ಕಳೆದ ಕೆಲವಾರು ದಿನಗಳಿಂದ ಬೆಂಗಳೂರು ನಗರದ ಕಸ ವಿಲೇವಾರಿ ದೊಡ್ಡ ಸುದ್ದಿಯಲ್ಲಿದೆ. ವರ್ತಮಾನ ಪತ್ರಿಕೆಗಳ ಮುಖಪುಟದಿಂದ ಹಿಡಿದು ಇಂಗ್ಲೀಷ್ ಮತ್ತು ಹಿಂದಿಯ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಕೂಡ ಪದೇ ಪದೇ ಕಾಣಿಸಿಕೊಂಡ ಹೆಮ್ಮೆಗೆ ಇದು ಪಾತ್ರವಾಯಿತು! ರಾಜ್ಯದ ಉಚ್ಛನ್ಯಾಯಾಲಯಲ್ಲಿ ಇದಕ್ಕೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ ನಡೆಯಿತು.
ಇದೆಲ್ಲದರ ಜೊತೆಗೆ ರಾಜಕೀಯವಾಗಿ ಅವರಿವರನ್ನು ದೂಷಿಸುವ ಮಾಮೂಲಿನ ಕಸರತ್ತುಗಳೂ ನಡೆಯಿತು. ಈ ಕಸದ ರಾಮಾಯಣಕ್ಕೆ ರಾಜ್ಯ ಸರ್ಕಾರ ಎಷ್ಟು ಹೊಣೆ ಮತ್ತು ಬೆಂಗಳೂರು ಕಾರ್ಪೋರೇಶನ್ ಎಷ್ಟು ಕಾರಣ ಎನ್ನುವ ಚರ್ಚೆಯೂ ಆಯಿತು. ಯಾವುದೇ ದೂರಗಾಮೀ ಯೋಜನೆಯಿಲ್ಲದೆ ಎಲ್ಲಾ ಕಡೆ ದೋಚುವ ಹುನ್ನಾರುಗಳನ್ನಿಟ್ಟುಕೊಂಡೇ ಕೆಲಸ ಮಾಡುವ ನಮ್ಮ ರಾಜ್ಯವಾಳುವ ದೊರೆಗಳು ಮತ್ತು ಅವರ ಕೈಗೊಂಬೆಗಳಂತೆ ವರ್ತಿಸುತ್ತಾ ದೋಚಿದ್ದರಲ್ಲಿ ತಮ್ಮ ಪಾಲನ್ನು ಬಾಚಿಕೊಳ್ಳುತ್ತಾ ಇರುವ ಅಧಿಕಾರಿ ವರ್ಗ-ಇವರಿಬ್ಬರೂ ಇದಕ್ಕೆ ಒಂದು ಖಾಯಮ್ಮಾದ ಪರಿಹಾರ ಕಂಡುಹಿಡಿಯುವರೆಂಬ ಭ್ರಮೆಯಲ್ಲಿ ಬೆಂಗಳೂರಿಗರು ದಿನ ನೂಕುತ್ತಿದ್ದಾರೆ.
ಹೀಗೆಂದ ತಕ್ಷಣ ನಮ್ಮ ಬುದ್ಧಿಜೀವಿಗಳೆಲ್ಲಾ ಮುಗಿಬಿದ್ದು ನ್ಯೂಯಾರ್ಕ್ ಸಿಂಗಾಪೂರ್ಗಳ ಉದಾಹರಣೆಗಳನ್ನು ಕೊಡತೊಡಗುತ್ತಾರೆ. ಅಲ್ಲಿರುವ ಜನಸಂಖ್ಯೆಗೆ, ಅವರ ಜೀವನ ಶೈಲಿಗೆ, ಅವರ ಬಳಿ ಇರಬಹುದಾದ ಸಂಪನ್ಮೂಲಗಳಿಗೆ, ಅವರು ಅನುಸರಿಸುತ್ತಿರುವ ಮಾದರಿಗಳು ಸೂಕ್ತವಿರಬಹದು. ಭಾರೀ ಮಟ್ಟದಲ್ಲಿ ಕಸ ಹೊರಹಾಕುತ್ತಿದ್ದರೆ ಅವರ ವ್ಯವಸ್ಥೆಯೂ ಕೂಡ ಕುಸಿದು ಬೀಳುವ ದಿನಗಳು ದೂರವಿರಲಾರದು ಎಂದು ಅಲ್ಲಿನ ಸಾಮಾಜಿಕ ಚಿಂತಕರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇದೆಲ್ಲವನ್ನೂ ಕಡೆಗಣಿಸಿ, ನಮ್ಮ ಮಿತಿಗಳನ್ನೂ ಕಂಡುಕೊಳ್ಳದೇ ಅಭಿವೃದ್ಧಿ ಹೊಂದುವ ಹಪಹಪಿಕೆಯಲ್ಲಿ ನಾವು ಅವರ ಜೀವನ ಶೈಲಿಯನ್ನು, ಅವರ ಮಾದರಿಗಳನ್ನು ಕಣ್ಣುಮುಚ್ಚಿ ಅನುಸರಿಸುತ್ತಿದ್ದೇವೆ. ಶ್ರೀಮಂತ ದೇಶಗಳಿಗೆ ಹೊಂದುವ ಪರಿಹಾರಗಳೇ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೂ ಅನ್ವಯವಾಗುತ್ತದೆ ಎನ್ನವ ಅಮೇರಿಕಾ ಮತ್ತದರ ಮಿತ್ರ ದೇಶಗಳ ನಿಲುವನ್ನು ಇ ಎಫ್ ಶ್ಯೂಮ್ಯಾಕರ್ ಎನ್ನವ ಪಾಷ್ಚಿಮಾತ್ಯ ಅರ್ಥಶಾಸ್ತ್ರಜ್ಞ ತನ್ನ ಪುಸ್ತಕ “ಸ್ಮಾಲ್ ಈಸ್ ಬ್ಯೂಟಿಫುಲ್” ಎನ್ನುವ ಪ್ರಸಿದ್ಧ ಪುಸ್ತಕದಲ್ಲಿ ಪದೇ ಪದೇ ಪ್ರಶ್ನಿಸುತ್ತಾನೆ. ನಮ್ಮ ಕಸ ಉತ್ಪಾದನೆಯ ವಿಷಯದಲ್ಲೂ ಇದರ ಬಗೆಗೆ ನಾವೆಲ್ಲ ತುರ್ತಾಗಿ ಯೋಚಿಸಬೇಕಾಗಿದೆ.
ಸಧ್ಯಕ್ಕೆ ಬಿಬಿಎಂಪಿ ಕಸ ವಿಲೇವಾರಿಯ ಸಮರ್ಥ ವ್ಯವಸ್ಥೆ ಮಾಡಬಹುದು. ಆದರೆ ಅದು ಮತ್ತೆ ಕುಸಿದು ಬೀಳುವ ದಿನ ದೂರವಿರುವುದಿಲ್ಲ. ಹಾಗಾಗಿ ಬೆಂಗಳೂರಿಗರು ತಮ್ಮ ನಿರಂತರ ಸ್ವರ್ಗದ ಭ್ರಮೆಗಳಿಂದ ಹೊರಬಂದು ತಕ್ಷಣ ತಮ್ಮ ಕಸದ ಉತ್ಪಾದನೆಯ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡುವ ಬಗೆಗೆ ಯೋಚಿಸಬೇಕು. ನಾಗರಿಕ ಸಂಘಟನೆಗಳು, ಧಾರ್ಮಿಕ ಮುಖಂಡರು ಮುಂತಾದವರೆಲ್ಲಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಎಲ್ಲವನ್ನೂ ಸರ್ಕಾರ ತಲೆಗೆ ಕಟ್ಟಿದರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಬರಿಯ ಭಾಷಣ, ಉಪದೇಶ, ಪ್ರವಚನಗಳಿಂದ ಸಾರ್ಥಕತೆಯನ್ನು ಕಂಡುಕೊಳ್ಳದೆ, ಇದಕ್ಕೆ ಒಂದು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಮುಂದಿನ 5 ವರ್ಷಗಳಲ್ಲಿ ಕಸದ ಮಟ್ಟವನ್ನು ಈಗಿರುವ ಅರ್ಧದಷ್ಟಕ್ಕೆ ಇಳಿಸಬೇಕು ಮತ್ತು ಅದಕ್ಕಾಗಿ ಯಾವಯಾವ ಕ್ಷೇತ್ರದಲ್ಲಿ ಎಂತಹ ಕ್ರಮ ಕೈಕೊಳ್ಳಬೇಕು ಎಂಬಂತಹ ಸ್ಪಷ್ಟ ಯೋಜನೆ ಹಾಕಿಕೊಳ್ಳಬೇಕು. ಜೊತೆಗೆ ನಾಗರಿಕರನ್ನು ಇದರಲ್ಲಿ ಸಕ್ರಿಯವಾಗಿ ಒಳಗೊಳ್ಳುವಂತೆ ಮಾಡಬೇಕು. ಇಲ್ಲದಿದ್ದರೆ ಅವರು ನಿಷ್ಕ್ರಿಯ ಟೀಕಾಕಾರರಾಗಿಯೇ ಉಳಿದುಬಿಡುತ್ತಾರೆ.
ಭಗವಂತನ ಈ ದಿವ್ಯ ಸೃಷ್ಟಿಯಾದ ಭೂಮಿಯನ್ನು ಶುಚಿಯಾಗಿಡುವುದಕ್ಕಿಂತ ಹೆಚ್ಚಿನ ಪುಣ್ಯಕಾರ್ಯ ಇನ್ನೇನಿರಲು ಸಾಧ್ಯ? ಹಾಗಾಗಿ ನಮ್ಮ ಧಾರ್ಮಿಕ ಮುಖಂಡರುಗಳು ಇದರಲ್ಲಿ ಮುಂದಾಳತ್ವ ವಹಿಸದರೆ ಬಹಳ ಶೀಘ್ರ ಪರಿಣಾಮಗಳನ್ನು ಆಶಿಸಬಹದು.
ವಸಂತ್ ನಡಹಳ್ಳಿ