ಮಗುವಿನ ಆಯ್ಕೆ
ಜೀವನ ಪರ್ಯಂತದ ಒಂದು ಅನನ್ಯವಾದ ಸಂಬಂಧವನ್ನು ರೂಪಿಸಿಕೊಳ್ಳಲು ಆಯ್ಕೆ ಮಾಡುವ ವ್ಯಕ್ತಿಯನ್ನು ಅಂಗಡಿಯಲ್ಲಿ ಬಟ್ಟೆಯನ್ನು ಕೊಳ್ಳುವಂತೆ ಹೆಕ್ಕಿ ತೆಗೆಯುಲಾಗುವುದಿಲ್ಲ. ಹಾಗೆ ದತ್ತಕಕ್ಕೆ ಸಿದ್ದವಿರುವ ಮಕ್ಕಳನ್ನು ಪೋಷಕರೆದುರು ಪ್ರದರ್ಶಿಸುವುದು ಅಮಾನವೀಯವಾಗಬಹುದು. ದತ್ತು ಪಡೆಯುವವರಿಗೂ ಕೂಡ ಹತ್ತಾರು ಪುಟಾಣಿ ಕಂದಮ್ಮಗಳನ್ನು ನೋಡಿ ಒಂದನ್ನು ಆರಿಸಿಕೊಳ್ಳುವುದು ಮಾನಸಿಕ ಹಿಂಸೆಯಾಗಬಹುದು. ಒಂದು ಮಗುವಿನ ಬಣ್ಣ, ಮತ್ತೊಂದರ ಕಣ್ಣು, ಇನ್ನೊಂದರ ಕೂದಲು, ಮಗದೊಂದರ ಮೈಕಟ್ಟು ಅವರಿಗೆ ಖುಷಿ ನೀಡಿ, ಆಯ್ಕೆಯ ಪ್ರಕ್ರಿಯೆಯನ್ನು ತುಂಬಾ ತೊಡಕಾಗಿಸಬಹುದು.
ಹಾಗಾಗಿ ಸಂಸ್ಥೆಯ ಸಿಬ್ಬಂದಿ ಮೊದಲು ಪೋಷಕರ ಆಯ್ಕೆಯ ಮಾನದಂಡಗಳನ್ನು ತಿಳಿದುಕೊಳ್ಳುತ್ತಾರೆ. ಪೋಷಕರು ತಮ್ಮ ಕಲ್ಪನೆಯ ಕಂದಮ್ಮನ ಬಗೆಗೆ ಸಂಪೂರ್ಣ ವಿವರಗಳನ್ನು ನೀಡಿದ ಮೇಲೆ ಅದಕ್ಕೆ ಆದಷ್ಟು ಹತ್ತಿರವಾಗಿ ಹೊಂದುವ ಮಗುವನ್ನು ಮಾತ್ರ ಪೋಷಕರಿಗೆ ತೋರಿಸುತ್ತಾರೆ. ಅದು ಒಪ್ಪಿಗೆಯಾಗದಿದ್ದರೆ ಮತ್ತೊಂದನ್ನು ತೋರಿಸಬಹುದು.
ಪೋಷಕರು ನಮ್ಮ ಸುತ್ತಲೂ ಕಾಣುವಂತಹ ದಷ್ಟಪುಷ್ಟ ಮಕ್ಕಳನ್ನು ನಿರೀಕ್ಷಿಸಬಾರದು. ತಾಯಂದಿರ ಮಮತೆ ಮತ್ತು ಆರೈಕೆ ಇಲ್ಲದೆ ಮಕ್ಕಳು ಸೊರಗಿರಬಹುದು. ಒಮ್ಮೆ ಅದು ದೊರಕಿತೆಂದರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ.
ಸಾಕಷ್ಟು ಮಕ್ಕಳನ್ನು ನೋಡಿದ ಮೇಲೆಯೂ ಪೋಷಕರು ಗಟ್ಟಿ ನಿರ್ಧಾರವನ್ನು ಮಾಡುತ್ತಿಲ್ಲವೆಂದಾದರೆ, ಅವರು ದತ್ತು ತೆಗೆದುಕೊಳ್ಳಲು ಇನ್ನೂ ಮಾನಸಿಕವಾಗಿ ಸಿದ್ಧರಾಗಿಲ್ಲದಿರುವ ಸಾಧ್ಯತೆಗಳಿವೆ. ಹಾಗಾಗಿ ಈ ವಿಷಯದಲ್ಲಿ ಆಪ್ತಸಲಹೆ ಪಡೆದು ಮುಂದಿನ ಪ್ರಯತ್ನಗಳನ್ನು ಮಾಡುವುದು ಹಿತಕರ.
ಮನೆಗೆ ಬಂದ ಮಗು
ಮಗುವಿನ ಆರೋಗ್ಯ ತಪಾಸಣೆಯನ್ನು ಸಂಸ್ಥೆಯವರು ನಿಯಮಿತವಾಗಿ ಮಾಡಿಸಿ ಅದರ ದಾಖಲೆಗಳನ್ನು ಇಟ್ಟಿರುತ್ತಾರೆ. ಪೋಷಕರು ಇದರ ಪ್ರತಿಗಳನ್ನು ಪಡೆಯುವುದಲ್ಲದೆ, ತಮ್ಮ ಸಮಾಧಾನಕ್ಕಾಗಿ ಕುಟುಂಬ ವೈದ್ಯರಿಂದ ಮತ್ತೊಮ್ಮೆ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕು.
ಪರಿಸರ ಅಥವಾ ಅನುವಂಶೀಯತೆ?
ಹೆಣ್ಣು ಮಗುವನ್ನು ದತ್ತು ಪಡೆದ ಮಧ್ಯವಯಸ್ಸಿನ ದಂಪತಿಗಳು ಆಪ್ತಸಲಹೆಗೆ ಬಂದಿದ್ದರು. ಅವರ ಆತಂಕವೆಂದರೆ ಈಗ ಬೆಳೆದು ದೊಡ್ಡವಳಾಗಿರುವ ಮಗಳು ಕೆಳವರ್ಗದ ಜನರ ಜೊತೆ ಹೆಚ್ಚು ಬೆರೆಯುತ್ತಾಳೆ, ಇದಕ್ಕೆ ಅನುವಂಶೀಯತೆ ಕಾರಣವಿರಬಹುದೇ?- ಎನ್ನುವುದು.
ಆದರೆ ಗುಣ, ಸ್ವಭಾವ, ವರ್ತನೆ ಮುಂತಾದ ವ್ಯಕ್ತಿತ್ವದ ಅಂಶಗಳಲ್ಲಿ ಪರಿಸರವೇ ಪ್ರಮುಖವಾಗಿ ಪ್ರಭಾವ ಬೀರುತ್ತದೆ. ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳ ವ್ಯಕ್ತಿತ್ವವನ್ನು ತಮಗೆ ಬೇಕಾದಂತೆ ರೂಪಿಸಲು ಮತ್ತು ಅವರಿಗೆ ಉತ್ತಮ ಮಾದರಿಗಳನ್ನು ಒದಗಿಸಲು ಸಂಪೂರ್ಣ ಅವಕಾಶವಿರುತ್ತದೆ. ಇದನ್ನು ಉಪಯೋಗಿಸಿಕೊಳ್ಳದೆ ಅನುವಂಶೀಯತೆಯನ್ನು ದೂಷಿಸುವುದು ನಿಷ್ಪ್ರಯೋಜಕ. ಇದರ ಬಗೆಗೆ ಅಗತ್ಯವಿದ್ದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.
ನಮ್ಮ ಬಳಿ ಆಪ್ತಸಲಹೆಗೆ ಬಂದಿದ್ದ ಮೇಲಿನ ಘಟನೆಯಲ್ಲಿ ಪೋಷಕರಿಂದ ಹಂತಹಂತವಾಗಿ ಹೆಚ್ಚಿನ ವಿವರಗಳನ್ನು ಪಡೆಯುತ್ತಾ ಹೋದಂತೆ ತಿಳಿದ ವಿಚಾರ ಇದು-ಮಗುವಿನ ಮೇಲಿನ ಅತಿಯಾದ ಮಮಕಾರದಿಂದ ಸ್ನೇಹಿತರು ಅಥವಾ ಇತರ ವ್ಯಕ್ತಿಗಳೊಡನೆ ಸಹಜವಾಗಿ ಬೆರೆಯಲು ಪೋಷಕರು ಮಗುವಿಗೆ ಅವಕಾಶ ನೀಡಿರಲಿಲ್ಲ. ಬೆಳೆದು ನಿಂತ ಮಗಳ ಮೇಲೂ ಇಂತಹ ನಿರ್ಬಂಧ ಮುಂದುವರೆಸಿದ್ದರು. ಮನುಷ್ಯ ಸಂಪರ್ಕದ ತನ್ನ ಮಾನಸಿಕ ಹಸಿವನ್ನು ತೀರಿಸಿಕೊಳ್ಳಲು ಆ ಮುಗ್ಧ ಮಗು ಮನೆಯ ಅಥವಾ ತೋಟದ ಕೆಲಸದವರೊಡನೆ ನಗುತ್ತಾ ಬೆರೆಯುತ್ತಿತ್ತು. ಇದನ್ನೇ ಅನುವಂಶೀಯವಾಗಿ ಬಂದ ಕೀಳುಗುಣ ಎಂದು ಪೋಷಕರು ಹಣೆಪಟ್ಟಿ ಹಚ್ಚಿದ್ದರು.
ತಂದೆ ತಾಯಿಗಳಿಗೆ ಒಂದು ನಮ್ರ ಸಲಹೆಯೆಂದರೆ ಒಮ್ಮೆ ದತ್ತು ಪಡೆದು ಮಗುವನ್ನು ತಮ್ಮದಾಗಿಸಿಕೊಂಡ ಮೇಲೆ ಅದರ ಹಿನ್ನಲೆಗೆ ಮಗುವಿನ ಭವಿಷ್ಯದ ಯಾವುದೇ ಅಂಶಗಳನ್ನು ದಯವಿಟ್ಟು ಜೋಡಿಸಬೇಡಿ. ಮಗುವನ್ನು ತಮಗೆ ಬೇಕಾದಂತೆ ಬೆಳೆಸಲು ಸಾಧ್ಯತೆ ಇದೆ ಎನ್ನುವ ಮನೋಭಾವದಿಂದ ಮುಂದುವರೆದರೆ ಅನಗತ್ಯ ಕಿರಿಕಿರಿಗಳನ್ನು ತಪ್ಪಿಸಬಹುದು.
ಗುಟ್ಟು ಗುಟ್ಟಾಗಿರಬೇಕೆ?
ದತ್ತು ಪಡೆದ ಎಲ್ಲಾ ತಂದೆತಾಯಿಗಳು ಎದುರಿಸುವ ಸಾಮಾನ್ಯ ದ್ವಂದ್ವಗಳೆದರೆ- ಮಗುವಿಗೆ ದತ್ತಕದ ವಿಷಯವನ್ನು ತಿಳಿಸಬೇಕೇ?, ಹಾಗೆ ತಿಳಿಸುವುದಾದರೆ ಹೇಗೆ ಮತ್ತು ಯಾವಾಗ ತಿಳಿಸುವುದು ಮತ್ತು ಇದರ ಬಗೆಗೆ ಮುನ್ನೆಚ್ಚರಿಕೆ ಏನಾದರೂ ವಹಿಸಬೇಕೆ?- ಎನ್ನುವುದು.
ದತ್ತಕ ವಿಷಯವನ್ನು ಮಗುವಿಗೆ ತಿಳಿಸಬೇಕು ಎನ್ನುವುದು ತಜ್ಞರ ಅಭಿಮತವಾದರೂ ಅದನ್ನು ಎಷ್ಟು ವಯಸ್ಸಿಗೆ ತಿಳಿಸಬೇಕು ಎನ್ನುವುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಮಗುವಿನ ಗ್ರಹಿಕೆಯ ಮಟ್ಟವನ್ನು ಅನುಸರಿಸಿ ಆದಷ್ಟು ಬೇಗ ತಿಳಿಸುವುದು ಪೋಷಕರ ಮತ್ತು ಮಕ್ಕಳ ಸಂಬಂಧಕ್ಕೆ ಹಿತಕರ.
ಹಾಗೊಮ್ಮೆ ದತ್ತಕದ ವಿಷಯವನ್ನು ಪೋಷಕರು ಗುಟ್ಟಾಗಿ ಇಟ್ಟರೂ ಮಗು ದೊಡ್ಡದಾದ ಮೇಲೆ ಸುತ್ತಲಿನ ಯಾರಾದರೂ ಇದರ ಬಗೆಗೆ ಮಗುವಿಗೆ ಹೇಳಬಹುದು. ಯಾರೂ ಹೇಳದಂತೆ ತಡೆಯುವುದು ಪೋಷಕರ ಹಿಡಿತದಲ್ಲಿರುವುದಿಲ್ಲ. ಒಮ್ಮೆ ಮೂರನೆಯವರಿಂದ ಇದು ಮಗುವಿಗೆ ತಿಳಿದಾಗ ಅದರಲ್ಲಿ ಒಮ್ಮೆಲೆ ಪರಕೀಯ ಭಾವನೆ ಮೂಡುವುದಲ್ಲದೆ, ತಾನು ಇಷ್ಟು ದಿನ ಅಪ್ಪ ಅಮ್ಮ ಎಂದು ನಂಬಿದ್ದವರು ತನಗೆ ವಿಷಯ ತಿಳಿಸದೆ ಮೋಸ ಮಾಡಿದರು ಎಂದುಕೊಳ್ಳುತ್ತದೆ. ಇದರಿಂದ ಅವರ ಸಂಬಂಧದಲ್ಲಿ ಸರಿಪಡಿಸಲಾರದ ಕಂದಕ ಉಂಟಾಗುತ್ತದೆ. ಇದನ್ನು ತಪ್ಪಿಸಲು ಪೋಷಕರಿಗೆ ಇರುವ ಒಂದೇ ದಾರಿಯೆಂದರೆ ತಾವಾಗಿಯೇ ವಿಷಯವನ್ನು ಹೇಳುವುದು.
ಹಾಗಾದರೆ ಯಾವಾಗ ಮತ್ತು ಹೇಗೆ ಹೇಳುವುದು? ಇದರ ಬಗೆಗೆ ಯೋಚಿಸುವ ಮೊದಲು ಪೋಷಕರು ತಮ್ಮ ಮತ್ತು ಮಕ್ಕಳ ಬಾಂಧವ್ಯ ಗಟ್ಟಿಯಾಗಿದೆ ಎನ್ನವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸ್ವಂತ ಮಕ್ಕಳಾದ ತನ್ನ ಸ್ನೇಹಿತರ ಪೋಷಕರಷ್ಟೇ ತಮ್ಮ ಅಪ್ಪ ಅಮ್ಮಂದಿರೂ ತನ್ನನ್ನು ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ ಎಂದು ಮಗುವಿಗೆ ಅನ್ನಿಸಿರಬೇಕು.
ಸಾಮಾನ್ಯವಾಗಿ ಮಗುವಿಗೆ ಸುಮಾರು ಹತ್ತು ವರ್ಷಗಳಾಗುವಷ್ಟರಲ್ಲಿ ದತ್ತಕದ ವಿಷಯವನ್ನು ತಿಳಿಸಬಹುದು. ಮಗುವಿನೊಡನೆ ಪೋಷಕರು ಇದರ ಬಗೆಗೆ ಖುದ್ದಾಗಿ ಮಾತನಾಡಬೇಕು. ಅಗತ್ಯವೆನ್ನಿಸಿದರೆ ಆಪ್ತಸಲಹೆಗಾರರ ಸಹಾಯ ಪಡೆದರೂ ದತ್ತಕದ ವಿಷಯವನ್ನು ಅವರ, ವೈದ್ಯರು, ಕುಟುಂಬದ ಆತ್ಮೀಯರ, ಅಜ್ಜ ಅಜ್ಜಿ ಮುಂತಾದವರ ಮೂಲಕ ಹೇಳಿಸಬಾರದು. ಪೋಷಕರಿಬ್ಬರೂ ಒಟ್ಟಾಗಿ ಕುಳಿತು ಮಾತನಾಡಬೇಕು. ಮಗು ಕೇಳುವವರೆಗೂ ಕಾಯದೇ ಪೋಷಕರೇ ಮೊದಲ ಹೆಜ್ಜೆ ಇಡಬೇಕು. ಹೇಳುವ ಮಾತುಗಳು ಸುಮಾರಾಗಿ ಈ ಧಾಟಿಯಲ್ಲಿರಬಹುದು.
ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಾತನಾಡಬೇಕು. ಪೊಷಕರಲ್ಲಿರಬಹುದಾದ ಮುಜುಗರ, ಆತಂಕ, ಹಿಂಜರಿಕೆಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಅವುಗಳನ್ನು ನಿವಾರಿಸಿಕೊಂಡು ಸಹಜ ಮನಸ್ಥಿತಿಯಲ್ಲಿ ಮಾತನಾಡಲು ಪೋಷಕರಿಗೆ ಸಾಧ್ಯವಾಗಬೇಕು.
ಪ್ರಾರಂಭದ ಹಂತದಲ್ಲಿ ಮಗು ಅಳಬಹುದು, ಸಿಟ್ಟಾಗಬಹುದು, ಬೇಸರಮಾಡಿಕೊಳ್ಳಬಹುದು. ಆದರೆ ಪೋಷಕರು ತಮ್ಮ ಪ್ರೀತಿಯ ಅಭಿವ್ಯಕ್ತಿಯನ್ನು ಮುಂದುವರೆಸಿದರೆ ನಿಧಾನವಾಗಿ ಮಗು ವಾಸ್ತವವನ್ನು ಒಪ್ಪಿಕೊಳ್ಳುತ್ತದೆ.
ತಂದೆತಾಯಿಗಳ ಮಾತನ್ನು ಕೇಳಿದ ಮಗು ಬೇರೆ ಬೇರೆ ರೀತಿಯ ಪ್ರಶ್ನೆ ಕೇಳಬಹುದು. ಇಲ್ಲಿ ಎಚ್ಚರ ವಹಿಸಬೇಕಾದದ್ದು ಮಗುವಿಗೆ ಸುಳ್ಳು ಹೇಳಬಾರದು ಅಥವಾ ಮಗುವಿನ ಕುತೂಹಲವನ್ನು ಹತ್ತಿಕ್ಕಬಾರದು. ದತ್ತು ನೀಡಿದ ಸಂಸ್ಥೆ ಅಥವಾ ಇತರ ಆಪ್ತಸಲಹೆಗಾರರ ಸಹಾಯವನ್ನು ಪದೇಪದೇ ಉಪಯೋಗಿಸಬಹುದು.
ಈ ಎಲ್ಲಾ ಪ್ರಕ್ರಿಯೆ ಒಂದು ದಿನದಲ್ಲಿ ಮುಗಿಯುತ್ತದೆ ಎಂದು ಪೋಷಕರು ಅಪೇಕ್ಷಿಸಬಾರದು. ಕೆಲವೊಮ್ಮೆ ಹಂತಹಂತವಾಗಿ ಅಥವಾ ಹಲವಾರು ಬಾರಿ ಮಗುವಿಗೆ ಹೇಳಬೇಕಾಗಬಹುದು. ಇದರಿಂದ ದೊರೆಯಬಹುದಾದ ದೂರಾಗಮೀ ಉತ್ತಮ ಪರಿಣಾಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರು ಹತಾಶರಾಗದೆ ವ್ಯವಸ್ಥಿತವಾಗಿ ಕೆಲಸ ಮಾಡಬೇಕು.
ದತ್ತಕದ ವಿಷಯವನ್ನು ಭಾವೀ ಪತಿ ಅಥವಾ ಪತ್ನಿಗೆ ತಿಳಿಸುವುದು ಇಡೀ ಕುಟುಂಬದ ನಿರ್ಧಾರವಾಗಬೇಕು. ಎಲ್ಲಾ ವಿಚಾರವನ್ನು ತೆರೆದಿಡುವುದು ಮುಂದಿನ ಜೀವನದ ದೃಷ್ಟಿಯಿಂದ ಉತ್ತಮ. ಯಾವುದೇ ದೀರ್ಘಕಾಲದ ಆತ್ಮೀಯ ಸಂಬಂಧವನ್ನು ಸುಳ್ಳು ಹೇಳುವುದರ ಅಥವಾ ವಿಷಯಗಳನ್ನು ಗುಟ್ಟಾಗಿಡುವುದರ ಮೂಲಕ ಕಟ್ಟಲಾಗುವುದಿಲ್ಲ. ಪರಸ್ಪರ ನಂಬಿಕೆ ಗಟ್ಟಿ ಸಂಬಂಧಗಳ ಒಂದು ಅಡಿಗಲ್ಲು.
ಕೊನೆಯಲ್ಲಿ
ಜೀವನದಲ್ಲಿ ಮಕ್ಕಳು ನೀಡಬಹುದಾದ ಸಂತೋಷ ಮತ್ತು ಪೂರ್ಣತೆಯ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪೋಷಕರು ದತ್ತಕದ ಬಗೆಗೆ ಯೋಚಿಸಬೇಕು. ಯಾವುದೇ ಹಂತದಲ್ಲಿಯೂ ಆತುರ ಪಡದೆ, ಎಲ್ಲಾ ಮಾಹಿತಿ ಪಡೆದು, ತಮ್ಮ ಅನುಮಾನ ಆತಂಕಗಳನ್ನು
ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಡಬೇಕಾದದ್ದು ಯಾವುದೂ ಸಮಸ್ಯೆಗಳೇ ಬಾರದಿದ್ದಾಗ ಮಾತ್ರ ದತ್ತು ಪಡೆದಿದ್ದು ಸಾರ್ಥಕವಾಯಿತು ಎಂದುಕೊಳ್ಳಬಾರದು. ಸ್ವಂತ ಮಕ್ಕಳಿರುವಾಗ ಕೂಡ ಸಮಸ್ಯೆಗಳಿದ್ದೇ ಇರುತ್ತವೆ. ಕಷ್ಟದ ಪರಿಸ್ಥಿತಿಗಳನ್ನು ಒಪ್ಪಿಕೊಂಡು ನಿಭಾಯಿಸುವುದನ್ನು ಕಲಿಯುವುದು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ. ಎಲ್ಲಾ ಹಂತದಲ್ಲಿಯೂ ಪೋಷಕರ ಮತ್ತು ಮಕ್ಕಳ ಸಹಾಯಕ್ಕೆ ದತ್ತು ಪಡೆದು ಸುಖಿಯಾಗಿ ಬದುಕುತ್ತಿರುವ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಆಪ್ತಸಲಹೆಗಾರರು ಇದ್ದೇ ಇರುತ್ತಾರೆ.
ಮುಂದುವರೆಯುವುದು….
ವಸಂತ್ ನಡಹಳ್ಳಿ