Home Blogroll ಕಾಯಕವೆಂದರೆ

ಕಾಯಕವೆಂದರೆ

0

ಕಾಯವೆಂದರೆ ದೇಹ, ಕಾಯಕವೆಂದರೆ ದೇಹಶ್ರಮವೆಂದು ಅತ್ಯಂತ ಸರಳವಾಗಿ ಹೇಳುವವರೇ ಬಹಳ. ಅದು ತಪ್ಪೆಂದು ಹೇಳಲಾಗದಿದ್ದರು ಅದೇ ಸಂಪೂರ್ಣ ಸರಿ ಎಂದೂ ವಾದಿಸಲಿಕ್ಕಾಗದು. ಕಾಯಕವನ್ನು ಕೆಲಸದೊಂದಿಗೆ ಸಮೀಕರಿಸಿ ಮಾತನಾಡುವುದನ್ನು ನಾವು ಕಾಣುತ್ತೇವೆ. ಒಂದೊಮ್ಮೆ ಅದೇ ಸರಿ ಎಂದಾಗಿದ್ದರೆ ಬಸವಣ್ಣನವರು ಅತ್ಯಂತ ಸರಳವಾಗಿ ‘ಕೆಲಸವೇ ಕೈಲಾಸ’ ಎಂದು ಬಿಡುತ್ತಿದ್ದರೇನೋ, ಬದಲಿಗೆ ಅವರು ‘ಕಾಯಕವೇ ಕೈಲಾಸ’ ಎಂದಿದ್ದರ ಹಿಂದೆ ಬಹುಶಃ ‘ಕೆಲಸ’ದ ಕಲ್ಪನೆ ಮಾತ್ರ ಅಡಗಿದ್ದಿರಲು ಸಾಧ್ಯವಿಲ್ಲವೆನ್ನಿಸುತ್ತದೆ. ಬಹುಶಃ ಕಾಯಕವೆಂದರೆ. ಜವಾಬ್ದಾರಿಯ – ಎಚ್ಚರಿಕೆಯ ಕೆಲಸ ಅಥವಾ ಕೆಲಸದಲ್ಲಿ ಜವಾಬ್ದಾರಿ ಎಚ್ಚರಿಕೆ. ಮುಂದುವರೆದು ಹೇಳುವುದಾದರೆ ‘ಹೊಣೆಗಾರಿಕೆ’. ಇಷ್ಟೇ ಅಲ್ಲ ಕಾಯಕವು ಕೈಲಾಸವನ್ನೊದಗಿಸುವ ಸನ್ನೆಯಾಗಬೇಕೆಂದಾದರೆ, ಅದು ಪ್ರಾಮಾಣಿಕತೆಯಿಂದ ಪರಿಶುದ್ಧತೆಯಿಂದ ಮತ್ತು ಆತ್ಮಸಾಕ್ಷಿಗನುಗುಣವಾಗಿ ನೆರವೇರುವಂಥದ್ದಾಗಿರಬೇಕು ಅದು ಕೇವಲ ‘ಕೆಲಸ’ವಾಗದೆ ಕರ್ತವ್ಯವಾಗುವುದು ಅಗತ್ಯವೆನ್ನಿಸುತ್ತದೆ.
ಸ್ವಲ್ಪ ವಿಷದವಾಗಿ ಹೇಳುವುದಾದರೆ, ಇಂಗ್ಲೀಷ್‍ನಲ್ಲಿ Seeing and observing ನೋಡುವುದು ಮತ್ತು ಗ್ರಹಿಸುವುದು, ಕೆಲವರು ಸುಮ್ಮನೆ ನೋಡುತ್ತಾರೆ, ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ, ದೇವಸ್ಥಾನಕ್ಕೆ ಹೋಗಿ ದೇವರನ್ನು ನೋಡಿ, ಕೈಮುಗಿದು ಬರುವುದು ಬೇರೆ ಮತ್ತೆ ಅದೇ ದೇವಸ್ಥಾನಕ್ಕೆ ಹೋಗಿ ದೇವರನ್ನು ನೋಡಿ, ಕೈಮುಗಿದು ಬರುವುದು ಬೇರೆ ಮತ್ತೆ ಅದೇ ದೇವಸ್ಥಾನದ ಕುರಿತು, ಅಲ್ಲಿನ ಶಿಲ್ಪಕಲೆ ಕುರಿತು, ಸಂಪ್ರದಾಯದ ಕುರಿತು ಮಾಹಿತಿ ಪಡೆದು ಬರುವುದು ಬೇರೆ, ಒಂದು ಬರಿದೆ ನೋಡುವುದು ಇನ್ನೊಂದು ಚಿಕಿತ್ಸಕ ದೃಷ್ಟಿಯಿಂದ ನೋಡುವುದು, ಹಾಗೇ,hearing and listening ಕೇಳುವುದು ಮತ್ತು ಆಲಿಸುವುದು. ನಮ್ಮ ಕಿವಿಯ ಮೇಲೆ ಬೀಳುವ ಧ್ವನಿಗಳನ್ನು ಕೇಳುತ್ತವೆ ಸಹಜ. ಆದರೆ ಉದ್ದೇಶಪೂರ್ವಕವಾಗಿ ಏನನ್ನಾದರೂ ಲಕ್ಷಗೊಟ್ಟು ಕೇಳಿದರೆ ಅದು ಆಲಿಸುವ ಪ್ರಕ್ರಿಯೆಯಾಗುತ್ತದೆ, ಅಲ್ಲಿ ಕೇಳಿದ್ದು ನಮ್ಮೊಳಗೆ ಇಳಿದಿರುತ್ತದೆ, ಸುಮ್ಮನೆ ಹಾದು ಹೋಗಿರುವುದಿಲ್ಲ, ಬಹುಶಃ ಹೀಗೇ Work and duty ಕೆಲಸ ಮತ್ತು ಕರ್ತವ್ಯ, ಕರ್ತವ್ಯವೂ ಕೆಲಸವೇ ಹೌದಾದರೂ ಅಲ್ಲಿ ಕೆಲಸಕ್ಕೆ ಒಂದು ವಿಶಿಷ್ಟ ಜವಬ್ದಾರಿ ಇರುತ್ತದೆ, ಅದರ ಅರಿವಿರುತ್ತದೆ, ಅಲ್ಲಿ ಬದ್ಧತೆ, ಸಿದ್ಧತೆಗಳೆರಡೂ ಇರುತ್ತದೆ, ಇದು ಸಾಧ್ಯವಾಗುವುದು ಮನುಷ್ಯರಿಗೆ ಮಾತ್ರ, ಕತ್ತೆ ಹೊರೆಯನ್ನು ಹೊರುವ ಕೆಲಸಮಾಡುತ್ತದೆ, ನಿಜ ಆದರೆ ಅಲ್ಲಿ ಅವುಗಳಿಗೆ ಜವಬ್ದಾರಿಯ ಪ್ರಶ್ನೆ ಎದುರಾಗುವುದಿಲ್ಲ, ಅದು ಕೇವಲ ಅವುಗಳ ದೈಹಿಕ ಶ್ರಮವಾಗಬಹುದೇ ವಿನಃ ಅದಕ್ಕೆ ಬೌದ್ಧಿಕ ಆಯಾಮ ಲಭ್ಯವಾಗಿರುವುದಿಲ್ಲ, ಅದೇ ಮನುಷ್ಯರ ‘ಕಾಯಕ’ವೆಂದರೆ ಅಲ್ಲಿ ದೈಹಿಕ ಶ್ರಮದೊಟ್ಟಿಗೆ ಬೌದ್ಧಿಕತೆಯೂ ಸಕ್ರಿಯವಾಗಿ ಸ್ಪಂದಿಸಿರುತ್ತದೆ, ಬುದ್ಧಿ ಭಾವಗಳು ಕೂಡ ಮಿಳಿತವಾಗುವುದು, ಹೀಗಿರುವುದರಿಂದ ಕಾಯಕವೆಂದರೆ ದೇಹದ ಶ್ರಮ ಎನ್ನುವುದರ ಜೊತೆಗೇ ಇದೇ ದೇಹದ ಅಂಗವಾದ ಮಿದುಳಿನ ಶ್ರಮವನ್ನು ಮರೆಯಲಾಗದು. ಬೇರ್ಪಡಿಸಿ ವ್ಯಾಖ್ಯಾನಿಸುವೂದೂ ಅಪ್ರಸ್ತುತವಾಗಿಬಿಡಬಹುದು.
ಕಾಯಕಕ್ಕೆ ಪರ್ಯಾಯವಾಗಿ ‘ದುಡಿಮೆ’ ಎಂದರೂ ಸರಿಯಾಗಲಾರದು ಕಾರಣವಿಷ್ಟೇ ‘ದುಡಿಮೆ’ ಕೆಲಸವಾದರೂ ಅದು ಪ್ರತಿಫಲವನ್ನು ನಿರೀಕ್ಷಿಸುವಂಥದ್ದು, ದುಡಿದದ್ದಕ್ಕೆ ಕೂಲಿ ಯಾ ಸಂಬಳವನ್ನು ಬಯಸುವಂಥದ್ದು, ಅದು ಬದುಕಿನ ನಿರ್ವಹಣೆಗೆ ಅಗತ್ಯವಾದದ್ದು, ಇಂದು ನಾವು ಸಾಮಾನ್ಯವಾಗಿ ಹೇಳುವ ‘ವೃತ್ತಿಯ’ ಹಿಂದಿನ ಮನಸ್ಥಿತಿಯೂ ಇದೇ ಬಗೆಯದ್ದು ‘ವಿತ್ತ’ ಮೂಲಧಾರದ್ದು. ನಾವಿಂದು ಎಲ್ಲೆಡೆಗೆ ಕಾಣುವ ಸಾಮಾನ್ಯ ಸಂಗತಿಯೆಂದರೆ ವಿತ್ತದ ಮೇಲಿನ ಪ್ರೀತಿ, ಹಾಗಾಗಿಯೇ ಎಲ್ಲ ಬುಕ್‍ಗಳಿಗಿಂತ ಚೆಕ್ ಬುಕ್ ಮಹತ್ವವುಳ್ಳದ್ದಾಗಿರುವುದು!
ದಿನನಿತ್ಯದ ಬದುಕಿನಲ್ಲಿ ನಿಜವಾದ ಅರ್ಥದಲ್ಲಿ duty ಗೆ ಹೋಗುವವರೇ ಬೇರೆ, ಕೇವಲ ಶಬ್ದವನ್ನಷ್ಟೇ ಉದುರಿಸಿದರೆ ಪ್ರಯೋಜನವಿಲ್ಲ ಕೆಲಸಕ್ಕೆ, ಗೇಯಲು ಹೋಗುವವರೇ ಬೇರೆ, ವೃತ್ತಿಯ ಮೇಲಿನ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವವರು ‘ಕಾಯಕ’ ದವರು. ಕೇವಲ ಹೊತ್ತು ಕಳೆದು – ಸಂಬಳಕ್ಕಾಗಿ ಕೈಯೊಡ್ಡುವುದಕಷ್ಟೇ ಸೀಮಿತವಾದರು ‘ಕಾಯಕ’ದವರಲ್ಲ, ಕೆಲಸದ ಹೆಸರಿನಡಿ ಮೋಸ ಮಾಡುವವರು ಕಂಡಕಂಡದ್ದಕ್ಕೆಲ್ಲ ಕೈಯೊಡ್ಡಿ, ಮನಃಶಾಂತಿಯನ್ನು ಕೆಡಿಸಿಕೊಂಡು ಒಂದಿಷ್ಟು ಕುಡಿದೇ ನಿದ್ದೆಮಾಡುವವರೇ ವಿನಃ ಮನಃಶಾಂತಿಯಿಂದ ಸಹಜವಾಗಿ ನಿದ್ದೆ ಕೂಡ ಮಾಡಲಾರದವರು, ಇಂಥ ಕೆಲಸವನ್ನು ಬಹುಶಃ ಬಸವಣ್ಣನವರ ಕಾಯಕ ತತ್ವ ಖಂಡಿತ ಬೆಂಬಲಿಸುವುದಿಲ್ಲ. ಬಸವಣ್ಣನವರು ಪ್ರತಿಪಾದಿಸಿದ ‘ಕಾಯಕ ತತ್ವ’ ಬದುಕಿನ ಆದರ್ಶಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವುಳ್ಳದ್ದು, ಕಾಯಕವೆಂದರೆ ದೇಹಶ್ರಮದಿಂದ ದುಡಿದು ಉಣ್ಣುವುದು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲು ಹೊರಟಾಗಲು ಕೂಡ ಅದಕ್ಕೆ ಒಂದು ನಿಯತ್ತು ಇರಬೇಕಾದದ್ದು ಅನಿವಾರ್ಯ. ರಾಜನಾಗಲಿ, ಮಂತ್ರಿಯಾಗಲಿ ದೇಹಶ್ರಮವಿರದೆ ಉಣ್ಣಬಾರದು, ಎಂದರೆ ಒಂದು ಅವರ ದೇಹಾರ್ಯೋಗ್ಯದ ಪರಿಪಾಲನೆಯ ಸೂತ್ರವದರಲ್ಲಿ ಅಡಗಿರಬಹುದು. ‘Sound mind in the sound body’ ಎಂಬ ತತ್ವಕ್ಕನುಗುಣವಾಗಿ ಅವರ ಬೌದ್ದಿಕತೆಯ ಪುಷ್ಟಿಗಾಗಿ, ದೇಹದ ಪುಷ್ಟಿ ಅಗತ್ಯವಾಗಿರುವುದರಿಂದ ಹಾಗೇ ಕುಳಿತಲ್ಲೇ ಎಲ್ಲವನ್ನೂ ನಿರ್ಧರಿಸುವ ಬದಲು ಸ್ವಲ್ಪ ಎದ್ದು ಓಡಾಡಿ, ಖುದ್ದಾಗಿ ಜನರ ಸ್ಥಿತಿ ಗತಿ ತಿಳಿದು ವ್ಯವಹರಿಸುವ ಸದ್ಬುದ್ಧಿ ಬರಲೆಂಬ ಆಶಯವೂ ಅದರಲ್ಲಿ ಅಡಕವಾಗಿದ್ದೀತು. ಕೇವಲ ಕಡತಗಳ ಮೂಲಕ ಅಭಿವೃದ್ಧಿಯನ್ನು ಅಳೆದು ಹೇಳುವವರಿಗೆ ಇದು ಅಗತ್ಯ ಪಾಠವೂ ಆದೀತು. ತತ್ವ ಹೇಳಲಿಕ್ಕಾಗಿರುವುದಲ್ಲ, ಅದರ ಅರಿವಿದ್ದರಷ್ಟೇ ಸಾಲದು ಅದರ ಆಚರಣೆ ಕೂಡ ಅಷ್ಟೇ ಮುಖ್ಯ, ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕೆಲಸದಲ್ಲಿ, ವೃತ್ತಿಯಲ್ಲಿ, ದುಡಿಮೆಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ ಅಗತ್ಯ. ಆದರೆ ಅದೇ ಸಂದರ್ಭದಲ್ಲಿ ಮಾಡುವ ಕೆಲಸದ ಕುರಿತು, ವೃತ್ತಿಯ ಕುರಿತು, ದುಡಿಮೆಯ ಕುರಿತು ಪ್ರೀತಿ ಶ್ರದ್ಧೆ ಮತ್ತು ಬದ್ದತೆ ಇದ್ದಲ್ಲಿ ಅದು ಕಾಯಕವಾಗಿ ಆಗ ಅವರ ಕಾಯಕವೇ ಕೈಲಾಸವಾದೀತು, ಒಂದೆ ಕೆಲಸಕ್ಕಾಗಿ ಕೆಲಸವೆಂಬ ತತ್ವ ಒಳ್ಳೆಯದಲ್ಲ, ಕಾಯಕಕ್ಕಾಗಿ ಕೆಲಸವೆಂಬಂತಿರಬೇಕು. ಇದನ್ನು ಸ್ಪಷ್ಟವಾಗಿ ಅರಿತ ಇಂಗ್ಲೀಷ್ ಕವಿ ತನ್ನ ‘Work’ ಎಂಬ ಕವಿತೆಯಲ್ಲಿ ಈ ರೀತಿ ಉದ್ಧರಿಸಿದ್ದಾನೆ, ಅದರ ಕನ್ನಡಾನುವಾದ ಈ ರೀತಿ ಇದೆ,
ಕಾಯಕವೇ ಅರ್ಥವಿಲ್ಲ
ಅದು ನಿನ್ನಲ್ಲಿ ಆವಾಹನೆಗೊಳ್ಳದಿದ್ದಲ್ಲಿ
ಆಟದೊಳಗೆ ಮಗ್ನಗೊಂಡಂತೆ
ಅದು ನಿನ್ನನ್ನೂ ಆವರಿಸಿಕೊಳ್ಳದಿದ್ದಲ್ಲಿ
ಅದು ಎಂದೂ ವಿನೋದವೆನ್ನಿಸದಿದ್ದಲ್ಲಿ
ಕೈ ಹಾಕದಿರು ಅದಕ್ಕೆ.
(ಅಂತರಂಗದ ಮಾತು, ಸಂಕಲನದಿಂದ)
ಅಂದರೆ ವ್ಯಕ್ತಿಯೋರ್ವ ನಿರ್ವಹಿಸುವ ಕೆಲಸದಲ್ಲಿ ಆತ ತನ್ಮಯನಾಗದೆ ಅದು ಆವಾಹಿಕೊಳ್ಳದೆ, ಖುಷಿಯಿರದೆ ಕಾಟಾಚಾರಕ್ಕೆಂಬಂತಾದರೆ ಅದು ಅರ್ಥಹೀನ, ಕಾಯಕವೆನ್ನುವುದು ಅರ್ಥಹೀನ ಚಟುವಟಿಕೆಯಾಗಬಾರದು. ಅದು ಸಿದ್ಧತೆ, ಬದ್ದತೆ, ಶ್ರದ್ಧೆ ನಿಯತ್ತುಗಳಿಂದ ಕೂಡಿದ್ದಾದರೆ ಮಾತ್ರ ಕಾಯಕ, ಕೈ ಬಾಯಿ ಶುದ್ಧವಾಗಿದ್ದು, ಅತ್ಮಸಾಕ್ಷಿಗನುಗುಣವಾಗಿ ನಿರ್ವಹಿಸುವ ಕರ್ತವ್ಯದಿಂದ ಮಾತ್ರ ಕುಟುಂಬ, ಸಮಾಜದ ಒಳಿತು ಸಾಧ್ಯ. ಕೆಲಸ ಯಾವುದೇ ಆಗಿರಲಿ ಅದು ಚಿಕ್ಕದಲ್ಲ, ಅದಕ್ಕೆ ಅದರದ್ದೇ ಆದ ಘನತೆ ಇದ್ದೇ ಇರುತ್ತದೆ. ಆ ಘನತೆಗೆ ಮುಕ್ಕುಬಾರದು ಎಚ್ಚರ ಸದಾ ಜಾಗೃತವಾಗಿದ್ದಲ್ಲಿ ಮಾಡುವ ಕೆಲಸ, ಕರ್ತವ್ಯದಿಂದ, ಕಾಯಕದ ಅರ್ಥಪ್ರಾಪ್ತಿಯಾಗುತ್ತದೆ, ದಿವ್ಯತೆಯೊದಗುತ್ತದೆ, ಅಂದಾಗ ಮಾತ್ರ ಕಾಯಕವೇ ಕೈಲಾಸ, ಹಾಗಲ್ಲದಿದ್ದಲ್ಲಿ ಅದು ಕೇವಲ ತೌಡುಕಟ್ಟುವ ಕೆಲಸ.
ರವೀಂದ್ರ ಭಟ್, ಕುಳಿಬೀಡು.