಾಯಿತವಾಗಿದೆಯೇ, ನಾವು ಕೊಟ್ಟ ಕ್ರಿಯಾಯೋಜನೆ ಮಂಜೂರಾಗಿದೆಯೇ, ಕಾಮಗಾರಿಗೆ ಬರಬೇಕಾದ ಹಣವನ್ನು ದಾಖಲೆಯಲ್ಲಿ ಏನು ಮಾಡಲಾಗಿದೆ ಎಂಬ ಮೂಡಬಹುದಾದ ಎಲ್ಲ ಪ್ರಶ್ನೆಗಳಿಗೆ ಮಾಹಿತಿಯನ್ನು ಇಲ್ಲಿ ಅಳವಡಿಸಲಾಗಿದೆ.
ತೀರಾ ಸರಳವಾದ ಇಂಗ್ಲೀಷ್ ಬರುವವರಿಗೂ ದೂರು ದಾಖಲಿಸುವುದು ಕಷ್ಟವಲ್ಲ. ಮಾಹಿತಿ ಪಡೆಯಲಂತೂ ನಾವು `ಕನ್ನಡ’ವನ್ನೆ ಆಯ್ಕೆ ಮಾಡಿಕೊಳ್ಳಬಹುದು. ವಿವರಗಳು ಆಗ ಬೇಕಾದ ಪ್ರಾದೇಶಿಕ ಭಾಷೆಯಲ್ಲಿ ಕಂಡುಬರುತ್ತದೆ. ಪ್ರತಿದಿನ ವೆಬ್‍ಸೈಟ್ ನವೀಕರಣಗೊಳ್ಳುತ್ತಲೇ ಇರುವುದರಿಂದ ಮಾಹಿತಿ ತಾಜಾ ಆಗಿಯೂ ಇರುತ್ತದೆ.
ಪ್ರಶ್ನೆ ಅದಲ್ಲ. ರೈತನನ್ನು ವೆಬ್‍ಸೈಟ್ ಪರಿಹಾರಕ್ಕೆ ಸೂಚಿಸಿದರೆ ಅದು ಕಾರ್ಯಸಾಧುವೇ? ಇದಕ್ಕೆ ಖಂಡಿತ ಎಂಬ ಉತ್ತರವನ್ನೆ ಕೊಡಬೇಕಾಗುತ್ತದೆ. ಖುದ್ದು ರೈತನಿಗೆ ಆ ಜ್ಞಾನ ಇಲ್ಲವೆಂದಾದಲ್ಲಿ ಸಹ ಗೊಂದಲ ಬೇಕಾಗಿಲ್ಲ. ಈ ದಿನಗಳಲ್ಲಿ ಆತನ ಮಕ್ಕಳು, ಮೊಮ್ಮಕ್ಕಳು ಅಕ್ಷರಸ್ಥರಾಗಿರುವುದು ಅಥವಾ ಉದ್ಯೋಗಸ್ಥರಾಗಿರುವುದು ಖಚಿತ. ಅವರನ್ನು ಈ ಕೆಲಸಕ್ಕೆ ನಿರ್ದೇಶಿಸಬಹುದು. ಕೊನೆಪಕ್ಷ ಸೈಬರ್ ಕೆಫೆಯ ನಿರ್ವಾಹಕನ ಬೆಂಬಲದಿಂದ ಕೂಡ ರೈತ ದೂರು ದಾಖಲೆ, ಮಾಹಿತಿ ಪಡೆಯುವ ಕೆಲಸ ಮಾಡಬಹುದು. ಕಾಲದ ಓಟದಲ್ಲಿ ಅದರೊಂದಿಗೆ ನಾವೂ ಹೆಜ್ಜೆ ಹಾಕಲೇಬೇಕಲ್ಲವೇ?
ವಾಸ್ತವವಾಗಿ, ರೈತ ಸಂಘಟನೆಗಳು ಈ ನಿಟ್ಟಿನಲ್ಲಿಯೇ ಸಂಪೂರ್ಣವಾಗಿ ವಿಫಲವಾಗಿವೆ. ಇನ್ನೂ ಕರ ನಿರಾಕರಣೆ, ಪಂಪ್ ಮೀಟರ್ ಕಿತ್ತು ಎಸೆಯುವ ಚಳುವಳಿಯನ್ನೇ ಮಾಡುತ್ತ ಕುಳಿತರೆ ಅಥವಾ ಅದೊಂದನ್ನೇ ನೆಚ್ಚಿಕೊಂಡರೆ ರೈತಪರ ಇದ್ದಂತಾಗುವುದಿಲ್ಲ. ಖಾತ್ರಿ ಭ್ರಷ್ಟಾಚಾರ ತಡೆಗೆ ಓರ್ವ ಕಂಪ್ಯೂಟರ್ ಅಕ್ಷರಸ್ಥನನ್ನು ಆಯ್ಕೆ ಮಾಡಿಕೊಂಡು ರೈತಸಂಘಟನೆಗಳು ಈ ನಿಟ್ಟಿನಲ್ಲಿ ಹೋರಾಟ ಮಾಡಬಹುದಿತ್ತು.
ಸರ್ಕಾರ ರೈತರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ಪ್ರಾಮಾಣಿಕ ಜಾರಿಗೆ ಈ ಸಂಘಟನೆಗಳು ಕಟಿಬದ್ಧರಾಗಬಹುದಿತ್ತು. ಸುಜಲಾ, ಜಲಸಂವರ್ಧನ ಮೊದಲಾದ ಯೋಜನೆಗಳಲ್ಲಿ ಇಲಾಖೆಯವರು ಮೇಯುವುದನ್ನು ತಪ್ಪಿಸಿದ್ದರೂ ಸಾಕಿತ್ತು, ಗ್ರಾಮ ಅಭಿವೃದ್ಧಿ ಸಾಧ್ಯವಿತ್ತು. ರೈತರಿಗೆ ಬರಬೇಕಾದ ಸಹಾಯಧನ, ಬೆಂಬಲ ಬೆಲೆ ಪೂರ್ಣವಾಗಿ ಸಿಕ್ಕುವಂತೆ ಮಾಡಿದ್ದರೆ ಭೇಷಿತ್ತು. ಯಶಸ್ವಿ ಕಾರ್ಯಾಚರಣೆ ಮಾಡಬಹುದಾದ ಇಂತಹ ಹತ್ತಾರು ದೃಷ್ಟಾಂತಗಳನ್ನು ಕೊಡಬಹುದು.
ಅವೂ ಕೈ ಚೆಲ್ಲಿವೆ, ಭ್ರಷ್ಟಗೊಂಡಿವೆ ಎಂಬ ಹಿನ್ನೆಲೆಯಲ್ಲಿ ಇ-ದೂರು ದಾಖಲಿಸುವ ಕ್ರಮ ರೈತನಿಗೊಂದು ಸುವರ್ಣಾವಕಾಶ. ಆ ಪ್ರಯತ್ನ ಉದ್ಯೋಗ ಖಾತ್ರಿ ಕುರಿತ ಅಂತರ್ಜಾಲ ದೂರಿನ ಕ್ಷೇತ್ರದಿಂದಲೇ ಆರಂಭಿಸಿ.
– ಮಾ.ವೆಂ.ಸ.ಪ್ರಸಾದ್
- Advertisement -
- Advertisement -
- Advertisement -
- Advertisement -