23.1 C
Sidlaghatta
Saturday, December 21, 2024

ಕೃಷಿಕ ಸಂಬಂಧಗಳಿಗೆ ಹೊಸ ಪರಿಭಾಷೆಯ ಅಗತ್ಯ

- Advertisement -
- Advertisement -

ಸಾಗರಕ್ಕೆ ಹತ್ತಿರದ ಹಳ್ಳಿಯೊಂದರಿಂದ ಯುವಕನೊಬ್ಬ ಪ್ರತಿದಿನ ಪೇಟೆಗೆ ಬರುತ್ತಾನೆ. ಆದರೆ ಆತನ ಸಂಬಳ ಊಟ ಓಡಾಟಕ್ಕೆ, ಖರ್ಚಿಗೆ ಸಾಲುತ್ತಿಲ್ಲ. ಮನೆಯಲ್ಲಿ ಇರುವವ ಅವನೊಬ್ಬನೇ. ಅವರಿಗೆ ವಿಸ್ತಾರವಾದ ಹುಲ್ಲು ಬೆಳೆವ ಭೂಮಿ ಇದೆ. ಆದರೆ ಜಾನುವಾರನ್ನು ಬ್ಯಾಣಕ್ಕೆ ಒಯ್ಯುವವರಿಲ್ಲದೆ ಬೇರೆಯವರಿಂದ ಹುಲ್ಲು ಕೊಳ್ಳುತ್ತಾರೆ. ಸಾಕಷ್ಟು ಅಡಿಕೆ ತೋಟವಿದೆ. ಅದಕ್ಕೂ ಮುಖ್ಯವಾಗಿ ಈ ಯುವಕನಿಗೆ ಕೃಷಿಯಲ್ಲಿ ಅಪರಿಮಿತ ಆಸಕ್ತಿ ಇದೆ. ಹೊಸ ಹೊಸ ಯೋಜನೆ ಯೋಚನೆಗಳು ಕಾರ್ಯಗತವಾಗಲು ಕಾಯುತ್ತಿವೆ. ಈ ಕನಸುಗಳು ಮತ್ತು ಯುವಕನ ಮಧ್ಯೆ ವಾಸ್ತವವಿದೆ. ವಾಸ್ತವದಿಂದಾಗಿಯೇ ಆತ ದಿನಾ ಪೇಟೆಗೆ ಬರುವುದು, ಅವನು ಮತ್ತು ಕನಸುಗಳ ಮಧ್ಯದಲ್ಲಿರುವ ವಾಸ್ತವ ಬೇರ್ಯಾರೂ ಇಲ್ಲ. ನಂಬಿ, ಇರುವುದು ಅವನಪ್ಪ!
ಮಗ ತಮ್ಮ ಮನೆಯ ಕೃಷಿ ಕಾರ್ಯಗಳನ್ನು ನೋಡಿಕೊಳ್ಳಬೇಕೆಂಬ ಬಯಕೆಯೇನೋ ತಂದೆಗಿದೆ. ಜೊತೆಗೆ ಮಗನಿಗೆ ಪೂರ್ಣ ಜವಾಬ್ದಾರಿ ವಹಿಸಿದರೆ ಇಲ್ಲಸಲ್ಲದು ಮಾಡಿ ಅನಾಹುತ ಸೃಷ್ಟಿಸಿಯಾನೆಂಬ ಭಯ ಈ ಸಂಪ್ರದಾಯವಾದಿಗೆ. ಹುಡುಗು ಮುಂಡೇದು ಎಂಬ ಉದ್ಗಾರ ಅವನ ರಾಮಜಪ. ಹಿನ್ನೆಲೆ ಹೀಗಿರುವಾಗ ಮಗ ಕೃಷಿಯಲ್ಲಿ ಪೂರ್ಣ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಅಪ್ಪ ತನ್ನನ್ನು ಸಗಣಿ ತೆಗೆಯುವ, ಅಡಿಕೆ ಆರಿಸುವ ಆಳಾಗಷ್ಟೇ ಉಪಯೋಗಿಸುತ್ತಿದ್ದಾನೆಂದುಕೊಂಡ. ಅವನ ಎಷ್ಟೋ ಸಲಹೆಗಳು ಅಳವಡಿಸಲು ಯೋಗ್ಯವಾಗಿದ್ದರೂ ಅಪ್ಪಯ್ಯ ನಿರ್ಲಕ್ಷಿಸಿದ. ಸ್ವಾಭಿಮಾನ ಹತೋಟಿಯ ಮಿತಿ ದಾಟಿದಾಗ ಸಣ್ಣದೋ ದೊಡ್ಡದೋ ಉದ್ಯೋಗ ಹಿಡಿದ. ತುಲನೆ ಮಾಡಿದಾಗ ಕೃಷಿಯಲ್ಲಿ ಮಹತ್ವದ್ದನ್ನು ಸಾಧಿಸಬೇಕೆಂದಿದ್ದ ಮಗ, ಮಗನನ್ನು ತನ್ನ ಜವಾಬ್ದಾರಿಗಳ ಉತ್ತರಾಧಿಕಾರಿಯೆಂದುಕೊಂಡಿದ್ದ ತಂದೆ ಇಬ್ಬರೂ ಸೋತಿದ್ದುದು ಕಾಣುತ್ತದೆ. ಕ್ಷಣಿಕ ಲಾಭ ಬೇರೆಯವರಿಗೆ, ದೂರಗಾಮಿ ಪರಿಣಾಮ ಸಂಬಂಧದ ಮೇಲಾಗುತ್ತದೆ. ಸಂಬಂಧ ಈ ಹಂತದಲ್ಲಿ ಹದಗೆಡುವುದರಿಂದ ಮುಂದೆ ಎಂದೋ ಬೆಸುಗೆ ಹಾಕಬಹುದಾದರೂ ಅದು ಪರಿಪೂರ್ಣ ಅಲ್ಲ. ಮೊದಲಿನ ಸ್ಥಿತಿಗೆ ಮರುಳುವುದಿಲ್ಲ. ಇದು ಉದಾಹರಣೆಯಲ್ಲ. ನಮ್ಮ ಸುತ್ತಲಿನ ಕೃಷಿ ಕುಟುಂಬಗಳಲ್ಲಿ ವ್ಯಾಪಿಸಿರುವ ವ್ಯಾಧಿ ಪರಿಹರಿಸಬೇಕಾದ ಜವಾಬ್ದಾರಿ, ಸಾಮಥ್ರ್ಯಗಳೆರಡು ಇರುವುದು ಪೋಷಕರಲ್ಲಿ. ಅವರದನ್ನು ಅರಿಯುವರೇ?
ಯಜಮಾನ ವರ್ಗದವರಲ್ಲಿ ಇನ್ನೊಂದು ಭಾವನೆಯಿದೆ. ತಮ್ಮಷ್ಟು ಉತ್ತಮವಾಗಿ ಮುಂದಿನ ಪೀಳಿಗೆಯವರು ಕಸುಬನ್ನು ಮುಂದುವರಿಸಲಾರರು. ತಾವು ಗಟ್ಟಿಯಾಗಿರುವವರೆಗೆ ಅವರು ತಮ್ಮನ್ನು ಗಮನಿಸುವುದರಿಂದ ಕಲಿತುಕೊಳ್ಳಲಿ ಎಂದುಕೊಳ್ಳುತ್ತಾರೆ. ಗಮನಿಸುವಾಗ ತಮ್ಮ ತಪ್ಪನ್ನು ಎತ್ತಿ ತೋರಿಸಿದರೆ ಸಿಟ್ಟುಕೊಳ್ಳುತ್ತಾರೆ. ಕೃಷಿಯಲ್ಲಿ ಕಲಿತು ಮುಗಿಯಿತೆನ್ನುವ ಸಮಾರೋಪ ಇಲ್ಲ. ಹೊಸ ಸಮಸ್ಯೆಗಳು, ಪರ್ಯಾಯ ಪರಿಹಾರಗಳು ತುಂಬಿ ತುಳುಕುವ ಕೃಷಿ ಕ್ಷೇತ್ರ ಕೃಷಿಕನಿಗೆ ಪ್ರತಿದಿನ ಸವಾಲು. ತಮಗಿಂತ ಸಣ್ಣವರ ಮಾತು ಸ್ವೀಕರಾರ್ಹ ಆಗಿರಬಹುದು. ಈ ಸ್ವೀಕರಿಸುವಿಕೆ ಕಿರಿಯರಲ್ಲೂ ಆತ್ಮವಿಶ್ವಾಸ ಬೆಳೆಸಬಲ್ಲದು.
ಸಂಸಾರ ನಿರ್ವಹಿಸುವವರಿಗೆ ದುಡ್ಡಿನ ಮಹತ್ವ ತಿಳಿದಿರುತ್ತದೆ. ಅದರ ಸದ್ವಿನಿಯೋಗದ ದಾರಿಗಳ ಪರಿಚಯವಿರುತ್ತದೆ. ಅದರಲ್ಲಿ ಮಗ ಹಣ ನಿಯೋಜಿಸಲು ಹೊಸ ದಾರಿಯೊಂದನ್ನು ಸೂಚಿಸಿದಾಗ ಕೃಷಿಗೆ ಅದು ಬೇಕಿದ್ದರೂ-ತಿರಸ್ಕರಿಸುವ ಮನೋಧರ್ಮ ಕಾಣಿಸುತ್ತದೆ. ಒಂದು ವೇಳೆ ಚಿಕ್ಕ ಪ್ರಮಾಣದ ಹಣ ಅಪಮೌಲ್ಯಗೊಳ್ಳುವ ಸಂದರ್ಭ ಇದ್ದರೂ ಹಿರಿಯರು ಅದನ್ನು ಸಹಿಸಿ ಕಿರಿಯರನ್ನು ಪ್ರೋತ್ಸಾಹಿಸಬೇಕು. ಆ ಸಂದರ್ಭದ ವಿಫಲತೆ ಕಿರಿಯರಿಗೆ ಮುಂದಿನ ಯೋಜನೆಗಳಿಗೆ ಇನ್ನಷ್ಟು ಯೋಚಿಸಿ ಮುಂದಿಡುವ ಎಚ್ಚರಿಕೆ ನೀಡುತ್ತದೆ. ಅವರು ಮುಂದೆಂದೂ ತಮ್ಮ ಯೋಜನೆ ಸೋಲದಂತೆ ಕಟ್ಟುನಿಟ್ಟಾಗಿ ನಿರ್ವಹಿಸುತ್ತಾರೆ. ಕೃಷಿ ಸರಿಯಾದ ಹಾದಿಯಲ್ಲಿ ಸಾಗುತ್ತದೆ.
ಸಮಸ್ಯೆಗೆ ಇದೊಂದೇ ಪಾಶ್ರ್ವವಲ್ಲ. ಉಳಿದ ಮಜಲುಗಳನ್ನು ತಿಳಿಯಲು ಈ ಸಂಸಾರವನ್ನು ಗಮನಿಸಿ. ಮಗ ಕೃಷಿಯಲ್ಲೇ ತನ್ನ ಅಭಿವೃದ್ಧಿ ಅದೇ ಪರಮಧ್ಯೇಯವೆಂದು ಓದನ್ನು ಅರ್ಧಕ್ಕೇ ಕೊನೆಗಾಣಿಸಿ ಬಂದ. ಸಾಮಾನ್ಯವಾಗಿ ಓದಿನಲ್ಲಿ ಹಿಂದುಳಿದವರು ಕೃಷಿಯಲ್ಲಿ ಮುಂದಾಳುಗಳಾಗುತ್ತಾರೆ. ಈ ಯುವಕ ಹಾಗಲ್ಲ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ತನ್ನ ವಿದ್ಯಾಭ್ಯಾಸವನ್ನು ಒತ್ತೆಯಿಟ್ಟ. ಹಾಳಾದ ಅಡಿಕೆ ತೋಟವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಇವನ ಬೆವರು ಆ ತೋಟದಲ್ಲಿ ಬಿದ್ದಿದೆ. ಸಾಧನೆ ತೋರಲು ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕದ ಪಾತ್ರ ಬೇಕು, ಅನಿವಾರ್ಯ ಅಲ್ಲ. ಸಾಧಿಸುವ ಛಲವೇ ಮೂಲವಸ್ತು. ಆ ಛಲದ ಬಂಡವಾಳ ಯುವಕನಲ್ಲಿತ್ತು. ತಂದೆ ಎಲ್ಲಕ್ಕೂ ಮಂಜೂರಾತಿ ನೀಡದೆ ಕೆಲವಕ್ಕೆ ಅಡ್ಡಗಾಲಿಕ್ಕಿದರೂ ಜೀವನವೆಂಬ ರನ್ನಿಂಗ್‍ರೇಸ್‍ನಲ್ಲಿ ಇಂತಹ ಹರ್ಡಲ್ಸ್ ದಾಟಬೇಕೆಂಬ ಅರಿವು ಯುವಕನಿಗಿದೆ. ಆದರೆ ಕಾಲ, ಒಂದೇ ತರ ಇರಲಾರದು.
ತಂದೆ ಹೊಸ ಹೊಸ ಮಾರ್ಪಾಡುಗಳನ್ನು ಬಯಸುತ್ತಿಲ್ಲ. ಲೋಪದೋಷಗಳು ಇರುವ ಕ್ರಮ ಜಾರಿಯಲ್ಲಿದ್ದರೂ, ಚಲ್ತಾ ಹೈ ಸ್ವಭಾವ. ಎರಡು ವರ್ಷಗಳ ಹಿಂದೆ ಅವರ ತೆಂಗಿನ ತೋಟಕ್ಕೆ ಡ್ರಿಪ್ ನೀರಾವರಿ ಪದ್ಧತಿಯನ್ನು ಅಳವಡಿಸಲಾಯಿತು. ಗಿಡಗಳು ಚಿಕ್ಕದಾಗಿದ್ದಾಗ ಸಮಸ್ಯೆಗಳು ಕಾಣಲಿಲ್ಲ. ಈಗ ತೆಂಗು ಮರವಾಗಿರುವುದರಿಂದ ಡ್ರಿಪ್ ಪದ್ಧತಿಯಿಂದ ನೀರಿನ ಕೆಲ ಅಂಶ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸುವ ಇರಾದೆ ಯುವಕನದ್ದು. ಮಗ ಸೂಚಿಸಿದ ಯೋಗ್ಯ ಪರಿಹಾರವನ್ನು ಜಾರಿಗೆ ಮಾತ್ರ ತರುತ್ತಿಲ್ಲ. ಹಣಕಾಸು ತಂದೆಯದ್ದು, ಕೃಷಿ ನಿರ್ವಹಣೆ ಮಗನದ್ದು. ಕೆಂಪುಪಟ್ಟಿಯ ತೊಂದರೆ ಮನೆಯಂಗಳಕ್ಕೂ ಕಾಲಿಕ್ಕಿದೆ. ಈ ರೀತಿಯ ಅನೇಕ ಅನುಭವಗಳಿಂದ ಮಗ ನಿರಾಶೆ ಹೊಂದಿದ್ದಾನೆ. ಪೇಟೆ ಉದ್ಯೋಗದತ್ತ ಗಮನ ಹರಿಸುವ ಸಾಧ್ಯತೆಗಳೂ ಇವೆ.
ಕೃಷಿಕರಲ್ಲಿ ಲೆಕ್ಕಾಚಾರ ಹಾಕುವ ಪದ್ದತಿಯಿಲ್ಲ. ಕೃಷಿಯಲ್ಲಿ ಲೆಕ್ಕಾಚಾರ ಕಷ್ಟಸಾಧ್ಯ ಕೂಡ. ಕೃಷಿ ಯೋಜನೆಗಳಿಗೆ ಹಣ ಪಾಲು ಮಾಡಿ ಇಡಲಾಗುವುದಿಲ್ಲ. ಆದರೆ ಅಂದಾಜು ಮಾಡಲಿಕ್ಕೆ ಅವಕಾಶವಿದೆ. ಈ ರೀತಿ ಅಂದಾಜು ಮಾಡಿ ಕೆಲವು ಯೋಜನೆಗಳನ್ನು ಕಿರಿಯರಿಗೆ ವಹಿಸಬೇಕು. ಅದಕ್ಕೆ ತಕ್ಕ ಹಣಕಾಸನ್ನು ಒದಗಿಸಬೇಕು. ಹೀಗೆ ಮಾಡುವುದರಿಂದ ಒಮ್ಮೆಗೇ ಜವಾಬ್ದಾರಿ ವಹಿಸಿಕೊಳ್ಳುವ ಒತ್ತಡ ಕಿರಿಯರಿಗಾಗಲಿ, ಯಜಮಾನರಿಗೆ ಮನೆ ವಹಿಸಿಕೊಡುವುದರಿಂದ ಉಂಟಾಗುವ ಪದವಿ ನಷ್ಟದ ಸಂಕಟವಾಗಲಿ ಇರುವುದಿಲ್ಲ. ಜಾಣ ಮಾರ್ಗವನ್ನು ಆರಿಸಿಕೊಳ್ಳಿರೆಂದು ಸರ್ವಜ್ಞರು ತಿಳಿಸಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತಾಲ್ಲೂಕು ಕಛೇರಿಯಲ್ಲಿ, ಮಂಡಿ, ಪಂಚಾಯ್ತಿಗಳಲ್ಲಿ ಹೇಗೆ ವ್ಯವಹರಿಸಿಬೇಕೆನ್ನುವ ಅಥವಾ ನಮಗೆ ಬೇಕಾದ ದಾಖಲೆಗಳು ಯಾವುದು, ಎಲ್ಲಿ ಸಿಗುತ್ತವೆಯೆಂಬ ತಿಳುವಳಿಕೆ ನೀಡುವ ಪಠ್ಯಕ್ರಮವೇನಿಲ್ಲ. ಇಂದಿನ ಪಠ್ಯದಲ್ಲಿ ಹಿಂದಿನವರು ಹುಟ್ಟಿದ ಮತ್ತು ಸತ್ತ ದಿನಾಂಕಗಳ ಗೋರಿಯಷ್ಟೇ ಕಾಣುತ್ತದೆ. ವಿದ್ಯಾವಂತ ಎನ್ನಿಸಿಕೊಳ್ಳಲು ಎಷ್ಟೇ ದೊಡ್ಡ ಡಿಗ್ರಿ ಪಡೆಯಲಿ ಅವರು ಜೀವನಕ್ಕಿಳಿದ ನಂತರ ಕೃಷಿ ದಾಖಲೆಗಳನ್ನು ಪರಿಚಯಿಸಿಕೊಳ್ಳಲು ಹೋರಾಡಬೇಕಾಗುತ್ತದೆ. ಆದುದರಿಂದ ಬಾಲ್ಯದಿಂದಲೇ ಈ ಬಗ್ಗೆ ಅನುಭವ ನೀಡುವುದು ಹೆಚ್ಚು ಸೂಕ್ತ. ಶಿಕ್ಷಣ ವ್ಯವಸ್ಥೆಯಲ್ಲಿಯೂ ಈ ಕ್ರಮ ಅಳವಡಿಸುವಿಕೆಯಂತೂ ತುಂಬು ಸ್ವಾಗತಾರ್ಹ. ಅವಿಭಕ್ತ ಕುಟುಂಬದಲ್ಲಿ ಸಂಸಾರ ನಿರ್ವಹಿಸುವ ಅಣ್ಣ ತಮ್ಮಂದಿರು ಸಗಣಿ ಹೊರುವುದಕ್ಕಷ್ಟೇ ಮೀಸಲು, ಇಂತಹ ಕುಟುಂಬ ಪಾಲು (ಹಿಸ್ಸೆ)ಗೊಂಡಾಗ ತಮ್ಮಂದಿರು ಅನುಭವಿಸುವ ಬವಣೆ ಅಸಹನೀಯ. ಅಣ್ಣ ವ್ಯವಹಾರದಲ್ಲಿ ತಮ್ಮಂದಿರನ್ನು ಬಳಸಿದ್ದರೆ ಈ ಸಮಸ್ಯೆ ನಿರ್ಮಾಣವಾಗುತ್ತಿರಲಿಲ್ಲ. ಅದೆಲ್ಲಾ ಸರಿ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ನಿಜ, ಸಮಾಜದ ಒಂದು ಕೋನವನ್ನು ಮಾತ್ರ ಪ್ರಸ್ತಾವದಲ್ಲಿ ಬಳಸಲಾಗಿದೆ. ಡಿಗ್ರಿ ಓದಿ, ಬಸ್‍ಸ್ಟಾಂಡ್ ಪಕ್ಕದ ಬೀಡಾ ಅಂಗಡಿಯಲ್ಲಿ ಸಿಗರೇಟ್, ಗುಟ್ಕಾ ಮತ್ತಿನಲ್ಲಿ ತಮ್ಮ ತೋಟವನ್ನು ಮರೆಯುವ ಯುವಕರ ಬಗ್ಗೆ ಏನೂ ಹೇಳದಿರುವುದೇ ಕ್ಷೇಮ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಈ ಅಮಲುಗಳ ಜೊತೆಗೆ ಹುಡುಗಿಯರನ್ನು ಚುಡಾಯಿಸುತ್ತ ಫುಲ್‍ಟೈಂ ಡ್ಯೂಟಿಯಲ್ಲಿರುವವರನ್ನು ಕಂಡಾಗ ಖೇದವಾಗುತ್ತದೆ. ಮಕ್ಕಳಿಗೆ ಜವಾಬ್ದಾರಿ ನೀಡದ ತಂದೆತಾಯಿಗಳು ಕಾರಣವಿರಬಹುದೇ? ಆದರೆ ಇಂತಹವರನ್ನು ನೆಪವಾಗಿಟ್ಟುಕೊಂಡು ಒಳ್ಳೆಯ ಕೃಷಿ ಅಭಿಲಾಷೆಯುಳ್ಳವರಿಗೆ ಅಡ್ಡಗಾಲಿಕ್ಕುವುದು ಸಮಾಜದ ದುರಂತ. ಖಂಡಿತವಾಗಿಯೂ ಕೃಷಿಕ ಸಂಬಂಧಗಳಿಗೆ ಹೊಸ ವ್ಯಾಖ್ಯೆಯ ಅಗತ್ಯವಿದೆ.
– ಮಾ.ವೆಂ.ಸ.ಪ್ರಸಾದ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!