ಇತ್ತೀಚೆಗೆ ಆಪ್ತಸಲಹೆ ಮತ್ತು ಮನೋಚಿಕಿತ್ಸೆ ಎನ್ನುವ ಶಬ್ದಗಳು ಹೆಚ್ಚು ಪ್ರಚಲಿತವಾಗುತ್ತಿವೆ. ಹಾಗಿದ್ದರೂ ಜನಸಾಮಾನ್ಯರಲ್ಲಿ ಇವು ನಡೆಯುವ ರೀತಿ ಮತ್ತು ಇವುಗಳಿಂದ ಸಿಗಬಹುದಾದ ಪರಿಣಾಮಗಳ ಬಗೆಗೆ ಹೆಚ್ಚಿನ ತಿಳುವಳಿಕೆಯಿಲ್ಲ. ಇದರಿಂದ ಸಾಕಷ್ಟು ಜನರಿಗೆ ಅಗತ್ಯವಿದ್ದರೂ ಇವುಗಳಿಂದ ಪ್ರಯೋಜನ ಪಡೆಯಲಾಗುತ್ತಿಲ್ಲ.
ಆಪ್ತಸಲಹೆ ಎಂದರೇನು?
ಸರಳವಾಗಿ ಹೇಳುವುದಾದರೆ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗೆ (ಮಾಸವ್ಯ) ತನ್ನ ಸಮಸ್ಯೆಗಳಿಗೆ ಅವನದೇ ಆದ ರೀತಿಯಲ್ಲಿ ಪರಿಹಾರವನ್ನು ಹುಡುಕಿಕೊಳ್ಳಲು ಸಹಾಯ ಮಾಡುವುದೇ ಆಪ್ತಸಲಹೆ. ಜನಸಾಮಾನ್ಯರು ತಿಳಿದಿರುವಂತೆ ಆಪ್ತಸಲಹೆಗಾರರು ಉಪದೇಶ ಮಾಡುವುದಿಲ್ಲ, ಬುದ್ಧಿವಾದ ಹೇಳುವುದಿಲ್ಲ ಅಥವಾ ತಮಗೆ ಸರಿಯೆನಿಸುವ ಪರಿಹಾರವನ್ನು ಒಪ್ಪಿಕೊಳ್ಳಲು ಒತ್ತಾಯಿಸುವುದಿಲ್ಲ. ಇದನ್ನೆಲ್ಲಾ ಮನೆಯ ಹಿರಿಯರು, ಸ್ನೇಹಿತರು ಅಥವಾ ಧಾರ್ಮಿಕ ಮುಖಂಡರು ಮಾಡುತ್ತಾರೆ. ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವವನು ತಜ್ಞ ಆಪ್ತ ಸಲಹೆಕಾರನಲ್ಲ ಎಂದು ತಿಳಿಯಬಹುದು.
ಅಂದರೆ ಆಪ್ತಸಲಹೆಯ ನಿಯಮಗಳ ಪ್ರಕಾರ ರೋಗಿ ದಡ್ಡನೂ ಅಲ್ಲ, ಆಪ್ತಸಲಹೆಗಾರ ಮಹಾಜ್ಞಾನಿಯೂ ಅಲ್ಲ. ಮಾಸವ್ಯ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಪೂರ್ಣ ಶಕ್ತಿಯುಳ್ಳವನಾಗಿರುತ್ತಾನೆ. ಆದರೆ ಸಮಸ್ಯೆಗಳ ಭಾರದಲ್ಲಿ ನಲುಗಿದ ಅವನಿಗೆ ಆ ಸಮಯದಲ್ಲಿ ಮಾನಸಿಕ ಗೊಂದಲವಿರುತ್ತದೆ. ಆಪ್ತಸಲಹೆಗಾರ ಅವನ ಗೊಂದಲಗಳನ್ನು ಪರಿಹರಿಸಿ ಚಿಂತನೆಗೆ ಸರಿಯಾದ ದಾರಿಯನ್ನು ತೋರಿಸುತ್ತಾರೆ. ಮಾಸವ್ಯನಿಗೆ ಅವನ ಶಕ್ತಿಯ ಅರಿವು ಮೂಡಿಸಿ ಅವನನ್ನು ಕ್ರಿಯೆಗೆ ಹಚ್ಚುತ್ತಾರೆ. ಮುಂದೆ ಮಾಸವ್ಯ ತನ್ನ ಸಮಸ್ಯೆಗಳಿಗೆ ತಾನೇ ಸಮಾಧಾನ ಕಂಡುಕೊಳ್ಳುತ್ತಾನೆ.
ಕೌಟುಂಬಿಕ ಅಥವಾ ಪತಿಪತ್ನಿಯರಿಗೆ ನೀಡುವ ಆಪ್ತಸಲಹೆಯಲ್ಲಿ ಸಂಬಂಧಗಳ ಸಿಕ್ಕನ್ನು ಬಿಡಿಸಿ, ಅದನ್ನು ಉಳಿಸಿ ಬೆಳೆಸಿಕೊಳ್ಳುವ ಅರಿವು ಮತ್ತು ತರಬೇತಿಯನ್ನು ನೀಡಲಾಗುತ್ತದೆ. ಇಲ್ಲೂ ಕೂಡ ಪತಿಪತ್ನಿಯರಿಬ್ಬರಿಗೂ ಒಪ್ಪಿಗೆಯಾಗುವಂತಹ ಪರಿಹಾರಗಳನ್ನು ಕಂಡುಕೊಳ್ಳಲು ಆಪ್ತಸಲಹೆಗಾರರು ಸಹಾಯಮಾಡುತ್ತಾನೆಯೇ ಹೊರತು, ತನಗೆ ಸರಿಯೆನಿಸಿದ ಪರಿಹಾರವನ್ನು ಒತ್ತಾಯದಿಂದ ಹೇರುವುದಿಲ್ಲ.
ಮನಶ್ಯಾಸ್ತ್ರ ಮತ್ತು ಮನೋವೈದ್ಯಕೀಯಶಾಸ್ತ್ರಗಳು ಬೇರೆ ಬೇರೆಯೇ?
ಆಪ್ತಸಲಹೆ ಮತ್ತು ಮನೋಚಿಕಿತ್ಸೆಗಳಲ್ಲಿ ವ್ಯತ್ಯಾಸವಿಯೇ?
ಜನಸಾಮಾನ್ಯರ ಮಟ್ಟದಲ್ಲಿ ಇವೆರೆಡೂ ಒಂದೇ ಆದರೂ ಕೆಲವು ತಾಂತ್ರಿಕ ವ್ಯತ್ಯಾಸಗಳಿವೆ. ಆಪ್ತಸಲಹೆಯನ್ನು ಸಾಮಾನ್ಯ ತರಬೇತಿಹೊಂದಿದವರು ತೀವ್ರವಲ್ಲದ ಮಾನಸಿಕ ಅಥವಾ ಕೌಟುಂಬಿಕ ಸಮಸ್ಯೆಗಳಿಗಾಗಿ ನೀಡುತ್ತಾರೆ. ಮನೋಚಿಕಿತ್ಸಕರು ತಕ್ಕ ವಿದ್ಯಾರ್ಹತೆ ಮತ್ತು ತರಬೇತಿ ಪಡೆದಿದ್ದು, ಮಾನಸಿಕ ಸಮಸ್ಯೆಗಳ ಆಳಕ್ಕೆ ಹೊಗಿ ವಿವಿಧ ರೀತಿಯ ಚಿಕಿತ್ಸೆ ಮತ್ತು ತರಬೇತಿ ನೀಡಬಲ್ಲವರಾಗಿರುತ್ತಾರೆ. ಸರಳವಾಗಿ ಹೇಳುವುದಾದರೆ ಮನೋಚಿಕಿತ್ಸೆ ಆಪ್ತಸಲಹೆಗಿಂತ ಹೆಚ್ಚು ತಾಂತ್ರಿಕವಾದದ್ದು ಮತ್ತು ಪರಿಣಾಮಕಾರಿಯಾದದ್ದು. ಸಾಮಾನ್ಯವಾಗಿ ಆಪ್ತಸಲಹೆ ನೀಡುವವರು ಮನೋಚಿಕಿತ್ಸೆಯಲ್ಲೂ ತರಬೇತಿ ಹೊಂದಿರುತ್ತಾರೆ ಹಾಗಾಗಿ ಅಗತ್ಯವೆನ್ನಿಸಿದಾಗ ಇವನು ಆಪ್ತಸಲಹೆಗಾರನೋ ಅಥವಾ ಮನೋಚಿಕಿತ್ಸಕನೋ ಎಂಬ ಗೊಂದಲಕ್ಕೆ ಬೀಳದೆ ಭೇಟಿಮಾಡಬಹುದು. ಈ ಲೇಖನದಲ್ಲಿ ಮನೋಚಿಕಿತ್ಸೆ ಎಂಬ ಶಬ್ದವನ್ನು ಹೆಚ್ಚು ಬಳಸಲಾಗಿಲ್ಲ.
ಹೇಗೆ ನಡೆಯುತ್ತದೆ?
ಅಂದರೆ ಇದು ನಿರುಪಯುಕ್ತವೇ?
ಹಾಗಂತ ಆಪ್ತಸಲಹೆ ಅಂದರೆ ಹೇಳಿದ್ದನ್ನು ಸಮಾಧಾನದಿಂದ ಕೇಳುವುದು, ಒಂದಿಷ್ಟು ಸಹಾನುಭೂತಿ ವ್ಯಕ್ತಪಡಿಸುವುದು, ಸೂಕ್ತಸಲಹೆ ನೀಡಿ ಪೀಸು ಕೀಳುವುದು- ಇಷ್ಟೇ ಅಂತ ಸಿನಿಕರಾಗಬೇಕಿಲ್ಲ! ಬರಿಯ ಉಪದೇಶದಿಂದ ಬದಲಾವಣೆ ಅಸಾಧ್ಯ. ಉಪದೇಶ, ಟೀಕೆ ಮಾಡದೇ ಇರುವುದನ್ನು. ಕೌನ್ಸೆಲ್ಲರ್‍ಗಳಿಗೆ ಕಲಿಸಲಾಗುತ್ತದೆ. ಕೌನ್ಸೆಲ್ಲರ್‍ಗಳು ಸಮಸ್ಯೆಗಳನ್ನು ಸಲಹೆಗಾಗಿ ಬಂದವನ ದೃಷ್ಟಿಯಿಂದ ನೊಡಿ, ಅವನಿಗೆ ಮಾನಸಿಕ ಗೊಂದಲಗಳ ಅರಿವು ಮೂಡಿಸಿದ ನಂತರ ಸೂಕ್ತ ಸಲಹೆ ನೀಡಿದರೆ ಪರಿಣಾಮಕಾರಿಯಾಗುತ್ತದೆ. ವೃತ್ತಿಯ ಬಗ್ಗೆ ಕಾಳಜಿ, ಅಗತ್ಯ ವಿದ್ಯಾರ್ಹತೆ, ತರಬೇತಿ ಮತ್ತು ಪ್ರಮುಖವಾಗಿ ಸಾಕಷ್ಟು ಅನುಭವವಿರುವ ಕೌನ್ಸೆಲ್ಲರ್‍ಗಳು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಫಲಿತಾಂಶ ನೀಡಬಲ್ಲರು.
ಆಪ್ತಸಲಹೆ ಬಗ್ಗೆ ಕೀಳರಿಮೆ
ಮಾನಸಿಕ ರೋಗಗಳ ಬಗ್ಗೆ ಜನಸಾಮಾನ್ಯರಲ್ಲಿ ಅಜ್ಞಾನ ಮತ್ತು ಭಯವಿರುವುದರಿಂದ ಈಗಲೂ ತಜ್ಞರ ಬದಲಾಗಿ ಮಾಂತ್ರಿಕರು ಮತ್ತು ಬಾಬಾಗಳಿಂದ ಪರಿಹಾರ ಹುಡುಕುತ್ತಾರೆ. ಇದರ ಬಗ್ಗೆ ಅರಿವಿರುವವರೂ, ಕೌನ್ಸೆಲ್ಲರ್‍ಗಳ ಅಥವಾ ಮನೋವೈದ್ಯರ ಬಳಿಗೆ ಚಿಕಿತ್ಸೆಗೆ ಹೋಗುವುದು ಸಾಮಾಜಿಕ ಕಳಂಕ ಎಂದುಕೊಂಡು ಹಿಂಜರಿಯುತ್ತಾರೆ. ಮೆಟ್ರೋಪಾಲಿಟನ್ ನಗರಗಳಲ್ಲಿ ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಿದ್ದರೂ, ಉಳಿದಂತೆ ನಿಧಾನವಾಗಿ ಅರಿವು ಮೂಡುತ್ತಿದೆ. ನಾವೆಲ್ಲಾ ನೆನಪಿಡಬೇಕಾದ್ದು- ಸಮಸ್ಯೆ ಯಾವುದೇ ವಿಷಯದ್ದೇ ಇರಲಿ ಅದನ್ನು ಪರಿಹರಿಸುವ ಮೊದಲ ಹಂತ ಇರುವ ಸಮಸ್ಯೆಯನ್ನು ಇರುವಂತೆ ಒಪ್ಪಿಕೊಳ್ಳುವುದು. ವಸ್ತುಸ್ಥಿತಿಯನ್ನು ಅಲ್ಲಗಳೆಯುತ್ತಾ ಹೋದರೆ ಹತ್ತಿಕ್ಕಲ್ಪಟ್ಟ ಭಾವನೆಗಳು ಸ್ಪೋಟಗೊಳ್ಳುವ ಅಪಾಯವಿರುತ್ತದೆ. ಆಗ ಬೇಕಾಗುವ ಚಿಕಿತ್ಸೆಗೆ ಹಣ ಮತ್ತು ಸಮಯ ಹೆಚ್ಚಾಗಬಹುದು. ಹಾಗಾಗಿ ಯಾವುದೇ ಮಾನಸಿಕ ಸಮಸ್ಯೆ ಎದುರಾದಾಗ ಮೊದಲು ಆಪ್ತರಲ್ಲಿ ಹಂಚಿಕೊಳ್ಳಬೇಕು. ಸಮಸ್ಯೆಯ ಬಾದನೆ ಮುಂದುವರೆದರೆ ಕುಟುಂಬ ವೈದ್ಯರ ಸಲಹೆ ಪಡೆಯುವಲ್ಲಿ ವಿಳಂಬ ಮಾಡಬಾರದು.
ಆಪ್ತಸಲಹೆ ಯಾವಾಗ?
• ನಮ್ಮ ಹಸಿವು ನಿದ್ದೆಗಳನ್ನು ಕೆಡಿಸುವ ಹಂತಕ್ಕೆ ಬಂದರೆ,
• ದೇಹದ ಮೇಲೆ ಇತರ ಪ್ರತಿಕೂಲ ಪರಿಣಾಮ ಉಂಟುಮಾಡತೊಡಗಿದರೆ,
• ಸ್ನೇಹ ಸಂಬಂಧಗಳನ್ನು ಮುರಿಯಲು ಕಾರಣವಾದರೆ,
• ಸುತ್ತಲಿನ ಜನಗಳೊಡನೆ ದಿನ ನಿತ್ಯದ ವ್ಯವಹಾರಕ್ಕೆ ಅಡ್ಡಿಮಾಡತೊಡಗಿದರೆ,
• ಆತ್ಮಹತೆಯ ಅಥವಾ ಇತರ ಹಿಂಸಾಕ್ರಿಯೆಗಳ ಯೋಚನೆ ಪದೇ ಪದೇ ಬರುತ್ತಿದ್ದರೆ
ನಮಗೆ ಆಪ್ತಸಲಹೆಯ ಅಗತ್ಯವಿದೆ ಎಂದು ತಿಳಿಯಬೇಕು. ಎಲ್ಲ ದೈಹಿಕ ಕಾಯಿಲೆಗಳಿಗೆ ಮನಸ್ಸೇ ಮೂಲವೇನೂ ಅಲ್ಲದಿದ್ದರೂ ಮಾನಸಿಕ ವ್ಯಾಧಿಗಳು ಇರುವ ಕಾಹಿಲೆಗಳ ತೀವ್ರತೆಯನ್ನು ಜಾಸ್ತಿ ಮಾಡಬಹುದು. ಮಾನಸಿಕ ತಳಮಳ ಅಥವಾ ಒತ್ತಡದಿಂದ ಬರುವ ಕಾಯಿಲೆಗಳಿಗೆ ಮನೋದೈಹಿಕ ಖಾಯಿಲೆಗಳು ಎನ್ನುತ್ತಾರೆ. ಇವುಗಳ ಬಗ್ಗೆ ಕುಟುಂಬ ವೈದ್ಯರಲ್ಲಿ ಸಲಹೆ ಪಡೆದು, ಅಗತ್ಯವೆನಿಸಿದಲ್ಲಿ ಕೌನ್ಸೆಲ್ಲರ್‍ಗಳನ್ನು ಭೇಟಿಮಾಡಬಹುದು.
ಖರ್ಚು, ಅವಧಿ
ಕೌನ್ಸೆಲ್ಲರ್‍ಗಳಿಗೆ ಕೊಡಬೇಕಾದ ಫೀಸು ಸಾಮಾನ್ಯವಾಗಿ ಭೇಟಿಗೆ ಇಂತಿಷ್ಟು ಎಂದಿರುತ್ತದೆ. ಇದರ ಬಗ್ಗೆ ಮತ್ತು ನಮಗೆ ಬೇಕಾದ ಇತರ ವಿವರಗಳನ್ನು ಪ್ರಥಮ ಭೇಟಿಯಲ್ಲೇ ಪಡೆದುಕೊಳ್ಳಬೇಕು. ಭೇಟಿಯ ಅವಧಿ ವಾರಕ್ಕೊಮ್ಮೆ ಸುಮಾರು ಒಂದು ಗಂಟೆಯಷ್ಟಿರುತ್ತದೆ. ಪೂರ್ಣ ಚಿಕಿತ್ಸೆಯ ಸಮಯವನ್ನು ನಿಖರವಾಗಿ ಹೇಳಲಾಗದಿದ್ದರೂ ಇದರ ಅಂದಾಜನ್ನು ಪ್ರಥಮ ಭೇಟಿಯಲ್ಲಿ ಪಡೆದುಕೊಳ್ಳಬಹುದು. ನಾವು ಹಂಚಿಕೊಂಡ ವೈಯುಕ್ತಿಕ ವಿಷಯಗಳನ್ನು ನಮ್ಮ ಒಪ್ಪಿಗೆ ಇಲ್ಲದೆ ಕೌನ್ಸೆಲ್ಲರ್‍ಗಳು ಇತರರಿಗೆ ತಿಳಿಸುವಂತಿಲ್ಲ. ಇದರ ಬಗ್ಗೆಯೂ ಅವರಿಂದ ಆಶ್ವಾಸನೆ ಪಡೆದುಕೊಳ್ಳಬಹುದು.
ಕೊನೆಯ ಮಾತು
ಮಾನಸಿಕ ತೊಂದರೆಗಳು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ದಿನನಿತ್ಯದ ಬದುಕನ್ನು ಅಸಹನೀಯವಾಗಿಸುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ತಜ್ಞರಿಂದ ಪಡೆದ ಆಪ್ತಸಲಹೆ ಜೀವನಕ್ಕೆ ಹೊಸ ದಿಕ್ಕು, ಆಯಾಮಗಳನ್ನು ನೀಡಬಲ್ಲದು. ಹಾಗಾಗಿ ಈ ಬಗ್ಗೆ ಹಿಂಜರಿಕೆ ಇಟ್ಟುಕೊಳ್ಳಬೇಕಾಗಿಲ್ಲ.
ವಸಂತ್ ನಡಹಳ್ಳಿ