ಇತ್ತೀಚಿನ ದಿನಗಳಲ್ಲಿ ದಿನ ಪತ್ರಿಕೆಯ ಒಂದಲ್ಲ ಒಂದು ಕಡೆ ದೇಶದ ಒಂದಲ್ಲ ಒಂದು ಕಡೆ ವಿದ್ಯಾರ್ಥಿಗಳ ಆತ್ಮಹತ್ಯೆಯ ಕುರಿತು ವರದಿ ಪ್ರಕಟವಾಗುತ್ತಿರುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ಈ ಆತ್ಮಹತ್ಯಾ ಪ್ರವೃತ್ತಿ ಅತ್ಯಂತ ಅಘಾತಕಾರಿಯಾದುದ್ದಾಗಿ ಬೆಳೆದು ಆತಂಕ ಹೆಚ್ಚಿಸುವಂಥದ್ದು. ಬೆಳಗಬೇಕಾದವರು ಹೀಗೆ ನಾಶವಾಗುತ್ತಿರುವುದು ಸ್ವಾಸ್ಥ್ಯ ಸಮಾಜದ ಲಕ್ಷಣವಲ್ಲ. ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಇದರಿಂದ ನಿರೀಕ್ಷಿಸುವುದೂ ಕಷ್ಟ. ಪತ್ರಿಕೆಗಳ ವರದಿಯನ್ನು ಕೇವಲ ವರದಿಯೆಂದು ತಾತ್ಸರ ಮಾಡುವುದು ಸಮಸ್ಯೆಯ ಗಂಭೀರಯತೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಈ ಕುರಿತು ಒಟ್ಟಾರೆ ಸಮಾಜದಲ್ಲಿ ಜಾಗೃತಿ ಮೂಡದಿದ್ದಲ್ಲಿ ಇದನ್ನು ತಡೆಗಟ್ಟಲು ಬೇಕಾದ ಮಾರ್ಗೊಪಾಯಗಳನ್ನು ಕಂಡುಕೊಳ್ಳದಿದ್ದರೆ ಭವಿಷ್ಯವೆನ್ನುವುದು ಭಯಾನಕವಾಗಬಹುದು.
ಬಹುಶಃ ತಂದೆ ತಾಯಿ ಮತ್ತು ಒಂದೋ – ಎರಡೋ ಮಕ್ಕಳು ಮಾತ್ರವಿರುವ ಚಿಕ್ಕ ಚಿಕ್ಕ ಕುಟುಂಬ ವ್ಯವಸ್ಥೆ ಕೂಡ ಕಾರಣವಾಗಿರಬಹುದೇನೋ ಅವಿಭಕ್ತ ಕುಟುಂಬ ಪದ್ಧತಿಯಿಂದಾಗಿ ದೊಡ್ಡಪ್ಪ – ದೊಡ್ಡಮ್ಮ – ಅಜ್ಜ – ಅಜ್ಜಿ ಹೀಗೆ ಒಬ್ಬರಲ್ಲ ಒಬ್ಬರು ಮಕ್ಕಳ ಯೋಗಕ್ಷೇಮದ ಕುರಿತು ನಿಗಾವಹಿಸುತ್ತಿದ್ದರು. ಅವರಲ್ಲಿ ಭರವಸೆ ತುಂಬುತ್ತಿದ್ದರು. ಬೆನ್ನು ತಟ್ಟುತ್ತಿದ್ದರು. ತರಗತಿ ಅನುತ್ತೀರ್ಣವಾದಾಗಲೂ – ಅದೇನೂ ಅಲ್ಲ ಎಂಬಂತೆ ಬಯ್ಯುವ ಯಾ ದಂಡಿಸುವ ಪಾಲಕರಿಂದ ಕಾಪಾಡುತ್ತಿದ್ದರು. ಈಗ ಮಕ್ಕಳ ಮೇಲೆ ನೇರವಾದ ಪರಿಣಾಮಗಳಾಗುತ್ತಿದ್ದು, ಅದನ್ನು ತಡೆದುಕೊಳ್ಳುವ ಶಕ್ತಿಯಾಗಲೀ – ತಿಳುವಳಿಕೆಯಾಗಲೀ ಅವರಿಗಿಲ್ಲದ್ದರಿಂದ ಸಹಜವಾಗಿ ಸಾವಿನ ಮನೆಯ ಕದ ತಟ್ಟುತ್ತಾರೆ ಎನಿಸುತ್ತದೆ. ತಾವು ನಡೆವಾಗ ಬಿದ್ದು ಪೆಟ್ಟಾದರೆ ಅಥವಾ ಸೈಕಲ್ ಕಲಿಯುವಾಗ ಬಿದ್ದು ಕೈ ಕಾಲು ತೆರಚಿ ಪೆಟ್ಟಾದರೆ – ಮಕ್ಕಳಿಗೆ ದೈಹಿಕವಾಗಿ ನೋವಾಗುತ್ತದೆ. ಆದರೆ ಅವರದನ್ನು ನಿಭಾಯಿಸಿಕೊಳ್ಳುತ್ತಾರೆ. ಅದೇ ಏನೋ ತಪ್ಪು ಮಾಡಿದರೆಂದು ಶಾಲಾ ಶಿಕ್ಷಕರು ಒಂದು ಪೆಟ್ಟು ಹೊಡೆದರೆ ಅದರ ನೋವಿಗಿಂತ ಎಲ್ಲರೆದರೂ ಹೊಡೆದರೆಂಬ ಮಾನಸಿಕ ನೋವು ಅಧಿಕವಾಗಿ ಬಿಡುತ್ತದೆ. ಪ್ರತಿಯೊಂದಕ್ಕೂ ಹೀಗೆ ಸೂಕ್ಷ್ಮವಾಗುತ್ತ ಸಾಗಿದರೆ – ಬದುಕನ್ನೆದುರಿಸುವುದು ಕಷ್ಟವಾಗುತ್ತದೆ. ಶಿಕ್ಷಕರು ಕೊಡುವ ಚಿಕ್ಕ ಪುಟ್ಟ ಶಿಕ್ಷೆಗಳು ತಮ್ಮನ್ನು ತಿದ್ದಲು – ತಮ್ಮನ್ನು ಸರಿದಾರಿಗೆ ಒಯ್ಯಲು ಎಂಬ ತಿಳುವಳಿಕೆ ಅವರಿಗೆ ಮೂಡುವಂತೆ ಆಗುವುದು ಅಗತ್ಯ. ಒಂದು ಚಿಕ್ಕ ಮಾತು – ಚಿಕ್ಕ ಪೆಟ್ಟು ಬದುಕನ್ನೇ ಕೊನೆಗೊಳಿಸಿಕೊಳ್ಳುವ ಹಂತವನ್ನು ತಲುಪಬಾರದು ದೋಸೆಗೆ ಪಲ್ಯವನ್ನಿಂದು ಮಾಡದಿದ್ದರೆ ಬದುಕಲ್ಲಿ ತಿನ್ನುವ ಅಂದಿನ ದೋಸೆಯೇ ಕೊನೆಯ ದೋಸೆಯಲ್ಲ ಎಂಬ ಸ್ಪಷ್ಟ ತಿಳುವಳಿಕೆ ಹೊಂದುವುದು ಅಗತ್ಯ. ಆದರೆ ಇದನ್ನು ತಿಳಿಸಿ ಹೇಳುವುದು ಹೇಗೆ ಮತ್ತು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ.
ಪಾಲಕರ ಜವಾಬ್ದಾರಿ ಮತ್ತು ಶಿಕ್ಷಕರ ಜವಾಬ್ದಾರಿ ಬಹಳ ಮುಖ್ಯವಾದದ್ದು. ಆದಷ್ಟರಮಟ್ಟಿಗೆ ಮಕ್ಕಳು ಪ್ರತಿಯೊಂದು ವಿಷಯದಲ್ಲೂ ಅತೀ ಸೂಕ್ಷ್ಮವಾಗಿ ಪ್ರತಿಕ್ರಿಯಿಸದಂತೆ ನೋಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಬಹುಶಃ ಪ್ರಾಥಮಿಕ ಹಂತದಲ್ಲೂ ಆಪ್ತ ಸಲಹಾ ವ್ಯವಸ್ಥೆ ಅಗತ್ಯವೇನೋ.
ಇಂಗ್ಲೀಷ್‍ನ ಖ್ಯಾತ ಕವಿಯತ್ರಿ ಎಮಿಲಿ ಡಿಕನ್‍ಸನ್‍ಳಿಗೆ ಆತ್ಯಹತ್ಯೆ ಎನ್ನುವುದೇ ಒಂದು ಮೋಹ – ಸೆಳೆತವಾಗಿತ್ತು. ಅವಳದ್ದೇ ಕವಿತೆ “Becacuse I could not stop for death” ನೋಡಿ ಸಾವನ್ನು ಪ್ರಿಯಕರನಂತೆ ಕಾಣುವ ವಿಚಿತ್ರ ಕವಿತೆ. ಕೊನೆಗೂ ಅವಳ ಬದುಕು ಆತ್ಮಹತ್ಯೆಯಲ್ಲೆ ಅಂತ್ಯಗೊಂಡಿದ್ದು, ಹಾಗೆ ನಮ್ಮ ವಿದ್ಯಾರ್ಥಿಗಳಿಗೂ ಆತ್ಮಹತ್ಯೆ ಎನ್ನುವುದು ಗೀಳಾಗಬಾರದು. ಸಾವೇ ಸಮಸ್ಯೆಗಳಿಗೆಲ್ಲಾ ಉತ್ತರ ಎಂಬಂತಹ ತತ್ವ ಅವರಿಗೆ ಭೋದೆಯಾಗಕೂಡದು. ಕೆಲವರು ಅತಿಯಾದ ನೋವಾದಾಗ ಹೇಳುತ್ತಾರೆ. “ಓ ದೇವರೆ ನನ್ನ ಜೀವ ಯಾಕಾದರೂ ಹೋಗುವುದಿಲ್ಲವೋ” ಎಂದು ಆದರೆ ಹೀಗೆ ನೋವಿನಿಂದ ಹೇಳುವ ಬದಲಿಗೆ “ಓ ದೇವರೆ ಯಾರ ಜೀವ ಯಾಕಾದರೂ ಹೋಗಲೊಲ್ಲದು ಯಾಕೆ” ಎಂದು ಹೇಳುತ್ತಾ ನನ್ನ ಜೀವದ ಕುರಿತು ಜೀವ ಪ್ರೀತಿಯನ್ನು ಬೆಳೆಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾದರೆ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರವೃತ್ತಿಗೆ ಸ್ವಲ್ಪವಾದರೂ ಕಡಿವಾಣ ಬೀಳಬಹುದು.
ರವೀಂದ್ರ ಭಟ್ ಕುಳಿಬೀಡು