28 C
Sidlaghatta
Sunday, December 22, 2024

ಅಕ್ಷರಸ್ಥರಾದುದರ ಲಾಭವನ್ನು ರೈತ ಪಡೆಯಲಿ!

- Advertisement -
- Advertisement -

ಜಮಾನಾ ಬದಲಾಗಿದೆ. ಈ ಹಿಂದಿನಂತೆ ರೈತರು ಅಆಇಈ ತಿಳಿಯದ ಅನಕ್ಷರಸ್ಥರಲ್ಲ. ಬರೆಯುವುದು ಅವರ ಪಾಲಿಗೆ ಸಾಹಸವೆಂದು ಅನ್ನಿಸಬಹುದಾದರೂ ಓದುವುದು ಸಲೀಸು. ಆದರೂ ಕೃಷಿಕರು ಓದುವವರಲ್ಲ. ಹೆಚ್ಚೆಂದರೆ ವಿದ್ಯುತ್ ಬಿಲ್, ಫೋನ್ ಬಿಲ್, ಬ್ಯಾಂಕ್ ನೋಟೀಸ್ ಓದಿ ಸುಸ್ತಾಗುತ್ತಾರಷ್ಟೇ! ವಾಸ್ತವವಾಗಿ, ಕೃಷಿಕರ ಒಂದು ಮಟ್ಟಿನ ಹಿನ್ನಡೆಗೆ ಈ ಓದಿನ ಕೊರತೆಯೂ ಕಾರಣ.
ಬೇರೆಯದನ್ನು ಬದಿಗಿಟ್ಟರೂ, ರೈತರು ಕೃಷಿ ಪತ್ರಿಕೆಗಳನ್ನು ಓದುವುದನ್ನು ತಮ್ಮ ಬೇಸಾಯದ ಒಂದು ಭಾಗ ಎಂದುಕೊಳ್ಳಲೇಬೇಕಾದ ದಿನಗಳಿವು. ಸಾಮಾನ್ಯವಾಗಿ ಕೃಷಿ ಪತ್ರಿಕೆಗಳನ್ನು ಓದಿ ಮರೆತುಬಿಡುವುದು ತರವಲ್ಲ. ಆ ಪತ್ರಿಕೆಗಳನ್ನು ಬಹುಕಾಲ ಜೋಪಾನವಾಗಿಟ್ಟುಕೊಳ್ಳಬೇಕು. ವರ್ಷದ ಸಂಚಿಕೆಗಳನ್ನು ಬುಕ್‍ಬೈಂಡ್ ಮಾಡಿಸಿ ಇರಿಸಿಕೊಂಡ ರೈತರನ್ನು ನಾನು ಕಂಡಿದ್ದೇನೆ. ಇವು ಇವತ್ತಲ್ಲವಾದರೂ ಇನ್ನಾವತ್ತೋ ನಿಮ್ಮ ಅನುಕೂಲಕ್ಕೆ ಬರಬಹುದು. ಬಹುಷಃ ಈ ಮಾತಿಗೆ ಈಗ ನೀವು ಓದುತ್ತಿರುವ ಈ `ಕೃಷಿ ಸಂಪದ’ ಪುರವಣಿಗಿಂತ ಬೇರೆ ಉದಾಹರಣೆ ಬೇಡವೇನೋ?
ಎಷ್ಟೋ ಬಾರಿ ರೈತ ತಮ್ಮ ಖರ್ಚು ಕಡಿಮೆ ಮಾಡಲು ಯೋಚಿಸಿದಾಗ ಮೊತ್ತಮೊದಲ ಕತ್ತರಿ ಕೃಷಿ ಪತ್ರಿಕೆಗಳ ಖರೀದಿಗೆ ಬೀಳುತ್ತದೆ. ಇಂದು ಕೃಷಿ ಪತ್ರಿಕೆಗೆ ವಾರ್ಷಿಕ ಬೀಳುವ ವೆಚ್ಚ ಬರೋಬ್ಬರಿ 200 ರೂ. ನಿಜಕ್ಕಾದರೆ, ರೈತನೊಬ್ಬ ಎರಡು ಮೂರು ಕೃಷಿ ಪತ್ರಿಕೆಗಳನ್ನು ಓದುವುದು ಅತ್ಯವಶ್ಯಕ. ಚಂದಾದಾರನಾದರಂತೂ ಭೇಷ್. ನೆನಪಿರಲಿ, ಬಹುಪಾಲು ಮಾದರಿ ಕೃಷಿಕರು ತಮ್ಮ ಸಾಧನೆಯ ಹಿಂದೆ ಕೃಷಿ ನಿಯತಕಾಲಿಕಗಳ ಹಾಗೂ ಕೃಷಿ ಪುಸ್ತಕಗಳ ನೆರವನ್ನು ಪಡೆದಿದ್ದಾರೆ. ಕನ್ನಡದ ಕೆಲವು ರೈತರಿಗಾಗಿಯೇ ಪ್ರಕಟಗೊಳ್ಳುವ ಪತ್ರಿಕೆಗಳನ್ನು ಪರಿಚಯಿಸುವ ಪ್ರಯತ್ನ ಇದು.
ಕೃಷಿ ನಿಯತಕಾಲಿಕಗಳಿಗೆ ಮಾದರಿ ಎನ್ನುವಂತಾದ್ದು `ಅಡಿಕೆ ಪತ್ರಿಕೆ’ ಮಾಸಿಕ. ನುಡಿಚಿತ್ರಕಾರ, ನೆಲ – ಜಲ ವಿಚಾರತಜ್ಞ ಶ್ರೀಪಡ್ರೆಯವರ ನೇತೃತ್ವದಲ್ಲಿ ರೂಪಗೊಂಡಿರುವ `ಅಪ’ಕ್ಕೆ ಈಗ 22ರ ಪ್ರಾಯ. ಪ್ರಕಟಿಸುವ ಪ್ರತಿ ವಿಷಯವನ್ನು ಹಲವು ಕೋನಗಳಿಂದ ವಿಶ್ಲೇಷಿಸಿಯೇ ಪ್ರಕಟಿಸುವ ಇದರ ಧ್ಯೇಯ ರೈತಪರವಾದದ್ದು. ಇದ್ದಕ್ಕಿದ್ದಂತೆ ಲಾಭಕರ ಬೆಳೆ, ಭರ್ಜರಿ ಆದಾಯ ಎನ್ನುವಂತ ಸುಳ್ಳು ಸುಳ್ಳೇ ಲೇಖನಗಳು ಇದರಲ್ಲಿ ಪ್ರಕಟವಾಗುವುದಿಲ್ಲ. ಅನುಭವಿ ರೈತರ, ಕೃಷಿಲೋಕದ ಲೇಖಕರ ಬರಹಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಹಾಗೆಯೇ ಎರೆಗೊಬ್ಬರ, ನೀರು ಇಂಗಿಸುವಿಕೆ, ಹಲಸು ಮುಂತಾದ ಬೆಳೆಗಳ ಮೌಲ್ಯವರ್ಧನೆ…. ಹೀಗೆ ಒಂದು ವಿಚಾರದಲ್ಲಿ ರೈತರಿಗೆ ಮನದಟ್ಟಾಗುವಂತೆ ಬರಹ ಆಂದೋಲನವನ್ನೇ ಹಮ್ಮಿಕೊಳ್ಳುವುದು ಅಡಿಕೆ ಪತ್ರಿಕೆಯ ಹೆಗ್ಗಳಿಕೆ.
ಬಹುಷಃ ಇದಕ್ಕೆ `ಅಡಿಕೆ ಪತ್ರಿಕೆ’ ಎಂಬ ಶೀರ್ಷಿಕೆಯಿರುವುದೇ ಒಂದು ಸಮಸ್ಯೆಯಾಗಿರಲಿಕ್ಕೆ ಸಾಕು. ಅಡಿಕೆ ಬೆಳೆಯ ಹೊರತಾದ ಕೃಷಿಕರು ಇದು ತನಗಲ್ಲ ಎಂದುಕೊಂಡುಬಿಡುತ್ತಾರೆ. ಅಡಿಕೆ ಪತ್ರಿಕೆ ಹಾಗೇನೂ ಇಲ್ಲ. ಇದು ಎಲ್ಲ ಬೆಳೆಗಳ ಉಳುಮೆದಾರರಿಗೂ ಅನುಕೂಲಕರ. ಅಡಿಕೆ ಪತ್ರಿಕೆಯ ವಿಳಾಸ – ಅಂಚೆ ಪಟ್ಟಿಗೆ ಸಂಖ್ಯೆ 29, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574201.
ದಕ್ಷಿಣ ಕನ್ನಡದಿಂದಲೇ ಪ್ರಕಟಗೊಳ್ಳುವ ಇನ್ನೊಂದು ಕೃಷಿ ಮಾಸಿಕ `ಸುಜಾತ ಸಂಚಿಕೆ’. ಇದು ಸಂಪಾದಕೀಯ ಬಳಗದ ಲೇಖನಗಳಿಂದಲೇ ಅಲಂಕೃತವಾಗುವ ಪತ್ರಿಕೆ. ಗಮನಿಸಬೇಕಾದುದೆಂದರೆ, ಈ ಪತ್ರಿಕೆ ಒಂದು ವಿಷಯದಲ್ಲಿ ಪರಿಪೂರ್ಣ ಮಾಹಿತಿಯನ್ನು ಒಂದೇ ಸಂಚಿಕೆಯಲ್ಲಿ ನೀಡುತ್ತದೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ಎಲ್ಲ ಮಾದರಿಯ ಸ್ಪ್ರಿಂಕ್ಲರ್ ಬಗ್ಗೆ ಮಾಹಿತಿ ಹೊತ್ತು ತಂದಿದ್ದನ್ನು ಉದಾಹರಿಸಬಹುದು. ಸಾಮಾನ್ಯ ತಾಂತ್ರಿಕ ಮಾಹಿತಿಗಳಷ್ಟೂ ಇದರಲ್ಲಿ ಲಭ್ಯ. ಹಾಗೆಂದು ಸಾವಯವ – ರಾಸಾಯನಿಕಗಳ ವಿಚಾರದಲ್ಲಿ ಪತ್ರಿಕೆಗೆ ಮಡಿವಂತಿಕೆ ಇಲ್ಲ. ಇಲ್ಲಿ ಇನ್ನೊಂದು ಮಾತು ಪ್ರಸ್ತಾಪಾರ್ಹ. ಎಷ್ಟೋ ಬಾರಿ ಕೃಷಿ ಪತ್ರಿಕೆಗಳು ಲೇಖನಗಳಿಗಾಗಿಯಷ್ಟೇ ಅಲ್ಲ, ಕೃಷಿ ಉಪಕರಣಗಳ, ಬೀಜ – ಔಷಧಗಳ ಜಾಹೀರಾತುಗಳಿಗಾಗಿಯೂ ರೈತರಿಗೆ ಬೇಕಾಗುತ್ತವೆ! ಸುಜಾತ ಸಂಚಿಕೆಯ ವಿಳಾಸ – 107/108, ಸುಪ್ರಭಾತ, ಬಿಜೈ ಕಾಪಿಕಾಡ್, ಮಂಗಳೂರು – 575004.
ಮುಖಪುಟದ ಹೊರತಾಗಿ ಉಳಿದೆಲ್ಲ ಪುಟಗಳಲ್ಲಿ ಸುದ್ದಿ, ಲೇಖನಗಳಿಂದ ಶೃಂಗರಿಸಿಕೊಂಡ ದ್ವೈಮಾಸಿಕ ಸಹಜ ಸಾಗುವಳಿ.
28ರಿಂದ 32ರವರೆಗೆ ಪುಟಗಳು. ಆರಂಭಿಕ ದಿನಗಳ `ಅಡಿಕೆ ಪತ್ರಿಕೆ’ಯ ಆಕಾರ. ಕಾರ್ಪೊರೇಟ್ ದುರಾಕ್ರಮಣವನ್ನು ವಿರೋಧಿಸುವ ಖಡಕ್ ನೀತಿ. ಹಾಗಾಗಿ ರಾಸಾಯನಿಕ ಗೊಬ್ಬರ, ಕೆಮಿಕಲ್ ಔಷಧಿ, ಬಿಟಿ ಜ್ಞಾನಗಳನ್ನು ಆಮೂಲಾಗ್ರವಾಗಿ ಸಹಜ ಸಾಗುವಳಿ ವಿರೋಧಿಸುತ್ತದೆ. ಇವುಗಳ ಮೂಲವಾದ ಬಹುರಾಷ್ಟ್ರೀಯ ಕಂಪನಿಗಳನ್ನು, ಉತ್ಪಾದಕರನ್ನು ಟೀಕಿಸುತ್ತಲೇ ಇರುವುದರಿಂದ ಜಾಹೀರಾತುಗಳ ಕಾಟ ಈ ಪತ್ರಿಕೆ ಓದುಗನಿಗಿಲ್ಲ.
ಸಹಜ ಸಾಗುವಳಿಯನ್ನು ಸರ್ಕಾರೇತರ ಸಂಸ್ಥೆ ಇಕ್ರಾ ಹೊರತರುತ್ತಿದೆ. ಇತ್ತೀಚೆಗೆ ನಡೆದ `ರೈತಶಕ್ತಿ’ ಎಂಬ ದೊಡ್ಡ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಇಕ್ರಾ ಪಾಲ್ಗೊಂಡಿತ್ತು. ಹಲವು ಪುಸ್ತಕ ಪ್ರಕಟನೆಗಳನ್ನು ಮಾಡಿದೆ ಕೂಡ. ಖುದ್ದು ಸಸಾ ತನ್ನನ್ನು ಸುಸ್ಥಿರ ಸಾವಯವ-ಸಹಜ ಕೃಷಿಗೆ ಮೀಸಲಾದ ಪತ್ರಿಕೆ ಎಂದು ಹೇಳಿಕೊಂಡಿದೆ. ಸಸಾ ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಣಗೊಳ್ಳುತ್ತಿದೆ. ಹಲವು ಲೇಖನಗಳನ್ನು ರೈತರ ಆಡುಭಾಷೆಯಲ್ಲಿಯೇ ಇಡುವುದು ವೈಶಿಷ್ಟ್ಯತೆ. ವಿಷಯ ವೈವಿಧ್ಯಕ್ಕೂ ಕೊರತೆಯಿಲ್ಲ. ಮುಖ್ಯವಾಗಿ, ರೈತರಲ್ಲದ ಓದುಗರು ಕೂಡ ಸಹಜ ಸಾಗುವಳಿಯನ್ನು ಖುಷಿಯಿಂದ ಓದಬಹುದು. ಜಿಎಂ ತಂತ್ರಜ್ಞಾನ, ಪರ್ಮಾಕಲ್ಚರ್‍ಗಳಂತ ಹತ್ತಾರು ವಿಚಾರಗಳ ಬಗ್ಗೆ ಮತ್ತು ಅದೇ ವೇಳೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆಯಬಹುದು. ತಜ್ಞರ ಬರಹಗಳ ಭಾಷಾಂತರವೂ ಇಲ್ಲಿ ಲಭ್ಯ. ಬಿಡಿ ಪ್ರತಿಗೆ 12 ರೂ. ವಾರ್ಷಿಕ ಚಂದಾ 60 ರೂ. ಸಸಾ ವಿಳಾಸ -ಸಂಪಾದಕರು, ಸಹಜ ಸಾಗುವಳಿ, ನಂ 22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು – 560075 ದೂರವಾಣಿ – 080-25283370 / 25213104.
ಗಮನ ಸೆಳೆಯುವ ಇನ್ನೊಂದು ಕೃಷಿ ಪತ್ರಿಕೆ `ಹಿತ್ತಲ ಗಿಡ’. ಇದು ಚಾತುರ್ಮಾಸಿಕ. ಅಂದರೆ ನಾಲ್ಕು ತಿಂಗಳಿಗೆ ಒಮ್ಮೆ ಪ್ರಕಟಗೊಳ್ಳುವ ಪತ್ರಿಕೆ. ವರ್ಷಕ್ಕೆ ನಾಲ್ಕೇ ಸಂಚಿಕೆ. ಹಾಗಿದ್ದೂ ಮನೆಯಲ್ಲಿ ಜೋಪಾನವಾಗಿ ತೆಗೆದಿಡಲು ಬೇಕಾಗುವಷ್ಟು ಕೃಷಿ ವಿಚಾರಗಳು ಇದರಲ್ಲಿವೆ. ಕನ್ನಡ, ಇಂಗ್ಲೀಷ್ ಪತ್ರಿಕೆಗಳ ಅತ್ಯುತ್ತಮ ಮಾಹಿತಿಗಳನ್ನು ಹಿತ್ತಲ ಗಿಡದಲ್ಲಿ ಸಂಗ್ರಹಿಸಿ ಕೊಡಲಾಗುತ್ತಿದೆ. ಎಲ್ಲ ಪ್ರದೇಶದ ರೈತರಿಗೆ ಈ ಪತ್ರಿಕೆ ಉಪಯುಕ್ತ ಕೈಪಿಡಿ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಸಂಪರ್ಕ ವಿಳಾಸ – ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಹಿತ್ತಲ ಗಿಡ, ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು – 560065.
ಬೇಕೆಂತಲೇ ಈ ಪತ್ರಿಕೆಗಳ ಚಂದಾದರವನ್ನು ಪ್ರಸ್ತಾಪಿಸುತ್ತಿಲ್ಲ. ರೈತರಿಗೆ ಅವುಗಳ ಬೆಲೆ ಒಂದು ವಿಷಯವಾಗಬಾರದು. ನೂರಾರು ರೂ. ಕೊಟ್ಟು ಎಂಎಲ್ ಅಳತೆಯ ಕೀಟನಾಶಕವನ್ನು ತರುವವರು ನಾವು! ಈ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನುಭವಗಳು ನಮ್ಮ ಕೈಯಲ್ಲೇ ಔಷಧಿ ತಯಾರಿಕೆ ತಂತ್ರ ಇರುವುದನ್ನು ತೋರಿಸಬಲ್ಲದು. ಆಗ ಕೀಟನಾಶಕ ಯಾಕೆ ಬೇಕು? ಮಾಡಬೇಕಾದುದಿಷ್ಟೇ, ಸದರಿ ಪತ್ರಿಕೆಗಳಿಗೆ ಒಂದು ಪತ್ರ ಬರೆದು ಮಾದರಿ ಪ್ರತಿ ಕಳಿಸಿಕೊಡಲು ವಿನಂತಿಸಿ. ಅದಕ್ಕೂ ಮುನ್ನ, ಕನಿಷ್ಠ ಒಂದಾದರೂ ಕೃಷಿ ಪತ್ರಿಕೆಗೆ ಚಂದಾದಾರರಾಗಲು ಗಟ್ಟಿ ಮನಸ್ಸು ಮಾಡಿರಿ!
ನಿಜ, ಇನ್ನೂ ಹಲವು ಕೃಷಿ ಪತ್ರಿಕೆಗಳಿವೆ. ಎಂ.ಟಿ.ಶಾಂತಿಮೂಲೆಯವರು ಜೇನುಕೃಷಿಗೆ ಸಂಬಂಧಿಸಿದಂತೆ ನಿಯತಕಾಲಿಕವೊಂದನ್ನು ಹೊರತರುತ್ತಿರುವ ಸುದ್ದಿಯಿದೆ. ಉತ್ತರ ಕರ್ನಾಟಕದವರಿಗೆ ಆಪ್ತವಾಗುವ `ಅನ್ನದಾತ’ ಮಾಸಿಕವನ್ನು ಈ ಟಿವಿ ಬಳಗ ಹೊರತರುತ್ತಿದೆ. ಬೆಂಗಳೂರಿನ ಅನುರಾಗ್ ಪಬ್ಲಿಕೇಷನ್ಸ್ ಕೂಡ `ಕೃಷಿ ರಂಗ’ ಎಂಬ ಮಾಸಿಕವನ್ನು ಪ್ರಕಾಶಿಸುತ್ತಿದೆ. ಇಂತಹ ಹತ್ತು ಹಲವು ಪತ್ರಿಕೆಗಳನ್ನು ಓದುವುದರಿಂದ ನಷ್ಟದ ಮಾತೇ ಇಲ್ಲ. ಓದುವ ಆಂದೋಲನ ಆರಂಭವಾಗಲಿ…..
– ಮಾ.ವೆಂ.ಸ.ಪ್ರಸಾದ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!