ಹೀಗೊಮ್ಮೆ ಟ್ರಾಫಿಕ್ ಸಿಗ್ನಲ್‍ನಲ್ಲಿ ನಿಂತಿದ್ದೆ. ಪಕ್ಕದಲ್ಲೇ ನಿಂತಿದ್ದ ಬಸ್ಸಿನ ಕಡೆಗೆ ನೋಡಿದೆ. ಅದೊಂದು ಶಾಲೆಯ ವಾಹನವಾಗಿತ್ತು. ಒಳಗಿದ್ದ ಪುಟಾಣಿಗಳು, ಪೋಲೀಸರ ಜೀಪಿನ ಒಳಗೆ ಕೂತ ಕಳ್ಳರಂತೆ ಕಂಡರು. ನನ್ನ ಗಾಡಿಯನ್ನು ಬಸ್ಸಿನ ಹತ್ತಿರ ನುಗ್ಗಿಸಿದೆ. ಒಳಗಿದ್ದ ಗುಂಪಿನಲ್ಲೊಬ್ಬ ಪುಟ್ಟ ಹುಡುಗಿ..”ಅಕ್ಕ ಬಾಯ್” ಎಂದಳು. ಅದನ್ನೇ ಕಾಯುತ್ತಿದ್ದ ನಾನು, ಎಲ್ಲರನ್ನು ನೋಡಿ “ಎಷ್ಟನೇ ಕ್ಲಾಸು?” ಎಂದೆ. ಎಲ್ಲರೂ “ಪ್ರೀ ಕೆ.ಜಿ.” ಎಂದು ಒಟ್ಟಾಗಿ ಕೂಗಿದರು. ಅಷ್ಟೊತ್ತಿಗೆ ಸಿಗ್ನಲ್ ಬಣ್ಣ ಹಸಿರಾಯಿತು. ನಮ್ಮ ನಮ್ಮ ದಾರಿ ನಮಗೆ ತೆರೆದುಕೊಂಡಿತು. ನಾನು ಕಾಲೇಜು ತಲುಪಿದ ಮೇಲೂ ಆ ಮಕ್ಕಳ ಕೂಗಾಟ, ಕೆಲವರ ಅಳು, ಚೇಷ್ಟೇ ಎಲ್ಲವು ನನ್ನ ಮನದಲ್ಲಿತ್ತು. ಇದಾಗಿ ಎಷ್ಟೋ ದಿನಗಳ ನಂತರ ನಮ್ಮ ಒಂದು ಪ್ರಾಜೆಕ್ಟಿನ ಸಲುವಾಗಿ ಹಲವು ಪ್ಲೇ ಹೊಮ್‍ಗಳಿಗೆ ಹೋಗುವ ಅವಕಾಶ ದೊರೆಯಿತು. “ಆ ಪುಟಾಣಿ ಮಕ್ಕಳೊಂದಿಗೆ ಆಟವಾಡಬಹುದು, ಅವರ ನಗುವಲ್ಲಿ, ಚೇಷ್ಟೆಗಳಲ್ಲಿ ನಾವು ನಮ್ಮಲ್ಲೇ ಕಳೆದು ಹೋಗಿರುವ ಮುಗ್ಧತೆಯನ್ನು, ನೆನಪುಗಳನ್ನು ನೆನೆಯಬಹುದು”, ಎಂಬ ಆಸೆಯಿಂದ ಹೋದೆವು. ಆದರೆ ಅಲ್ಲಿ ನಾವು ಕಂಡ ದೃಶ್ಯವೇ ಬೇರೆಯಾಗಿತ್ತು. ಎಷ್ಟೋ ಶಾಲೆಗಳಲ್ಲಿ ಆಟಿಕೆ ಸಾಮಾನುಗಳೆಲ್ಲವೂ ಹರಡಿತ್ತು. ಒಂದೊಂದು ಮೇಡಮ್‍ಗಳ ಕೈಯಲ್ಲಿ ಒಂದೊಂದು ಮಗುವಿತ್ತು. ಕೆಲವು ಮಕ್ಕಳು ಅಲ್ಲಿದ್ದ ಚಾಪೆಯ ಮೇಲೆ ಮಲಗಿದ್ದರೆ, ಇನ್ನು ಕೆಲವರು ಅಳುತ್ತಿದ್ದರು. ಶಾಲೆಯ ಸಿಬ್ಬಂದಿ ಕೆಲವು ಮಕ್ಕಳಿಗೆ ಊಟ ಮಾಡಿಸುತ್ತಿದ್ದರೆ, ಇನ್ನು ಕೆಲವರಿಗೆ ನಿದ್ದೆ ಮಾಡಿಸುವ ಪ್ರಯತ್ನದಲ್ಲಿದ್ದರು. ಕಾಲೇಜಿನ ಪರವಾಗಿ ಹೋಗಿದ್ದರಿಂದ ನಮಗೆ ಒಳಗೆ ಪ್ರವೇಶ ಸಿಕ್ಕಿತ್ತು. ಅಲ್ಲಿಯ ಸಿಬ್ಬಂದಿಗೆ ಹಲವು ಪ್ರಶ್ನೆ ಕೇಳಬೇಕಾದ್ದರಿಂದ ಅವರು ಬಿಡುವಾಗುವವರೆಗೂ ಅಲ್ಲಿಯೇ ಕೂತು ಕಾದೆವು.
ಶಾಲೆಯ ಮೊದಲ ದಿನದಿಂದಲೂ ಬೆಳಿಗ್ಗೆ ಎದ್ದು ಹೋಗುವುದನ್ನು ನೆನೆದರೆ ದುಃಖವಾಗುತ್ತಿತ್ತು. ಈಗಲೂ ನಾನು ಅದಕ್ಕೆ ಹೊರತಲ್ಲ!. ಕಾಲೇಜಿಗೆ ಹೋಗುವಾಗ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಬಲವಂತವಾಗಿ ಎಳೆದು ಹೋಗುತ್ತಿರುವ ದೃಶ್ಯ ಕಂಡರೆ ಮನಸ್ಸಿಗೆ ಹಿಂಸೆಯಾಗುತ್ತದೆ. ಹೈಟೆಕ್ ಶಾಲೆಗಳಿಗೆ ಹೋದರೆ ನಮ್ಮ ಮಕ್ಕಳು ಜಗತ್ತಿನಲ್ಲಿರುವುದನ್ನೆಲ್ಲಾ ಕಲಿತುಬಿಡುತ್ತಾರೆ ಎಂಬ ಭ್ರಮೆಯಲ್ಲಿ, ಮಗುವಿಗೆ ವರ್ಷವಾಗುತ್ತಿದ್ದಂತೆ ಶಾಲೆಯಲ್ಲಿ ಡೊನೇಷನ್ ಕೊಟ್ಟಾದರೂ ತಮ್ಮ ಸೀಟ್‍ಗಳನ್ನು ಕಾದಿರಿಸುತ್ತಿದ್ದಾರೆ. ಪಾಪ! ತನ್ನನ್ನು ಅರ್ಧ ನಿದ್ರೆಯಲ್ಲಿ ಎಬ್ಬಿಸಿ, ಎಲ್ಲಿಗೆ ಕರೆದು ಹೋಗುತ್ತಿದ್ದಾರೆ ಎಂದು ಅರಿಯದಾಗಿರುತ್ತಾರೆ ಆ ಪುಟಾಣಿಗಳು. ಹೀಗೆ ಬೆಳಿಗ್ಗೆ ಅವರನ್ನು ತಯಾರು ಮಾಡಿ ಶಾಲೆಯ ಆವರಣದಲ್ಲಿ ಬಿಟ್ಟು ಹೋಗುವಾಗ, ಕೊಡುವ ಮುತ್ತನ್ನು ನೋಡಿದರೆ…ಎಲ್ಲವು ನಾಟಕವೇನೋ ಎನಿಸುತ್ತದೆ.
ಹೊರಗಿನಿಂದ ನೋಡುವವರಿಗೆ ಅವರಿವರ ಕೆಲಸ ಸುಲಭ. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ತಾನು ಎಂಥ ಕಷ್ಟ ಅನುಭವಿಸುತ್ತಿದ್ದೇನೆ ಎಂದು.
ಜೀವನದ ವೈರುಧ್ಯ ಎಂದರೆ ಇದೇ ತಾನೇ?
ಸ್ಫೂರ್ತಿ ವಾನಳ್ಳಿ