Home Blogroll ಗೋ ಅನಿಲ ಸ್ಥಾವರ – `ಸುರಕ್ಷಿತ' ಮಾಹಿತಿಗಳು!

ಗೋ ಅನಿಲ ಸ್ಥಾವರ – `ಸುರಕ್ಷಿತ' ಮಾಹಿತಿಗಳು!

0

ಸಬ್ಸಿಡಿ ಯುಗ ಮುಗಿಯುತ್ತ ಬಂದಿದೆ. ಇಂದಿನ ಮುಕ್ತ ಆರ್ಥಿಕ ನೀತಿಯನ್ವಯ ಸಬ್ಸಿಡಿ ಕಡಿತಗೊಳಿಸುವುದು ಕೇಂದ್ರಕ್ಕೆ ಅನಿವಾರ್ಯವಾಗಿದೆ. ಮುಕ್ತ ಆರ್ಥಿಕ ನೀತಿ – ಸಬ್ಸಿಡಿಗೂ ಈ ಗೋ ಅನಿಲ ಸ್ಥಾವರಕ್ಕೂ ಇರುವ ಸಂಬಂಧ ಗೋಕುಲಾಷ್ಟಮಿಯಲ್ಲಿ ಇಮಾಮ್ ಸಾಬಿಯಂತದೇನೂ ಅಲ್ಲ, ಹೇಗೆ? ನೀವೇ ನೋಡಿ, ಇಂದು ಅಡಿಗೆ ಮಾಡಲು ಕಟ್ಟಿಗೆ ಬಳಸುವುದು ಕಡಿಮೆಯಾಗಿದೆ. ದುರ್ಲಭ ಕೂಡ. ಹೆಚ್ಚು ಜನ ಅಡಿಗೆ ಅನಿಲದ ಸಿಲೆಂಡರ್‍ಗೆ ಮೊರೆ ಹೋಗಿದ್ದಾರೆ. ಸಾಮಾನ್ಯ ಜನರಿಗೆ ಸುಲಭವಾಗಿ ದೊರಕಲು ಸರ್ಕಾರದ ಇದಕ್ಕೆ ಪ್ರೋತ್ಸಾಹಧನ ನೀಡಿ ಪೋಷಿಸುತ್ತಿದೆ. ಆದರೆ ಖಾಸಗಿ ಕಂಪನಿಗಳಿಗೂ ಮಾರುಕಟ್ಟೆಯಲ್ಲಿ ಅವಕಾಶ ನೀಡಿರುವಾಗ ಇದು ಸಾಧ್ಯವಿಲ್ಲ. ಸಾಧುವೂ ಅಲ್ಲ. ಈ ಕಾರಣದಿಂದ ಸಿಲೆಂಡರ್‍ಗಳ ಬೆಲೆ ಇವತ್ತಲ್ಲ ನಾಳೆ ತಾನೇತಾನಾಗಿ ಹೆಚ್ಚುತ್ತದೆ. ಮುಖ್ಯವಾಗಿ ಹಳ್ಳಿಗರಿಗೆ-ಜಾನುವಾರು ಸಾಕುವುದರಿಂದ ಗೋ ಅನಿಲ ಸ್ಥಾವರ ತಲೆಬಿಸಿ ತಾರದ ಸೌಲಭ್ಯವಾಗಿದೆ. ಸಮರ್ಪಕವಾಗಿ ಗೋ ಗ್ಯಾಸ್ ನಿರ್ಮಿಸಿಕೊಳ್ಳದಿದ್ದರೆ ಮಾತ್ರ ತಲೆಬಿಸಿ ಗ್ಯಾರಂಟಿ!
ಸೂಕ್ತ ಡ್ರಮ್‍ನ ಆಯ್ಕೆ:- ಗ್ಯಾಸ್ ಡ್ರಂನಲ್ಲಿ ಅನೇಕ ವಿಧದವು ದೊರೆಯುತ್ತವೆ. ಕಬ್ಬಿಣದ್ದು ದುಬಾರಿಯಾದರೂ ಹೆಚ್ಚು ಸುರಕ್ಷಿತ ಎಂಬ ಮಾತಿತ್ತು. ಅದು ಕೂಡ 10 ವರ್ಷಕ್ಕಿಂತ ಹೆಚ್ಚು ಬಾಳದು ಎಂಬುದು ನಮ್ಮಲ್ಲಿ ವೇದ್ಯವಾಗಿದೆ. ಸಿಮೆಂಟಿನ ಬಾನಿ, ಡೂಮ್ ರಚನೆಯಂಥವು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಅವುಗಳಲ್ಲಿ ಅನಿಲ ಪೂರೈಕೆಯಲ್ಲಿ ಸಮಸ್ಯೆಗಳು ಕಾಣಿಸಿವೆ. ಸದ್ಯ ಹೆಚ್ಚು ಸಮಸ್ಯೆಗಳಿಲ್ಲದ, ವಿಪರೀತ ದುಬಾರಿಯೂ ಅಲ್ಲದ ಫೈಬರ್ ಡ್ರಂಗಳು ಸೂಕ್ತ. ಉಳಿದೆಲ್ಲವುಗಳಿಗಿಂತ ಬಾಹ್ಯವಾಗಿ ವ್ಯವಸ್ಥಿತ ರಕ್ಷಣೆ ಬಯಸುತ್ತದೆ. ಅನಿಲ ಪೂರೈಕೆಯಲ್ಲಿ ಒತ್ತಡ ತರಲು ಡ್ರಮ್ ಮೇಲೆ ಒಂದೆರಡು ಮರಳು ತುಂಬಿದ ಸಿಮೆಂಟ್ ಚೀಲ ಇಡುವುದು ಒಳ್ಳೆಯದು.
ಸ್ಥಳದ ಆಯ್ಕೆ:- ಶಾಶ್ವತ ಕೆಲಸವಾದ್ದರಿಂದ ಸ್ಥಾವರವನ್ನು ಸರಿಯಾದ ಸ್ಥಳದಲ್ಲಿ ನಿಯೋಜಿಸಬೇಕು. ಅಡಿಗೆ ಮನೆ, ಬಾವಿಗಳಿಂದ ಕನಿಷ್ಟ ಐವತ್ತು ಅಡಿ ದೂರದಲ್ಲಿರಬೇಕು. ಕೊಟ್ಟಿಗೆಗೆ ಸಾಧ್ಯವಾದಷ್ಟು ಸಮೀಪವಿರಬೇಕು. ಕೊಟ್ಟಿಗೆಯಿಂದ ನೇರವಾಗಿ ಸಗಣಿಯನ್ನು ಸ್ಥಾವರದ ಕದಡುವ ಛೇಂಬರ್‍ಗೆ ಹಾಕುವಂತೆ ಮಾಡಿಕೊಂಡರೆ ಪರಮಾನುಕೂಲ. ಅಡಿಗೆ ಮನೆಗೆ ತುಂಬಾ ಹತ್ತಿರವಿದ್ದರೆ ಸಮಸ್ಯೆ ವಾಸನೆ, ಸೊಳ್ಳೆಯದು ಮಾತ್ರ.
ಸ್ಥಾವರದ ಬಾವಿಯ ಅಕ್ಕಪಕ್ಕ ಹಲಸು, ಮಾವುಗಳ ಮರ ಇಲ್ಲದಿರುವುದೇ ಕ್ಷೇಮ. ಅವುಗಳ ಬೇರುಗಳು ಯಾವತ್ತಾದರೂ ಸ್ಥಾವರದ ಒಳಗಡೆ ನುಸುಳಿ ಗಂಡಾಂತರ ತರುವ ಸಾಧ್ಯತೆಗಳಿವೆ. ಅಂತಹ ಉದಾಹರಣೆಗಳಿವೆ. ಸ್ಥಾವರದ ಬಾವಿಯನ್ನು ಶಿಲೆಗಲ್ಲುಗಳನ್ನು ಬಳಸಿ, ನುರಿತ ಕೆಲಸಗಾರರಿಂದಲೇ ಗಾರೆ ಮಾಡಿಸಬೇಕು. ಬಾವಿಯ ನಿರ್ಮಾಣ ಆದರೆ ಅರ್ಧ ಕೆಲಸ ಮುಗಿದಂತೆ.
ಬಾವಿ ಹೇಗಿರಬೇಕು?:- ಇದು ಮಹತ್ವದ ಮಾತು. ಸ್ಥಾವರದ ಬಾವಿಯನ್ನು ನಿಮಗೆಷ್ಟು ಅನಿಲ ಬೇಕೆಂಬ ಸೂತ್ರಕ್ಕಿಂತ ನಿಮ್ಮಲ್ಲಿ ದೊರಕುವ ಸಗಣಿಯ ಲೆಕ್ಕಾಚಾರ ಹಾಕಿ ತಯಾರಿಸುವುದು ಲೇಸು. ಈ ಬಾವಿ ನಿಮ್ಮ ನೀರಿನ ಬಾವಿಯ ಅಂತರ್ಜಲ ಮಟ್ಟಕ್ಕಿಂತ ತುಸು ಮೇಲೆ ಇರುವುದು ಅಗತ್ಯ. ನೆಲಮಟ್ಟಕ್ಕಿಂತ ಎರಡು ಅಡಿಗಳಷ್ಟು ಮೇಲಿನವರೆಗೆ ಬಾವಿ ಮುಂದುವರಿಸಬಹುದು. ಅದಕ್ಕೂ ಹೆಚ್ಚಿನ ಎತ್ತರ ಸುರಕ್ಷಿತವಲ್ಲ. ಸಗಣಿ ಕದಡುವ ಚೇಂಬರ್‍ನ ಮಧ್ಯದಲ್ಲಿ ಕಬ್ಬಿಣದ ಕಿರುಸ್ತಂಭ (ಪೋಲ್) ನಿರ್ಮಿಸಿ, ಇದು ರಾಟೆ ಬಳಸಿ ಕದಡುವ ವ್ಯವಸ್ಥೆ ಮಾಡಿಕೊಳ್ಳಲು ನೆರವಾಗುತ್ತದೆ. ಸ್ಥಾವರ ಹೊರಚೆಲ್ಲುವ ರಾಡಿಯನ್ನು ಸಂಗ್ರಹಿಸಲು ದೊಡ್ಡದಾಗಿ ಟ್ಯಾಂಕ್ ನಿರ್ಮಿಸಿಕೊಳ್ಳುವುದು ಕ್ಷೇಮ. ವಾರಕ್ಕೊಮ್ಮೆ ಖಾಲಿ ಮಾಡಿದರಾಯಿತು. ನೇರವಾಗಿ ಗೊಬ್ಬರದ ಗುಂಡಿಗೆ ಹೋಗುವಂತಿರುವುದು ಅಷ್ಟರಮಟ್ಟಿಗೆ ಕೆಲಸ ದುಡಿಮೆ ಮಾಡುತ್ತದೆ.
ಮೊದಲು ಬಾರಿ ಸ್ಲರಿ ತುಂಬಲು:- 2-3 ಜಾನುವಾರುಗಳನ್ನಷ್ಟೇ ಹೊಂದಿರುವವರು ಹತ್ತು ದಿನಗಳಷ್ಟು ಹಿಂದಿನಿಂದಲೇ ಸಗಣಿ ಸಂಗ್ರಹಿಸತೊಡಗಬೇಕು. ಕಸ, ಕಡ್ಡಿ, ಹುಲ್ಲು ಅದರಲ್ಲಿ ಯಾವತ್ತೂ ಇರಬಾರದು. ಸಾಧ್ಯವಾದಷ್ಟು ಮಟ್ಟಿಗೆ ಬಿಸಿಲು ನೇರವಾಗಿ ಬೀಳದಿರುವ ಸ್ಥಳದಲ್ಲಿ ಸಗಣಿಯನ್ನು ಸಂಗ್ರಹಿಸಿ. ಸಮ ಪ್ರಮಾಣದ ಸಗಣಿ ನೀರು ಬಳಸಿ ಎಂಬುದು ತಜ್ಞರ ಹೇಳಿಕೆಯಾದರೂ ಅದನ್ನು ಅನುಸರಿಸುವುದು ನಮಗೆ ಕಷ್ಟವಾದೀತು. ಹೇಗೆ ನಮ್ಮಲ್ಲಿ ದೋಸೆ ಹಿಟ್ಟು ಇರುತ್ತದೆಯೋ ಹಾಗೆಯೇ ಈ ಸಗಣಿಯ ಸ್ಲರಿ ಇದ್ದರಾಯಿತು. ಮೊದಲ ಬಾರಿ ಸ್ಲರಿಯಲ್ಲಿ ಬಾವಿಯಲ್ಲಿ ತುಂಬುವಾಗ ಬಾವಿಯೊಳಗಿರುವ ಎರಡು ಪ್ರತ್ಯೇಕ ವಿಭಾಗಗಳಲ್ಲೂ ಸಮನಾಗಿ ತುಂಬುತ್ತಾ ಹೋಗಬೇಕು. ಒಂದೊಮ್ಮೆ ಒಂದಕ್ಕೆ ತುಂಬಿದರೆ ಮಧ್ಯದ ಗೋಡೆ ದುರ್ಬಲವಾಗಬಹುದು. ಕೆಲವೊಮ್ಮೆ ಕುಸಿಯುವ ಸಂದರ್ಭ ಕೂಡ ಇದೆ. ಉಪ್ಪು ನೀರು ಸಾಬೂನಿನ ನೀರು ಸಗಣಿ ಕದಡಲು ಬಳಸಬೇಡಿ. ಹಾಗೆಯೇ ಫಿನಾಯಿಲ್, ಸುಣ್ಣ, ಡಿಡಿಟಿ ಅಥವಾ ಇನ್ನಾವುದೇ ಕ್ರಿಮಿನಾಶಕಗಳನ್ನು ಕೊಟ್ಟಿಕೆಗೆ ಹಾಕಿದಾಗ ದೊರಕಿದೆ ಸಗಣಿಯನ್ನು ಬಳಸುವುದು ಸೂಕ್ತವಲ್ಲ. ಇವೆಲ್ಲಾ ಅನಿಲ ಬಿಡುಗಡೆಯನ್ನು ಕುಂಠಿತಗೊಳ್ಳುತ್ತದೆ. ಕೊಟ್ಟಿಗೆಯಲ್ಲಿ ಆದಷ್ಟೂ ಇವುಗಳ ಬಳಕೆಯನ್ನು ನಿಯಂತ್ರಿಸಿ.
ಸ್ಥಾವರದ ದೈನಂದಿನ ನಿರ್ವಹಣೆ:- ನಿಮ್ಮಲ್ಲಿ ಇರುವಷ್ಟು ಸಗಣಿಯನ್ನು ಸ್ಥಾವರಕ್ಕೆ ತುಂಬುವ ಅಗತ್ಯವಿಲ್ಲ. ಸಾಧಾರಣವಾಗಿ 4-5 ಜನರಿರುವ ಒಂದು ಅನುಕೂಲ ಕುಟುಂಬಕ್ಕೆ ಒಂದು ಬುಟ್ಟಿ ಸಗಣಿ (15 ಕೆ.ಜಿ.)ಯ ಸ್ಲರಿ ಸಾಕಾಗುತ್ತದೆ. ಹೆಚ್ಚಿಗೆ ಹಾಕುವುದೆಂದರೆ ನಷ್ಟ ಮಾಡಿಕೊಂಡಂತೆಯೇ ಸರಿ. ಹೆಚ್ಚು ಹೆಚ್ಚು ಸ್ಲರಿ ಸ್ಥಾವರದ ಒಳ ಸೇರಿದಂತೆ ಅಷ್ಟೇ ಪ್ರಮಾಣದ ರಾಡಿ ತನ್ನಲ್ಲಿನ ಪೂರ್ತಿ ಅನಿಲವನ್ನು ಹೊರ ಬಿಡುವ ಮುನ್ನವೇ ಹೊರಚೆಲ್ಲಲ್ಪಡುತ್ತದೆ. ಒಣಗಿದ ಸಗಣಿಯನ್ನು ಸ್ಥಾವರಕ್ಕೆ ಹಾಕಲೇಬೇಡಿ. ಇದು ಗ್ಯಾಸ್ ಹುಟ್ಟಿಸುವುದಿಲ್ಲ. ಮಾತ್ರವಲ್ಲ, ರಾಡಿಯ ಮೇಲೆ ಒಂದು ರೀತಿಯ ಪದರವಾಗಿ ನಿಂತು ಸಮರ್ಪಕ ಅನಿಲ ಪೂರೈಕೆಗೂ ಕಲ್ಲು ಹಾಕುತ್ತದೆ.
ಕೆಲವು ಅವಶ್ಯ ಟಿಪ್ಸ್‍ಗಳು:- 1. ಸ್ಲರಿಯನ್ನು ತಯಾರಿಸಲು ನೀರು ಬಳಸುವ ಬದಲು ಜಾನುವಾರುಗಳ ಮೂತ್ರವನ್ನು ಬಳಸುವುದರಿಂದ ಗ್ಯಾಸ್ ಇಳುವರಿ ಹೆಚ್ಚುತ್ತದೆ. ಈ ಕ್ರಮದಿಂದ ಮೂತ್ರದ ಉಪಯೋಗ ಆಗುತ್ತದಲ್ಲದೆ ನೀರಿಗೆ ಅಭಾವವಿರುವ ಇಂದಿನ ದಿನಗಳಲ್ಲಿ ಅದಕ್ಕೊಂದು ಪರ್ಯಾಯವನ್ನು ಸಾಧಿಸಿದಂತಾಗುತ್ತದೆ.
2. ಜಾನುವಾರುಗಳಿಗೆ ಹಸಿರು ಹುಲ್ಲು ಹಾಕುವಾಗ ಅನಿಲ ಉತ್ಪಾದನೆ ಕಡಿಮೆ. ಬೈಹುಲ್ಲು ಬಳಸುವಾಗ ಉತ್ಪಾದನೆ ಪ್ರಮಾಣ ಜಾಸ್ತಿ. ಹಾಗೆಯೇ ಚಳಿಗಾಲ, ಮಳೆಗಾಲಕ್ಕಿಂತ ಬೇಸಿಗೆಯಲ್ಲಿ ಇಳುವರಿ ಹೆಚ್ಚು. ಗ್ಯಾಸ್ ಇಳುವರಿ ಹೆಚ್ಚಿಸಲು ಕೆಲವು ಅನುಭವಿಗಳು ಈ ತಂತ್ರ ಬಳಸುತ್ತಾರೆ. ಸಗಣಿ ಕದಡಲು ತಣ್ಣಗಿನ ನೀರಿನ ಬದಲು ಬಿಸಿ ನೀರು ಉಪಯೋಗಿಸುತ್ತಾರೆ. ಈ ಕ್ರಮದಿಂದ ಅನಿಲದ ಶೀಘ್ರ ಬಿಡುಗಡೆ ಸಾಧ್ಯವೆನ್ನಬಹುದು. ಆದರೆ ಹೆಚ್ಚು ಅನಿಲ ಸಿಗುತ್ತದೆನ್ನುವುದನ್ನು ನಂಬುವುದು ಕಷ್ಟ.
3. ಡ್ರಮ್‍ನಲ್ಲಿ ಅನಿಲ ಸಂಗ್ರಹಣೆ ಮಿತಿ ಮೀರಿ ಡ್ರಮ್‍ನ ಪಕ್ಕದಿಂದ ಹೊರ ಹೋಗತೊಡಗಿದಾಗ ಅದನ್ನು ನಿಲ್ಲಿಸುವ ಪ್ರಯತ್ನವೇನೂ ಮಾಡಬೇಡಿ. ಸಾಧ್ಯವಿದ್ದರೆ ಹೆಚ್ಚು ಉರಿ ಬೇಕಾಗುವ ಯಾವುದಾದರೂ ಬದಲಿ ಕೆಲಸವಿದ್ದರೆ ಮಾಡಿ. ಉದಾ:- ಅಡಿಕೆ ಹುರಿಯುವುದು, ಹೀಗೆ ಅನಿಲ ಉಕ್ಕುತ್ತಿರುವಾಗ ಒಂದು ದಿನ ಸಗಣಿ ಕದಡುವುದನ್ನೇ ಬಿಡುವುದು ಸೂಕ್ತ. ಖಂಡಿತವಾಗಿ ಈ ಕ್ರಮದಿಂದ ಅನಿಲದ ಇಳುವರಿಯಲ್ಲಿ ಯಾವ ಅಧ್ಯಾನವೂ ಸಂಭವಿಸುವುದಿಲ್ಲ.
4. ಶಾಶ್ವತ ಕೆಲಸವಾಗಬೇಕೆಂದು ಬಯಸುವವರು ಈ ಅಂಶ ಗಮನಿಸಿ. ಅನಿಲವನ್ನು ಪ್ಲಾಂಟಿನಿಂದ ಅಡಿಗೆ ಮನೆಗೆ ಸಾಗಿಸಲು ಬಳಸುವ ಪೈಪನ್ನು ಭೂಮಿಯೊಳಗೆ ಸಾಗಿಸುವುದು ಸುತಾರಾಂ ಸಲ್ಲದು. ಕೆಲವೊಮ್ಮೆ ರಸ್ತೆ ಮೂಲಕ ಸಾಗಬೇಕಿದ್ದರೆ ಕನಿಷ್ಠ ಪ್ರಮಾಣದಲ್ಲಿ ಅನಿವಾರ್ಯವಾಗಿ ಸಾಗಿಸಬೇಕಾದೀತು. ಬೇಸಿಗೆಯಲ್ಲಿ ಪೈಪ್‍ನೊಳಗೆ ನೀರಾವಿ ಉತ್ಪತ್ತಿಯಾಗಿ ಶೇಖರಣೆಗೊಂಡು ಅನಿಲದ ಚಲನೆಗೆ ತಡೆಯನ್ನುಂಟು ಮಾಡುತ್ತದೆ. ನೀರಾವಿಯನ್ನು ತೆಗೆಯುವುದೂ ಕಷ್ಟ. ಪೈಪ್‍ನಲ್ಲೇನಾದರೂ ಬಿರುಕು ಕಾಣಿಸಿದರೆ ಸರಿಪಡಿಸುವುದು ಸುಲಭವಲ್ಲ. ಖರ್ಚಿಗೆ ಕಾರಣವಾಗುವ ಈ ತಂತ್ರದಲ್ಲಿ ಬದಲಿ ವ್ಯವಸ್ಥೆಯೂ ದುಬಾರಿಯಾದೀತು. ಆದ್ದರಿಂದ ಭೂಮಿ ಮೇಲೆಯೇ ಅನಿಲ ಸಂಪರ್ಕ ಜಾಲ ಬೆಳೆಸಬೇಕು. ಪೈಪ್‍ನಲ್ಲಿ ಒಂದೊಮ್ಮೆ ನೀರು ಕಾಣಿಸಿದರೂ ಅದು ಸ್ಥಾವರಕ್ಕೆ ಹರಿದು ಬರುವ ರೀತಿಯಲ್ಲಿ ಪೈಪ್ ಜೋಡಿಸಿ.
5. ಗ್ಯಾಸ್ ತಯಾರಿಸಿ ಹೊರ ಬರುವ ರಾಡಿ ಗೊಬ್ಬರವಾಗಲು ಯೋಗ್ಯವೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತದೆ. ನಮ್ಮಲ್ಲಿ ಒಂದು ಅಡಿಕೆ ಮರಕ್ಕೆ ಒಂದು ಹೆಡಿಗೆ ಗೊಬ್ಬರ ಎಂಬ ಅಳತೆ ಬಳಸುತ್ತೇವೆ. ಆದರೆ ರಾಡಿ ಒಣಗಿಸಿದಾಗ ದೊರೆಯುವ ಪ್ರಮಾಣ ಗೊಬ್ಬರಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಹಾಗಾಗಿ ಜನ ಈ ಗೊಬ್ಬರ ಒದಗುವುದಿಲ್ಲ ಎನ್ನುತ್ತಾರೆ. ದರಲೆ, ಹಸಿರೆಲೆಗಳಲ್ಲಿ ಇದನ್ನು ಚೆಲ್ಲಿ ಕಾಂಪೋಸ್ಟ್ ಮಾಡುವುದು ಇದರಿಂದ ಸುಲಭ. ಗುಣಮಟ್ಟದ ದೃಷ್ಟಿಯಲ್ಲಿ ಇದು ಹಟ್ಟಿಗೊಬ್ಬರಕ್ಕಿಂತ ಭಾರಿಯೇನೂ ಹಿಂದಿಲ್ಲ.
6. ಅನಿಲ ಬಂದಿದೆ, ಇಲ್ಲಾ ಎಂಬುದನ್ನು ನೋಡಲು ಅನಿಲ ಕೊಳವೆಯ ವಾಲ್ವ್ ಹತ್ತಿರ ಪರೀಕ್ಷೆ ಬೇಡ. ಒಲೆ ಹಚ್ಚಿ ಪರೀಕ್ಷಿಸಿ. ಸಾಧ್ಯವಾದಷ್ಟು ಮಕ್ಕಳನ್ನು ಸ್ಥಾವರದಿಂದ ದೂರವಿಡಿ. ಅದಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಅದರ ಅಪಾಯ ಅನಾಹುತಗಳನ್ನು ಮನವರಿಕೆ ಮಾಡಿಕೊಡಿ.
7. ಒಂದೊಮ್ಮೆ ಅನಿಲ ಸರಿಯಾಗೇ ಪೂರೈಕೆಯಾಗದಿದ್ದಲ್ಲಿ ಡ್ರಮ್‍ನ ವಾಲ್ವ್ ಕಟ್ಟಿ ಪರೀಕ್ಷಿಸಿ. ಪೈಪ್‍ನಲ್ಲಿ ಸೋರುತ್ತಿದೆಯೇ ಅಥವಾ ಡ್ರಮ್‍ನಲ್ಲೇ ಎಂಬುದು ಸ್ಪಷ್ಟವಾಗುತ್ತದೆ.
– ಮಾ.ವೆಂ.ಸ.ಪ್ರಸಾದ್