“ಈಗೆಲ್ಲಾ ಕಂಪ್ಯೂಟರ್ ಸೈನ್ಸ್‍ಗೆ ಸ್ಕೋಪಿಲ್ಲ, ಎಲೆಕ್ಟ್ರಾನಿಕ್ಸ್‍ಗೇ ಸೇರಿಕೊಬೇಕು;
ಬೇಸಿಕ್ ಸೈನ್ಸ್‍ಗೆ ಇನ್ನು ಮುಂದೆ ಬಾಳಾ ಸ್ಕೊಪಿರುತ್ತೆ. ಅದಕ್ಕೆ ಹೋಗಿ;
ಸಿಎ ಮಾಡಿದರೆ ನೋಡು ಯಾವಾಗಲೂ ಸ್ಕೋಪಿರತ್ತೆ:
ಬಿಎ, ಎಂಬಿಎ ಗೆಲ್ಲಾ ಏನೇನೂ ಸ್ಕೋಪಿಲ್ಲ, ಬರೀ ದುಡ್ಡು ದಂಡಕ್ಕೆ ಅದನ್ನು ಯಾಕೆ ಓದ್ತೀರಾ”
ಪಿ ಯು ಮುಗಿಯುತ್ತಿದ್ದಂತೆ ಪೋಷಕರು, ಸ್ನೇಹಿತರು, ಉಪಾಧ್ಯಯರು, ಕೌನ್ಸೆಲರ್‍ಗಳು-ಹೀಗೆ ಕಂಡಕಂಡವರೆಲ್ಲಾ ಅವರವರಿಗೆ ತಿಳಿದಂತೆ ಸಲಹೆಗಳನ್ನು ಕೊಡತೊಡಗುತ್ತಾರೆ. ಇವುಗಳ ಭಾರಕ್ಕೆ ನಲುಗಿ ಹೋದ ವಿದ್ಯಾರ್ಥಿಗಳು ಕೊನೆಗೆ ಏನೂ ನಿರ್ಧರಿಸಲಾರದೆ ತಮ್ಮ ಭವಿಷ್ಯದಲ್ಲಿ ಏನು ಕಾದಿದೆಯೋ ಎಂಬ ಆತಂಕದಲ್ಲಿ ಯಾವುದಾದರೂ ಕೋರ್ಸ್‍ಗೆ ಸೇರುತ್ತಾರೆ.
ನನ್ನ ಬಂಧುಗಳ ಮಗನೊಬ್ಬ ಗಣಿತದಲ್ಲಿ ಅದ್ಭುತ ಪ್ರತಿಭಾವಂತನಾಗಿದ್ದ. ಪ್ರೌಢಶಾಲೆಯಲ್ಲಿರುವಾಗಲೇ ಕಾಲೇಜಿನವರಿಗೆ ಗಣಿತದ ಲೆಕ್ಕ ಬಿಡಿಸುವುದಕ್ಕೆ ಸಹಾಯ ಮಾಡುತ್ತಿದ್ದ. ಹೈಸ್ಕೂಲ್‍ನ ನಂತರ ಅವರ ತಂದೆ ಅವನನ್ನು ಒತ್ತಾಯದಿಂದ ಕಲಾವಿಭಾಗಕ್ಕೆ ಸೇರಿಸಿದರು. ಪರಿಣಾಮ ಅಂದರೆ ಆತ ಪಿ ಯು ಪರೀಕ್ಷೆಯಲ್ಲಿ ಮೂರನೇ ದರ್ಜೆಗೆ ಇಳಿದ. ನಂತರ ಜೀವನೋಪಾಯಕ್ಕಾಗಿ ಏನೋ ದಾರಿ ಹುಡುಕಿಕೊಂಡರೂ ಆತನ ಗಣಿತದ ಪ್ರತಿಭೆ ಮುಕ್ಕಾಗಿಹೋಯಿತು.
ಇತ್ತೀಚಿನ ಇನ್ನೊಂದು ಘಟನೆ ನೋಡಿ. ನನ್ನ ಪರಿಚಿತರೊಬ್ಬರು ಮಗನನ್ನು ಒತ್ತಾಯದಿಂದ ಎಂಬಿಬಿಎಸ್‍ಗೆ ಕಳಿಸಿದರು. ಎರಡೇ ತಿಂಗಳಲ್ಲಿ ಆ ವಿದ್ಯಾರ್ಥಿ ಮನೆಗೆ ಹಿಂತಿರುಗಿದ. ಮುಂದಿನ ವರ್ಷ ಮತ್ತೆ ಅಖಿಲ ಭಾರತ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿ ಈಗ ತನ್ನಿಷ್ಟದಂತೆ ಎಲೆಕ್ಟ್ರಾನಿಕ್ಸ್ ಅಭ್ಯಾಸ ಮಾಡುತ್ತಿದ್ದಾನೆ.
ದುರಾದೃಷ್ಟವೆಂದರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಹೀಗೆ ಪೋಷಕರ ವಿರುದ್ಧ ನಿಂತು ತಮ್ಮದೇ ದಾರಿಯನ್ನು ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಇನ್ನೂ ಹೆಚ್ಚಿನ ತೊಂದರೆ ಇರುವುದು ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗಳ ಬಗೆಗೆ ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ. ಹಾಗಾಗಿ ಅವರೆಲ್ಲಾ “ಸ್ಕೋಪ್” ನ ಬೆನ್ನು ಹತ್ತುತ್ತಾರೆ.
ನಮ್ಮ ಅಭಿರುಚಿಗಳನ್ನು ಸರಿಯಾಗಿ ಗುರುತಿಸುವುದು ಅಂತಹ ಸರಳವಾದುದ್ದಲ್ಲ. ಹದಿವಯಸ್ಸಿನವರೆಗೆ ವೈದ್ಯರನ್ನು ನೋಡಿದರೆ ವೈದ್ಯ, ಹಾಡನ್ನು ಕೇಳಿದೊಡನೆ ಹಾಡುಗಾರ, ಕಾರ್ಖಾನೆಗಳನ್ನು ನೋಡಿದರೆ ಉದ್ಯಮಿ-ಹೀಗೆ ಕಂಡಿದ್ದೆಲ್ಲಾ ಆಗಬೇಕೆನ್ನುವ ಹಗಲು ಕನಸು ಕಾಣುತ್ತೇವೆ. ಸುಮಾರು ಹದಿನೆಂಟನೇ ವಯಸ್ಸಿಗೆ ಕವಲು ದಾರಿಯಲ್ಲಿ ನಿಂತಾಗ ಏನೆಲ್ಲಾ ಲೆಕ್ಕಾಚಾರಗಳನ್ನು ಹಾಕಿ ಯಾವುದೋ ಒಂದು ದಾರಿಯಲ್ಲಿ ನುಗ್ಗುತ್ತೇವೆ. ಅದು ನಮ್ಮಿಷ್ಟದ ದಾರಿಯಲ್ಲ ಎಂದು ತಿಳಿಯುವಷ್ಟರಲ್ಲಿ ಹಿಂತಿರುಗಿ ಬರಲಾರದಷ್ಟು ದೂರ ಹೋಗಿರುವುದರಿಂದ ಅಲ್ಲಿಯೇ ಮುಂದುವರೆಯುವ ಅನಿವಾರ್ಯತೆ ಉಂಟಾಗಿರುತ್ತದೆ.
ಆದ್ದರಿಂದ ಮಕ್ಕಳ ಅಭಿರುಚಿಗಳನ್ನು ಗೌರವಿಸಿ, ಅವರಿಗೆ ಅದನ್ನು ಬೆಳೆಸಲು ಸಹಾಯ ಮಾಡಬೇಕಾತ್ತದೆ. ಇದಕ್ಕೆ ಪೋಷಕರಿಗೆ ಬೇಕಾಗಿರುವುದು ವಿಶೇಷ ಪರಿಣಿತಿಯಲ್ಲ, ಕಾಳಜಿ ಮತ್ತು ತಾಳ್ಮೆ ಮಾತ್ರ. ಮಕ್ಕಳನ್ನು ಟೀವಿ, ಕಂಪ್ಯೂಟರ್, ಮೊಬೈಲ್‍ಗಳಿಂದ ವಿಮುಖರನ್ನಾಗಿಸಿ ಸುಮ್ಮನೆ ಸಮಯ ಕಳೆಯಲು ಹೇಳಿ. ನಾವಂದುಕೊಳ್ಳುವಂತೆ ಅವರು ಸೋಮಾರಿಗಳಾಗಿ ಕೂರುವುದಿಲ್ಲ. ತಮ್ಮ ಕ್ರಿಯಾಶೀಲತೆಯನ್ನು ಯಾವುದಾದರೂ ದಿಕ್ಕಿನಲ್ಲಿ ಹರಿಸಿಯೇ ಹರಿಸುತ್ತಾರೆ. ಅದು ಅವರ ನಿಜವಾದ ಆಸಕ್ತಿಯ ಕ್ಷೇತ್ರವಾಗಿರುತ್ತದೆ.
ವಸಂತ್ ನಡಹಳ್ಳಿ