ಮನುಷ್ಯ ಭಾವುಕ ಜೀವಿ ಅರಿಷದ್ವರ್ಗಗಳನ್ನು ಹೊಂದಿದವನು. ಅದರಲ್ಲೂ ಹೊಗಳಿಕೆಗೆ ಅತೀ ಬೇಗ ಸೋಲುತ್ತಾನೆ. ಇದಕ್ಕೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಯಾರೂ ಹೊರತಲ್ಲ.
ಇಲ್ಲಿ ಹೊಗಳಿಕೆ ಎಂದರೆ ಮೆಚ್ಚುಗೆ ಆತನ/ಆಕೆಯ ಪ್ರತಿಭೆಗೆ ಅಥವಾ ಕೆಲಸಕ್ಕೆ ತುಂಬು ಹೃದಯದಿಂದ ಅಭಿನಂದಿಸುವುದು. ಈ ಮೆಚ್ಚಿಗೆಯೂ ಆರೋಗ್ಯಕರ ಮಟ್ಟದಲ್ಲಿದ್ದರೆ ಒಳ್ಳೆಯದು, ಯಾವುದೊಂದು ಜಾಸ್ತಿ ಆದರೂ ಅದರಿಂದ ಹಾನಿ ತಪ್ಪಿದ್ದಲ್ಲ.
ಮೆಚ್ಚುಗೆ ಎನ್ನುವುದು ಮನುಷ್ಯನ ಸಹಜ ಸ್ವಭಾವ ಅದು ಪ್ರತಿಯೊಬ್ಬರಿಗೂ ಪ್ರೇರಣೆಯ್ನನು ಕೊಡುತ್ತದೆ. ಇನ್ನೂ ಮುಂದೆ ಹೋಗಿ ಹೇಳಬೇಕೆಂದರೆ ಒಂದು ರೀತಿಯಲ್ಲಿ ಹೊಗಳಿಕೆ ಎನ್ನುವುದು “ಗುರುತಿಸುವಿಕೆ”ಯಾಗಿದೆ. (ಐಡೆಂಟಿಟಿ) ನಾವು ಮಾಡಿದ ಒಂದು ಸಣ್ಣ ಕೆಲಸವೇ ಆಗಲಿ ಅದನ್ನು ಗುರುತಿಸಿ ಬೆನ್ನು ತಟ್ಟುವುದರಿಂದ ಕೆಲಸ ಮಾಡಿರುವಾತ/ಕೆ ಗೆ ತನ್ನ ಕೆಲಸದ ಅಥವಾ ತನ್ನ ಸಾಮಥ್ರ್ಯದ “ಗುರುತಿಸುವಿಕೆ”ಯಿಂದ ಸಂತೋಷ, ಹೆಮ್ಮೆಯಾದರೆ, ಹೊಗಳುವಾತ/ಕೆ ಯು ಒಂದು ಮೆಟ್ಟಿಲು ಏರಿ ನಿಂತು ಇನ್ನೊಬ್ಬರ ಕೆಲಸವನ್ನು ಗೌರವಿಸಿ ಮೆಚ್ಚುವಂತ ಗುಣ ಬೆಳೆಸಿಕೊಳ್ಳುವಂತಾಗುತ್ತದೆ.
ಆಶ್ಚರ್ಯವಾಗಬಹುದು ಇದರಲ್ಲಿ ಬೆಳೆಸಿಕೊಳ್ಳುವಂತದ್ದೇನು ಇಲ್ಲದಿರಬಹುದು. ಆದರೆ ಮನೆಯಲ್ಲಿ ಯಾರೂ ಯಾರನ್ನು ಹೊಗಳಿ ಒಂದು ಮಾತನಾಡಲಾರರು. ಹೆಂಡತಿಯ ರಂಗೋಲಿ, ಅಡುಗೆ ಅಚ್ಚುಕಟ್ಟುತನ, ಮಕ್ಕಳ ಆಟಪಾಠ, ಕೆಲಸದವಳ ಕೆಲಸ, ಹೀಗೆ ಯಾವುದನ್ನೂ ನಾವು ಮೆಚ್ಚಿ ಒಂದು ಒಳ್ಳೆ ಮಾತನಾಡುತ್ತೇವೆ? ಪ್ರತಿಯೊಬ್ಬರಿಗೂ ತನ್ನ ಕೆಲಸವನ್ನು ಬೇರೆಯವರು ಗುರುತಿಸಬೇಕು ಎನ್ನುವಂತಹ ಆಸೆ ಇರುತ್ತದೆ. ಕಡೇ ಪಕ್ಷ ದಿನ ಅಲ್ಲದಿದ್ದರೂ ಅಪರೂಪಕ್ಕೊಮ್ಮೆ ಒಂದು ಒಳ್ಳೆ ಮಾತನಾಡುತ್ತೇವಾ ನಾವು? ಇಲ್ಲ….. ನಮಗೆ ಅಹಂ! ಇದೇನು ಮಹಾಕೆಲಸ ಎನ್ನುವ ಉಢಾಫೆ. ಆದರೆ ದಿನಚರಿಯಲಿ ಯಾವುದೇ ಕೆಲಸ ಏರುಪೇರಾದರೂ ಕಷ್ಟವೇ ಪ್ರತಿಯೊಂದು ಅದರದರದ್ದೇ ಆದ ಮಹತ್ವ ಹೊಂದಿರುತ್ತದೆ. ಅದನ್ನು ಗುರುತಿಸುವ ಗುಣ ನಾವು ಬೆಳೆಸಿಕೊಳ್ಳಬೇಕಲ್ಲವೇ?
ಮನೆಯ ಮುಂದೆ ಸಣ್ಣ ರಂಗೋಲಿ ಹಾಕುವ ಗೃಹಿಣಿಯಿಂದ ಹಿಡಿದು ಉನ್ನತ ಹುದ್ದೆಗೇರಿದ ಗಂಡಸು/ಹೆಂಗಸಿನ ತನಕ, ಹುಟ್ಟಿದ ಮಗುವಿನಿಂದ ಹಿಡಿದು ಕೊನೆದಿನ ಎಣಿಸುತ್ತಿರುವ ಮುದುಕರವರೆಗೂ ಹೊಗಳಿಕೆ ಪ್ರಭಾವ ಬೀರುತ್ತದೆ. ಮೆಚ್ಚುಗೆಯಲ್ಲಿ ವಿಚಿತ್ರವಾದ ಶಕ್ತಿಯಿದೆ, ಒಮ್ಮೆ ನಿಮ್ಮ ಮನೆ ಕೆಲಸದಾಕೆಗೆ ಅಥವಾ ಮಕ್ಕಳಿಗೆ, ಅಥವಾ ಬೇರೇಯಾರಿಗೇ ಅಗಿರಲಿ ಅವರು ಮಾಡಿದ ಕೆಲಸದ ಬಗ್ಗೆ ಒಳ್ಳೆ ಮಾತನಾಡಿ ಅದರ ಪರಿಣಾಮ ನೀವೇ ಕಾಣುವಿರಿ.
– ರಚನ
- Advertisement -
- Advertisement -
- Advertisement -
- Advertisement -