ಆರೆ, ಏಳೇ ವರ್ಷಗಳಲ್ಲಿ ಬೆಳೆ ಕೈಗೆ. ಕೆ.ಜಿ.ಗೆ 30 ಸಾವಿರದಿಂದ 60 ಸಾವಿರ ರೂ. ಬೆಲೆ. ನಿಸ್ಸಂಶಯವಾಗಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಬೆಳೆ. ಕಳ್ಳರ ಕಾಟವಿಲ್ಲ, ಜೇಬಿಗೆ ಝಣ ಝಣ ಕಾಂಚಾಣ…..! ಹೀಗೆಂದು ಬೆಳೆಯೊಂದರ ಬಗ್ಗೆ ಪ್ರಚಾರ ಕೇಳೀಬರುತ್ತಿರುವಾಗ ಹಲವು ಬೆಳೆ ಬೆಳೆದು, ಲಾಭದ ಕನಸು ಕಂಡು ಸುಸ್ತಾಗಿರುವ ರೈತರಿಗೆ ಆಹ್ಲಾದಕರ ಭಾವ ಮೂಡಿದರೆ ಅಚ್ಚರಿಯಿಲ್ಲ. ಅಗರ್‍ವುಡ್ ಎಂಬ ಸುಗಂಧದ್ರವ್ಯ ನೀಡುವ ಮರದ ಕೃಷಿ ಕುರಿತಂತೆ ರಾಜ್ಯದ ರೈತರಲ್ಲಿ ಬಿಸಿಬಿಸಿ ಚರ್ಚೆಯಂತೂ ಆರಂಭವಾಗಿದೆ.
ಏನಿದು ಅಗರ್‍ವುಡ್?
ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಕೃಷಿ ನಡೆಸುತ್ತಿರುವ ವಾಣಿಜ್ಯ ಬೆಳೆ ಅಗರ್‍ವುಡ್. ವಾಸ್ತವವಾಗಿ ಇದು ಅಕ್ವಿಲೇರಿಯಾ ಎಂಬ ಜಾತಿಯ ಮರದಿಂದ ಲಭ್ಯವಾಗುವ ಉತ್ಪನ್ನ. ಈ ಮರದ ಕಾಂಡದಿಂದ ಅಗರ್‍ವುಡ್ ಕರಿ ಕಿಟ್ಟವನ್ನು ತೆಗೆಯಲಾಗುತ್ತದೆ. ಮುಖ್ಯವಾಗಿ, ಅತ್ತರಿನ ತಯಾರಿಕೆಯಲ್ಲಿ, ಔಷಧ ಪ್ರಪಂಚದಲ್ಲಿ ಇದು ವಿನಿಯೋಗವಾಗುತ್ತಿದೆ. ಪ್ರಪಂಚದ ಅತ್ಯುತ್ತಮ ಸುವಾಸನೆಯುಳ್ಳ ಸುಗಂಧದ್ರವ್ಯ ಎಂಬ ಖ್ಯಾತಿಯಿರುವುದರಿಂದ ಅಗರ್‍ವುಡ್‍ಗೆ ಭಾರೀ ಬೆಲೆ.
ಈ ಮರವನ್ನು ರಾಜ್ಯಕ್ಕೆ ಆಮದು ಮಾಡಿ ಕೃತಕವಾಗಿ ಅಗರ್‍ವುಡ್ ತಯಾರಾಗಲು ಪ್ರಚೋದಿಸಿದರೆ ಹೇಗೆ? ಅಂತಹ ಪ್ರಯತ್ನಗಳು ನಮ್ಮ ದೇಶದಲ್ಲಿ ಮತ್ತು ಪಕ್ಕದ ಬಾಂಗ್ಲಾದಲ್ಲಿ ನಡೆಯುತ್ತಿದೆ. ಈ ಅಕ್ವಿಲೇರಿಯಾ ಮರದಲ್ಲಿ ಒಟ್ಟು 28 ಜಾತಿಗಳಿವೆಯಂತೆ. ಅದರಲ್ಲಿ ಮಾಲಾಸೆಗಿನ್, ಅಗಲೋಚಾ ಮತ್ತು ಸೆರುಂಡಾರಿಯಾ ಮಾದರಿಗಳು ಅಗರ್‍ವುಡ್ ತಯಾರಿಯಲ್ಲಿ ಬಳಕೆಯಾಗಿವೆ. ಇದನ್ನು ಮುಖ್ಯ ಬೆಳೆಯಾಗಿ ಅಥವಾ ನಮ್ಮೂರಿನ ಅಡಿಕೆ, ತೆಂಗು, ತಾಳೆ ಮಧ್ಯೆ ಉಪಬೆಳೆಯಾಗಿಯೂ ಬೇಸಾಯ ಮಾಡಬಹುದು.
ಅಗರ್‍ವುಡ್ ತಯಾರಿ ಹೇಗೆ?
ಮುಂದಿನ ಮೂರು ತಿಂಗಳಿನಲ್ಲಿ ಮರ ಅರಿಸಿನ ಕಂದು ಬಣ್ಣಕ್ಕೆ, ಆ ನಂತರದ 8-10 ತಿಂಗಳಿನಲ್ಲಿ ರಂಧ್ರದ ಸುತ್ತ ಮುತ್ತ ದಟ್ಟ ಕಂದು ಬಣ್ಣಕ್ಕೆ ತಿರುಗಿದರೆ ವಾರದೊಳಗೆ ಅಗರ್‍ವುಡ್ ಕಿಣ್ವ ತಯಾರಾಗುತ್ತಿದೆ ಎನ್ನಬಹುದು. ಅಷ್ಟಕ್ಕೂ ಫಂಗಸ್‍ಗಳ ವಿರುದ್ಧ ಹೋರಾಡುವ ಮರ ಪ್ರತಿರೋಧಕ್ಕಾಗಿ ತಯಾರಿಸುವ ದ್ರವ್ಯವೇ ಅಗರ್‍ವುಡ್. ತನ್ನ ಯುದ್ಧದಲ್ಲಿ ಸೋಲುವ ಮರ 20 ತಿಂಗಳಲ್ಲಿ ರಂಧ್ರದ ಜಾಗದಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದಾಗ ಅಗರ್‍ವುಡ್ ಸಿದ್ಧ. ಇದಕ್ಕೆ ಪ್ರಥಮತಃ ಸುಟ್ಟ ವಾಸನೆ ಇರುತ್ತದೆ. ಈ ಹಂತದಲ್ಲಿ ಮರವನ್ನು ಕಟಾವು ಮಾಡಿ ಅಗರ್‍ವುಡ್ ತೆಗೆಯಲಾಗುತ್ತದೆ. ಇದರ ಚಕ್ಕೆ, ಪೌಡರ್, ಕಾಂಡಗಳು ಊದುಬತ್ತಿ, ಕಲಾಕೃತಿಗಳು, ಔಷಧ. ಕಾಗದ ತಯಾರಿಕೆಗಳಲ್ಲಿ ಬಳಕೆಯಾಗುವುದರಿಂದ ಇದರ ಪ್ರತಿಯೊಂದು ಉತ್ಪನ್ನವೂ ಮಾರುಕಟ್ಟೆಯಲ್ಲಿ ಬಿಕರಿಯಾಗಬಲ್ಲದು ಎಂಬ ವಾದವೂ ಇದೆ.
ನಮ್ಮೂರಲ್ಲಿ ಹೇಗೆ?
ಮಲೆನಾಡಿನ ಭಾಗಗಳಲ್ಲಿ ಇದನ್ನು ಬೆಳೆಯಲು ಸೂಕ್ತ ವಾತಾವರಣವಿದೆ ಎಂಬ ಮಾತಿದೆ. ಪ್ರವರ್ತಕ ಕಂಪನಿಯೊಂದು 2009ರಿಂದ ರಾಜ್ಯದ ಐದು ಜಿಲ್ಲೆಗಳ 19 ತಾಲ್ಲೂಕಿನಲ್ಲಿ ಸುಮಾರು 700 ಮಂದಿ ಬೆಳೆ ನಾಟಿ ಮಾಡಿದ್ದಾರೆ ಎಂದು ಪ್ರಕಟಿಸಿದೆ. ಈ ಅಂಕಿಅಂಶಗಳ ಹೊರತಾಗಿ ಯೋಚಿಸುವುದಾದರೆ, ಒಮ್ಮೆಗೇ ದೊಡ್ಡ ಪ್ರಮಾಣದಲ್ಲಿ ಬೆಳೆ ಹಚ್ಚುವುದು ಅನಾಹುತಕಾರಿ. ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೇ ಇದರ ಫಸಲು ಪ್ರಮಾಣ, ಉತ್ಪನ್ನದ ಗುಣಮಟ್ಟದ ಬಗ್ಗೆ ಸ್ಪಷ್ಟ ಲೆಕ್ಕಾಚಾರ ದೊರಕಿಲ್ಲ. ಕೃತಕವಾಗಿ ಸೋಂಕು ತಗುಲಿಸುವ ಫಂಗಸ್, ಬಯೋ ಏಜೆಂಟ್‍ಗಳು ಪೇಟೆಂಟ್ ಲಗಾಮಿನೊಳಗಿದ್ದು ಅದರ ಬೆಲೆ ಅವರು ಹೇಳಿದಷ್ಟು!
ಬಾಂಗ್ಲಾದಲ್ಲಿ ಅಗರ್‍ವುಡ್ ಕುರಿತಂತೆ ವೈಜ್ಞಾನಿಕ ಸಮೀಕ್ಷೆ ನಡೆದಿರುವುದನ್ನು ಗಮನಿಸಲೇಬೇಕು. ಅಲ್ಲಿನ ಬ್ರಾಕ್ ಟೀ ಎಸ್ಟೇಟ್ 2007ರ ಜುಲೈನಿಂದ ಅಗರ್‍ವುಡ್ ಕುರಿತಂತೆ 17 ಎಕರೆ ಭೂಮಿಯಲ್ಲಿ ಬೆಳೆ ಪ್ರಾತ್ಯಕ್ಷಿಕೆಯನ್ನೆ ನಡೆಸಿದೆ. ಮಣ್ಣು ಪರೀಕ್ಷೆ, ಗುಣಮಟ್ಟದ ಗೊಬ್ಬರ ಮತ್ತು ನಿರಂತರ ಪರಿವೀಕ್ಷಣೆಗಳ ನಂತರ ಅದು ಗೋಡೆಯ ಮೇಲೆ ದೀಪವಿರಿಸಿದಂತೆ ಹೇಳಿರುವುದು ಇಷ್ಟು, ಶೇ.95ರ ತಾಳಿಕೆಯನ್ನು ಕಾಣಬಹುದು. ಆದರೆ ಮಳೆ ಹಾಗೂ ಇಬ್ಬನಿ ವಾತಾವರಣ ತೊಂದರೆ ಕೊಟ್ಟೀತು ಎನ್ನುತ್ತದೆ. ಪಕ್ಕದ ಚಿಟಗಾಂಗ್‍ನ ಕರ್ನಾಫುಲಿ ಫಾರ್ಮ್ ಉದಾಹರಣೆಯಲ್ಲಿ ನಾಟಿ 2004ರಲ್ಲಿ ನಡೆದಿದ್ದು, ನೆಟ್ಟ 426 ಗಿಡದಲ್ಲಿ ಬೆಳವಣಿಗೆ ಸ್ಕೇಲು ತೃಪ್ತಿದಾಯಕವಾಗಿಲ್ಲ ಎನ್ನಬಹುದು.
ಸದ್ಯ ಬೈಬ್ಯಾಕ್ ವ್ಯವಸ್ಥೆಯಡಿ ಗಿಡ ಕೊಡುವ ಕಂಪನಿಗಳು ನಮ್ಮಲ್ಲಿ ಹುಟ್ಟಿಕೊಂಡಿವೆ. ವೆನಿಲ್ಲಾದಂತೆ ಒಮ್ಮೆಗೇ ಹಣ ಬಾಚಿಕೊಳ್ಳುವ ಯೋಚನೆಯುಳ್ಳವರು ರಿಸ್ಕ್ ತೆಗೆದುಕೊಳ್ಳಬಹುದು!
-ಮಾ.ವೆಂ.ಸ.ಪ್ರಸಾದ್