Home Blogroll ಇಲಿ ಬೋನಿಗೆ ಸ್ನಾನ!!

ಇಲಿ ಬೋನಿಗೆ ಸ್ನಾನ!!

0

ಮನೆಯಲ್ಲಿ ಇಲಿ ಕಾಟ ಜಾಸ್ತಿಯಾದಾಗ ನೆನಪಾಗುವುದು ಇಲಿ ಬೋನು. ಧಾವಂತದಿಂದ ಮಾರುಕಟ್ಟೆಗೆ ಹೋಗಿ ತಂದದ್ದೂ ಆಯಿತು. ಒಂದು, ಅಬ್ಬಬ್ಬಾ ಎಂದರೆ ಎರಡು ಇಲಿ ಸಿಕ್ಕುಬಿದ್ದಿತು ಕೂಡ. ಆಮೇಲೆ ಮಾತ್ರ ಒಂದೇ ಒಂದು ಬೋನಿಗೆ ಬಿದ್ದರೆ ಕೇಳಿ. ಈಗ ಕೈಲಾಗದೆ ಮೈ ಪರಚಿಕೊಳ್ಳುವಂತ ಸಿಟ್ಟು. “ನೋಡಿ, ಈ ಇಲಿಗಳೂ ಎಷ್ಟು ಚುರುಕು? ಅವಕ್ಕೂ ಬೋನಿನ ಕರಾಮತ್ತು ಗೊತ್ತಾಗಿದೆ” ಎಂದು ಗೊಣಗುತ್ತೇವೆ. ಇದು ಅರ್ಧಸತ್ಯ.
ನಿಜ, ಇಲಿಗೆ ಬೋನು ಅಪಾಯ ಅಂತ ಗೊತ್ತಾಗಿದೆ. ಅದು ಅದರ ಜಾಣ್ಮೆಯಲ್ಲ. ಕೊನೆಯ ಬಾರಿ ಬಿದ್ದ ಇಲಿಯ ಒಳ್ಳೆತನ! ಏನಾಗುತ್ತಪ್ಪಾಂದ್ರೆ, ಬೋನಿಗೆ ಬಿದ್ದ ಇಲಿ ವಿಶಿಷ್ಟ ಹಾರ್ಮೋನ್ ಒಂದನ್ನು ಹೊರಚೆಲ್ಲುತ್ತದೆ. ಅದು ಉಳಿದ ಇಲಿಗಳಿಗೆ `ಇಲ್ಲಿದೆ ಅಪಾಯ’ ಎಂಬ ಸೂಚನೆ ನೀಡುತ್ತದಾದ್ದರಿಂದ ಉಳಿದವು ಬೋಂಡ, ಚಕ್ಕುಲಿ ಇಟ್ಟರೂ ಅತ್ತ ತಲೆ ಹಾಕವು!
ಇದಕ್ಕೊಂದು ಪರಿಹಾರವಿದೆ. ಒಂದು ಚಮಚ ಸುಣ್ಣ, ಅರ್ಧ ಚಮಚ ಅರಿಸಿನದ ಪುಡಿ ತೆಗೆದುಕೊಳ್ಳಿ. ಅವೆರಡನ್ನು ಬಕೆಟ್ ನೀರಿನಲ್ಲಿ ಕದಡಿ. ಕೆಂಪು ನೀರು ಸೃಷ್ಟಿಯಾಗುತ್ತದೆ. ಇದರಲ್ಲಿ ಖಾಲಿ ಇಲಿ ಬೋನನ್ನು ಚೆನ್ನಾಗಿ ತೊಳೆಯಿರಿ. ಮತ್ತೆ ರಾತ್ರಿ ಬೋನು ಹೂಡಿ. ಇಲಿ ಪಿಗ್ಗಿ ಬಿದ್ದು ಬೋನು ಸೇರುತ್ತದೆ! ಸುಣ್ಣ, ಅರಿಸಿನದ ಟ್ರೀಟ್‍ಮೆಂಟ್‍ನಿಂದ ಹಾರ್ಮೋನ್ ವಾಸನೆ ಗಾಯಬ್! ಪ್ರತಿ ಬಾರಿ ಇಲಿ ಬಿದ್ದ ನಂತರವೂ ಬೋನಿಗೆ ಈ ಸ್ನಾನ ಮಾಡಿಸಬೇಕು.
– ಮಾ.ವೆಂ.ಸ. ಪ್ರಸಾದ್