Home Blogroll ಆ ಜೀವಗಳು ಉಳಿಸಿದ ನೆನಪು..

ಆ ಜೀವಗಳು ಉಳಿಸಿದ ನೆನಪು..

0

ವಾನಳ್ಳಿ ಶಿರಸಿಯಿಂದ 20 ಕಿಮೀ ದೂರದ ಊರು. ನನ್ನಜ್ಜ ಅಲ್ಲಿಯ ಡಾಕ್ಟರು. ಸುಮಾರು ವರ್ಷಗಳಿಂದ, ಈತನೊಬ್ಬನೇ ವಾನಳ್ಳಿಯ ಆಸ್ಪತೆಯ ನಡೆಸುತ್ತಿರುವವನು. ಹಾಗಾಗಿ ಹತ್ತಿರದ ಹಳ್ಳಿಯವರು ರಸ್ತೆಯ ಅಪಘಾತ.. ಏನೇ ಆದರೂ ಓಡಿ ಬರುತ್ತಿದ್ದುದು ಅಜ್ಜನ ಆಸ್ಪತ್ರೆಗೆ. ಮೊಮ್ಮಕ್ಕಳಾದ ನಮಗೆ ವಾನಳ್ಳಿಗೆ ಹೋದಾಗ ಅಲ್ಲಿಯ ಮೊದಲ ಆಕರ್ಷಣೆ ಎಂದರೆ ಮನೆಯೊಳಗೇ ಇದ್ದ ಅಜ್ಜನ ಆಸ್ಪತ್ರೆ. ಹೊತ್ತಿಲ್ಲದ ಹೊತ್ತಿಗೂ “ಅರಾಮಿಲ್ಲ ಡಾಕ್ಟರ್ರೆ’ ಎಂದು ಓಡಿ ಬರುತ್ತಿದ್ದ ಜನರನ್ನು ನೋಡುತ್ತಾ, ಯಾರೂ ಇಲ್ಲದಿರುವಾಗ ಅಜ್ಜನ ಪಾತ್ರ ನಾವು ಮಾಡುತ್ತಾ, ಆಟವಾಡುತ್ತಿರುತ್ತಿದ್ದೆವು! ಬಂದವರಿಗೆ ಅಜ್ಜ ಯಾವ ಬಣ್ಣದ ಮಾತೆಗಳನ್ನು ಕೊಡುತ್ತಾನೆ, ಕೆಲವರಿಗೆ ಇಂಜೆಕ್ಷನ್ ಕೊಟ್ಟಾಗ ಅವರು ಹೇಗೆ ಕೂಗಿಕೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತಾ, ಕೆಲವೊಮ್ಮೆ ಮರುಗುತ್ತಾ, ಇನ್ನೊಮ್ಮೆ ನಗುತ್ತಾ..”ಅಜ್ಜ ಅವರಿಗೆ ಇಂಜೆಕ್ಷನ್ ನೀಡುವಾಗ ಏಕೆ ನೋವು ಮಾಡಿದೆ” ಎಂದು ಆತನಿಗೊಂದು ಪೆಟ್ಟು ಕೊಡುತ್ತಾ ಇರುತ್ತಿದ್ದೆವು. ಇನ್ನು ಹೇಳ ಬೇಕಾದ ಸಂಗತಿ ಎಂದರೆ..ಹುಷಾರಿಲ್ಲ ಎಂದು ಬಂದವೆರೂ ಅಜ್ಜನೊಟ್ಟಿಗಿರುತ್ತಿದ್ದ ನಮ್ಮನ್ನು ..”ಅರೇ ಡಾಕ್ಟ್ರ ಮೊಮ್ಮಕ್ಕಳು” ಎಂದು ನಮ್ಮನ್ನು ಬೆರಗು ಗಣ್ಣಿನಿಂದ ನೋಡುತ್ತಾ ನಿಂತಿದ್ದರೆ..ಆ ಕ್ಷಣಕ್ಕೆ ನಾವು ಸಂತೋಷದಿಂದ ಬೀಗುತ್ತಿದ್ದ ರೀತಿಯನ್ನು ಈಗಲೂ ಹೇಳಲಾಗಲಿಕ್ಕಿಲ್ಲ ನಮಗೆ.
ಹೀಗೊಮ್ಮೆ ಒಂದು ಘಟನೆ ನಡೆಯಿತು. ರಜೆಗಾಗಿ ವಾನಳ್ಳಿಗೆ ಶಿರಸಿಯ ಬಸ್ಸಿನಲ್ಲಿ ಹೊರಟಿದ್ದೆವು. ದಾರಿ ಮಧೈ ಹಲವು ಜನ ಸೇರಿರುವುದನ್ನು ಕಂಡೆವು. ಲಾರಿ-ಬಸ್ಸು ಡಿಕ್ಕಿ ಹೊಡೆದಿದೆಯಂತೆ ..ಎಂದು ನಾವು ಏನಾಯಿತು ಎಂದು ಪ್ರಶ್ನಿಸುವ ಮುನ್ನ ಆ ಸುದ್ದಿ ಬಸ್ಸಿನಲ್ಲಿ ಹರಡಿತ್ತು. ವಾನಳ್ಳಿಗೆ ತಲುಪುವ ಹೊತ್ತಿಗೆ ಆ ಸುದ್ದಿ ಅಜ್ಜನಿಗೂ ತಲುಪಿತ್ತು. ಇನ್ನೇನು ಆತ ಅಪಘಾತ ಅದ ಸ್ಥಳಕ್ಕೆ ಹೊರಡಬೇಕು ಎನ್ನುವ ಹೊತ್ತಿಗೆ ಮನೆಯ ಫೋನ್ ರಿಂಗಾಯಿತು. “ಬೈಕ್‍ನ ಸವಾರನಿಗೆ ಬಹಳ ಪೆಟ್ಟಾಗಿದೆ, ನಮ್ಮ ಕಾರಿನಲ್ಲಿ ಆಸ್ಪತ್ರೆಗೆ ಆತನನ್ನು ಕರೆತರುತ್ತೇವೆ ದಯವಿಟ್ಟು ಏನಾದರು ಮಾಡಿ” ಎಂದರು. ಅಜ್ಜ ಸರಿ ಬನ್ನಿ ಎಂದು ಫೋನಿಟ್ಟರು. ಅಂದು ಬೆಳಿಗ್ಗೆಯಷ್ಟೆ ಮನೆ ತಲುಪಿದ್ದ ನಾವು ಸ್ವಲ್ಪ ಸುಧಾರಿಸಿ ಕೊಳ್ಳುವ ಹೊತ್ತಿಗೆ..ಮನೆಯೆದುರು ಕಾರು ಬಂದು ನಿಂತಿತು. ಅಜ್ಜ ಬೇಕಾದುದ್ದನೆಲ್ಲ ತಯಾರಿಸಿಟ್ಟುಕೊಂಡಿದ್ದ. ಪ್ರಜ್ಞೆ ತಪ್ಪಿ ಬಿದ್ದಿದ್ದ ಆತನನ್ನು ಒಳ ಎತ್ತಿ ತಂದು ಮಲಗಿಸಿದರು. ಇದನ್ನೆಲ್ಲ ನಿಂತು ನೋಡುತ್ತಿದ್ದ ನನ್ನನ್ನು ಅಜ್ಜ ಗಮನಿಸಿ..”ನೀ ಒಳಗೆ ಹೋಗು ಪುಟ್ಟಿ” ಎಂದ. ನನಗೆ ಒಳ ಹೋಗಲು ಮನಸ್ಸಾಗಲಿಲ್ಲ. ಅಲ್ಲಿಯೇ ನಿಂತರೆ ಬಯ್ಯುತ್ತಾರೇನೊ ಎಂಬ ಕಾರಣಕ್ಕೆ, ಅಲ್ಲಿದ್ದರೂ ಕಾಣದ ಹಾಗೆ ಹಿಂದೆಯೇ ಇದ್ದ ಪರದೆÀಯ ಸರಿಸಿ ನಿಂತೆ. ಅಂದು ಅಜ್ಜ ಆತನನ್ನು ಬದುಕಿಸಲು ನಾನಾ ರೀತಿಯ ಚಿಕಿತ್ಸೆಯನ್ನು ನೀಡಿದ್ದರು. ಸುಮಾರು 2 ಘಂಟೆಗಳ ಕಾಲ ಎಲ್ಲರೂ ಕಾದರು. ಏನೂ ಪ್ರಯೋಜನವಾಗಲಿಲ್ಲ. ನಿಂತು ನೋಡುತ್ತಿದ್ದಂತೆ ಆತನ ಪ್ರಾಣ ಪಕ್ಷಿ ನಮ್ಮ ಭೇದಿಸಿ ಹಾರಿ ಹೋಗಿತ್ತು. ಅಜ್ಜ ಶಾಂತ ಭಾವದಿಂದ..”ಬದುಕುಳಿಯುವುದಿಲ್ಲ.” ಎಂದು ಹೇಳಿದ್ದ ಸುದ್ದಿ ಇನ್ನೂ ನನ್ನ ಕಿವಿಯಲ್ಲಿದೆ!. ಆ ಕ್ಷಣಕ್ಕೆ ಅಲ್ಲಿ ನೆರೆದಿದ್ದ ಎಲ್ಲರ ಮುಖ ಭಾವ, ಹಾವ-ಭಾವ ಒಂದೇ ಸಮನೆ ಬೇರೆಯಾದವು. ನಾನು ಇಲ್ಲೇನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಸೂತಕದ ಛಾಯೆ ಎಲ್ಲೆಡೆ ಹರಡಿತ್ತು. ಆತನನ್ನು ಕರೆತಂದಾಗ ತೊಟ್ಟಿಕ್ಕಿದ್ದ ರಕ್ತ, ಬದುಕುಳಿಸುವ ಪ್ರಯತ್ನದಲ್ಲಿ ಉಪಯೋಗಿಸಿದ್ದ ಔಷಧದ ಬಾಟಲಿಗಳು, ಆತು ಬದುಕುತ್ತಾನೆ ಎಂಬ ಭರವಸೆಯ ಹೊತ್ತು ಕಾದು ನಿಂತಿದ್ದ ಆತನ ಮನೆಯವರು, ಸ್ನೇಹಿತರು, ಅವನು ಇನ್ನಿಲ್ಲ ಎಂದು ಸುದ್ದಿ ತಿಳಿಯುತ್ತಲೇ…ಬೇಸರದಿಂದ ಅತ್ತ ಕ್ಷಣ..ಇವೆಲ್ಲವು ನನಗಲ್ಲ ಎಂಬ ರೀತಿಯಲ್ಲಿ ನಿರ್ಲಿಪ್ತ ಭಾವದಿಂದ ಮಲಗಿದ್ದ ಆತ, ಎಲ್ಲರೂ ನನ್ನಲ್ಲಿ ಹಸಿರಾಗೇ ಇದ್ದಾರೆ. ಬಹುಶಃ ಆ ವಯಸ್ಸಿಗೆ ನನ್ನಲ್ಲಿ ಇನ್ನೂ ಸಾವು-ಬದುಕು ಎಂಬುದರ ಪರಿವೇ ಇಲ್ಲದಾಗಿತ್ತು. ಅಂದು ಅಳುತ್ತಿರುವವರ ಕಂಡು..ಅಯ್ಯೋ ಇದಕ್ಯಾಕೆ ಇವರೆಲ್ಲ ಅಷ್ಟು ಅಳುತ್ತಿದ್ದಾರೆ, ಅವನೇ ಬೇಸರಗೊಂಡಿಲ್ಲ ಎಂದೆನಿಸುತ್ತಿತ್ತು!. ಕಣ್ಣೆದುರಿಗೇ ಎಲ್ಲವು ಎಲ್ಲರೂ ಮಾಯವಾಗಿದ್ದರು. ಆದರೆ ಆ ಒಂದು ಸಾವಿನ ಘಟನೆ ನನ್ನಲ್ಲಿ ಹಾಗೆ ಉಳಿದಿದೆ. ಎಷ್ಟು ವರ್ಷಗಳು ಕಳೆದರು ಆ ಸಾವು-ಬದುಕಿನ ಹೋರಾಟ ಇಂದಿಗೂ ನೆನಪಿದೆ.
ಮೊನ್ನೆ ಆಸ್ಪತ್ರೆಯಲ್ಲಿ ಕೆಲಸದ ನಿಮಿತ್ತ ನಮ್ಮ ಕ್ಲಿನಿಕ್ಕಿನ ಕಡೆ ಹೊರಟಿದ್ದೆ. ದಿನ ಒಂದೇ ದಾರಿಯಲ್ಲಿ ಹೋಗುವುದು ಬೇಡ ಎಂದೆಣಿಸಿ, ಅಂದು ಇನ್ನೊಂದು ಹಾದಿಯ ಬಳಿ ಹೋಗುತ್ತಿದ್ದೆ. ಅದು ಆಸ್ಪತ್ರೆಯ ಶವಾಗಾರದ ಪಕ್ಕದಲ್ಲಿರುವ ದಾರಿಯಾಗಿತ್ತು. ಯಾರೋ ಸತ್ತಿದ್ದರು. ಜನ ಸೇರಿದ್ದು ಕಂಡಿತು. ಇಲ್ಲಿ ಹೀಗೆ ಯಾವಾಗಲೂ ಜನ ಜಾಸ್ತಿ ಎಂದು ಮನಸ್ಸಿನಲ್ಲಿ ಅಂದುಕೊಂಡು ಮುಂದೆ ನಡೆದು ಹೋಗುತ್ತಿದ್ದೆ. ಶವವನ್ನು ಕಟ್ಟಿ ಒಂದು ವ್ಯಾನಿನಲ್ಲಿ ತೂರಿಸುತ್ತಿದ್ದರು. ಮುಖ ಕಾಣಲಿಲ್ಲ. ಪೋಲಿಸರ, ಆಸ್ಪತ್ರೆಯ ಸಿಬ್ಬಂದಿ ಕೆಲವರು ಇದ್ದರು. “ಯಾರಪ್ಪಾ ಇವನ ಕಡೆಯವರು?ಬೇಗ ಕರೆಸಿ ಅವರನ್ನ. ನಮಗೇನು ಬೇರೆ ಕೆಲಸ ಇಲ್ಲ ಅಂತ ಅಂದುಕೊಂಡಿದ್ದಾರಾ?” ಎಂದು ಗುಂಪಿನಲ್ಲಿದ್ದವನೊಬ್ಬ ಕೂಗಿದ. ನಡೆದು ಹೋಗುತ್ತಿದ್ದ ನನಗೆ ಎದುರಿನಿಂದ ಗುಂಪೊಂದು ಚೀರಿಕೊಂಡು ನಮ್ಮತ್ತ ಓಡಿ ಬರುತ್ತಿರುವುದು ಕಂಡಿತು. ಮುಂದೆ ಹೆಜ್ಜೆ ಹಾಕಲು ಮನಸ್ಸಾಗಲಿಲ್ಲ. ಪಕ್ಕದಲ್ಲೇ ನಿಂತೆ, ಆ ಗುಂಪಿನ ಚೀರಾಟ, ಅಳು ಎಲ್ಲವೂ..ಒಮ್ಮೆ ನನ್ನನ್ನು ವಾನಳ್ಳಿಯ ಮನೆಗೆ, ಅಂದು ನಡೆದ ಸಾವು-ಬದುಕಿನ ಹೋರಾಟದತ್ತ ಕೊಂಡ್ಯೊದಿತ್ತು.
ಹಳ್ಳಿಯ ಆಸ್ಪತ್ರೆಯೊಂದರಲ್ಲಿ ಒಂದು ಜೀವವನ್ನು ಉಳಿಸಲು ಅಂದು ನಡೆದ ಪ್ರಯತ್ನ, ನಗರದ ಬಹುದೊಡ್ಡ ಆಸ್ಪತ್ರೆಯಲ್ಲಿ ಒಂದು ಜೀವ ಉಳಿಸಲು ಮಾಡಿದ ಪ್ರಯತ್ನ ಎರಡೂ ಒಂದೆಯೆ. ಕಣ್ಣಿಗೆ ಕಂಡಿದ್ದ ಎರಡು ದೇಹಗಳು, ಜೀವ ಕಳೆದುಕೊಂಡ ಮೇಲೆ..ಅದು ಕೇವಲ ಶವ ಮಾತ್ರ. ಆದರೆ ಜನ ತೋರಿದ್ದ ಮಾನವೀಯತೆ ಮಾತ್ರ ಬೇರೆ.
ಸ್ಫೂರ್ತಿ ವಾನಳ್ಳಿ