ವಾಸ್ತವ ಇದು. ಇಂದು ಜಾನುವಾರು ವಿಮೆ ಎನ್ನುವುದು ಸಾಲ ಪಡೆಯುವ ಮುನ್ನ ರೈತ ಕೈಗೊಳ್ಳಲೇಬೇಕಾದ ಒಂದು ಕಾನೂನು ಕ್ರಮ. ಒಂದರ್ಥದಲ್ಲಿ, ಸಾಲ ಕೊಟ್ಟ ಬ್ಯಾಂಕ್ ತನ್ನ ಹಣದ ಮರು ಪಾವತಿಗೆ ಅಳವಡಿಸಿಕೊಂಡಿರುವ ಸುರಕ್ಷತೆಯಿದು. `ಕೃಷಿಗೆ ಪೂರಕವಾದುದು ಹೈನುಗಾರಿಕೆ. ಗ್ರಾಮೀಣ ರೈತನ ಆರ್ಥಿಕ ಸಬಲತೆಗೆ ಕಾರಣವಾಗಿದ್ದು ಇದೇ. ಹೆಚ್ಚು ಬೆಲೆ ನೀಡಿ ಖರೀದಿಸಿದ ಉತ್ತಮ ಮಿಶ್ರತಳಿ ಹಸು ಎಮ್ಮೆ, ಎತ್ತು ಅಕಸ್ಮಾತ್ ಮರಣಹೊಂದಿದಲ್ಲಿ ನೊಂದ ರೈತನಿಗೆ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆಯೇ ಜಾನುವಾರು ಜೀವವಿಮೆ’ ಎನ್ನುವ ಮಾತನ್ನು ನಾವೂ ಮತ್ತೊಮ್ಮೆ ಹೇಳಬಹುದಾದರೂ ಅದು ಅರೆಬರೆ ಸತ್ಯ.
ಸಾಮಾನ್ಯ ವಿಮಾ ಕಂಪನಿಗಳಾದ ಯುನೈಟೆಡ್ ಇಂಡಿಯಾ, ಓರಿಯಂಟಲ್, ನ್ಯಾಷನಲ್ ಮುಂತಾದುವುಗಳು ಜಾನುವಾರುಗಳಲ್ಲಿ ಜೀವವಿಮೆ ಕೈಗೊಳ್ಳುತ್ತಿವೆ. ಜಾನುವಾರು ಮೌಲ್ಯದ ಶೇ.4.5 – 5 ರಷ್ಟನ್ನು ವಿಮಾ ಕಂತಾಗಿ ಪಾವತಿಸಬೇಕಾಗುತ್ತದೆ. ಮೂರರಿಂದ 12 ವರ್ಷದ ರಾಸುಗಳನ್ನು ವಿಮೆಯ ವ್ಯಾಪ್ತಿಗೊಳಪಡಿಸಬಹುದು. ವಿಮಾ ಅವಧಿಯಲ್ಲಿ ರಾಸು ಮರಣ ಹೊಂದಿದರೆ ಮಾತ್ರ ಮಾರುಕಟ್ಟೆ ಬೆಲೆಯನ್ನು ಮರುಪಾವತಿಸಲಾಗುತ್ತದೆ. ಒಂದು ವೇಳೆ ರಾಸು ಕಾರಣಾಂತರಗಳಿಂದ ನಿಷ್ಪ್ರಯೋಜಕವಾದರೆ (ಕಾಲು ಮುರಿದುಕೊಳ್ಳುವುದು, ಕೆಚ್ಚಲುಬಾವಿನಿಂದ ಹಾಲು ಬಾರದಿರುವುದು, ಗರ್ಭ ಧರಿಸದೇ ಜೀವನ ಪೂರ್ತಿ ಬರಡಾಗುವುದು ಇತ್ಯಾದಿ) ವಿಮೆ ಪಾವತಿಸಲಾಗುವುದಿಲ್ಲ.
ಸಾಧಕ ಬಾಧಕಗಳ ಮಾತು ಕೊನೆಗಿರಲಿ. ಕೊನೆಪಕ್ಷ ಪಶು ಸಾಲ ನಿರೀಕ್ಷಿಸುವ ರೈತ ಏನೆಲ್ಲ ಹರ್ಡಲ್ಸ್ ದಾಟಬೇಕಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ವಿಮೆ ಮಾಡಿಸುವುದು ಹೇಗೆ?
ಮೊದಲಾಗಿ ನೊಂದಾಯಿತ (I.V.C) ಸರ್ಕಾರಿ ಅಥವಾ ಖಾಸಗಿ ಪಶುವೈದ್ಯರಿಂದ ರಾಸುವಿನ ಆರೋಗ್ಯ ದೃಢೀಕರಣ ಮಾಡಿಸಿ, ಕಿವಿಗೆ ಗುರುತಿನ ಸಂಖ್ಯೆಯುಳ್ಳ ಓಲೆಯನ್ನು ಹಾಕಿಸಬೇಕು. ರೈತನೊಂದಿಗೆ ಓಲೆ ಸಹಿತದ ರಾಸುವಿನ ಛಾಯಾಚಿತ್ರ ವಿಮೆ ಮಾಡಿಸುವ ವೇಳೆ ಕಡ್ಡಾಯ. ವಿಮೆಯನ್ನು ವರ್ಷಕ್ಕೊಮ್ಮೆ ನವೀಕರಿಸಬೇಕಾಗುತ್ತದೆ. ವಿಮೆ ಮಾಡಿಸಿದ 15 ದಿನಗಳ ನಂತರವೇ ರಾಸು ವಿಮೆಗೊಳಪಡುತ್ತದೆ. ರಾಸುವನ್ನು ಮಾರಿದರೆ ವಿಮೆಯೂ ವರ್ಗಾವಣೆಯಾಗುತ್ತದೆ. ಗುರುತಿನ ಸಂಖ್ಯೆಯ ಓಲೆ ಕಡ್ಡಾಯವಾಗಿದ್ದು ಅಕಸ್ಮಾತ್ ಬಿದ್ದುಹೋದಲ್ಲಿ ವಿಳಂಬ ಮಾಡದೆ ಪುನಃ ಹಾಕಿಸಿ ವಿಮಾ ಕಂಪನಿಗೆ ತಪ್ಪದೆ ತಿಳಿಸಬೇಕಾಗುತ್ತದೆ. ಅದರಲ್ಲಿರುವ ವಿಶಿಷ್ಟ ನಂಬರ್ ರಾಸುವಿನ ಗುರುತಾಗಿರುವುದೇ ಈ ನಿಯಮಕ್ಕೆ ಕಾರಣ. ಸಾಂಕ್ರಾಮಿಕ ರೋಗಗಳಿಗೆ ಕಾಲಕಾಲಕ್ಕೆ ಮುಂಜಾಗ್ರತಾ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವುದು ಕ್ಷೇಮ.
ಒಂದೊಮ್ಮೆ ವಿಮೆ ಮಾಡಿಸಿದ ರಾಸು ಮರಣ ಹೊಂದಿದರೆ ವಿಳಂಬಮಾಡದೆ ಸಂಬಂಧಿಸಿದ ವಿಮಾಕಂಪನಿ ಮತ್ತು ಬ್ಯಾಂಕಿಗೆ ಲಿಖಿತವಾಗಿ ತಿಳಿಸಬೇಕು. ವಿಮಾ ಅಧಿಕಾರಿಗಳು ಮೃತ ರಾಸಿನ ಪರಿಶೀಲನೆ ಮಾಡಬೇಕಾಗಿರುವುದರಿಂದ ರಜಾದಿನವಾದರೂ ತಪ್ಪದೇ ಈ ಕೆಲಸ ನಿರ್ವಹಿಸಬೇಕಾಗುತ್ತದೆ. ಮೃತ ರಾಸುವಿನ ಫೋಟೋ, ಗುರುತಿನ ಓಲೆ ಹಾಗೂ ಚಿಕಿತ್ಸೆ ನೀಡಿದ್ದರೆ ಚಿಕಿತ್ಸಾ ಪ್ರಮಾಣಪತ್ರವನ್ನು ಕ್ಲೇಮು ಫಾರಂನೊಂದಿಗೆ ಸಲ್ಲಿಸಬೇಕು. ನೋಂದಾಯಿತ (I.V.C) ಸರ್ಕಾರಿ ಪಶುವೈದ್ಯರಿಂದ ಶವಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಎನ್ನುವುದನ್ನು ಮರೆಯುವಂತಿಲ್ಲ.
ವಿಮೆ ತಿರಸ್ಕರಿಸಲ್ಪಡುತ್ತದೆ!
ಆ ಮಟ್ಟಿಗೆ ಜಾನುವಾರು ವಿಮೆಯ ವ್ಯಾಖ್ಯೆ, ನಿಯಮಗಳು ಬದಲಾಗಲೇಬೇಕು. ರಾಸುವಿನ ಮೌಲ್ಯದ ಶೇ.ಐದರ ಮೊತ್ತ ವಾರ್ಷಿಕ ವಿಮಾ ಕಂತಾಗಿರುವುದು ದುಬಾರಿಯೇ. ಬಹುಷಃ ವಿಮಾ ಕಂಪನಿಗಳು ಇದರಿಂದ ಗಳಿಸುವ ಆದಾಯ, ವಿನಿಯೋಗಿಸುವ ಪರಿಹಾರಗಳನ್ನು ಬಹಿರಂಗಪಡಿಸಿದರೆ ಅವು ಪಡೆಯುತ್ತಿರುವ ಲಾಭದ ಪ್ರಮಾಣ ಅರ್ಥವಾಗುತ್ತದೆ. ಈ ವಿಮೆಯನ್ನು ಬರೀ ಸಾವಿಗೆ ಅನ್ವಯಿಸುವುದರಿಂದ ರೈತನಿಗೆ ಯಾವ ಲಾಭವೂ ಇಲ್ಲ.
ವಿಮೆಗೊಳಪಡದ ರಾಸುಗಳಿಗೆ ಕೂಡ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ. ಬಹುಪಾಲು ರೈತರಿಗೆ ಈ ಮಾಹಿತಿ ಇರುವುದೇ ಇಲ್ಲ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಸುವು ಮರಣ ಹೊಂದಿದಾಗ ರೈತನು ಕಂದಾಯ ಇಲಾಖೆಯ ಅಧಿಕಾರಿಗಳಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು. ವಾಹನ ಅಥವಾ ಇತರೆ ಅಫಘಾತದಿಂದ ಮರಣ ಹೊಂದಿದಾಗ ಪೋಲಿಸ್ ಇಲಾಖೆಯಲ್ಲಿ ಮತ್ತು ಹಾವಿನ ಕಡಿತದಿಂದ ಮರಣ ಹೊಂದಿದಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎ.ಪಿ.ಎಮ್.ಸಿ)ಯ ಮೂಲಕ ಪರಿಹಾರ ಪಡೆಯಲು ಸಾಧ್ಯವಿದೆ. ಇಲ್ಲೆಲ್ಲ ಸಂಬಂಧಿಸಿದ ಇಲಾಖೆಯಲ್ಲಿ ಲಿಖಿತ ದೂರನ್ನು ನೀಡಿ ಪರಿಹಾರ ಪಡೆಯಬಹುದಾಗಿದೆ. ವಿದ್ಯುತ್ ಅವಘಡದಿಂದ ಮರಣ ಹೊಂದಿದರೆ, ದುರುದ್ದೇಶದಿಂದ ವಿಷಪ್ರಾಶನ ಮಾಡಿ ಅಥವಾ ಹೊಡೆದು ದೈಹಿಕ ಕಿರುಕುಳ ನೀಡಿದ್ದರಿಂದ ರಾಸು ಮರಣ ಹೊಂದಿದರೆ ಅನುಕ್ರಮವಾಗಿ ವಿದ್ಯುತ್ ವಿತರಣ ಕಂಪನಿ(ಎಸ್ಕಾಂ), ಪೋಲಿಸ್ ಹಾಗೂ ಕಂದಾಯ ಇಲಾಖೆಗಳು ಪರಿಹಾರ ಕೊಡಿಸಲು ಜವಾಬ್ದಾರರು. ಈ ಪ್ರಕರಣಗಳಲ್ಲಿ ಜಾನುವಾರಿಗೆ ವಿಮೆ ಪ್ರಶ್ನೆ ಬರುವುದಿಲ್ಲ.
-ಮಾ.ವೆಂ.ಸ.ಪ್ರಸಾದ್