ಸ್ವಲ್ಪ ಫ್ಲಾಶ್‍ಬ್ಯಾಕ್‍ಗೆ ಹೋಗೋಣ. ಆಗ ಒಂದನೇ ತರಗತಿಗೆ ಒಂದೇ ಪಾಠದ ಪುಸ್ತಕ. ಕ- ಕಮಲ, ಅಂ- ಅಂಜೂರಗಳನ್ನು ಕಲಿಯುತ್ತಿದ್ದ ಕಾಲ. ಆದರೆ ಆ ಕಾಲದಲ್ಲೂ ಕಾಪಿ ಪುಸ್ತಕಗಳಿದ್ದವು. ಕನ್ನಡ ಹಾಗೂ ಇಂಗ್ಲೀಷ್‍ನ ವಿವಿಧ ಮಾದರಿಯ ಕಾಪಿ ಪುಸ್ತಕಗಳಲ್ಲಿ ನಾಲ್ಕು ಗೆರೆಯ, ಮೂರು ಗೆರೆಯ ನೋಟ್ ಪುಸ್ತಕಗಳು, ಮುದ್ರಿತ ಶೀರ್ಷಿಕೆಗಳ ಕಾಪಿ ಪುಸ್ತಕಗಳು…..ಎಷ್ಟೆಲ್ಲ? ಈಗಿನ ದಿನಗಳಲ್ಲಿ, ಒಂದನೇ ತರಗತಿಗೇ 5-6 ಪಠ್ಯ ಪುಸ್ತಕ ಹೊರುವ ಮಕ್ಕಳಿಗೆ ಕಾಪಿ ಪುಸ್ತಕ ಬಹುಪಾಲು ಇಲ್ಲ. ಆದರೆ……
ಯುರೋಪಿಯನ್ ದೇಶಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಒಬ್ಬ ಉದ್ಯೋಗಾಕಾಂಕ್ಷಿ ಎಷ್ಟೇ ಡಿಗ್ರಿಗಳನ್ನು ಪಡೆದಿರಲಿ, ಅಸಾಧ್ಯ ಬುದ್ಧಿವಂತನಾಗಿರಲಿ – ನೌಕರಿ ನೀಡುವಾತ ಅದನ್ನೆಲ್ಲವನ್ನು ಮಾತ್ರ ಪರಿಗಣಿಸುತ್ತಿಲ್ಲ. ಉದ್ಯೋಗಾಕಾಂಕ್ಷಿಯ ಕೈ ಬರಹವನ್ನು ಮುದ್ದಾಂ ಪರಿಶೀಲಿಸಲಾಗುತ್ತದೆ!!
ಗ್ರಾಫಾಲಜಿಯ ಆಧಾರದಲ್ಲಿ ಮನುಷ್ಯನ ವ್ಯಕ್ತಿತ್ವ, ಅವರ ಸಾಮಥ್ರ್ಯ, ಅವರ ಬೆಳವಣಿಗೆ ಸಾಧ್ಯತೆಗಳನ್ನು ಹೇಳಬಹುದು. ಇವಕ್ಕಿಂತ ಮುಖ್ಯವಾಗಿ, ಆ ಮನುಷ್ಯನ ಸಾಚಾತನವನ್ನೂ ಗ್ರಾಫಾಲಜಿಯನ್ನು ಬಳಸಿ ಕಂಡುಕೊಳ್ಳಬಹುದು ಎನ್ನುತ್ತಾರೆ ಗ್ರಾಫಾಲಜಿಸ್ಟ್ ಮಾರ್ಗರೇಟ್ ವೈಟ್. ಉದ್ಯೋಗಗಳನ್ನು ತುಂಬುವ ಕೆಲಸದಲ್ಲಿ ಇವರ ಗ್ರಾಫಾಲಜಿಯೇ ಯೂರೋಪ್‍ನಲ್ಲಿ ಮಾನದಂಡ!
ಉದ್ಯೋಗಾಕಾಂಕ್ಷಿಗಳು ಕಳಿಸುವ ಇ ಮೇಲ್‍ಗಳು ಅರ್ಧ ಸತ್ಯವನ್ನಷ್ಟೇ ಹೇಳುತ್ತವೆ. ಪ್ರತಿ ಮನುಷ್ಯ ತನ್ನ ಕುರಿತು ಅತಿರಂಜಿತಗೊಳಿಸಿಕೊಳ್ಳುವುದು ಸಹಜ. ಹೋಗಲಿ, ಸಂದರ್ಶನದ ಮೇಲೆ ಆತನನ್ನು ಅಧ್ಯಯನ ಮಾಡುತ್ತಾರೆಂದರೂ ಒಟ್ಟಾರೆ ಮನುಷ್ಯ ಕಂಪನಿಯ ಅಗತ್ಯವನ್ನು ಅರಿತು ನಟಿಸಿಬಿಡಬಹುದು. ಪ್ಸಿಕೋ ಮೆಟ್ರಿಕ್ ಸಮೀಕ್ಷೆಗಳು ವಿಫಲವಾಗುತ್ತಿವೆ ಎಂದು ಕಂಪನಿಗಳೇ ಒಪ್ಪಿಕೊಳ್ಳುತ್ತಿರುವ ವೇಳೆಯಲ್ಲಿ ಗ್ರಾಫಾಲಜಿಗೆ ಮಹತ್ವ ಬಂದಿದೆ.
ಪ್ರಸ್ತುತ ಬಹುಪಾಲು ಕಂಪನಿಗಳು ತಾವು ಗ್ರಾಫಾಲಜಿಯನ್ನು ಆಯ್ಕೆಯ ಆಧಾರವಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಘೋಷಿಸುತ್ತಿಲ್ಲ. ಗ್ರಾಫಾಲಜಿಯ ಬಗ್ಗೆ ಪೂರ್ಣ ನಂಬಿಕೆ ಬಾರದಿರುವುದೇ ಇದಕ್ಕೆ ಕಾರಣ. ಲಂಡನ್‍ನ ಗ್ರಾಫಾಲಜಿ ಇನ್ಸಿಟ್ಯೂಷನ್ ಮಾತ್ರ ಅಭ್ಯರ್ಥಿಯ ಒಪ್ಪಿಗೆ ಪಡೆದೇ ಪರೀಕ್ಷಿಸುವುದು ನೈತಿಕ ಧರ್ಮ ಎನ್ನುತ್ತದೆ.
ಸ್ವಾರಸ್ಯವೆಂದರೆ, ಕೆಟ್ಟ ಕೈ ಬರಹದವ ಎಂದ ಕೂಡಲೇ ಆ ವ್ಯಕ್ತಿ ಸೋಮಾರಿ, ಕಳಪೆ ಎಂದುಕೊಳ್ಳುವುದು ತಪ್ಪು. ಅದು ಬುದ್ಧಿವಂತಿಕೆ ಹಾಗೂ ಉತ್ಸಾಹಗಳ ಪ್ರತಿಫಲನವಾಗಿರಬಹುದು! ಗಮನಿಸಬೇಕಾದುದು ಅಕ್ಷರಗಳಲ್ಲ, ಬರಹದ ಶೈಲಿ. ಸಾಮಾನ್ಯವಾಗಿ ಗಮನಿಸಿದಂತೆ, ಒಂದು ಮನೆಯ ಹಲವರ ಕೈ ಬರಹಗಳಲ್ಲಿ ದಟ್ಟ ಹೋಲಿಕೆಗಳಿರುತ್ತವೆ. ಅವರ ಸ್ವಭಾವಗಳೂ ಒಂದೇ ಲಯದಲ್ಲಿ ಇರುತ್ತವೆಂದ ಮೇಲೆ ಗ್ರಾಫಾಲಜಿ ಸತ್ಯವನ್ನು ಹೇಳುತ್ತದಲ್ಲವೇ?
ಕೈ ಬರಹದ ಮೊದಲ ಕೆಲವು ಸಾಲುಗಳವರೆಗೆ ಬೇರೆಯವರನ್ನು ದಿಕ್ಕು ತಪ್ಪಿಸುವಂತೆ ಬರೆಯಬಹುದಂತೆ. ಆದರೆ ಆ ಅಭ್ಯಥಿಯ ಆಸಕ್ತಿಯ ವಿಷಯದಲ್ಲಿ ಹೆಚ್ಚು ಬರೆಯಲು ಹೇಳಿದರೆ ನಿಜ ಬರಹ ದಕ್ಕುತ್ತದೆ ಎನ್ನುತ್ತಾರೆ ಮಿಸ್ ವೈಟ್.
ಕೈ ಬರಹಗಳು ವ್ಯಕ್ತಿತ್ವದ ಬಗ್ಗೆ ಹೇಳುತ್ತವೆ ಎನ್ನುವುದರ ಬೆನ್ನಲ್ಲೇ ಕಾಪಿ ಬರಹಗಳಿಂದ ಏನು ಉಪಯೋಗ ಎಂಬ ಪ್ರಶ್ನೆ ಮೂಡುವುದು ಸಹಜ. ಹೇಗೆ ವ್ಯಕ್ತಿತ್ವದ ಓರೆ ಕೋರೆಗಳನ್ನು ತಿದ್ದಿಕೊಳ್ಳಬಹುದೋ, ಆ ಯತ್ನ ಕಾಪಿ ಬರಹದಲ್ಲಿ ಎದ್ದು ಕಾಣಬಹುದು. ವಾಸ್ತವವಾಗಿ, ಕಾಪಿ ಬರಹ ಒಂದು ಧ್ಯಾನ. ಆ ಕೆಲಸಕ್ಕೆ ಅತಿ ಹೆಚ್ಚಿನ ತಾಳ್ಮೆ, ಶ್ರಮ ಬೇಕು. ಅಂದಮೇಲೆ ಬದಲಾಗುವ ಕೈ ಬರಹ ಮಾರ್ಪಾಡಾಗುವ ಸ್ವಭಾವಕ್ಕೂ ಸಾಕ್ಷಿ ಹೇಳುತ್ತದೆ ಎಂಬುದು ದೃಢಪಡುತ್ತದೆ.
ಕೈ ಬರಹ ಮನುಷ್ಯನ ಒಳ ಭಾವಗಳನ್ನು ಹೊರಗೆಡಹುತ್ತದೆ. ಹಾಗಾಗಿ ನಿಮ್ಮ ಕೈ ಬರಹವನ್ನು ನಿರ್ಲಕ್ಷಿಸಬೇಡಿ. ಅಷ್ಟೇಕೆ, ನಿಮಗೆ ಒಂದು ಒಳ್ಳೆಯ ಉದ್ಯೋಗ ಸಿಕ್ಕಲೂ ಇದೇ ಕಾರಣ ಆಗಬಹುದು. ಶುರು ಹಚ್ಚಿ ಕಾಪಿ ಪುಸ್ತಕ ಬರೆಯಲು!!
– ಮಾ.ವೆಂ.ಸ.ಪ್ರಸಾದ್