ಒಮ್ಮೆ ಸಂಜೆ ಹೊತ್ತಿಗೆ ಒಬ್ಬಳೇ ನಡೆದು ಹೋಗುತ್ತಿದ್ದೆ. ಸುಮಾರು ಎಂಟು ಘಂಟೆಯಾಗಿರಬಹುದು. ನನ್ನ ಸಂಗೀತ ತರಗತಿಯಿಂದ ಮನೆಗೆ ಸುಮಾರು ಒಂದು ಕಿಲೋಮೀಟರು ನಡೆದುಹೋಗಬೇಕಿತ್ತು. ಹಾದಿಯ ಮಧ್ಯೆ ಜನರ ನೋಟ, ವ್ಯಂಗ ಮಾತುಗಳು ನನ್ನನ್ನು ಭಯಪಡಿಸತೊಡಗಿದವು. ಹೆದರುತ್ತಲೇ, ಅವರ ಮಾತುಗಳಿಗೆ ಗಮನಕೊಟ್ಟರೂ ಕೊಡದಂತೆ ಸರಸರನೆ ದಾರಿಯಲ್ಲಿ ಹೆಜ್ಜೆ ಹಾಕಿದೆ. ರಾತ್ರಿ ಹೊತ್ತು ಏಕಂಗಿಯಾಗಿ ಹುಡುಗಿಯೊಬ್ಬಳು ಜನನಿಬಿಡ ರಸ್ತೆಯಲ್ಲೂ ನಡೆಯುವ ಕಷ್ಟ ಏನೆಂಬುದು ಅನುಭವಕ್ಕೆ ಬಂದುದು ನನ್ನ ಜೀವನದಲ್ಲಿ ಇದೇ ಮೊದಲು. ಹುಡುಗರು ಇಷ್ಟು ಅಮಾನವೀಯರಾಗಿರುತ್ತಾರಾ ಎಂದೆನಿಸಿತು. ಇಂದಿಗೂ ಆ ದಿನವನ್ನು ನೆನೆದರೆ, ಮನಸ್ಸು ಅಂಜುತ್ತದೆ. ಜೀವನದಲ್ಲಿ ಇನ್ನೆಂದೂ ಆ ದಿನ ಬಾರದಿರಲಿ ಎನಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ, ಆರು ವರ್ಷದ ಚಿಕ್ಕ ಮಗುವಿನಿಂದ ಹಿಡಿದು ಕೈಲಾಗದ ವೃದ್ಧೆಯರ ಮೇಲೂ ನಡೆದಿರುವ ಅಮಾನುಷ ಕೃತ್ಯಗಳನ್ನು ಕಂಡರೆ ವಿಷಾದದಿಂದ ಮನಸ್ಸು ಮುದುಡುತ್ತದೆ. ಕೈ ಹಿಡಿದು ಕಾಪಾಡಬೇಕಿದ್ದ ಅಪ್ಪ, ವಿದ್ಯಾರ್ಥಿನಿ ಎಂದು ಪಾಠ ಮಾಡಬೇಕಿದ್ದ ಶಿಕ್ಷಕ, ತಂಗಿ ಎಂದು ಕಾಣಬೇಕಿದ್ದ ನೆರೆಮನೆಯವ, ಸ್ನೇಹಿತೆ ಎಂದು ಗೌರವಿಸಬೇಕಿದ್ದ ಗೆಳೆಯರು, ಅದು ಹೋಗಲಿ ಕೊನೆ ಪಕ್ಷ ಹೆಣ್ಣು ಕೂಡ ಒಂದು “ಜೀವ” ಎಂದು ಪ್ರೀತಿಸಬೇಕಿದ್ದ ಇನ್ನೊಂದು ಜೀವಿಯೇ, ಆಕೆಯ ಪಾಲಿಗೆ ರಕ್ಷಕನಾಗದೆ ರಾಕ್ಷಸನಾಗಿ ಮಾರ್ಪಾಡಾಗಿದ್ದಾನೆ. ಆಟವಾಡಿಕೊಂಡು ಬೆಳೆಯಬೇಕಿದ್ದ ಪುಟ್ಟ ಹುಡುಗಿಯರನ್ನು ಹೊರಗೆ ಆಟವಾಡಲು ಕಳಿಸಲು ಅಪ್ಪ ಅಮ್ಮ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಗಳಿಗೆ ಯಾವ ಬಟ್ಟೆ ಹಾಕಿ ಕಳಿಸಲಿ ಎಂದು ಸಂಭ್ರಮಿಸುತ್ತಿದ್ದ ಅಮ್ಮ ಕಾಮುಕ ಕಣ್ಣುಗಳಿಗೆ ಹೆದರಿ ಮಗುವನ್ನು ಆದಷ್ಟು ಮುಚ್ಚಿಡಬೇಕಿದೆ. ಕಾಲೇಜಿಗೆ ಹೋದ ಮಗಳು ಅರ್ಧ ಘಂಟೆ ತಡವಾದರೆ ಆಗುವ ಗಾಬರಿ, ಸಂಕಟ, ಬೇರೆಯವರಿಗೆ ಅರ್ಥವಾಗುವಂಥದಲ್ಲ ಎಂದು ತಾಯಿಯರು ಕಂಬನಿ ಮಿಡಿಯುತ್ತಾರೆ.
ಕಿಟಕಿಗಳೆಲ್ಲವೂ ಮುಚ್ಚಿದ ಕೋಣೆಯಲ್ಲಿ ತನಗರಿವಿಲ್ಲದೇ ಬಂಧಿಯಾಗಿ ತನ್ನ ರೆಕ್ಕೆಯನ್ನು ಬಡಿಯುತ್ತಾ, ಹಾರುತ್ತಾ, ದಣಿಯುತ್ತಾ..ಅಸಹಾಯಕ ಪರಿಸ್ಥಿತಿಯಲ್ಲಿ ಬಿದ್ದ ಚಿಟ್ಟೆಯಂತೆ, ನನ್ನ ಮನಸ್ಸು ಉತ್ತರ ದೊರಕದ ಪ್ರಶ್ನೆಯೊಂದನ್ನು ದಿನೇ ದಿನೇ ಚಿಂತಿಸುತ್ತಿದೆ. ಸಮಾಜದ ಕಟಕಟೆಯಲ್ಲಿ ಹೆಣ್ಣಿಗೆ ಪ್ರತೀ ಬಾರಿಯೂ ಅಪರಾಧಿಯ ಸ್ಥಾನ ಕೊಟ್ಟು ತಾನು ಪರಾರಿಯಾಗುತ್ತಿರುವ ಗಂಡು ಈಗಲಾದರೂ ಬದಲಾಗುತ್ತಾನೆ ಎಂಬ ಚಿಕ್ಕ ಆಶಾಕಿರಣ ಮೂಡುವ ಮುನ್ನವೇ ಅಲ್ಲೊಂದು ಇಲ್ಲೊಂದು ಕೆಟ್ಟ ಸುದ್ದಿ ಹರಡಿರುತ್ತದೆ.
“ಸಾಕು ಎಂದರೆ ಸಾಕು” ಹೋರಾಟ ಮಾಡೋಣ ಬನ್ನಿ. ಇಲ್ಲವಾದಲ್ಲಿ ನಿಮ್ಮ ಮಗಳು ಇವರ ಮುಂದಿನ ಗುರಿ!. ಹೀಗೆನ್ನುವ ಬಿತ್ತಿ ಚಿತ್ರಗಳು, ಪ್ರಕಟಣೆಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಹೆಣ್ಣು ಮಕ್ಕಳ ಮೇಲೆ ನೆಡೆಯುತ್ತಿರುವ ದೌರ್ಜನ್ಯಗಳು, ಅಮಾನವೀಯ ಕೃತ್ಯಗಳು ನಮ್ಮೆಲ್ಲರ ಸಹನೆಯನ್ನು ಕೆಡಿಸಿವೆ. ದೇಶದ ಜನರೆಲ್ಲರೂ ಇಂಥ ಕೃತ್ಯಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇಷ್ಟೆಲ್ಲ ನಡೆಯುತ್ತಲೇ ಪುರುಷ ರಾಕ್ಷಸರ ಅಮಾನವೀಯ ಕೃತ್ಯಗಳು ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣ? ಮನುಷ್ಯನ ತೀರದ ಆಸೆಯಾ? ಅಥವ ಆತ ಹೆಣ್ಣನ್ನು ಕೇವಲ ಒಂದು ವಸ್ತುವನ್ನಾಗಿ ಸ್ವೀಕರಿಸಿದ್ದಾನಾ? ಅಥವಾ ಆಕೆಯೇ ಕಾರಣಳಾ? ದೆಹಲಿಯಲ್ಲಿ ನಡೆದ ಘಟನೆಯಿಂದಲೇ ಇನ್ನೂ ಹೊರಬರದ ಜನತೆ, ದಿನ ಬೆಳಗಾಗುವುದರೊಳಗೆ ಹತ್ತಾರು ಅಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಅವರು ಎಷ್ಟರ ಮಟ್ಟಿಗೆ ಇದರೆಡೆಗೆ ಬೇಸರಗೊಂಡು ಅಲಕ್ಷ್ಯ ಮಾಡುತ್ತಿದ್ದಾರೆ ಎಂದರೆ, ಒಂದು ರಾಜ್ಯದ ಮುಖ್ಯಮಂತ್ರಿಯೇ ಮಾಧ್ಯಮದವರಿಗೆ ನಿಮಗೆ ಬೇರೆ ಪ್ರಶ್ನೆಗಳೆ ಸಿಗುವುದಿಲ್ಲವೇ ಎಂದು ಕೇಳುವಷ್ಟು!
ಹಾಗಾದೆರೆ ಎತ್ತ ಸಾಗುತ್ತಿದೆ ನಮ್ಮ ಬದುಕು? ಬೆಳಗ್ಗೆಯಾದರೂ, ರಾತ್ರಿಯಾದರೂ ಹೆಣ್ಣು ಒಬ್ಬಂಟಿಯಗಿ ತನ್ನ ದಾರಿಯಲ್ಲಿ ಹೋಗಲು ಅಸಾಧ್ಯ. ಯಾರೊಟ್ಟಿಗೆ ಮಾತನಾಡಲೂ ಅಂಜಿಕೆ. ತನ್ನವರು ಇವರು ಎಂದು ಗೊತ್ತಿದ್ದರೂ, ದೂರವಿರಬೇಕಾದ ಪರಿಸ್ಥಿತಿ. ಹೀಗಿದ್ದಲ್ಲಿ ಆಕೆಗೆ ಸ್ವತಂತ್ರವಾಗಿ ಬದುಕಲು ಕಿಂಚಿತ್ತೂ ಜಾಗವಿಲ್ಲವೇ? ಹಿಂದೊಮ್ಮೆ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಯುತ್ತಿದ್ದಂತೆ, ಅದನ್ನು ವಿರೋಧಿಸುವ ಹೊಣೆ ನಮ್ಮದಲ್ಲವೆ ಎಂದೆನಿಸುತಿತ್ತು. ಆದರೆ ಈಗಿನ ಘಟನೆಗಳನ್ನು ನೋಡಿದರೆ ಆ ಹೆಣ್ಣು ಜೀವ ಭೂಮಿಗೆ ಬಾರದಿದ್ದದ್ದೇ ಒಳ್ಳೆಯದಾಯಿತು ಎಂದು ಸಮಾಧಾನವಾಗುತ್ತಿದೆ! ಕನಿಷ್ಠ ಒಂದು ಹೆಣ್ಣು ಮಗು ಆ ಆಟಿಕೆಯ ವಸ್ತುವಾಗುವುದು ತಪ್ಪಿತಲ್ಲ! ಈಗಿನ ಪರಿಸ್ಥಿತಿಯಲ್ಲಿ ಅವಲೋಕಿಸಿದರೆ ಭಾರತದ ಸ್ವಾತಂತ್ರ ಹುಡುಗರಿಗೆ ಹಾಗು ಗಂಡಸರಿಗೆ ಸೀಮಿತವಾದಂತಿದೆ. ಹುಡುಗರ ಸ್ವೇಚ್ಛೆಯ ಹಸಿವು ಹುಡುಗಿಯರ ಮುಳ್ಳಾಗುತ್ತಿದೆಯೆಂದು ವಿಷಾದದಿಂದ ಹೇಳಬೇಕಾಗಿದೆ. ಹೆಣ್ಣು ತನ್ನುಸಿರೊಳಗಿನ ನಿಟ್ಟುಸಿರನ್ನೂ ಹೊರ ಹಾಕಲು ಹೆದರುತ್ತಿದ್ದಾಳೆ. ತಾನು ಹೆಣ್ಣೆಂಬ ಕಾರಣಕ್ಕೆ ಕನ್ನಡಿಯಲ್ಲಿ ಕಾಣುವ ತನ್ನ ಬಿಂಬವನ್ನೂ ನೋಡಲು ಅಸಹ್ಯ ಪಡುತ್ತಿದ್ದಾಳೆ. ಹೊರಗಿನ ಪ್ರಪಂಚವನ್ನು ಸಂಪೂರ್ಣವಾಗಿ ಅರಿತರೂ ಮುಂದಿನ ಹೆಜ್ಜೆಯ ಹಾಕಲು ಹೆದರುತ್ತಿದ್ದಾಳೆ. ಈಗಿನ ಸಮಯದಲ್ಲಿ ಆಕೆಯ ಉದ್ಧಾರ ಹಾಗಿರಲಿ, ಆಕೆಯ ಜೀವನದ ಉದ್ದೇಶವನ್ನು ಮೊದಲು ಕಾಪಾಡಬೇಕಿದೆ. ನಮ್ಮಿಂದ ನಮಗಾಗಿ ನಮ್ಮದೇ ಸರ್ಕಾರವಿರುವಾಗ ಈ ಸಮಸ್ಯೆಯಿಂದ ಹೊರಬರುವುದು, ಭಾರತವನ್ನು ಬಚಾವು ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಕೇವಲ ಫೇಸ್ ಬುಕ್, ಹಾಗು ಇನ್ನಿತರ ಸಂಘಟನೆಗಳಿಂದ, ಮೇಣದ ಬತ್ತಿ ಹಚ್ಚಿ ನಡೆಯುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಕಟುಕ ಅಂಗುಲಿಮಾಲನನ್ನು ಬುದ್ಧ ಬದಲಾಯಿಸಿದ ಹಾಗೆ, ಕಟುಕರ ಮನಸ್ಸುಗಳಿಗೆ ಮಾನವೀಯ ಸಂಸ್ಕಾರ ಕೊಡುವ ಅಂಗುಲಿಮಾಲರು ಈಗ ಬೇಕಾಗಿದ್ದಾರೆ.
ಸ್ಫೂರ್ತಿ ವಾನಳ್ಳಿ
- Advertisement -
- Advertisement -
- Advertisement -
- Advertisement -